Tuesday, October 4, 2022

ಭಾರತದ ಮೊದಲ ಪ್ರನಾಳ ಶಿಶು ಸೃಷ್ಟಿಕರ್ತ ಡಾ. ಸುಭಾಷ್ ಅವರ ದುರಂತ ಕತೆ

ಭಾರತದ ಮೊದಲ ಪ್ರನಾಳ ಶಿಶು ಸೃಷ್ಟಿಕರ್ತ ಡಾ. ಸುಭಾಷ್ ಅವರ ದುರಂತ ಕತೆ

 

ಲೇಖಕರು : ಡಾ. ಎಂ.ಜೆ. ಸುಂದರರಾಮ್

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು, ವಿಜ್ಞಾನ ಸಂವಹನಕಾರರು


ಇತ್ತೀಚೆಗೆ ವಿಶ್ವದೆಲ್ಲೆಡೆ ಹೆಚ್ಚಾಗಿ ಬಳಕೆಯಾಗುತ್ತಿರುವ ಪ್ರನಾಳ ಶಿಶು ತಂತ್ರಜ್ಞಾನ(ಐ.ವಿ.ಎಫ್.)ವನ್ನು ಭಾರತದಲ್ಲಿ ಮೊದಲು ಚಾಲ್ತಿಗೆ ತಂದ ವೈದ್ಯ ಸುಭಾಷ್ ಮುಖ್ಯೋಪಾಧ್ಯಾಯ, ತಮ್ಮ ಪ್ರಯೋಗದ ಫಲಿತಾಂಶವನ್ನು ಪ್ರಕಟಿಸಲಾಗದೆ ನೊಬೆಲ್ ಪ್ರಶಸ್ತಿಯಿಂದ ವಂಚಿತರಾಗಿದ್ದಷ್ಟೇ ಅಲ್ಲ, ಸರ್ಕಾರದ ಅವಕೃಪೆಗೂ ಪಾತ್ರರಾಗಿ ಆತ್ಮವಿಶ್ವಾಸವನ್ನು ಕಳೆದುಕೊಂಡು, ಕೊನೆಗೆ ಆತ್ಮಹತ್ಯೆಗೆ ಶರಣಾದ ದುರಂತ ಕತೆಯನ್ನು ಮನಕಲುಕುವಂತೆ ಚಿತ್ರಿಸಿದ್ದಾರೆ ಡಾ.ಎಂ.ಜೆ.ಸುಂದರರಾಮ್ ಅವರು.

ಕೊಲ್ಕೊತ್ತಾದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ 31 ವರ್ಷದ ನಮಿತಾ ಮುಖರ್ಜಿಯವರು ಜುಲೈ 19, 1981ರಂದು ಎಂದಿನಂತೆ ಶಾಲೆ ಮಗಿದ ಮೇಲೆ ಸಂಜೆ ಮನೆಗೆ ಮರಳಿದರು. 5ನೇ ಮಹಡಿಯಲ್ಲಿದ್ದ ಅವರ ಮನೆಯ ಬಾಗಿಲು ತೆಗೆದು ಒಳಗೆ ಹೋಗುತ್ತಿದ್ದಂತೆ, ತಮ್ಮ ಪತಿಯ ದೇಹ ಹೆಣವಾಗಿ ನೇತಾಡುತ್ತಿದ್ದುದನ್ನು ನೋಡಿ ದಿಗ್ಭ್ರಮೆಯಿಂದ ಕುಸಿದು ಬಿದ್ದರು. ಪತಿಯ ಶರ್ಟಿನ ಜೇಬಿನಿಂದ ಹೊರಚಾಚಿ ಗಾಳಿಯಲ್ಲಿ ಹಾರಾಡುತ್ತಿದ್ದ ಕಾಗದದ ಚೀಟಿಯೊಂದು ಅವರ ಗಮನ ಸೆಳೆಯಿತು. ನಡುಗುತ್ತಿದ್ದ ಕೈಗಳಿಂದ ಚೀಟಿಯನ್ನು ಹೊರಗೆಳೆದು ಓದಿದರು. ಅದರಲ್ಲಿ ‘ಪ್ರತಿನಿತ್ಯ ನಾನು ಹೃದಯಾಘಾತಕ್ಕಾಗಿ ಕಾದು ಬದುಕಿರಲಾರೆ’ ಎಂದು ಬರೆದಿತ್ತು. ಧಾರಾಕಾರವಾಗಿ ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ, ಏನು ಮಾಡಬೇಕೆಂದು ತೋಚದೆ ಹಾಗೆಯೇ ಮೌನವಾಗಿ ನಿಂತುಬಿಟ್ಟರು. ಸುಮಾರು ಮೂರು ವರ್ಷದ ಹಿಂದೆ, 1978ರ ಅಕ್ಟೋಬರ್ 3 ರಂದು ನಡೆದ ಘಟನೆಗಳು ಅವರ ಕಣ್ಣ ಮುಂದೆ ಹಾದು ಹೋದುವು.

