Saturday, December 4, 2021

ಜಲವಾಸಿ ಹಕ್ಕಿಗಳು

ಜಲವಾಸಿ ಹಕ್ಕಿಗಳು

ಡಿ. ಕೃಷ್ಣಚೈತನ್ಯ 
ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.


ಬಾನಾಡಿಗಳ ಕುರಿತ ಕೆಲವು ಲೇಖನಗಳನ್ನು ಹಿಂದಿನ ಸಂಚಿಕೆಗಳಲಲ್ಲಿ ಆಸ್ವಾದಿಸಿದಿರಲ್ಲವೇ? ಈಗ ನಮ್ಮ ಬಾನಾಡಿಗಳನ್ನು ಬೆನ್ನಟ್ಟುವ ಕಾರ್ಯವನ್ನು ಮುಂದುವರೆಸೋಣ. ಈ ಪ್ರಕೃತಿ ಹಲವು ಅಚ್ಚರಿಗಳ ಒಡಲು. ಆದರೆ ಅಚ್ಚರಿಗಳನ್ನು ವಿಕೃತಿಗಳಾಗಿಸಿ ಆನುವಂಶೀಯ ವಿಕೃತಿಗಳಾಗಿಸುವ ತನಕ ಈ ಮನುಷ್ಯ ಸುಮ್ಮನಿರಲಾರನೇನೋ? ಇರಲಿ ಸಾಧ್ಯವಾದಷ್ಟು ಮಟ್ಟಿನ ಅರಿವನ್ನು ಜನರಲ್ಲಿ ಮೂಡಿಸಲೆತ್ನಿಸೋಣ.

1. ನೀರುಕಾಗೆ(Cormorant)ಗಳು

ಕಾರ್ಮೊರಾಂಟ್ (ನೀರುಕಾಗೆ)ಗಳನ್ನು ನೋಡಿದಾಗ ಸಾಮಾನ್ಯವಾಗಿ ಒಂದೇ ತೆರನಾಗಿ ಕಾಣಿಸಿದರೂ, ಸೂಕ್ಷ್ಮವಾಗಿ ಗಮನಿಸಿದಾಗ ಅವುಗಳಲ್ಲಿರುವ ವ್ಯತ್ಯಾಸವುಗೊತ್ತಾಗುತ್ತದೆ.   ಹಾಗಾಗಿ ನೀರುಕಾಗೆಗಳಲ್ಲಿ ನಾವು ಮೂರು ಪ್ರಬೇಧಗಳನ್ನು ಗುರುತಿಸಬಹುದು.

ಎ. ಪುಟ್ಟ ನೀರುಕಾಗೆ(Cormorant) : ಇದು ಕಾಗೆಗಿಂತ ಸ್ವಲ್ಪ ದೊಡ್ಡ ಗಾತ್ರವಿದ್ದು, ಹೊಳಪಿರುವ ನೀಲಿಮಿಶ್ರಿತ ಕಪ್ಪು ಬಣ್ಣದ ದೇಹದ ಗರಿಗಳನ್ನು, ಕುತ್ತಿಗೆಯಲ್ಲಿ ಸ್ವಲ್ಪಕಂದು ಮಿಶ್ರಿತ ಕಪ್ಪು ಗರಿಗಳನ್ನು, ಕಪ್ಪು ಕಾಲುಗಳನ್ನು, ಅಲ್ಲಲ್ಲಿ ಕಿತ್ತಳೆ ಮಿಶ್ರಿತ ತಿಳಿ ಕಪ್ಪು ಬಣ್ಣದ ಕೊಕ್ಕನ್ನು ಹೊಂದಿರುತ್ತದೆ. ಕೊಕ್ಕು ಚೂಪಾಗಿ ಅಗಲವಿದ್ದು ಸ್ವಲ್ಪ ಬಾಗಿರುತ್ತದೆ. ಗರಗಸದಂತಿರುವ ಅಂಚುಗಳಿದ್ದು ಮೀನುಗಳು ಜಾರಿ ಹೋಗದಂತೆ ತಡೆಯುತ್ತದೆ. ಕುತ್ತಿಗೆಯ ಕೆಳಭಾಗದಲ್ಲಿ ಬಿಳಿ ಪುಕ್ಕಗಳಿರುತ್ತವೆ. ಬಾಲವು ಉದ್ದವಾಗಿದ್ದು, ನೇರವಾಗಿರುತ್ತದೆ. ಭಾರತದ ಎಲ್ಲಾ ನೀರಿನ ಪ್ರದೇಶಗಳಲ್ಲಿ ಕಂಡುಬರುತ್ತದೆ. ತಲೆಕೆಳಗು ಮಾಡಿ ಮುಳುಗಿ ಮೀನನ್ನು ಹಿಡಿಯುವುದರಲ್ಲಿ ನಿಪುಣನಾಗಿರುವ ಈ ಹಕ್ಕಿ, ಆಹಾರ ಸಿಗದಿದ್ದಾಗ ಆಗಾಗ್ಗೆ ನೀರಿನ ಮೇಲಕ್ಕೆ ಬಂದು ಕಾಣಿಸಿಕೊಳ್ಳುತ್ತದೆ.

ಬಿ. ಉದ್ದಕೊಕ್ಕಿನ ನೀರುಕಾಗೆ (Little Cormorant): ಇದು ಗಾತ್ರದಲ್ಲಿ ಪುಟ್ಟ ನೀರು ಕಾಗೆಗಿಂತ ತುಸು ದೊಡ್ಡದು.

ಎಲ್ಲಾ ಲಕ್ಷಣಗಳು ಪುಟ್ಟ ನೀರುಕಾಗೆಯಂತೆ ಇದ್ದರೂ, ಇದು ಎರಡು ಪ್ರಮುಖ ಲಕ್ಷಣಗಳನ್ನು ಹೊಂದಿದೆ. ಕಣ್ಣಿನ

ಹಿಂಭಾಗದಲ್ಲಿ ಪಟ್ಟೆಯಂತಿರುವ ಬಿಳಿಪುಕ್ಕ ಮತ್ತು ನೀಲಿ ಬಣ್ಣದ ಕಣ್ಣುಗಳು.

ಸಿ. ದೊಡ್ಡ ನೀರುಕಾಗೆ (Indian Cormorant) : ಇದು ಗಾತ್ರದಲ್ಲಿ ಕೋಳಿಗಿಂತ ದೊಡ್ಡದು. ಇದರ ಕೊಕ್ಕು ಉದ್ದವಾಗಿದ್ದದು, ಅಲ್ಲಲ್ಲಿ ಕಪ್ಪು ಮಿಶ್ರಿತ ಬಿಳಿ ಕೊಕ್ಕನ್ನು ಹೊಂದಿದೆ. ಕೊಕ್ಕಿನ ಬುಡ ಮತ್ತು ಕಣ್ಣಿನ ಕೆಳಭಾಗದಲ್ಲಿ ಹಳದಿ ಬಣ್ಣ ಹಾಗೂ ಹಾರುವಾಗ ರೆಕ್ಕೆಯ ಕೆಳಭಾಗದಲ್ಲಿ ಕಾಣುವ ಬಿಳಿ ಬಿಲ್ಲೆ ಇದರ ಪ್ರಮುಖ ಲಕ್ಷಣ. ಮರಿಗಳು ಬೆಳೆಯುವಾಗ ಕಣ್ಣಿನ ಬಳಿ ಇರುವ ಹಳದಿ ಬಣ್ಣ ಕಾಣುವುದಿಲ್ಲ. ಎದೆ, ಹೊಟ್ಟೆಯ ಗರಿಗಳು ಬಿಳಿ ಬಣ್ನದ್ದಾಗಿರುತ್ತವೆ. ಸಂತಾನೋತ್ಪತ್ತಿಯ ಕಾಲದಲ್ಲಿ ತಲೆಯ ನೆತ್ತಿಯ ಭಾಗ ಬಿಟ್ಟು ಉಳಿದ ಗರಿಗಳು ಉಂಗುರದಂತೆ ಬಿಳಿಬಣ್ಣವನ್ನು ಹೊಂದುತ್ತದೆ.

ಆಹಾರ: ಮೀನು. ನೀರಿನ ಒಳಗೆ ಮೀನನ್ನು ಹಿಡಿದರೂಅದು ಮೀನನ್ನು ನುಂಗುವುದು ನೀರಿನ ಮೇಲೆ ಬಂದಾಗಲೆ. ಕೆರೆ, ನದಿ ಅಥವಾ ಕಾಲುವೆಗಳಲ್ಲಿ ಬೇಟೆಆಡಿದ ನಂತರ ಮರಗಳ ರೆಂಬೆಗಳ ಮೇಲೆ ರಕ್ಕೆ ಬಿಚ್ಚಿ ಗರಿಗಳನ್ನು ಒಣಗಿಸಿಕೊಳ್ಳುತ್ತವೆ. ಸಂತಾನೋತ್ಪತ್ತಿ: ನೀರಿನ ಮದ್ಯಭಾಗದಅಥವಾ ಮರಗಳ ಮೇಲೆ ಗೂಡನ್ನು ನಿರ್ಮಿಸಿ ನಾಲ್ಕರಿಂದ ಐದು ತಿಳಿ ನೀಲಿ ಮಿಶ್ರಿತ ಮೊಟ್ಟೆಗಳನ್ನು ಇಡುತ್ತದೆ. ಸಾಮಾನ್ಯವಾಗಿ ಬಿಸಿಲಿನ ಝಳ ಹೆಚ್ಚಿರುವಾಗ ಈ ಹಕ್ಕಿಗಳು ನೀರನ್ನು ಕುಡಿದು ಗೂಡಿಗೆ ಮರಳಿ ಆ ನೀರನ್ನು ಗೂಡಿಗೆ. ಮರಿಗಳ ಮೈ ಮೇಲೆ ಸುರಿದು ತಂಪು ಮಾಡುತ್ತವೆ. ಮರಿಗಳಿಗೆ ಬಿಸಿಲಿನ ಶಾಖ ತಾಗದಂತೆ ರೆಕ್ಕೆಗಳನ್ನು ಬಿಚ್ಚಿ ನೆರಳನ್ನು ಕೊಡುತ್ತವೆ.

ಗಂಡು ಮತ್ತು ಹೆಣ್ಣು ಪಕ್ಷಿಗಳು ಮೀನನ್ನು ನುಂಗಿ, ತಕ್ಷಣ ಗೂಡಿಗೆ ಮರಳಿದಾಗ ಮರಿಗಳು ತಮ್ಮ ತಲೆಯನ್ನು ತಂದೆ ತಾಯಿಯ ಕುತ್ತಿಗೆಯ ಒಳಕ್ಕೆ ತೂರಿಸಿ ಮೀನನ್ನು ಪಡೆದುಕೊಳ್ಳುತ್ತವೆ.

2. ಗುಳುಮುಳುಕ (Greebs)

ಹೆಚ್ಚು ಕಡಿಮೆ ಪಾರಿವಾಳದ ಗಾತ್ರವಿರುವ ಇದು ತೆಳುವಾದ ಗಿಡ್ಡ ಬಾಲ ಹೊಂದಿರುವ, ಈಜುವ ಮತ್ತು ಮುಳುಗುವ ಪರಿಣಿತ ಜಲಪಕ್ಷಿ. ಕೆರೆ, ಸರೋವರ, ಕೊಳ, ನದಿ ಹಾಗೂ ಜಲಾಶಯದ ನಿಂತ ನೀರಿನ ಮೇಲೆ ಭಾರತದಾದ್ಯಂv ಕಂಡುಬರುತ್ತವೆ.  ಕೊಕ್ಕು, ದೇಹದ ಬಹು ಭಾಗ ಕಪ್ಪು ಮಿಶ್ರಿತ ತಿಳಿ ಕಂದು ಬಣ್ಣ ಹೊಂದಿದ್ದರೂ, ಕುತ್ತಿಗೆ ಭಾಗದಲ್ಲಿ ತಿಳಿ ಕಂದು ಬಣ್ಣ ಮಾತ್ರ ಇದೆ. ಬಿಳಿ ರೇಷ್ಮೆ ಬಣ್ಣದ ತಳಭಾಗದ ಗರಿಗಳು ಹಾರುವಾಗ ಮಾತ್ರ ಕಂಡುಬರುತ್ತವೆ.  ಎರಡು ಕೊಕ್ಕಿನ ಹಿಂಭಾಗದಲ್ಲಿ ತಿಳಿ ಹಸಿರು ಬಣ್ಣದ ಗುರುತುಇದ್ದು, ಸಂತಾನೋತ್ಪತ್ತಿಯ ಸಮಯದಲ್ಲಿ ತಲೆ ಮತ್ತು ಕುತ್ತಿಗೆ ಗರಿಗಳು ಗಾಢ ಕಂದು ಬಣ್ಣ ಹೊಂದುತ್ತವೆ. ಮುಸಿ ಮುಸಿ ನಗುವಂತಹ ಕೂಗು ಇದರ ವಿಶಿಷ್ಟತೆ. ತಮ್ಮ ತಮ್ಮಲ್ಲೇ ಆಟವಾಡುವಾಗ ಅರೆ ಬರೆಓಡುತ್ತಾ, ಹಾರುತ್ತಾ ನೀರಿನ ಮೇಲೆ ತಮ್ಮ ರೆಕ್ಕೆಗಳಿಂದ ನೀರಿಗೆ ಬಡಿಯುತ್ತಾ ಒಂದಕ್ಕೊಂದು ಅಟ್ಟಾಡಿಸಿಕೊಂಡು ಸುತ್ತಲೂ ಹಾರಾಡುತ್ತವೆ.

ಸ್ವಲ್ಪ ಅನುಮಾನ ಬಂದರೆ ತಟ್ಟನೆ ನೀರಿನಲ್ಲಿ ಮುಳುಗಿ ಒಂದಷ್ಟು ದೂರ ಹೋಗಿ ತಲೆ  ಎತ್ತುತ್ತದೆ.  ಇದು ಸಣ್ಣ ಪುಟ್ಟ ಜಲಚರಗಳನ್ನು ಬೇಟೆಯಾಡುವ ಕ್ರಮವೂ ಹೌದು. ಆಹಾರ: ಸಣ್ಣ ಮೀನು, ನೀರಿನ ಮೇಲೆ ಮತ್ತು ಒಳಗೆ ಇರುವ ಕೀಟಗಳು, ಮೃದ್ವಂಗಿಗಳು, ಹುಳು ಮತ್ತು ಗೊದಮೊಟ್ಟೆಗಳು.  ಏಪ್ರಿಲ್- ಅಕ್ಟೋಬರ್ ಅವಧಿಯಲ್ಲಿ ನೀರಿನ ಮೇಲೆ ತೇಲುವ ಜಲಸಸ್ಯ, ತೇಲುವ ಕಸದ ಗುಡ್ಡೆ ಅಥವಾ ಮುರುಕಲು ಗುಪ್ಪೆಯ ಮೇಲೆ ಸಮತಟ್ಟಾದ ಗೂಡು ನಿರ್ಮಿಸುತ್ತವೆ. ಇಟ್ಟ ಮೇಲೆ ಕಂದು ಬಣ್ಣಕ್ಕೆ ತಿರುಗುವ 3-5 ಬಿಳಿ ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ.

3. ಹೆಜ್ಜಾರ್ಲೆ (Spot Billed Pelican)

ಹದ್ದಿಗಿಂತ ದೊಡ್ಡದಾದ ಈ ಹಕ್ಕಿ ನಮ್ಮ ದೇಶದ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದೆ. ಕರ್ನಾಟಕ ಮತ್ತು ತಮಿಳುನಾಡಿನ ದಕ್ಷಿಣ ಭಾಗ, ಆಂದ್ರ ಪ್ರದೇಶ ಮತ್ತು ಒಡಿಶಾದ ಪೂರ್ವ ಪ್ರದೇಶಗಳು ಮತ್ತು ಇನ್ನಿತರ ಆಯ್ದ ಜಾಗಗಳಲ್ಲಿ ಕಂಡುಬರುತ್ತದೆ. ನೀಳವಾದ ಕೊಕ್ಕು, ಅದರ ಮೇಲೆ ತಿಳಿ ನೀಲಿ ಬಣ್ಣದ ಚುಕ್ಕೆ, ಕೊಕ್ಕಿನ ತುದಿಯಲ್ಲಿ ಹಳದಿ ಬಣ್ಣದ ಚುಕ್ಕೆ ಇದೆ. ಕೆಳಕೊಕ್ಕು ಮುಚ್ಚಿದಾಗ ಸಣ್ಣ ಕೋಲಿನಂತೆ ಇದ್ದು, ತೆರೆದಾಗ ಜೋಳಿಗೆಯಂತೆ ಅಗಲವಾಗುತ್ತದೆ. ತಲೆ ಮತ್ತು ಕುತ್ತಿಗೆ ಉದ್ದಕ್ಕೂ ಬಿಳಿ ಮತ್ತು ಕಪ್ಪನೆಯ ಚಿಕ್ಕ-ಚಿಕ್ಕ ಪುಕ್ಕಗಳಿವೆ. ತಲೆಯ ಮೇಲ್ಭಾಗದಲ್ಲಿ ಗರಿಗಳಿಂದಾದ ಸಣ್ಣ ಜುಟ್ಟು ಕಂಡುಬರುತ್ತದೆ. ನೀರಿನಲ್ಲಿ ಈಜುವಾಗ ಎರಡು ರಕ್ಕೆಗಳ ನಡುವೆ ಹಳ್ಳದಂತಹ ರಚನೆ ಮೂಡುತ್ತದೆ. ದೇಹದ ಮೇಲೆ ಬೂದುಮಿಶ್ರಿತ ಬಿಳಿ ಬಣ್ಣದ ಗರಿಗಳಿವೆ. ಕಾಲು ಚಿಕ್ಕದಾಗಿದ್ದು, ಜಾಲಪಾದವನ್ನು ಹೊಂದಿದ್ದು ಈಜಲು ಸೂಕ್ತವಾಗಿವೆ. ಮೀನು ಹಿಡಿಯುವಾಗ ತಲೆ, ಕುತ್ತಿಗೆ ಮತ್ತು ಅರ್ಧ ಶರೀರವನ್ನು ಮುಳುಗಿಸಿದಾಗ ಕಾಲು ನೀರಿನ ಮೇಲಕ್ಕೆ ಬಂದಂತೆ ಕಾಣುತ್ತವೆ.

ಹಾರುವಾಗ ಕುತ್ತಿಗೆಯನ್ನು ಮಡಚಿಕೊಂಡು ಹಾರುತ್ತದೆ. ರೆಕ್ಕೆಯ ಅಂಚು ಮತ್ತು ಗರಿಗಳ ತುದಿಗಳು ಕಪ್ಪಗಿದ್ದು ಕೆಳಭಾಗದಲ್ಲಿರುವ ಕಂದು ಬಣ್ಣ ಹಾರುವಾಗ ಮಾತ್ರ ಕಂಡುಬರುತ್ತದೆ. ಸಂತಾನೋತ್ಪತ್ತಿಅವಧಿ, ನವೆಂಬರ್- ಏಪ್ರಿಲ್‍ನವರೆಗೆ ನೀರಿಗೆ ಸಮೀಪ ಮದ್ಯಮ ಎತ್ತರದ ಮರಗಳ ಮೇಲೆ, ಈಚಲು, ತಾಳೆ ಮರಗಳ ಮೇಲೆ ಗೂಡು ನಿರ್ಮಿಸಿ 3 ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತವೆ.

ಪುಟ್ಟ ನೀರು ಕಾಗೆ

ಉದ್ದ ಕೊಕ್ಕಿನ ನೀರು ಕಾಗೆ 

ದೊಡ್ಡ ನೀರು ಕಾಗೆ 


ದೊಡ್ಡ ನೀರು ಕಾಗೆ


ಗುಳು ಮುಳುಕ ಸಂತಾನೋತ್ಪತ್ತಿ ಕಾಲದಲ್ಲಿ 

ಗುಳು ಮುಳುಕ


ಹೆಜ್ಜಾರ್ಲೆ


21 comments:

  1. ಪಕ್ಷಿಗಳ ಪರಿಚಯ ಚೆನ್ನಾಗಿದೆ sir

    ReplyDelete
  2. ಬಾಲ್ಯದಲ್ಲಿ ಗೆಳೆಯರೊಂದಿಗೆ ಕೆರೆಯ ದಂಡೆಯಲ್ಲಿ ವಿಹರಿಸುತ್ತಾ,ಗುಳುಮುಳಕ ಹಕ್ಕಿಗಳು ನೀರಿನಲ್ಲಿ ಮುಳುಗಿ,ಏಳುವುದನ್ನು ನೋಡುತ್ತಾ,"ಗುಳುಮುಳಕ-ಗುಳಮುಳಕ ಮುಳುಗು-ಮುಳುಗು"ಎಂದು ಕೋರಸ್ ಹಾಡುತ್ತಿದ್ದು ನೆನಪಾಯಿತು...ಸುಂದರ ನಿರೂಪಣೆ.ತಮ್ಮ ಪಕ್ಷಿಯಾನ ಹೀಗೆ ಮುಂದುವರೆಯಲಿ

    ReplyDelete
    Replies
    1. ತಮಗೆ ತುಂಬು ಹೃದಯದ ಧನ್ಯವಾದಗಳು ಸರ್

      Delete
  3. ಕೃಷ್ಣ, ನಿಮ್ಮ ಚಿತ್ರ-ಲೇಖನಗಳು ಎಲ್ಲ ಓದುಗರಿಗೂ, ಅದರಲ್ಲೂ ವಿದ್ಯಾರ್ಥಿಗಳಿಗೆ, ತುಂಬಾ ಚೇತೋಹಾರಿಯಾಗಿವೆ.ದಯವಿಟ್ಟು ಮುಂದುವರೆಸಿ! ಅಭಿನಂದನೆಗಳು!

    ReplyDelete
    Replies
    1. ಧನ್ಯವಾದಗಳು ಸರ್. ಪಕ್ಷಿಗಳ ಬಗ್ಗೆ ಹೆಚ್ಚಿನ ಗಮನ, ಅಧ್ಯಯನಕ್ಕೆ ಅದ್ದಿದವರು ಶ್ರೀ ಕೆ.ಎಂ ಚಿಣ್ಣಪ್ಪ ನವರ ನೇಚರ್ ಕ್ಯಾಂಪ್. ರಾಜ್ ಕುಮಾರ್ ಮತ್ತು ನೀವು ಮಾರ್ಗದರ್ಶನ ನೀಡಿದ್ದೀರಿ. ನಿಮ್ಮೆಲ್ಲರ ಸಹಕಾರಕ್ಕೆ ನಾನು ಚಿರಋಣಿ.

      Delete
  4. ನೀರು ಕಾಗೆಗಳ ಬಗ್ಗೆ ಉತ್ತಮ ಮಾಹಿತಿ ಕೊಟ್ಟಿದ್ದೀರಿ..ಇಷ್ಟೊಂದು ಬಗೆಯ ನೀರು ಕಾಗೆಗಳು ಇವೆ ಅನ್ನೋದು ಇವತ್ತೇ ಗೊತ್ತಾಗಿದ್ದು..ಧನ್ಯವಾದಗಳು ಸರ್..😊🙏

    ReplyDelete
  5. Dear krishna, useful information, go ahead.

    ReplyDelete
  6. V.good information sir. Big salute to your efforts sir. Keep doing

    ReplyDelete
  7. Very good information.
    All the best 👍

    ReplyDelete
  8. Good information about bird crow... Thank u sir for u good information 👍👍

    ReplyDelete
  9. ಸರ್...ಮಾಹಿತಿಗಳು ತುಂಬ ಚೆನ್ನಾಗಿದೆ.ಮಾಹಿತಿಯ ಪಕ್ಕದಲ್ಲಿಯೇ ಪಕ್ಷಿಯ ಚಿತ್ರ ಇದ್ದರೆ ಇನ್ನೂ ಸುಂದರ ಆಗಿರುತ್ತಿತ್ತು....good going sir....

    ReplyDelete
    Replies
    1. Publish ಆಗುವಾಗ ಸ್ವಲ್ಪ ವ್ಯತ್ಯಾಸ ಆಗಿದೆ ಮೇಡಂ.ಧನ್ಯವಾದಗಳು

      Delete
  10. ಸರ್... ನೀರು ಕಾಗೆಗಳ ಬಗ್ಗೆ ಉತ್ತಮವಾದ ಮಾಹಿತಿ ನೀಡಿದ್ದೀರಿ. ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಮತ್ತು ಪ್ರತಿ ಶಾಲೆಗಳಲ್ಲೂ ನಿಮ್ಮಂಥ ವಿಜ್ಞಾನ ಶಿಕ್ಷಕರಿದ್ದರೆ ಮಕ್ಕಳಿಗೆ ಭಾಗ್ಯ💐

    ReplyDelete
  11. ಒಳ್ಳೆಯ ಮಾಹಿತಿ. ನಮ್ಮ ದೇಶದ ಪ್ರತಿ ವಿಜ್ಞಾನ ಶಿಕ್ಷಕರಿಗೆ ಪ್ರಾಯೋಗಿಕ ಭೋಧನಾ ವಿಧಾನವನ್ನು ಅನುಸರಿಸಿದರೆ ದೇಶದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಜ್ಞಾನ ಮೂಡುತ್ತದೆ.

    ReplyDelete