Monday, April 4, 2022

ಜ್ಞಾನ ದಾಸೋಹಿ ಡಿ.ಎಸ್.ಬಸವಾನಂದ ಪ್ರಕಾಶ್

ಜ್ಞಾನ ದಾಸೋಹಿ ಡಿ.ಎಸ್.ಬಸವಾನಂದ ಪ್ರಕಾಶ್

ಲಕ್ಷ್ಮಿಪ್ರಸಾದ್ ನಾಯಕ್

ಬೆಂಗಳೂರಿನ ಪ್ರತಿಷ್ಟಿತ  ಬಿ.ಹೆಚ್.ಎಸ. ಶಾಲೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ವಿಜ್ಞಾನ ಮತ್ತು ಗಣಿತ ವಿಷಯಗಳ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಕೊನೆಯಲ್ಲಿ ಮುಖ್ಯ ಶಿಕ್ಷಕರಾಗಿ ಇತ್ತೀಚೆಗಷ್ಟೇ ನಿವೃತ್ತರಾದ ಶ್ರೀ ಡಿ.ಎಸ.ಬಸವಾನಂದ ಪ್ರಕಾಶ್, ನಮ್ಮ ‘ಸವಿಜ್ಞಾನದ ಈ ತಿಂಗಳ ಸಂಚಿಕೆಯಲ್ಲಿ ನಿಮಗೆ ಪರಿಚಯಿಸಲಾಗುತ್ತಿರುವ ‘ತೆರೆ ಮರೆಯ ಸಾಧಕರು’. ಬೋಧನೆಯ ಜೊತೆಗೆ ಮಕ್ಕಳನ್ನು ಸಹಪಠ್ಯ ವಿಷಯಗಳಲ್ಲಿಯೂ ಸಿದ್ಧ ಪಡಿಸುವುದರಲ್ಲಿ ನಿಷ್ಣಾತರು. ‘ರಾಜ್ಯ ಪ್ರಶಸ್ತಿ ವಿಜೇತ’ ಶಿಕ್ಷಕರಾದ ಶ್ರೀಯುತರು, ರಾಜ್ಯ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರು.

ಕಾಲ ಎಷ್ಟೇ ಉರುಳಿ ಹೋದರೂ ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ಬೇರೂರಿರುವ ವ್ಯಕ್ತಿ ಎಂದರೆ, ಅದು ಅವನ ನೆಚ್ಚಿನ ಶಿಕ್ಷಕ. ಎಂಬುದರಲ್ಲಿ ಎರಡು ಮಾತಿಲ್ಲ. “ಗುರು ದೇವೋಭವ” ಎಂಬ ವೇದಗಳ ಸಾರದಂತೆ, ತಾಯಿಯಂತೆ ಮಮತೆಯಿಂದ, ಅಕ್ಕರೆಯಿಂದ ಜವಾಬ್ದಾರಿಯುತವಾಗಿ ಅಕ್ಷರದ ದೀಪ್ತಿಯನ್ನು ಬೆಳಗಿಸುವ ಮಾತೃ ಸಮಾನ ವ್ಯಕ್ತಿತ್ವ ಅದು ಶಿಕ್ಷಕರದ್ದು ಮಾತ್ರ. ತನ್ನಲ್ಲಿರುವ ವಿದ್ಯಾಜ್ಯೋತಿಯನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದು ತೃಪ್ತಿ ಕಂಡಿರುವ, ಕಾಣುತ್ತಿರುವ ಎಷ್ಟೋ ಶಿಕ್ಷಕರು ನಮ್ಮಲ್ಲಿದ್ದಾರೆ. ಎಲೆ ಮರೆಯ ಕಾಯಿಯಂತೆ ಅವರು ಶಾಲೆಯ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗಾಗಿ ಪಣತೊಟ್ಟು ನಿಸ್ವಾರ್ಥರಾಗಿ ಸೇವೆಯಲ್ಲಿರುತ್ತಾರೆ. ಅಂತಹ ನೂರಾರು ಶಿಕ್ಷಕರ ಪೈಕಿ ಒಬ್ಬರಾಗಿದ್ದಾರೆ, ಡಿ.ಎಸ್.ಬಸವಾನಂದ ಪ್ರಕಾಶ್ (ಮಕ್ಕಳ ನೆಚ್ಚಿನ ಡಿ.ಎಸ್.ಬಿ. ಸರ್).

