Monday, July 4, 2022

ಐನ್‌ಸ್ಟೀನ್‌ರ ಮೆದುಳು ಕಳವಾಗಿತ್ತೇ ?

ಐನ್‌ಸ್ಟೀನ್‌ರ ಮೆದುಳು ಕಳವಾಗಿತ್ತೇ ?

ಲೇಖಕರು : ಸುರೇಶ ಸಂಕೃತಿ

ಗಣಿತವಿಜ್ಞಾನ ಬೋಧಕರು,

ನಂದಾಶ್ರೀ ಹತ್ತಿರಹೊಸಕೋಟೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ



ಮಹಾ ಮೇಧಾವಿ, ಪ್ರಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಮರಣದ ನಂತರ ಅವರ ಮಿದುಳನ್ನು ಕಳವು ಮಾಡಲಾಗಿತ್ತೆ? ವಿಜ್ಞಾನ ಪ್ರಪಂಚದಲ್ಲಿ ಇದೊಂದು ಬಹಳ ಚರ್ಚಿತ ವಿಷಯ. ಅದರ ಬಗ್ಗೆ ವಿವರಣೆ ನೀಡಿದ್ದಾರೆ ಸುರೇಶ್ ಸಂಕೃತಿ ಅವರು, ಈ ಲೇಖನದಲ್ಲಿ.
 ಆಲ್ಬರ್ಟ್ ಐನ್‌ಸ್ಟೀನ್, ಫ್ರಿಟ್ಜ್ ಹೇಬರ್, ನೀಲ್ಸ್ ಬೋರ್, ಮ್ಯಾಕ್ಸ್ ಬಾರ್ನ್, ವುಲ್ಫ್ಗಾಂಗ್ ಪೌಲಿ, ಕಾರ್ಲ್ ಸೆಗಾನ್, ಯೂಜಿನ್ ವೆಗನರ್ ಮುಂತಾದ ಪ್ರಖ್ಯಾತ ವಿಜ್ಞಾನಿಗಳು, ಕಾರ್ಲ್ ಮಾರ್ಕ್ಸ್, ಲಿಯಾನ್ ಟ್ರಾಟಸ್ಕಿ, ಹೆನ್ರಿ ಕಿಸಿಂಜರ್, ಬೆನ್‌ಗುರಿಯನ್, ಸೈಮನ್ ಪೆರೆಸ್, ಯಾಝಾಕ್ ರಬಿನ್, ಬೆಂಜಮಿನ್ ನೇತನ್ಯಾಹು ಮುಂತಾದ ರಾಜಕಾರಣಿಗಳು, ಐಸಾಕ್ ಬಾಷೆವಿಸ್ ಸಿಂಗರ್, ಫ್ರಾಂಜ್ ಕಾಫ್ಕ, ಐಸಾಕ್ ಆಸಿಮೋವ್, ಮುಂತಾದ ಜಗತ್ವಿಖ್ಯಾತ ಸಾಹಿತಿಗಳು-ಬರಹಗಾರರು, ಭಾರತೀಯರೇಆದ ಸಲೀಂ ಎಜೆಕೆಲ್‌ರಂಥ ಕವಿಗಳು, ಜುಬಿನ್ ಮೆಹತಾ ರಂಥ ಸಂಗೀತಗಾರರು, ವಾಗ್ಗೇಯಕಾರರು, ಸಿಗ್ಮಂಡ್ ಫ್ರಾಯ್ಡ್ರಂಥ ಮನೋವಿಜ್ಞಾನಿಗಳು, ಸ್ಟೀವನ್ ಸ್ಪಿಯೆಲ್ಬರ್ಗ್, ಹ್ಯಾರಿಸನ್ ಫೋರ್ಡ್, ವುಡಿಅಲೆನ್ ಮುಂತಾದ ನಿರ್ದೇಶಕ ಮತ್ತು ನಟರು, ವನ್ ನ್ಯೂಮನ್‌ನಿಂದ ಆರಂಭಿಸಿ ಜಾನ್‌ಡೆಲ್, ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್ಬರ್ಗ್ ಮುಂತಾದ ಕಂಪ್ಯೂಟರ್ ಮತ್ತು ಮಾಹಿತಿ ಜಗತ್ತಿನ ದಿಗ್ಗಜರು.. ಹೀಗೆ ಲಕ್ಷ ಲಕ್ಷ ಜನ ಯಹೂದ್ಯರು ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ. ಜಗತ್ತಿನಲ್ಲಿ ಹೆಚ್ಚು ಎಂದರೆ ಸುಮಾರು ೨೦ ಮಿಲಿಯನ್ ಯಹೂದ್ಯರಿದ್ದಾರೆ. ನಮ್ಮ ಕರ್ನಾಟಕದ ಜನಸಂಖ್ಯೆಯ ಮೂರನೆಯ ಒಂದು ಭಾಗ, ಜಗತ್ತಿನ ಜನಸಂಖ್ಯೆಗೆ ಹೋಲಿಸಿದರೆ ಇದು ಅತ್ಯಲ್ಪ. ಆದರೆ, ಈ ಸಣ್ಣ ಸಮುದಾಯದ ಕೊಡುಗೆ ಅದೆಷ್ಟು ದೊಡ್ಡದು? ರಸಾಯನಶಾಸ್ತ್ರಕ್ಕೆ ೩೫, ವೈದ್ಯಕೀಯ ಶಾಸ್ತ್ರಕ್ಕೆ ಮತ್ತು ಭೌತಶಾಸ್ತ್ರಕ್ಕೆ ತಲಾ ೫೪, ಸಾಹಿತ್ಯಕ್ಕೆ ೧೫, ಅರ್ಥಶಾಸ್ತ್ರಕ್ಕೆ ೨೯, ವಿಶ್ವಶಾಂತಿಗೆ ೯, ಹೀಗೆ ಈವರೆಗೆ ನೀಡಲಾಗಿರುವ ನೊಬೆಲ್ ಬಹುಮಾನಗಳಲ್ಲಿ ಹತ್ತಿರ ಹತ್ತಿರ ೨೦೦ ನೊಬೆಲ್ ಬಹುಮಾನಗಳನ್ನು ಈ ಸಮುದಾಯದವರೇ ಗಳಿಸಿದ್ದಾರೆ. ಅಂದರೆ, ಒಂದು ಲಕ್ಷಕ್ಕೆ ಒಬ್ಬರಂತೆ ನೊಬೆಲ್ ಪ್ರಶಸ್ತಿ ವಿಜೇತರು ! ಇದು ಒಂದು ಅದ್ಭುತ ಮತ್ತು ಆಶ್ಚರ್ಯದ ಸಂಗತಿಯಲ್ಲವೇ?

ಹೀಗೆ, ಒಂದು ನಿರ್ದಿಷ್ಟ ಜನಾಂಗ ಉಳಿದವರಿಗಿಂತ ಸಾಧನೆಯಲ್ಲಿ ಶ್ರೇಷ್ಟತೆಯನ್ನು ಸಾಧಿಸುತ್ತದೆ ಎಂದರೆ ಅದಕ್ಕೆ ಕಾರಣ ಅವರ ಶಿಸ್ತುಬದ್ದ ಜೀವನವೇ? ವಂಶವಾಹಿನಿಯಲ್ಲಿ ಹರಿದು ಬಂದ ಬುದ್ಧಿಮತ್ತೆಯೇ? ಮೆದುಳಿನ ಅಸಾಧಾರಣ ಸಾಮರ್ಥ್ಯವೇ? ಆ ಅಸಾಧಾರಣ ಸಾಮರ್ಥ್ಯಕ್ಕೆ ಕಾರಣವಾದ ಮೆದುಳಿನ ರಚನೆಯೇ? ಏನು ಕಾರಣವಿರಬಹುದು ? ಇಲ್ಲಿ ಒಂದು ಜನಾಂಗ ಮೇಲು ಮತ್ತೊಂದು ಜನಾಂಗ ಕೀಳು ಎಂಬ ದುಷ್ಟ ಪೂರ್ವಾಗ್ರಹಕ್ಕಿಂತ, ಒಂದು ವೈಜ್ಞಾನಿಕ ಸಂಶೋಧನೆಯು ಮತ್ತು ಅದರ ಫಲಿತಾಂಶವು ಮುಂದಿನ ದಿನಗಳಲ್ಲಿ ಮಾನವ ಕುಲಕ್ಕೆ ಲಾಭದಾಯಕ ಆಗುವುದಾದರೆ ಅಂಥ ಅಸಾಧಾರಣ ಸಾಧಕರ ಮೆದುಳಿನ ವೈಜ್ಞಾನಿಕ ಸಂಶೋಧನೆಯು ಅಗತ್ಯ ಎನಿಸುವುದಲ್ಲವೇ? ಅಂಥ ಒಂದು ದುಸ್ಸಾಹಸದ ಸಂಶೊಧನೆಯ ಸತ್ಯಕತೆಯೊಂದನ್ನು ಈಗ ನೋಡೋಣ.

ಆಲ್ಬರ್ಟ್ ಐನ್‌ಸ್ಟೀನ್ ದ್ಯುತಿವಿದ್ಯುತ್ ಪರಿಣಾಮ, ವಿಶೇಷ ಸಾಪೇಕ್ಷ ಸಿದ್ಧಾಂತ, ಹಾಗೂ ಸಾಮಾನ್ಯ ಸಾಪೇಕ್ಷ ಸಿದ್ಧಾಂತಗಳನ್ನು ಪ್ರತಿಪಾದಿಸಿದ ಮಹಾನ್ ಮೇಧಾವಿ. ಕೆಲವು ವಸ್ತುಗಳ ಮೇಲೆ ಬೆಳಕು ಬಿದ್ದಾಗ, ಅವುಗಳ ಮೇಲ್ಮೈಯಲ್ಲಿ ವಿದ್ಯುತ್ ಪ್ರವಾಹ ಉಂಟಾಗುವ ವಿದ್ಯಮಾನವನ್ನು ದ್ಯುತಿ ವಿದ್ಯುತ್ ಪರಿಣಾಮ ಎಂದು ಕರೆಯಲಾಗುತ್ತದೆ. ಇಂದಿನ ದಿನಗಳಲ್ಲಿ ಟಿ.ವಿ. ರಿಮೋಟ್ ಕಂಟ್ರೋಲ್, ಸೌರವಿದ್ಯುತ್ ಉತ್ಪಾದಿಸುವ ಸೌರಕೋಶಗಳು, ಡಿಜಿಟಲ್ ಸ್ಟಿಲ್ ಮತ್ತು ವೀಡಿಯೋ ಕ್ಯಾಮರಾಗಳು, ಮುಂತಾದ ಸಾಧನಗಳಲ್ಲಿ ದ್ಯುತಿ ನಾರುಗಳನ್ನು ಬಳಸಿ ಅಂತರ್ಜಾಲ ಸಂಪರ್ಕ ಕಲ್ಪಿಸುವಲ್ಲಿ ಮತ್ತು ಇಂದು ವ್ಯಾಪಕವಾಗಿ ಬಳಸುತ್ತಿರುವ ಎಲೆಕ್ಟ್ರಾನಿಕ್ ಸೆನ್ಸರ್‌ಗಳಲ್ಲಿ ಈ ತತ್ವದ ಅನ್ವಯವಿದೆ. ದ್ಯುತಿವಿದ್ಯುತ್ ಪರಿಣಾಮವನ್ನು ವ್ಯವಸ್ಥಿತವಾಗಿ ವಿವರಿಸಿದ್ದಕ್ಕಾಗಿ ಅವರಿಗೆ ೧೯೨೧ರಲ್ಲಿ ನೋಬೆಲ್ ಬಹುಮಾನ ನೀಡಿ ಗೌರವಿಸಲಾಯಿತು.

ರಾಶಿ, ಕಾಲ ಮತ್ತು ಅವಕಾಶ, ಇವುಗಳ ಮೇಲೆ ವೇಗವು ಬೀರುವ ಪರಿಣಾಮವನ್ನು ವಿವರಿಸುವ ವಿಶೇಷ ಸಾಪೇಕ್ಷ ಸಿದ್ಧಾಂತವು ಐನಸ್ಟೀನ್ ಅವರ ಮಹತ್ತರ ಕೊಡುಗೆ ಎಂದೇ ಪರಿಗಣಿಸಲಾಗುವ E= mc2 ಸೂತ್ರದ ಮೂಲ. ರಾಶಿಯನ್ನು ಚೈತನ್ಯವಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ವಿವರಿಸುವ ಈ ಸೂತ್ರ ಪರಮಾಣು ಶಕ್ತಿಯ ಉತ್ಪಾದನೆಗೆ ನಾಂದಿ ಹಾಡಿತು.

ಸಾಮಾನ್ಯ ಸಾಪೇಕ್ಷ ಸಿದ್ಧಾಂತವು, ಕಾಲ ಮತ್ತು ಅವಕಾಶಗಳ ಮುದುಡುವಿಕೆಯೇ ರಾಶಿಗಳ ನಡುವಿನ ಗುರುತ್ವಕ್ಕೆ ಕಾರಣ ಎಂದು ಪ್ರತಿಪಾದಿಸುತ್ತದೆ. ನ್ಯೂಟನ್ ಪ್ರತಿಪಾದಿಸಿದ್ದ ಗುರುತ್ವಾಕರ್ಷಣೆ ಸಿದ್ಧಾಂತಕ್ಕೆ ಸಾಮಾನ್ಯ ಸಾಪೇಕ್ಷ ಸಿದ್ಧಾಂತವು ಸವಾಲು ಎಂದು ಭಾವಿಸಲಾಯಿತಾದರೂ, ವಾಸ್ತವವಾಗಿ ಅದರ ಮುಂದುವರೆದ ಭಾಗವಾಗಿತ್ತು. ಕಪ್ಪು ಕುಳಿಗಳನ್ನು (Black Holes) ನ್ಯೂಟನ್‌ನ ಗುರುತ್ವ ಸಿದ್ಧಾಂತದ ಆಧಾರದ ಮೇಲೆ ವಿವರಿಸಲು ಸಾಧ್ಯವಾಗದಿದ್ದಾಗ, ಸಹಾಯಕ್ಕೆ ಬಂದದ್ದು ಐನ್‌ಸ್ಟೀನ್‌ರ ವಿಶೇಷ ಸಾಪೇಕ್ಷ ಸಿದ್ಧಾಂತ. ಈ ಸಿದ್ಧಾಂತದ ಪ್ರಕಾರ, ಗುರುತ್ವದ ಪ್ರಭಾವದಲ್ಲಿ ಕಾಲ ಮತ್ತು ಅವಕಾಶಗಳು ಎರಡೂ ಮುದುಡಿ, ಬಾಗುವುದರಿಂದ ಹೆಚ್ಚು ರಾಶಿಯಿರುವ ಆಕಾಶಕಾಯದ ಕಡೆಗೆ ಇತರೆ ಕಾಯಗಳು ಸೆಳೆಯಲ್ಪಡುತ್ತವೆ.

ಐನ್‌ಸ್ಟೀನ್ ಜನಿಸಿದ್ದು ಜರ್ಮನಿಯ ಉಲ್ಮ್ ನಗರದಲ್ಲಿ ೧೪ ಮಾರ್ಚ್ ೧೮೭೯ರಲ್ಲಿ. .ಚಿಕ್ಕ ವಯಸ್ಸಿನಲ್ಲಿ ಅಂಥಾ ಪ್ರತಿಭಾನ್ವಿತ ವಿದ್ಯಾರ್ಥಿಯಲ್ಲದಿದ್ದರೂ, ಓದಿನಲ್ಲಿ ಹಿಂದೆ ಬಿದ್ದಿರಲಿಲ್ಲ. ವಿದ್ಯಾರ್ಜನೆ ಮುಗಿಸಿದ ಮೇಲೆ ಪೇಟೆಂಟ್ ಕಛೇರಿಯಲ್ಲಿ ಗುಮಾಸ್ತನ ಕೆಲಸಕ್ಕೆ ಸೇರಿದ ಐನಸ್ಟೀನ್ ಅಲ್ಲಿ ಕೆಲಸ ಮಾಡುತ್ತಲೇ ತಮ್ಮ ಜ್ಞಾನರ್ಜನೆ ಮತ್ತು ಸಂಶೋಧನೆಯನ್ನು ಮುಂದುವರೆಸಿ ವಿಶ್ವದ ಪ್ರಖ್ಯಾತ ವಿಜ್ಞಾನ ಪತ್ರಿಕೆಗಳಲ್ಲಿ ತಮ್ಮ ಬರಹಗಳು ಪ್ರಕಟಿಸುತ್ತಾ ಬಂದರು. ಕಾಲಾಂತರದಲ್ಲಿ ಬರ್ನ್, ಜ್ಯೂರಿಚ್, ಪ್ರೇಗ್ ವಿಶ್ವವಿದ್ಯಾಲಯಗಳಂಥ ಪ್ರತಿಷ್ಟಿತ ಸಂಸ್ಥೆಗಳು ಐನಸ್ಟೀನ್‌ರನ್ನು ತಮ್ಮಲ್ಲಿಗೆ ಆಹ್ವಾನಿಸಿದವು. ೧೯೧೪ರಿಂದ ಆರಂಭಿಸಿ, ನಾಝಿಗಳು ಆಡಳಿತಕ್ಕೆ ಬರುವವರೆಗೂ ಬರ್ಲಿನ್ ವಿಶ್ವವಿದ್ಯಾಲಯದಲ್ಲಿತಮ್ಮ ಬೋಧನೆ ಮತ್ತು ಸಂಶೋಧನೆಯನ್ನು ಮುಂದುವರೆಸಿದರು. ಕೊನೆಗೆ, ಅನಿವಾರ್ಯವಾಗಿ ಅಮೇರಿಕಾಗೆ ವಲಸೆ ಹೋಗಬೇಕಾಗಿ ಬಂದಿತ್ತು. ಅಮೇರಿಕಾಕ್ಕೆ ಬಂದು ನೆಲಸಿದ ಮೇಲೆ ತಮ್ಮ ಸಂಶೋಧನೆಯನ್ನು ಮುಂದುವರೆಸುತ್ತಾ, ಅಲ್ಲಿನ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.

ಐನಸ್ಟೀನ್ ಕೊನೆಗಾಲದಲ್ಲಿ ತಮ್ಮ ಸಾವಿನ ನಂತರ ಅಂತ್ಯ ಸಂಸ್ಕಾರವನ್ನು ಹೇಗೆ ಮಾಡಬೇಕೆಂಬುದನ್ನು ಆತ್ಮೀಯರಲ್ಲಿ ನಿವೇದಿಸಿಕೊಂಡಿದ್ದರು. ತಮ್ಮ ದೇಹವನ್ನು ದಹನ ಮಾಡಿದ ನಂತರ, ಉಳಿದ ಭಸ್ಮವನ್ನು ಯಾರಿಗೂ ಗೊತ್ತಾಗದಂತೆ ಮತ್ತು ಪತ್ತೆಯಾಗದಂತೆ ನೆಲದಲ್ಲಿ ದೂರ ದೂರದವರೆಗೆ ಹರಡಿಬಿಡಬೇಕು ಎಂದು ಬಯಸಿದ್ದರು. ಐನಸ್ಟೀನ್‌ರಿಗೆ ಸಾವಿನ ನಂತರ ತಮ್ಮ ದೇಹವನ್ನು ವಿಶೇಷವೆಂದು ಪರಿಗಣಿಸಿ ಪರೀಕ್ಷಿಸುವುದು, ಸಂಶೋಧನೆಗೆ ಒಳಪಡಿಸುವುದು ಅಥವಾ ಸ್ಮಾರಕವಾಗಿಸುವುದು, ಇದಾವುದೂ ಇಷ್ಟವಿರಲಿಲ್ಲ.

ಮರಣಶಯ್ಯೆಯಲ್ಲಿದ್ದರೂ ತಮ್ಮ ಸಂಶೋಧನೆಯ ಬಗ್ಗೆಯೇ ಸದಾ ಮಾತನಾಡುತ್ತಿದ್ದ, ಅದರ ಬಗ್ಗೆಯೇ ಚಿಂತಿಸುತ್ತಿದ್ದ ಐನ್‌ಸ್ಟೀನ್ ೧೯೫೫ರ ಏಪ್ರಿಲ್ ೧೮ರಂದು ಪ್ರಿನ್ಸ್ಟನ್ನಿನ ಆಸ್ಪತ್ರೆಯಲ್ಲಿ ಅಸುನೀಗಿದರು. ಪ್ರಾಣ ಬಿಡುವ ಸಮಯದಲ್ಲಿ ಐನ್‌ಸ್ಟೀನ್ ಜರ್ಮನ್ ಭಾಷೆಯಲ್ಲಿ ಅದೇನೋ ತೊದಲುತ್ತಾ ಹೇಳಿ ಕಣ್ಮುಚ್ಚಿದರು. ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ದಾದಿಗೆ ದುರದೃಷ್ಟವಶಾತ್ ಜರ್ಮನ್ ಭಾಷೆ ಅರ್ಥವಾಗದೆ ಹೋಗಿತ್ತು. ಹೀಗಾಗಿ, ಕೊನೆ ಕೊನೆಯಲ್ಲಿ ಮಹಾನ್ ವಿಜ್ಞಾನಿ ಏನನ್ನು ತಿಳಿಸ ಬಯಸಿದ್ದರು, ಅದು ವೈಜ್ಞಾನಿಕ ಸೂತ್ರವೇ, ಸಿದ್ಧಾಂತವೇ, ಆಧ್ಯಾತ್ಮವೇ, ಆತ್ಮಾನುಸಂಧಾನವೇ? ಎಂಬುದು ರಹಸ್ಯವಾಗಿಯೇ ಉಳಿದುಹೋಯಿತು. ಮರಣಾನಂತರ ಅವರ ಪಾರ್ಥಿವ ಶರೀರವನ್ನು ಅವರ ಆತ್ಮೀಯರ ಸಮ್ಮುಖದಲ್ಲಿ ನ್ಯೂಜರ್ಸಿಯಲ್ಲಿ ವಿದ್ಯುತ್‌ಚಿತಾಗಾರದಲ್ಲಿ ದಹನ ಮಾಡಲಾಯ್ತು. ಐನ್‌ಸ್ಟೀನ್‌ರ ಮಗ ಹ್ಯಾನ್ಸ್ ಆಲ್ಬರ್ಟ್ ಮಾರನೆಯ ದಿನದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಒಂದು ಆಶ್ಚರ್ಯಭರಿತ ವರದಿಯನ್ನು ನೋಡಿ ಚಿಂತಾಕ್ರಾಂತರಾದರು ಹಾಗೂ ರೋಷಗೊಂಡರು. ಕಾರಣವಿಷ್ಟೆ, ಶವಪೆಟ್ಟಿಗೆಯಲ್ಲಿದ್ದ ಐನ್‌ಸ್ಟೀನ್‌ರ ದೇಹದ ಬಹಳ ಪ್ರಮುಖವಾದ ಅಂಗವೊAದು ಶವಸಂಸ್ಕಾರಕ್ಕೆ ಮೊದಲೇ ಕಳ್ಳತನವಾಗಿತ್ತು ಎಂದು ಆ ಪತ್ರಿಕೆಯಲ್ಲಿ ವರದಿಯಾಗಿತ್ತು.

ಪ್ರಿನ್ಸಟನ್ ಆಸ್ಪತ್ರೆಯಲ್ಲಿ ಐನಸ್ಟೀನ್ ನಿಧನರಾದ ನಂತರ ಅವರ ಶವಪರೀಕ್ಷೆಗೆಂದೇ ಕರೆಸಲಾಗಿದ್ದ ಥಾಮಸ್ ಹಾರ್ವೆ ಎಂಬ ವೈದ್ಯ ಶವಪರೀಕ್ಷೆ ಮಾಡುತ್ತಾನೆ. ಶುದ್ಧರಕ್ತವನ್ನು ಹೃದಯದಿಂದ ದೇಹದ ವಿವಿಧ ಭಾಗಗಳಿಗೆ ಕೊಂಡೊಯ್ಯವ ಮಹಾ ಅಪಧಮನಿ(ಅಯೋರ್ಟ) ಹಾಳಾಗಿದ್ದೇ ಅವರ ಸಾವಿಗೆ ಕಾರಣ ಎಂಬುದನ್ನು ಅತ್ಯಂತ ನಿಖರವಾಗಿ ಪತ್ತೆ ಮಾಡುತ್ತಾನೆ. ಅಷ್ಟೇ ಆಗಿದ್ದರೆ ಏನೂ ಸಮಸ್ಯೆ ಆಗುತ್ತಿರಲಿಲ್ಲ. ತಲೆಯ ಭಾಗವನ್ನು ಪರೀಕ್ಷೆ ಮಾಡುವ ನೆಪದಲ್ಲಿ ಐನ್‌ಸ್ಟೀನ್‌ರ ಮೆದುಳನ್ನು ಯಾರಿಗೂ ಗೊತ್ತಾಗದ ಹಾಗೆ ಪ್ರತ್ಯೇಕಿಸಿ ತೆಗೆದಿರಿಸಿಕೊಂಡು, ಏನೂ ಆಗಿಲ್ಲವೆಂಬಂತೆ ಶವ ಪರೀಕ್ಷೆಯ ವಿಧಿ ವಿಧಾನಗಳನ್ನು ಮುಗಿಸಿ, ಶವವನ್ನು ಪೆಟ್ಟಿಗೆಯಲ್ಲಿರಿಸಿ ವಾರಸುದಾರರಿಗೆ ಒಪ್ಪಿಸುತ್ತಾನೆ.

ಈ ಕಳ್ಳತನ ಬಹಿರಂಗವಾಗುತ್ತಿದ್ದAತೆ ಮೆದುಳಿಲ್ಲದ ಐನ್‌ಸ್ಟೀನರ ಶವಕ್ಕೆ ಅಂತಿಮ ಸಂಸ್ಕಾರದ ವಿದಿ üವಿಧಾನಗಳನ್ನು ನೆರೆವೇರಿಸಲಾಯಿತು ಎಂಬ ವ್ಯಾಕುಲತೆ ಕುಟುಂಬದವರಿಗೂ, ಆತ್ಮೀಯರಿಗೂ ಆವರಿಸುತ್ತದೆ. ಕೊನೆಗೆ, ವೈಜ್ಞಾನಿಕ ಸಂಶೋಧನೆಗಾಗಿ ಮೆದುಳಿನ ಕಳ್ಳತನ ಮಾಡಿದೆ ಎಂದು ತನ್ನ ತಪ್ಪನ್ನು ಹಾರ್ವೆ ಒಪ್ಪಿಕೊಂಡಾಗ, ಐನ್‌ಸ್ಟೀನ್‌ರ ಮಗ ಹಾನ್ಸ್ ಆಲ್ಬರ್ಟ್, ಹಾರ್ವೆಯನ್ನೂ, ಅವನ ಕೃತ್ಯವನ್ನೂ ಕ್ಷಮಿಸುತ್ತಾನೆ.

ಐನ್‌ಸ್ಟೀನ್‌ರ ಮೆದುಳನ್ನು ತೆಗೆದಿರಿಸಿಕೊಂಡ ಹಾರ್ವೆಗೆ ಅದನ್ನು ಸಂಶೋಧನೆಗೆ ಒಳಪಡಿಸಿ ಕೀರ್ತಿ ಪಡೆಯಬೇಕೆಂಬ ಆಸೆ ಇದ್ದಿತ್ತೇನೋ, ಗೊತ್ತಿಲ್ಲ. ಆದರೆ, ಅದು ಹಾರ್ವೆಗೆ ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದAತೆ ಕಾಡತೊಡಗಿತು. ಇದಾದ ಕೆಲವೇ ದಿನಗಳಲ್ಲಿ ಹಾರ್ವೆಯು ಪ್ರಿನ್ಸಿಟನ್ ಆಸ್ಪತ್ರೆಯಲ್ಲಿನ ತನ್ನ ಉದ್ಯೋಗವನ್ನು ಕಳೆದುಕೊಳ್ಳಬೇಕಾಯಿತು. ವಿಧಿಯಿಲ್ಲದೆ, ಹಾರ್ವೆಯು ಫಿಲಿಡೆಲ್ಫಿಯಾಗೆ ವಲಸೆ ಹೋಗುತ್ತಾನೆ. ಅಲ್ಲಿಗೆ ಹೋದ ನಂತರ, ಐನ್‌ಸ್ಟೀನ್‌ರ ಮೆದಳನ್ನು ಅವನು ಇನ್ನೂರನಲವತ್ತು ಭಾಗಗಳಾಗಿ ಮಾಡಿ, ಎರಡು ಜಾಡಿಗಳಲ್ಲಿ ಸೆಲ್ಯುಲಾಯ್ಡಿನ್ ಎಂದು ಕರೆಯಲಾಗುವ ರಬ್ಬರಿನಂತಿರುವ ಸೆಲ್ಯೂಲೋಸ್ ನಲ್ಲಿ ಸಂರಕ್ಷಿಸಿ ಇಡುತ್ತಾನೆ. ಮನೆಯ ನೆಲಮಾಳಿಗೆಯಲ್ಲಿ ಇಟ್ಟಿದ್ದ ಈ ಜಾಡಿಗಳನ್ನು ಅದರಲ್ಲಿರುವ ಮೆದುಳಿನ ಭಾಗಗಳ ಜೊತೆಗೆ ಹೊರೆಗೆಸೆಯುತ್ತೇನೆ ಎಂದು ಹಾರ್ವೆಯ ಹೆಂಡತಿ ರಂಪ ಮಾಡುತ್ತಾಳೆ. ತನ್ನ ಹೆಂಡತಿಯ ಅವಿವೇಕದಿಂದ ಅತ್ಯಂತ ಅಮೂಲ್ಯವಾದ ವಸ್ತುವೊಂದು ಬೀದಿ ಪಾಲಾಗಿಬಿಡಬಹುದು ಎಂಬ ಭಯದಲ್ಲಿ ಕುಟುಂಬವನ್ನು ಮತ್ತು ಎಲ್ಲವನ್ನೂ ಬಿಟ್ಟು ಮೆದುಳಿದ್ದ ಜಾಡಿಗಳೊಂದಿಗೆ ಅಮೇರಿಕಾದ ಮಧ್ಯಪಶ್ಚಿಮ ಪ್ರಾಂತ್ಯವಾದ ಮಿಡ್‌ವೆಸ್ಟ್ಗೆ ಹಾರ್ವೆ ಪಲಾಯನ ಮಾಡುತ್ತಾನೆ. ಕೆಲಕಾಲ ಕನ್ಸಾಸಿನ ವಿಚಿಟಾದಲ್ಲಿ ವೈದ್ಯಕೀಯ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಾನೆ. ನಂತರ, ಅಲ್ಲಿಂದ ಹೊರಟು ಮಿಸ್ಸೌರಿಯ ವೆಸ್ಟನ್‌ನಲ್ಲಿ ನೆಲಸಿ ವೈದ್ಯನಾಗಿ ಪ್ರಾಕ್ಟೀಸ್ ಮಾಡುತ್ತಾ, ಬಿಡುವಿನ ಹೆಚ್ಚಿನ ವೇಳೆಯನ್ನು ಐನ್‌ಸ್ಟೀನ್‌ರ ಮೆದುಳನ್ನು ಸಂಶೋಧನೆ ಮಾಡುವುದರಲ್ಲಿಯೇ ಕಳೆಯುತ್ತಾನೆ. ಈ ಮಧ್ಯೆ, ಹೊಡೆತದ ಮೇಲೆಯೇ ಹೊಡೆತ ಎಂಬಂತೆ ಸರಕಾರ ನಡೆಸುವ ಸಾಮರ್ಥ್ಯ ಪರೀಕ್ಷೆಯಲ್ಲಿ ನಪಾಸಾದ್ದರಿಂದ ಅವನ ವೈದ್ಯಕೀಯ ಲೈಸೆನ್ಸನ್ನು ಸರಕಾರ ೧೯೮೮ರಲ್ಲಿ ರದ್ದುಪಡಿಸುತ್ತದೆ. ವಿಧಿಯಿಲ್ಲದೇ ಹಾರ್ವೆ ಹೊಟ್ಟೆಯ ಪಾಡಿಗಾಗಿ ಕನ್ಸಾಸಿನ ಲಾರೆನ್ಸ್ಗೆ ಬಂದು, ಒಂದು ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ದಿನಗೂಲಿಯಾಗಿ ಕೆಲಸಕ್ಕೆ ಸೇರಬೇಕಾಗುತ್ತದೆ. ಅಲ್ಲಿಯೂ ಹೆಚ್ಚಿನ ಕಾಲ ನೆಲೆ ನಿಲ್ಲಲಾಗದೇ, ಅಲ್ಲಿಂದ ಮಿಸ್ಸೌರಿಯ ಟಿಟುಸ್ವಿಲ್ಲೆಗೆ ಬಂದು ನೆಲಸುತ್ತಾನೆ. ಈ ಮಧ್ಯೆ ಐನ್‌ಸ್ಟೀನ್‌ರ ಮೆದುಳಿನ ಭಾಗಗಳನ್ನು ಪರೀಕ್ಷಿಸಲು ಅನೇಕ ಸಂಶೋಧಕರಿಗೆ ವಿತರಿಸುತ್ತಾ ಬಂದಿರುತ್ತಾನೆ. ಕೊನೆಗೆ ತನ್ನ ಬಳಿ ಕತ್ತರಿಸದೇ ಉಳಿದುಕೊಂಡಿದ್ದ ಭಾಗವನ್ನು ಪ್ರಿನ್ಸಟನ್ ವಿಶ್ವವಿದ್ಯಾಯಲದ ವೈದ್ಯಕೀಯ ಕೇಂದ್ರಕ್ಕೆ ಸಂಶೋಧನೆಗೆ ಒಪ್ಪಿಸುತ್ತಾನೆ. ೨೦೦೭ರ ಏಪ್ರಿಲ್ ೭ರಂದು ಥಾಮಸ್ ಹಾರ್ವೆ ಅದೇ ವೈದ್ಯಕೀಯ ಕೇಂದ್ರದಲ್ಲಿ ಕೊನೆಯುಸಿರೆಳೆಯುತ್ತಾನೆ. ಅವನ ಮರಣಾನಂತರ ಅವನ ಎಲ್ಲಾ ಆಸ್ತಿ ಮತ್ತು ಉಳಿದಿದ್ದ ಐನ್ ಸ್ಟೀನರ ಮೆದುಳನ್ನೂ ಸಹ ಅವನ ವಾರಸುಧಾರರು ವೈದ್ಯಕಿಯ ಸಂಶೋಧನೆಗೆ ದಾನ ಮಾಡುತ್ತಾರೆ. ೧೯೫೫ರ ಸುಮಾರಿನಲ್ಲಿ ಹಾರ್ವೆಯು ಐನ್‌ಸ್ಟೀನ್‌ರ ಮೆದುಳನ್ನು ಅವರ ಹಿತೈಷಿಗಳ ಒಪ್ಪಿಗೆ ಮತ್ತು ಬೆಂಬಲದೊAದಿಗೆ ಸಂಶೋಧನೆಗೆ ಒಳಪಡಿಸಿದ್ದನು. ಅವರ ಮೆದುಳಿನ ತೂಕವು ಸಾಮಾನ್ಯರ ಮೆದುಳಿಗಿಂತ ಕಡಿಮೆ, ಅಂದರೆ ೧,೨೩೦ ಗ್ರಾಂ ಇದ್ದು ಸಾಮಾನ್ಯರ ಮೆದುಳಿನಂತೆಯೇ ಇದೆ ಎಂದು ಕಂಡುಕೊAಡಿದ್ದನು. ಅದನ್ನು ೨೦೦ ಸ್ಲೈಡುಗಳ. ೧೨ ಸೆಟ್ಟುಗಳಾಗಿ ವಿಂಗಡಿಸಿದ್ದನು. ಮೆದುಳಿನ ಭಾಗಗಳ ಅನೇಕ ಭಾವಚಿತ್ರಗಳನ್ನು ತೆಗೆದಿದ್ದನು. ಆದರೂ. ತನ್ನ ಜೀವಿತಾವಧಿಯಲ್ಲಿ ಇದಕ್ಕೆ ಸಂಬAಧಿಸಿದ ಒಂದಾದರೂ ಸಂಶೋಧನಾ ಪ್ರಬಂಧವನ್ನು ಸಿದ್ದಪಡಿಸಿರಿಲಿಲ್ಲ.

ಇಷ್ಟಾಗಿ, ರೋಗಕ್ಕೆ ಕಾರಣ ಪತ್ತೆ ಮಾಡಿ ಔಷಧಿಯನ್ನು ನೀಡುವ, ಗಾಯಕ್ಕೆ ಚಿಕಿತ್ಸೆ ನೀಡುವ, ಹೆಚ್ಚೆಂದರೆ ಶವಪರೀಕ್ಷೆ ಮಾಡಲು ಮಾತ್ರ ಗೊತ್ತಿದ್ದ ಸಾಮಾನ್ಯ ವೈದ್ಯನಾಗಿದ್ದ ಥಾಮಸ್ ಹಾರ್ವೆ ತನ್ನ ಸಾಮರ್ಥ್ಯಕ್ಕೆ ಮೀರಿದ ಸಂಶೋಧನೆಗೆAದು ಐನ್‌ಸ್ಟೀನರ ಮೆದುಳನ್ನು ಏಕೆ ಕದ್ದ ? ಇದು ಯಾರಿಗೂ ಅರ್ಥವಾಗದ ಸಂಗತಿ. ಲೆನಿನನ ಮೆದುಳನ್ನು ಅಸ್ಕರ್ ವೊಗ್ತ್ ಎಂಬಾತ ಅಧ್ಯಯನ ನಡೆಸಿದ್ದು ಅವನಿಗೆ ಸ್ಪೂರ್ತಿಯಾಗಿರಬಹುದೇ? ಐನ್‌ಸ್ಟೀನರ ಅಸಾಧಾರಣವಾದ ಸಂಶೋಧನೆಗಳಿಗೆ ಕಾರಣವಾದ ಬುದ್ಧಿಮತ್ತೆ ಮತ್ತು ಮೆದುಳಿನ ನಿಗೂಡತೆಯನ್ನು ಪತ್ತೆ ಹಚ್ಚುª ಕಾರಣ ಇರಬಹುದೇ?. ಐನ್‌ಸ್ಟೀನರ ಖಾಸಗಿ ವೈದ್ಯ ಹಾಗು ಥಾಮಸ್ ಹಾರ್ವೆಯ ಮೆಂಟರ್ ಆಗಿದ್ದ ಹ್ಯಾರಿ ಜಿಮ್ಮರ್‌ಮನ್‌ನ ಪ್ರೇರೇಪಣೆಯೋ ? ಇದಕ್ಕೆ ಉತ್ತರವಂತೂ ಐನ್‌ಸ್ಟೀನ್‌ನ ಮೆದುಳಿಗಿಂತ ನಿಗೂಡವಾದ ವಿಚಾರ. ಹೀಗೆ, ‘ಏನಕೇನ ಪ್ರಕರಣೇ’ ಎಂಬ ಮಾತಿನಂತೆ ಸಾಮಾನ್ಯ ವೈದ್ಯನಾಗಿದ್ದ ಥಾಮಸ್ ಹಾರ್ವೆ ವೈದ್ಯಕೀಯ ಸಂಶೋಧನ ಲೋಕದಲ್ಲಿ ಪ್ರಸಿದ್ಧ ವ್ಯಕ್ತಿಯಾಗಿ ಉಳಿದುಬಿಟ್ಟಿದ್ದಾನೆ !.

ಐನಸ್ಟೀನರ ಮೆದುಳನ್ನು ಅಧ್ಯಯನ ನಡೆಸಿದ ಪ್ರಿನ್ಸಟನ್ ವಿಶ್ವವಿದ್ಯಾಯಲದ ವೈದ್ಯಕೀಯ ಕೇಂದ್ರದ ಸಂಶೋಧಕರು ಕಂಡುಕೊಂಡ ಸತ್ಯಾಂಶವೆಂದರೆ, ಅದರ ಕೆಲವು ಭಾಗಗಳಲ್ಲಿ ಗ್ಲಿಯ ಕೋಶಗಳು ಸಾಮಾನ್ಯರಿಗಿಂತ ಹೆಚ್ಚಿನ ಪ್ರಮಾಣದಲ್ಲಿದ್ದದ್ದು. ಹಲವಾರು ಕಡೆ ಹಂಚಿ ಹೋಗಿರುವ ಐನ್‌ಸ್ಟೀನರ ಮೆದುಳು ಸಂಶೋಧನೆಗಾಗಿ ಸಮಗ್ರವಾಗಿ ಸಿಗದಿರುವುದರಿಂದ, ಆಸಕ್ತ ಸಂಶೋಧಕರು ಥಾಮಸ್ ಹಾರ್ವೆ ತೆಗೆದಿಟ್ಟುಕೊಂಡಿದ್ದ ಐನಸ್ಟೀನರ ಮೆದುಳಿನ ಭಾಗಗಳ ಭಾವಚಿತ್ರಗಳನ್ನು ವಿಶ್ಲೇಷಿಸಿ ತಮ್ಮ ಸಿದ್ಧಾಂತಗಳನ್ನು ಮಂಡಿಸಿ ತೃಪ್ತಿ ಪಡುವುದಕ್ಕೆ ಸೀಮಿತವಾಗಿದೆ. ಹೀಗಾಗಿ, ಈ ಸಿದ್ದಾಂತಗಳು ವಿವಾದಕ್ಕೆ ಕಾರಣವೂ ಆಗಿವೆ. ಹಲವಾರು ಕಡೆ ಹಂಚಿ ಹೋಗಿರುವ ಐನ್‌ಸ್ಟೀನರ ಮೆದುಳಿನ ಭಾಗಗಳು ಒಂದೆಡೆ ವಿಜ್ಞಾನಿಗಳಿಗೆ ದೊರೆಯುವಂತಾಗಿ, ಅವರ ಅಸಾಮಾನ್ಯ ಬುದ್ಧಿಮತ್ತೆಯ ನಿಗೂಢತೆಯನ್ನು ನಿಖರವಾಗಿ ವಿಶ್ಲೇಷಣೆ ಮಾಡುವಂಥ ಕಾಲ ಮತ್ತು ಅವಕಾಶಗಳು ವಿಜ್ಞಾನ ಲೋಕಕ್ಕೆ ಒದಗಲಿ ಎಂದು ಹಾರೈಸುವುದಷ್ಟೇ ಈಗ ಸಾಧ್ಯ.



8 comments:

  1. ಅತ್ಯಂತ ಕುತೂಹಲ ಮತ್ತು ಅನ್ವೇಷಣಾ ಲೇಖನ ಅದ್ಭುತ ..
    🙏🙏🙏 ತಮ್ಮಿಂದ ಇಂತಹ ಇನ್ನೂ ಹೆಚ್ಚಿನ ಲೇಖನಗಳು ಹೊರಬರಲಿ

    ReplyDelete
  2. ತುಂಬಾ ಕುತೂಹಲಕಾರಿ ಮತ್ತು ಅದ್ಭುತವಾದ ವೈಜ್ಞಾನಿಕ ಲೇಖನ ವಾಗಿದೆ. ಧನ್ಯವಾದಗಳು ಸರ್

    ReplyDelete
  3. Very nice Scientific article. Thank you Suresh sir.

    ReplyDelete
  4. ಆಸಕ್ತಿದಾಯಕವಾಗಿದೆ ಲೇಖನ. ಗಹನವಾದ ವಿಷಯ. ಆಕರಗ್ರಂಥಗಳ ವಿವರ ಕೊಟ್ಟಿದ್ದರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತಿತ್ತು. ಸರ್.

    ReplyDelete