Wednesday, January 4, 2023

ಮಂಗಟ್ಟೆ : ಬದುಕಿಗೊಂದು ದಾರಿದೀಪ

 ಮಂಗಟ್ಟೆ : ಬದುಕಿಗೊಂದು ದಾರಿದೀಪ

ಸ್ನೇಹಿತರೆ, ಪರಿಸರದಲ್ಲಿರುವ ಕೆಲವೊಂದು ಜೀವಿಗಳು ನಮ್ಮ ಜೀವನಕ್ಕೆ ಹೇಗೆ ದಾರಿದೀಪವಾಗಿವೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಇಂದು ಸಾಮಾಜಿಕ ಜಾಲತಾಣಗಳು, ದೃಶ್ಯ ವಾಹಿನಿಗಳು ಮತ್ತು ಕೆಲ ವ್ಯಕ್ತಿಗಳು ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಸುತ್ತಿರುವ ದೌರ್ಜನ್ಯಗಳು, ವಿವಾಹ ವಿಚ್ಛೇದನಗಳು ಮುಂತಾದ ಅನೇಕ ಘಟನೆಗಳಿಗೆ ಕಾರಣವಾಗುತ್ತಿವೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ ಅಲ್ಲವೇ! ಆದರೆ ಇಂತಹ ಘಟನೆಗಳಿಂದ ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುತ್ತಿದೆ ಎಂದರೆ ತಪ್ಪಾಗಲಾರದು. ಹೀಗಿರುವಾಗ ಸಮಾಜಕ್ಕೆ ಮಾದರಿಯಾಗಿ ಇರುವ ಒಂದು ಖಗರತ್ನವೊಂದರ ಬಗ್ಗೆ ನಾವೊಂದಿಷ್ಟು ತಿಳಿಯೋಣ ಬನ್ನಿ.

ಪಕ್ಷಿ ಸಂಕುಲದಲ್ಲೆ ಬಹಳ ಹೆಸರುವಾಸಿಯಾದ ಕೊಂಬು ಕೊಕ್ಕಿನ ಪಕ್ಷಿ ಅಥವ ಮಂಗಟ್ಟೆ ಇದಕ್ಕೊಂದು ಉದಾಹರಣೆ. ಇವುಗಳನ್ನು ನೋಡಬೇಕು, ಅಧ್ಯಯನ ಮಾಡಬೇಕು ಎಂದು ಸುಮಾರು ಇಪ್ಪತ್ತು ವರ್ಷಗಳಿಂದ ಇಚ್ಛಿಸಿದ್ದರೂ ಅಷ್ಟು ವರ್ಷಗಳಿಂದ ಸಿಕ್ಕಿದ್ದು ಮಾತ್ರ ೨ ಪ್ರಭೇದಗಳು. ಉಳಿದ ಇನ್ನೆರಡನ್ನು ನೋಡುವುದು ದುರ್ಲಬವೇ ಸರಿ. ಏಕೆಂದರೆ ನಾನಿರುವುದು ರಾಜ್ಯದ ದಕ್ಕಿಣದಲ್ಲಿ, ಅವು ಇರುವುದು ಉತ್ತರದಲ್ಲಿ. ಏನಾದರಾಗಲಿ ಎಂದು ಐದು ವರ್ಷಗಳ ಹಿಂದೆ ೩ ದಿನ ಕುಟುಂಬದ ಜೊತೆಯಲ್ಲಿ ದೂರದ ದಾಂಡೇಲಿಗೆ ಪ್ರವಾಸ ಹೊರಟೇ ಬಿಟ್ಟೆವು. ಆದರೆ ನಮಗೆ ಸಿಕ್ಕಿದ್ದು ಶೂನ್ಯವೇ ಸರಿ. ಸಿಗಲಿಲ್ಲವಲ್ಲಾ ಎಂದು ಪೆಚ್ಚುಮೋರೆ ಹಾಕಿಕೊಂಡು ಬಂದಿದ್ದಾಯಿತು. ಮತ್ತೆ ಈ ವರ್ಷ ಮತ್ತೆ ನಾಲ್ಕು ದಿನಗಳ ಪ್ರವಾಸವನ್ನು ಅಲ್ಲಿಗೆ ಹಾಕ್ಕೊಂಡದ್ದಾಯಿತು. ಈ ಬಾರಿ ಭ್ರಮನಿರಸನವಾಗಲಿಲ್ಲ. ಈ ಅದ್ಭುತ ಹಕ್ಕಿಗಳ ಬಗ್ಗೆ ತಿಳಿಯಲು ಎಷ್ಟು ಮನಸ್ಸುಗಳು ಹಾತೊರೆಯುತ್ತಿವೆ ಎಂದರೆ. ಅದಕ್ಕಾಗಿ ದೂರದ ನಾನಾ ರಾಜ್ಯಗಳಿಂದ ಬಂದವರು ನೂರಾರು!

