Wednesday, August 4, 2021

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ . . . . 

ಸವಿಜ್ಞಾನ’ ಇ-ಪತ್ರಿಕೆಯ ಎಂಟನೆಯ ಸಂಚಿಕೆಗೆ ವಿಜ್ಞಾನ ಶಿಕ್ಷಕರಿಗೆ ಮತ್ತು ವಿಜ್ಞಾನಾಸಕ್ತರಿಗೆ ಸ್ವಾಗತ. ನಮ್ಮ ಕಳೆದ ಏಳು ಸಂಚಿಕೆಗಳಿಗೆ ನೀವು ನೀಡಿದ ಸ್ಪಂದನ ಅಭೂತಪೂರ್ವ. ಓದುಗರಾಗಿ ನೀವು ನೀಡಿದ. ಸಲಹೆ ಸೂಚನೆಗಳನ್ನು ಪರಿಶೀಲಿಸಿ ಸೂಕ್ತವಾದುವುಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಶೀಲರಾಗಿದ್ದೇವೆ. ನಮ್ಮ ಮುಂದಿನ ಸಂಚಿಕೆಗಳಿಗೂ ನಿಮ್ಮ ಪ್ರತಿಕ್ರಿಯೆ ಹೀಗೇ ಇರಲಿದೆ ಎಂಬ ನಿರೀಕ್ಷೆ ನಮ್ಮದು.

ನಮ್ಮ ಪತ್ರಿಕೆಯ ಓದುಗರ ಸಂಖ್ಯೆ ಹೆಚ್ಚುತ್ತಿರುವ ಸಂತಸ ಒಂದು ಕಡೆಯಾದರೆ, ಅನೇಕ ಶಿಕ್ಷಕರು ಲೇಖನಗಳನ್ನು ಬgದುಕೊಡಲು ಮುಂದೆ ಬಂದಿರುವುದು ಇನ್ನೊಂದು ಸಂತಸದ ವಿಚಾರ. ಕಳೆದ ಸಂಚಿಕೆಯಲ್ಲಿ ಪ್ರಕಟವಾದ, ಗ್ರೆಗೋರ್ ಮೆಂಡೆಲ್ ಬಗ್ಗೆ ಶಿಕ್ಷಕಿ ಡಾ. ಸಂಧ್ಯಾ ಬರೆದ ಲೇಖನಕ್ಕೆ ಸಾಕಷ್ಟು ಮೆಚ್ಚುಗೆಯ ಜೊತೆಗೆ ಉತ್ತಮ ಪ್ರತಿಕ್ರಿಯೆಗಳೂ ಬಂದಿವೆ. ಇನ್ನಷ್ಟು ಹೊಸ ಲೇಖಕರನ್ನು ಈ ಸಂಚಿಕೆಯೂ ಸೇರಿ, ಮುಂದಿನ ಸಂಚಿಕೆಗಳಲ್ಲಿ ಕ್ರಮೇಣ ಪರಿಚಯಿಸುವ ಹಂಬಲ ನಮ್ಮದು.

ಆಗಸ್ಟ್ ತಿಂಗಳ ಸಂಚಿಕೆ ಎಂದಿನಂತೆ ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಲೇಖನಗಳಿಂದ ಕೂಡಿದೆ. ಕಳೆದ ಮೂರು ಸಂಚಿಕೆಗಳಿಂದ ‘ನಿಸರ್ಗದಲ್ಲಿ ಸುವರ್ಣ ಅನುಪಾತ’ದ ಬಗ್ಗೆ ನೀವು ಓದುತ್ತಿರುವ ಲೇಖನ ಮಾಲೆಯ ಮುಂದುವರೆದ ಭಾಗವಾಗಿ ಮಾನವ ದೇಹ ರಚನೆಯಲ್ಲಿ ಸುವರ್ಣ ಅನುಪಾತದ ಬಗ್ಗೆ  ಒಂದು ಲೇಖನವಿದೆ. ಕಶೇರುಕ ಪ್ರಾಣಿಗಳಲ್ಲಿ ಜೀವವಿಕಾಸದ ಒಂದು ಪ್ರಮುಖ ಘಟ್ಟವಾದ  ನೀರಿನಿಂದ ನೆಲವಾಸಕ್ಕೆ  ಹೊಂದಿಕೊಂಡ ಸಂದರ್ಭದ ಒಂದು ಸುಂದರ ವಿವರಣೆ ನೀಡುವ ಲೇಖನಏನೋ ಮಾಡಲು ಹೋಗಿ...............’ ಎಂಬ ಲೇಖನವಿದೆ. ನನ್ನ ಗುರುಗಳಾದ ಡಾ. ಎಂ.ಜೆ ಸುಂದರ ರಾಮ್ ಬರೆದಿರುವ ಈ ಲೇಖನದ ಕಥನ ಶೈಲಿ ಆಕರ್ಷಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸುದ್ದಿಯಲ್ಲಿರುವ ಕೃತಕ ಬುದ್ಧಿಮತ್ತೆಯ ಬಗ್ಗೆ ಒಂದು ಲೇಖನವಿದೆ. ಕ್ಷುದ್ರಗ್ರಹಗಳ ಬಗ್ಗೆ ಬೆಳಕು ಚೆಲ್ಲುವ ‘ಅಂತರಿಕ್ಷದ ಅಲೆಮಾರಿಗಳು’ ಎಂಬ ಲೇಖನವಿದೆ. ಹಕ್ಕಿಗಳ ಬಗ್ಗೆ ಜಾಗೃತಿ ಮೂಡಿಸುವ ಒಂದು ಲೇಖನವಿದೆ. ಎಂದಿನಂತೆ, ಸಾಧಕ ಶಿಕ್ಷಕರೊಬ್ಬರ ಪರಿಚಯವಿದೆ. ನಿಮ್ಮನ್ನು ರಂಜಿಸುವ ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ಇವೆ.      

ಲೇಖನಗಳನ್ನು ಓದಿ, ನಿಮ್ಮ ಅನಿಸಿಕೆಗಳನ್ನು ಬ್ಲಾಗ್‌ನಲ್ಲಿ ದಾಖಲಿಸಿ. ನಿಮಗೂ ಬರೆಯುವ ಇಚ್ಛೆಯಿದ್ದಲ್ಲಿ ನಮ್ಮ ಇ-ಮೇಲ್ ವಿಳಾಸದ (savijnana.tab@gmail.com) ಮೂಲಕ ಸಂಪರ್ಕಿಸಿ.

ಡಾ, ಟಿ .ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

No comments:

Post a Comment