Wednesday, January 4, 2023

ಎದ್ದು ಬಂದನೇ ಹಿಮಮಾನವ?

 ಎದ್ದು ಬಂದನೇ ಹಿಮಮಾನವ?

ಲೇಖಕರು : ಶ್ರೀ ಸುರೇಶ ಸಂಕೃತಿ

ಆಟ್ಸಿಯ ಪುನರ್ ನಿರ್ಮಿತ ಪ್ರತಿಮೆಯ  ಚಿತ್ರ 

ಕೃಪೆ : ಸೌತ್ ಥೈರೋಲ್ ಮ್ಯೂಸಿಯಂ, ಬೊಲ್ಜಾನ , ಇಟಲಿ.

 ಜರ್ಮನಿಯ  ಪರ್ವತಾರೋಹಿ  ದಂಪತಿಗಳಾ ಹೆಲ್ಮಟ್ ಮತ್ತು ಎರಿಕಾ ಸೈಮನ್ ಆಸ್ಟ್ರೀಯ ಮತ್ತು ಇಟಲಿಯ ಗಡಿ ಭಾಗದಲ್ಲಿ ಪರ್ವತಾರೋಹಣದಲ್ಲಿ ತೊಡಗಿರುತ್ತಾರೆ. ೧೯/೯/೧೯೯೧ ರಂದು ಹಲ್ಮಟ್ ಏಕಾಂಗಿಯಾಗಿ ಚಾರಣ ಮಾಡುತ್ತಿರ ಅಚಾನಕ್ಕಾಗಿ 3,210 ಮೀಟರ್ ಎತ್ತರದ ಮರಗಟ್ಟಿದ ಹಿಮನದಿಯೊಂದರಲ್ಲಿ ಮಾನವ ಮೃತ ದೇಹವನ್ನು ಕಂಡು ಗಾಬರಿಯಾಗುತ್ತಾನೆ.  ಈ ವಿಚಾರವನ್ನು ತಿಳಿದ ಸ್ಥಳೀಯ ಪೋಲೀಸರು ಅಲ್ಲಿಗೆ ದಾವಿಸಿ  ಬರುತ್ತಾರೆ.   ಘನೀಭವಿಸಿದ ಹಿಮನದಿಯಲ್ಲಿ ಸೊಂಟದಿಂದ ಕೆಳಕ್ಕೆ ಮುಳುಗಿದ್ದ ಮೃತ ದೇಹವನ್ನು ಮಂಜನ್ನು ಅಗೆದು ಬಗೆದು ಎರಡು ದಿನ ಪ್ರಯಾಸಪಟ್ಟು ಹೊರತೆಗೆಯುತ್ತಾರೆ. ಪರ್ವತಾರೋಹಣದಲ್ಲಿ ತೊಡಗಿದ್ದ ಯಾರೋ ನತದೃಷ್ಟ ಪ್ರವಾಸಿ ಅಪಘಾತಕ್ಕೆ ಒಳಗಾಗಿ ಸತ್ತಿರುವನೆಂದು ಭಾವಿಸಿ  ಆ ಶವವನ್ನು ಮತ್ತು ಅದರೊಂದಿಗೆ ದೊರೆತ ವಸ್ತುಗಳ ಹತ್ತಿರದ ವಿಧಿವಿಜ್ಞಾನ ಪ್ರಯೋಗಾಲಕ್ಕೆ ತಲುಪಿಸುತ್ತಾರೆ. 

 ಚಿತ್ರ ಕೃಪೆ : ಸೌತ್ ಥೈರೋಲ್ ಮ್ಯೂಸಿಯಂ, ಬೊಲ್ಜಾನ , ಇಟಲಿ.

