Tuesday, October 4, 2022

ಇನ್ ಸ್ಪೈರ್ ಅವಾರ್ಡ್ಸ, ಮಾನಕ್ ಪ್ರಶಸ್ತಿಗಳ ಬೆನ್ನೇರಿ ನಮ್ಮ ರಾಜ್ಯದ ರಾಜಧಾನಿಯಿಂದ ರಾಷ್ಟ್ರದ ರಾಜಧಾನಿಯತ್ತ ನಮ್ಮ ರಾಜ್ಯ ವಿದ್ಯಾರ್ಥಿಗಳ ಪಯಣ

ಇನ್ ಸ್ಪೈರ್ ಅವಾರ್ಡ್ಸ, ಮಾನಕ್ ಪ್ರಶಸ್ತಿಗಳ ಬೆನ್ನೇರಿ ನಮ್ಮ ರಾಜ್ಯದ ರಾಜಧಾನಿಯಿಂದ ರಾಷ್ಟ್ರದ ರಾಜಧಾನಿಯತ್ತ ನಮ್ಮ ರಾಜ್ಯ ವಿದ್ಯಾರ್ಥಿಗಳ ಪಯಣ

ದಿನಾಂಕ.14/9/2022 ರಿಂದ 16/9/2022


ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೆರವಿನಿಂದ ನಡೆಯುವ ಪ್ರಮುಖ ವೈಜ್ಞಾನಿಕ ಕಾರ್ಯಕ್ರಮ ಇನ್ ಸ್ಪೈರ್ ಅವಾರ್ಡ್ಸ್ ಮಾನಕ್ ವಸ್ತು ಪ್ರದರ್ಶನ

(ಸ್ಪೂರ್ತಿ ಸಂಶೋಧನೆಗಾಗಿ ವಿಜ್ಞಾನ ಅನ್ವೇಷಣೆಯಲ್ಲಿ ಅವಿಷ್ಕಾರ)


‌ಭಾರತ ಸರ್ಕಾರವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮುಖಾಂತರ 2009-10 ರಿಂದ ಇನ್ ಸ್ಪೈರ್ ಅವಾರ್ಡ್ಸ ಮಾನಕ್ ಯೋಜನೆಯನ್ನು ಜಾರಿಗೆ ತಂದಿದೆ.ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಸಾಮಾಜಿಕ ಅವಶ್ಯಕತೆಗಳನ್ನು ಬಗೆಹರಿಸಲು ಶಾಲಾಮಕ್ಕಳಲ್ಲಿ ಸೃಜನಶೀಲ ಸಂಸ್ಕೃತಿ ಮತ್ತು ನಾವೀನ್ಯತೆಯ ಚಿಂತನೆಯನ್ನು ಬೆಳೆಸುವ ಮಹತ್ವವಾದ ರಾಷ್ಟ್ರೀಯ ಗುರಿಯನ್ನು ಹೊಂದಿದೆ.

ಹೌದು ಸ್ನೇಹಿತರೇ,  ಸುಮಾರು ಹದಿನೈದು ದಿನಗಳ ಹಿಂದಿನ ಮಾತು ಒಂದು ದಿನ ನಮ್ಮ ಬೆಂಗಳೂರು ನಗರ ಜಿಲ್ಲೆಯ ಡಯಟ್ ನೋಡಲ್ ಅಧಿಕಾರಿಯಾದ  ಹೊಳ್ಳ ಸರ್ ರವರು ನನಗೆ ಕರೆ ಮಾಡಿ ನಾಯಕ್ ರೇ ನಿಮಗೆ ಒಂದು ಸದವಕಾಶ ಇದೆ ನೀವು ಬೆಂಗಳೂರು ,ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಒಟ್ಟು 3 ವಿದ್ಯಾರ್ಥಿಗಳನ್ನು ನವದೆಹಲಿಯಲ್ಲಿ ದಿನಾಂಕ.14/9/2022 ರಿಂದ 16/9/2022ರವರಗೆ ನಡೆಯುವ ಈ ಬಾರಿಯ 2020-21ನೇ ಸಾಲಿನ 9 ನೇ ರಾಷ್ಟ್ರ ಮಟ್ಟದ ಇನ್ ಸ್ಪೈರ್ ಅವಾರ್ಡ್ಸ ಮಾನಕ್ ವಸ್ತು ಪ್ರದರ್ಶನ  (NLEPC-9) ಮತ್ತು ಮಾದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಕರೆದುಕೊಂಡು ಹೋಗಿ ಬನ್ನಿ ಎಂದು ತಿಳಿಸಿದರು. ಈಗಾಗಲೇ ರಾಜ್ಯ ಪಠ್ಯಪುಸ್ತಕ ಸಮಿತಿಯ ರಚನಾಕಾರ್ಯ ಪರಿಷ್ಕರಣೆ ಕಾರ್ಯ, ಟಾಲ್ಪ್ ತರಬೇತಿ, ಶಿಕ್ಷಕರ ವಿಷಯಾಧಾರಿತ ತರಬೇತಿ, ಸಂವೇದ ತರಗತಿಗಳು ಹೀಗೆ ಹಲವಾರು ರೀತಿಯಲ್ಲಿ ಇಲಾಖೆಯ ಕೆಲಸಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತೊಡಗಿಸಿಕೊಂಡ ನನಗೆ ಇದೊಂದು ಹೊಸ ಅವಕಾಶವಾಗಿತ್ತು,  ಹಿಂದು ಮುಂದು ನೋಡದೆ ತಕ್ಷಣ ಆಯ್ತು ಸರ್ ಎಂದು ಹೇಳಿಬಿಟ್ಟೆ . ಅದರಂತೆ ನಾನು ಎಲ್ಲ ಮಕ್ಕಳ ಪೋಷಕರ ಮತ್ತು ಮಾರ್ಗದರ್ಶಿ ಶಿಕ್ಷಕರನ್ನು ಸಂಪರ್ಕಿಸಿ ವಾಟ್ಸ್ ಅಪ್ ಗುಂಪು ಮಾಡಿ ಅವರಿಗೆ ನನಗೆ ಇಲಾಖಾ ಅಧಿಕಾರಿಗಳು ನೀಡುವ  ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೆ.