ನಮ್ಮ ದೇಶದಲ್ಲಿ ಸುಮಾರು ೭ ಪ್ರಭೇದಗಳು ಕಂಡುಬಂದರೂ ಕರ್ನಾಟಕದಲ್ಲಿ ನಾಲ್ಕು ವಿಶಿಷ್ಟ ಬಗೆಯ ಮಂಗಟ್ಟೆಗಳು ಕಂಡುಬರುತ್ತವೆ. ಅವುಗಳೇ -

ಬೂದು ಮಂಗಟ್ಟೆ (Indian Grey Hornbill)


ಇದು ರಾಜ್ಯದ ಎಲ್ಲಾ ಭಾಗಗಳಲ್ಲಿ ಕಂಡುಬರುತ್ತದೆ. ಸಾಧಾರಣವಾಗಿ ಇದು ಕೋಳಿಯ ಗಾತ್ರದಷ್ಟಿದ್ದು ಕೊಕ್ಕಿನ ಮೇಲೆ ಸಣ್ಣ ಕೊಂಬು ಕಂಡುಬರುತ್ತದೆ. ನೀಳಕೊಕ್ಕಿನ ತುದಿಯಲ್ಲಿ ತಿಳಿ ಹಳದಿ ಬಣ್ಣವಿದ್ದು ಕೊಕ್ಕು ಮುಂದಕ್ಕೆ ಬಾಗಿದೆ. ದೇಹವನ್ನು ಮುಚ್ಚಿದ ಗರಿಗಳು ಬೂದುಬಣ್ಣವನ್ನು ಹೊಂದಿದ್ದು ಹೊಟ್ಟೆಯ ಭಾಗದಲ್ಲಿ ತಿಳಿ ಬೂದು ಬಣ್ಣವಿರುತ್ತದೆ. ಬಾಲ ಉದ್ದವಾಗಿದ್ದು ಕೊನೆಯಲ್ಲಿ ಕಪ್ಪು ಮಿಶ್ರಿತ ಹಾಗೂ ಬಿಳಿ ಮಿಶ್ರಿತ ಬೂದು ಬಣ್ಣದ ಪಟ್ಟೆ ಇರುತ್ತದೆ. ಸಿಳ್ಳೆ ಹೊಡೆದಂತಿರು ಕೂಗು, ಅದನ್ನು ಗುರುತಿಸಲು ಸಹಾಯ ಮಾಡುತ್ತದೆ. ಮರದ ಮೇಲಿನ ಕೊಂಬೆಗಳಲ್ಲಿ ಜಿಗಿದು ಜಿಗಿದು ಚಲಿಸುತ್ತದೆ.

ಮಲೆ ಮಂಗಟ್ಟೆ (Malabar Grey Hornbill)

ಇದು ಮಲೆನಾಡಿನ ಅಂದರೆ ಘಟ್ಟಪ್ರದೇಶದ ಭಾಗಗಳಲ್ಲಿ ಕಂಡುಬರುವ, ಹೆಚ್ಚು ಕಡಿಮೆ ಬೂದು ಮಂಗಟ್ಟೆಯನ್ನು ಹೋಲುತ್ತದೆ. ಕೊಕ್ಕಿನ ಮೇಲೆ ಕೊಂಬು ಕಂಡುಬರುವುದಿಲ್ಲ. ಕೊಕ್ಕು ದೊಡ್ಡದಾಗಿದ್ದು ತುದಿಯಲ್ಲಿ ಕಿತ್ತಳೆ, ಹಳದಿ ಬಣ್ಣವಿದೆ. ಬಾಲದ ಬುಡದಲ್ಲಿ ತಿಳಿ ಹಳದಿ ಬಣ್ಣವಿರುತ್ತದೆ. ದೇಹದಲ್ಲಿ ಬೂದು ಬಣ್ಣದ ಗರಿಗಳಿದ್ದು ಬಾಲದ ತುದಿಯಲ್ಲಿ ಬಿಳಿ ಪಟ್ಟೆ ಇರುತ್ತದೆ. ಕೂಗುವಾಗ ಕಿಯಾಕಿಯಾ ಕ್ಯಾ.ಕ್ಯಾ ಕ್ಯಾ ಕ್ಯಾ ಎಂದು ಎಂಟತ್ತು ಬಾರಿ ನಕ್ಕಂತೆ ಕೂಗುತ್ತದೆ.



ಪ್ರಮುಖವಾಗಿ ದಾಂಡೇಲಿ ಮತ್ತು ಪಶ್ಚಿಮ ಘಟ್ಟದಲ್ಲಿ ಅಪರೂಪವಾಗಿ ಕಾಣಸಿಗುವ ಮತ್ತೊಂದು ಪ್ರಬೇಧ ಎಂದರೆ ಮಲೆ ದಾಸಮಂಗಟ್ಟೆ(Malabar Pied Hornbill)

ಗಾತ್ರದಲ್ಲಿ ಬೂದು ಮಂಗಟ್ಟೆಗಳಿಗಿಂತ ತುಸು ದೊಡ್ಡದಾಗಿದ್ದು ಕೊಕ್ಕು ಹಳದಿಯಾಗಿದ್ದು ಕೊಂಬಿನ ಮುಕ್ಕಾಲು ಭಾಗ ಕಪ್ಪಗಿದೆ. ಕುತ್ತಿಗೆ, ಬೆನ್ನು, ಎದೆ ಮತ್ತು ಬಾಲದ ಗರಿಗಳು ಕಪ್ಪು ಬಣ್ಣವನ್ನು ಹೊಂದಿದ್ದು, ಹೊಟ್ಟೆ ಮತ್ತು ಬಾಲದ ಗರಿಗಳ ಕೆಳಭಾಗ, ರೆಕ್ಕೆ ಅಂಚು ಬಿಳಿ ಬಣ್ಣದ್ದಾಗಿರುತ್ತದೆ. ಕಣ್ಣಿನ ಕೆಳಗೆ ಒಂದು ಬಿಳಿ ಪಟ್ಟೆ ಕಂಡುಬರುತ್ತದೆ. ಕೊಕ್ಕಿನ ಮೇಲೆ ಇರುವ ಕೊಂಬು ಕೊಕ್ಕಿನ ಮುಕ್ಕಾಲು ಭಾಗವನ್ನು ಆವರಿಸಿರುತ್ತದೆ.

ಅಪರೂಪದಲ್ಲಿ ಅಪರೂಪವಾಗಿ ಕಾಣಸಿಗುವ ಮತ್ತೊಂದು ಪ್ರಬೇಧ ಎಂದರೆ ದಾಸಮಂಗಟ್ಟೆ (Great Hornbill)


ಇದು ಅತ್ಯಂತ ದೊಡ್ಡ ಗಾತ್ರದ ಹಕ್ಕಿ. ಇದರ ಹಾರಾಟವನ್ನು ನೋಡುವುದೇ ಒಂದು ಅಮೋಘ ಮತ್ತು ಅದ್ಭುತ ರಸಾನುಭವ. ಗಾಳಿಯಲ್ಲಿ ತೇಲಿ ಕಣಿವೆಯಲ್ಲಿ ಹಾರುತ್ತಾ ದೂರದ ಮರಕ್ಕೆ ಹೋಗುವ ಸೊಬಗನ್ನು ನೋಡುವುದೇ  ಒಂದು ರಮ್ಯ ಅನುಭವ.  ರೆಕ್ಕೆ ಬಡಿದು ಹಾರುವಾಗ ಗಾಳಿಯ ಶಬ್ದ ಬರ್ರ್‌ ಬರ್ರ್‌ ಎಂಬ ಶಬ್ದ ಕೇಳುತ್ತದೆ ಎಂದರೆ ರೆಕ್ಕೆಯ ಅಗಲ ಎಷ್ಟಿರಬಹುದೆಂದು ಊಹಿಸಿಕೊಳ್ಳಬಹುದು. ಕುತ್ತಿಗೆ, ಮೇಲಿನ ಕೊಕ್ಕು ಮತ್ತು ಕೊಂಬು ಹಳದಿ ಬಣ್ಣ, ಕೆಳಗಿನ ಕೊಕ್ಕು, ಬೆನ್ನಿನ ಹಿಂಭಾಗ, ಬಾಲ ಬಿಳಿ ಬಣ್ಣದ ಗರಿಗಳನ್ನು ಹೊಂದಿದೆ. ರೆಕ್ಕೆಯ ಅಂಚು ಮತ್ತು ಮಧ್ಯದಲ್ಲಿ ಬಿಳಿ ಮತ್ತು ಹಳದಿ ಪಟ್ಟೆ ಕಂಡುಬರುತ್ತದೆ. ಇವುಗಳ ಪ್ರಣಯಕೇಳಿಯ ಹಾರಾಟ ಅದೆಷ್ಟು ಚಂದ, ಮನದನ್ನೆಯನ್ನು ಆರಿಸಿಕೊಳ್ಳುವಾಗ ತಾನು ತಂದ ಹಣ್ಣನ್ನು ಗಾಳಿಯಲ್ಲೆ ಹಾರುತ್ತಾ ಹೆಣ್ಣಿಗೆ ನೀಡಿ ತನ್ನ ಪ್ರೇಯಸಿಯ ಮನವೊಲಿಸಿಕೊಳ್ಳುತ್ತದೆ.  ಇದಕ್ಕಿರುವ ಆಕರ್ಷಕವಾದ ಕೊಕ್ಕೇ ಇದರ ಅವಸಾನಕ್ಕೆ ಕಾರಣವಾಗಿದೆ ಎನ್ನುವುದು ದುರಂತವೇ ಸರಿ. ಇದು ಮನುಷ್ಯನ ಅವಿವೇಕ ಮತ್ತು ದುರಾಸೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ. 

ಕೊಂಬು ಕೊಕ್ಕಿನ ಎಲ್ಲಾ ಪ್ರಬೇಧಗಳು ಫ್ರೂಜಿವೋರ್.‌ ಅಂದರೆ ಹಣ್ಣು ಅದರ ಪ್ರಮುಖ ಆಹಾರ. ಮುಖ್ಯವಾಗಿ ಫೈಕಸ್‌ ಜಾತಿಯ ಆಲ, ಅರಳಿ, ಬಸರಿ, ಗೋಳಿ, ಹತ್ತಿ ಮತ್ತು ಕೆಲವು ಕಾಡು ಹಣ್ಣುಗಳು. ಹಣ್ಣುಗಳ ದುರ್ಲಭ್ಯತೆ ಈ ಹಕ್ಕಿಗಳ ಸಂತತಿಗೆ ಮಾರಕವಾಗುತ್ತಿದೆ. ಹಿಂದಿನ ಜನರು ಹೆಚ್ಚಾಗಿ ನಡೆದೇ ಹೋಗುತ್ತಿದ್ದುದರಿಂದ ರಸ್ತೆಯ ಇಕ್ಕೆಲಗಳಲ್ಲಿ ಇಂತಹ ನೆರಳಿನ, ಹಣ್ನಿನ ಜಾತಿಯ ಮರಗಳನ್ನು ಉದ್ದಕ್ಕೂ ನೆಟ್ಟು ಬೆಳಸುತ್ತಿದ್ದರು. ಈಗ ಎಲ್ಲರ ಮನೆಗಳಲ್ಲಿ ವಾಹನಗಳು ಇರುವುದರಿಂದ ರಸೆಗಳು ಅಗಲವಾಗುತ್ತಿದ್ದಂತೆ ಹಣ್ಣಿನ ಮರಗಳು ಮಾಯವಾಗುತ್ತಲೇ ಬಂದವು. ಕಾಡಿನ ಅತಿಕ್ರಮಣ ಹೆಚ್ಚಾಗಲು ಅಪರೂಪದ ಮರಗಳು ಕ್ಷೀಣಿಸುತ್ತಾ ಬಂದವು. ವನ್ಯಜೀವಿಗಳೊಂದಿಗಿನ ಸಂಘರ್ಷ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವುದರಿಂದ ದಾಸಮಂಗಟ್ಟೆಗಳು ಅಲ್ಲಿ ಮಾತ್ರ, ವಿರಳವಾಗಿ ಕಾಣಸಿಗುತ್ತಿವೆ. ಅಲ್ಲಿಂದ ಕಣ್ಮರೆಯಾದರೆ ಅಲ್ಲಿಗೆ ಅದರ ಸಂತತಿ ನಾಶವಾದಂತೆಯೇ. ಅಷ್ಟು ವಿರಳಾತಿ ವಿರಳವಾಗಿವೆ. ಹಾಗಾಗಿ ಇವುಗಳನ್ನು ತೀವ್ರ ಅಪಾಯಕ್ಕೆ ಒಳಗಾದ ಪ್ರಬೇಧವಾಗಿ ಗುರುತಿಸಲ್ಪಟ್ಟಿವೆ.

ಇನ್ನೊಂದು ಮಹತ್ವದ ವಿಷಯ ಎಂದರೆ ಅಪ್ರತಿಮ ಏಕ ಸತಿ-ಪತೀ ವೃತತ್ವ. ಈ ಹಕ್ಕಿಗಳಲ್ಲಿ ಹೆಣ್ಣು ಗಂಡು ಜೋಡಿಯಲ್ಲಿ ಹೆಣ್ಣಾಗಲಿ, ಗಂಡಾಗಲಿ ಸತ್ತರೆ ಮತ್ತೊಂದು ಸಹಗಮನ ನಡೆಸಿ ಸಾಯುತ್ತದೆ.  ಬೇರೊಂದು ಹಕ್ಕಿಯ ಜೊತೆ ಸಂಸಾರ ನಡೆಸದು ! ಇದು ಮೊಟ್ಟೆ ಇಟ್ಟು ಮರಿ ಮಾಡುವುದು ಮರದ ಪೊಟರೆಗಳಲ್ಲಿ. ಸೂಕ್ತವಾದ ಎತ್ತರವಾದ ಮರಗಳ ಪೊಟರೆಯನ್ನು ಆಯ್ಕೆ ಮಾಡಿಕೊಂಡ ಮೇಲೆ ಹೆಣ್ಣು ೨-೪ ಮೊಟ್ಟೆ ಇಟ್ಟು ಕಾವುಕೊಡಲು ಕೂತರೆ, ಗಂಡು ಆ ಪೊಟರೆಯ ಸುತ್ತಲೂ ಮರದ ಚಕ್ಕೆ, ಎಂಜಲು ಮತ್ತು ಜೇಡಿ ಮಣ್ಣಿನಿಂದ ಕೊಕ್ಕು ಹಾಕುವಷ್ಟು ಜಾಗವನ್ನು ಬಿಟ್ಟು ಉಳಿದ ಜಾಗವನ್ನು ಮುಚ್ಚಿಬಿಡುತ್ತದೆ. ನಂತರ ಗಂಡಿನ ಕೆಲಸ ಎಂದರೆ ಹೆಣ್ಣಿಗೆ ಆಹಾರ ಸರಬರಾಜು ಮಾಡುವುದು. ಹೆಣ್ಣು ಕಾವುಕೊಡುವ ಉದ್ದೇಶದಿಂದ ಗರಿಗಳನ್ನು, ಪುಕ್ಕಗಳನ್ನು ಕಿತ್ತು ಹಾಕಿಬಿಡುತ್ತದೆ. ಮೊಟ್ಟೆಯೊಡೆದು ಮರಿಗಳಾಗಿ ಅವು ಬೆಳೆಯುವವರೆಗೂ ಗಂಡು ನಿರಂತರವಾಗಿ ಆಹಾರವನ್ನು ಪೂರೈಸುತ್ತಿರುತ್ತದೆ.



ಈ ಸಮಯ ಇವುಗಳ ಬದುಕಿನ ಮಹತ್ವದ ಪರ್ವ. ಕೊಕ್ಕಿನ ಆಸೆಗೆ, ಯಾರಾದರೂ ಗಂಡು ಹಕ್ಕಿಯನ್ನು ಬೇಟೆಯಾಡಿದರೆ ಗೂಡಿನಲ್ಲಿರುವ ಹೆಣ್ಣುಹಕ್ಕಿ ಮತ್ತು ಮರಿಗಳು ಅಲ್ಲೆ ಸಾಯುತ್ತವೆ. ಎಂತಹ ದುರ್ವಿಧಿ ಅಲ್ಲವೇ? ಗೂಡು ಮುಚ್ಚಿರುವ ಪೊಟರೆಯ ಹೊರಭಾಗವನ್ನು ಹೆಣ್ಣು ಹಕ್ಕಿ ಒಡೆಯಲಾಗುವುದಿಲ್ಲ ಮತ್ತು ಪುಕ್ಕಗಳನ್ನು ಉದುರಿಸಿಕೊಂಡಿರುವುದರಿಂದ ಹಾರಲೂ ಸಹ ಆಗದೆ ಅವುಗಳೆಲ್ಲವೂ ಲ್ಲೇ ನಾಶವಾಗುತ್ತವೆ. ಹೀಗೆ ಹೆಣ್ಣಿಗಾಗಿ ಗಂಡು, ಗಂಡಿಗಾಗಿ ಹೆಣ್ಣು ಬದುಕುವುದು ಬೇರೆ ಪಕ್ಷಿಗಳಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಪ್ರಜ್ಞಾವಂತರಾದ ನಾವು ಯೋಚಿಸಿ ಇವುಗಳ ಸಂತತಿಯನ್ನು ಉಳಿಸಿಕೊಳ್ಳಬೇಕಿದೆ. ಅದಕ್ಕಾಗಿ ಗಿಡಗಳನ್ನು ನೆಡೋಣ, ಬೆಳೆಸೋಣ, ನಿಸರ್ಗದ ಇಂತಹ ಅನೇಕ ಜೀವ ಸಂಕುಲಗಳನ್ನು ಕಾಪಾಡಿಕೊಳ್ಳೋಣ.

https://www.youtube.com/watch?v=rYQMVGn7T80

 

2 comments:

  1. nice sir. I felt exited when i saw grey horn bill near my home. untill then i never knew it is found here too. i saw 3 to 4 times in different places

    ReplyDelete