Tuesday, October 4, 2022

ನೋವು, ಕಣ್ರೀ ನೋವು !

ನೋವು, ಕಣ್ರೀ ನೋವು !

ಲೇಖಕರು : ಸುರೇಶ ಸಂಕೃತಿ


ನಾವೆಲ್ಲರೂ ಅನುಭವಿಸಿರುವ ವಿವಿಧ ಬಗೆಯ ದೈಹಿಕ ಹಾಗೂ ಮಾನಸಿಕ ನೋವುಗಳ ಹಿನ್ನೆಲೆಯನ್ನು ಸವಿಸ್ತಾರವಾಗಿ ವಿಶ್ಲೇಷಿಸಿ ನೋಡುವ ಒಂದು ಪ್ರಯತ್ನವಾದ ಈ ಲೇಖನವನ್ನು ಬರೆದವರು ಶಿಕ್ಷಕ ಸುರೇಶ್ ಸಂಕೃತಿ ಅವರು.


ಅಮ್ಮಾ ನೋವು!!!, ತಲೆ ನೋವು, ಹೊಟ್ಟೆ ನೋವು,ಗಂಟಲು ನೋವು, ಕೈಕಾಲು ನೋವು, ಕೀಲು ನೋವು, ಮಂಡಿ ನೋವು, ಸೊಂಟ ನೋವು, ಕಿವಿ ನೋವು, ಹಲ್ಲು ನೋವು,- ಹೀಗೆ, ದಿನ ನಿತ್ಯ ನಮ್ಮನ್ನು ಕಾಡುವ ದೇಹದ ವಿವಿಧ ಭಾಗಗಳಲ್ಲಿನ ನೋವುಗಳು ಅನೇಕ ಬಗೆಯವು. ಇವುಗಳಲ್ಲದೆ, ತಿವಿದಂತೆ ನೋವು, ಚುಚ್ಚಿದಂತೆ ನೋವು, ಹಿಂಡಿದಂತೆ ನೋವು, ಒತ್ತಿದಂತೆ ನೋವು, ನುಲಿದಂತೆ ನೋವು ಉರಿ, ತುರಿಕೆ ಮುಂತಾದ ದೈಹಿಕ ನೋವುಗಳು ಹಾಗೂ ಖಿನ್ನತೆ, ದುಗುಡ, ಆತಂಕ, ಮುಂತಾದ ಮಾನಸಿಕ ನೋವುಗಳು -ಹೀಗೆ, ನೋವುಗಳಲ್ಲಿರುವ ವಿಧಗಳು ಹತ್ತು, ಹಲವು.