ತನಗಾಗಿ ಬದುಕುವ ಮನುಷ್ಯನನ್ನು  ಸಮಾಜವು ಎಂದಿಗೂ ನೆನಪಿಸಿಕೊಳ್ಳುವುದಿಲ್ಲ, ಹಾಗೆಯೇ ಇತರರಿಗಾಗಿ ಬದುಕುವ ಮನುಷ್ಯನನ್ನು ಎಂದಿಗೂ ಮರೆಯಲಾಗುವುದಿಲ್ಲ. ಶಿಕ್ಷಣವು ಮಾನವೀಯತೆಯ ಅತ್ಯುತ್ತಮ ಭರವಸೆಯಾಗಿದೆ. ಸಾಮರಸ್ಯ ಮತ್ತು ಸುಸ್ಥಿರ ಸಮಾಜವನ್ನು ಸಾಧಿಸುವ ಅನ್ವೇಷಣೆಯಲ್ಲಿ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ. ಶಿಕ್ಷಕನಾಗಿ ಭವಿಷ್ಯದ ಪೀಳಿಗೆಗೆ ಶೈಕ್ಷಣಿಕ ಮತ್ತು ಸಹಪಠ್ಯ ಚಟುವಟಿಕೆಗಳಿಗೆ ಸಮಾನವಾದ ಪ್ರಾಮುಖ್ಯತೆಯನ್ನು ನೀಡುವ ಮೂಲಕ ರಚನಾತ್ಮಕ ವಾತಾವರಣವನ್ನು ಒದಗಿಸಿ, ಸಮಾಜದ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಮೌಲ್ಯಯುತ ನಾಗರಿಕರನ್ನಾಗಿ ಮಕ್ಕಳನ್ನು ಬೆಳೆಸುವುದು ಡಿ.ಎಸ್.ಬಸವಾನಂದ ಪ್ರಕಾಶ್ ಅವರ ಮಹತ್ವಾಕಾಂಕ್ಷೆಯಾಗಿದೆ.

ಶ್ರೀಯುತ ಬಸವಾನಂದ ಪ್ರಕಾಶ್ ಅವರು ಆಗಸ್ಟ್ ೨೬, ೧೯೬೧ರಲ್ಲಿ ನೆಲಮಂಗಲ ತಾಲ್ಲೂಕಿನ ಸಣ್ಣ ಗ್ರಾಮವಾದ ದೇವರಹೊಸಹಳ್ಳಿಯ ಶಿಕ್ಷಕ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಡಿ.ವಿ.ಸದಾನಂದಮೂರ್ತಿ ಶಾಸ್ತ್ರಿ- ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ತಾಯಿ ಶ್ರೀಮತಿ ಗಂಗಾಂಬಿಕೆ ಕೂಡ ಸ್ವಲ್ಪ ಸಮಯದ ಕಾಲ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದವರು. ಬಾಲ್ಯದಿಂದಲೂ ಕೂಡ ಉತ್ತಮ ಶಿಕ್ಷಕರ ಒಡನಾಟ, ಮಾರ್ಗದರ್ಶನ, ಇವರ ಕಲಿಕೆಗೆ ಸ್ಪೂರ್ತಿಯನ್ನು ನೀಡಿ, ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಬಿ.ಎಸ್ಸಿ, ಬಿ.ಎಡ್, ಹಾಗೂ ಎಲ್.ಎಲ್.ಬಿ ಪದವಿಯನ್ನು ಪಡೆದಿರುವ ಶ್ರೀಯುತರು ತಮ್ಮ ಶಿಕ್ಷಣದ ನಂತರ ಬೆಂಗಳೂರಿನ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರು ಉನ್ನತ ಪ್ರೌಢಶಾಲೆಯಲ್ಲಿ (ಬಿ.ಹೆಚ್.ಎಸ್) ೧೯೮೬ ರಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿ, ಕೊನೆಯಲ್ಲಿ ಮುಖ್ಯಶಿಕ್ಷಕ ಹುದ್ದೆಯನ್ನು ಅಲಂಕರಿಸಿ, ಬರೋಬ್ಬರಿ ೩೧ ವರ್ಷ ಸೇವೆಯನ್ನು ಸಲ್ಲಿಸಿ ಕಳೆದ ವರ್ಷ ನಿವೃತ್ತಿ ಹೊಂದಿದರು. ಶಿಕ್ಷಕರಾದವರಿಗೆ ನಿವೃತ್ತಿಯೆಂಬುದಿಲ್ಲ . ಈ ಮಾತು ಇವರ ವಿಚಾರದಲ್ಲಿ ನೂರಕ್ಕೆ ನೂರರಷ್ಟು ನಿಜ. ನಿವೃತ್ತಿಯ ಬಳಿಕ ಕರ್ನಾಟಕ ಸಂಸ್ಕೃತಿ ವಿದ್ಯಾಪೀಠ ಎಂಬ ಹೆಸರಿನಲ್ಲಿ ಶಾಲೆಯನ್ನು ಸ್ಥಾಪಿಸಿ ಅದರ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವರ ಶೈಕ್ಷಣಿಕ ಕೈಂಕರ್ಯ ಇಂದಿಗೂ ಮುಂದುವರೆಯುತ್ತಿದೆ .

