Monday, October 4, 2021

ಜೀವ ಹೇಗೆ ಹುಟ್ಟಿದರೇನಂತೆ. . . . ?

ಜೀವ ಹೇಗೆ ಹುಟ್ಟಿದರೇನಂತೆ. . . . ?

ಡಾ. ಎಂ. ಜೆ. ಸುಂದರ್ ರಾಮ್ 

ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಮತ್ತು ವಿಜ್ಞಾನ ಸಂವಹನಕಾರರು 

 

ಒಂದು ನದಿಯಂತೆ. ಅದರ ದಡದಲ್ಲಿ ಬೆಳೆದು ನಿಂತಿರುವ ಮರಗಳಂತೆ. ಮರಗಳ ತುಂಬ ಎಲೆಗಳಂತೆ. ಕೆಲವು ಚಿಗುರೆಲೆಗಳಂತೆ, ಕೆಲವು ಹಣ್ಣೆಲೆಗಳಂತೆ. ದಿಢೀರನೆ ಗಾಳಿ ಬೀಸತೊಡಗುತ್ತದೆ. ಅನೇಕ ಹಣ್ಣೆಲೆಗಳು ಉದುರಿ ಗಾಳಿಯಲ್ಲಿ ತೂರಾಡುತ್ತ ಕೆಳಗೆ ಬೀಳುತ್ತವೆ.ಕೆಲವು ಎಲೆಗಳು ನದಿ ನೀರಿನಲ್ಲಿ ಬಿದ್ದರೆ ಅವು ಕೂಡಲೇ ಮೀನುಗಳಾಗಿ, ಕಪ್ಪೆಗಳಾಗಿ, ಇತರ ಜಲಚರಗಳಾಗಿ ರೂಪಗೊಂಡು ಈಜುವುವಂತೆ! ನೆಲದ ಮೇಲೇನಾದರೂ ಬಿದ್ದರೆ, ಕಾಲು, ಬಾಲಗಳನ್ನು ಬೆಳೆಸಿಕೊಂಡು ಇಲಿ, ಬೆಕ್ಕು, ನಾಯಿ, ಮೊಲ ಮುಂತಾದ ಪ್ರಾಣಿಗಳಾಗಿ ಮಾರ್ಪಟ್ಟು ಓಡಿಹೋಗುವುವಂತೆ!

ಇದೇನ್ರೀ ಇದು? ಪುಟ್ಟ ಮಕ್ಕಳಿಗೆ ಹೇಳುವ ಅಡಗೂಲಜ್ಜಿಯ ಕತೆಯಂತಿದೆ. ಇದನ್ನು ಕೇಳಿದರೆ ಇಂದಿನ ಶಾಲಾ ಮಕ್ಕಳು ನಗುತ್ತಾರೆ ಎಂದು ನೀವು ಕೇಳಬಹುದು. ಹೌದು ನಿಜ. ಇಂದು ಇದು ಅಡಗೂಲಜ್ಜಿಯ ಕತೆಯಿರಬಹುದು. ಆದರೆ, ಒಂದಾನೊಂದು ಕಾಲದಲ್ಲಿ ಇದು ಮನುಷ್ಯನ ಗಾಢ ನಂಬಿಕೆಯೇ ಆಗಿತ್ತು! ಜನಸಾಮಾನ್ಯರಷ್ಟೇ ಅಲ್ಲ, ಹೆಸರಾಂತ ವಿಜ್ಞಾನಿಗಳೂ ಇದನ್ನು ನಂಬಿದ್ದರು!

ತಮ್ಮ ವಂಶವನ್ನು ಉಳಿಸಿ ಬೆಳೆಸಲು ಜೀವಿಗಳು ತಮ್ಮಂತಹ ಮರಿಜೀವಿಗಳನ್ನು ಹುಟ್ಟಿಸುತ್ತವೆ ಎಂಬುದನ್ನು ನಾವೆಲ್ಲ ಬಲ್ಲೆವು.  ಆದರೆ, ಜೀವಿಗಳು ಹೇಗೆ ಹುಟ್ಟುತ್ತವೆ ಎಂಬ ಬಗ್ಗೆ ಹಿಂದಿನ ಕಾಲದ ಜನರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಜೀವಿಗಳು ತಮ್ಮಂತೆಯೇ ಇರುವ ಪ್ರೌಢಜೀವಿಗಳಿಂದ ಹುಟ್ಟುತ್ತವೆ; ಹೀಗೆ ಹುಟ್ಟಿದ ಜೀವಿ ತನ್ನ ಜಾತಿಯ ಇತರ ಜೀವಿಗಳನ್ನು ನಿಕಟವಾಗಿ ಹೋಲುತ್ತದೆ; ಮಾವಿನ ಸಸಿ ಮಾವಿನ ಮರದಿಂದಲೂ, ಕಪ್ಪೆಮರಿ ಪ್ರೌಢ ಕಪ್ಪೆಯಿಂದಲೂ, ಜಿರಳೆಮರಿ ಪ್ರೌಢ ಜಿರಳೆ ಯಿಂದಲೂ ಹುಟ್ಟುತ್ತವೆ ಎಂಬುದರಲ್ಲಿ ಯಾರಿಗೆ ತಾನೆ ಭಿನ್ನಾಭಿಪ್ರಾಯವಿದೆ ಎಂದು ನೀವು ಆಶ್ಚರ್ಯ ಪಡಬಹುದು. ಆದರೆ, ಹತ್ತೊಂಭತ್ತನೆಯ ಶತಮಾನದ ಕೊನೆಯವರೆಗಿನ ಕತೆಯೇ ಬೇರೆಯಾಗಿತ್ತು. ಜೀವಿಗಳು ಮೂರು ವಿವಿಧ ರೀತಿಗಳಲ್ಲಿ ಹುಟ್ಟುತ್ತವೆ ಎಂದು ಜನ ನಂಬಿದ್ದರು.

