Tuesday, January 4, 2022

ಕೈಗೊಂಬೆಗಳು ಅಥವಾ ಕೈಗವಸು ಗೊಂಬೆಗಳು

ಕೈಗೊಂಬೆಗಳು ಅಥವಾ ಕೈಗವಸು ಗೊಂಬೆಗಳು

ಸಿದ್ದು ಬಿರಾದಾರ, ವಿಜ್ಞಾನ ಶಿಕ್ಷಕ

ಸರಕಾರಿ ಪ್ರೌಢ ಶಾಲೆ ಚಿಬ್ಬಲಗೇರಿ

ತಾ: ಹಳಿಯಾಳ, ಶಿರಿಸಿ ಶೈಕ್ಷಣಿಕ ಜಿಲ್ಲೆ

ಉತ್ತರ ಕನ್ನಡ 

ಕಳೆದ ಕೆಲವು ಸಂಚಿಕೆಗಳಿಂದ ವಿಜ್ಞಾನ ಪಾಠಗಳ ಬೋಧನೆಯಲ್ಲಿ ಗೊಂಬೆಗಳನ್ನು ಬಳಸುವುದಕ್ಕೆ ಸಂಬಂಧಿಸಿದಂತೆ ಹಾಗೂ ಗೊಂಬೆಗಳನ್ನು ತಯಾರಿಸುವ ವಿಧಾನದ ಬಗ್ಗೆ ಲೇಖನಗಳನ್ನು ಓದುತ್ತಿದ್ದೀರಿ. ಈ ಬಾರಿ ಸಿದ್ದು ಬಿರಾದಾರ್ ಅವರು ಕೈಗವಸು ಗೊಂಬೆಗಳನ್ನು ತಯಾರಿಸುವ  ವಿಧಾನದ ಬಗ್ಗೆ ವಿವರಿಸಿದ್ದಾರೆ.

ಕೈಗೊಂಬೆಗಳು ವಿಶೇಷವಾದ ಗೊಂಬೆಗಳಾಗಿವೆ. ಇವುಗಳನ್ನು ಕೈಗೆ ಪೂರ್ಣವಾಗಿ ಹಾಕಿಕೊಂಡು ತೋರು ಬೆರಳನ್ನು ಮುಖದ ಭಾಗಕ್ಕೆ. ಮಧ್ಯದ ಬೆರಳನ್ನು ಬಲಗೈಗೆ, ಹೆಬ್ಬೆರಳನ್ನು ಎಡಗೈಯಿಂದ ಚಲನವಲನಗೊಳಿಸಬೇಕು. ತೋರುಬೆರಳನ್ನು ಅಲುಗಾಡಿಸಿದರೆ ಮುಖ ಅಲುಗಾಡಿದಂತೆ ಕಾಣುತ್ತದೆ. ಮಧ್ಯದಬೆರಳು ಮತ್ತು ಹೆಬ್ಬೆರಳು ಅಲುಗಾಡಿಸದರೆ ಕೈ ಅಲುಗಾಡಿದಂತೆ ಕಾಣುತ್ತದೆ. ಸಂದರ್ಭಕ್ಕನುಗುಣವಾಗಿ ಗೊಂಬೆಗಳಿಗೆ ಬಟ್ಟೆಯನ್ನು ಹಾಕಿ ಗೊಂಬೆಯನ್ನು ಸಿದ್ಧಪಡಿಸಬಹುದು. 

ಈ ಗೊಂಬೆಯನ್ನು ವಿವಿಧ ಕಡೆ, ವಿವಿಧ ರೀತಿಯಾಗಿ ತಯಾರಿಸುತ್ತಾರೆ. ಮುಖ್ಯವಾಗಿ ಪೇಪರ ಪಲ್ಪ್ನಿಂದ ತಯಾರಿಸುತ್ತಾರೆ, ಸ್ಪಂಜಿನನಿಂದ ತಯಾರಿಸುತ್ತಾರೆ, ಇಲ್ಲವೇ ಹತ್ತಿಯಿಂದ ತಯಾರಿಸುತ್ತಾರೆ, ಫೋಮ್ ಶೀಟ್‌£ಂದ, ಸಾಕ್ಸ್ಗಳಿಂದ ಮತ್ತು ಬಟ್ಟೆಯಿಂದಲೂ ಕೂಡಾ ಬೇರೆ ವಸ್ತುಗಳನ್ನು ಬಳಸಿ ತಯಾರಿಸಬಹುದು.

ಪೇಪರ್ ಪಲ್ಪನಿಂದ ಕೈಗೊಂಬೆ ತಯಾರಿಸುವ ವಿಧಾನ

ಬೇಕಾದ ಸಾಮಗ್ರಿಗಳು: ಪೇಪರ್ ಪಲ್ಪ್, ವೃತ್ತಪತ್ರಿಕೆ,  ಸೂಜಿ, ದಾರ, ಕಾರ್ಡಶೀಟ್, ಅಂಟು, ಅವಶ್ಯಕ ಬಣ್ಣ,  ಪಾಲಿಷ್ ಪೇಪರ್. ಬಣ್ಣದ ಬಟ್ಟೆ , ಅಲಂಕಾರಿಕ ವಸ್ತುಗಳು

ಪೇಪರ್ ಪಲ್ಪ್ ತಯಾರಿಸುವ ವಿಧಾನ

ಬೇಕಾದ ಸಾಮಗ್ರಿ : ಹಳೆಯ ವೃತ್ತಪತ್ರಿಕೆ ೧/೨ ಕಿ.ಗ್ರಾಂ. (ಸಾದಾ ಪೇಪರ್) ಮೆಂತೆ ಬೀಜ೨೫೦ ಗ್ರಾಂ, ನೀರು

ಪೇಪರ್ ಪಲ್ಪ್ ವಿಧಾನ : ಹಳೆ ಪೇಪರಗಳನ್ನು ಸಣ್ಣಚೂರುಗಳನ್ನಾಗಿ ಮಾಡಿ ನೀರಿನಲ್ಲಿ ನಾಲ್ಕರಿಂದ ಆರು ಗಂಟೆಗಳ ಕಾಲ ನೆನೆಯಿಸಬೇಕು. ಮೆಂತೆಯನ್ನು ಬೀಸಿ ಪುಡಿಮಾಡಬೇಕು. ಪೇಪರ್ ನೆನೆದ ನಂತರ ಅದನ್ನು ರುಬ್ಬುವ ಕಲ್ಲಿನಲ್ಲಿ ಹಾಕಿ ರುಬ್ಬಬೇಕು. ಹುಡಿಮಾಡಿದ ಮೆಂತೆ ಹಿಟ್ಟನ್ನು ಸೇರಿಸುತ್ತಾ ಕಲಸಿ, ಅದರ ಜೊತೆಗೆ ರುಬ್ಬಬೇಕು. ರುಬ್ಬುತ್ತಾ ಹೋದಂತೆ ಪೇಸ್ಟ್ ತಯಾರಾಗುವದು. ಅದಕ್ಕೆ ಪೇಪರ್ ಪಲ್ಪ್ ಎನ್ನುವರು.

(ಸೂಚನೆ: ಪೇಪರ ಬದಲಿಗೆ ಕಟ್ಟಿಗೆ ಪುಡಿ ಮತ್ತು ಪೆವಿಕಾಲ್‌ನ್ನು ಕೂಡಿಸಿ ಕೂಡಾ ಮಾಡಬಹುದು)

ಮಾಡುವ ವಿಧಾನ : ಮೊದಲು ೫.ಸೆ.ಮೀ. ಅಗಲ ೧೫.ಸೆ.ಮೀ. ಉದ್ದವಿರುವ ಆಯತಾಕಾರದ ಕಾರ್ಡಶೀಟನ್ನು ತೆಗೆದುಕೊಂಡು ತೋರುಬೆರಳಿಗೆ ಗಾತ್ರದಷ್ಟು ಸುತ್ತಬೇಕು. ಮಧ್ಯದಲ್ಲಿ ತೋರುಬೆರಳು ಸೇರಿಸುವಷ್ಟು ರೋಲ್ ಮಾಡಬೇಕು. ರೋಲಿನ ಕೊನೆಯಲ್ಲಿ ಅಂಟನ್ನು ಹಚ್ಚಿಡಬೇಕು. ನಂತರ, ಅದರ ಒಂದು ಬದಿಗೆ ಪೇಪರನ್ನು ಸುತ್ತಬೇಕು. ವೃತ್ತಾಕಾರವಾಗಿ ಚೆಂಡಿನ ರೀತಿಯಲ್ಲಿ ತುಂಬಿರಬೇಕು. ನಂತರ, ಅದರ ಮೇಲೆ ಪೇಪರ್ ಪಲ್ಪಿನಿಂದ ಸುತ್ತಲೂ ಹಚ್ಚಿ ಅದರ ಮೇಲೆ ಮುಖದ ರೂಪವನ್ನು ತರಬೇಕು. ಹಣೆ, ಕಣ್ಣು, ಕಿವಿ, ಮೂಗು, ಕೆನ್ನೆ, ಬಾಯಿಯನ್ನು ತಿದ್ದಿ ಒಂದು ಆಕೃತಿಯಲ್ಲಿ ತರಬೇಕು. ಇದೇ ರೀತಿಯಾಗಿ, ಪ್ರಾಣಿಗಳ ಮುಖಗಳನ್ನು ತಯಾರಿಸುವಾಗ ಆ ಪ್ರಾಣಿಯ ಮುಖಗಳಿಗೆ ಸಂಬಂಧಿಸಿದಂತೆ ಅಂದರೆ, ಆನೆಯ ಮುಖವನ್ನು ಮಾಡುವಾಗ ಸೊಂಡಿಲು ಮತ್ತು ಕಿವಿ, ಎತ್ತು ಹಾಗೂ ಹಸುವನ್ನು ಮಾಡುವಾಗ ಕೊಂಬುಗಳನ್ನು ಮಾಡುವುದು, ಕುದುರೆಯನ್ನು, ಮೊಲ, ತೋಳಗಳನ್ನು ಮಾಡುವಾಗ ಅವುಗಳ ಕಿವಿಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟು ಸಂದರ್ಭಕ್ಕನುಗುಣವಾಗಿ ಪೇಪರ್‌ಪಲ್ಪನ್ನು ಬಳಸಿ ಮುಖಗಳನ್ನು ತಯಾರಿಸಬೇಕು.

ಪಕ್ಷಿಗಳ ಮುಖವನ್ನು ತಯಾರಿಸುವಾಗ ಅವುಗಳ ಚುಂಚುಗಳಿಗೆ ಹೆಚ್ಚಿನ ಮಹತ್ವವನ್ನು ಕೊಡುವುದು. ಗಿಳಿಯ, ನವಿಲಿನ, ಕೋಳಿಯ, ಹಂಸದ ಹಾಗೆ ಬೇರೆ ಪಕ್ಷಿಗಳ ಚುಂಚವು ವಿಶೇಷವಾಗಿರುತ್ತದೆ. ಸಂದರ್ಭಕ್ಕನುಗುಣವಾಗಿ ಪಕ್ಷಿಗಳ ಮುಖಗಳನ್ನು ತಯಾರಿಸಬೇಕು. ಹೀಗೆ ತಯಾರಿಸುವ ಎಲ್ಲ ಮುಖಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು. ಸುಮಾರು ೪ ರಿಂದ ೬ ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಬೇಕು. ಅವುಗಳು ಪೂರ್ಣವಾಗಿ ಒಣಗಿದ ನಂತರ ಅದಕ್ಕೆ ಪಾಲಿಷ್ ಪೇಪರ್‌ ಇಂದ ತಿಕ್ಕಬೇಕು. ಕೆಲವೊಮ್ಮೆ ಮುಖದ ಅಂಗಾಂಗಗಳು ಹೆಚ್ಚು ಕಡಿಮೆಯಾಗಿ ಮುಖದ ಅಂದ ಕೆಡುವ ಸಾಧ್ಯತೆ ಇರುತ್ತದೆ. ಅದನ್ನು ಸಂದರ್ಭಕ್ಕನುಗುಣವಾಗಿ ಪಾಲಿಷ್ ಪೇಪರ್‌ನಿಂದ ತಿಕ್ಕಿ ಮುಖವನ್ನು ನುಣ್ಣಗೆ (ಸ್ಮೂತ್) ಮಾಡಿರಬೇಕು. ಮುಖಗಳು ಆದ ನಂತರ, ಆ ಮುಖದೊಳಗಿನ ಪೇಪರನ್ನು ಹೊರತೆಗೆಯಬೇಕು. ಹೇಗೆಂದರೆ ಆ ಮುಖದ ಕೆಳಭಾಗದಿಂದ ಅಥವಾ ಹಿಂದಿನ ಭಾಗದಲ್ಲಿ ಒಂದು ಸಣ್ಣ ರಂಧ್ರವನ್ನು ಹಾಕಿ ಒಳಗಿರುವ ದಾರವನ್ನು ಹಾಗೂ ಪೇಪರನ್ನು ಹೊರಗೆ ತೆಗೆಯಬೇಕು. ನಂತರ ಅದು ತುಂಬಾ ಹಗುರವಾದ ವಸ್ತು ಆಗುತ್ತದೆ.

ತಯಾರಾದ ಮುಖದ ಗೊಂಬೆಗಳಿಗೆ ಬಣ್ಣವನ್ನು ಹಚ್ಚಬೇಕು. ಮೊದಲು ಅದಕ್ಕೆ ಪ್ರೈಮರ್ ಬಿಳಿ ಬಣ್ಣದ ಪ್ರೈಮರನ್ನು ಹಚ್ಚಿ ಒಣಗಿದ ನಂತರ ಅದರ ಮೇಲೆ ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಒಪ್ಪುವ ಹಾಗೆ ಬಣ್ಣವನ್ನು ಹಚ್ಚಬೇಕು. ಈಗ ಗೊಂಬೆಯ ಮುಖಗಳು ಸಿದ್ದವಾಗಿದೆ. ನಂತರ, ಅದಕ್ಕೆ ಬಟ್ಟೆಯನ್ನು ಹೊಲಿಯಬೇಕು. ಇದನ್ನು ಕೈಯಿಂದಲೂ ಕೂಡಾ ಹೊಲಿಯಬಹುದು.

ಗೊಂಬೆಗಳಿಗೆ ಬಟ್ಟೆ ತೊಡಿಸುವುದು

ಬೇಕಾದ ಸಾಮಗ್ರಿಗಳು: ಸೂಜಿ, ದಾರ, ಅಲಂಕಾರಿಕ ವಸ್ತುಗಳು, ಲೇಸ್, ಬಣ್ಣದ ಬಟ್ಟೆ.

ವಿಧಾನ: ಬಣ್ಣದ ಬಟ್ಟೆಗಳಿಂದ ೩೫ ಸೆಂ.ಮೀ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಆಯಾತಾಕಾರವಾಗಿ ಮಾಡಬೇಕು. ನಂತರ ಚಿತ್ರದಲ್ಲಿ ತೋರಿಸಿದಂತೆ ಕತ್ತರಿಸಿ.

ಈ ರೀತಿಯಾದ ವಿನ್ಯಾಸ ಸಿಕ್ಕ ನಂತರ ಅದನ್ನು ಸೂಜಿ ದಾರದಿಂದ ಹೊಲಿಯಬೇಕು. ನಂತರ ಆ ಬಟ್ಟೆಯ ಮೇಲೆ ಅಲಂಕಾರಿಕ ಲೇಸನ್ನು ಹಚ್ಚಬೇಕು ಹಾಗೂ ಪ್ರಾಣಿ, ಪಕ್ಷಿ, ಮನುಷ್ಯ, ಹೆಣ್ಣು, ಗಂಡು ಗೊಂಬೆಗಳಿಗೆ ಸಂಬಂಧಿಸಿದಂತೆ ಮೇಲಿನ ಬಟ್ಟೆಯನ್ನು ಹಾಕಬೇಕು.

ಈ ರೀತಿಯಾದ ಬಟ್ಟೆ ತಯಾರಾದ ಮೇಲೆ ಗೊಂಬೆಗಳ ಮುಖದ ಕೆಳಗಿನ ಭಾಗಗಳಿಗೆ ಕಟ್ಟಬೇಕು. ಚಿತ್ರದಲ್ಲಿ ತೋರಿಸಿದಂತೆ ಗೊಂಬೆಯು ಸಿದ್ಧವಾಗುವುದು. ಈ ಗೊಂಬೆಯ ಮೂಲಕ ಅನೇಕ ಗೊಂಬೆಯಾಟಗಳನ್ನು ಮಾಡಬಹುದು.

********


























ಕೈಗವಸು ಗೊಂಬೆಯ ವಿಡಿಯೋಗಾಗಿ ಕೆಳಗಿನ ಲಿಂಕನ್ನು ಬಳಸಿ

https://youtu.be/zpwN3sRGBSA 

ಸಾಹಿತ್ಯಕ್ಕಾಗಿ ಕೆಳಗಿನ ಲಿಂಕನ್ನು ಬಳಸಿಕೊಳ್ಳಬಹುದು

https://drive.google.com/file/d/1g_8giwcUJhJCCQsax2Fx7usjxNaXnceW/view?usp=sharing

4 comments:

  1. ಸೊಗಸಾಗಿದೆ ಗೆಳೆಯ‌ ಮಾಹಿತಿ

    ReplyDelete
  2. ಸರ್,ನಮಸ್ಕಾರ ಕಲೆ ಇದ್ದ ಮಾನವ
    ಚಿನ್ನದ ಶಿಲೆ.ನಿಮ್ಮ ಈ ಕಲೆ ಬೆಳಗಲಿ
    ಮತ್ತೂ ಬೆಳೆಯಲಿ.

    ReplyDelete
  3. ಉಪಯುಕ್ತ ಮಾಹಿತಿಗಳನ್ನು ನೀಡಿದ್ದಾರೆ. ಶಿಕ್ಷಕರು ತಾವಾಗಿಯೇ ಸಿದ್ಧಪಡಿಸಬಹುದಾದ ಮಾದರಿಗಳಿವೆ

    ReplyDelete