ಅವರ ಪತಿ ಸುಭಾಷ್ ಮುಖ್ಯೋಪಾಧ್ಯಾಯ ಕೊಲ್ಕೊತ್ತಧ ಒಬ್ಬ ಜನಪ್ರಿಯ ವೈದ್ಯರಾಗಿದ್ದರು. ತಮ್ಮ ಮಹತ್ತರ ಸಂಶೋಧನೆಗಳಿಂದ ಅವರು ವಿಶ್ವವಿಖ್ಯಾತರಾಗಿದ್ದರು. ಸುಭಾಷ್‌ರ ಅಭೂತಪೂರ್ವ ಸ್ಪೋಟಕ ಸಂಶೋಧನೆಯ ವಿವರಗಳನ್ನು ಕೊಲ್ಕೊತ್ತಾ ದೂರದರ್ಶನ ಕೇಂದ್ರ ಅಕ್ಟೋಬರ್ 3ರಂದು ಬಿತ್ತರಿಸಿತ್ತು. ಸುದ್ದಿ ಬಿತ್ತರವಾಗುತ್ತಿದ್ದಂತೆ ದೇಶದ ವಿಜ್ಞಾನಿಗಳಲ್ಲಿ ಸಂಚಲನ ಉಂಟಾಗಿತ್ತು. ಸುಭಾಷ್‌ರ ಮನೆಯಲ್ಲಂತೂ ಎಲ್ಲಿಲ್ಲದ ಸಡಗರ. ದೂರವಾಣಿ ಕರೆಗಳ ಮೂಲಕ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಬಂಧುಗಳು, ಹಿತೈಷಿಗಳು, ಸೇಹಿತರು ಅವರ ಮನೆಗೆ ಬಂದು ಕೈ ಕುಲುಕಿ ಅಭಿನಂದಿಸಿದ್ದರು. ಮಾಧ್ಯಮ ಪ್ರತಿನಿಧಿಗಳು ಅವರ ಸಂದರ್ಶನಕ್ಕಾಗಿ ಕಾದು ನಿಂತಿದ್ದರು. ಸುಭಾಷ್ ಅಂದು ಖ್ಯಾತಿಯ ಶಿಖರದ ಉತ್ತುಂಗಕ್ಕೆ ಏರಿ ಹೆಮ್ಮೆಯಿಂದ ಬೀಗಿದ್ದರು. ನಮಿತಾರ ಮನದಲ್ಲಿ ಈ ಎಲ್ಲ ಘಟನೆಗಳು ಮರುಕಳಿಸಿದ್ದುವು.

                             


 ವೈದ್ಯ ಸುಭಾಷ್ ಮಾಡಿದ್ದ ಸಂಶೋಧನೆಯಾದರೂ ಏನು?
ಇಂಗ್ಲೆಡ್ ನಲ್ಲಿ ರಾಬರ್ಟ್ ಎಡ್‌ವರ್ಡ್ಸ್ (Robert Edwards) ಮತ್ತು ಪ್ಯಾಟ್ರಿಕ್ ಸ್ಟೆಪ್ಟೋ (Patrick Stepto) ಎಂಬಿಬ್ಬರು ಸಂಶೋಧಕರು 1978ರಲ್ಲಿ ಮಾನವ ದೇಹದ ಹೊರಗೆ ಜೀವಂತ ಮಗುವೊಂದನ್ನು ಸೃಷ್ಟಿಸಿ, ಇತಿಹಾಸ ಬರೆದಿದ್ದರು. ಅಲ್ಲಿಂದ ಸುಮಾರು 70 ದಿನಗಳಲ್ಲಿ ಭಾರತದಲ್ಲಿಯೂ ಒಂದು ‘ಪ್ರನಾಳ ಶಿಶು’ ಸೃಷ್ಟಿಯಾಗಿತ್ತು ! ಇದನ್ನು ಸಾಧ್ಯವಾಗಿಸಿದ್ದವರು ಸುಭಾಷ್ ಮುಖ್ಯೋಪಾಧ್ಯಾಯ. ತಮ್ಮ ಈ ವಿಶಿಷ್ಠ ಸಂಶೋಧನೆಗೆ ಆರಿಸಿಕೊಂಡದ್ದು ಬೇಳಾದೇವಿ ಹಾಗು ಪ್ರವತ್‌ಕುಮಾರ್ ಅಗರ್‌ವಾಲ್ ಎಂಬ ಬಂಜೆ ದಂಪತಿಗಳನ್ನು. ತಮ್ಮ ಬಳಿ ಬಂಜೆತನಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದ ಈ ದಂಪತಿಗಳನ್ನು ಒಪ್ಪಿಸಿ ತಮ್ಮ ಪ್ರಯೋಗಗಳನ್ನು ಪ್ರಾರಂಭಿಸಿದ್ದರು.

ಪ್ರವತ್ ಕುಮಾರ್ ಅವರಿಗೆ ಪುರುಷಾಣುಗಳ ಕೊರತೆ ಇರುವುದನ್ನು ಸುಭಾಷ್ ತಂಡದಲ್ಲಿದ್ದ ವೈದ್ಯರು ಸೆಮೆನೋಗ್ರಾಮ್ (semenogram) ಸಾಧನ ಬಳಸಿ ಕಂಡುಹಿಡಿದಿದ್ದರು. ಸಾಲದ್ದಕ್ಕೆ, ಬೇಳಾದೇವಿಯವರ ಅಂಡಾಶಯ ನಾಳಗರೆಡೂ ಕೆಟ್ಟಿದ್ದು, ಅವು ಅಂಡಾಣುವನ್ನು ಸಾಗಿಸಲಾರದ ಸ್ಥಿತಿ ತಲುಪಿದ್ದವು. ಇವೆರಡು ಕಾರಣಗಳಿಂದಾಗಿ, ಬೇಳಾದೇವಿಯವರು ಬಸಿರಾಗುವ ಸಾಧ್ಯತೆ ಇರಲಿಲ್ಲ. ಸುಭಾಷ್ ಅವರು ಅಂಡಾಣುಗಳನ್ನು ಉದ್ದೀಪನಗೊಳಿಸುವ ತಾಂತ್ರಿಕತೆಯಲ್ಲಿ ಪರಿಣಿತರಾಗಿದ್ದರು. ವಿಶ್ವದ ಇತರ ಅನೇಕ ವೈದ್ಯ ವಿಜ್ಞಾನಿಗಳಿಗಿಂತ ಮೊದಲೇ ಈ ತಾಂತ್ರಿಕತೆಯನ್ನು ಬೇಳಾದೇವಿಯವರ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದರು. ಹ್ಯೂಮನ್ ಮೆನೋಪಾಸಲ್ ಗೊನಾಡೋಟ್ರೋಪಿನ್(human menopausal gonadotropin) ಎಂಬ ಹಾರ್ಮೋನನ್ನು ಚುಚ್ಚಿ ಅವರ ಅಂಡಾಶಯದಿದ ಐದು ಪಕ್ವ ಅಂಡಾಣುಗಳನ್ನು ಹೀರಿ ಹೊರತೆಗೆದರು. ಪ್ರಪಂಚದ ಮೊದಲ ಪ್ರನಾಳ ಶಿಶುವನ್ನು ಸೃಷ್ಟಿಸಿದ ಎಡ್ವರ್ಡ್ಸ್ ಮತ್ತು ಸ್ಟೆಪ್ಟೋ ತಮ್ಮ ಪ್ರಯೋಗಕ್ಕೆ ಉದರದರ್ಶಕದ (laparoscopy) ಸಹಾಯದಿಂದ ಪಡೆದ ಒಂದೇ ಒಂದು ಅಂಡಾಣುವನ್ನು ತೆಗೆದು, ಅದನ್ನು ಪ್ರಯೋಗಾಲಯದಲ್ಲಿ ನಿಶೇಚನಕ್ಕೆ ಒಳಪಡಿಸಿದ್ದರು. ಆದರೆ, ಡಾ. ಸುಭಾಷ್ ಅವರು ಉದರದರ್ಶಕದ ಸಹಾಯವಿಲ್ಲದೆ, ಕೇವಲ ಹಾರ್ಮೋನಿನ ಬಳಕೆಯಿಂದ ಒಮ್ಮೆಗೇ ಹಲವು ಅಂಡಾಣುಗಳನ್ನು ಪಡೆದಿದ್ದರು.