ದೆಹಲಿಯ ಪ್ರಯಾಣದ ದಿನ ಬಂದೇ ಬಿಟ್ಟಿತು ದಿನಾಂಕ 11/09/2022 ರಂದು 9 ನೇ ರಾಷ್ಟ್ರ ಮಟ್ಟದ ಇನ್ ಸ್ಪೈರ್ ಅವಾರ್ಡ್ಸ ಮಾನಕ್ ವಸ್ತು ಪ್ರದರ್ಶನ  (NLEPC-9)ದಲ್ಲಿ ಪಾಲ್ಗೊಳ್ಳಲು ನಮ್ಮ ರಾಜ್ಯದ ತಂಡದ ಎಲ್ಲಾ ಉಸ್ತುವಾರಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನೇತೃತ್ವವನ್ನು  ವಹಿಸಿಕೊಂಡಿದ್ದ ಡಿ.ಎಸ್.ಇ.ಆರ್.ಟಿಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಉಷಾ ಮೇಡಂ ಮತ್ತು  ಶ್ರೀಮತಿ ವಾಣಿ ಮೇಡಂ ಹಾಗೂ ಕಚೇರಿ ಸಹಾಯಕರಾದ ಶ್ರೀ ನಾಗರಾಜ್ ಸರ್ ರವರ ನೇತತ್ವದಲ್ಲಿ ನಮ್ಮ ರಾಜ್ಯದ ವಿವಿಧ  ಜಿಲ್ಲೆಗಳ  9ನೇ NLEPCಗೆ ಆಯ್ಕೆಯಾದ 61 ವಿದ್ಯಾರ್ಥಿಗಳು ಹಾಗೂ 8ನೇ NLEPCಗೆ ಆಯ್ಕೆಯಾದ 2 ವಿದ್ಯಾರ್ಥಿಗಳು, 13 ಉಸ್ತುವಾರಿ ಶಿಕ್ಷಕರನ್ನು ಒಳಗೊಂಡ ಒಟ್ಟು 79 ಜನರ ತಂಡ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತಮ್ಮ ಲಗೇಜು ಮಾದರಿಗಳೊಂದಿಗೆ ಆಗಮಿಸಿ ಬೆಳಿಗ್ಗೆ ತಲುಪಿ ಪ್ರಯಾಣಕ್ಕೆ ಸಿದ್ದವಾಗಿತ್ತು.  ಕೆಲವು ವಿದ್ಯಾರ್ಥಿಗಳ ಜೊತೆಯಲ್ಲಿ ಪೋಷಕರ ಮತ್ತು ಮಾರ್ಗದರ್ಶಿ ಶಿಕ್ಷಕರು ಬೀಳ್ಕೊಡಲು ಆಗಮಿಸಿದ್ದರು. ಎಲ್ಲ ವಿದ್ಯಾರ್ಥಿಗಳ ಮುಖದಲ್ಲಿ ಸಾಧಿಸುವ ಛಲ, ಆತ್ಮವಿಶ್ವಾಸ ಮತ್ತು ಖುಷಿ ಕಂಡು ಬಂತು.  ಈ ಕಾರ‍್ಯಕ್ರಮದ ತಯಾರಿ  ಅಷ್ಟು ಸುಲಭವಾಗಿರಲಿಲ್ಲ ಕಳೆದ ಹಲವು ದಿನಗಳಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿ.ಎಸ್.ಇ.ಆರ್.ಟಿ) ಮಾನ್ಯ ನಿರ್ದೇಶಕರಾದ ಶ್ರೀಮತಿ ಸುಮಂಗಲ ಮೇಡಂ ಮತ್ತು  ಉಪ ನಿರ್ದೇಶಕರಾದ ಶ್ರೀ ನಾರಾಯಣ್  ಸರ್ ರವರ ಮಾರ್ಗದರ್ಶನದಲ್ಲಿ ನಮ್ಮ ರಾಜ್ಯದ ತಂಡದ ಉಸ್ತುವಾರಿ ವಹಿಸಿದ್ದ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಉಷಾ  ಮೇಡಂರವರು ಮತ್ತು  ಶ್ರೀಮತಿ ವಾಣಿ ಮೇಡಂವರು ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡಿರುವ ವಿಷಯ ನಮಗೆಲ್ಲ ತಿಳಿದಿತ್ತು. ಅವರು ನಮ್ಮೆಲ್ಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಇದ್ದು ನಮಗೆ ಕಾಲಕಾಲಕ್ಕೆ ಸೂಕ್ತ ಆದೇಶ ಸೂಚನೆ ನೀಡುತ್ತಿದ್ದರು .



ಬೆಳಿಗ್ಗೆ 11.30ಕ್ಕೆ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲು 12650 ಬೆಂಗಳೂರಿನ ಯಶವಂತಪುರ ಜಂಕ್ಷನ್ ಗೆ ಬಂತು. ನಮ್ಮೆಲರ ಪ್ರಯಾಣಕ್ಕಾಗಿ ಎಫ್.ಟಿ.ಆರ್ ಸ್ಪೆಷಲ್ ವಿಶೇಷ ಸ್ಲೀಪರ್ ಕೋಚ್  ಬೋಗಿಯನ್ನು ವ್ಯವಸ್ಥೆಗೊಳಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳನ್ನು ಅವರ  ಲಗೇಜು ಮತ್ತು ಮಾದರಿಗಳ ಜೊತೆಯಲ್ಲಿ ನಾನು ಮತ್ತು ಮಂಡ್ಯ ತಂಡದ ಉಸ್ತುವಾರಿ ಶಿಕ್ಷಕರಾದ ಶ್ರೀ ಮೋಹನ್ ರವರ ನೇತ್ರತ್ವದಲ್ಲಿ ರೈಲಿಗೆ  ಸುರಕ್ಷಿತವಾಗಿ ಹತ್ತಿಸಿದೆವು. ಎಲ್ಲಾಉಸ್ತುವಾರಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅವರ ವಸ್ತು ಪ್ರದರ್ಶನದ  ಮಾದರಿಗಳು ಬಂದಿರುವುದನ್ನು ಹಾಜರಾತಿಯನ್ನು ಕರೆಯುವುದರ ಮೂಲಕ ಖಾತ್ರಿ ಪಡಿಸಿಕೊಂಡು ಶ್ರೀಮತಿ ಉಷಾ ಮೇಡಂರವರು ಪ್ರಯಾಣದ ಸಂದರ್ಭದಲ್ಲಿ ಉಸ್ತುವಾರಿ ಶಿಕ್ಷಕರ ಜವಾಬ್ದಾರಿ ಮತ್ತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಸೂಚನೆಯನ್ನು ನೀಡಿದರು. ಬಂದಂತಹ ಎಲ್ಲಾ ಶಿಕ್ಷಕರು ,ವಿದ್ಯಾರ್ಥಿಗಳು ಪರಸ್ಪರ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡರು .


ಡಿ.ಎಸ್.ಇ.ಆರ್.ಟಿಯ  ಮಾನ್ಯ ನಿರ್ದೇಶಕರಾದ ಶ್ರೀಮತಿ ಸುಮಂಗಲ ಮೇಡಂರವರು ಮತ್ತು  ಉಪ ನಿರ್ದೇಶಕರಾದ ಶ್ರೀ ನಾರಾಯಣ್  ಸರ್ ರವರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು . ಅವರು ಬಂದಂತಹ ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕುಶಲೋಪರಿಯನ್ನು ವಿಚಾರಿಸಿ, ಮನೋಸ್ಥೈರ್ಯವನ್ನು ಹೆಚ್ಚಿಸಿ,  ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ  ಶುಭ ಹಾರೈಸಿ ನಮ್ಮನೆಲ್ಲಾ ಬೀಳ್ಕೊಟ್ಟರು .



ನಮ್ಮ ರೈಲು ಮಧ್ಯಾಹ್ನ 1.50 ರ ಸುಮಾರಿಗೆ  ದೆಹಲಿಯತ್ತ ಹೊರಟಿತು. ರೈಲಿನಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ತಿಂಡಿ ಊಟ . ನೀರು ಮತ್ತು ಹಣ್ಣನ್ನು ಸಮಯ ಸಮಯಕ್ಕೆ ರೈಲಿನ ಸಿಬ್ಬಂದಿ ನೀಡುತ್ತಿದ್ದರು . ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರು ಹಾಡುಗಳು , ಮಿಮಿಕ್ರಿ , ನೃತ್ಯ, ಅಂತ್ಯಾಕ್ಷರಿ ಸಣ್ಣಸಣ್ಣ ಆಟಗಳನ್ನು ಆಡುತ್ತಾ ಖುಷಿಯಾಗಿ ರೈಲು  ಪ್ರಯಾಣದ ಆನಂದ ಅನಭವಿಸುತ್ತಿದ್ದರು  .ಅಲ್ಲದೇ ಹಿರಿಯ ಉಪನ್ಯಾಸಕರಾದ ಉಷಾ ಮೇಡಂ ಮತ್ತು ವಾಣಿ ಮೇಡಂರವರ ಹಾಗೂ ಉಸ್ತುವಾರಿ ಶಿಕ್ಷಕರ ನೇತೃತ್ವದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ  ತಮ್ಮ ತಮ್ಮ ಮಾದರಿಗಳ ಕುರಿತು ಮಾಹಿತಿಯನ್ನು ನೀಡಲು ತಿಳಿಸಿ ಸ್ಪರ್ಧೆಯಲ್ಲಿ ತೀರ್ಪುಗಾರರೊಂದಿಗೆ ಯಾವ ರೀತಿಯಾಗಿ ಸಂವಹನ ಮಾಡಬೇಕೆಂದು ಹಾಗೂ ಪ್ರಶ್ನೆಗಳಿಗೆ ಯಾವ ರೀತಿಯಾಗಿ ಉತ್ತರಿಸಬೇಕು ಎಂದು ತಿಳಿಸಿ ಆತ್ಮವಿಶ್ವಾಸ ತುಂಬಿ ಸಜ್ಜುಗೊಳಿಸಲಾಯಿತು.

