Wednesday, January 4, 2023

ಕೇದಗೆ ವನದಾಗ,,,,

 ಕೇದಗೆ ವನದಾಗ,,,,

ಹೆಣ್ಣು ಮಕ್ಕಳಿಗೆ ಹೂಗಳೆಂದರೆ ಬಲು ಪ್ರೀತಿ. ಅವುಗಳನ್ನು ಮುಡಿದು ಶೃಂಗಾರಗೊಂಡು ಹೊರನಡೆಯುವುದೆಂದರೆ ಅದೇನೋ ಒಂದು ಹೊಸ ಹುರುಪು. ಮಲ್ಲಿಗೆಯ ಹೂ ಮುಡಿದ ಹೆಣ್ಣುಮಕ್ಕಳು ಅದರ ಘಮವನ್ನು ಆಘ್ರಾಣಿಸಿ, ಆನಂದಿಸುವುದರಲ್ಲಿ ಖುಷಿ ಪಡುವುದು ಸಾಮಾನ್ಯ. ಅಷ್ಟೇ ಏಕೆ ಸೇವಂತಿಗೆ, ಕನಕಾಂಬರ, ಗುಲಾಬಿ ಇನ್ನೂ ಅನೇಕ ಹೂಗಳನ್ನು ಅವರು ತಮ್ಮ ಅಭಿರುಚಿಗನುಸಾರ ಮುಡಿದು ಸಿಂಗರಿಸಿಕೊಳ್ಳುತ್ತಾರೆ. ಬಟ್ಟೆ, ಸೀರೆ, ಬಹುಬಗೆಯ ದಿರಿಸುಗಳು ಎಷ್ಟು ಮುಖ್ಯವೋ, ಹೆಣ್ಣುಮಕ್ಕಳ ಶೃಂಗಾರದಲ್ಲಿ ಹೂಗಳೂ ಅಷ್ಟೇ ಪ್ರಧಾನ ಪಾತ್ರವಹಿಸುತ್ತವೆ. ಒಂದು ಸಮಯದಲ್ಲಿ ತುಂಬಾ ಬೇಡಿಕೆಯ ಹಳ್ಳಿ ಪರಿಸರದ ಜನಪ್ರಿಯ ಹೂವಾಗಿ ಮನೆಮಾತಾಗಿದ್ದ ‘ಕೇದಗೆ’ ಅದರ ಸುವಾಸನೆಯುಕ್ತ ಘಮದಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದದ್ದು ಸುಳ್ಳಲ್ಲ. ಇತ್ತೀಚಿನವರಿಗೆ ತೀರ ಅಪರಿಚಿತವಾದ ಇಂತಹ ಹೂವೊಂದರ ಸೊಬಗಿನ ಪರಿಚಯ ಇಲ್ಲಿದೆ.

 ‘ಕೇದಗೆ ವನ’ ತರಾಸುರವರ ಪುಸ್ತಕ ಓದುತ್ತಿದ್ದೆ, ಆ ಶಿರ್ಷಿಕೆ ನೋಡುತ್ತಿದ್ದಂತೆ ನನಗೆ ನೆನಪಾದದ್ದು ಬಾಲ್ಯದಲ್ಲಿ ಹೆಣ್ಣುಮಕ್ಕಳಿಗೆ ತಾಯಂದಿರು ಮುಡಿಸುತ್ತಿದ್ದ ಕೇದಗೆ ಹೂ. ಎಲೆಯಾಕಾರದ ಹೂ ಎಸಳುಗಳನ್ನು ವಿಭಿನ್ನ ಆಕಾರಗಳಲ್ಲಿ ಅಂದರೆ ತ್ರಿಕೋನಾಕಾರ, ವಜ್ರಾಕೃತಿ, ಶಂಕು, ನಕ್ಷತ್ರ ಹೀಗೆ ಅನೇಕ ರೀತಿಯಲ್ಲಿ ಮಡಿಚಿ, ಚಿಕ್ಕ ಚಿಕ್ಕ ರಟ್ಟುಗಳಿಗೆ ಪೋಣಿಸಿ ವೈವಿಧ್ಯಮಯ ಚಿತ್ತಾರಗಳನ್ನು ಮಾಡಿ ಉದ್ದನೆಯ ಜಡೆಗೆ ಮುಡಿಸಿದಾಗ ಕಾಣುವ ಅಂದ ನಿಜಕ್ಕೂ ವರ್ಣಿಸಲಸಾಧ್ಯ. ಅಂತಹ ಕೇದಗೆ ಇಂದು ಬಹಳಷ್ಟು ಜನರಿಗೆ ಮರೆತುಹೋಗುತ್ತಿದೆ.

