Friday, November 4, 2022

ವಿಜ್ಞಾನ ಒಗಟುಗಳು

  ನವಂಬರ್‌ ೨೦೨೨ ರ ವಿಜ್ಞಾನ ಒಗಟುಗಳು  


                        ೧: ಕಲ್ಲು ಬೆಂಚು ಮತ್ತು ಸ್ನೇಹಿತರ ಲೆಕ್ಕ ಬಿಡಿಸಿ

ಕೆಲವರು ಸ್ನೇಹಿತರು ಪಾರ್ಕಿನಲಿ ವಿಹರಿಸಿ

ಒಬ್ಬೊಬ್ಬರೊಂದೊಂದು ಕಲ್ಲು ಬೆಂಚಿನ ಮೇಲೆ ಕುಂತಾಗ

ಒಬ್ಬರಿಗೆ ಸಿಗಲಿಲ್ಲ ಕಲ್ಲು ಬೆಂಚು

ಬುದ್ಧಿವಂತರಿಬ್ಬಿಬ್ಬರು ಒಂದೊಂದು ಕಲ್ಲು ಬೆಂಚಿನ ಮೇಲೆ ಕುಂತಾಗ

ಉಳಿಯಿತಲ್ಲ ಒಂದು ಕಲ್ಲು ಬೆಂಚು ಖಾಲಿ.

ಸ್ನೇಹಿತರ ಮತ್ತು ಕಲ್ಲು ಬೆಂಚುಗಳ ಸಂಖ್ಯೆಯ ಹೇಳಬಲ್ಲಿರೇ

ಮಿದುಳಿಗೆ ಕಸರತ್ತು ನೀಡಿ?


                     ೨ : ಈವರು ಯಾರು ಬಲ್ಲಿರೇನು? 

ತಿರುಚಿನಾಪಳ್ಳಿಯ ಅಯ್ಯರ್ ಕುಟುಂಬದ ಕುಡಿ

 ನವಂಬರ್ ಏಳು ಈತನ ಜನುಮದಿನ

 ಸಮುದ್ರದ ನೀಲಿ ಬಣ್ಣಕ್ಕೆ ತಲೆಕೆಡಿಸಿಕೊಂಡ

ಫೆಬ್ರವರಿ28  ಈತನಿಗೇ ಸಮರ್ಪಿತ

ತಡವೇಕೆ ಜಾಣ ಜಾಣೆಯರೇ ?

ಸುಳಿವ ಹಿಡಿದು ಉತ್ತರಿಸಿ ಲಗುಬಗನೆ

 

        ೩ :  ಅಂಗ, ರಸದೂತ , ರೋಗ ..ಯಾರ್ಯಾರು?  

ಒಂದು ಸಕ್ಕರೆಯ ಅಡಗಿಸಿದರೆ  

ಮತ್ತೊಂದು ಸಕ್ಕರೆಯ ರಕ್ತಕ್ಕೆ ಸೇರಿಸುವ ರಸದೂತ

ಎರಡರ ಹುಟ್ಟು ಮಿಶ್ರಗ್ರಂಥಿಯಲ್ಲಿ

ಎಚ್ಚರ ತಪ್ಪಿದಿರೋ  ಹದಗೆಟ್ಟೀತು ಆರೋಗ್ಯ

ಈ ಕುರಿತು ಪ್ರತಿ ನವಂಬರ್ 14 ರಂದು ಮೂಡಿಸೋಣ ವಿಶ್ವದಿ ಜನಜಾಗೃತಿ

 ಈ ಸುಳಿವಿಂದ ಬಿಡಿಸಿ ಒಬ್ಬೊಬ್ಬರ ಕತೆಯ ಒಗಟ

 

                ೪ : ಅಲೋಹ ಯಾವುದು ? 

ನಾನೊಂದು ಅಲೋಹ ಬಹುರೂಪಿ ಕೆಂಪು, ಬಿಳಿ, ಕಪ್ಪು ಬಣ್ಣಗಳಲ್ಲಿರುವೆ

ಗಾಳಿ ಸೋಕಲು ಉರಿದು ಸ್ಫುರದೀಪ್ತಿ ತೋರುವೆ

ಮೂಳೆ, ಹಲ್ಲುಗಳಲ್ಲಿರುವೆ ಶಕ್ತಿಯ ಕಣಜವಾಗಿರುವೆ

ಡಿಎನ್ಎಯ ಪ್ರಮುಖ ಘಟಕವಾಗಿರುವೆ

ಬಾನಾಮತಿಗೂ ಬಳಸುವರು ನನ್ನ ನೀರಿನಲ್ಲಿ ನಿಷ್ಕ್ರಿಯ ಜಲಪಾಷಣ ನಾ

ಓ ಜಾಣ ಜಾಣೆಯರೆ  ಸುಳಿವಿಂದ ಈ ಒಗಟೊಡೆಯಬಲ್ಲಿರೇ ನೀವು?  

 

                ೫ : ಈ ವಿಕಿರಣ ಪಟು ಧಾತುವಿನ ಕಥೆಯ ಹೇಳಿ

ಪೋಲೆಂಡ್ ಕುವರಿಯಾ ದೇಶಪ್ರೇಮದೊಡಗೂಡಿದ ಆವಿಷ್ಕಾರ

 ಬಿಸ್ಮತ್ ನ್ಯೂಟ್ರಾನುಗಳ ತಾಡನ, ದ್ರವ್ಯಾಂತರಣವಾಗಿ ಉಗಮ ಕ್ರಿಯೆ

 ಸುಮಾರು 138 ದಿನಗಳ ಅರ್ಧಾಯುಷ್ಯ  ನ್ಯೂಕ್ಲಿಯ ಶಕ್ತಿಗಿದೊಂದು ಇಂಧನ.

ಸುಳಿವ ಬಳಸಿ ಒಗಟೊಡೆದು ತಿಳಿಸಿ  ಈ ವಿಕಿರಣ ಪಟು ಧಾತುವಿನ ಕಥೆಯ

  

ಲೇಖಕರು : ಬಿ.ಜಿ.ರಾಮಚಂದ್ರ ಭಟ್ 

ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆಬ್ಯಾಟರಾಯನಪುರ,
ಮೈಸೂರು ರಸ್ತೆಬೆಂಗಳೂರು


4 comments:

  1. ೨. ಸರ್ ಸಿ. ವಿ. ರಾಮನ್ ರಲ್ಲದೆ ಇನ್ನಾರಿಹರು.....
    ೩. ಮೇದೋಜೀರಕಾಂಗ
    ನಿನ್ನದೇ ಅಂತರಂಗ.

    ಇನ್ಸುಲಿನ್, ಗ್ಲೂಕಗಾನ್
    ಸಮವಾಗಿ ಸ್ರವಿಕೆಯಾಗದಿದ್ದೊಡೆ
    ಡಯಾಬಿಟಿಸ್ ಖಚಿತ

    ೪. ರಂಜಕ
    ವಂಶವಾಹಿಯ ಪ್ರೇರಕ

    ReplyDelete
  2. ೫. ಮೇಡಂ ಮೇರಿ ಕ್ಯೂರಿ
    ಸಾಧನೆಯ ಅಂಬಾರಿ

    ಏರಿ
    ದಿಕ್ ದಿಗಂತಗಳಾಚೆ ಸಾರಿ
    ಜಗದ ವಿಶ್ವಾಸದ ದಾರಿ

    ReplyDelete
  3. This comment has been removed by the author.

    ReplyDelete
  4. ೧. ಮೂರು ಕಲ್ಲು ಬೆಂಚು, ನಾಲ್ವರು ಸ್ನೇಹಿತರು

    ReplyDelete