ದಿನಾಂಕ 11 ಮತ್ತು 12 ನೇ ಸೆಪ್ಟೆಂಬರ್ ಪ್ರಯಾಣದ ನಂತರ 13ನೇ ತಾರೀಕು ಬೆಳಗ್ಗೆ 11 ಗಂಟೆಗೆ ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣ ತಲುಪಿದೆವು. ಅಲ್ಲಿಂದ  ಲಗೇಜ್  ಮತ್ತು ಮಾದರಿಗಳನ್ನು ನಮಗಾಗಿಯೇ  ವ್ಯವಸ್ಥಿತಗೊಳಿಸಲಾಗಿದ್ದ ಹವಾನಿಯಂತ್ರಿತ  ಬಸ್ಸಿನಲ್ಲಿರಿಸಿ ನವದೆಹಲಿಯ  ದ್ವಾರಕಾದಲ್ಲಿರುವ CCRTಗೆ 1.30 ಗಂಟೆಗೆ ಪ್ರಯಾಣ ಬೆಳೆಸಿದೆವು. ಅಲ್ಲಿ ಮಧ್ಯಾಹ್ನದ ಊಟ ಮುಗಿಸಿ ಪ್ರಗತಿ ಮೈದಾನಕ್ಕೆ ಹೋಗಿ ಅಲ್ಲಿ ಮೊದಲ ಮಹಡಿಯಲ್ಲಿನ ಬೃಹತ್ ವಸ್ತು ಪ್ರದರ್ಶನ  ಸಭಾಂಗಣದಲ್ಲಿ ನೋಂದಣಿ ಮಾಡಿಸಿದ ನಂತರ ವಿದ್ಯಾರ್ಥಿಗಳು ತಮ್ಮ ತಂಡದ ಉಸ್ತುವಾರಿ ಶಿಕ್ಷಕರೊಂದಿಗೆ ಸೇರಿ ಮಾದರಿಗಳನ್ನು ತಮಗೆ ನೀಡಲಾದ ಸ್ಥಳದಲ್ಲಿ ಮರುದಿನದ ಸ್ಪರ್ಧೆಗೆ  ಸಜ್ಜುಗೊಳಿಸಿದರು. ಅಲ್ಲಿಂದ ಮರಳಿ  ಸಿ.ಸಿ.ಆರ್.ಟಿ.ಗೆ ಬಂದು ವಿಶ್ರಾಂತಿ ಪಡೆಯಲಾಯಿತು.

ನವದೆಹಲಿಯ  ದ್ವಾರಕಾದಲ್ಲಿರುವ CCRT


 

ಪ್ರಯಾಣಕ್ಕೆ ಸಿದ್ದವಾದ ಬಸ್   

ಪ್ರಗತಿ ಮೈದಾನದತ್ತ ಉತ್ಸಾಹ ದಿಂದ ಮುನ್ನುಗುತ್ತಿರುವ ನಮ್ಮ ರಾಜ್ಯದ ತಂಡ


ಮರುದಿನ ಬೆಳಿಗ್ಗೆ ಉಸ್ತುವಾರಿ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಬೇಗ ಸಿದ್ಧರಾಗಿ ನೀಡಲಾದ ಟೀಶರ್ಟ್ ಮತ್ತು ಗುರುತಿನ ಕಾರ್ಡ ಧರಿಸಿ ಪ್ರಗತಿ ಮೈದಾನ ತಲುಪಿದಾಗ ಸಮಯ ಬೆಳಿಗ್ಗೆ 8.30 ಆಗಿತ್ತು.



ಪ್ರಗತಿ ಮೈದಾನದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಅವರ ಹೆಸರಿನ ಬ್ಯಾನರ್ ಹಾಕಿ ಮಾದರಿ ಇಡಲು ವಸ್ತುಪ್ರದರ್ಶನ ಮಳಿಗೆಗಳನ್ನು ಬಹಳ ಸುಂದರವಾಗಿ ವ್ಯವಸ್ಥೆ ಮಾಡಿದ್ದರು. ಪ್ರವೇಶದ್ವಾರದಲ್ಲಿ ಎಲ್ಲ ಮಕ್ಕಳ ಫೋಟೋಗಳನ್ನು ಒಳಗೊಂಡ ಸಾಧನ ತಾರೆಗಳ ಬೆಳಕಿನ ಮರವನ್ನು ಬಹಳ ಅಚ್ಚುಕಟ್ಟಾಗಿ ನಿರ್ಮಿಸಿದ್ದರು.