ಅಂತರ ರಾಷ್ಟ್ರೀಯ ನೋವು ಅಧ್ಯಯನ ಸಂಸ್ಥೆಯ ಅನುಸಾರ, ನೋವು ಎನ್ನುವುದು ದೇಹದ ಅಂಗಾಂಶಕ್ಕೆ ಆಗಬಹುದಾದ ಅಥವಾ ಆಗಿರುವ ಹಾನಿಯ ಕಾರಣದಿಂದ ಉಂಟಾಗುವ ಭಾವನಾತ್ಮಕ ಮತ್ತು ದೈಹಿಕ ಸಂವೇದನೆ. ದೇಹಕ್ಕೆ ಅಥವಾ ಮನಸ್ಸಿಗೆ ಆಗುವ ಅಹಿತಕರ ಅನುಭವವೇ ನೋವು. ದೇಹದ ಅಂಗಕ್ಕೆ ಆಗುವ ಹಾನಿಯ ಸೂಚನೆ ಅಥವಾ ಅದರ ಮುನ್ಸೂಚನೆಯನ್ನು ನೀಡುವುದರಿಂದ, ನೋವು ಒಂದು ಹಂತದವರೆಗೆ ದೇಹದ ರಕ್ಷಣಾವ್ಯವಸ್ಥೆಯಾಗಿ ಕೆಲಸ ಮಾಡುತ್ತದೆ. ಯಾವುದೇ ನೋವು, ಅದಕ್ಕೆ ಕಾರಣವಾಗುವ ಪರಿಸ್ಥಿತಿಯಿಂದ ಪಾರಾಗಲು ವ್ಯಕ್ತಿಯನ್ನು ಪ್ರೇರೇಪಿಸುತ್ತದೆ. ಸಾಮಾನ್ಯವಾಗಿ, ನೋವಿಗೆ ಕಾರಣವಾಗುವ ಅಸಹನೀಯ ಭೌತಿಕ ಸ್ಥಿತಿಯನ್ನು ನಿವಾರಿಸಿದ ಕೂಡಲೇ ಅದು ಉಪಶಮನವಾಗುತ್ತದೆ. ಉದಾಹರಣೆಗೆ, ಬಿಸಿಲಿನ ಧಗೆಯಿಂದ ಉಂಟಾಗುವ ಅನುಭವ ನೆರಳಿಗೆ ಹೋದಕೂಡಲೇ ನಿವಾರಣೆಯಾಗುತ್ತದೆ. ಕಾಲಿಗೆ ಚುಚ್ಚಿದ ಮುಳ್ಳು ತೆಗೆದೊಡನೆ ಆ ನೋವು ಸಹನೀಯ ಎನಿಸುತ್ತದೆ. ಆದರೆ, ಮುಳ್ಳಿನಿಂದಾದ ಗಾಯ ವಾಸಿ ಆಗುವರೆಗೂ ಅಲ್ಲಿ ನೋವು ಸಣ್ಣ ಪ್ರಮಾಣದಲ್ಲಿ ಉಳಿದುಹೋಗುತ್ತದೆ.

ನೋವುಗಳನ್ನು ಸ್ಥೂಲವಾಗಿ ಹೀಗೆ ವರ್ಗೀಕರಿಸಲಾಗಿದೆ : ದೇಹದ ಅಂಗಾಂಶಗಳಿಗೆ ಹಾನಿ ಉಂಟುಮಾಡುವ ಗಾಯ, ಬಾಸುಂಡೆ, ವಿದ್ಯುದಾಘಾತ, ಸ್ನಾಯು ಸೆಳೆತ, ಮೂಳೆ ಮುರಿತ, ಜಂತುವಿನ ಕಡಿತ, ಹುಳುಕಾಟ, ಮುಂತಾದ ನೋವುಗಳು, ಅಂಗಗಳ ಅಸಮರ್ಪಕ ಕಾರ್ಯದಿಂದ ಉಂಟಾಗುವ ಅಜೀರ್ಣ, ಉದರಾಮ್ಲ, ನರದೋಷ ಮುಂತಾದುವುಗಳಿಗೆ ಸಂಬಂಧಿಸಿದ ನೋವುಗಳು, ಬೆಂಕಿ, ಬಿಸಿಲು ಮುಂತಾದ ಭೌತಿಕ ಪರಿಸರದಿಂದ ಉಂಟಾಗುವ ನೋವುಗಳು, ರೋಗಾಣುಗಳ ಸೋಂಕಿನಿಂದಾಗುವ ನೋವುಗಳು, ಜೊತೆಗೆ, ಜೀವನ ಶೈಲಿಗೆ ಸಂಬಂಧಿಸಿದ ನೋವುಗಳು.

ವ್ಯಕ್ತಿಯೊಬ್ಬ ಅನುಭವಿಸುವ ನೋವಿನ ಸಂವೇದನೆಯನ್ನು ಅಳೆಯಲು ಡೋಲ್ ಎಂಬ ಏಕಮಾನವನ್ನು ಬಳಸಲಾಗುತ್ತಿತ್ತು. ಹೀಗಾಗಿ, ನೋವನ್ನು ಅಳೆಯುವ ಸಾಧನವನ್ನು ಇಂದಿಗೂ ಡೋಲಾರಿಮೀಟರ್ ಎಂದೇ ಕರೆಯಲಾಗುತ್ತಿದೆ. ನೋವಿನ ಪ್ರಮಾಣವನ್ನು ಅಳೆಯಲು ಇದರಲ್ಲಿ 1ರಿಂದ 10ರ ವರೆಗಿನ ಅಳತೆಪಟ್ಟಿ ಇದೆ. ನೋವಿನ ಅನುಭವದ ತೀವ್ರತೆ ಹೃದಯಾಘಾತದಲ್ಲಿ ಅತ್ಯಂತ ಗರಿಷ್ಟವಿದ್ದು, ಎರಡನೆಯ ಸ್ಥಾನ ಮೂತ್ರಕೋಶ ಅಥವಾ ಪಿತ್ತಕೋಶದಲ್ಲಿ ಹರಳುಗಳ ಸಂಗ್ರಹದಿಂವ ಉಂಟಾಗುವ ನೋವಿಗೆ ಹಾಗೂ ಮೂರನೆಯ ಸ್ಥಾನ ಹೆರಿಗೆಯ ನೋವಿಗೆ ಎಂದು ಹೇಳಲಾಗುತ್ತದೆ.  

       


ಡೋಲಾರಿಮೀಟರ್

 

ನೋವಿನ ಸಂವೇದನೆಯನ್ನು ಸ್ವೀಕರಿಸುವ ನರಮಂಡಲ ವ್ಯವಸ್ಥೆಯ ಭಾಗಗಳು

         

ಮಿದುಳಿನಲ್ಲಿ ನೋವಿನ ಪ್ರಕ್ರಿಯೆಗೆ ಸಂಬಂಧಿಸಿದ ಭಾಗಗಳು

ಎದೆ ಮತ್ತು ಉದರಕ್ಕೆ ಸಂಬಂಧಿಸಿದ ರೋಗ ಲಕ್ಷಣಗಳಲ್ಲಿ ಒಂದು ಅಂಗದ ನೋವು ಇನ್ನೆಲ್ಲೋ ಕಾಣಿಸಿದಂತೆ ಭಾಸವಾಗುತ್ತದೆ. ಉದರಾಮ್ಲದ ಸಮಸ್ಯೆ ಬೆನ್ನು ನೋವಿನಂತೆ ಭಾಸವಾಗಬಹುದು. ಹೃದಯಾಘಾತದ ಮುನ್ಸೂಚನೆ ಎದೆ ನೋವಿನ ಬದಲಿಗೆ ಎಡಭುಜ ಮತ್ತು ಎಡಗೈಗಳಲ್ಲಿ ನೋವಿನ ಅನುಭವವಾಗಬಹುದು ಅಥವಾ ಏದುಸಿರು, ಬೆವರುವುದು, ಆಯಾಸ ಮುಂತಾದ ಲಕ್ಷಣಗಳೊಂದಿಗೆ ಪ್ರಕಟವಾಗಬಹುದು.

ನೋವಿನ ಅನುಭವ ಮತ್ತು ನಮ್ಮ ಶರೀರ ಅದಕ್ಕೆ ತೋರಿಸುವ ಪ್ರತಿಕ್ರಿಯೆ ಸಂಕೀರ್ಣವಾಗಿದ್ದರೂ, ಅದು ಮಿಂಚಿನ ವೇಗದಲ್ಲಿ ಜರುಗುತ್ತದೆ. ನೋವಿಗೆ ಕಾರಣವಾಗುವ ದೋಷವನ್ನು ನಿವಾರಿಸಿದ ಕೂಡಲೇ ಶಮನವಾಗುವ ತಾತ್ಕಾಲಿಕ ನೋವು ಅಥವಾ ದೀರ್ಘಕಾಲ ಕಾಡುವ ತಲೆ ನೋವು, ಹೊಟ್ಟೆ ನೋವು ಮುಂತಾದ ಕೆಲವು ನೋವುಗಳು ಔಷದಿಯನ್ನು ತೆಗೆದುಕೊಂಡ ನಂತರ ಒಂದೆರಡು ಘಂಟೆಗಳಲ್ಲಿ ಉಪಶಮನ ಕಾಣುತ್ತವೆ. ಆದರೆ, ಮೈಗ್ರೇನ್, ಕೀಲುನೋವು (ರ‍್ಯುಮಟಾಯಿಡ್ ಅರ್ಥೈಟಿಸ್) ಮುಂತಾದುವು ದೀರ್ಘಕಾಲ ಕಾಡುವ ನೋವುಗಳು. ಅಪಘಾತ ಅಥವಾ ಗ್ಯಾಂಗ್ರೀನ್‌ನ ಕಾರಣದಿಂದ ಅಂಗಗಳ ಕೆಲ ಭಾಗಗಳನ್ನು ತೆಗೆದು ಹಾಕಿದ ಸಂದರ್ಭದಲ್ಲಿ ದೇಹದ ಉಳಿದ ಭಾಗದಲ್ಲಿ ಕಾಣಿಸಿಕೊಳ್ಳುವ ನೋವನ್ನು ಫ್ಯಾಂಟಮ್ ನೋವು ಅಥವಾ ಭೂತದ ನೋವು ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ತೊಡೆಯ ಭಾಗವನ್ನು ಬಿಟ್ಟು ಕಾಲಿನ ಉಳಿದ ಭಾಗವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾದ ವ್ಯಕ್ತಿಗಳಲ್ಲಿ, ಕೆಲವರಿಗೆ ಕಾಲಿನ ಮಂಡಿಯಲ್ಲಿ ಅಥವಾ ಮೀನಖಂಡದಲ್ಲಿ ತಿವಿದಂತೆ, ಇಲ್ಲವೇ ಒತ್ತಿ ಹಿಡಿದಂತೆ ಅಥವಾ ಬಿಸಿತಾಕಿದಂತೆ ಅನುಭವವಾಗಬಹುದು. ಇದು ಕೇವಲ ಮನಸ್ಸಿನ ಭ್ರಮೆಯಾಗಿದ್ದು, ಇದನ್ನೇ ಭೂತದ ನೋವು ಎಂದು ಕರೆಯಲಾಗುತ್ತದೆ.

ನೋವು ನಿವಾರಣೆಗೆ ಪರಿಸ್ಥಿತಿಯನ್ನು ಅವಲಂಬಿಸಿ ವಿವಿಧ ವಿಧಾನಗಳನ್ನು ಅನುಸರಿಸಲಾಗುತ್ತದೆ. ತಾತ್ಕಾಲಿಕ ನೋವುಗಳಿಗೆ ನೋವು ನಿವಾರಕ ಔಷಧಗಳನ್ನು ಬಳಸಲಾಗುತ್ತದೆ. ಔಷಧಿಗಳ ಬಳಕೆಯ ಹೊರತಾಗಿಯೂ, ಕಾವು ಕೊಡುವುದು, ಕಂಪನ ಚಿಕಿತ್ಸೆ, ವಿಕಿರಣ ಚಿಕಿತ್ಸೆ ಮುಂತಾದ ಭೌತಿಕ ಚಿಕಿತ್ಸೆಗಳೂ ನೋವನ್ನು ಶಮನಗೊಳಿಸುತ್ತವೆ. ಯೋಗ, ಪ್ರಾಣಾಯಾಮ, ಧ್ಯಾನ, ಇಲ್ಲವೇ ಪ್ರಶಾಂತ ವಾತಾವರಣದಲ್ಲಿ ಶುದ್ಧ ಗಾಳಿಯನ್ನು ಸೇವಿಸುವುದರಿಂದಲೂ ನೋವನ್ನು ಶಮನಗೊಳಿಸಬಹುದು. ಯಾವುದೇ ಖರ್ಚಿಲ್ಲದ ಇಂಥ ಚಿಕಿತ್ಸಾ ವಿಧಾನಗಳು ನೋವು ನಿವಾರಕ ಔಷಧಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳಿಂದ ನಮ್ಮನ್ನು ದೂರವಿಡುತ್ತವೆ. ಶಿಶುತಜ್ಞರು ವಿವಿಧ ರೀತಿಯ ಕಸರತ್ತು ಮಾಡುತ್ತಾ, ಮಕ್ಕಳನ್ನು ನಗಿಸುತ್ತಾ ಅವರ ಗಮನ ಬೇರೆಡೆಗೆ ಸೆಳೆದು ಚುಚ್ಚು ಮದ್ದನ್ನು ನೀಡಿ, ನೋವನ್ನು ಮರೆಸುವುದನ್ನು ನಾವು ನೋಡಿದ್ದೇವೆ. ಚುಚ್ಚು ಮದ್ದನ್ನು ನೀಡುವಾಗ ಮಕ್ಕಳ ಬಾಯಿಗೆ ಸಕ್ಕರೆಯನ್ನೋ, ಮಿಠಾಯಿಯನ್ನೋ ಹಾಕಿ, ನೋವನ್ನು ಮರೆಸುವ ವಿಧಾನವನ್ನು ಕೆಲ ವೈದ್ಯರು ಪಾಲಿಸುವುದನ್ನೂ ನಾವು ನೋಡಿದ್ದೇವೆೆ.

ಒಬ್ಬ ವೈದ್ಯರು ತಮ್ಮ ಪತ್ನಿಯೊಂದಿಗೆ ಸಿನಿಮಾ ನೋಡಲು ಹೋದರು. ಆಸಕ್ತಿಯಿಂದ ಸಿನಿಮಾದಲ್ಲಿ ಒಂದು ಸುಂದರ ಸನ್ನಿವೇಶವನ್ನು ನೋಡುತ್ತಿರುವಾಗ, ಅವರ ಪತ್ನಿ ತಮಗೆ ಅಸಹನೀಯ ತಲೆ ನೋವು ಬಂದಿದೆ, ಮನೆಗೆ ವಾಪಸು ಹೋಗೋಣ ಎಂದು ಒತ್ತಾಯ ಮಾಡಿದರಂತೆ. ಆಗ ವೈದ್ಯರು ಅವರ ಪತ್ನಿಗೆ ಒಂದು ಗುಳಿಗೆಯನ್ನು ನೀಡಿ, ‘ನೋಡು, ಇದನ್ನು ಬಾಯಿಯಲ್ಲಿ ಹಾಕಿಕೊಂಡು ಚೀಪುತ್ತಾ ಇರು. ಯಾವ ಕಾರಣಕ್ಕೂ ನನಗೆ ಹೇಳದೆ ಅದನ್ನು ಜಗಿಯಬಾರದು ಅಥವಾ ನುಂಗಬಾರದು ಎಂದರು. ವೈದ್ಯರ ಪತ್ನಿ ಆ ಗುಳಿಗೆಯನ್ನು ಬಾಯಿಯಲ್ಲಿರಿಕೊಂಡು ಚೀಪುತ್ತಾ ಸಿನಿಮಾ ನೋಡುವುದನ್ನು ಮುಂದುವರೆಸಿದರು. ಸಿನಿಮಾ ಮುಗಿದು, ಮನೆಗೆ ಹಿಂತಿರುಗುವಾಗ, ಅವರು ವೈದ್ಯಪತಿಗೆ ‘ನೀವು ಕೊಟ್ಟ ಗುಳಿಗೆ ಎಷ್ಟು ಚೆನ್ನಾಗಿ ಕೆಲಸ ಮಾಡಿದೆ. ನನ್ನ ತಲೆನೋವು ಮಾಯವಾಗಿ ಹೋಯಿತು. ಈಗಲಾದರೂ ಈ ಗುಳಿಗೆಯನ್ನು ನುಂಗಲೇ?’ ಎಂದು ಕೇಳಿದರು. ಆಗ ಆ ವೈದ್ಯರು, ‘ಹಾಗೆಲ್ಲಾದರೂ ಮಾಡೀಯೇ ಮಾರಾಯಿತಿ. ಅದನ್ನು ಬಾಯಿಯಿಂದ ತೆಗೆದು ಹೊರಕ್ಕೆ ಹಾಕು, ಅದು ನನ್ನ ಶರಟಿನ ಗುಂಡಿ ಎಂದರಂತೆ ! ಹಲ್ಲು ನೋವು ಬಂದಾಗ, ಮನೆಯಲ್ಲಿ ಹಿರಿಯರು ಟೂತ್ ಪೇಸ್ಟನ್ನೇ ಹಲ್ಲಿಗೆ ತಾಗಿಸಿ ಇಟ್ಟುಕೊಂಡು, ಕೆಲ ಸಮಯದ ನಂತರ ನೋವು ಕಡಿಮೆಯಾಯಿತು ಎಂದು ಸಮಾಧಾನ ಪಟ್ಟಕೊಳ್ಳುತ್ತಾರಲ್ಲವೇ ? ಮಗುವೊಂದು ಬಿದ್ದು ಅಳುತ್ತಿರುವಾಗ, ಅದನ್ನು ಎತ್ತಿಕೊಂಡು ರಮಿಸಿ, ಅದರ ಗಮನವನ್ನು ಬೇರೆಡೆಗೆ ಸೆಳೆದು ಅದರ ನೋವನ್ನು ಮರೆಸುತ್ತೇವಲ್ಲವೇ? ಎಷ್ಟೋ ಸಣ್ಣ ಪುಟ್ಟ ನೋವುಗಳಿಗೆ ಮಾನಸಿಕ ಸಮಾಧಾನದಿಂದಲೇ ಶಮನ ಕಂಡುಕೊಳ್ಳಬಹುದು ಎಂಬುದು ಇಂಥ ಪ್ರಕರಣಗಳಿಂದ ತಿಳಿದುಬರುತ್ತದೆ.

ಫ್ಯಾಂಟಮ್ ನೋವು ಸಾಮಾನ್ಯ ತುರಿಕೆಯಿಂದ ಆರಂಭವಾಗಿ, ಅತಿಯಾದ ಅಸಹನೀಯ ನೋವಿನವರೆಗೂ ವ್ಯಾಪಿಸಿದೆ. ಲಭ್ಯವಿರುವ ಔಷಧಗಳನ್ನು ಬಳಸಿದರೂ ಶಾಶ್ವತ ಪರಿಹಾರ ದೊರಕಲಾರದು. ಆದರೆ, ಔಷಧ ಪ್ರಯೋಗವಿಲ್ಲದೆ ಕಡಿಮೆ ಖರ್ಚಿನಲ್ಲಿ ಮಿರರ್ ಬಾಕ್ಸ್ ಎಂಬ ಸಾಧಾರಣ ಸಾಧನವನ್ನು ಬಳಸಿ ಮಾಡುವ ವ್ಯಾಯಾಮ ಇಂಥ ನೋವಿಗೆ ಶಾಶ್ವತ ಪರಿಹಾರ ನೀಡಬಲ್ಲುದು ಎಂದರೆ ಅಚ್ಚರಿಯಾಗಬಹುದಲ್ಲವೇ? ಈಗ ವಿಶ್ವದಾದ್ಯಂತ ಬಳಕೆಯಾಗುತ್ತಿರುವ ಈ ಸರಳ ಮತ್ತು ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನವನ್ನು ರೂಪಿಸಿದವರು ಭಾರತೀಯ ಮೂಲದ ಅಮೆರಿಕಾ ನಿವಾಸಿ ನರರೋಗತಜ್ಞ ವೈದ್ಯರಾದ ಡಾ. ಎಸ್,ರಾಮಚಂದ್ರನ್ ಎಂಬುದೇ ಒಂದು ಹೆಗ್ಗಳಿಕೆ. ಡಾ.ರಾಮಚಂದ್ರನ್ ಅವರು, ನಮ್ಮ ದೇಶದ ಸಂವಿಧಾನದ ರಚನೆಗೆ ಗಣನೀಯ ಕೊಡುಗೆ ನೀಡಿರುವ ಶ್ರೀ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರ ಮೊಮ್ಮಗ ಎಂಬುದು ಇಲ್ಲಿ ಉಲ್ಲೇಖಾರ್ಹ.

                                              ಮಿರರ್‌ ಬಾಕ್ಸ್‌

(ವಿವರಗಳಿಗೆ ನೋಡಿ https://www.youtube.com/watch?v=gc3CmS8_vUI)


                                    

ದೇಹದ ಅಂಗಗಳಿಗೆ ಹಾನಿಯಾದ ಕಾರಣದಿಂದ ಉಂಟಾಗುವ ನೋವುಗಳ ಶಮನಕ್ಕೆ ನೋವು ನಿವಾರಕ ಔಷದಿಗಳು ಅವಶ್ಯವಾದರೆ, ಆಫಘಾತ, ಉದ್ಧ. ನೈಸರ್ಗಿಕ ವಿಕೋಪ, ಮುಂತಾದ ಸಂದರ್ಭಗಳಲ್ಲಿ ಗಾಯಗೊಂಡವರು ಮಾನಸಿಕ ಆಘಾತಕ್ಕೂ ಒಳಗಾಗಿರುವ ಸಾಧ್ಯತೆ ಇರುತ್ತದೆ. ಅಂಥವರಿಗೆ ಶಸ್ತ್ರಚಿಕಿತ್ಸೆ, ಔಷಧಿಗಳ ಜೊತೆಗೇ ಗಾಯಗಳ ಜಾಗದಲ್ಲಿ ಉಂಟಾಗಿರುವ ಮಾಂಸಖಂಡಗಳ ಬಿಗಿತಕ್ಕೂ ಚಿಕಿತ್ಸೆ ಅಗತ್ಯವಾಗುತ್ತದೆ. ವೈದ್ಯರ ಸಾಂತ್ವನದ ಜೊತೆಗೆ ಕುಟುಂಬವರ್ಗದವರ ಹಾಗೂ ಮಿತ್ರರ ಭಾವನಾತ್ಮಕ ಬೆಂಬಲವೂ ಅವಶ್ಯವಾಗುತ್ತದೆ. ನೋವು ಯಾವುದೇ ಬಗೆಯದಾಗಿರಲಿ, ನೋವನ್ನು ಮರೆಯುವಂಥ ವಾತಾವರಣ ಒದಗಿಸುವುದು ಅತ್ಯಂತ ಅವಶ್ಯಕ.

ನೋವಿನ ಅನಾಟಮಿ ಮತ್ತು ಫಿಸಿಯಾಲಜಿ ಬಗ್ಗೆ ತಿಳಿಯಲು:

https://www.youtube.com/watch?v=i5V_q7XqQN8

           

3 comments:

  1. This comment has been removed by the author.

    ReplyDelete
  2. ನೋವಿನ ಬಗ್ಗೆ ಸವಿವರವಾದ ಮತ್ತು ಬಉಪಯೋಗಿ ಲೇಖನ. ಧನ್ಯವಾದಗಳು ಸರ್.
    ನೋವಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಿರರ್ ಬಾಕ್ಸ್ ಎಂಬ ಉಪಕರಣ ಬಳಕೆ ಜಗತ್ತಿಗೆ ಪರಿಚಯಿಸಿದ ಡಾ.ರಾಮಚಂದ್ರನ್ ಗೆ ಅನೇಕ ನಮನಗಳು

    ReplyDelete
  3. ವಿಶಿಷ್ಟ ಮಾಹಿತಿ ನೀಡಿದ ಲೇಖನಕ್ಕೆ ಧನ್ಯವಾದಗಳು.

    ReplyDelete