ಕೇದಿಗೆ, ಕೇತಕಿ, ತಾಳೆ ಹೂ, ಕೇವುಡಾ ಎಂತೆಲ್ಲಾ ಕರೆಯಲ್ಪಡುವ ಈ ಅಪ್ಪಟ ಸಂಪ್ರದಾಯದ ಹೂ ಹಳ್ಳಿಗರಿಗೆ ಅತ್ಯಂತ ಚಿರಪರಿಚಿತ. ಪಂಡಾನೇಸೀ ಕುಟುಂಬದ ಆಂಗ್ಲ ಭಾಷೆಯ ಪೈನ್ ಸ್ಕ್ರ್ಯೂ ಎಂಬ ಹೆಸರಿನ ಈ ಒರಟು ಹೂ ಪಂಡಾನಸ್ ಓಡೋರಿಫರ್ (Pandanus odorifer ) ಎಂಬ ವೈಜ್ಞಾನಿಕ ನಾಮಧೇಯ ಹೊಂದಿದೆ. ಸಮುದ್ರ, ನದಿ ದಂಡೆಗಳಲ್ಲಿ, ನೀರಿನ ಆಸರೆಯಿರುವ ತಂಪು ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯವ ಗುಣ ಇದಕ್ಕಿದೆ. ಹಳ್ಳಿಗಾಡಿನ ಕೆರೆ, ಹಳ್ಳ, ಜೌಗುಪ್ರದೇಶ, ಸದಾ ಜಿನುಗುವ ನೀರಿನ ತೊರೆಗಳ ಬದುಗುಂಟ ಸಲೀಸಾಗಿ ಬೆಳೆಯುತ್ತದೆ, ಸದ್ಯ ಹೆಂಗೆಳೆಯರು ಮುಡಿಯುವ ಹಾಗೂ ಪೂಜೆಗೆಂದು ಬಳಕೆಯಾಗುವ ಈ ಹೂ ಇಂದು ಅಪರೂಪವಾಗುತ್ತಿದೆ.