ಎಲ್ಲ ಮಕ್ಕಳ ಫೋಟೋಗಳನ್ನು ಒಳಗೊಂಡ ಸಾಧನ ತಾರೆಗಳ ಬೆಳಕಿನ ಮರ

ನಮ್ಮ ಎಲ್ಲ ವಿದ್ಯಾರ್ಥಿಗಳು ಆಯಾ ಜಿಲ್ಲೆಗಳ ಉಸ್ತುವಾರಿ ಶಿಕ್ಷಕರ ಮಾರ್ಗದರ್ಶನದಲ್ಲಿ ತಮಗೆ ನೀಡಲಾದ  ಮಳಿಗೆಯಲ್ಲಿ ತಮ್ಮ ಮಾದರಿಗಳನ್ನು ಸಿದ್ಧಪಡಿಸಿ ತಯಾರಾಗಿದ್ದರು .





ವಸ್ತುಪ್ರದರ್ಶನಕ್ಕೆ ತಯಾರಾಗಿರುವ ವಿದ್ಯಾರ್ಥಿಗಳು ತಮ್ಮ ಮಾದರಿಗಳೊಂದಿಗೆ

ವಿಜ್ಞಾನವು ಇಡೀ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ ಭಾಷೆಯ ಧರ್ಮದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಅಲ್ಲಿ ಸೇರಿಸಿತ್ತು. ಅಲ್ಲಿ ಸಂವಹನಕ್ಕೆ ಭಾಷೆ ಅಡಚಣೆಯಾಗಲಿಲ್ಲ , ಎಲ್ಲರಿಗೂ ಮೈ ರೋಮಾಂಚನ  ವಿಶೇಷವಾದ ಅನುಭವ. ಕಾರ್ಯಕ್ರಮದ ಉದ್ಘಾಟನೆ ನಂತರ ತೀರ್ಪುಗಾರರು ಪ್ರತಿಯೊಬ್ಬ ವಿದ್ಯಾರ್ಥಿಯ  ಮಳಿಗೆಗಳ  ಹತ್ತಿರ ಬಂದು ಅವರ ಮಾದರಿಗಳ ಬಗ್ಗೆ ಕೇಳಿ ತಿಳಿದು ಮಾದರಿಯ ಕಾರ್ಯವನ್ನು ವೀಕ್ಷಿಸಿ ನಂತರ ಪ್ರಶ್ನೆಗಳನ್ನು ಕೇಳಿ ಮೌಲ್ಯಮಾಪನವನ್ನು ಮಾಡುತ್ತಿದ್ದರು. ತೀರ್ಪುಗಾರರಾರ  ತಂಡ ದಲ್ಲಿ ಎನ್ .ಐ.ಎಫ್. ನ ಮೂವರು ಉಪನ್ಯಾಸಕರು ಇರುತ್ತಿದ್ದರು ಏಕಕಾಲದಲ್ಲಿ ಎಲ್ಲ ರಾಜ್ಯಗಳ ವಿದ್ಯಾರ್ಥಿಗಳ ಮಾದರಿಗಳ ತೀರ್ಪು ನಡೆಯುತ್ತಿತ್ತು.





ತೀರ್ಪುಗಾರರು ಮೌಲ್ಯಮಾಪನವನ್ನು ಮಾಡುತ್ತಿರುವುದು

ವಸ್ತುಪ್ರದರ್ಶನದಲ್ಲಿ ವಿವಿಧ ರಾಜ್ಯಗಳ ಶಾಲೆಗಳ , ಕೇಂದ್ರೀಯ ವಿದ್ಯಾಲಯ, ಎ.ಐನ  ಮತ್ತು ಕಳೆದ ಬಾರಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ  ಮಾದರಿಗಳು ಸೇರಿ 568 ಮಾದರಿಗಳ ಪ್ರದರ್ಶನ ಗೊಂಡಿದ್ದವು. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಶ್ರೀವಾರಿ ಚಂದ್ರಶೇಖರ್ ರವರು ಮಕ್ಕಳ ಮಳಿಗೆಗಳಿಗೆ ಭೇಟಿ ನೀಡಿ  ಅವರ ಮಾದರಿಗಳ ಬಗ್ಗೆ ಮಾಹಿತಿಯನ್ನು ಕೇಳುತ್ತಿದ್ದರು. ಮಕ್ಕಳು ಉತ್ಸಾಹದಿಂದ ತಮ್ಮ ತಮ್ಮ ಮಳಿಗೆಗಳಿಗೆ ಅವರನ್ನು ಕರೆಸಿಕೊಂಡು ಸೆಲ್ಫಿ ಫೋಟೊಗಳನ್ನು ತೆಗೆದುಕೊಂಡು ತಮ್ಮ ಪ್ರಾಜೆಕ್ಟ್ ಬಗ್ಗೆ ವಿವರವನ್ನು ತಿಳಿಸಿದರು .



ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಶ್ರೀವಾರಿ ಚಂದ್ರಶೇಖರ್ ರವರೊಂದಿಗೆ ನಮ್ಮ ವಿದ್ಯಾರ್ಥಿಗಳು


ದೆಹಲಿಗೆ ಬಂದ ಮೂರನೇ ದಿನ ಅಂದರೆ 15/9/2022 ರಂದು ಬೆಳಿಗ್ಗೆ ಉಪಹಾರ ಚೋಲೆ ಬಟೂರೆಯನ್ನು ಸವಿದು  ಪ್ರಗತಿ ಮೈದಾನಕ್ಕೆ ಪ್ರಯಾಣ ಬೆಳೆಸಿದೆವು. ಈ ದಿನ ಸಾರ್ವಜನಿಕರಿಗೆ ವೀಕ್ಷಣಾ ಅವಕಾಶವಿತ್ತು, ಎಲ್ಲಾ ವಿದ್ಯಾರ್ಥಿಗಳು  ತಮ್ಮ ಸ್ಟಾಲ್ ಗಳ ಹತ್ತಿರ ಬಂದ ಜನರಿಗೆ ಮಾಹಿತಿ ನೀಡಿ ಅವರ  ಅಭಿಪ್ರಾಯಗಳನ್ನು ಪುಸ್ತಕದಲ್ಲಿ ಬರೆಸುತ್ತಿದ್ದರು. ಸರಳ , ಹೆಚ್ಚು ವೆಚ್ಚವಿಲ್ಲದ ಹಾಗೂ ಸಮಾಜಕ್ಕೆ ಉಪಯುಕ್ತವಾದ ಮಾದರಿಗಳು ಪ್ರದರ್ಶನಕ್ಕೆ ಆಯ್ಕೆಯಾಗಿದ್ದವು. ಒಂದಕ್ಕೊಂದು ಭಿನ್ನ ಹಾಗೂ ನಾವಿನ್ಯಯುತ ಮಾದರಿಗಳು ನಮ್ಮೆಲ್ಲರ ಮನಸ್ಸನ್ನು ಸೂರೆಗೊಂಡಿತ್ತು. ಅಲ್ಲಿ ಹಬ್ಬದ ವಾತಾವರಣವಿತ್ತು.



ಬಹುಮಾನ ವಿಜೇತ ನಮ್ಮ ರಾಜ್ಯದ ಕೆಲವು ಸರಳ ಮಾದರಿಗಳು

ಸಂಜೆ 5ಗಂಟೆಗೆ ಎಲ್ಲಾ ಮಾದರಿಗಳನ್ನು ಪ್ಯಾಕ್ ಮಾಡಿ ಸಿ.ಸಿ.ಆರ್.ಟಿ ಗೆ ಹೊರಟೆವು.  ಉತ್ತಮವಾದ 60 ಮಾದರಿಗಳು ಯಾವುವು ಎಂದು ಆಯ್ಕೆ ಸಮಿತಿ ತಿಳಿಸಿರಲಿಲ್ಲ . ಎಲ್ಲರಿಗೂ ತಿಳಿದುಕೊಳ್ಳುವ ಕುತೂಹಲ.  ಆ ದಿನ ಎಲ್ಲಾ ಮಕ್ಕಳಿಗೆ ಭಾಗವಹಿಸುವಿಕೆಯ ಪ್ರಶಂಸನಾ  ಪ್ರಶಸ್ತಿ ಪತ್ರಗಳನ್ನು ರಾಜ್ಯ ಉಸ್ತುವಾರಿ ಅಧಿಕಾರಿಗಳಿಗೆ ನೀಡಿದರು.ಸಿ.ಸಿ.ಆರ್.ಟಿ ಗೆ ಬಂದು ಊಟ ಮಾಡಿ ಹರಟೆ ಹೊಡೆದು ಮಲಗಿದೆವು.

16/9/2022 ರಂದು ವಿಗ್ಯಾನ್ ಭವನದಲ್ಲಿ ಮಧ್ಯಾಹ್ನ 1.30 ರಿಂದ ಪ್ರಶಸ್ತಿ ಪ್ರದಾನ ಸಮಾರಂಭವಿತ್ತು. ವಿಗ್ಯಾನ್ ಭವನಕ್ಕೆ ಮಧ್ಯಾಹ್ನ 12  ಕ್ಕೆತಲುಪಿದೆವು  ಆಹ್ವಾನ ಪತ್ರಿಕೆ ಮತ್ತು ಗುರುತಿನ ಕಾರ್ಡ್ ಬಿಟ್ಟು ಏನನ್ನೂ ತೆಗೆದುಕೊಂಡು ಹೋಗುವಂತಿರಲಿಲ್ಲ. ಎಲ್ಲ ತಪಾಸಣೆಗಳ ನಂತರ ಸುಸಜ್ಜಿತವಾದ ಭವ್ಯವಾದ ಭವನದ  ಸಭಾಂಗಣವನ್ನು ಪ್ರವೇಶಿಸಿದೆವು. ನಾವು ನಮ್ಮ ರಾಜ್ಯದವರಿಗೆ ಮೀಸಲಾಗಿರಿಸದ  ಆಸನಗಳಲ್ಲಿ ಆಸೀನರಾದೆವು . ಕಾರ್ಯಕ್ರಮವು 1 ಗಂಟೆಯ ನಂತರ  ಪ್ರಾರಂಭವಾಯಿತು.  

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ರಾಜ್ಯ ಸಚಿವರಾದ ಶ್ರೀಯುತ ಡಾ ಜಿತೇಂದ್ರ ಸಿಂಗ್ , ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಶ್ರೀವಾರಿ ಚಂದ್ರಶೇಖರ್,  ಎನ್.ಐ.ಎಫ್.ನ ಮುಖ್ಯಸ್ಥರಾದ ಡಾ.ಗೋಯಲ್  ರವರು ವೇದಿಕೆಯ ಮೇಲೆ  ಉಪಸ್ಥಿತರಿದ್ದರು ನಿರೂಪಕಿ ಪ್ರಶಸ್ತಿಗೆ ಆಯ್ಕೆಯಾದ 60 ವಿದ್ಯಾರ್ಥಿಗಳು ಮತ್ತು ಅವರ ಮಾದರಿಗಳನ್ನು ಹೆಸರಿಸಿದರು. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಮುಂದಿನ ಆಸನ ವ್ಯವಸ್ಥೆಯನ್ನು ಮಾಡಲಾಗಿತ್ತು,  ನಮ್ಮ ರಾಜ್ಯದ 9 ವಿದ್ಯಾರ್ಥಿಗಳ ಹೆಸರನ್ನು ಹೇಳಿದಾಗ ನಮ್ಮೆಲ್ಲರ ಸಂತೋಷಕ್ಕೆ ಪಾರವಿರಲಿಲ್ಲ ಮತ್ತು ಹೆಮ್ಮೆಅನಿಸಿತು. ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಮಾನ್ಯ ಸಚಿವರಿಂದ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಗಳನ್ನು ಸ್ವೀಕರಿಸಿದರು ಕೊನೆಯಲ್ಲಿ ಚಿನ್ನ ಬೆಳ್ಳಿ ಮತ್ತು ಕಂಚು ಪದಕ ವಿಜೇತ ವಿದ್ಯಾರ್ಥಿಗಳ ಹೆಸರನ್ನು ಘೋಷಿಸಿ ಅವರಿಗೆ ಪ್ರಶಸ್ತಿ ವಿತರಿಸಲಾಯಿತು.

ಪ್ರಶಸ್ತಿ ವಿಜೇತ 9 ವಿದ್ಯಾರ್ಥಿಗಳ ವಿವರ 

1. ಬಾಗಲಕೋಟೆಯ ರೋಹಿಣಿ ಗಂಗಾರಾಂ ದೊಡ್ಡಮನಿ 

2. ಧಾರವಾಡದ ಪುಟ್ಟವ್ವ ರಮೇಶ್,  

3. ಹಾಸನದ ರಿತೇಶ್ಎಂ,  

4.ಕಲ್ಬರ್ಗಿಯ ಮಲ್ಲಿಕಾ, 

5. ಕಾರವಾರದ ಧನ್ಯ ಚಂದ್ರಶೇಖರ್ 

6. ಉತ್ತರಕನ್ನಡದ ಸಾಯಿನಾಥ್ ಮಲ್ದಾಕರ್, 

7. ಬೆಂಗಳೂರುನಗರದ ಕೀರ್ತಿ ಪಟೇಲ್ , 

8. ಚಿತ್ರದುರ್ಗದ ಲಾಸ್ಯ ಚಂದ್ರಶೇಖರ್ ತಾವರೆ,   

9. ಬೆಂಗಳೂರಿನ ಸುಗಲಿ ಯಶಸ್ ಕುಮಾರ್ - ಅವರು ಸಿದ್ಧಪಡಿಸಿದ ಯೋಜನೆಗಳಿಗೆ ಪ್ರಶಸ್ತಿ ಲಭಿಸಿದೆ.


 1. ಬಾಗಲಕೋಟೆಯ ರೋಹಿಣಿ ಗಂಗಾರಾಂ ದೊಡ್ಡಮನಿ        

2. ಧಾರವಾಡದ ಪುಟ್ಟವ್ವ ರಮೇಶ್

3. ಹಾಸನದ ರಿತೇಶ್ಎಂ

4.ಕಲ್ಬುರ್ಗಿಯ ಮಲ್ಲಿಕಾ


5. ಕಾರವಾರದ ಧನ್ಯ ಚಂದ್ರಶೇಖರ್

6. ಉತ್ತರ ಕನ್ನಡದ ಸಾಯಿನಾಥ್ ಮಲ್ದಾಕರ್

7. ಬೆಂಗಳೂರುನಗರದ ಕೀರ್ತಿ ಪಟೇಲ್

8. ಚಿತ್ರದುರ್ಗದ ಲಾಸ್ಯ ಚಂದ್ರಶೇಖರ್ ತಾವರೆ

9. ಬೆಂಗಳೂರಿನ ಸುಗಲಿ ಯಶಸ್ ಕುಮಾರ್

ಎಲ್ಲರೂ ಫೋಟೋಗಳನ್ನು ತೆಗೆಸಿಕೊಂಡು ನಂತರ ಊಟಕ್ಕೆ ಹೊರಟೆವು ಕೂಟದಲ್ಲಿ ವಿವಿಧ ರುಚಿಯಾದ ಭಕ್ಷ್ಯಗಳ ಇದ್ದವು ಊಟ ಮುಗಿಸಿ ಸಿ.ಸಿ.ಆರ್.ಟಿ ಗೆ ಬಂದು ಮರುದಿನ ಪ್ರಯಾಣಕ್ಕೆ ಲಗೇಜುಗಳನ್ನು ಸಜ್ಜುಗೊಳಿಸಿ ರಾತ್ರಿ ವಿಶ್ರಾಂತಿ ತೆಗೆದುಕೊಂಡೆವು.


17/9/2022 ರಂದು ಬೇಗ ಎದ್ದು ಲಗೇಜು ಮತ್ತು ಪ್ರಾಜೆಕ್ಟ್ ಗಳ ಜತೆಗೆ  7 ಗಂಟೆಗೆ ನಿಜಾಮುದ್ದೀನ್ ರೈಲ್ವೆ ನಿಲ್ದಾಣ ತಲುಪಿದೆವು. ಎಲ್ಲಾ ವಿದ್ಯಾರ್ಥಿಗಳು  ಶಿಕ್ಷಕರ ಉಸ್ತುವಾರಿಯಲ್ಲಿ ತಮ್ಮತಮ್ಮ ಲಗೇಜುಗಳನ್ನು ರೈಲಿನಲ್ಲಿ ಇರಿಸಿ ಆಸೀನರಾದೆವು. ಬೆಳಿಗ್ಗೆ 8.30 ಕ್ಕೆ ರೈಲು ಬೆಂಗಳೂರಿಗೆ ಹೊರಟಿತು.  18/9/2022ರ ಸಂಜೆ ರೈಲು ಕರ್ನಾಟಕ ಪ್ರವೇಶಿಸಿತು ಆಯಾ ಜಿಲ್ಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ತಮ್ಮ ಜಿಲ್ಲೆಯ ಸಮೀಪದ ರೈಲ್ವೆ ಸ್ಟೇಷನ್ ನಲ್ಲಿ ಭಾರವಾದ ಮನಸ್ಸಿನಿಂದ ಇಳಿಯುತ್ತಿದ್ದರು. ಒಟ್ಟಾರೆ ಹೇಳುವುದಾದರೆ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಜೀವನದಲ್ಲಿ ಮರೆಯಲಾಗದ ಅದ್ಭುತವಾದ ಅನುಭವ ಆಗಿತ್ತು. 19/9/2022ರ ಬೆಳಿಗಿನ ಜಾವ 4.30 ಗಂಟೆಗೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿದೆವು.  ಈ ಅವಕಾಶವನ್ನು ಕಲ್ಪಿಸಿದ ನಮ್ಮ ರಾಜ್ಯ ಸರ್ಕಾರ ,ನಮ್ಮ ಶಿಕ್ಷಣ ಇಲಾಖೆ ಡಿ.ಎಸ್.ಇ.ಆರ್.ಟಿ  ಹಾಗೂ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್)ಯ ಅಧಿಕಾರಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.


ನಮ್ಮ ರಾಜ್ಯದ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ  ಬಿ.ಸಿ.ನಾಗೇಶ್ ಸರ್ ರವರು ವಿದ್ಯಾರ್ಥಿಗಳ ಆಸಕ್ತಿ, ಪ್ರತಿಭೆಯನ್ನು ಗುರುತಿಸಿರುವ ಶಿಕ್ಷಕರು, ಮಾರ್ಗದರ್ಶಕರು, ಪೋಷಕರು, ಡಿ.ಎಸ್.ಇ.ಆರ್.ಟಿ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್)ಸೇರಿ ಈ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ.


ಶ್ರೀ ಲಕ್ಷ್ಮೀ ಪ್ರಸಾದ್ ನಾಯಕ್

ಸಹ ಶಿಕ್ಷಕರು ವಿಜ್ಞಾನ, ಸರ್ಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ-ಕನ್ನಡ), 

ಕೆಂಗೇರಿ, 

ಬೆಂಗಳೂರು ದಕ್ಷಿಣ ಜಿಲ್ಲೆ.

2 comments:

  1. ಎಳೆಯ ಮನಸುಗಳಲ್ಲಿ ವಿಜ್ಞಾನ ಮತ್ತು ಸಂಶೋಧನೆಯ ಬೀಜ ಬಿತ್ತಿ ಪ್ರೊತ್ಸಾಹ ನೀಡಿದ ಎಲ್ಲ ಶಿಕ್ಷಕರಿಗೆ ಮತ್ತು ಅಧಿಕಾರ ವರ್ಗದವರಿಗೆ, ಭಾಗವಹಿಸಿದ ಮತ್ತು ಪ್ರಶಸ್ತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.

    ReplyDelete
  2. Thank you for the clear picture of Finals of Inspire awards.

    ReplyDelete