ಅದು ಗಂಡಸಿನ ಶವವಾಗಿರುತ್ತದೆ.  ಅದು ಸಂಪೂರ್ಣವಾಗಿ ಮಮ್ಮೀಕರಣವಾಗಿದ್ದರಿಂದ ತೀರಾ ಇತ್ತೀಚೆಗೆ ಮೃತಗೊಂಡ ವ್ಯಕ್ತಿಯ ಶವವಲ್ಲವೆಂದು ದೃಢಪಡುತ್ತದೆ. ಶವದೊಂದಿಗೆ ಇದ್ದ ವಸ್ತುಗಳ ವಿನ್ಯಾಸವನ್ನು ವಿಶ್ಲೇಷಿಸಿದ ಪ್ರಾಚ್ಯವಸ್ತು ಶಾಸ್ತ್ರಜ್ಞರು ಅವು ಸುಮಾರು ೫೦೦೦ ವರ್ಷಗಳ ಹಿಂದೆ ಮಾನವರು ಬಳಸುತ್ತಿದ್ದ ವಸ್ತುಗಳೆಂದು ಅಂದಾಜು ಮಾಡುತ್ತಾರೆ. ಶವದ ಅಂಗಾಂಶದ ಕಾರ್ಬನ್  ಡೇಟಿಂಗ್ ನಿಂದ ಆ ಮೃತ ವ್ಯಕ್ತಿಯು ಕ್ರಿಸ್ತಪೂರ್ವ ೧೨೦೦ ವರ್ಷಗಳ ಹಿಂದೆ ಜೀವಿಸಿದ್ದವನು ಎಂಬ ಅಂಶವು ಕಂಡು ಬರುತ್ತದೆ. ಹೀಗಾಗಿ ಆ ಶವವು ಸುಮಾರು ೫ ಸಾವಿರ ವರ್ಷಗಳ ಕಾಲ ಹಿಮದಲ್ಲಿ ಹೂತು ಹೋಗಿದ್ದು ಮಮ್ಮೀಕರಣ ಹೊಂದಿದ ಶವಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಎಂಬ ಅಂಶ ಬಳಕಿಗೆ ಬರುತ್ತದೆ.  ಸುಮಾರು ೫ ಅಡಿ ೨ ಇಂಚು ಎತ್ತರದ ೪೫-೪೬ ವರ್ಷ ವಯಸ್ಸಿನ ಈ ಹಿಮ ಮಾನವ ಈಜಿಪ್ಟಿನ ಮೊದಲ ಪಿರಮಿಡ್ ನಿರ್ಮಾಣಕ್ಕಿಂತಲೂ ಒಂದು ಸಾವಿರ ವರ್ಷಗಳಷ್ಟು ಹಿಂದಿನವನೆಂದು ತಿಳಿದು ಬಂದಿತು. ಕ್ರಿಪೂ  ೩೪೦೦ ಮತ್ತು  ೩೧೦೦ ರ  ನಡುವೆ ಜೀವಿಸಿದ್ದನೆಂದು ಅಂದಾಜು ಮಾಡಲಾದ ಈತ ಯಾರು ಇಲ್ಲಿಗೆ ಏಕೆ  ಬಂದ? ಹೇಗೆ ಬಂದ? ಇವನ ಸಾವಿಗೆ ಕಾರಣವೇನುಐದು ಶತಮಾನಗಳು ಇವನ ದೇಹ ಮಂಜಿನಲ್ಲಿ ಇದ್ದುದ್ದಾದರೂ ಹೇಗೆ? ಹೀಗೆ ಹತ್ತು ಹಲವು

 

 ಆಟ್ಸಿಯ ಮಮ್ಮಿ  ಚಿತ್ರ ಕೃಪೆ : ಸೌತ್ ಥೈರೋಲ್ ಮ್ಯೂಸಿಯಂ, ಬೊಲ್ಜಾನ , ಇಟಲಿ.

 



ಆಟ್ಸಿಯ ಮಮ್ಮಿ ದೊರೆತ ಸ್ಥಳದಲ್ಲಿ ಪಿರಿಮಿಡ್ ಸ್ಮಾರಕ.  ಚಿತ್ರ ಕೃಪೆ : ಸೌತ್ ಥೈರೋಲ್ ಮ್ಯೂಸಿಯಂ, ಬೊಲ್ಜಾನ , ಇಟಲಿ.

ಪ್ರಶ್ನೆಗಳು  ಅದರ ಸಂಶೋಧನೆಯಲ್ಲಿ ತೊಡಗಿದವರನ್ನು ಕಾಡಿದವು. ಈ ಹಿಮ ಮಾನವ ದೊರೆತದ್ದು  ಆಟ್ಸಾಲ್ ಕಣಿವೆಯಲ್ಲಿ  ಆದ್ದರಿಂದ  ಅವನನ್ನು ಆಟ್ಸಿ ಎಂದು ಕರೆದರು. ಆಟ್ಸಿಯ ಪತ್ತೆಯನ್ನು ಒಂದು ಅದ್ಭುತ ಪ್ರಾಚ್ಯವಸ್ತುವಿನ ಅನಾವರಣ ಎಂದು ಬಣ್ಣಿಸಲಾಗುತ್ತದೆ.  ಅತ್ಯಂತ ಪ್ರಾಚೀನ ಮತ್ತು ಅವಿಚ್ಛಿನ್ನವಾದ ಮಾನವ ದೇಹದ ಪತ್ತೆಯಾಗಿದ್ದು ಇದರಿಂದ ಆ ಕಾಲದ ಜೀವನ ಕ್ರಮದ ಮೇಲೆ  ಬೆಳಕು ಚೆಲ್ಲಲು ತುಂಬಾ ಸಹಾಯಕವಾಗಿದೆ.

ಆಟ್ಸಿಯೊಂದಿಗೆ ದೊರೆತ ಅವನ ವಸ್ತುಗಳು  ಚಿತ್ರ ಕೃಪೆ : ಸೌತ್ ಥೈರೋಲ್ ಮ್ಯೂಸಿಯಂ, ಬೊಲ್ಜಾನ , ಇಟಲಿ.

ಆಟ್ಸಿಯು ಪತ್ತೆಯಾದ ಸ್ಥಳದಿಂದ ಅವನಿಗೆ ಸೇರಿದ ಅನೇಕ ವಸ್ತುಗಳು ದೊರೆತವು.  ಅವುಗಳಲ್ಲಿ ಮುಖ್ಯವಾದವು

ಕುರಿ ಮತ್ತು ಮೇಲೆ ಚರ್ಮದಿಂದ ತಯಾರಿಸಿದ ಕೋಟು, ಸೊಂಟದಿಂದ ಕೆಳಗೆ ಮತ್ತು ಕಾಲಗಳನ್ನು ಮುಚ್ಚಿದ್ದ ವಿವಿಧ ಪ್ರಾಣಿಗಳ ಚರ್ಮದಿಂದ ತಯಾರಿಸಿದ ಅವನ ಪೋಷಾಕು,  ಒಂದು ಕಾಲಿನಲ್ಲಿ ಉಳಿದಿದ್ದ ಬೂಟು.  ಬೂಟನ್ನು ಎರಡು ಪದರಗಳಲ್ಲಿ ಚರ್ಮದಿಂದ ತಯಾರಿಸಿದ್ದು ಆ ಪದರಗಳ ನಡುವೆ ಹೆಣೆದ ದಾರದಲ್ಲಿ ಮೆದು ಹುಲ್ಲನ್ನು ಹೊಸೆದು ತುಂಬಲಾಗಿದೆ. ಹಿಮಾಚ್ಛಾದಿತ ಪ್ರದೇಶಗಳಲ್ಲಿ ಥಂಡಿಯಿಂದ ರಕ್ಷಣೆ ಪಡೆಯಲು ಈ ಹುಲ್ಲು ಸಹಾಯಕ. 

ತಾಮ್ರದ ಕೊಡ್ಲಿ  ಚಿತ್ರ ಕೃಪೆ : ಸೌತ್ ಥೈರೋಲ್ ಮ್ಯೂಸಿಯಂ, ಬೊಲ್ಜಾನ , ಇಟಲಿ.