ಆಲದ ಮರ ತನ್ನ ಬೀಳಲು ಬೇರುಗಳನ್ನು ಚಾಚುತ್ತಾ ಸಾಗಿದ ರೀತಿಯಲ್ಲಿಯೇ ಕೇದಗೆ ಕೂಡ ತನ್ನ ಕಾಂಡ ಭಾಗವನ್ನು ಭೂಮಿಗೆ ತಾಗಿಸಿ, ಬೇರುಗಳನ್ನು ಬಿಟ್ಟು, ಕಾಂಡ ಭಾಗಗಳನ್ನು ಕವಲುಗಳಾಗಿಸಿ ವ್ಯಾಪ್ತಿ ವಿಸ್ತರಿಸುತ್ತಾ ಹಬ್ಬುತ್ತಾ ಸಾಗುತ್ತದೆ. ಆದರೆ ಇದು ಆಲದಂತೆ ಮರವಲ್ಲವಾದರೂ ಒಂದು ಪೊದೆಯಾಗಿ ಗುರುತಿಸಲ್ಪಡುತ್ತದೆ. ಆಸ್ಟ್ರೇಲಿಯಾ, ದಕ್ಷಿಣ ಏಶಿಯಾದ ಅಂಡಮಾನ ದ್ವೀಪ ಪ್ರದೇಶ, ಫಿಲಿಫೈನ್ಸ್, ರ‍್ಮಾ, ಶ್ರೀಲಂಕಾ, ಮಲೇಷಿಯಾ, ಥೈಲ್ಯಾಂಡ್, ಇಂಡೊನೇಶಿಯಾ ಹಾಗೂ ಓಡಿಸ್ಸಾ, ನಮ್ಮ ದಕ್ಷಿಣ ಭಾರತದ ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕದ ಭಾಗದಲ್ಲಿ ಇದು ನೆಲೆ ಕಂಡಿದೆ. 4 ರಿಂದ 10 ಮೀಟರ್ ಎತ್ತರಕ್ಕೆ ಬೆಳೆಯಬಲ್ಲ ಕೇದಗೆ ಸುಮಾರು 1 ರಿಂದ 1.5 ಮೀಟರ್ ಉದ್ದದ ಎಲೆಗಳನ್ನು ಹೊಂದಿದೆ. ಪಂಡಾನಸ್ ಜಾತಿಯ ಕೆಲವು ಪ್ರಭೇದಗಳು 100 ಮೀಟರ್ ಎತ್ತರಕ್ಕೂ ಬೆಳೆಯುವ ದೊಡ್ಡ ಮರಗಳಂತಿವೆ ಎಂದು ಹೇಳಲಾಗುತ್ತದೆ. ವಾಯುವಿಕ ಬೇರು (Arial root) ಗಳ ಆಸರೆ ಪಡೆದ ಈ ಗಿಡದ ಕವಲುಗಳು ಒತ್ತೋತ್ತಾಗಿ ಬೆಳೆದು ದಟ್ಟವಾದ ಅಭೇದ್ಯ (impenetrable) ಕಾಡಿನಂತೆ ರೂಪುಗೊಳ್ಳುತ್ತವೆ. ನೀಲಿ ಹಸಿರು ಮಿಶ್ರಿತ ಎಲೆಯ ಪತ್ರಕಗಳನ್ನು ಹೊಂದಿದ ಇದು ಅಂಚಿನಗುಂಟ ಅಲಗಿನಂತ ಚೂಪು ಮುಳ್ಳುಗಳಿಂದ ಕೂಡಿದೆ. ನೋಡಲು ಗರಗಸದ ಚೂಪು ಹಲ್ಲಿನಂತೆ ಕಾಣುವ ಈ ಎಲೆಗಳ ಅಂಚು ತಾಗಿದರೆ ರಕ್ತ ಸೋರುವಷ್ಟು ಮೊನಚಾಗಿವೆ. ಇವು ಏಕಲಿಂಗಿಗಳಾಗಿವೆ. ಗಂಡು ಮತ್ತು ಹೆಣ್ಣು ಹೂಗೊಂಚಲುಗಳು ಪ್ರತ್ಯೇಕವಾಗಿರುವುದನ್ನು ಕಾಣಬಹುದು. ಗಂಡು ಹೂಗಳು ಗಾತ್ರದಲ್ಲಿ ಚಿಕ್ಕವಾದರೂ ಅನೇಕ ಕೇಸರಗಳನ್ನು ಹೊಂದಿವೆ. ಒಳಾವರಣದಲ್ಲಿ ತಿಳಿ ಬಿಳಿ ಹಾಗೂ ಹಳದಿ ಮಿಶ್ರಿತ ಎಸಳುಗಳುಳ್ಳ ಮಾರ್ಪಾಟಿತ ಎಲೆ (modified bract) ಗಳು ಸುವಾಸನೆಯುಕ್ತವಾಗಿವೆ. ಹೂಗುಚ್ಛದ ಮಧ್ಯಭಾಗದಲ್ಲಿನ ಕೇಸರದ ದಂಡನ್ನು ಸುತ್ತುವರೆದಿರುವ ಈ ಎಸಳುಗಳು ಗಂಡು ಭಾಗವನ್ನು ಪ್ರತಿನಿಧಿಸುತ್ತವೆ, ವಾಸ್ತವದಲ್ಲಿ ಹೆಣ್ಣು ಮಕ್ಕಳು ಮುಡಿಯುವ ಹಾಗೂ ಪೂಜೆಗೆಂದು ಬಳಕೆಯಾಗುವ ಕೇದಗೆ ಹೂ ಈ ಎಸಳುಗಳೇ ಆಗಿವೆ ಎಂಬುದು ಗಮನಾರ್ಹ. ಸುಮಾರು ಒಂದು ಮೀಟರ್‌ವರೆಗೂ ಉದ್ದದ ಪತ್ರಕಗಳು ಅಗಾಧ ಪರಿಮಳ ಹಾಗೂ ವಿಶಿಷ್ಟ ಸುವಾಸನೆಯಿಂದ ಆಕರ್ಷಕವಾಗಿವೆ. ಇನ್ನು ಹೆಣ್ಣು ಹೂಗುಚ್ಛವನ್ನು ಗಿಡದ ತುದಿಭಾಗದಲ್ಲಿ ನೋಡಬಹುದು. ಹೆಣ್ಣು ಹೂ ಭಾಗದಲ್ಲಿ 4-10 ಕಾರ್ಪೇಲ್‌ಗಳಿದ್ದು ಸುಮಾರು 8-10 ಸೆಂ,ಮೀ ಉದ್ದವಾಗಿವೆ. ಈ ಹೆಣ್ಣು ಭಾಗ ಕ್ರಮೇಣ ಬಲಿತು (ಅನಾನಸ್‌ನಂತೆ) ಸಂಯುಕ್ತ ಫಲವಾಗಿ ಕಾಣುತ್ತದೆ. ಸಾಮಾನ್ಯವಾಗಿ ಜುಲೈ ಅಕ್ಟೋಬರ್ ನಡುವನ ಕಾಲದಲ್ಲಿ ಇವು ಹೂ ಬಿಡುತ್ತವೆ. ಸಂಪೂರ್ಣ ಬಲಿತ ಗಿಡ ವರ್ಷದಲ್ಲಿ 30-35 ಹೂಗೊಂಚಲು (spike) ಗಳನ್ನು ಚಾಚಿ ಸುತ್ತಲೂ ಸುವಾಸನೆಯ ಕಂಪು ಬೀರುತ್ತದೆ.

 ಪಂಡಾನಸ್ ಜಾತಿಯ 600 ರಷ್ಟು ಪ್ರಭೇದಗಳ ಇರುವಿಕೆಯನ್ನು ಗುರುತಿಸಲಾಗಿದೆ. ಅದರಂತೆ ಭಾರತದಲ್ಲಿ ಕೇದಗೆಯ ಸುಮಾರು 35ಕ್ಕೂ ಹೆಚ್ಚು ಪ್ಪ್ರಭೇದಗಳನ್ನು ಕಾಣಬಹುದಾಗಿದೆ. ಅವುಗಳ ತಳಿವೈವಿಧ್ಯತೆ, ಸಸಿ ಮಾದರಿ, ಲಿಂಗ ಆಧರಿಸಿ ಅವುಗಳ ಬೆಳವಣಿಗೆ ವಿಭಿನ್ನವಾಗಿರುತ್ತದೆ. ಬೀಜ ಮೂಲದಿಂದ ಬೆಳೆದ ಕೇದಗೆ ಹೂ ಅರಳಲು 15 ವರ್ಷ ತೆಗೆದುಕೊಂಡರೆ, ಕಾಂಡದ ಕವಲು ಕತ್ತರಿಸಿ ನಾಟಿ ಮಾಡಿದ ಗಿಡ ಕೇವಲ 2-6 ವರ್ಷಗಳಲ್ಲಿ ಹೂ ಬಿಡಲು ಪ್ರಾರಂಭಿಸುತ್ತದೆ. ಅವುಗಳ ಬೆಳವಣಿಗೆಯ ದರವೂ ಕೂಡ ಅತೀ ವೇಗವಾಗಿದ್ದು ವಾರ್ಷಿಕ 50-80 ಸೆಂ,ಮೀಟರ್ ಆಗಿದೆ. ಬೀಜಗಳು ಹೊರಭಾಗದಲ್ಲಿ ಕೆಂಪುಕಂದು ಬಣ್ಣದ್ದಾಗಿದ್ದರೆ, ಒಳಬಾಗದಲ್ಲಿ ಬಿಳಿಯಾಗಿರುತ್ತವೆ. ಸುಮಾರು 6-20 ಮಿ.ಮೀಟರ್ ಅಳತೆಯ ಬೀಜಗಳು ದೀರ್ಘಅಂಡಾಕಾರ (elipsoid) ವಾಗಿರುತ್ತವೆ. ಲೈಂಗಿಕವಾಗಿ ಪಕ್ವಗೊಂಡ ಗಿಡವೊಂದು 1 ರಿಂದ 1.5 ಕಿ ಗ್ರಾಂ ತೂಕವಿರುವ 8-12 ಕಿತ್ತಳೆ ಬಣ್ಣದ ಹಣ್ಣುಗಳನ್ನು ಉತ್ಪತ್ತಿ ಮಾಡುತ್ತದೆ. ಇನ್ನು ಎಲೆಗಳ ಕೊಯ್ಲು ನಾಲ್ಕು ವರ್ಷಗಳ ನಂತರ ಮಾಡಬಹುದಾಗಿದೆ. ಆರೋಗ್ಯಯುತ ಗಿಡವೊಂದು ವಾರ್ಷಿಕ 10-90 ಎಲೆಗಳನ್ನು ಬಿಡುತ್ತದೆ. ಪಂಡಾನಸ್‌ಗಳ ಜೀವಿತಾವಧಿ 50-80 ವರ್ಷವೆಂದು ಅಂದಾಜಿಸಲಾಗಿದೆ.

 ಪಂಡಾನಸ್‌ನ ವಿವಿಧ ಭಾಗಗಳು ವಿವಿಧ ರಾಸಾಯನಿಕ ಘಟಕಗಳನ್ನು ಹೊಂದಿದ್ದು, ಬೇರು ಸ್ಟಿರಾಯ್ಡ್, ಫಿನಾಲ್, ಬೆಂಜೋಫಾರನ್, ಲಿಗ್ನಾನ್ ಹೊಂದಿದೆ. ಅದರ ರೈಜೋಮ್ ಭಾಗ ಪ್ಲೇವೊನ್, ಎಲೆಗಳು ಅಲ್ಕಲಾಯ್ಡ್ ಹಾಗೂ ಹಣ್ಣುಗಳು ವಿಟಾಮಿನ್‌ಗಳನ್ನು ಹೊಂದಿದೆ.

 ಇನ್ನು ಇದರ ಪರಿಮಳಭರಿತ ಎಲೆಗಳನ್ನು ಕೀಳಿದ ತಕ್ಷಣ ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ತೈಲ ತಯಾರಿಕೆಗೆ ಬಳಸಲಾಗುತ್ತದೆ. ಈ ತೈಲವು 2-ಫಿನೈಥೈಲ್-ಮಿಥೈಲ್ ಇಥರ್, ಟೆರಪಿನೆನ್-4, ಪಿ-ಸೈಮೆನ್ ಮತ್ತು ಅಲ್ಫಾ ಟರ‍್ಫಿನಿಯಾಲ್ ಹೊಂದಿದ್ದು ಅದರ ಸುಗಂಧಭರಿತ ಪರಿಮಳ, ಸುವಾಸನೆಗೆ ಕಾರಣವಾಗಿದೆ. ಇದರಿಂದ ಅತ್ತರುಗಳು, ಸುಗಂಧದ್ರವ್ಯಗಳು ಸಾಬೂನುಗಳು ಇತ್ಯಾದಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ನಮ್ಮ ದೇಶದ ಪ್ರಸಿದ್ಧ ಗಂಜಮ್ ಕೇವುಡಾ ಹೂವಿಂದ ತಯಾರಿಸಲಾಗುವ ಸುಗಂಧ ತೈಲ ಎಲ್ಲೆಡೆ ಹೆಸರುವಾಸಿಯಾಗಿದೆ. ಓಡಿಸ್ಸಾದ ಗಂಜಮ್ ಜಿಲ್ಲೆಯ ಚತ್ರಪೂರ್, ಬ್ರಹ್ಮಪೂರ್ ಗೋಪಾಲ್‌ಪೂರ್ ಹಾಗೂ ಜಗನ್ನಾಥಪೂರ್ ಮುಂತಾದ ಕಡೆಗೆ ಈ ಕೇದಗೆಯಿಂದ ಪ್ರಸಿದ್ಧ ಕೇವುಡಾ ಸುಗಂಧತೈಲ ತಯಾರಿಸಲಾಗುತ್ತದೆ. ಈ ಭಾಗದಿಂದಲೇ ಶೇ 90-95 ರಷ್ಟು ಕೇದಗೆ ಹೂ ಎಲ್ಲೆಡೆ ರಪ್ತಾಗುತ್ತದೆ. ಇನ್ನುಳಿದಂತೆ ಎಲೆಗಳು ಚಾಪೆ, ತಟ್ಟೆ, ಬಟ್ಟಲು, ಪೊರಕೆ, ಛಾವಣಿ ಹೀಗೆ ನಾನಾ ರೀತಿಯ ಉಪವಸ್ತುಗಳ ತಯಾರಿಕೆಗೆ ನೆರವಾಗುತ್ತವೆ. ಇನ್ನು ಜ್ವರ,ಎದೆ ನೋವು, ನರರೋಗ, ಸ್ತ್ರೀರೋಗಗಳಲ್ಲಿ ಔಷಧಿಯಾಗಿಯೂ ಇದರ ಬಳಕೆಯಾಗುತ್ತದೆ ಎಂಬುದು ಆರ್ಯುವೇದದಲ್ಲಿ ತಿಳಿಯುತ್ತದೆ.

 

ಬಹುಪಯೋಗಿ ಕೇದಗೆಯನ್ನು ಹೆಣ್ಣು ಮಕ್ಕಳು ತಮ್ಮ ವೈವಿದ್ಯಮಯ ಕೇಶ ಶೃಂಗಾರದ ಸಾಧನವಾಗಿ ಮಾತ್ರ ಬಳಸುತ್ತಿದ್ದರಷ್ಟೇ ಅಲ್ಲ, ಕೆಲ ಆಚರಣೆಗಳು, ದೇವರ ಪೂಜೆಗೂ ಬಳಸುತ್ತಿದ್ದರು ಎಂಬುದು ತಿಳಿದು ಬರುತ್ತದೆ. ಸಾಂಪ್ರಾದಾಯಿಕ ಕುಟುಂಬಗಳಲ್ಲಿ ನಾಗಪೂಜೆಗೆ ಈ ಹೂವು ಬೇಕೆ ಬೇಕು. ಹಾಗಾಗಿ ಪಂಚಮಿ ಸಂದರ್ಭದಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಇನ್ನು ಕೆಲ ದೇವರಿಗೆ ಈ ಹೂ ಪೂಜೆ ನಿಷಿದ್ಧ ಎಂಬುದು ಪೌರಾಣಿಕ ಹಿನ್ನಲೆಯಲ್ಲಿ ತಿಳಿದು ಬರುತ್ತದೆ. ಈ ಹೂವಿನ ಬಗ್ಗೆ ಕೆಲ ಕಥೆಗಳು ಬಾಯಿಯಿಂದ ಬಾಯಿಗೆ ಅನೇಕ ರೀತಿಯಲ್ಲಿ ಹರಿದಾಡಿ ಬಂದಿವೆ. ಈ ಕೇದಗೆ ವನದಲ್ಲಿ ಹಾವುಗಳು ಹೆಚ್ಚಾಗಿರುತ್ತವೆ ಎಂದು ಕೆಲವರು ಹೇಳುತ್ತಾರೆ. ಈ ದಟ್ಟವಾದ ಪೊದೆ ಇಂತಹ ವಿಷಜಂತುಗಳ ವಾಸಕ್ಕೆ ಹೇಳಿ ಮಾಡಿಸಿದ ಜಾಗ ಎಂಬುದು ಮೇಲ್ನೋಟಕ್ಕೆ ವೇದ್ಯವಾಗುವ ಸಂಗತಿ. ಹಾಗೂ ಇಲ್ಲಿ ಕೆಲ ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡುವಲ್ಲಿ ಇದು ಸೂಕ್ತ ಆಸರೆ ಒದಗಿಸುವ ಜಾಗ, ಹಾಗಾಗಿಯೇ ಈ ಮೊಟ್ಟೆ ಮರಿ ಇತ್ಯಾದಿ ಹುಡುಕಿ ಬರುವ ಹಾವುಗಳು ಇಲ್ಲಿ ಇರಲೇಬೇಕು. ಇದು ವೈಜ್ಞಾನಿಕ ಸತ್ಯ ಕೂಡಾ. ಅದೇನೆ ಇರಲಿ ಈ ಕೇದಗೆ ಹೂ ತನ್ನ ಸುಗಂಧಭರಿತ ಪರಿಮಳದಿಂದ ಎಲ್ಲರನ್ನು ಆಕರ್ಷಿಸಿ ತನ್ನ ವಿಶಿಷ್ಟ ಗುರುತನ್ನು ನಮ್ಮಲ್ಲಿ ಬಿಟ್ಟಿರುವುದು ಮಾತ್ರ ಸುಳ್ಳಲ್ಲ.

 ಆಕರಗಳು :

1) ಸುದ್ಧಿ ಪತ್ರಿಕೆಗಳ ಬಿಡಿ ಲೇಖನಗಳು

೨) Unique pandanus - Flower, food and medicine Singh Gurmeet, Parle Amrita

೩) ಜಾಲತಾಣಗಳು

 ಲೇಖಕರು : ರಮೇಶ, ವಿ,ಬಳ್ಳಾ

 ಅಧ್ಯಾಪಕರು

 ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು

 (ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ

                                  Mobile: 9739022186

   


 

2 comments: