Monday, July 4, 2022

ಕುರಿಗಳು ಸಾರ್, ನಾವು ಕುರಿಗಳು !

ಕುರಿಗಳು ಸಾರ್, ನಾವು ಕುರಿಗಳು !

ಲೇಖಕರು : ಡಾ. ಎಮ್.ಜೆ.ಸುಂದರರಾಮ್
ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಹಾಗೂ
ವಿಜ್ಞಾನ ಸಂವಹನಕಾರರು





ಪ್ರತಿ ದಿನ, ಅದರಲ್ಲಿಯೂ ಬೆಳಿಗ್ಗೆ ನಾವೆಲ್ಲರೂ ಸೇವಿಸಲು ಇಚ್ಛಿಸುವುದು ಒಂದು ಲೋಟ ಬಿಸಿಯಾದ ಸ್ಟ್ರಾಂಗ್‌ ಕಾಫಿ, ಅಲ್ಲವೇ? ಆದರೆ, ಕಾಫಿ ಒಂದು ಪಾನೀಯವಾಗಿ ಬಳಕೆಗೆ ಬಂದಿರುವುದರ ಹಿಂದೆ ಒಂದು ಕುತೂಹಲಕಾರಿಯಾದ ಕತೆ ಇದೆ. ಅದನ್ನು ಸ್ವಾರಸ್ಯಕರವಾಗಿ ಈ ಲೇಖನದಲ್ಲಿ ವಿವರಿಸಿದ್ದಾರೆ ಹಿರಿಯ ಲೇಖಕರಾದ ಡಾ. ಎಮ್.ಜೆ. ಸುಂದರರಾಮ್ ಅವರು.

 ಇಥಿಯೋಪಿಯ ಎಂಬುದು ಆಫ್ರಿಕಾದ ಪೂರ್ವ ಭಾಗದಲ್ಲಿರುವ ಒಂದು ದೇಶ. ಅಲ್ಲಿಯ ಕುಗ್ರಾಮವೊಂದರಲ್ಲಿ ಕಲ್ಡಿ (Kaldi ) ಎಂಬ ಸುಮಾರು ೧೩-೧೪ ವರ್ಷ ವಯಸ್ಸಿನ, ಕುರಿ ಕಾಯುವ ಹುಡುಗನೊಬ್ಬ ವಾಸವಾಗಿದ್ದ. ಮುಂಜಾನೆ ಕುರಿ ಮಂದೆಯನ್ನು ಕಾಡಿಗೆ ಅಟ್ಟಿಕೊಂಡು ಹೋಗಿ, ಅವುಗಳನ್ನು ಮೇಯಿಸಿ ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಅವನ್ನು ಮತ್ತೆ ಮನೆಗೆ ಅಟ್ಟಿಕೊಂಡು ಬರುತ್ತಿದ್ದ. ಕುರಿಗಳನ್ನು ಮೇಯಿಸಲು ಹೋಗುವಾಗ ತನ್ನೊಂದಿಗೆ ಕಿನ್ನರಿಯೊಂದನ್ನು ಕೊಂಡೊಯ್ಯುತ್ತಿದ್ದ. ಕುರಿಗಳು ಮೇಯುತ್ತಿದ್ದ ಸಮಯದಲ್ಲಿ ತಾನು ಒಂದೆಡೆ ಕುಳಿತು, ತನ್ನ ಕಿನ್ನರಿಯನ್ನು ಊದುತ್ತಾ ಆನಂದದಿಂದ ಕಾಲ ಕಳೆಯುತ್ತಿದ್ದ. ಸೂರ್ಯ ಮುಳುಗುವ ಹೊತ್ತಿಗೆ ಕಲ್ಡಿ ತನ್ನ ಕಿನ್ನರಿಯಲ್ಲಿ ಒಂದು ನಿರ್ದಿಷ್ಟ ರಾಗವನ್ನು ನುಡಿಸುತ್ತಿದ್ದ. ಅದನ್ನು ಕೇಳಿಸಿಕೊಂಡ ಕುರಿಗಳು ಗುಂಪಾಗಿ ಅವನ ಬಳಿ ಬಂದು ಸೇರುತ್ತಿದ್ದವು. ನಂತರ ಅವನು ಕುರಿ ಮಂದೆಯನ್ನು ಅಟ್ಟಿಕೊಂಡು ಮನೆಗೆ ವಾಪಸಾಗುತ್ತಿದ್ದ. ಇದು ಪ್ರತಿ ನಿತ್ಯ ಅವನ ದಿನಚರಿಯಾಗಿತ್ತು.

 

ಎಂದಿನಂತೆ ಒಂದು ದಿನ, ಸೂರ್ಯ ಮುಳುಗುವ ಹೊತ್ತಿಗೆ ಕಲ್ಡಿ ಕಿನ್ನರಿಯಲ್ಲಿ ಅದೇ ರಾಗವನ್ನು ನುಡಿಸುತ್ತಾ ಕುರಿಗಳಿಗಾಗಿ ಕಾಯುತ್ತಿದ್ದ. ಆದರೆ, ಬಹಳಷ್ಟು ಸಮಯ ಕಳೆದರೂ ಒಂದು ಕುರಿಯೂ ಅವನ ಬಳಿ ವಾಪಸ್ ಬಂದಿರಲಿಲ್ಲ. ಮತ್ತೆ, ಮತ್ತೆ ಕಿನ್ನರಿಯನ್ನು ಜೋರಾಗಿ ನುಡಿಸಿದರೂ ಕುರಿಗಳು ಅವನ ಬಳಿ ಸುಳಿಯಲಿಲ್ಲ. ಗಾಬರಿಗೊಂಡ ಕಲ್ಡಿ ಕುರಿಗಳನ್ನು ಅರಸುತ್ತಾ ಹೊರಟ. ಸ್ವಲ್ಪ ದೂರದಲ್ಲಿ ಅವನಿಗೆ ಕುರಿಗಳು ಗೋಚರಿಸಿದವು. ಆದರೆ, ಅಲ್ಲಿ ಅವುಗಳ ವರ್ತನೆಯನ್ನು ಕಂಡು, ಆಶ್ಚರ್ಯದಿಂದಲೂ, ಭಯದಿಂದಲೂ ಕಂಭದಂತೆ ನಿಶ್ಚಲನಾಗಿ ನಿಂತುಬಿಟ್ಟ.

ಅವನ ಕುರಿಗಳು ಉದ್ರಿಕ್ತವಾಗಿ ಕೆನೆಯುತ್ತ, ತಮ್ಮ ಮುಂಗಾಲುಗಳನ್ನು ಮೇಲೆತ್ತಿ ಹಿಂಗಾಲುಗಳ ಮೇಲೆ ನಿಂತು ನೃತ್ಯ ಮಾಡುತ್ತಿದ್ದವು ! ಕ್ಷಣಕಾಲ ಕಕ್ಕಾಬಿಕ್ಕಿಯಾಗಿ ಈ ಸೋಜಿಗವನ್ನು ನೋಡುತ್ತಾ ನಿಂತು ಬಿಟ್ಟ ಕಲ್ಡಿ. ಕೊಂಚ ಹೊತ್ತಿನ ನಂತರ ಸುಧಾರಿಸಿಕೊಂಡು ಕುರಿಗಳ ಬಳಿಗೆ ಹೆಜ್ಜೆ ಹಾಕಿದ. ಅವು ಒಂದೇ ಬಗೆಯ ಗಿಡಗಳ ಕೆಳಗೆ ನರ್ತಿಸುತ್ತಿದ್ದುದನ್ನು ಗಮನಿಸಿದ. ಅಂಥ ಗಿಡಗಳನ್ನು ಅವನು ಇದುವರೆಗೂ ನೋಡಿರಲಿಲ್ಲ. ಕುರಿಗಳು ಆಗಾಗ ನರ್ತನ ನಿಲ್ಲಿಸಿ, ಗಿಡದಲ್ಲಿ ದ್ರಾಕ್ಷಿಯಂತೆ ಗೊಂಚಲಾಗಿ ಬಿಟ್ಟಿದ್ದ ಕೆಂಪು ಬಣ್ಣದ ಹಣ್ಣುಗಳನ್ನು ತಿನ್ನುತ್ತಿದ್ದವು. ಹಣ್ಣುಗಳನ್ನು ತಿಂದ ಕೊಂಚ ಹೊತ್ತಿಗೇ ಕುರಿಗಳ ಶಕ್ತಿ ಮತ್ತು ಉತ್ಸಾಹ ಇಮ್ಮಡಿಯಾಗಿ ಹೆಚ್ಚು ರಭಸದಿಂದ ಕುಣಿಯತೊಡಗಿದವು ! ಕಷ್ಟಪಟ್ಟು ಅವುಗಳನ್ನು ಒಂದುಗೂಡಿಸಿ ಕಲ್ಡಿ ಅಂದು ಕೊನೆಗೂ ಮನೆಗೆ ವಾಪಸಾಗಿದ್ದ.

ಮಾರನೆಯ ದಿನ ಕಲ್ಡಿ ಕುರಿಗಳನ್ನು ಯಥಾಪ್ರಕಾರ ಮೇಯಲು ಕಾಡಿಗೆ ಕರೆತಂದ. ಕುರಿಗಳು ನೇರವಾಗಿ ಅದೇ ಗಿಡಗಳತ್ತ ಧಾವಿಸಿ ಬಂದು ಹಣ್ಣುಗಳನ್ನು ತಿನ್ನಲಾರಂಭಿಸಿದವು. ಹಿಂದಿನ ದಿನದಂತೆ ಮತ್ತೆ ಅವುಗಳ ಕಿರುಚಾಟ, ನರ್ತನಗಳು ಪ್ರಾರಂಭವಾದವು. ಆ ಹಣ್ಣುಗಳನ್ನು ತಿನ್ನುವುದರಿಂದ, ವರ್ತನೆಯಲ್ಲಾದ ಬದಲಾವಣೆ ಬಿಟ್ಟು ಕುರಿಗಳಿಗೆ ಬೇರಾವ ರೀತಿಯ ಹಾನಿಯೂ ಉಂಟಾಗಿಲ್ಲ ಎಂಬುದನ್ನು ಕಲ್ಡಿ ಖಚಿತಪಡಿಸಿಕೊಂಡ. ಅವನ ಆಸೆ ಕೆರಳಿತು. ಅಬನ ಬಾಯಿಯಲ್ಲಿ ನೀರೂರಿತ್ತು. ತಾನೂ ಏಕೆ ಈ ಹಣ್ಣುಗಳನ್ನು ರುಚಿ ನೋಡಬಾರದು ಎಂದು ಅವನಿಗೆ ಅನ್ನಿಸಿತು. ಗೊಂಚಲಿನಿಂದ ಕೆಲ ಹಣ್ಣುಗಳನ್ನು ಕಿತ್ತು ಬಾಯಿಗೆ ಹಾಕಿಕೊಂಡ. ಕೆಲ ಕ್ಷಣದಲ್ಲಿಯೇ ಅವನ ಮೈಯಲ್ಲಿ ವಿದ್ಯುತ ಸಂಚಾರವಾದಂತಾಯುತು. ದೇಹದ ಶಕ್ತಿ ಇಮ್ಮಡಿಸಿದಂತಾಯಿತು. ಹುಮ್ಮಸ್ಸಿನಿಂದ ಕೂಗುತ್ತಾ, ತಾನೂ ಕುರಿಗಳೊಡನೆ ಕುಣಿಯಲಾರಂಭಿಸಿದ !

ಅಂದು ಸಂಜೆ ಕಲ್ಡಿ ಮನೆಗೆ ವಾಪಸಾದೊಡನೆ, ಕಾಡಿನಲ್ಲಿ ನಡೆದ ಘಟನೆಗಳನ್ನು ತನ್ನ ತಂದೆಗೆ ವಿವರಿಸಿದ. ತಾನು ತಂದಿದ್ದ ಕೆಲವು ಹಣ್ಣುಗಳನ್ನು ಅಲ್ಲಿನ ಪಾದ್ರಿಗೆ ಕೊಟ್ಟು ನಡೆದದ್ದನ್ನು ಅವರಿಗೂ ವಿವರಿಸಿದ. ಪಾದ್ರಿಯು ಆ ಹಣ್ಣುಗಳನ್ನು ನೀರಿನಲ್ಲಿ ಕುದಿಸಿದ. ಬಂದ ಪಾನೀಯವನ್ನು ಕುಡಿದು ನೋಡಿದ. ಅದೊಂದು ಕಹಿಯಾದ ಪಾನೀಯವಾಗಿತ್ತು. ಕೊಂಚ ಹೊತ್ತಿಗೆ ಪಾದ್ರಿ ಹುರುಪಿನಿಂದ ಅತ್ತಿಂದಿತ್ತ ಓಡಾಡತೊಡಗಿದ. ಅವನಿಗೆ ಆ ಪಾನೀಯ ಇಷ್ಟವಾಯಿತು ! ತನ್ನ ಸಹೋದ್ಯೋಗಿ ಪಾದ್ರಿಗಳಿಗೂ ಪಾನೀಯದ ರುಚಿ ತೋರಿಸಿದ. ಕೆಲವೇ ದಿನಗಳಲ್ಲಿ ಎಲ್ಲ ಪಾದ್ರಿಗಳೂ ಆ ಹಣ್ಣಿನ ಪಾನೀಯವನ್ನು ಪ್ರತಿ ನಿತ್ಯ ಸೇವಿಸುವ ಪರಿಪಾಠವನ್ನು ಬೆಳೆಸಿಕೊಂಡರು. ಇದರಿಂದ, ದೀರ್ಘಕಾಲ ಎಚ್ಚರವಿದ್ದು ಹುಮ್ಮಸ್ಸಿನಿಂದ ಪ್ರಾರ್ಥನೆ, ಬೋಧನೆ ಮುಂತಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಸಾದ್ಯವಾಯಿತು.

ಕ್ರಮೇಣ ಈ ರೋಮಾಂಚಕ ಸುದ್ದಿ ಕಾಡ್ಗಿಚ್ಚಿನಂತೆ ಗ್ರಾಮದ ಎಲ್ಲೆಡೆ ಹರಡತೊಡಗಿತು. ಸಮಯ ಸಿಕ್ಕಾಗಲೆಲ್ಲ ಕಾಡಿಗೆ ಹೋಗಿ ಈ ಹಣ್ಣುಗಳನ್ನು ತಂದು, ತಿಂದು ಗ್ರಾಮದ ಜನರೆಲ್ಲ ಖುಷಿ ಅನುಭವಿಸಲು ಪ್ರಾರಂಭಿಸಿದರು. ಕೆಲವರು ಹಸಿ ಹಣ್ಣುಗಳನ್ನು ತಿಂದರೆ. ಕೆಲವರು ಒಣಗಿಸಿ ತಿಂದರು. ಇನ್ನೂ ಕೆಲವರು ಅದನ್ನು ಹುರಿದು ತಿನ್ನಲು ಪ್ರಾರಂಭಿಸಿದರು. ಇಡೀ ಗ್ರಾಮವೇ ಈ ಹಣ್ಣುಗಳ ರುಚಿಯನ್ನು ಮೆಚ್ಚಿದ್ದಲ್ಲದೆ, ಅದರಿಂದ ವಿಶೇಷ ಅನುಭವಗಳಿಗೆ ಪಾತ್ರವಾಯುತು.

ಮುಂದೆ ಇದೇ ಗಿಡವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿ, ಅದರ ಹಣ್ಣುಗಳನ್ನು ಪಾನೀಯದ ತಯಾರಿಕೆಯಲ್ಲಿ ಬಳಸಿಕೊಳ್ಳುವ ಪ್ರಕ್ರಿಯೆ ಎಲ್ಲ ಕಡೆ ಪ್ರಾರಂಭವಾಯುತು. ಇದನ್ನೇ ಕಾಫಿ ಗಿಡ ಎಂದು ಕರೆಯಲಾಯಿತು. ಆ ಪಾನೀಯವೇ ಇಂದಿನ ಜನಪ್ರಿಯ ‘ಕಾಫಿ’ ಎನಿಸಿಕೊಂಡಿತು !

ಒಮ್ಮೆ ನಾನು ಶಿವಮೊಗ್ಗದ ಶಾಲೆಯೊಂದರಲ್ಲಿ ೯ ಹಾಗೂ ೧೦ನೇ ತರಗತಿಯ ಮಕ್ಕಳಿಗೆ ಈ ಕಥೆಯನ್ನು ಹೇಳಿ ‘ ಮಕ್ಕಳೇ ಕಾಫಿಯನ್ನು ಕಂಡು ಹಿಡಿದದ್ದು ಯಾರು ಎಂದು ಈಗ ಹೇಳ್ತೀರಾ? ‘ ಎಂಬ ಪ್ರಶ್ನೆ ಕೇಳಿದಾಗ ತರಗತಿ ನಿಶ್ಶಬ್ಧವಾಯಿತು. ಕೊನೆಯ ಬೆಂಚಿನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ಒಮ್ಮೆಗೇ ಎದ್ದು ನಿಂತು, ಕೈಗಳನ್ನು ಮೇಲೆತ್ತಿ ಗಾಳಿಯಲ್ಲಿ ಗುದ್ದಿ ‘ಕುರಿಗಳು ಸಾರ್, ಕುರಿಗಳು’ ಎಂದು ಉತ್ಸಾಹದಿಂದ ಒಟ್ಟಿಗೇ ಕೂಗಿದಾಗ ನನ್ನ ಮೈ ಝುಮ್ ಎಂದಿತು. ಕಥೆಗಳು ಮಕ್ಕಳ ಮೇಲೆ ಎಂತ ಪ್ರಭಾವವನ್ನು ಬೀರಬಲ್ಲವು ಎಂಬುದು ಅಂದು ಸಾಬೀತಾಗಿತ್ತು ! ‘ರಾಷ್ಟ್ರದ ಅತ್ಯಂತ ಪ್ರಚಂಡ ಮಿದುಳುಗಳನ್ನು ತರಗತಿಯ ಕೊನೆಯ ಬೆಂಚುಗಳಲ್ಲಿ ಕಾಣಬಹುದು ‘ ಎಂಬ ಅಬ್ದುಲ್ ಕಲಾಮ್ ಅವರ ಮುತ್ತಿನ ಮಾತುಗಳು ಎಷ್ಟು ಸತ್ಯ ಎಂಬುದು ನನಗೆ ಅರಿವಾಗಿತ್ತು. 

5 comments:

  1. ಕಾಫಿಯ ಮೂಲ ಇಥಿಯೋಪಿಯಾ ದೇಶ ಎಂದು ಗೊತ್ತು. ಆದರೆ ಅದು ಜನಪ್ರಿಯ ಪೇಯವಾಗಿ ಬೆಳಕಿಗೆ ಬಂದ ಘಟನಾ ವಳಿ ಬಗ್ಗೆ ಗೊತ್ತಿರಲಿಲ್ಲ. ಲೇಖಕರ ಈ ನಿರೂಪಣೆ ತುಂಬಾ ವಿವರವಾಗಿದೆ, ಕುತೂಹಲಕಾರಿಯಾಗಿದೆ ಹಾಗೂ ರಸವತ್ತಾಗಿದೆ . ಧನ್ಯವಾದಗಳು.

    ReplyDelete
  2. Very interesting story of coffee. Thank you very much Sir

    ReplyDelete
  3. Good read Sir. We cannot stop learning from you.

    ReplyDelete