ಈ ಅಂಡಾಣುಗಳನ್ನು ನಾಲ್ಕು ಘಂಟೆಗಳ ಕಾಲ ಕಾವುಗೂಡಿನಲ್ಲಿಟ್ಟು, ನಂತರ 24 ಘಂಟೆಗಳ ಕಾಲ ಪ್ರೋಟೀನ್‌ಯುಕ್ತ ದ್ರಾವಣದಲ್ಲಿಟ್ಟು ಬಳಿಕ 72 ಗಂಟೆಗಳ ಕಾಲ ಗರ್ಭಕೊರಳ ದ್ರಾವಣದಲ್ಲಿಟ್ಟು ಮತ್ತೆ ಕಾವುಗೂಡಿನಲ್ಲಿಟ್ಟಿದ್ದರು. ನಂತರ ಅಂಡಾಣುಗಳನ್ನು ಹೊರತೆಗೆದು ಗಾಜಿನ ತಟ್ಟೆಯಲ್ಲಿಟ್ಟು, ಪತಿ ಪ್ರವತ್‌ಕುಮಾರ್ ಅವರ ಪುರುಷಾಣುಗಳೊಡನೆ ಬೆರೆಸಿ, ಅಂಡಾಣುಗಳನ್ನು ನಿಶೇಚನಕ್ಕೆ ಒಳಪಡಿಸಿದರು. ನಿಶೇಚನಗೊಂಡ ಒಂದು ಯುಗ್ಮಾಣು (zygote) ನ್ನು ಬೇಳಾದೇವಿಯವರ ಮುಂದಿನ ಮಾಸಿಕ ಚಕ್ರದ ಸೂಕ್ತ ಸಮಯದಲ್ಲಿ ಅವರ ಗರ್ಭಕೋಶದಲ್ಲ್ಲಿ ನೆಲೆಗೊಳಿಸಿದರು. ಅದು ಅವರ ಗರ್ಭಕೋಶದಲ್ಲಿ ಹುದುಗಿ, ಸಹಜ ಭ್ರೂಣದಂತೆಯೇ ಬೆಳೆಯಿತು. ತಿಂಗಳು ತುಂಬಿದ ಮೇಲೆ ಬೇಳಾದೇವಿ ಸಿಸೇರಿಯನ್ ಚಿಕಿತ್ಸೆಯ ನಂತರ 3.3 ಕೆ.ಜಿ.ತೂಕದ ಹೆಣ್ಣು ಮಗುವೊಂದಕ್ಕೆ 1978ರ ಅಕ್ಟೋಬರ್ 3 ರಂದು ಜನ್ಮ ನೀಡಿದಳು. ಹೀಗೆ, ಐ.ವಿ.ಎಫ್ ತಾಂತ್ರಿಕತೆಯ ಮೂಲಕ ದೇಶದ ಮೊದಲ ಪ್ರನಾಳ ಶಿಶುವನ್ನು ಸೃಷ್ಟಿಸುವಲ್ಲಿ ಡಾ. ಸುಭಾಷ್ ಯಶಸ್ವಿಯಾಗಿದ್ದರು.

ಸುಭಾಷ್ ವಿರುದ್ಧ ಪಿತೂರಿ !

ಸುಭಾಷ್ ಬಳಸಿದ ತಂತ್ರಜ್ಞಾನ ಅತ್ಯಂತ ಸರಳವೂ, ಸುಲಭವೂ ಅಲ್ಲದೆ ಹೆಚ್ಚು ಯಶಸ್ವಿಯೂ ಆಗಿತ್ತೆಂಬುದನ್ನು ಅನೇಕ ವಿದೇಶಿ ವೈದ್ಯರು ಆಭಿಪ್ರಾಯಪಟ್ಟರು. ಇದರಿಂದಾಗಿ, ಸುಭಾಷ್ ಅವರಿಗೆ ಎಲ್ಲೆಡೆ ಪ್ರಚಾರ ಹಾಗೂ ಪ್ರಶಂಸೆ ದೊರಕತೊಡಗಿತು. ಇದು ಅವರ ಸಮಕಾಲೀನ ಸಹೋದ್ಯೋಗಿ ವೈದ್ಯರಲ್ಲಿ ಅಸೂಯೆ ಉಂಟುಮಾಡಿತು. ತಾವು ಸಾಧಿಸಲಾಗದ್ದನ್ನು ಸುಭಾಷ್ ತಮ್ಮ ಮನೆಯ ಪುಟ್ಟ ಕೊಠಡಿಯೊಂದರಲ್ಲಿ ಸಾಧಿಸಿ ತೋರಿಸಿದ್ದನ್ನು ಅವರಿಗೆ ಸಹಿಸಲಾಗಲಿಲ್ಲ. ಸುಭಾಷ್ ಅವರ ಸಂಶೋಧನೆ ಕಪಟ ಎಂದೂ ಆ ಶಿಶುವು ಸಹಜ ರೀತಿಯಲ್ಲಿ ಜನಿಸಿತ್ತು ಎಂದೂ ಗುಲ್ಲೆಬ್ಬಿಸಿ, ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಿಹಿಸಿ ಬೊಬ್ಬೆಯಿಟ್ಟರು.

ಸುಭಾಷ್ ಅವರ ದುರಂತ ಕತೆ ಇಲ್ಲಿಂದ ಆರಂಭವಾಯಿತು. ಅವರ ವಿರೋಧಿಗಳ ಒಡಕು ದನಿ ಪಶ್ಚಿಮ ಬಂಗಾಳದ ಸರ್ಕಾರದ ಕಿವಿಗೆ ಅಪ್ಪಳಿಸಿತು. ಸುಭಾಷ್‌ರ ಸಂಶೋಧನೆಯನ್ನು ಪರಿಶೀಲಿಸಲು ಸಮಿತಿಯೊಂದನ್ನು ಸರ್ಕಾರ ನೇಮಕ ಮಾಡಿತು. ಸಮಿತಿಯ ಅಧ್ಯಕ್ಷರಾಗಿ ಒಬ್ಬ ವಿಕಿರಣ ಭೌತಶಾಸ್ತ್ರಜ್ಞ (radiophysicist), ಜೊತೆಗೆ ಒಬ್ಬ ಸ್ತ್ರೀರೋಗತಜ್ಞ (gynaecologist), ಒಬ್ಬ ಭೌತಶಾಸ್ತ್ರಜ್ಞ (physicist), ಒಬ್ಬ ನರಶಾಸ್ತ್ರಜ್ಞ (neurologist)  ಹಾಗೂ ಒಬ್ಬ ಮನಶಾಸ್ತ್ರಜ್ಙ (psychologist) ರನ್ನು ನೇಮಕ ಮಾಡಲಾಗಿತ್ತು. ಇವರಲ್ಲಿ ಯಾರೊಬ್ಬರಿಗೂ ಆಧುನಿಕ ಸಂತಾನಶಾಸ್ತçದ ಗಂಧವೇ ಇರಲಿಲ್ಲ. ಅಷ್ಟೇ ಅಲ್ಲ, ಸಮಿತಿಯ ಸದಸ್ಯರೆಲ್ಲರೂ ರಾಜಕೀಯ ಪಕ್ಷವೊಂದರ ಅಂಗಸಸ್ಥೆಯ ಸಕ್ರಿಯ ಸದಸ್ಯರಾಗಿದ್ದರು !

