Tuesday, October 4, 2022

ಮಕ್ಕಳ ಮಮತೆಯ ಮಾತೆ, ಶ್ರೀಮತಿ ಬಿ.ಎನ್.‌ ರೂಪ

 ಮಕ್ಕಳ ಮಮತೆಯ ಮಾತೆ, ಶ್ರೀಮತಿ ಬಿ.ಎನ್.‌ ರೂಪ

ಲೇಖಕ :ಶ್ರೀ ರಾಮಚಂದ್ರಭಟ್‌ ಬಿ.ಜಿ.

ದಿನಾಂಕ 12- 7 -2018ರಂದು ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ಕಗ್ಗಲಿಪುರ, ಬೆಂಗಳೂರು ದಕ್ಷಿಣ ವಲಯ-1ಇಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಶಿಕ್ಷಕ ಸೇವೆಗೆ ಸೇರಿದ ಶ್ರೀಮತಿ ಬಿ.ಎನ್.‌ ರೂಪ ಅವರಿಗೆ ಶಿಕ್ಷಕಿಯಾಗಿಯೇ ಕರ್ತವ್ಯ ನಿರ್ವಹಿಸಬೇಕೆಂಬ ಅದಮ್ಯ ಆಸೆಯೊಂದಿತ್ತು. ಸಮಾಜ ಕಲ್ಯಾಣ ಇಲಾಖೆ ,ಹಿಂದುಳಿದ ವರ್ಗಗಳ ಇಲಾಖೆ ,ಎಚ್ಎಎಲ್ ನ ಫೌಂಡ್ರಿ ಮತ್ತು ಫೋರ್ಜ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಕೆ ಎ ಎಸ್‌  ಪರೀಕ್ಷೆಯಲ್ಲೂ ಅದೃಷ್ಟ ಖುಲಾಯಿಸಿದರೂ, ಶಿಕ್ಷಕ ವೃತ್ತಿಯ ಕಡೆ ಅವರಿಗೆ ಇದ್ದ ಹೆಚ್ಚಿನ ಒಲವು, ಶಿಕ್ಷಣದೆಡೆಗೆ ಅವರನ್ನು ಕರೆತಂದಿತು. ಏನನ್ನಾದರೂ ಸಾಧನೆಮಾಡಬೇಕು, ದೇಶದ ಭವಿಷ್ಯವನ್ನು ರೂಪಿಸಬೇಕು. ದೇಶದ ಮಾನವ ಸಂಪನ್ಮೂಲ ಸಂವೃದ್ಧಿಯೇ ಶಿಕ್ಷಣದ ಉದ್ದೇಶ ಎಂಬ ಉದಾತ್ತ ಗುರಿಯೊಂದಿಗೆ ಶಿಕ್ಷಣ ಇಲಾಖೆಯಲ್ಲಿ ಸೇವೆಗೆ ಸೇರಿದರು.

ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ, ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ರೂಪಾ ಅವರು ಹಿಂದೆ ರಾಜ್ಯಪಾಲರಾಗಿದ್ದ ಶ್ರೀಯುತ ಟಿ. ಎನ್‌. ಚತುರ್ವೇದಿಯವರಿಂದ ಚಿನ್ನದ ಪದಕ ಸ್ವೀಕರಿಸಿದ ಸಾಧಕಿ. ಹಲವು ಶಾಲೆಗಳಲ್ಲಿ, ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ ರೂ,  ಪ ಅವರ ಮೇಲೆ ತಂದೆಯವರಾದ ದಿ.ಶ್ರೀಯುತ ಬಿ.ಕೆ. ನಾಮದೇವರ ಪ್ರಭಾವ ಅಪಾರ. ಸಹಾಯಕ ನಿರ್ದೇಶಕರಾಗಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಂದೆಯವರು, ರೂಪ ಅವರು ಸರ್ಕಾರಿ ಸೇವೆಗೆ ಸೇರಲು ಮುಖ್ಯ ಪ್ರೇರಣೆ.



ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಒಡನಾಟ, ವಿದ್ಯಾರ್ಥಿಗಳಿಗೆ ವಿಷಯವನ್ನು ಮನದಟ್ಟಾಗುವಂತೆ ಕಲಿಸಬೇಕು ಎಂಬ ತುಡಿತ, ಒಳ್ಳೆಯ ಸಂಸ್ಕಾರ ಆಚಾರ-ವಿಚಾರಗಳನ್ನು ತಿಳಿಸಿಕೊಟ್ಟು ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಬೇಕೆಂಬ ಇಂಗಿತ, ಜೊತೆಗೆ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕೆಂಬ ಸದಾಶಯದೊಂದಿಗೆ ರೂಪ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗುರು- ಶಿಷ್ಯ ಸಂಬಂಧ ಬಿಡಿಸಲಾಗದ ಅನುಬಂಧ. ಮಕ್ಕಳಿಗೆ ತಮ್ಮ ಪ್ರಿಯ ಶಿಕ್ಷಕರ ಹುಟ್ಟುಹಬ್ಬವೂ ಸಡಗರದ ಸಂದರ್ಭವೇ. ಇಂತಹ ಗುರುಮಾತೆಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಪೋಷಕರನ್ನ ಹುರಿದುಂಬಿಸಿ ವಿದ್ಯಾರ್ಥಿಗಳು ಅತ್ಯುತ್ತಮ ಸ್ಥಾನವನ್ನು ಗಳಿಸುವುದನ್ನು ನೋಡುವುದೇ ಒಂದು ಹಬ್ಬ.

ತಮ್ಮ ತರಗತಿಗಳಿಗೆ ಬೇಕಾದ ಹಲವಾರು ಕಲಿಕಾ ಉಪಕರಣಗಳನ್ನು ಸ್ವತಹ ತಯಾರಿಸಿಕೊಂಡು, ತರಗತಿ ಕೋಣೆಗೆ ಯಾವಾಗಲೂ ಸಿದ್ಧತೆ ಮಾಡಿಕೊಂಡು ಹೋಗುವುದು ಅವರ ರೂಡಿ. ವಿಜ್ಞಾನದ ಪರಿಕಲ್ಪನೆಗಳನ್ನು ಸರಳವಾಗಿ ಬೋಧಿಸುವ ಕಲೆ ಇವರಿಗೆ ಕರಗತ. ಇದರಲ್ಲಿ ಇವರ ಕುಟುಂಬದ ಪಾತ್ರ ಮಹತ್ವದ್ದು. ತಮ್ಮ ಪತಿ, ಶ್ರೀ ಕೆ.ವಿ. ವಾಸು ಅವರು ತಯಾರಿಸಿದ  10ಇಂಚಿನ ಆಸ್ಟ್ರೋನಾಮಿಕಲ್‌ ಟೆಲಿಸ್ಕೋಪ್ ಅನ್ನು ಬಳಸಿ, ಶಾಲೆಯ ವಿದ್ಯಾರ್ಥಿಗಳಿಗೆ ರಾತ್ರಿಯ ಆಕಾಶ ವೀಕ್ಷಿಸುವ ಕಾರ್ಯಕ್ರಮ ಏರ್ಪಡಿಸಿ ವಿವಿಧ ಆಕಾಶ ಕಾಯಗಳ ದರ್ಶನ ಮಾಡಿಸಿದ್ದಾರೆ. ತಮ್ಮ ಸಹೋದ್ಯೋಗಿ, ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಮಾನಸ ಅವರೊಂದಿಗೆ ಸೇರಿ ನಾಟಕಗಳನ್ನು ಬರೆದು ಪ್ರದರ್ಶಿಸಿದ್ದಾರೆ.



ವಜ್ರಮುನೇಶ್ವರನಗರದ ದೀಕ್ಷಕಾಲೇಜಿನವರು ಆಯೋಜಿಸಿದ ಅನನ್ಯ ಕಾರ್ಯಕ್ರಮ ‘ಪಂಪ್ಇಟ್ಅಪ್’ ಎಂಬ ವೈಜ್ಞಾನಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರ ವಿದ್ಯಾರ್ಥಿಗಳು ಪ್ರಥಮ ಬಹುಮಾನಕ್ಕೆ ಭಾಜನರಾಗಿರುತ್ತಾರೆ. ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಕ್ಲಸ್ಟರ್‌ ಮಟ್ಟದಲ್ಲಿ ವಿಜ್ಞಾನ ನಾಟಕ ಗೋಷ್ಠಿ ಪ್ರಬಂಧ ಸ್ಪರ್ಧೆ, ಇನ್‌ಸ್ಪೈರ್‌ ಅವಾರ್ಡ್ ಗೆ,  ಹಾಗೂ ಇತರ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ.

ವಿವೇಕಾನಂದ ಯೂತ್‌ ಫಾರ್‌ ಸೇವಾ ಅವರಿಂದ ಶಾಲೆಗೆ ಕಂಪ್ಯೂಟರ ಗಳನ್ನು ದಾನವಾಗಿ ಪಡೆದು ನಾವೀನ್ಯಯುತ ಬೋಧನೆಯಲ್ಲಿ ಬಳಸುತ್ತಿದ್ದಾರೆ. ಇನ್ಫೋಟೆಕ್‌ ಕಂಪೆನಿಯ ಮುಖ್ಯಸ್ಥರನ್ನು ಸಂಪರ್ಕಿಸಿ ನುರಿತ ಶಿಕ್ಷಣ ತಜ್ಞರು, ಸಂಪನ್ಮೂಲ ಶಿಕ್ಷಕರನ್ನು ಕರೆಸಿ ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ  ಮಾರ್ಗದರ್ಶನ ಒದಗಿಸಿದ್ದಾರೆ.

2015ರಲ್ಲಿ ಉತ್ತರಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡ ನಂತರ ಲಭ್ಯವಿರುವ ಸ್ಮಾರ್‌ ಕ್ಲಾಸ್ ಕ್ಲೌಡ್‌ ನೈನ್‌ ಕಂಪ್ಯೂಟಿಂಗ್ ಪ್ರಯೋಗಶಾಲೆಯನ್ನು ಬಳಸಿಕೊಂಡು, ದೈನಂದಿನ ತರಗತಿಯಲ್ಲಿ ಡಿಜಿಲ್‌ ಕಂಟೆಂಟ್‌ ಮೂಲಕ ಸ್ಮಾರ್ಟ್‌ ತರಗತಿಗಳನ್ನು ನಡೆಸಿ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ ಎನಿಸಿಕೊಂಡಿದ್ದಾರೆ.



ಶಾಲೆಯಲ್ಲಿ ಅಟಲ್‌ ಟಿಂಕರಿಂಗ್‌ ಲ್ಯಾಬ್‌ (ಎಟಿಎಲ್) ಸ್ಥಾಪನೆಯಲ್ಲಿ ರೂಪ ಅವರ ಪಾತ್ರ ಮಹತ್ವದ್ದು. ಅದರ ಉಸ್ತುವಾರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಅವರ ವೀಡಿಯೊಗಳಲ್ಲಿ ಒಂದನ್ನು MHRD ಬೆಂಗಳೂರು ಎಟಿಎಲ್‌ ಶಾಲೆಗಳಲ್ಲಿ ಆಯ್ಕೆಮಾಡಿದೆ. ಅದನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿಪ್ರಸಾರಮಾಡಿದೆ. ಇವರ ಶಾಲೆಗೆ ವಿದೇಶಿ ಪ್ರತಿನಿಧಿಗಳ ತಂಡವೂ ಭೇಟಿ ನೀಡಿದೆ.

ATL ವಿಡಿಯೋ

೨೦೧೯ ರಿಂದ ಬೆಂಗಳೂರಿನ ಗೋರಿಪಾಳ್ಯದ  ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢಶಾಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದು, ಅಲ್ಲಿನ ಮುಖ್ಯಶಿಕ್ಷಕರಾದ ಶ್ರೀಮತಿ ಸಾಯಿರಾಬಾನು ಅವರ ಸಹಕಾರ, ಮಾರ್ಗದರ್ಶನಗಳನ್ನು ರೂಪ ಅವರು ಸದಾ ಸ್ಮರಿಸಿಕೊಳ್ಳುತ್ತಾರೆ. ಕೋವಿಡ್‌ ಸಂದರ್ಭದಲ್ಲಿ ಡಿ.ಡಿ. ಚಂದನದಲ್ಲಿ ರೂಪ ಅವರ ಪಾಠಗಳು ಪ್ರಸಾರವಾಗಿವೆ. ಸಮರ್ಥನಂ ಸಂಸ್ಥೆಯ ನೆರವಿನಿಂದ  ಈಗಿನ ಶಾಲೆಯಲ್ಲಿ ಮಿನಿ ಸೈನ್ಸ್‌ ಸೆಂಟರನ್ನು ಸ್ಥಾಪಿಸಿ, ನಾಲ್ಕುವರೆಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸುಮಾರು 80 ಮಾದರಿಗಳನ್ನು ಶಾಲೆಗೆ ನೀಡಿರುತ್ತಾರೆ. ಇಲಾಖೆಯ ಹಲವಾರು ಕಾರ್ಯಕ್ರಮಗಳಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ  ಸಂಪನ್ಮೂಲ ವ್ಯಕ್ತಿಯಾಗಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಲೇ ಬಂದಿದ್ದಾರೆ. ಕೋವಿಡ್‌ ಸಮಯದಲ್ಲಿ  ಇವರ ಪಾಠಗಳು  ಡಿ.ಡಿ.ಚಂದನ ವಾಹಿನಿಯ ಮೂಲಕ ಇಡೀ ರಾಜ್ಯದ ವಿದ್ಯಾರ್ಥಿಗಳನ್ನು  ತಲುಪಿವೆ.

 




ರಸಪ್ರಶ್ನೆ,ಪ್ರಬಂಧಸ್ಪರ್ಧೆ,ವಿಜ್ಞಾನಗೋಷ್ಠಿಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ದೀಕ್ಷಾ ಪೋರ್ಟಲ್‌ಗಾಗಿ ಡಿಜಿಟಲ್ ವಿಷಯ, AAC ಭಾಷಾಂತರ, ಮತ್ತಿತರ ಕಾರ್ಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬನಶಂಕರಿ, ಇಲ್ಲಿ ವಿಜ್ಞಾನಿಗಳೊಂದಿಗೆ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

ನಮ್ಮಜೀವನದ ಗುರಿ ಕಲಿಕೆ, ಹುಟ್ಟಿನಿಂದ ಸಾವಿನವರೆಗೂ ಕಲಿಯುವುದು ಬೇಕಾದಷ್ಟಿದೆ ನನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಹಿರಿಯರು, ಕಿರಿಯರು, ಎಲ್ಲರನ್ನೂ ನೋಡಿ, ಕೇಳಿ, ಈಗಲೂ ಕಲಿಯುತ್ತಿದ್ದೇನೆ.  ನಾನೊಬ್ಬ ನಿರಂತರವಾಗಿ ಕಲಿಯುತ್ತಲೇ ಇರುವ ವಿದ್ಯಾರ್ಥಿನಿ ಎಂದು ವಿನಮ್ರವಾಗಿ ಹೇಳುತ್ತಾರೆ. ‌

ಸವಿಜ್ಞಾನಕ್ಕೆ ತಮ್ಮ ಲೇಖನಗಳನ್ನುಬರೆಯುವ ಮೂಲಕ ನಮ್ಮ ಓದುಗರಿಗೆ ಪರಿಚಯವಾಗಿರುವ ಶ್ರೀಮತಿ ರೂಪ ಅವರಿಗೆ ಈ ಬಾರಿ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಮಟ್ಟದ ʼಉತ್ತಮ ಶಿಕ್ಷಕʼ ಪ್ರಶಸ್ತಿಗೆ ಭಾಜನರಾದ ಸಂದರ್ಭದಲ್ಲಿ ಸವಿಜ್ಞಾನ ತಂಡದ ಹಾರ್ದಿಕ ಅಭಿನಂದನೆಗಳು ಹಾಗೂ ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಪ್ರೇರೇಪಣೆ ದೊರಕಲಿ ಎಂದು ತಂಡ ಹಾರೈಸುತ್ತದೆ.

 


 

3 comments:

  1. Congratulations again Roopa. 💐💐💐 Really Iam very proud to have you in my life as very good friend👍

    ReplyDelete
  2. Congrats dear, I am really proud of u

    ReplyDelete
  3. Nice to read your achievements Roopa madm. congratulations,
    From shashikumar

    ReplyDelete