ತಮ್ಮಂತೆಯೇ ಇರುವ ಪ್ರೌಢಜೀವಿಗಳಿಂದ ಮರಿಜೀವಿಗಳು ಹುಟ್ಟುವುದು ಒಂದು ರೀತಿಯಾದರೆ, ನಿರ್ಜೀವ ವಸ್ತುಗಳಿಂದಲೂ ಜೀವಿಗಳು ಹುಟ್ಟುವುದು ಎರಡನೇ ರೀತಿ. ಒಂದು ರೀತಿಯ ಜೀವಿಯು ತನ್ನಿಂದ ಭಿನ್ನವಾದ ಜೀವಿಗಳನ್ನು ಹುಟ್ಟಿಸುವುದು ಮೂರನೇ ರೀತಿ! ನಿರ್ಜೀವ ವಸ್ತುಗಳಿಂದಲೂ ಜೀವ ಹುಟ್ಟುತ್ತದೆ ಎಂಬ ನಂಬಿಕೆ ಇಂದಿಗೂ ಜನಸಾಮಾನ್ಯರಲ್ಲಿ ಆಳವಾಗಿ ಬೇರೂರಿರುವ ಒಂದು ಮೂಢನಂಬಿಕೆ.

ಪ್ರಪಂಚದ ಸಕಲ ಆಗು ಹೋಗುಗಳಿಗೂ ದೇವರೇ ಕಾರಣವೆಂದೂ, ಈ ಸತ್ಯವನ್ನು ಪ್ರಶ್ನಿಸುವ ವಿಜ್ಞಾನಿಗಳು ಧರ್ಮ ವಿರೋಧಿಗಳೆಂದು ನಂಬಿದ್ದ ಧರ್ಮ ಗುರುಗಳೂ, ಮಠಾಧಿಪತಿಗಳೂ, ರಾಜ ಮಹಾರಾಜರ, ವಿಜ್ಞಾನವನ್ನು ಕಟುವಾಗಿ ವಿರೋಧಿಸುತ್ತಿದ್ದರು. ಪ್ರಶ್ನಿಸಿದ ವಿಜ್ಞಾನಿಗಳಿಗೆ ಶಿಕ್ಷೆ ವಿಧಿಸಲಾಗುತ್ತಿತ್ತು; ಬಹಿಷ್ಕರಿಸಲಾಗುತ್ತಿತ್ತು; ಬಂಧನದಲ್ಲಿಡಲಾಗುತ್ತಿತ್ತು; ಗಡೀಪಾರು ಮಾಡಲಾಗುತ್ತಿತ್ತು; ಕೆಲವೊಮ್ಮೆ ನೇಣುಗಂಭಕ್ಕೂ ಏರಿಸಲಾಗುತ್ತಿತ್ತು!

ಇಂತಹ ಉಸಿರುಗಟ್ಟುವ ಪರಿಸ್ಥಿತಿಯಲ್ಲಿ ವಿಜ್ಞಾನಿಗಳು ಹೇಗೆ ರಹಸ್ಯವಾಗಿ ದಿಟ್ಟತನದಿಂದ ಜನರ ಮನಸ್ಸಿನಲ್ಲಿ ಭುಗಿಲೆಬ್ಬಿಸುವ ‘ದುಸ್ಸಾಹಸ’ ಮಾಡಿದರು? ಜೀವದ ಹುಟ್ಟಿನ ಬಗ್ಗೆ ಇದ್ದ ಮೂಢನಂಬಿಕೆಗಳ ಕಳೆಗಳನ್ನು ಒಂದೊಂದಾಗಿ ಕಿತ್ತೊಗೆದ ಪರಿಯೆಂತು? ನಿಜಕ್ಕೂ ಇದೊಂದು ಮೈನವಿರೇಳಿಸುವ ಪತ್ತೇದಾರಿ ಕಥೆಯೇ ಸರಿ!

ಈ ದುಸ್ಸಾಹಸದಲ್ಲಿ ಭಾಗವಹಿಸಿದ ಅಪರಾಧಿಗಳೆಷ್ಟು? ಸುಳಿವು ಕೊಡದಂತೆ ಎಸಗಲಾಗುತ್ತಿದ್ದ ದುಷ್ಕೃತ್ಯಗಳೆಂತಹವು? ರೋಗಗಳನ್ನು ಹರಡಿ, ರೋಗಿಗಳನ್ನು ಚಿತ್ರವಿಚಿತ್ರವಾಗಿ ನರಳಿಸಿ, ಕೊನೆಗೆ ಆಹುತಿ ತೆಗೆದುಕೊಳ್ಳುತ್ತಿದ್ದ ಕೊಲೆಗಡುಕರು ಯಾರು? ಅವುಗಳ ಕಾರ್ಯಾಚರಣೆ ಹೇಗಿದ್ದವು? ಒಬ್ಬರಿಂದ ಮತ್ತೊಬ್ಬರಿಗೆ ಹರಡಲು ಈ ಕೊಲೆಗಡುಕರುಗಳು ಆಶ್ರಯ ಪಡೆಯುತ್ತಿದ್ದ ವಾಹಕ ಜೀವಿಗಳಾವುವು? ಇವುಗಳ ಜಾಡು ಹಿಡಿದು, ಅವನ್ನು ಒಂದೊಂದಾಗಿ ಪತ್ತೆಹಚ್ಚಿ, ಅವುಗಳ ಜೀವನಚರಿತ್ರೆಯನ್ನು ಬಿಚ್ಚಿಟ್ಟು, ಅವನ್ನು ಸದೆಬಡಿದ ಆ ಪತ್ತೇದಾರರು ಯಾರು? ಅವರು ಬಳಸಿದ ವಿವಿಧ ತಂತ್ರಗಾರಿಕೆಗಳಾವುವು?

ಯಾವ ರೀತಿಯ ಪ್ರತಿಫಲವನ್ನೂ ನಿರೀಕ್ಷಿಸದೆ, ಜನಹಿತವೊಂದನ್ನೇ ಧ್ಯೇಯವಾಗಿಟ್ಟುಕೊಂಡು, ಮೌನದಿಂದಲೂ, ಸಹನೆಯಿಂದಲೂ, ಎಲ್ಲರಿಂದಲೂ ನಿಂದನೆಗೊಳಗಾದರೂ ಛಲಬಿಡದೆ, ಕುಗ್ಗದೆ, ಬಗ್ಗದೆ, ಜಗ್ಗದೆ ಮುನ್ನುಗ್ಗಿ ತಮ್ಮ ಗುರಿ ಮುಟ್ಟಿದ ಆ ಸಾಹಸಿ ವಿಜ್ಞಾನಿಗಳಾರು? ನೋಡೋಣ ಬನ್ನಿ!

ನಿರ್ಜೀವ ವಸ್ತುಗಳಿಂದ ಜೀವೋತ್ಪತ್ತಿಯಾಗುತ್ತದೆ ಎಂಬ ವಾದಕ್ಕೆ ನಿರ್ಜೀವಜನನ ವಾದ (abiogenesis) ಅಥವ ಸ್ವಯಂಜನನ ವಾದ (spontaneous generation) ಎಂದು ಹೆಸರು. ತಮ್ಮನ್ನು ಹೋಲುವ ಜೀವಿಗಳಿಂದಲೇ ಹೊಸ ಜೀವಿಗಳು ಹುಟ್ಟುತ್ತವೆ ಎಂಬ ವಾದಕ್ಕೆ ಜೈವಿಕ ಜನನವಾದ (biogenesis) ಎಂದು ಹೆಸರು.

ವಿಜ್ಞಾನವನ್ನು ಪ್ರಯೋಗ, ವೀಕ್ಷಣೆ ಮೂಲಕವಲ್ಲ, ಪುಸ್ತಕಗಳನ್ನು ಓದಿ ಕಲಿಯುತ್ತಿದ್ದ ಕಾಲವದು. ವೈಜ್ಞಾನಿಕ ಪದ್ಧತಿ, ಪ್ರಯೋಗಗಳು ಅವರಿಗೆ ಗೊತ್ತಿಲ್ಲದ ವಿಚಾರವಾಗಿತ್ತು. ಇಂತಹ ಪುಸ್ತಕಗಳನ್ನು ಬರೆದು ಮಾಹಿತಿ ಒದಗಿಸುತ್ತಿದ್ದ ಮೇಧಾವಿಗಳಾರು? ಅವರು ಮತ್ಯಾರೂ ಅಲ್ಲ, ಗ್ರೀಸ್ ದೇಶದ ಹೆಸರಾಂತ ವಿಜ್ಞಾನಿ ಹಾಗೂ ವೇದಾಂತಿ ಅರಿಸ್ಟಾಟಲ್ (Aristotle)!

ಜನಮನದಲ್ಲಿ ಅರಿಸ್ಟಾಟಲ್‍ರ ಹೆಸರು ಸ್ಥಿರವಾಗಿ ಬೇರೂರಿದ್ದರಿಂದ ಅರಿಸ್ಟಾಟಲ್ ಹೇಳಿದ್ದೇ ಸತ್ಯ ಎಂದು ಜನರು ನಂಬಿದ್ದರು. ಅರಿಸ್ಟಾಟಲ್‍ರ ಪುಸ್ತಕಗಳು ಕೆಲ ಅರಬ್ ಪಂಡಿತರ ಕೈಸೇರಿ, ಅಲ್ಲಿಂದ ಪಾಶ್ಚಾತ್ಯ ದೇಶಗಳನ್ನೂ ತಲುಪಿದವು. ಹೀಗೆ ಅರಿಸ್ಟಾಟಲ್‍ರ ವಿಚಾರಧಾರೆ ಎಲ್ಲೆಡೆ ಪಸರಿಸತೊಡಗಿತು. ಅಂದು ವಿಜ್ಞಾನವು ಅಜ್ಞಾನದ ಕಂತೆಯಾಗಿತ್ತು.

