Monday, October 4, 2021

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ  

ಸವಿಜ್ಞಾನ’ ಇ-ಪತ್ರಿಕೆಯ ಹತ್ತನೆಯ ಸಂಚಿಕೆಗೆ ವಿಜ್ಞಾನ ಶಿಕ್ಷಕರಿಗೆ ಮತ್ತು ವಿಜ್ಞಾನಾಸಕ್ತರಿಗೆ ಸ್ವಾಗತ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪ್ರಕಟವಾದ ಕಳೆದ ಸೆಪ್ಟೆಂಬರ್ ತಿಂಗಳ ‘ಸವಿಜ್ಞಾನ’ ಸಂಚಿಕೆಯಲ್ಲಿ ಪ್ರಕಟವಾದ ಲೇಖನ ಹಾಗೂ ಸಂದರ್ಶನಗಳನ್ನು ನೀವೆಲ್ಲ ಮೆಚ್ಚಿಕೊಂಡಿರುವುದು ಸಂತಸದ ವಿಷಯ. ಅದರಲ್ಲಿಯೂ, ಕೆ.ಎನ್.ಗಣೇಶಯ್ಯನವರ ಜೊತೆಗೆ ನಮ್ಮ ಸಂಪಾದಕೀಯ ತಂಡದ ಸದಸ್ಯರು ನಡೆಸಿದ ಸಂದರ್ಶನ ಬಹು ಮಂದಿಗೆ ಮೆಚ್ಚುಗೆಯಾಗಿದೆ. ಸಂದರ್ಶನ ಓದಿದ ನಂತರ ಹಲವರು ಕೆ.ಎನ್. ಗಣೇಶಯ್ಯನವರ ಪುಸ್ತಕಗಳನ್ನು ಹುಡುಕಿ ತಂದು ಓದಿರುವುದಾಗಿ ತಿಳಿಸಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆ. ನಿಮ್ಮ ಪ್ರೋತ್ಸಾಹಕ್ಕೆ ನಾವು ಆಭಾರಿ. ಇನ್ನು ಮುಂದಿನ ಸಂಚಿಕೆಗಳಲ್ಲಿ ಇಂಥ ಹಲವಾರು ಗಣ್ಯ ವಿಜ್ಞಾನಿಗಳನ್ನು ಹಾಗೂ ವಿಜ್ಞಾನ ಸಾಹಿತಿಗಳನ್ನು ಪರಿಚಯಿಸುವ ಹಂಬಲ ನಮ್ಮದು.

ಈ ಬಾರಿಯ ಅಕ್ಟೋಬರ್ ತಿಂಗಳ ಸಂಚಿಕೆಯೂ ಹಲವು ಕುತೂಹಲಕಾರಿ ಹಾಗೂ ಮಾಹಿತಿಪೂರ್ಣ ಲೇಖನಗಳನ್ನು ನಿಮಗಾಗಿ ಹೊತ್ತು ತಂದಿದೆ. ಭೂಮಿಯ ಮೇಲೆ ಜೀವದ ಉಗಮದ ಬಗ್ಗೆ ಹಿಂದೆ ಇದ್ದ ಕಲ್ಪನೆಗಳನ್ನು ಹಾಗೂ ವಾಸ್ತವವನ್ನು ಸೊಗಸಾಗಿ ನಿರೂಪಿಸುವ ‘ಜೀವ ಹೇಗೆ ಹುಟ್ಟಿದರೇನಂತೆ?ಎಂಬ ಲೇಖನವಿದೆ. ಡಾ. ಎಂ.ಜೆ. ಸುಂದರರಾಂ ಬರೆದಿರುವ ಈ ಲೇಖನದ ಮೊದಲ ಕಂತು ಈ ತಿಂಗಳು ಪ್ರಕಟವಾಗಿದೆ. ನಿಸರ್ಗದಲ್ಲಿ ಎಲ್ಲೆಡೆ ಕಾಣಬಹುದಾದ ಸುವರ್ಣ ಅನುಪಾತದ ಬಗ್ಗೆ ಸರಣಿ ಲೇಖನಗಳನ್ನು ಹಿಂದಿನ ಸಂಚಿಕೆಗಳಲ್ಲಿ ಓದಿದ ನಿಮಗೆ ಅದರ ಲೆಕ್ಕಾಚಾರ ಮಾಡುವುದು ಹೇಗೆ? ಎಂಬುದನ್ನು ಗಣಿತ ಶಿಕ್ಷಕ ಅನಿಲ್ ಕುಮಾರ್ ಈ ತಿಂಗಳ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ. ಕೃಷ್ಣ ಚೈತನ್ಯ ಅವರ ಲೇಖನ ‘ಬಾನಾಡಿಗಳ ಬೆನ್ನತ್ತಿ’ ಹಕ್ಕಿಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿಮಗೆ ನೀಡಲಿದೆ. ಪರಿಸರಕ್ಕೆ ಸಂಬಂಧಿಸಿದ ಎರಡು ಸಾಂದರ್ಭಿಕ ಲೇಖನಗಳಿವೆ. ತೆರೆ ಮರೆಯ ಸಾಧಕಿ ಶಿಕ್ಷಕಿ ಶ್ರೀಮತಿ ಶಾರದಾ ಹೆಚ್.ಎಸ್. ಅವರ ಪರಿಚಯವಿದೆ. ನಿಮ್ಮ ಮೆಚ್ಚುಗೆಗೆ ಪಾತ್ರವಾಗಿರುವ ವಿಜ್ಞಾನದ ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ಇವೆ.

ಕಳೆದ ತಿಂಗಳ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಸರ್ಕಾರವೂ ಸೇರಿ, ವಿವಿಧ ಸಂಘ ಸಂಸ್ಥೆಗಳಿಂದ  ತಮ್ಮ ನಿಸ್ವಾರ್ಥ ಸೇವೆಗಾಗಿ ಗುರುತಿಸಲ್ಪಟ್ಟು ಪುರಸ್ಕೃತರಾಗಿರುವವರಲ್ಲಿ ನಮ್ಮ ‘ಸವಿಜ್ಞಾನ’ ತಂಡದ ಅನೇಕ ಶಿಕ್ಷಕರಿರುವುದು ನಮಗೆ ಹೆಮ್ಮೆಯ ಸಂಗತಿ. ಶಿಕ್ಷಕ ಸಮೂಹಕ್ಕೆ ಸ್ಫೂರ್ತಿಯಾಗಬಲ್ಲ ಆ ಎಲ್ಲ ಶಿಕ್ಷಕರ ಕಿರು ಪರಿಚಯವನ್ನೂ ತಿಂಗಳ ಸಂಚಿಕೆಯಲ್ಲಿ ನೋಡಬಹುದು.

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

1 comment:

  1. ತುಂಬಾ ಚೆನ್ನಾಗಿ ಇದೆ ... ಶುಭವಾಗಲಿ ಸರ್

    ReplyDelete