ಬೆತ್ತದಂತಹ ಕೋಲನ್ನು ಬಾಗಿಸಿ ಚರ್ಮ ಹೊದಿಸಿ ತಯಾರಿಸಿದ್ದ ಒಂದು ಬ್ಯಾಕ್ ಪ್ಯಾಕ್‌ ಜಿಂಕೆ  ಚರ್ಮದಿಂದ ಮಾಡಿದ ಬತ್ತಳಿಕೆ, ಹದಿನಾರು ಬಾಣಗಳು ಮತ್ತು ಅವುಗಳಲ್ಲಿ ಎರಡಕ್ಕೆ ಮಾತ್ರ ಫ್ಲಿಂಟ್ ಶಿಲೆಯ ಮೊನಚು ತುದಿಗಳಿರುವ ಬಾಣಗಳು,   ಫ್ಲಿಂಟ್ ಶಿಲೆಯಿಂದ ತಯಾರಿಸಿದ ಮರದ ಹಿಡಿಕೆ ಇರುವ ಚಾಕು, ಮ್ಯಾಪಲ್ ಮರದ ಹಸಿ ಎಲೆಯಲ್ಲಿ ಸುತ್ತಿಟ್ಟಿದ್ದ ಇದ್ದಿಲು. ಬರ್ಚ್ ಮರದ ಪಾತ್ರೆ, ಕಾಡು ಮೇಕೆ ಮಾಂಸದ ಒಂದು ತುಂಡು, ಬಿಲ್ಲಿನಂತೆ ಬಾಗಿರುವ ಒಂದು ಬಾರುಕೋಲು ಮತ್ತು ಬಹಳ ಮುಖ್ಯವಾಗಿ  ತಾಮ್ರದ ಮೊನೆಯ ಕೊಡಲಿ. ಈ ಮೊನೆಯನ್ನು ಶುದ್ಧವಾದ ತಾಮ್ರದಿಂದ ತಯಾರಿಸಿದ್ದು, ಎಲ್ ಆಕಾರದ ಮರದ ತುದಿಗೆ ಚರ್ಮದ ದಾರದಿಂದ ಕಟ್ಟಿ ಬಿಗಿಗೊಳಿಸಲಾಗಿತ್ತು. ಕೊರೆಯುವ ಒಂದು ಸಾಧನ, ಒಂದು ಉಜ್ಜುಗೊರಡು- ಈ ಎಲ್ಲವೂ ಶಿಲೆಯಿಂದ ತಯಾರಿಸಿದವು. ತಲೆಗೆ ಧರಿಸಿದ್ದ ಕರಡಿ ಜರ್ಮದ ಫರ್ ಕ್ಯಾಪ್.   ಮೂಳೆ ಸೂಜಿ, ಔಷಧವಾಗಿ ಬಳಸಲಾಗಿತ್ತು ಎಂದು ನಂಬಲಾಗಿರುವ  ಎರಡು ಬಗೆಯ ಹಾವಸೆಯ ಚೂರುಗಳು, ಬೆಂಕಿ ಹೊತ್ತಿಸಲು ಚಕಮಕಿ ಕಲ್ಲು ಮತ್ತು ಒಂದಷ್ಟು ಒಣಗಿದ ಮರದೆಲೆಯ ತರಗು.

ಅತ್ಯಂತ ಬರ್ಬರವಾಗಿ ಹತ್ಯೆಯಾಗುವ ಸಮಯದಲ್ಲಿ  ಆಟ್ಸಿ ಸುಮಾರು ೫ ಅಡಿ ೨ ಇಂಚು ಉದ್ದದ ಸುಮಾರು ೪೫-೪೬ ವರ್ಷ ವಯಸ್ಸಿನ ಗಂಡಸು, ಮರಣ ಸಮಯದಲ್ಲಿ ೫೦ ಕೆಜಿ ತೂಕ ಇದ್ದಿರಬಹುದು. ಈಗ ಅವನ ಮಮ್ಮಿಯ ತೂಕ ಹದಿಮೂರು ಮುಕ್ಕಾಲು ಕೆಜಿ. ಅವನ ಜೀವನವನ್ನು ಬಹುತೇಕ ಜಾನುವಾರು ಮೇಯಿಸುತ್ತಾ ಇಲ್ಲವೇ ಹೊಲದಲ್ಲಿ ದುಡಿಯುತ್ತಾ ಇದ್ದಿರಬೇಕು.

ಆಟ್ಸಿಯ ಶವವನ್ನು ಪರೀಕ್ಷಿಸಿದಾಗ ಎದ್ದು ಕಾಣುವಂತೆ ಇದ್ದ ಅಂಶವೆಂದರೆ ಅವನ ದೇಹದಚರ್ಮದ ಮೇಲೆ ಇದ್ದ ೬೧ ಹಚ್ಚೆಯ ಗುರುತುಗಳು.  ರೇಡಿಯೋಗ್ರಫಿಯ ಪರೀಕ್ಷೆಯಿಂದ  ಆಟ್ಸಿಯ ಕಾಲಿನ ಕೀಲುಗಳಲ್ಲಿ ಮೂಳೆ ಸವೆತ ಆಗಿದ್ದು ಅವನು ಅದರ ನೋವಿನಿಂದ ನರಳಿದ್ದನೆಂದು ಕಂಡು ಬಂದಿತು. ಈ ಕೀಲುಗಳ ಬಳಿ ಪದೇ ಪದೇ ಹಚ್ಚೆ ಹಾಕಿರುವುದು ಕಂಡುಬಂದಿದ್ದು  ನೋವು ನೀವಾರಿಸಲು ಹಚ್ಚೆ ಹಾಕುತ್ತಿದ್ದರಬೇಕೆಂದು ನಂಬಲಾಗಿದೆ.  ಆಟ್ಸಿಯ ದೇಹದ ಸಿಟಿ ಸ್ಕಾನ್ ಮಾಡಿದಾಗ ಅವನ ಹೊಟ್ಟೆಯನ್ನು ಒಳಗೊಂಡು ಜೀರ್ಣಾಂಗ ವ್ಯೂಹವು ಎದೆಯ ಪಂಜರದೊಳಕ್ಕೆ ದೂಡಲ್ಪಟ್ಟಿರುವುದು ಕಂಡು ಬಂದಿತು. ಅಲ್ಲದೇ ಅವನ ಎಡಗಡೆ ಬೆನ್ನಿನ ಒಳಗೆ ಒಂದು ಚೂಪಾದ ಫ್ಲಿಂಟ್ ಶಿಲೆಯ ಬಾಣದ ತುದಿಯು ಸಿಕ್ಕಿಕೊಂಡಿರುವುದು ಕಂಡುಬಂದಿತು. ಇದರಿಂದ ಆಟ್ಸಿಯ ಹಿಂದಿನಿಂದ ಯಾರೋ ಗುರಿಯಿಟ್ಟು ಹೊಡೆದ ಬಾಣವು ಅವನ ದೇಹವನ್ನು ಹೊಕ್ಕಿ ಮುಖ್ಯ ರಕ್ತನಾಳವೊಂದನ್ನು ತುಂಡಿರಿಸಿತ್ತು. ಇದರಿಂದಾಗಿ ರಕ್ತ ಸ್ರಾವವಾಗಿ ಅವನು ಸತ್ತಿರಬೇಕೆಂದು ನಂಬಲಾಯ್ತು.  ಜೊತೆ ತಲೆಯ ಹಿಂಭಾಗದಲ್ಲಿ ಒಂದು ಕಡೆ ಚರ್ಮವು ತಲೆಬುರುಡೆಯಿಂದ ಕಳಚಿಕೊಂಡಿರುವುದನ್ನು ಪತ್ತೆ ಹಚ್ಚಿದ ವೈದ್ಯರು ಆ ಭಾಗದಲ್ಲಿ ರಂದ್ರ ಕೊರೆದು ಮೆದುಳಿನ ಭಾಗವನ್ನು ತೆಗೆದು ಪರೀಕ್ಷಿಸಿದಾಗ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದರ ಕುರುಹು ಸಿಕ್ಕಿತು. ಇದರಿಂದ ಬಲವಾದ ಪೆಟ್ಟು ಸಹ ಆಟ್ಸಿಯ ತಲೆಗೆ ಬಿದ್ದಿದ್ದಿತು ಎಂಬುದು ಧೃಡವಾಯಿತು,  ಆಟ್ಸಿಯ ಹೊಟ್ಟೆಯಲ್ಲಿದ್ದ ಅರೆ ಜೀರ್ಣವಾಗಿದ್ದ  ಆಹಾರವನ್ನು ಹೊರತೆಗೆದು ಪರೀಕ್ಷಿಸಿದಾಗ ಅವನು ಸಾಯುವ ಕೆಲವೇ ಗಂಟೆಗಳ ಮುಂಚೆ ಗೋಧಿಯಿಂದ ತಯಾರಿಸಿದ ರೊಟ್ಟಿ ಮತ್ತು ಕಾಡು ಮೇಕೆಯ ಮಾಂಸವನ್ನು ