Friday, March 4, 2022

ಡೀಸೆಲ್ ಇಂಜನ್ ಅನ್ವೇಷಣೆಯ ಹಿಂದಿನ ರೋಚಕ ಕಥೆ

ಡೀಸೆಲ್ ಇಂಜನ್ ಅನ್ವೇಷಣೆಯ ಹಿಂದಿನ ರೋಚಕ ಕಥೆ


ಲೇಖನ: ಕೆ. ಸುರೇಶ

ನಂದಾಶ್ರೀ ಬಳಿ

ಕಾಲೇಜು ರಸ್ತೆ

ಹೊಸಕೋಟೆ 


ಇಂದು ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ವಾಹನಗಳಲ್ಲಿ ಬಳಸುವ ಇಂಜಿನ್ನಿನ ಅನ್ವೇಷಣೆಯ ಹಿಂದೆ ಅಡಗಿರುವ ಡೀಸೆಲ್ ಎಂಬ ವಿಜ್ಞಾನಿಯ ಪರಿಶ್ರಮದ ಕಥೆಯನ್ನು ಈ ಲೇಕನದಲ್ಲಿ ನವಿರಾಗಿ ನಿರೂಪಿಸಿದ್ದಾರೆ, ನಿವೃತ್ತ ವಿಜ್ಞಾನ ಶಿಕ್ಷಕ ಸುರೇಶ್ ಅವರು.

ಸಾರಿಗೆ ವ್ಯವಸ್ಥೆಯು ಮಾನವ ಕುಲಕ್ಕೆ ಅತ್ಯಂತ  ಅಗತ್ಯವೂ ಅನಿವಾರ್ಯವೂ ಆದ ಒಂದು ಚಟುವಟಿಕೆ.  ಅನಾದಿ ಕಾಲದಿಂದ ಮಾನವ ಈ ಉದ್ಧೇಶಕ್ಕಾಗಿ ಪ್ರಾಣಿಗಳನ್ನು ಬಳಸುತ್ತಾ ಬಂದಿದ್ದಾನೆ. ಹಬೆ ಯಂತ್ರಗಳ ಅನ್ವೇಷಣೆಯ ನಂತರದಲ್ಲಿ ಸಾರಿಗೆ ಮತ್ತು ಕೈಗಾರಿಕೆಯ ಕ್ಷೇತ್ರದಲ್ಲಿ  ಕ್ರಾಂತಿಯುAಟಾದದ್ದು ನಮಗೆಲ್ಲ ತಿಳಿದ ವಿಚಾರ. ಹಬೆಯಂತ್ರವನ್ನು ಹಿಂಬಾಲಿಸಿ ಬಂದವು ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನುಗಳು. ಮಿಲಿಯನ್‌ಗಟ್ಟಲೇ ಟನ್ನುಗಳ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ರಸ್ತೆ, ರೈಲು, ಹಡಗುಗಳಲ್ಲಿ ಸಾಗಿಸುವುದು ಹಾಗೂ ವಿಶ್ವದ ಮೂಲೆ ಮೂಲೆಗಳಿಗೆ ಪ್ರಯಾಣಿಕರನ್ನು ಸುಗಮವಾಗಿ ವಾಹನಗಳ ಮುಖೇನ ಗಮ್ಯವನ್ನು ತಲುಪಿಸಲು ಸಾಧ್ಯವಾಗಿಸಿರುವುದು ಈ ಹೊಸ ಎಂಜಿನ್ನುಗಳು. ದೂರ ದೂರದ ಹೆದ್ದಾರಿಗಳನ್ನು, ಸೇತುವೆಗಳನ್ನು ಅಣೆಕಟ್ಟುಗಳನ್ನು ನಿರ್ಮಿಸಲು ಸಾಧ್ಯವಾಗಿರುವುದೂ ಕೂಡ ಈ ಎಂಜಿನ್ನುಗಳ ಸಹಾಯದಿಂದ.  ಪೆಟ್ರೋಲ್ ಎಂಜಿನ್ ವೈಭೋಗದ ವಾಹನಗಳಿಗೆ ಮೀಸಲಾಗಿದ್ದರೆ ಡೀಸೆಲ್ ಎಂಜಿನ್ ಜಗತ್ತಿನ ದುಡಿಯುವ ಎತ್ತು. ಅನೇಕ ಸಣ್ಣ ವಾಹನಗಳಿಂದ  ಆರಂಭಿಸಿ ಬಸ್ಸು, ಟ್ರಕ್ಕು, ರೈಲು, ಹಡಗು ಈ ಎಲ್ಲವನ್ನೂ ನಡೆಸುವುದು ಡೀಸೆಲ್ ಎಂಜಿನ್. ಕಾರ್ಲ್ ಕ್ರಿಶ್ಚಿಯನ್ ರುಡಾಲ್ಫ್ ಡೀಸೆಲ್ ಎಂಬ ಅನ್ವೇಷಕ ಮೊದಲಿಗೆ ಈ ಯಂತ್ರವನ್ನು ನಿರ್ಮಿಸಿದ್ದರಿಂದ ಇದಕ್ಕೆ ಡೀಸೆಲ್ ಎಂಜಿನ್ ಎಂದೂ, ಆ ಎಂಜಿನ್ನಿನಲ್ಲಿ ಬಳಸುವ ಪೆಟ್ರೋಲಿಯಂನಿಂದ ಉತ್ಪನ್ನವಾದ ಒಂದು ತೈಲಕ್ಕೆ ಡೀಸೆಲ್ ಎಂದೂ ಹೆಸರು ಬಂದದ್ದು. 

ಕಾರ್ಲ ಕ್ರಿಶ್ಚಿಯನ್ ರುಡಾಲ್ಫ್ ಡೀಸೆಲ್

೧೮೫೮ರ  ಮಾರ್ಚ್ ೧೮ರಂದು  ಡೀಸೆಲ್‌ನ ಜನನವಾಯಿತು. ಅವನ ತಂದೆ, ತಾಯಿಯರು ಪ್ಯಾರಿಸ್ಸಿನಲ್ಲಿ ನೆಲೆಸಿದ್ದ  ಜರ್ಮನ್ ದಂಪತಿಗಳಾಗಿದ್ದರು. ಜರ್ಮನರು ಮತ್ತು ಫ್ರೆಂಚರು ಪರಸ್ಪರ ಕಡುವೈರಿಗಳೆಂದು ಬಗೆದಿದ್ದ ಸಂದಿಗ್ದ ಕಾಲವದು. ಹೀಗಾಗಿ ಚಿಕ್ಕ ವಯಸ್ಸಿನ ಡೀಸಲನನ್ನು ಫ್ರೆಂಚರು ಜರ್ಮನನೆಂದೂ, ಜರ್ಮನರು ಫ್ರೆಂಚನೆಂದು ವಿಕೃತವಾಗಿ ನಡೆಸಿಕೊಂಡರು. ಇದರಿಂದ, ಅವನಿಗೆ ಅತ್ಯಂತ ನೋವಾದರೂ, ಈ ಎರಡೂ ಜನಾಂಗಗಳ ನಡುವಿನ ತಪ್ಪು ತಿಳಿವಳಿಕೆಪರಸ್ಪರರಿಗೆ ಇದ್ದ ದ್ವೇಷ ಮತ್ತು ಪೂರ್ವಗ್ರಹಗಳನ್ನು ಅರಿತಿದ್ದ   ಕಾರಣ ಡೀಸಲನಲ್ಲಿ ಯುದ್ದವಿರೋಧಿ ನೀತಿ ಮತ್ತು ಮಾನವತಾವಾದ ಬೆಳೆಯಲು ಕಾರಣವಾಯಿತು.

ಡೀಸೆಲ್‌ನ ಪ್ರಾಥಮಿಕ ಶಿಕ್ಷಣ ಪ್ಯಾರಿಸ್ಸಿನಲ್ಲಿಯೇ ಆಯಿತಾದರೂ, ಮುಂದೆ ಆರಂಭವಾದ ಫ್ರಾಂಕೋ-ಪ್ರಷ್ಯನ್ ಯುದ್ದದ ಬಿಗುವಿನ ಪರಿಸ್ಥಿತಿಯ ಕಾರಣ ಅವನ ಪರಿವಾರ ಇಂಗ್ಲೆಂಡ್ ವಲಸೆ ಹೋಯಿತು.  ಹಾಗೂ ಹೀಗೂ ಅವನ ದಾಯಾದಿಯೊಬ್ಬನ ಸಹಾಯದಿಂದ ಜರ್ಮನಿಯ  ಆಕ್ಸ್ಬರ್ಗಿನ ತಾಂತ್ರಿಕ ವಿದ್ಯಾಲಯದಲ್ಲಿ ಅವನಿಗೆ ತಾಂತ್ರಿಕ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಪ್ರತಿಭಾನ್ವಿತನಾಗಿದ್ದರಿಂದ ಕಾಲಾಂತರದಲ್ಲಿ  ಮ್ಯೂನಿಕ್ಕಿನ  ತಾಂತ್ರಿಕ ಕಾಲೇಜಿನಲ್ಲಿಯೂ ಅವನಿಗೆ ಪ್ರವೇಶ ದೊರೆಯಿತು. ಅಲ್ಲಿಂದ ಅವನು  ಉನ್ನತ ದರ್ಜೆಯಲ್ಲಿ ಪದವಿಯನ್ನುಪಡೆದ. ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ಸ್ವಿಟ್ಜರ್ಲೆಂಡಿನ ಸುಲ್ಜರ್ ಕಂಪನಿಯಲ್ಲಿ ಕೆಲ ಕಾಲದ ವರೆಗೆ ದುಡಿದ ಅನುಭವವನ್ನು ಆತ ಪಡೆದಿದ್ದ.

ಮ್ಯೂನಿಚ್‌ನ ತಾಂತ್ರಿಕ ಕಾಲೇಜಿನಲ್ಲಿ ಪ್ರೊಫೆಸರನಾಗಿದ್ದ ಕಾರ್ಲ್ ಲಿಂಡೆಗೆ ಡೀಸೆಲನು ಅತ್ಯಂತ ಪ್ರೀತಿ ಪಾತ್ರನಾದ ವಿದ್ಯಾರ್ಥಿಯಾಗಿದ್ದ. ಲಿಂಡೆಯು ಆಗ ಉಷ್ಣಬಲಶಾಸ್ತçದಲ್ಲಿ ರಿಫ್ರಿಜಿರೇಷನ್ ಕುರಿತ ಸಂಶೋಧನೆಯಲ್ಲಿ ತೊಡಗಿದ್ದ. ಲಿಂಡೆಗೆ ಸಹಾಯಕನಾಗಿದ್ದ ಡೀಸೆಲನಿಗೂ ಉಷ್ಣಬಲ ಶಾಸ್ತ್ರದಲ್ಲಿ ಆಸಕ್ತಿ ಮೂಡಿತು. ಉಷ್ಣಬಲಶಾಸ್ತ್ರದ ದಿಗ್ಗಜನಾದ ಕಾರ್ನೋ ಸಾಡಿಯ ಪ್ರಕಾರ, ತಾನು ಪಡೆದ ಉಷ್ಣ ಶಕ್ತಿಯನ್ನೆಲ್ಲಾ ಯಾಂತ್ರಿಕ ಶಕ್ತಿಯಾಗಿಸಬಲ್ಲ ಯಂತ್ರ ಆದರ್ಶ ಎಂಜಿನ್ ಆಗಿರುತ್ತದೆ. ವಾಸ್ತವದಲ್ಲಿ ಅಂತಹ ಎಂಜಿನ್ ನಿರ್ಮಿಸುವುದು ಅಸಾಧ್ಯ. ಆಗ ಬಳಕೆಯಲ್ಲಿದ್ದ ಎಂಜಿನನ್ನು  ಹೆಚ್ಚು ಸಮರ್ಥಗೊಳಿಸುವುದು ಸೂಕ್ತ ಎಂದು ಅವನು ಭಾವಿಸಿದ್ದ.  ಆಗ ಬಳಕೆಯಲ್ಲಿದ್ದ ಉಗಿ ಎಂಜಿನ್ನಿನ ಸಾಮರ್ಥ್ಯ ಅತ್ಯಲ್ಪ ಇದ್ದಿದ್ದನ್ನು ಡೀಸೆಲ್ ಗಮನಿಸಿದ್ದ. ಅತ್ಯಂತ ಹೆಚ್ಚು ಸಾಮರ್ಥ್ಯ ಹೊಂದಿರುವ  ಎಂಜಿನ್ ನಿರ್ಮಿಸುವ ಕನಸನ್ನು ಡೀಸಲ್ ಕಂಡಿದ್ದ.

ಪದವಿಯ ನಂತರ ಡೀಸೆಲ್ ಪ್ಯಾರಿಸ್ಸಿಗೆ ಹಿಂತಿರುಗಿದ. ಅಲ್ಲಿಯೇ ಇದ್ದ ಕಾರ್ಲ್ ಲಿಂಡೆಯ ಕಂಪನಿ ಸೇರಿದ. ಈ ನಡುವೆ ೧೮೮೩ರಲ್ಲಿ ಮಾರ್ಥಾ ಪ್ಲಾಷ್ ಎಂಬ ಕನ್ಯೆಯೊಂದಿಗೆ ಡೀಸೆಲನ ಮದುವೆಯೂ ಆಯಿತು. ಸಮಾನ ಮನಸ್ಕರೂಪ್ರಾಜ್ಞರೂ ಆದ ಅನೇಕ ಸ್ನೇಹಿತರ ಸಹವಾಸವೂ ಸಿಕ್ಕಿತು. ವಿಶ್ವಶಾಂತಿ, ಮಾನವತವಾದಗಳಂತಹ ಉದಾತ್ತ ವಿಚಾರಗಳನ್ನು ಚರ್ಚಿಸಲು ಮುಕ್ತ ವೇದಿಕೆಯೂ ದೊರೆಯಿತು. ಡೀಸೆಲನು ಪ್ಯಾರಿಸ್ಸಿನಲ್ಲಿ ಕಳೆದ  ಆ ದಿನಗಳು ಅತ್ಯಂತ ಸಂತೋಷದಾಯಕವೂ ಉಲ್ಲಾಸದಾಯಕ ಆಗಿದ್ದವು.

ತನ್ನ ಯೋಜನೆಯಂತೆ ೧೮೮೫ರಲ್ಲಿ ಹೊಸ ಎಂಜಿನ್ ನಿರ್ಮಿಸಲು  ಡೀಸೆಲ ಆರಂಭಿಸಿದನು.  ಪೆಟ್ರೋಲ್ ಎಂಜಿನಿನಲ್ಲಿ ಕಾರ್ಬೋರೇಟರಿನಲ್ಲಿ ಇಂಧನ ಮತ್ತು ಗಾಳಿ ಮಿಶ್ರಣ ತಯಾರಾಗಿ ಎಂಜಿನಿನ ಸಿಲಿಂಡರ್ ಪ್ರವೇಶಿಸಿದಾಗ ಅಲ್ಲಿರುವ ಕಿಡಿಬೆಣೆಯಿಂದ ಹಾರುವ ಕಿಡಿಯಿಂದ ಹೊತ್ತಿ ಉರಿಯುತ್ತದೆ. ಆಗ ಉಂಟಾಗುವ ಉಷ್ಣ ಶಕ್ತಿಯು ಅನಿಲಗಳನ್ನು ಹಿಗ್ಗುವಂತೆ ಮಾಡುವುದರಿಂದ ಒತ್ತಡ ಉಂಟಾಗುತ್ತದೆ.  ಈ ಒತ್ತಡವು ಸಿಲಿಂಡರಿನಲ್ಲಿರುವ ಕೊಂತವನ್ನು ಚಲಿಸುವಂತೆ ಮಾಡಿ ಎಂಜಿನಿನ ಕೆಲಸ ಆರಂಭವಾಗುತ್ತದೆ. ಡೀಸೆಲನ ಉದ್ಧೇಶವಿದ್ದಿದ್ದುಎಂಜಿನ್ನಿನ ಸಿಲಿಂಡರಿನ ಒಳಗೇ ಇಂಧನ ಮತ್ತು ಗಾಳಿ ಮಿಶ್ರಣಗಳನ್ನು ಸಂಪೀಡನೆಗೆ ಒಳಪಡಿಸಿ ತಾಪವನ್ನು ಹೆಚ್ಚಿಸುವುದು ಮತ್ತು ಆ ತಾಪವು ಇಂಧನವನ್ನು ಉರಿಸಿ ಉಷ್ಣ ಶಕ್ತಿಯನ್ನು ಬಿಡುಗಡೆ ಮಾಡುವಂತೆ ಮಾಡಬೇಕು. ಆ ಉಷ್ಣ ಶಕ್ತಿ ಎಂಜಿನ್ನಿಂದ ಕೆಲಸ ಮಾಡಿಸಬೇಕು, ಎಂಬುದು. ಇಂಜಿನ್ ಒಳಗೆ ಉಂಟಾಗುವು ಅತ್ಯಧಿಕ ಒತ್ತಡವನ್ನು ತಡೆದುಕೊಳ್ಳುವ ಧೃಡ ಎಂಜಿನ್ ಬ್ಲಾಕ್ ತಯಾರಿಸುವುದು ದೊಡ್ಡ ಸಮಸ್ಯೆಯಾಗಿ ಕಾಡಿತು. ಸಮರ್ಥ ಇಂಧನ ಪಂಪುಗಳು ಇಲ್ಲದಿದ್ದ ಆ ಕಾಲದಲ್ಲಿ ಇದೊಂದು ದೊಡ್ಡ ಸವಾಲಿನ ಕೆಲಸವಾಗಿದ್ದಿತು.  ಹೀಗೆ ನಿರ್ಮಿಸಿದ ಎಂಜಿನ್‌ಗಳು ಪ್ರಯೋಗದ ಸಂದರ್ಭಗಳಲ್ಲಿ  ಭಯಂಕರವಾಗಿ ಸ್ಪೋಟಿಸಿದ ಆನೇಕ ಅವಘಡಗಳಿಂದ ಡೀಸೆಲನು  ಬಚಾವಾದದ್ದು ಒಂದು ಪವಾಡವೇ ಎಂದು ಹೇಳಬಹುದು.

೧೮೯೦ರಲ್ಲಿ ಲಿಂಡೆ ಸಂಸ್ಥೆಯ ಬರ್ಲಿನ್ ಘಟಕಕ್ಕೆ ಡೀಸೆಲ್ ವರ್ಗವಾಗಿ ಹೋದ. ಅಲ್ಲಿ ಕೆಲಸ ಮಾಡುತ್ತಲೇ ೧೮೯೨ರಲ್ಲಿ ತನ್ನ ಎಂಜಿನಿಗೆ ಪೇಟೆಂಟ್ ಪಡೆದ, ಎಂಜಿನ್ ನಿರ್ಮಿಸಿಲು ಅವನಿಗೆ  ಮೆಷಿನ್ ಫ್ಯಾಬ್ರಿಕ್, ಕ್ರುಪ್ಸ್ ಮತ್ತು ಸುಲ್ಜರ್ ಕಂಪನಿಗಳು ನೆರವನ್ನು ನೀಡಿದವು. ಅವನು ಮೊದ ಮೊದಲಿಗೆ  ಎಂಜಿನಿನಲ್ಲಿ ಅಗ್ಗವಾಗಿ ದೊರೆಯುವ ಕಲ್ಲಿದ್ದಿಲಿನ ಪುಡಿಯ ದೂಳನ್ನು ಬಳಸಿ ನೋಡಿದ, ಇದರಿಂದ, ಎಂಜಿನಿನ ಭಾಗಗಳು ಬೇಗ ಸವೆದು ಹೋಗುತ್ತಿದ್ದವು. ಪೆಟ್ರೋಲಿಯಂ ಉತ್ಪನ್ನವಾದ ಎಣ್ಣೆಯೊಂದು ಯಾವುದಕ್ಕೂ ಬಳಸಲು ಬಾರದ್ದೆಂದು ಬಲು ಅಗ್ಗವಾಗಿ ದೊರೆಯುತ್ತಿತ್ತು. ಇದನ್ನೇ ಡೀಸೆಲ್ ತನ್ನ ಎಂಜಿನಿನಲ್ಲಿ ಬಳಸಿ ಯಶಸ್ವಿಯಾದ. ಡೀಸೆಲ ರೂಪಿಸಿದ  ಎಂಜಿನಿನಲ್ಲಿ ಬಳಸಲಾದ ಈ ಎಣ್ಣೆಯು ಮುಂದೆ ಡೀಸೆಲ್ ಆಯಿಲ್ ಎಂದೇ ಹೆಸರುವಾಸಿಯಾಯಿತು. ಬಂದ ಎಲ್ಲ ಸವಾಲುಗಳನ್ನು ಎದುರಿಸಿ ಒಂದು ಸುಸಜ್ಜಿತವಾದ ಮತ್ತು ಅಗ್ಗವಾದ ಇಂಧನದಿಂದ ಕೆಲಸ ಮಾಡುವ ಎಂಜಿನನ್ನು ೧೮೯೬ರಲ್ಲಿ ಡೀಸೆಲ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ. ಅದೇ, ಇಂದಿಗೂ ಜನಪ್ರಿಯವಾದ ಡೀಸೆಲ್ ಎಂಜಿನ್.

ಡೀಸೆಲ್ ನಿರ್ಮಿಸಿದ ಮೊದಲ ಎಂಜಿನ್

ಡೀಸಲ್‌ನಿಗೆ ಅವನ ನಿರ್ಮಾಣದ ಎಂಜಿನ್ ಪ್ರಖ್ಯಾತಿಯನ್ನು ಮಾನ, ಸನ್ಮಾನಗಳನ್ನೂ ವರಮಾನವನ್ನು ತಂದು ಕೊಟ್ಟಿತು ಪ್ರಾರಂಭದಲ್ಲಿ ವ್ಯವಹಾರದಲ್ಲಿ ಪರಿಣಿತಿ ಇಲ್ಲದೇ ಸಾಕಷ್ಟು ಹಣವನ್ನು ಅವನು ಕಳೆದುಕೊಂಡನಾದರೂ ಕೊನೆ ಕೊನೆಯಲ್ಲಿ, ಮಕ್ಕಳು ಮೊಮ್ಮಕ್ಕಳನ್ನು ಕೂಡಿದ ಸುಖೀ ಸಂಸಾರದ ಸಂತೃಪ್ತ ಜೀವನ ನಡೆಸಲು ಅವನಿಗೆ. ಸಾಧ್ಯವಾಯಿತು ೨೭ನೇ ಸೆಪ್ಟೆಂಬರ್ ೧೯೧೩ರಂದು ಇಂಗ್ಲೆಂಡಿಗೆ ಡೀಸೆಲ್ ಪ್ರಯಾಣ ಹೊರಟವನು. ಎರಡು ದಿನಗಳ ನಂತರ ಅವನು ಪ್ರಯಾಣಿಸುತ್ತಿದ್ದ ಹಡಗು ಇಂಗ್ಲಿಷ್ ಕಡಲ್ಗಾಲುವೆ ದಾಟುತ್ತಿದ್ದಾಗವಿಸ್ಮಯವೆಂಬಂತೆ ಕಣ್ಮರೆಯಾಗಿ ಹೋದ. ಅದಾದ ಹತ್ತು ದಿನಗಳ ನಂತರ ನೆದರಲ್ಯಾಂಡಿನ ಸಮುದ್ರದ ಒಂದು ಸಣ್ಣ ಕೊಲ್ಲಿಯಲ್ಲಿ ಒಂದು ಶವ ತೇಲುತ್ತಿದ್ದದ್ದನ್ನು ಒಬ್ಬ ನಾವಿಕ ಕಂಡನು. ತೀರಕ್ಕೆ ತರಲಾರದಂಥ ಪರಿಸ್ಥಿತಿಯಲ್ಲಿ ಶವ ಇದ್ದದ್ದರಿಂದ ಸಮುದ್ರ ತೀರದಲ್ಲಿ ಅದಕ್ಕೆ ಅಂತಿಮ ಸಂಸ್ಕಾರ ಮಾಡಲಾಯಿತು. ಶವದೊಂದಿಗೆ ಇದ್ದ ವಸ್ತುಗಳಿಂದ ಅದು ಡೀಸಲ್‌ನ ಶವ ಎಂಬ ತೀರ್ಮಾನಕ್ಕೆ ಆನಂತರ ಬರಲಾಯಿತು. ಡೀಸಲ್‌ನ ಸಾವು ಬಿಡಿಸಲಾಗದ ಒಗಟಾಗಿಯೇ ಉಳಿದುಹೋಗಿತು.ಈ ಮಧ್ಯೆ ಡೀಸೆಲ್ ಎಂಜಿನ್ ಜಗತ್ತಿನ ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಉಳಿದು ಡೀಸೆಲ್‌ನ ಹೆಸರನ್ನು ಅಜರಾಮರವಾಗಿಸಿತು.

ಉಷ್ಣ ಎಂಜನುಗಳಲ್ಲಿ ಅತಿ ಹೆಚ್ಚು ಸಾಮರ್ಥ್ಯ ಹೊಂದಿರುವುದು ಡೀಸೆಲ್ ಎಂಜಿನ್ ಆದರೂ ಪೆಟ್ರೋಲ್ ಎಂಜಿನ್ನಿಗೆ ಹೋಲಿಸಿದಾಗ, ಹಳೆ ಮಾದರಿಯ ಡೀಸೆಲ್ ಎಂಜನ್ನಿನಲ್ಲಿ ಕೆಲವು ನ್ಯೂನತೆಗಳು ಉಳಿದುಹೋಗಿವೆೆ. ಉದಾಹರಣೆಗೆ, ಡೀಸೆಲ್ ಎಂಜಿನ್ ಹೆಚ್ಚು ಭಾರ, ಹೆಚ್ಚು ನಡುಗುತ್ತದೆ ಮತ್ತು ಗದ್ದಲ ಮಾಡುತ್ತದೆ. ಅಲ್ಲದೆ, ನಿಷ್ಕಾಸ ಅನಿಲಗಳು ಹೆಚ್ಚು ಮಾಲಿನ್ಯಕಾರಕಗಳನ್ನು ಹೊರ ಸೂಸುತ್ತವೆ. ಇಂದು ಡೀಸೆಲ್ ಎಂಜಿನ್ ಬಹಳಷ್ಟು ಸುಧಾರಣೆಗಳನ್ನು ಕಂಡಿದೆ. ಚಿಕ್ಕ ಡೀಸೆಲ್ ಎಂಜಿನುಗಳನ್ನು ಅಲ್ಯೂಮೀನಿಯಂನ ಮಿಶ್ರ ಲೋಹದಿಂದ ತಯಾರಾಗುತ್ತಿದ್ದು, ಸಾಕಷ್ಟು ಹಗುರವಾಗಿವೆ. ನಡುಕ ಮತ್ತು ಗದ್ದಲವನ್ನು ಹೊಸ ತಂತ್ರಜ್ಞಾನ ಬಳಸಿ ಕನಿಷ್ಠಗೊಳಿಸಲಾಗಿದೆ. ಟರ್ಬೋ ಚಾರ್ಜರ್ ಅಳವಡಿಸಿ ಎಂಜಿನ್ನಿನ ಸಾಮರ್ಥ್ಯವನ್ನು ಹಚ್ಚಿಸಲಾಗಿದೆ. ನಿಷ್ಕಾಸ ಕೊಳವೆಗೆ ಅಳವಡಿಸಿರುವ ಆಡ್ ಬ್ಲೂ (ನೀರಿನಲ್ಲಿ ಅಮೋನಿಯ ಕರೆಗಿರುವ ೩೨.೫% ದ್ರಾವಣ) ಶೋಧಕವು ಡೀಸೆಲ್ ಎಂಜಿನ್ ಹೊರಸೂಸುವ ನಿಷ್ಕಾಸ ಅನಿಲಗಳಲ್ಲಿ ಪರಿಸರಕ್ಕೆ ಮಾರಕವಾದ ಅಂಶಗಳನ್ನು ಶೂನ್ಯ ಅನಿಸುವಷ್ಟು ಕಡಿತಗೊಳಿಸಿವೆ.  ಸಸ್ಯಜನ್ಯ ಎಣ್ಣೆಗಳನ್ನು, ಆಲ್ಕೋಹಾಲನ್ನು ಡೀಸೆಲ್ ಎಂಜನ್ನಿನಲ್ಲಿ ಬಳಸುವ ಪ್ರಯೋಗಗಳು ನಡೆದಿವೆ.  ಈ ಎಲ್ಲವೂ ಡೀಸೆಲ್ ಎಂಜಿನುಗಳನ್ನು ಹಿಂದಿಗಿಂತಲೂ ಈಗ ಹೆಚ್ಚು ಪರಿಸರ ಸ್ನೇಹಿಯಾಗಿಸಿವೆ. ಇಂದು ಡೀಸೆಲ್ ಎಂಜಿನ್ ಇಲ್ಲದ ಪ್ರಪಂಚವನ್ನು ಕಲ್ಪಿಸಿಕೊಳ್ಳವುದೇ ಅಸಾಧ್ಯವೆಂದೇ ಹೇಳಬಹುದು.

೧ ಟರ್ಬೋ ಚಾರ್ಜರ್ ಕುರಿತ ವೀಡಿಯೋಗೆ ಈ ಲಿಂಕನ್ನು ಕ್ಲಿಕ್ ಮಾಡಿ.



೨ ಆಡ್‌ಬ್ಲೂ ಕುರಿತ ವೀಡಿಯೋಗೆ ಈ ಲಿಂಕನ್ನು ಕ್ಲಿಕ್ ಮಾಡಿ.




6 comments:

  1. very nice information about diesel suresh

    ReplyDelete
  2. Nice information. Great invention in Science. We never forget his contribution. Thank you sir 🙏

    ReplyDelete
  3. Excellent article Suresh sir. BVN BRP

    ReplyDelete
  4. Very useful information sir🙏

    ReplyDelete
  5. Excellent, and useful information Suresh sir. Thank you very much sir.

    ReplyDelete