ಅರಿಸ್ಟಾಟಲ್ ವಿಹಾರದಲ್ಲಿ ಬಹಳಷ್ಟು ಸಮಯವನ್ನು ಕಳೆಯುತ್ತಿದ್ದರಂತೆ. ಆ ಸಂದರ್ಭದಲ್ಲಿ, ತಮ್ಮ ಸುತ್ತಮುತ್ತಲ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುತ್ತ, ಅಲ್ಲಿಕಾಣುವ ವಿಶೇಷತೆಗಳನ್ನು ತಮ್ಮ ಡೈರಿಯಲ್ಲಿ ಗೀಚಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ಕೆರೆಗಳು, ಕೊಳಗಳಲ್ಲಿ ದೋಣಿಯಲ್ಲಿ ವಿಹರಿಸುತ್ತ, ಅಲ್ಲಿಯ ಜಲಚರಗಳ ಜೀವನ ಶೈಲಿಯನ್ನು, ಅವುಗಳ ಕಾರ್ಯಕಲಾಪಗಳನ್ನು ಗಂಟೆಗಟ್ಟಲೆ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಬೇಸಿಗೆ ಕಾಲ ಬಂದಿತು. ಬಿಸಿಲಿನ ಝಳ ಹೆಚ್ಚಿ, ಕೆರೆಕುಂಟೆಗಳ ನೀರು ಆವಿಯಾಗಿ, ಅನೇಕ ಕೆರೆಗಳು ಬತ್ತಿಹೋದವು. ತಳದಲ್ಲಿದ್ದ ಹೂಳು ಒಣಗಿ ಬಿರುಕು ಬಿಟ್ಟುಕೊಂಡಿತು. ಅಲ್ಲಿಯ ಜಲಚರಗಳ ಗತಿ? ಅವೆಲ್ಲ ಸತ್ತುಹೋಗಿರಬೇಕೆಂದು ಅರಿಸ್ಟಾಟಲ್ ತರ್ಕಿಸಿದರು. ನಿಜಸ್ಥಿತಿಯನ್ನು ನೋಡಿ ತಮ್ಮ ನಂಬಿಕೆಯನ್ನು ಸ್ಥಿರ ಪಡಿಸಿಕೊಂಡರು.

ಕ್ರಮೇಣ ಬೇಸಿಗೆ ಮುಗಿದು ಮತ್ತೆ ಮಳೆಗಾಲ ಪ್ರಾರಂಭವಾಯಿತು. ಬತ್ತಿಹೋಗಿದ್ದ ಕೆರೆಕುಂಟೆಗಳೆಲ್ಲ ಒಂದೊಂದಾಗಿ ತುಂಬಿಕೊಂಡವು. ಅರಿಸ್ಟಾಟಲ್ ಯಥಾಪ್ರಕಾರ ಕೆರೆಕುಂಟೆಗಳ ಬಳಿ ಹಾಜರಾದರು. ಆ ಹೊಸ ನೀರಿನಲ್ಲಿ ಮೊದಲಿನಂತೆಯೇ ಜಲಚರಗಳು ನೀರಿನಲ್ಲಿ ಸ್ವೇಚ್ಛೆಯಾಗಿ ವಿಹರಿಸುತ್ತಿದ್ದವು!

ಈ ದೃಶ್ಯವನ್ನು ಕಂಡು ತಬ್ಬಿಬ್ಬಾದ ಅರಿಸ್ಟಾಟಲ್ ಇದು ಹೇಗೆ ಸಾಧ್ಯ ಎಂದು ಚಿಂತಿಸತೊಡಗಿದರು. ಮಂಗಮಾಯವಾಗಿದ್ದ ಈ ಜಲಚರಗಳು ನೀರಿನೊಡನೆ ಮತ್ತೆ ಜೀವಂತವಾಗಿ ಪುನರಾಗಮಿಸಿದ್ದು ಹೇಗೆ?  ಎಂದು ಯೋಚಿಸತೊಡಗಿದರು. ಮಳೆನೀರಿನೊಡನೆ ಆಕಾಶದಿಂದ ಉದುರಿರಬಹುದೇ! ಎಷ್ಟೇ ಯೋಚಿಸಿದರೂ ಅರಿಸ್ಟಾಟಲ್‍ಗೆ ಇದಕ್ಕೆ ಸೂಕ್ತ ಸಮಾಧಾನಕರ ಪರಿಹಾರ ಸಿಗಲಿಲ್ಲ. ಕೆರೆಯ ತಳದಲ್ಲಿರುವ ಹೂಳಿನಿಂದಲೇ ಈಜೀವಿಗಳು ಪುನರ್ಜನ್ಮ ಪಡೆದು ಬಂದಿರಬೇಕೆಂಬ ನಿರ್ಧಾರಕ್ಕೆ ಬಂದರು ಅರಿಸ್ಟಾಟಲ್. ನಿರ್ಜೀವ ವಸ್ತುವಾದ ಕೆರೆಯ ಹೂಳು ಹೊಸ ಜೀವಿಗಳನ್ನು ಹುಟ್ಟಿಸಬಲ್ಲುದು ಎಂದು ನಂಬಿದ ಅರಿಸ್ಟಾಟಲ್, ನಿರ್ಜೀವ ವಸ್ತುಗಳಿಗೂ ಹೊಸ ಜೀವಿಗಳನ್ನು ಸೃಷ್ಠಿಸುವ ಸಾಮಥ್ರ್ಯವಿದೆ ಎಂಬ ಅಸಾಧಾರಣ ಘೋಷಣೆ ಮಾಡಿದರು. ಇದನ್ನು ಕೂಡಲೇ ಜನರೆಲ್ಲ ನಂಬಿದರು.

ಅರಿಸ್ಟಾಟಲ್ ಹೇಳಿದರೆಂದರೆ ಅದು ನಿಜವಾಗಿರಲೇಬೇಕು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಅದನ್ನು ಎಲ್ಲರೂ ಒಪ್ಪಲೇಬೇಕು ಎಂದು ಆಗಿನ ವಿಜ್ಞಾನಿಗಳೂ ಕಣ್ಣುಮುಚ್ಚಿಕೊಂಡು ಅರಿಸ್ಟಾಟಲ್‍ರ ಹೇಳಿಕೆಯನ್ನು ಸಾರಾಸಗಟಾಗಿ ಸ್ವೀಕರಿಸಿದರು ! ಇದನ್ನೇ ನಿರ್ಜೀವಜನನ ವಾದ ಎಂದು ಕರೆಯಲಾಯಿತು.

ಕ್ರಮೇಣ ನಿರ್ಜೀವ ಜನನ ವಾದವನ್ನು ಸಮರ್ಥಿಸುವ ಅನೇಕ ವಿಚಿತ್ರ ದಂತಕತೆಗಳು ಹರಿದಾಡಲು ಆರಂಭಿಸಿದವು. ಮಣ್ಣಿನಿಂದ ಎರೆಹುಳುಗಳು ಹುಟ್ಟುತ್ತವೆ ಎಂದು ಕೆಲವರು ತಿಳಿಸಿದರೆ ನೀರಿನಲ್ಲಿ ತೇಲುವ ಪಾಚಿಯಿಂದ ಕಪ್ಪೆಗಳು ಹುಟ್ಟುತ್ತವೆ ಎಂದು ಮತ್ತೆ ಕೆಲವರು ವಿವರಿಸಿದರು. ಸಗಣಿಯಿಂದ ಹುಳುಗಳು ಹುಟ್ಟುತ್ತವೆ ಎಂದು ಕೆಲವರು ವಾದಿಸಿದರು. ಸಮುದ್ರ ದಡದ ಮಣ್ಣಿನಿಂದ ಕಡಲಾಮೆಗಳು ಹುಟ್ಟುತ್ತವೆ ಎಂದು ಕೆಲವರು ವಿವರಿಸಿದರು.

ಜೀವಿಗಳು ತಮ್ಮಿಂದ ಭಿನ್ನವಾದ ಜೀವಿಗಳಿಂದ ಹುಟ್ಟುತ್ತವೆ ಎಂದು ಮತ್ತಷ್ಟು ವಿಜ್ಞಾನಿಗಳು ವಿವರಿಸಿದರು. ಪರ್ಷಿಯದೇಶದ ವೋಲ್ಗ (Volga) ನದಿಯ ದಡದಲ್ಲಿ ಅಪರೂಪದ ಕುಂಬಳಗಿಡಗಳು ಬೆಳೆಯುತ್ತವಂತೆ. ಇವುಗಳಲ್ಲಿ ಬೆಳೆಯುವ ಕುಂಬಳಕಾಯಿಗಳು ಕುರಿಯ ಆಕಾರದಲ್ಲಿರುತ್ತವಂತೆ. ಅವು ದೊಡ್ಡದಾಗಿ ಬೆಳೆಯುತ್ತಿದ್ದಂತೆ, ಸುತ್ತಮುತ್ತ ಬೆಳೆದಿರುವ ಹುಲ್ಲು ಮೇಯುತ್ತವಂತೆ. ತೋಳಗಳೂ ಆಗಾಗ ಅಲ್ಲಿಗೆ ಬಂದು ಈ ಕುರಿಗಳನ್ನು ತಿಂದುಹೋಗುವುವಂತೆ! ಈ ರೀತಿ ಅನೇಕ ವಿಚಿತ್ರ ಸ್ವಾರಸ್ಯಕರ ಕತೆಗಳು ವಿವಿಧ ದೇಶಗಳಲ್ಲಿ ಹುಟ್ಟಿಕೊಂಡು ಜನಪ್ರಿಯವಾಗಿ, ಇತರ ದೇಶಗಳಿಗೂ ಹರಡಿತು. ಜನರು ಇಂತಹ ಕತೆಗಳನ್ನು ನಿಜವೆಂದು ನಂಬಿದರು.

ಜೀವಿಗಳು ಹೀಗೆ ವಿಭಿನ್ನ ರೀತಿಗಳಲ್ಲಿ ಹುಟ್ಟುವುದಾದರೆ ನಿಸರ್ಗದಲ್ಲಿ ಒಂದು ಕ್ರಮವಾಗಲಿ, ಶಿಸ್ತಾಗಲಿ, ವ್ಯವಸ್ಥೆಯಾಗಲಿ ಇಲ್ಲವೇ? ಅಲ್ಲಿ ಏನು ಬೇಕಾದರೂ ನಡೆಯಬಹುದೇ? ಈ ಮೂಢನಂಬಿಕೆಗಳೆಲ್ಲ ಅದೆಷ್ಟು ಕಾಲಹಾಗೇ ಉಳಿದಾವು? ಸತ್ಯವೇ ಕಾಲದ ಮಗಳು ಎಂಬಂತೆ, ಎಂದಾದರೊಮ್ಮೆ ನಿಜಸ್ಥಿತಿ ಬಯಲಾಗಬೇಕಲ್ಲ? ಕೊನೆಗೂ ಆ ಕಾಲ ಬಂದಿತು.

ಇಂತಹ ಅಡಗೂಲಜ್ಜಿಯ ಕತೆಗಳನ್ನು ನಂಬಬೇಡಿ. ಇವೆಲ್ಲ ಬರೀ ಬುರುಡೆ; ಮೂಢನಂಬಿಕೆಗಳ ಕಂತೆ’ ಎಂದೊಬ್ಬ ವಿಜ್ಞಾನಿ ಒಂದು ದಿನ ಸೆಟೆದು ನಿಂತು ಗುಡುಗಿದನು. ಅವನ ಕೂಗು ಜನರ ಮೇಲೆ ಸಿಡಿಲಿನಂತೆರಗಿತು. ಜನ ದಿಗ್ಭ್ರಾಂತರಾದರು. ಅವನತ್ತ ಕೈತೋರಿಸಿ ನಕ್ಕರು. ಯಾರೋ ತಲೆತಿರುಕ ಪೇಚಾಡುತ್ತಿದ್ದಾನೆ. ಅರಿಸ್ಟಾಟಲ್‍ರ ಹೇಳಿಕೆಗಳು ಎಂದಾದರೂ ಸುಳ್ಳಾಗುವುದುಂಟೇ ಎಂದು ತಮ್ಮಲ್ಲೇ ಮಾತನಾಡಿಕೊಂಡರು.