ಸಮಿತಿ ತನ್ನ ವಿಚಾರಣೆಯನ್ನು ಪ್ರಾರಂಭಿಸಿತು. ಸದಸ್ಯರು ಸುಭಾಷ್‌ರನ್ನು ಕರೆಸಿ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ವಿಶೇಷವೆಂದರೆ, ಸುಭಾಷ್ ತಮ್ಮ ಸಂಶೋಧನೆಯನ್ನು ಸಮರ್ಥಿಸಿಕೊಳ್ಳಲು ಅಗರ್‌ವಾಲ್ ದಂಪತಿಗಳನ್ನು ಸಮಿತಿಯ ಮುಂದೆ ಸಾಕ್ಷಿಗಳಾಗಿ ಒಡ್ಡಲಿಲ್ಲ. ಏಕೆಂದರೆ. 16 ವರ್ಷಗಳ ದೀರ್ಘಕಾಲ ಆ ದಂಪತಿ ಬಂಜೆಯಾಗಿದ್ದರೆಂಬ ವಿಷಯ ಬಹಿರಂಗವಾದರೆ, ಅಂದಿನ ಸಂಪ್ರದಾಯಸ್ಥ ಸಮಾಜ ಆ ಕುಟುಂಬಕ್ಕೆ ಕಳಂಕಿತ ಪಟ್ಟ ಕಟ್ಟಿ ಬಹಿಷ್ಕಾರ ಹಾಕಬಹುದೆಂಬ ಭಯ ಸುಭಾಷ್ ಅವರನ್ನು ಕಾಡುತ್ತಿತ್ತು. ಹಾಗಾಗಿ, ಅವರು ಆ ಕುಟುಂಬವನ್ನು ರಕ್ಷಿಸಬಯಸಿದ್ದರು.

ಸುದೀರ್ಘ ವಿಚಾರಣೆಯ ನಂತರ ಸಮಿತಿಯ ತೀರ್ಪು ಹೊರಬಿದ್ದಿತ್ತು. ಅದು ನಿರೀಕ್ಷಿಸಿದ್ದಂತೆ ಸುಭಾಷ್‌ರ ವಿರುದ್ಧವಾಗಿತ್ತು. ‘ಸುಭಾಷ್‌ರ ಹೇಳಿಕೆ ಅಸಮಂಜಸ, ಕೃತ್ರಿಮ ಹಾಗೂ ಶುದ್ಧ ಸುಳ್ಳು. ಮಗು ಹುಟ್ಟಿರುವ ಬಗ್ಗೆ ವಿವಾದವಿಲ್ಲ. ಆದರೆ, ಅದು ಐ.ವಿ.ಎಫ್. ತಾಂತ್ರಿಕತೆಯಿಂದಾಗಿದ್ದು ಎಂಬುದನ್ನು ನಂಬಲು ಸಾಧ್ಯವಿಲ್ಲ’ ಎಂಬುದು ತೀರ್ಪಿನ ಸಾರಾಂಶವಾಗಿತ್ತು. ಸಮಿತಿಯ ತೀರ್ಪಿನ ಆಧಾರದ ಮೇಲೆ ಸರ್ಕಾರವು ಸುಭಾಶ್ ಅವರಿಗೆ ಛೀಮಾರಿ ಹಾಕಿ, ಅವರ ಮೇಲೆ ಸಾಮಾಜಿಕ ಬಹಿಷ್ಕಾರವನ್ನು ಹೇರಿತು. ಅವರ ಸಂಶೋಧನೆಗಳನ್ನು ಪ್ರಕಟಿಸದಂತೆ ನಿರ್ಬಂಧ ಹಾಕಿತು. ಅವರನ್ನು ಬೇರೊಂದು ವಿಭಾಗಕ್ಕೆ ವರ್ಗಾಯಿಸಿ, ಅವರು ಯಾವುದೇ ಸಂಶೋಧನೆಗಳನ್ನು ಮುಂದುವರೆಸದಂತೆ ಕಿರುಕಳ ನೀಡಿ, ಹೀನಾಯವಾಗಿ ವರ್ತಿಸಿತು.

ಈ ಮಧ್ಯೆ 1979ರಲ್ಲಿ ಜಪಾನಿನ ಕ್ಯೋಟೋದಲ್ಲಿ ನಡೆದ ವೈದ್ಯಕೀಯ ಸಮಾವೇಶವೊಂದರಲ್ಲಿ ಸುಭಾಶ್ ಅವರಿಗೆ ತಾವು ಸೃಷ್ಟಿಸಿದ ಪ್ರನಾಳ ಶಿಶುವಿನ ತಂತ್ರಜ್ಞಾನದ ಬಗ್ಗೆ ಸಂಶೋಧನಾ ಪ್ರಬಂಧವನ್ನು ಮಂಡಿಸಲು ಆಹ್ವಾನ ಬಂದಿತ್ತು. ಆದರೆ, ಆಗಿನ ಕೇಂದ್ರ ಸರ್ಕಾರ ಅವರಿಗೆ ಪಾಸ್‌ಪೋರ್ಟ್ ನೀಡದೆ ಮಾನಸಿಕವಾಗಿ ಪೀಡಿಸಿತು. ಅಲ್ಲದೆ, ದೇಶದ ಒಳಗೇ ವಿವಿದೆಡೆ ಪ್ರಬಂಧ ಮಂಡಿಸಲು ಬಂದ ಅವಕಾಶಗಳಿಂದಲೂ ಅವರನ್ನು ವಂಚಿಸಿತು. ಇದರಿಂದ ಹತಾಶರಾದ ಸುಭಾಶ್ ಅವರು 1980ರಲ್ಲಿ ಹೃದಯಾಘಾತಕ್ಕೆ ಒಳಗಾದರು. ಮೇಲಿಂದ ಮೇಲೆ ಆಗುತ್ತಿದ್ದ ಅವಮಾನಗಳನ್ನು ತಡೆದುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಎಲ್ಲ ಕಡೆಯಿಂದಲೂ ಸೋಲನ್ನು ಅನುಭವಿಸಿದ ಕಾರಣ ತಮ್ಮ ಆತ್ಮವಿಶ್ವಾಸವನ್ನೇ ಕಳೆದುಕೊಂಡರು. ಬೇರೆ ದಾರಿ ತೋರದೆ ಕೊನೆಗೆ 1981ರ ಜುಲೈ 19ರಂದು ವೈದ್ಯ ಸುಬಾಷ್ ಆತ್ಮಹತ್ಯೆಗೆ ಶರಣಾಗಿದ್ದರು ! 

ಸುಭಾಷ್ ಅವರು ಬಳಸಿದ ತಂತ್ರಜ್ಞಾನದಿಂದ ಜನಿಸಿದ ಭಾರತದ ಮೊದಲ ಪ್ರನಾಳ ಶಿಶು ಎಂಬ ಹೆಗ್ಗಳಿಕೆ ಇರುವ ಬೇಳಾದೇವಿ ಅವರ ಹೆಣ್ಣು ಮಗುವಿಗೆ ಪ್ರಾರಂಭದಲ್ಲಿ ಕಾನುಪ್ರಿಯ ಎಂಬ ಹೆಸರಿಡಲಾಗಿತ್ತು. ಆಕೆ ದುರ್ಗಾಷ್ಟಮಿಯಂದು ಜನಿಸಿದ್ದ ಕಾರಣ ಮುಂದೆ ಆಕೆಯ ತಾತ ದುರ್ಗಾ ಎಂದು ಮರುನಾಮಕರಣ ಮಾಡಿದರು. ದುರ್ಗಾ ಬೆಳೆದು ಸಿಂಬಯಾಸಿಸ್ ಸಂಸ್ಥೆಯಿಂದ ಎಂ.ಬಿ,ಎ, ಪದವಿ ಪಡೆದಿದ್ದಾಳೆ. ಪ್ರಸ್ತುತ, ಪುಣೆಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ.

ನೊಬೆಲ್ ಪ್ರಶಸ್ತಿ ವಂಚಿತರಾದ ಸುಭಾಷ್

ಒಂದು ವೇಳೆ, ಕೇಂದ್ರ ಸರ್ಕಾರ ಸುಭಾಷ್ ಅವರಿಗೆ ತಮ್ಮ ಸಂಶೋಧನೆಯನ್ನು ಪ್ರಕಟಿಸಲು ಅನುಮತಿ ನೀಡಿ ಅವರನ್ನು ಪ್ರೋತ್ಸಾಹಿದ್ದರೆ, ಪ್ರನಾಳ ಶಿಶು ಸೃಷ್ಟಿ ತಂತ್ರಜ್ಞಾನದಲ್ಲಿ ಅವರೂ ವಿಶ್ವದಲ್ಲೇ ಮೊದಲಿಗರಾಗಿ, ನೊಬೆಲ್ ಪ್ರಶಸ್ತಿಗೆ ಪಾತ್ರರಾಗುತ್ತಿದ್ದರು. ದುರಂತವೆಂದರೆ, ತಮ್ಮ ಸಂಶೋಧನೆಯನ್ನು ಪ್ರಕಟಿಸದೇ ಹೋದ ಕಾರಣದಿಂದ ಅವರು ಬಳಸಿದ್ದ ತಂತ್ರಜ್ಞಾನ ಬೆಳಕಿಗೆ ಬಾರದೇ ಹೋಗಿತ್ತು. ಎಡ್‌ವರ್ಡ್ಸ್ ಮತ್ತು ಸ್ಟೆಪ್ಟೋ ಅವರಿಗೆ ಪ್ರನಾಳ ಶಿಶು ಸೃಷ್ಟಿಸುವ ತಂತ್ರಜ್ಞಾನಕ್ಕೆ ನೊಬೆಲ್ ಪ್ರಶಸ್ತಿ ದೊರಕಿದರೆ, ಅವರಿಗಿಂತಲೂ ಸುಲಭ ಹಾಗೂ ಸರಳ ತಂತ್ರಜ್ಞಾನ ಬಳಸಿದ್ದ ಸುಭಾಷ್ ಅವರಿಗೆ ನೊಬೆಲ್ ಪ್ರಶಸ್ತಿ ತಪ್ಪಿ ಹೋಗಿತ್ತು ! ಸುಭಾಷ್ ನೊಬೆಲ್ ವಂಚಿತ ಭಾರತೀಯ ವಿಜ್ಞಾನಿಗಳ ಪಟ್ಟಿಗೆ ಸೇರಿಹೋದರು.


3 comments:

  1. ಲೇಖನ ಅದ್ಭುತವಾಗಿದೆ ಸರ್. ಅಭಿನಂದನೆಗಳು

    ReplyDelete
  2. ಸಂಶೋಧನಾ ಕ್ಷೇತ್ರದಲ್ಲಿನ ವ್ರತ್ತಿ ಪ್ರತಿಭೆಯ ಪೈಪೋಟಿ, ಅಸೂಯೆ ಜೊತೆಗೆ ದುರುದ್ದೇಶ ಪೂರಿತ ರಾಜಕೀಯ ಬೆರೆತರೆ ಎಂತಹ ದುರಂತ ಸಂಭವಿಸಬಹುದು ಅನ್ನುವುದಕ್ಕೆ ಇದು ಒಂದು ಜ್ವಲಂತ ಉದಾಹರಣೆ.

    ReplyDelete
  3. ದುರಂತ ಕತೆಯನ್ನು ಅಷ್ಟೇ ಸಹೃದಯತೆಯಿಂದ ತೆರೆದಿಟ್ಟಿದ್ದೀರಿ. ಧನ್ಯವಾದಗಳು ಸರ್.‌ ಇನ್ನಷ್ಟು ಬರೆಯಿರಿ.

    ReplyDelete