ಗಣಿತದ ಕ್ಲಿಷ್ಟ ಪರಿಕಲ್ಪನೆಗಳನ್ನು ಸುಲಭವಾಗಿ ಕಲಿಸುವ ಮೂಲಕ ಹಾಗೂ ಭೌತಶಾಸ್ತ್ರ ಪರಿಕಲ್ಪನೆಗಳನ್ನು ನಿತ್ಯ ಜೀವನದ ಉದಾಹರಣೆಗಳೊಂದಿಗೆ ಮನ ಮುಟ್ಟುವಂತೆ ಪಾಠವನ್ನು ಮಾಡುವ ಮೂಲಕ .ಗಣಿತ, ವಿಜ್ಞಾನಗಳನ್ನು ಚಟುವಟಿಕೆ ಹಾಗೂ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಿಗೆ ಬೋಧಿಸಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದವರು ಮಕ್ಕಳ ಪ್ರೀತಿಯ ಡಿ.ಎಸ್.ಬಿ.ಸರ್. ಶಾಲೆಯಲ್ಲಿ ಅನೇಕ ಗಣಿತ ಮತ್ತು ವಿಜ್ಞಾನ ವಸ್ತು ಪ್ರದರ್ಶನಗಳು, ರಸಪ್ರಶ್ನೆ, ಚಾರ್ಟ್, ಮಾದರಿಗಳ ತಯಾರಿಕೆ ಸ್ಪರ್ಧೆಗಳನ್ನು ಏರ್ಪಡಿಸಿರುತ್ತಾರೆ. ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಅನೇಕ ಕಾರ್ಯಾಗಾರಗಳಲ್ಲಿ ಶಿಕ್ಷಕರಿಗೆ ತರಬೇತಿಯನ್ನು ನೀಡಿರುತ್ತಾರೆ. ಉತ್ತಮ ವಾಗ್ಮಿಯಾಗಿರುವ ಇವರ ಸ್ಪೂರ್ತಿದಾಯಕ ಮಾತುಗಳನ್ನು ಕೇಳುತ್ತಾ ಕೂತರೆ, ಕನ್ನಡ ಸರಸ್ವತಿಯೇ ಇವರ ಪದಗಳಲ್ಲಿ ಇರುವಂಥ ಅನುಭೂತಿ ಉಂಟಾಗುತ್ತದೆ. ವಿದ್ಯಾರ್ಥಿಗಳೊಂದಿಗಿರುವ ಬಾಂಧವ್ಯ, ಪ್ರೀತಿ ಮಿತ್ರರಂತೆ ಮಾತಾಡಿ ಸಂತೈಸುವ ಇವರ ಕರುಣೆ, ಸಹನೆಯ ಗುಣ ನಿಜಕ್ಕೂ ಅದ್ಭುತ.

ಸ್ವತಃ ಉತ್ತಮ ನಾಟಕ ಕಲಾವಿದರಾಗಿರುವ ಇವರು ಅನೇಕ ನಾಟಕ ಪ್ರದರ್ಶನಗಳಲ್ಲಿ ಪಾತ್ರವಹಿಸಿ ಜನರ ಮೆಚ್ಚುಗೆಗೆ ಪಾತ್ರರಾದವರು. ಕೇವಲ ಪಾಠಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸದೆ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸುವಲ್ಲಿ ಡಿ.ಎಸ್.ಬಿ.ಸರ್ ಅವರು ಪಟ್ಟ ಶ್ರಮ ಶ್ಲಾಘನೀಯ. ಅಂತರ ಶಾಲಾ ನಾಟಕ ಸ್ಪರ್ಧೆಯಲ್ಲಿ ಸತತ ೧೧ ವರ್ಷಗಳ ಕಾಲ ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿ, ಪ್ರಶಸ್ತಿ ವಿಜೇತರನ್ನಾಗಿ ಮಾಡುವಲ್ಲಿ ಇವರ ಪಾತ್ರ ಪ್ರಮುಖ. ೨೦೦ಕ್ಕೂ ಹೆಚ್ಚೂ ನಾಟಕ ಪ್ರದರ್ಶನಗಳನ್ನು ಇವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ನೀಡಿರುತ್ತಾರೆ . 

ಇವರ ಶಿಷ್ಯ ಕೋಟಿ ಏನು ಸಾಮಾನ್ಯರೇ? ಗುರುವನ್ನೇ ಮೀರಿಸಿದ ಶಿಷ್ಯ ಕೋಟಿಯನ್ನು ಸಂಪಾದಿಸಿದ್ಧಾರೆ.  ಪ್ರಸಿದ್ದ ಚಿತ್ರನಟ ಶ್ರೀನಗರ ಕಿಟ್ಟಿ, ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರ ರಾಬಿನ್‌  ಉತ್ತಪ್ಪ , ಖ್ಯಾತ ಹಾಡುಗಾರ ಪಂಚಮ್‌ ಹಳಿಬಂಡಿ,  ಕಾರ್ಯಕ್ರಮ ನಿರೂಪಕಿ ಸಿರಿ, ಹೆಸರಾಂತ ಕೊಳಲು ವಾದಕ ಭರತ್‌ , ಫೋಕ್‌ ಸಿಂಗರ್‌ - ರಾಜ್‌ಗುರು  ಮುಂತಾದ ಅನೇಕ ಖ್ಯಾತನಾಮರು ಇವರ ಶಿಷ್ಯಂದಿರು. "ಜಪಾನ್" ನಿಂದ ಬಂದ ಪ್ರತಿನಿಧಿಗಳೊಂದಿಗೆ ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಸಂಯೋಜಿಸಿದ್ದಾರೆ. ಹೀಗೆ  ಹಲವಾರು ಪಠ್ಯೇತರ ಚಟುವಟಿಕೆ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಸಮಾಜ ಸೇವೆಯಲ್ಲು ಇವರದ್ದು ಎತ್ತಿದ ಕೈ. ಕಳೆದ ೨೫ ವರ್ಷಗಳಿಂದ ವಿಜಯ ಅಕಾಡೆಮಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಹತ್ತನೇ ತರಗತಿಯ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ತರಗತಿಗಳನ್ನು ಹಮ್ಮಿಕೊಂಡಿರುತ್ತಾರೆ, ಅಲ್ಲದೆ ಕಳೆದ ೧೫ ವರ್ಷಗಳಿಂದ ಗಣಿತವಿಜ್ಞಾನ, ಸಮಾಜ ಈ ವಿಷಯಗಳ ಮಾದರಿ ಪ್ರಶ್ನಾಕೋಠಿ ಪುಸ್ತಕವನ್ನು ಉಚಿತವಾಗಿ ಪ್ರತಿ ವರ್ಷ ೪೦೦೦ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ಹಂಚುತ್ತಿದ್ದಾರೆ. ಅಲ್ಲದೆ, ಪ್ರತಿ ವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವುದರ ಮೂಲಕ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ ಹಾಗೂ ಗುರುವಂದನಾ ಕಾರ್ಯಕ್ರಮದ ಮೂಲಕ ಹಲವು ಶಿಕ್ಷಕರನ್ನು ಗೌರವಿಸುತ್ತಿದ್ದಾರೆ. ಜನಪದ ನೃತ್ಯ, ಭರತನಾಟ್ಯ ಸ್ಪರ್ಧೆಗಳ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ವೇದಿಕೆಯನ್ನು ಕಲ್ಪಿಸುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ.

೨೦೧೩ರಲ್ಲಿ, ನಿರಂತರ ಸಮಗ್ರ ಮೌಲ್ಯಮಾಪನ (ಸಿ.ಸಿ.ಇ)ವನ್ನು ರಾಜ್ಯದಾದ್ಯಂತ ಶಾಲೆಗಳಲ್ಲಿ  ಅನುಷ್ಠಾನಗೊಳಿಸಲು ಶಿಕ್ಷಕರಿಗೆ ತರಬೇತಿಯನ್ನು ನೀಡುವ ಸಲುವಾಗಿ ಡಿ.ಎಸ್.ಇ.ಆರ್.ಟಿ ಇಲಾಖೆಯು ಸಂಪನ್ಮೂಲ ವ್ಯಕ್ತಿಗಳಿಗೆ ಮಂಗಳೂರಿನಲ್ಲಿ ೫ ದಿನಗಳ ಕಾಲ ತರಬೇತಿ ಆಯೋಜಿಸಿತ್ತು. ಆ ಸಂದರ್ಭದಲ್ಲಿ ನಾನೂ ಕೂಡ ಡಿ.ಎಸ.ಬಿ. ಅವರೊಂದಿಗೆ ಕಾರ್ಯಗಾರದಲ್ಲಿ ಭಾಗವಹಿಸಿದ್ದೆ. ಆಗ ಇವರ ಸ್ನೇಹಿತನಾಗಿ ಇನ್ನೂ ಹತ್ತಿರದಿಂದ ಇವರನ್ನು ನೋಡುವಂತಾಯಿತು, ಅತ್ಯುತ್ತಮ ಬೋಧನಾ ಶೈಲಿಯ ಗಾಂಭಿರ್ಯದ ಮೂಲಕ ರಚನಾವಾದವನ್ನು ಬೆಂಗಳೂರು (ಉತ್ತರ ಮತ್ತು ದಕ್ಷಿಣ)ಜಿಲ್ಲೆಯ ಶಿಕ್ಷಕರಿಗೆ ಪರಿಣಾಮಕಾರಿಯಾಗಿ ಡಯಟ್ ಆರ್ .ಆರ್. ನಗರ, ಬೆಂಗಳೂರು, ಇಲ್ಲಿ ತರಬೇತಿಯನ್ನು ನೀಡಿ ಎಲ್ಲಾ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ವಿಜ್ಞಾನ ಎನ್.ಸಿ.ಇ.ಆರ್.ಟಿ ಪಠ್ಯಪುಸ್ತಕ ಭಾಷಾಂತರ ಸಮಿತಿಯ ಸದಸ್ಯರಾಗಿಯೂ ಕರ್ತವ್ಯವನ್ನು ನಿರ್ವಹಿಸಿರುವ ಇವರು, ಶಿಕ್ಷಕರಿಗಾಗಿ ಹಲವು ತರಬೇತಿ ಸಾಹಿತ್ಯ ತಯಾರಿಕೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಲ್ಲದೇ ರಾಜ್ಯದ ಸಂಪನ್ಮೂಲ ಶಿಕ್ಷಕರಿಗೆ ಕೂಡ ತರಬೇತಿಯನ್ನು ನೀಡಿರುತ್ತಾರೆ.

ಬಸವಾನಂದ ಪ್ರಕಾಶ್ ಅವರ ಶಿಕ್ಷಣ ಸೇವೆಗೆ ಸಂದ ಪ್ರಶಸ್ತಿಗಳು ಹಲವಾರು ಅವುಗಳಲ್ಲಿ ಪ್ರಮುಖವಾದವು ಹೀಗವೆ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕೊಡಲ್ಪಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಬಿ.ಬಿ.ಎಂ.ಪಿ ವತಿಯಿಂದ ಕೆಂಪೇಗೌಡ ಪ್ರಶಸ್ತಿ, ರಂಗಸಮುದ್ರ ಪ್ರಶಸ್ತಿ, ಶಿಕ್ಷಣ ಜ್ಯೋತಿ ಪ್ರಶಸ್ತಿ, ಬೆಳ್ಳಿ ದೀಪ ಪ್ರಶಸ್ತಿ, ಕರ್ನಾಟಕ ಶ್ರೇಷ್ಠ ರತ್ನ ಪ್ರಶಸ್ತಿ, ಪ್ರಜ್ಞಾ.ಪೀಠ ಪ್ರಶಸ್ತಿ, ಜನಪ್ರಿಯ ಶಿಕ್ಷಕ ಪ್ರಶಸ್ತಿ, ಗ್ಯಾನಿಜಿ ಪ್ರಶಸ್ತಿ, ನಿವಾರಣ ಪ್ರಶಸ್ತಿ ಶಿಕ್ಷಕರತ್ನ ಪ್ರಶಸ್ತಿ, ಶ್ರೀ ಸಾಯಿ ಸದ್ಭಾವನಾ ಪ್ರಶಸ್ತಿ, ಕನ್ನಡ ರಾಜರಾಜೇಶ್ವರಿ ಪ್ರಶಸ್ತಿ ಇತ್ಯಾದಿ.

ಇಷ್ಟೊಂದು ಅನುಭವವನ್ನು ಹೊಂದಿರುವ ಬಸವಾನಂದ ಪ್ರಕಾಶ್ ಅವರದ್ದು, ಅತ್ಯಂತ ಸರಳ ವ್ಯಕ್ತಿತ್ವ. ನಮ್ಮಂತಹ ಕಿರಿಯ ಶಿಕ್ಷಕರಿಗೆ ಒಬ್ಬ ಒಳ್ಳೆಯ ಸ್ನೇಹಿತ, ಹಾಗೆಯೇ ಉತ್ತಮ ಮಾರ್ಗದರ್ಶಕರೂ ಕೂಡ ಹೌದು. ಇದೇ ರೀತಿ ಮುಂದೆಯೂ ಕೂಡ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಅವರ ಮಾರ್ಗದರ್ಶನ ಸದಾ ದೊರಕಲಿ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಲಿ ಎಂದು ‘ಸವಿಜ್ಞಾ  ತಂಡದ ಎಲ್ಲಾ ಸದಸ್ಯರು ಅವರಿಗೆ ಹಾರೈಸುತ್ತೇವೆ.














6 comments:

  1. ಡಿ ಎಸ್ ಬಿ ಸರ್, ತಮ್ಮ ವೃತ್ತಿ ಮತ್ತು ಪ್ರವೃತ್ತಿಗಳ ಅನುಭವ ಮುಂದಿನ ದಿನಗಳಲ್ಲಿ ಶಿಕ್ಷಕ ಯುವ ಸಮುದಾಯಕ್ಕೆ ದಾರಿದೀಪವಾಗಿರಲಿ. ಪರಿಚಯಿಸಿದ ಶ್ರೀಯುತರಿಗೂ ಧನ್ಯವಾದಗಳು ಸರ್
    ಲೋಕೇಶ್ ನಂಜಯ್ಯ ಅಂಕನಾಥಪುರ
    ಶಿಕ್ಷಕರು. ಪ್ರತೀಕ್ ಟ್ಯುಟೋರಿಯಲ್.
    ಬೆಂಗಳೂರು. ೫೬೦೦೧೯

    ReplyDelete
  2. This comment has been removed by the author.

    ReplyDelete
  3. I fell proud to send my daughter to their tutorial ������

    ReplyDelete
  4. ಉತ್ತಮ ಶಿಕ್ಷಕರಾದ ಬಸವಾನಂದ ಸರ್‌ ಗೆ ಹಾರ್ದಿಕ ಅಭಿನಂದನೆಗಳು, ನಿಮ್ಮ ಸಾಧನೆ ನಮಗೆ ಸ್ಪೂರ್ತಿ, ದಾರಿದೀಪ. ಪರಿಚಯಿಸಿದ್ದಕ್ಕೆ ಧನ್ಯವಾದಗಳು ಸರ್.

    ReplyDelete