ಆದರೆ ಆ ವಿಜ್ಞಾನಿ ಸ್ವಲ್ಪವೂ ಬೇಸರಗೊಳ್ಳಲಿಲ್ಲ, ಎದೆಗುಂದಲಿಲ್ಲ. ಮತ್ತೊಮ್ಮೆ ಆತ್ಮವಿಶ್ವಾಸದಿಂದ ಗರ್ಜಿಸಿದ –‘ನನ್ನನ್ನು ನಂಬಿ. ಸ್ವಯಂಜನನದಿಂದ ಜೀವಿಗಳು ಹುಟ್ಟಲಾರವು. ನನ್ನ ಮೇಲೆ ನಂಬಿಕೆಯಿಲ್ಲದಿದ್ದರೆ ನನ್ನಲ್ಲಿಗೆ ಬನ್ನಿ. ಪ್ರಯೋಗಗಳನ್ನು ನಡೆಸಿ ದೃಢಪಡಿಸುತ್ತೇನೆ. ನನ್ನ ಸವಾಲನ್ನು ಸ್ವೀಕರಿಸಿ’.

ಪ್ರಯೋಗಗಳ ಹೆಸರನ್ನೇ ಕೇಳದಿದ್ದ ಜನರಲ್ಲಿ ಕುತೂಹಲ ಕೆರಳಿ, ಅವನತ್ತ ಬಂದರು. ಆ ವಿಜ್ಞಾನಿ ಕೆಲವು ಸರಳ ಪ್ರಯೋಗಗಳ ಮೂಲಕ, ಸ್ವಯಂಜನನ ಸಾಧ್ಯವಿಲ್ಲ ಎಂಬುದನ್ನು ನಿರೂಪಿಸಿದರು. ಜನತಲೆದೂಗಿದರು. ಸ್ವಯಂಜನನ ಸಾಧ್ಯವಿಲ್ಲವೆಂಬುದನ್ನು ಮನಗಂಡರು. ಹೀಗೆ ಪ್ರಯೋಗ ನಡೆಸಿ ವಿಜ್ಞಾನಕ್ಕೆ ತಿರುವು ಕೊಟ್ಟ ಮೊಟ್ಟಮೊದಲ ವಿಜ್ಞಾನಿಗಳಲ್ಲಿ ಒಬ್ಬರು, ಫ್ರಾನ್ಸಿಸ್ಕೊ ರೀಡಿ (Francisco Redi).

ರೀಡಿಯ ಪ್ರಯೋಗ :

ಸತ್ತ ಪ್ರಾಣಿಗಳ ದೇಹ, ಸಗಣಿ, ಮಾಂಸ, ಮುಂತಾದ ವಸ್ತುಗಳಲ್ಲಿ ಸಾಮಾನ್ಯವಾಗಿ ಸಣ್ಣ ಸಣ್ಣ ಬಿಳಿಯ ಹುಳುಗಳು ಹರಿದಾಡುತ್ತಿರುತ್ತವೆ. ಇವು ಸ್ವಯಂಜನನವಾಗಿ ಜನಿಸುತ್ತವೆ ಎಂದು ಜನ ನಂಬಿದ್ದರು. ಈ ಮೂಢ ನಂಬಿಕೆಯನ್ನು ಹೋಗಲಾಡಿಸಲು ರೀಡಿ ಒಂದು ಸರಳ ಪ್ರಯೋಗವನ್ನು ಯೋಜಿಸಿದರು.

ಆರು ಅಗಲ ಬಾಯುಳ್ಳ ಸೀಸೆಗಳನ್ನು ತಂದು, ಎರಡರಲ್ಲಿ ಸತ್ತ ಮೀನು, ಎರಡರಲ್ಲಿ ಸತ್ತ ಕಪ್ಪೆ ಮತ್ತು ಉಳಿದೆರಡು ಸೀಸೆಗಳಲ್ಲಿ ಸತ್ತ ಹಾವನ್ನಿಟ್ಟರು. ಸತ್ತ ಮೀನು, ಕಪ್ಪೆ ಮತ್ತು ಹಾವಿನ ಒಂದೊಂದು ಸೀಸೆಯ ಬಾಯನ್ನು ತಂತಿಯ ಬಲೆಯಿಂದ (wire mesh) ಮುಚ್ಚಿದರು. ಉಳಿದ ಮೂರು ಸೀಸೆಗಳನ್ನು ಮುಚ್ಚದೆ ಹಾಗೆಯೇ ತೆರೆದಿಟ್ಟರು.

ಆರು ಸೀಸೆಗಳನ್ನು ಸಾಲಾಗಿ ಒಂದು ಮೇಜಿನ ಮೇಲಿಟ್ಟು,  ಅವನ್ನು ಜಾಗರೂಕತೆಯಿಂದ ಗಮನಿಸುವಂತೆ ಜನರಿಗೆ ಹೇಳಿದರು. ಮಾಂಸದ ವಾಸನೆಗೆ ಆಕರ್ಷಿತವಾದ ನೊಣಗಳು ಸೀಸೆಯೊಳಗೆ ಹೋಗಲು ಪ್ರಯತ್ನಿಸಿದವು. ತೆರೆದಿಟ್ಟಿದ್ದ ಸೀಸೆಗಳೊಳಗೆ ನೊಣಗಳು ಸುಲಭವಾಗಿ ಆಗಾಗ ಹೋಗಿಬರುತ್ತಿದ್ದವು. ಬಲೆ ಮುಚ್ಚಿದ್ದ ಸೀಸೆಗಳೊಳಗೆ ಹೋಗಲು ಅವುಗಳಿಗೆ ಆಗಲಿಲ್ಲ. ಇವೆಲ್ಲವನ್ನೂ ರೀಡಿ ಜನರಿಗೆ ವಿವರಿಸಿದರು.

ಮೊಟ್ಟೆಯೊಡೆದು ಹೊರಬಂದ ಮರಿಗಳಿಗೆ ಕೂಡಲೇ ಆಹಾರ ಒದಗಿಸುವ ಸಲುವಾಗಿ ನೊಣಗಳು ಸತ್ತ ಪ್ರಾಣಿಗಳ ದೇಹದ ಮೇಲೆ ಮೊಟ್ಟೆಯಿಟ್ಟು ಹೋಗುತ್ತಿದ್ದವು. ಮೊಟ್ಟೆಗಳು ಅತಿ ಸೂಕ್ಷ್ಮ ಗಾತ್ರದ್ದವಾದ್ದರಿಂದ ನಮ್ಮ ಕಣ್ಣಿಗೆ ಕಾಣುವುದಿಲ್ಲ. 2-3 ದಿನಗಳಲ್ಲಿ ಮೊಟ್ಟೆಗಳು ಒಡೆದು ಸಣ್ಣ ಮರಿಹುಳುಗಳಾಗಿ ರೂಪಗೊಳ್ಳುತ್ತವೆ. ಹುಳುಗಳು ಬೆಳೆದು ಪ್ರ್ರೌಢನೊಣಗಳಾಗಿ ಬೆಳೆದು ಹಾರಿಹೋಗುತ್ತವೆ. ಆದರೆ ಬಲೆಯಿಂದ ಮುಚ್ಚಿದ್ದ ಸೀಸೆಗಳಲ್ಲಿ ನೊಣಗಳ ಪ್ರವೇಶವಾಗಲಿಲ್ಲ ಆದ್ದರಿಂದ, ಅಲ್ಲಿದ್ದ ಸತ್ತ ಪ್ರಾಣಿಗಳ ಮೇಲೆ ನೊಣಗಳು ಮೊಟ್ಟೆಯಿಡಲಾಗಲಿಲ್ಲ. ಹಾಗಾಗಿ, ಎಷ್ಟು ದಿನಗಳಾದರೂ ಅಲ್ಲಿ ಮರಿ ಹುಳುಗಳು ಕಂಡುಬರಲಿಲ್ಲ.

ನಿಯಂತ್ರಣ ಪ್ರಯೋಗ :

ತಮ್ಮ ವಾದವನ್ನು ಸಮರ್ಥಿಸಲು ರೀಡಿ ಸರಳ ಪ್ರಯೋಗವನ್ನೇನೋ ಅಳವಡಿಸಿದರು. ಆದರೆ, ತಾವು ಬಳಸಿದ ಸೀಸೆಗಳನ್ನು ಎರಡು ಗುಂಪುಗಳಾಗಿ ಏಕೆ ವಿಂಗಡಿಸಿದರು? ಎಲ್ಲ ಸೀಸೆಗಳ ಬಾಯನ್ನೂ ತಂತಿಯ ಬಲೆಯಿಂದ ಮುಚ್ಚಿ ತಮ್ಮ ಪ್ರಯೋಗವನ್ನು ತೋರಿಸಬಹುದಾಗಿತ್ತಲ್ಲ?

ನೊಣಗಳು ಪ್ರವೇಶಿಸದಂತೆ ಎಲ್ಲ ಸೀಸೆಗಳನ್ನೂ ರೀಡಿ ಮುಚ್ಚಿದ್ದರೆ ಯಾವ ಸೀಸೆಯಲ್ಲೂ ಜೀವೋತ್ಪತ್ತಿಯಾಗುತ್ತಿರಲಿಲ್ಲ, ನಿಜ. ಆದರೆ ಸೀಸೆಗಳಲ್ಲಿದ್ದ ಮೃತ ಪ್ರಾಣಿಗಳಲ್ಲಿ ಜೀವಸೃಷ್ಟಿಗೆ ಬೇಕಾದ ಯಾವುದೋ ಅಂಶದ ಕೊರತೆಯಿಂದ ಜೀವೋತ್ಪತ್ತಿಯಾಗಲಿಲ್ಲ ಎಂದೋ, ಅಥವ ಗಾಳಿಯ ಸಂಚಾರವಿಲ್ಲದಂತೆ ತಡೆದಿದ್ದಕ್ಕೇ ಜೋವೋತ್ಪತ್ತಿಯಾಗಲಿಲ್ಲ ಎಂದೋ ಸ್ವಯಂಜನನವಾದಿಗಳು ಆಕ್ಷೇಪಿಸುತ್ತಿದ್ದರು.

ಇಂತಹ ಟೀಕೆಗೆ ಅವಕಾಶವಿರಬಾರದೆಂದು ರೀಡಿ ಸೀಸೆಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದರು. ಎರಡು ಗುಂಪುಗಳಲ್ಲೂ ಮೃತ ಪ್ರಾಣಿಗಳಿದ್ದು ಒಂದೇ ಒಂದು ವ್ಯತ್ಯಾಸವಿತ್ತು– ಒಂದರಲ್ಲಿ ನೊಣಗಳು ಸ್ವೇಚ್ಛೆಯಾಗಿ ಹೋಗಿಬುರುತ್ತಿದ್ದವು ಇನ್ನೊಂದರಲ್ಲಿ ಇದಕ್ಕೆ ಅವಕಾಶವಿರಲಿಲ್ಲ. ನೊಣಗಳಿಗೆ ಮುಕ್ತ ಅವಕಾಶವಿದ್ದ ಸೀಸೆಗಳಲ್ಲಿ ಜೀವಸೃಷ್ಟಿಯಾದ್ದರಿಂದ ಅದಕ್ಕೆ ಬೇಕಾದಎಲ್ಲ ಅಂಶಗಳೂ ಎಲ್ಲ ಸೀಸೆಗಳಲ್ಲಿರುವುದು ಖಚಿತವಾಯಿತು. ನೊಣಗಳು ಪ್ರವೇಶಿಸಲಾಗದ ಸೀಸೆಗಳಲ್ಲಿ ಜೋವೋತ್ಪತ್ತಿಯಾಗಲಿಲ್ಲ. ಇಲ್ಲಿ, ತಂತಿ ಬಲೆಯ ಸೀಸೆಗಳಿಗೆ ನಿಯಂತ್ರಣ ಪ್ರಯೋಗ(Control Experiment) ಎಂದು ಹೆಸರು. ವಿಜ್ಞಾನದಲ್ಲಿ ನಿಯಂತ್ರಣ ಪ್ರಯೋಗಗಳಿಗೆ ವಿಶೇಷ ಮಹತ್ವವಿದೆ.

ಇಂಗ್ಲೆಂಡಿನ ಕೆಲವು ಕ್ರಾಂತಿಕಾರಿ ವಿಜ್ಞಾನಿಗಳು ರಾಜನ ವಕ್ರದೃಷ್ಟಿ ಬೀಳದಂತೆ ತಮ್ಮದೇ ಆದ ಅಗೋಚರ ಕಾಲೇಜು(Invisible College)ಎಂಬ ಗುಪ್ತ ಸಂಸ್ಥೆಯನ್ನು ಸ್ಥಾಪಿಸಿ, ಆಗಾಗ ಗುಪ್ತವಾಗಿ ಸಭೆ ಸೇರಿ, ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಕ್ರಮೇಣ ಇದೊಂದು ಪ್ರಬಲ ಸಂಸ್ಥೆಯಾಗಿ ಬೆಳೆದು ನಿಂತಿತು. ರಾಜನ ಮರಣಾನಂತರ ಪ್ರಸಿದ್ಧಿಗೆ ಬಂದ ಈ ಸಂಸ್ಥೆಗೆ ರಾಯಲ್ ಸೊಸೈಟಿ ಆಫ್ ಇಂಗ್ಲೆಂಡ್‍ ಎಂಬ ಪ್ರತಿಷ್ಠೆಯ ಹೆಸರು! 


[By Tom Morris - Own work, CC BY-SA 3.0, https://commons.wikimedia.org/w/index.php?curid=15456818]

ಜೀವದ ಹುಟ್ಟಿನ ಹುಡುಕಾಟಕ್ಕೆ ಹೊರಟ ವಿಜ್ಞಾನಿಗಳಿಗೆದುರಾದ ಸಮಸ್ಯೆಗಳು, ಪರಿಹಾರ ಪಡೆದುಕೊಂಡ ಕತೆ ಅವರ ನೋವು ನಲಿವಿನ ಇನ್ನಷ್ಟು ರೋಚಕ ಕತೆಗಳನ್ನು ಮುಂದಿನ ಭಾಗದಲ್ಲಿ ನೋಡೋಣ.

9 comments:

  1. very informative.
    shall be eagerly waiting for series in the next issue.....

    ReplyDelete
  2. Article is highly informative. Await further momentous stages of history in biosciences from my guru Sunder Ram sir

    ReplyDelete
  3. ಹಿರಿಯರು, ಅನುಭವಿಗಳು, ಮಾರ್ಗದರ್ಶಕರೂ ಆದ
    ಡಾ. ಸುಂದರ ರಾಮ್ ಸರ್ ಸೊಗಸಾಗಿ ಬರೆದಿದ್ದಾರೆ. ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲಾರ. ಹಾಗಾಗಿ ವಿಜ್ಞಾನದ ಬೆಳವಣಿಗೆಯ ಇತಿಹಾಸ ಅತ್ಯಂತ ಅವಶ್ಯಕ. ಆರಂಭದಲ್ಲಿ ವಿಜ್ಞಾನಿಗಳು ಪಟ್ಟ ಕಷ್ಟಕೋಟಲೆಗಳು ಜೀವಹಾನಿ ಅಬ್ಬಾ ಎನಿಸುತ್ತದೆ ಇಂಥ ರೋಚಕ ಸತ್ಯವನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದೀರಿ. ಧನ್ಯವಾದಗಳು ಸರ್

    ReplyDelete
  4. ತುಂಬಾ ಉತ್ತಮವಾದ ನನಗೆ ತಿಳಿದಿಲ್ಲದ ಮಾಹಿತಿಯನ್ನು ನೀಡಿದ್ದೀರಿ ಸರ್. ನಿಮಗೆ ಧನ್ಯವಾದಗಳು.
    ಮುಂದಿನ ಸಂಚಿಕೆ ಗೋಸ್ಕರ ಕಾಯುತ್ತಿರುತ್ತೇವೆ ಸರ್.

    ReplyDelete