Friday, March 4, 2022

ಸದ್ದು ಕೇಳೀತು ಯಾಕೆ?. . . ಜೋಕೆ

ಸದ್ದು ಕೇಳೀತು ಯಾಕೆ?. . . ಜೋಕೆ 


ಲೇಖನ: ರೋಹಿತ್ ವಿ ಸಾಗರ್
ಪ್ರಾಂಶುಪಾಲರು,
ಹೊಂಗಿರಣ ಸ್ವತಂತ್ರ ಪದವಿಪೂರ್ವ ಕಾಲೇಜು
ಸಾಗರ


ಖುಶಿ ಕೊಡುವ ಕೊನೆಯ ಬೆಲ್ ಇಂದ ಪ್ರಾರಂಭಿಸಿ ವಿವಿಧೆಡೆ, ವಿವಿಧ ಸಂದರ್ಭಗಳಲ್ಲಿ ನಮಗೆ ಕೇಳಿಸುವ ವಿವಿಧ ಬಗೆಯ ಶಬ್ದಗಳ ಹಿಂದಿರುವ ವಿಜ್ಞಾನವನ್ನು ಸರಳವಾಗಿ, ಸೊಗಸಾಗಿ ವಿವರಿಸುವ ಈ ಲೇಖನವನ್ನು ಬರೆದವರು 'ಸವಿಜ್ಞಾನ' ತಂಡದ ಸಂಪಾದಕರೂ, ವೃತ್ತಿಯಿಂದ ಭೌತಶಾಸ್ತ್ರದ ಉಪನ್ಯಾಸಕರೂ ಆದ ರೋಹಿತ್ ಸಾಗರ್  ಅವರು. 

ಸ್ವಲ್ಪ ಹಳೇ ಕಾಲದ ಶಾಲೆಗಳನ್ನು ನೆನಪಿಸಿಕೊಂಡರೆ ನಮಗೆ ಮೊದಲು ನೆನಪಾಗುವುದು, ಅಂದು ಪಾಠ ಮಾಡಿದ ವಿಜ್ಞಾನದ ಮಾಸ್ತರೋ ಅಥವಾ ಒಟ್ಟಿಗೆ ಜೂಟಾಟ ಆಡಿದ ಮುದ್ದಿನ ಗೆಳೆಯರೋ ಎಂದು ಕೇಳಿದರೆ ಹೆಚ್ಚಿನವರು ಹೇಳುವ ಉತ್ತರ ಒಂದೇ! ಅವೆರಡೂ ಅಲ್ಲ, ನೆನಪಾಗುವುದು ಸಂಜೆ 4.30ಕ್ಕೆ ಸರಿಯಾಗಿ "ಠಣ್' ಎಂದು ಶಬ್ಧ ಮಾಡುತ್ತಿದ್ದ, ಶಾಲೆಯ ಎದುರಿಗೆ ನೇತು ಹಾಕಿದ ಆ ಬೆಲ್ಲು ಎಂದು. ಆ ಶಬ್ಧ ಅಂದು ಕೊಡುತ್ತಿದ್ದ ಅಪೂರ್ವ ಸಂತಸ ಯಾರಿಗೂ ಮರೆಯಲಿಕ್ಕಾಗದು ಎಂದರೆ ತಪ್ಪಾಗಲಿಕ್ಕಿಲ್ಲ. ಆ ಶಬ್ಧದ ಹಿಂದಿರುವ ವಿಜ್ಞಾನವೂ ಅಷ್ಟೇ ಸಂತಸ ನೀಡಬಲ್ಲದ್ದಾಗಿದೆ. ಈಗ ಊಹಿಸಿಕೊಳ್ಳಿ ಒಬ್ಬರು ಆ ಕಬ್ಬಿಣದ ತುಂಡಿಗೆ ಒಂದು ಕಬ್ಬಿಣದ ಸರಳಿನಿಂದ ಬಾರಿಸಿದ್ದಾರೆ, ಅದೇ ಸಮಯದಲ್ಲಿ ನೀವು ಆ ಕಬ್ಬಿಣದ ತುಂಡನ್ನು ಬಿಗಿಯಾಗಿ ಹಿಡಿದಿದದ್ದೀರಿ ಎಂದು, ಆಗ ಉಂಟಾಗುವ ಶಬ್ಧಕ್ಕೂ, ಅದೇ ಕಬ್ಬಿಣದ ತುಂಡಿಗೆ ಅದೇ ಸರಳಿನಿಂದ ಅಷ್ಟೇ ಬಲದೊಂದಿಗೆ ನಿಮ್ಮ ಅನುಪಸ್ಥಿತಿಯಲ್ಲಿ ಬಾರಿಸಿದರೆ ಉಂಟಾಗುವ ಶಬ್ಧಕ್ಕೂ ಎನಾದರೂ ವ್ಯತ್ಯಾಸ ಇರಬಹುದೇ?

ಹೌದು, ಮೊದಲ ರೀತಿಯಲ್ಲಿ ಉಂಟಾಗುವ ಶಬ್ಧ ನೀನು ಹಿಡಿತ ಬಲವಾದ ಕೂಡಲೇ ನಿಂತು ಬಿಡುತ್ತದೆ. 'ಠಣ್' ಎಂದು, ಎರಡನೇ ರೀತಿಯಲ್ಲಿ "ಠಣ್ಣ್ಣ್ಣ್' ಎಂದು ಶಬ್ಧ ಉಂಟಾಗುತ್ತಲೇ ಇರುತ್ತದೆ. ಇದಕ್ಕೆ ಕಾರಣ ಇಷ್ಟೇ, ಯಾವುದೇ ವಸ್ತು ಕಂಪಿಸಿದಾಗ ಶಬ್ಧ ಉತ್ಪತ್ತಿಯಾಗುತ್ತದೆ. ಸರಳಿನಿಂದ ಕಬ್ಬಿಣದ ತುಂಡಿಗೆ ಹೊಡೆದಾಗ ಆ ತುಂಡು ಕಂಪಿಸತೊಡಗುತ್ತದೆ. ಅದೇ ಶಬ್ಧದ ರೂಪದಲ್ಲಿ ನಮಗೆ ಕೇಳುತ್ತದೆ. ಕಂಪನ ಕಡಿಮೆಯಾಗುತ್ತಾ ಹೋದಂತೆ ಶಬ್ಧವೂ ಕಡಿಮೆಯಾಗ ತೊಡಗುತ್ತದೆ. ಯಾವಾಗ ನೀವು ಕಬ್ಬಿಣದ ತುಂಡನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತೀರೋ ಆಗ ಅದಕ್ಕೆ ಕಂಪಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಯಾವುದೇ ರೀತ್ಯ ಶಬ್ಧವೂ ಉಂಟಾಗುವುದಿಲ್ಲ. ಅಂದರೆ ಇದರರ್ಥ ಎಲ್ಲಿ ಕಂಪನವಿರುತ್ತದೋ ಅಲ್ಲಿ ಶಬ್ಧವಿರುತ್ತದೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ, 'ಶಬ್ಧ' ಎನ್ನುವುದು 'ಕಂಪನ' ಎನ್ನುವುದರ ಇನ್ನೊಂದು ಹೆಸರು.

ಶಬ್ಧ ನಮಗೆ ಕೇಳಿಸುವ ಪ್ರಕ್ರಿಯೆಯೇ ತುಂಬಾ ವಿಶಿಷ್ಟವಾಗಿರುವಂತಹುದು. ತೀರಾ ಸರಳವಾಗಿಯೂ ಅದನ್ನು ಅರ್ಥಮಾಡಿಕೊಳ್ಳಬಹುದು. ಒಂದು ತೆಳುವಾದ ಕಬ್ಬಿಣದ ಪಟ್ಟಿಯೊಂದನ್ನು ತೆಗೆದುಕೊಂಡು ಅದನ್ನು ಯಾವುದಾದರೂ ಗಟ್ಟಿಯಾದ ವಸ್ತುವಿಗೆ ತಾಡಿಸಿ ನೋಡಿ, ಆಗ ತಾಡಿಸಿದ ಭಾಗದಲ್ಲಿ ಆ ಪಟ್ಟಿ ಕಂಪಿಸತೊಡಗುತ್ತದೆ. ವೇಗವಾಗಿ ಚಲಿಸುತ್ತಿರುವ ಬಸ್ಸಿನ ಬ್ರೇಕನ್ನು ಒತ್ತಿದಾಗ ಬಸ್ಸಿನಲ್ಲಿ ಹಿಂದೆ ನಿಂತಿದ್ದವರು, ಮುಂದಿದ್ದವರಿಗೆ, ಅವರು ಅವರ ಮುಂದಿದ್ದವರಿಗೆ ಹೋಗಿ ಢಿಕ್ಕಿ ಹೊಡೆಯುವಂತೆ, ಆ ಪಟ್ಟಿ ಕಂಪಿಸುತ್ತಾ ಅದರೆ ಸುತ್ತಲಿನ ವಾತಾವರಣದ ಗಾಳಿಯ ಕಣಗಳನ್ನು ಕಂಪಿಸುವಂತೆ ಮಾಡುತ್ತದೆ. ಅವು ಅವುಗಳ ಸುತ್ತಲಿನ ಕಣಗಳಿಗೆ ಆ ಕಂಪನವನ್ನು ವರ್ಗಾಯಿಸುತ್ತವೆ. ಹೀಗೆ ಈ ರೀತ್ಯ ಕಂಪನಗಳು ಕಿವಿಯ ಒಳಭಾಗದಲ್ಲಿರುವ ಗಾಳಿಯ ಕಣಗಳವರೆಗೂ ವರ್ಗಾವಣೆಗೊಳ್ಳುತ್ತಾ ಕೊನೆಗೆ ಕಿವಿಯೊಳಗಿರುವ ಅತಿಸೂಕ್ಷ್ಮವಾದ, ತೆಳುವಾದ ಸಂವೇದನಗಳೂ ಕಂಪಿಸುವಂತೆ ಮಾಡುತ್ತವೆ. ಅವುಗಳ ಕಂಪನಕ್ಕನುಗುಣವಾಗಿ ಸೂಕ್ಷ್ಮ ವಿದ್ಯುತ್ ಸಂಜ್ಞೆಗಳು ಕಿವಿಯಿಂದ ಮೆದುಳನ್ನು ಸೇರುತ್ತವೆ. ಆ ಸಂಜ್ಞೆಗಳನ್ನು ಮೆದುಳು ಪಟ್ಟಿಯನ್ನು ಕುಟ್ಟಿದಾಗ ಬರುವ ಶಬ್ಧ ಎಂದು ಅರ್ಥೈಸಿ ಕೊಳ್ಳುತ್ತದೆ. ಇನ್ನು ಆ ಶಬ್ಧವನ್ನು ಉತ್ಪಾದಿಸುವ 'ಬಾಯಿ' ಎಂಬ ಅಂಗದ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದು ಕೊಳ್ಳೋಣ. ತರಹೇವಾರಿ ರೀತಿಯ ಶಬ್ಧಗಳನ್ನು ವುರುಸೊತ್ತಿಲ್ಲದೆ ಉತ್ಪತ್ತಿ ಮಾಡುವ ಅಪೂರ್ವ ಅಂಗವೇ ಈ 'ಬಾಯಿ'. ಬಾಯಿಯ ಒಳಗೆ ಸ್ವಲ್ಪ ಆಳದಲ್ಲಿ ಶುರುವಾಗುವ ಅನ್ನನಾಳದ ಬಳಿ ಧ್ವನಿ ಪೆಟ್ಟಿಗೆ ಎಂಬುದೊಂದಿಗೆ. ಅದು ಮೆದುಳಿನಿಂದ ಬರುವ ಸಂಜ್ಞೆಗಳನ್ನು ಅರ್ಥೈಸಿಕೊಂಡು ಅದಕ್ಕನುಗುಣವಾಗಿ ತನ್ನೊಳೊಗಿರುವ ಕೆಲ ತಂತುಗಳು ಕಂಪಿಸುವಂತೆ ಮಾಡುತ್ತದೆ. ಅದಕ್ಕೆ ನಾಲಿಗೆಯೂ ಬಹಳಷ್ಟು ಸಹಕಾರ ನೀಡುತ್ತದೆ. ಅವೆರಡೂ ಅಂಗಗಳ ಸಮ್ಮಿಳಿತ ಪ್ರಯತ್ನದಿಂದಾಗಿ ಬಾಯಿಂದ ಶಬ್ಧ ಹೊರಬರುತ್ತದೆ. ಬಾಯಿಯೊಳಕ್ಕಿರುವ ಸಂಪೂರ್ಣ ಗಾಳಿಯನ್ನು ಒಟ್ಟುಮಾಡಿ, ತುಟಿಗಳಿಂದ ಸಣ್ಣ ರಂಧ್ರವನ್ನು ಉಂಟುಮಾಡಿ, ರಭಸವಾಗಿ ಆ ಗಾಳಿಯನ್ನು ಹೊರಬಿಟ್ಟಾಗ 'ಸಿಳ್ಳೆ' ಉಂಟಾಗುತ್ತದೆ. ಇದಕ್ಕೆ ಕಾರಣ, ಸಿನಿಮಾ ಮಂದಿರದಲ್ಲಿ ಸಿನಿಮಾ ಮುಗಿದಾಗ, ದ್ವಾರದಲ್ಲಿ ಉಂಟಾಗುವ ನೂಕುನುಗ್ಗಲಿನಂತೆ, ಬಾಯಿದ ಹೊರಬಿದ್ದ ಲಕ್ಷಗಟ್ಟಲೇ ಗಾಳಿಯ ಕಣಗಳು ಆ ಚಿಕ್ಕ ರಂಧ್ರದಲ್ಲಿ ಹೊರಬರುತ್ತ ಢಿಕ್ಕಿ ಹೊಡೆದುಕೊಂಡು ಕಂಪಿಸತೊಡಗುತ್ತವೆ. ಆ ಲಕ್ಷಗಟ್ಟಲೆ ಕಂಪನಗಳು ಅತೀ ಚಿಕ್ಕ ಸಮಯದಲ್ಲಿ ಉಂಟಾದಾಗ 'ಸಿಳ್ಳೆ' ಅಥವಾ 'ಸೀಟಿ' ಉಂಟಾಗುತ್ತದೆ. ಒಟ್ಟಾರೆ ಗಾಳಿಯ ಕಣಗಳು ಅಲುಗಿದಾಗ, ದೊಡ್ಡ ದೊಡ್ಡ ಡ್ರಮ್ಮುಗಳು ನಲುಗಿದಾಗ, ಮಗು ಅತ್ತಾಗ, ಗಾಜು ಒಡೆದಾಗ ಉಂಟಾಗುವ ಕಂಪನಗಳೇ ಚಿತ್ರ ವಿಚಿತ್ರ ಶಬ್ಧಗಳು ಎಂದು ಹೇಳಬಹುದು.

ಈ ಶಬ್ಧವೂ ಸಹ ಶಕ್ತಿಯ ಒಂದು ರೂಪವಾಗಿದೆ. ಒಂದು ವೇಳೆ ಒಬ್ಬ ವ್ಯಕ್ತಿ ಒಂದು ತಿಂಗಳಿನಲ್ಲಿ ಮಾತನಾಡುವ ಶಬ್ಧ ಶಕ್ತಿಯನ್ನು ಒಟ್ಟು ಮಾಡಿ ಶಾಖವಾಗಿ ಪರಿವರ್ತಿಸಿದರೆ, ಅದು ಒಂದು ಚಪಾತಿಯನ್ನು ಕಾಯಿಸಲಿಕ್ಕೆ ಸಾಕಾಗುವಷ್ಟಿರುತ್ತದೆ. ಇಲ್ಲಿ ಗಮನಿಸಲೇ ಬೇಕಾದ ವಿಷಯವೆಂದರೆ ಕಂಪನಗಳು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಬೇಕಾದಾಗ ಅಲ್ಲಿ ಯಾವುದಾದರೂ ರೀತ್ಯ ಕಣಗಳು ಇರಲೇಬೇಕಾಗುತ್ತದೆ. ಅಂದರೆ ಶಬ್ಧ ನಿವರ್uಟಿಜeಜಿiಟಿeಜತದಲ್ಲಿ ಚಲಿಸಲಾರದು. ಅಂದರೆ ಕನಿಷ್ಟ ಗಾಳಿಯೂ ಇಲ್ಲದ ಜಾಗದಲ್ಲಿ ನೀವೆμÉ್ಟೀ ಗಂಟಲು ಹರಿದುಕೊಂಡರೂ ಅದು ಯಾರಿಗೂ ಕೇಳುವುದಿಲ್ಲ. ನಿಮ್ಮನ್ನೂ ಸೇರಿಸಿ. ಈ ಶಬ್ಧ ಉತ್ತಮ ವಾತಾವರಣದಲ್ಲಿ ಸಾಧಾರಣ ಉಷ್ಣತೆಯಲ್ಲಿ ಸೆಕೆಂಡಿಗೆ 350 ಮೀಟರ್ಗಳಷ್ಟು ದೂರ ಕ್ರಮಿಸಬಲ್ಲದು. ಈ ವೇಗ ನೀರಿನಲ್ಲಿ ಮೂರುಪಟ್ಟು ಮತ್ತು ಕಬ್ಬಿಣದಲ್ಲಿ 10 ಪಟ್ಟಿಗಿಂತ ಜಾಸ್ತಿ ಇರುತ್ತದೆ. ಇದನ್ನೇ ವೈಜ್ಞಾನಿಕವಾಗಿ, ಗಾಳಿಗಿಂತ ಕಬ್ಬಿಣದಲ್ಲಿ ಕಂಪನಗಳು ವೇಗವಾಗಿ ಸಾಗುತ್ತವೆ ಎಂದು ಹೇಳಬಹುದು.

ಸಣ್ಣದಾಗಿ ಬೀಸುವ ಗಾಳಿಯಲ್ಲಿ ಉಂಟಾಗುವ ಸೂಕ್ಷ್ಮ ಕಂಪನಗಳು ನಮ್ಮ ಕಿವಿಯೊಳಗಿನ ಸಂವೇದಕಗಳನ್ನು ಅಲುಗಾಡಿಸಲಾರವು. ಆದ್ದರಿಂದ ಅಲ್ಲಿ ಉಂಟಾಗುವ ಸದ್ದು ನಮಗೆ ಕೇಳದು. ಅದೇ ರೀತಿ ಸಿಡಿಲಿನ ಸದ್ದಿಗೂ ಮೀರಿದ ಕೆಲ ಶಬ್ಧಗಳ ಕಂಪನಗಳು ಕಿವಿಯಲ್ಲಿನ ಸಂವೇದಕಗಳನ್ನು ಶಾಶ್ವತವಾಗಿ ಕಂಪಿಸದಂತಹ ಸ್ಥಿತಿಗೆ ತಂದು ಕಿವುಡುತನವನ್ನು ಉಂಟು ಮಾಡಬಲ್ಲವು. ಅಂದರೆ ನಮ್ಮ ಕಿವಿಗೆ ಎಲ್ಲಾ ಶಬ್ಧಗಳನ್ನೂ ಗ್ರಹಿಸುವ ಶಕ್ತಿಯಿಲ್ಲ, ಕೆಲವು ಸೀಮಿತ ನಿರ್ದಿಷ್ಟವಾದ ಕನಿಷ್ಟ ಮತ್ತು ಗರಿಷ್ಟ ಮಿತಿಗಳ ಒಳಗಿರಿವ ಶಬ್ಧದ ತೀವ್ರತೆಯನ್ನು ಸಾಮಾನ್ಯವಾಗಿ ಡೆಸಿಬಲ್ ಎಂಬ ಮಾನದಿಂದ ಅಳತೆ ಮಾಡುತ್ತಾರೆ. ನಮ್ಮ ಕಿವಿ 10 ರಿಂದ 120 ಡೆಸಿಬಲ್ವರೆಗಿನ ಶಬ್ಧವನ್ನು ಮಾತ್ರ ಕೇಳಿಸಿಕೊಳ್ಳುತ್ತದೆ. ಅದಕ್ಕೆ ಮೀರಿದ್ದನ್ನು ಶ್ರವಣಾತೀತ ಶಬ್ಧಗಳೆಂದು ಕರೆಯುತ್ತೇವೆ. 

ಮಳೆಗಾಲದ ಆರಂಭದಲ್ಲಿ ಕಿವಿಗಡಚಿಕ್ಕುವಂತೆ ಸದ್ದನ್ನುಂಟು ಮಾಡುವ ಸಿಡಿಲಿನ ಶಬ್ಧ ಉಂಟಾಗುವುದೂ ಈ ಕಂಪನದಿಂದಲೇ. ಸಿಡಿಲು ಎಂಬುದು ಎಲೆಕ್ಟ್ರಾನ್ಗಳೆಂಬ ಕಣಗಳ ಪ್ರವಾಹ, ಕ್ಷಣಾರ್ಧದಲ್ಲಿ ವಾತಾವರಣದಲ್ಲಿ ಗಾಳಿಯ ಕಣಗಳ ನಡುವೆ ನುಗ್ಗುವ ಈ ಲಕ್ಷಾಂತರ ಎಲೆಕ್ಟ್ರಾನ್ಗಳು ಅದಕ್ಕೂ ದುಪ್ಪಟ್ಟು ಸಂಖ್ಯೆಯ ಗಾಳಿಯ ಕಣಗಳೊಡನೆ ಢಿಕ್ಕಿ ಹೊಡೆದುಕೊಂಡು ವಾತಾವರಣದಲ್ಲಿ ಉಂಟುಮಾಡುವ ಭಾರಿ ಕಂಪನಗಳೇ ಸಿಡಿಲಿನ ಶಬ್ಧವಾಗಿ ಕೇಳುವುದು. 

ಮನುಷ್ಯ ಮನುಷ್ಯನ ಪಿಸುಮಾತಿನಿಂದ ಆರಂಭವಾಗುವ ಶಬ್ಧ ಮಾತಾಗಿ, ಮಾತು ಸಂಗೀತವಾಗಿ, ಅದೂ ಕರ್ಕಶವಾಗಿ ಕಿವಿ ಮುಚ್ಚಿಕೊಳ್ಳುವಂತಹ ಪರಿಸ್ಥಿತಿ ಬರುವವರೆಗೂ ಶಬ್ಧ ಹಲವು ರೀತಿಯ, ವಿಭಿನ್ನ ಸಂಖ್ಯೆಗಳ ಕಂಪನಗಳಿಂದ ಉಂಟಾಗಿರುತ್ತದೆ. ಆದರೆ ಯಾವಾಗ ಈ ಸದ್ದು ಅತಿಯಾಗಿ ಕೇಳ ತೊಡಗುತ್ತದೋ, ಅದು ಕಿವಿಗೆ ತೀರಾ ತ್ರಾಸದಾಯಕವಾಗಿರುತ್ತದೆ. ಆಗ ಅದನ್ನು ಶಬ್ಧ ಮಾಲಿನ್ಯ ಎಂದು ಕರೆಯುತ್ತೇವೆ. ಈಗಂತೂ ರಸ್ತೆಗಳಲ್ಲಿ ಬೊಬ್ಬಿರಿದು ಓಡಾಡುವ ವಾಹನಗಳ ತರಹೇವಾರಿ ಸದ್ದುಗಳು, ಜನರ ಮಿತಿಮೀರಿದ ಕೂಗಾಟಗಳು, ಕಾರ್ಖಾನೆಗಳ ಯಾಂತ್ರಿಕ ಕ್ರಿಯೆಗಳ ಸದ್ದುಗಳೆಲ್ಲವೂ ಒಟ್ಟಾಗಿ ಸೇರಿದಾಗ ನಮ್ಮ ಕಿವಿಯಲ್ಲಿ ಅದರಿಂದ ನಮ್ಮ ಮನಸ್ಸಿನಲ್ಲಿ ಉಂಟಾಗುವ ಪ್ರಭಾವಗಳನ್ನು ನೆನೆಸಿಕೊಳ್ಳಿ. ಅದೇ ಶಬ್ಧ ಮಾಲಿನ್ಯದ ಕರಾಳ ಮುಖ. ಈ ಮಾಲಿನ್ಯ ಮನುಷ್ಯನ ಆರೋಗ್ಯ ಮತ್ತು ಕಾರ್ಯಕ್ಷಮತೆಯನ್ನು ಅತಿಯಾಗಿ ಹಾಳುಮಾಡುತ್ತದೆ ಎಂಬುದು ವೈಜ್ಞಾನಿಕವಾದಿ ಧೃಡಪಟ್ಟಿದೆ. ಹಲವು ದೇಶಗಳಲ್ಲಿ ಈ ಕಾರಣಕ್ಕಾಗಿಯೇ 80 ಡೆಸಿಬಲ್ಗಿಂತ ಹೆಚ್ಚಿನ ಸದ್ದುಂಟು ಮಾಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಇಂತಹ ಶಬ್ಧಗಳ ನಡುವೆ ಇರುವವರು ಕಿವಿಗಳಿಗೆ ರಕ್ಷಾಕವಚಗಳನ್ನು ಧರಿಸಿ ಕಾರ್ಯ ನಿರ್ವಹಿಸುವುದು ದೈಹಿಕವಾಗಿಯೂ, ಮಾನಸಿಕವಾಗಿಯೂ ಆರೋಗ್ಯಕರವಾಗಿರುತ್ತದೆ. ಅμÉ್ಟೀ ಅಲ್ಲ ವಾಹನಗಳಿಂದುಂಟಾಗುವ ಮತ್ತು ಕಾರ್ಖಾನೆಗಳಿಂದುಂಟಾಗುವ ಶಬ್ಧಗಳ ಮೇಲೆ ನಿಯಂತ್ರಣ ಹೇರುವುದು, ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಹಾಕುವ ಮೈಕಾಸುರನ ಮೇಲೆ ನಿಯಂತ್ರಣ ಹೇರುವುದು ಸ್ವಾಸ್ಥ್ಯ ಸಮಾಜದ ಮೊದಲ ಆದ್ಯತೆಯಾಗಿದೆ. ವಿಪರ್ಯಾಸವೆಂದರೆ ಕನಿಷ್ಟ ಸಾಮಾಜಿಕ ಜವಾಬ್ದಾರಿಯೂ ಇಲ್ಲದ ನಮ್ಮ ದೇಶದಲ್ಲಿ ಯಾರೊಬ್ಬರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಿಶ್ಯಬ್ಧವಿರಲಿ, ಸದ್ದು ಮಾಡಬೇಡಿ, ಶಾಲಾವಲಯ, ಆಸ್ಪತ್ರೆಗಳಿವೆ ಎಂಬ ಫಲಕಗಳು ಕೇವಲ ತೋರುಗಾಣಿಕೆಗಷ್ಟೇ  ಸೀಮಿತವಾಗಿವೆ. ಮರಗಿಡಗಳ ಸಂಖ್ಯೆಯನ್ನು ಹೆಚ್ಚು ಮಾಡಿದರೆ, ಶಬ್ಧ ಮಾಲಿನ್ಯದ ಪ್ರಮಾಣವೂ ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎನ್ನುವುದೂ ಕೂಡಾ ಸಾಬೀತಾಗಿದೆ. ಹೀಗೆಯೇ ನಾವು ಕಾಡು ನಾಶ ಮಾಡುತ್ತಿದ್ದರೆ ಎಲ್ಲಾ ತರಹದ ಮಾಲಿನ್ಯಗಳು ಸೇರಿ ಮನುಜನ ಜೀವನವನ್ನೇ ದುರ್ಭರವಾಗಿಸುತ್ತವೆ, ಆದಾಗ್ಯೂ ನಮಗೆ ಎಚ್ಚರವಾಗುತ್ತಿಲ್ಲ. ವಿನಾಶ ಕಾಲೇ ವಿಪರೀತ ಬುದ್ಧಿ!!! ಅನ್ನೋ ಹಾಗೆ…

3 comments: