Saturday, September 4, 2021

ಕಲ್ಲರಳಿ ಹೂವಾಗಿ, ಜೀವ ಸಂಕುಲಕೆ ತಾಯಾಗಿ...

ಕಲ್ಲರಳಿ ಹೂವಾಗಿ, ಜೀವ ಸಂಕುಲಕೆ ತಾಯಾಗಿ...

ಲೇಖಕರು: ತಾಂಡವಮೂರ್ತಿ.ಎ.ಎನ್,

ಸಹ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆಕಾರಮಂಗಲ,

ಬಂಗಾರಪೇಟೆ(ತಾ.)ಕೋಲಾರ(ಜಿಲ್ಲೆ)         


ರಣ ಬಿಸಿಲಿಗೆ ಮೈಯೊಡ್ಡಿದ ಬಂಡೆ, ಶುಷ್ಕ ಮರದ ತೊಗಟೆ, ಇವೇ ನನ್ನ ಆವಾಸಗಳು. ಬಂಡೆಯನ್ನು ವಿಘಟಿಸಿ, ಮಣ್ಣಾಗಿಸಿ, ಇತರ ಜೀವ ಸಂಕುಲ ಅಂಕುರಿಸಲು ಅಗತ್ಯ ಭೂಮಿಕೆಯನ್ನು ಸಿದ್ಧಪಡಿಸುವ ನಿಷ್ಕಾಮ ಕಾಯಕ ನನ್ನದು. ಆತ್ಮರತಿ ಎನಿಸಿತೆ! ಆದರೂ, ಇದು ಕಟುಸತ್ಯ. ಹೌದು ! ನಾನು ಸಹಜೀವನದ ಸವಿಯುಂಡು ಸದಾ ನಗುವ ಕಲ್ಲು ಹೂ().

ನನ್ನದು ಒಂದೇ ದೇಹ, ಆದರೆ ಎರಡು ಜೀವ, ಬಹಳ ಸಂಕೀರ್ಣ. ಅಲ್ಲವೇ? ಒಂದು ಜೀವ ಶಿಲೀಂಧ್ರವಾದರೆ, ಮತ್ತೊಂದು ಹಸಿರು ಶೈವಲ ಅಥವ ನೀಲಿಹಸಿರು ಶೈವಲ (Cyanobacteria). ಶಿಲೀಂಧ್ರ ನೀರು ಮತ್ತು ಖನಿಜ ಪೋಷಕಗಳನ್ನು ಒದಗಿಸಿದರೆ, ಶೈವಲ ಆಹಾರವನ್ನು ತಯಾರಿಸುತ್ತದೆ. ನನ್ನ ಗುಣಲಕ್ಷಣಗಳು ನನ್ನ ಘಟಕ ಜೀವಿಗಳಿಗಿಂತಲೂ ವಿಭಿನ್ನ, ನಾನು ಅಸ್ತಿತ್ವದಲ್ಲಿರುವ ಪರಿಸರದಲ್ಲಿ ನನ್ನ ಘಟಕ ಜೀವಿಗಳು ಸ್ವತಂತ್ರವಾಗಿ ಬದುಕಲಾರವು. ಅದಕ್ಕೇ ಹೇಳಿದ್ದು, ನಾನು ಸಹಜೀವನದ ಸವಿಯುಂಡು ಸದಾ ನಗುವ ಕಲ್ಲು ಹೂ ಎಂದು !. ಜೀವ ವಿಕಾಸದ ಅನಿವಾರ್ಯ ಸನ್ನಿವೇಶದಲ್ಲಿ ಸಹಜೀವನಕ್ಕೆ ಒಗ್ಗಿಕೊಂಡು, ಪರಿಸರ ವ್ಯವಸ್ಥೆ ನನಗೆ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸಿ ನಿರ್ಜೀವ/ಬರಡು ನೆಲ, ಬಂಡೆಗಳ ಮೇಲೆ ಪ್ರವರ್ತಕನಂತೆ  (pioneer) ನೆಲೆ ನಿಂತು ಇತರ ಜೀವ ಸಂಕುಲ ಸುಗಮವಾಗಿ ಅಂಕುರಿಸಲು ಭೂಮಿಕೆ ಸಿದ್ಧಪಡಿಸುವ ಕಾಯಕದಲ್ಲಿ ಧನ್ಯತೆಯನ್ನು ಪಡೆದ ಸಾರ್ಥಕ ಬದುಕು ನನ್ನದು. ನನ್ನ ನೋಟ ಯಾವ ಸಾಹಿತಿ/ಲೇಖಕನಿಗೂ ಭಾವ ಸ್ಫುರಿಸದ ಕಾರಣ ನನ್ನ ಕಿರು ಪರಿಚಯವನ್ನು ನಾನೇ ಬರೆದಿದ್ದೇನೆ. ಓದಿ, ನಿಮ್ಮಲ್ಲಿ ಧನ್ಯತೆಯ ಭಾವ ಉಂಟಾದರೆ ನನ್ನ ಬದುಕು ಸಾರ್ಥಕ.

ಈಗ ವಿಜ್ಞಾನಿಗಳು ನನ್ನ ಬಗ್ಗೆ ಅಧ್ಯಯನ ಮಾಡಿ ನನ್ನ ವೈವಿಧ್ಯತೆಯ ಕುರಿತು ಕಲಿತದ್ದನ್ನು ಅವರ ಪದಗಳಲ್ಲೇ ಹೇಳಿದ್ದಾರೆ. ನೋಡಿ.

ಕಲ್ಲು ಹೂಗಳ ವರ್ಗೀಕರಣ

ಕಲ್ಲುಹೂಗಳ ಎರಡು ಘಟಕ ಜೀವಿಗಳಲ್ಲಿ ಒಂದು ಶಿಲೀಂಧ್ರ ಜೀವಿ (mycobiont) ಮತ್ತೊಂದು ಶೈವಲ ಜೀವಿ (phycobiont). ಶಿಲೀಂಧ್ರವು ಕಲ್ಲು ಹೂಗಳ ಪ್ರಧಾನ ಘಟಕವಾಗಿರುವುದರಿಂದ, ಶಿಲೀಂಧ್ರ ಘಟಕವನ್ನು ಆಧಾರವಾಗಿಟ್ಟುಕೊಂಡು ಆಸ್ಕೋಲೈಕೆನ್  (ascolichen) ಮತ್ತು ಬೆಸಿಡಿಯೋಲೈಕೆನ್ (basidiolichen) ಎಂಬ ಎರಡು ಗುಂಪುಗಳಲ್ಲಿ ಕಲ್ಲು ಹೂಗಳನ್ನು ವರ್ಗೀಕರಿಸಲಾಗಿದೆ. ಬಹುತೇಕ ಕಲ್ಲುಹೂಗಳಲ್ಲಿ ಆಸ್ಕೋಮೈಸಿಟಿಸ್ (ascomycets) ವರ್ಗದ ಶಿಲೀಂಧ್ರಗಳು ಕಂಡುಬಂದರೆ, ಕೆಲವು ಶಿಲೀಂಧ್ರಗಳಲ್ಲಿ ಬೆಸಿಡಿಯೋಮೈಸಿಟಿಸ್ (basidiomycetes) ವರ್ಗದ ಶಿಲೀಂಧ್ರಗಳು ಕಂಡುಬರುತ್ತವೆ.      

ಸಸ್ಯದ ದೇಹ ರಚನೆಯನ್ನು ಆಧರಿಸಿ ಕಲ್ಲುಹೂಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗುತ್ತದೆ. ಅವುಗಳೆಂದರೆ,

  1. ಕ್ರಸ್ಟೋಸ್ (crustose) ಉದಾ : ಕ್ಯಾಲೊಪ್ಲೇಕಾಮರಿನ,
  2. ಫೋಲಿಯೋಸ್ (foliose) ಉದಾ : ಫ್ಲಾವೊಪಾರ್ಮೇಲಿಯಾಕ್ಯಾಪರೇಟಾ,
  3. ಫ್ರುಟಿಕೋಸ್ (fruiticose) ಉದಾ : ಲೇಥಾರಿಯಾ ವುಲ್ಪಿನ

ಕ್ರಸ್ಟೋಸ್ ಗುಂಪಿನ ಕಲ್ಲುಹೂಗಳು ಆಧಾರ ಬಂಡೆ, ಮರದತೊಗಟೆಯ ಮೇಲೆ ಗಟ್ಟಿ ಕವಚದಂತೆ ಆವರಿಸಿರುತ್ತವೆ. ಇವುಗಳನ್ನು ಆಧಾರದಿಂದ ಬೇರ್ಪಡಿಸುವುದು ಕಷ್ಟ.

ಫೋಲಿಯೋಸ್ ಗುಂಪಿನ ಕಲ್ಲುಹೂಗಳು ಎಲೆಯ ಪದರಗಳಂತೆ ಆಧಾರದ ಮೇಲೆ ಕಂಡುಬರುತ್ತವೆ.

ಫ್ರುಟಿಕೋಸ್ ಗುಂಪಿನ ಕಲ್ಲುಹೂಗಳಲ್ಲಿ ಹವಳದ ಪೊದೆಗಳಂತಹ ರಚನೆ ಆಧಾರದ ಮೇಲೆ ಕಂಡುಬರುತ್ತವೆ.

ಪರಿಸರ ಅನುಕ್ರಮಣಿಕೆ (ecological succession) ಮತ್ತು ಕಲ್ಲು ಹೂಗಳು.

ಬರಡು ಪರಿಸರ ವ್ಯವಸ್ಥೆಯೊಂದರಲ್ಲಿ ಕಾಲಾನುಕ್ರಮದಲ್ಲಿ ಜೀವ ಸಮುದಾಯದಲ್ಲಿ ಪ್ರಭೇದಗಳ ವಿನ್ಯಾಸ ಬದಲಾಗುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯನ್ನು ಪರಿಸರ ಅನುಕ್ರಮಣಿಕೆ ಎನ್ನಲಾಗುತ್ತದೆ. ಬರಡು ಪರಿಸರ ವ್ಯವಸ್ಥೆಯಲ್ಲಿ ಮೊದಲಿಗೆ ತಮ್ಮ ಅಸ್ತಿತ್ವವನ್ನು ಸ್ಥಾಪಿಸುವುದು ಪ್ರವರ್ತಕ ಪ್ರಭೇದಗಳು (pioneer species). ಯಾವುದೇ ಬರಡು ನೆಲ/ಬಂಡೆಗಳ ಮೇಲೆ ಕಲ್ಲು ಹೂಗಳು ಪ್ರವರ್ತಕ ಜೀವಿಗಳಾಗಿ ಅಸ್ತಿತ್ವವನ್ನು ಸ್ಥಾಪಿಸುತ್ತವೆ. ಆಧಾರ ಬರಡು ನೆಲ ಮತ್ತು ಬಂಡೆಗಳನ್ನು ವಿಘಟಿಸಿ ನಿರವಯವ ಪರಿಸರವನ್ನು ಸಾವಯವ ಪರಿಸರವನ್ನಾಗಿ ರೂಪಿಸಲು ಕಲ್ಲು ಹೂಗಳು ಪ್ರವರ್ತಕರಂತೆ ಕಾರ್ಯ ನಿರ್ವಹಿಸುತ್ತವೆ. ಕಲ್ಲುಹೂಗಳು ನಿರ್ಮಿಸುವ ಭೂಮಿಕೆಯಲ್ಲಿ ಪರಿಸರ ಅನುಕ್ರಮಣಿಕೆಯಲ್ಲಿ ಇತರ ಜೀವ ಸಂಕುಲಗಳು ನೆಲೆಗೊಂಡು ಕೊನೆಗೆ ಸ್ಥಿರವಾದ ಉನ್ನತಜೀವ ಸಮುದಾಯ(climax community)ದೊಂದಿಗೆ ಪರಿಸರ ಅನುಕ್ರಮಣಿಕೆ ಕೊನೆಗೊಳ್ಳುತ್ತದೆ.

ಮಾಲಿನ್ಯ ಸೂಚಕಗಳಾಗಿ ಕಲ್ಲು ಹೂಗಳು.

ಕಲ್ಲುಹೂಗಳು ವಾತಾವರಣದಿಂದ ನೀರು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಸಸ್ಯಗಳಲ್ಲಿರುವಂತೆ ಪತ್ರರಂಧ್ರ ಮತ್ತು ಕ್ಯೂಟಿಕಲ್ ಪದರ ಕಲ್ಲು ಹೂಗಳಲ್ಲಿ ಕಂಡುಬರುವುದಿಲ್ಲ. ಆದ್ದರಿಂದ, ಕಲ್ಲುಹೂಗಳು ವಾಯುಮಾಲಿನ್ಯಕಾರಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುತ್ತವೆ, ಅದರಲ್ಲಿಯೂ ಸಲ್ಫರ್‍ ಡೈಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್‍ಗಳಿಗೆ ಸೂಕ್ಷ್ಮ ಸಂವೇದಿಯಾಗಿರುಕಲ್ಲುಹೂಗಳು ಮಾಲಿನ್ಯ ಹೆಚ್ಚಾಗಿರುವ ಪ್ರದೇಶಗಳಲ್ಲಿ ನಶಿಸುತ್ತವೆ. ಆದ್ದರಿಂದ ಕಲ್ಲುಹೂಗಳನ್ನು ಜೈವಿಕ ಮಾಲಿನ್ಯ ಸೂಚಕಗಳಾಗಿ ಪರಿಗಣಿಸಲಾಗುತ್ತದೆ.

ಸಾಕಷ್ಟು ಆಯ್ತು. ಅಲ್ಲವೇ? ನನ್ನನ್ನು ಅರಿತುಕೊಳ್ಳುವ ಮಾನವ ಪ್ರಯತ್ನವನ್ನು ನಾನು ಮೆಚ್ಚಿಕೊಳ್ಳುತ್ತೇನೆ. ದೊರೆತ ಜ್ಞಾನ ಸಕಲ ಜೀವಜಾತರ ಕಲ್ಯಾಣಕ್ಕೆ ಸಲ್ಲಬೇಕು. ನನ್ನ ಕಳಕಳಿ ಇಷ್ಟೇ! ಜೀವವಿಕಾಸದಲ್ಲಿ ಕನಿಷ್ಟ, ಶ್ರೇಷ್ಟ ಎಂಬುದಿಲ್ಲ. ಪರಿಸರವ್ಯವಸ್ಥೆಯಲ್ಲಿ ಮತ್ತು ಜೀವವಿಕಾಸದ ಹಾದಿಯಲ್ಲಿ ಎಲ್ಲವೂ ಒಂದಕ್ಕೊಂದು ಪೂರಕ. ಪರಿಸರ ಅನುಕ್ರಮಣಿಕೆಯಲ್ಲಿ ನಾನು ಆದ್ಯ ಪ್ರವರ್ತಕನೆಂಬ ಅಹಂಕಾರ ನನಗಿಲ್ಲ ಆದರೆ ಜೀವ ವಿಕಾಸವೆಂಬ ತಿರೆಯ ಮಹಾ ಯಜ್ಞದಲ್ಲಿ ನಾನೊಂದು ಸಮಿತ್ತು ಎಂಬ ಹೆಮ್ಮೆ ಖಂಡಿತಾ ಇದೆ. ಈ ಅಗ್ನಿದಿವ್ಯವೆದುರಿಸಿ ಗೆದ್ದ ಜೀವಿಗಳು ಅನೇಕ.  ಈ ಅರಿವು ನಿಮಗೂ ಇದೆ, ಅಲ್ಲವೇ? ಅದು ಇರಲೇಬೇಕಾದುದು ಅನಿವಾರ್ಯ.

16 comments:

  1. Lichenಗಳ ಸಮಗ್ರ ಮಾಹಿತಿ ನಿಮ್ಮ ಲೇಖನದಲ್ಲಿ ಬಹಳ ಚೆನ್ನಾಗಿ ಮೂಡಿಬಂದಿದೆ, ನಿಮ್ಮ‌ಬರವಣಿಗೆ ಶೈಲಿ ಆಕರ್ಷಕವಾಗಿದೆ ಅಭಿನಂದನೆಗಳು ಸರ್

    ReplyDelete
  2. ಧನ್ಯವಾದಗಳು ಶ್ರೀನಿವಾಸ್ ಸರ್,ನಿಮ್ಮೆಲ್ಲರ ಪ್ರೋತ್ಸಾಹವೇ ಸ್ಫೂರ್ತಿ

    ReplyDelete
  3. Very nice dear ತಾಂಡವ ಮೂರ್ತಿ ಸರ್ really it gives first hand experience in front of my eyes . thank you sir

    ReplyDelete
  4. article conveys a magical message....
    great!!!

    ReplyDelete
  5. Sir very nice. keep going. God bless u.

    ReplyDelete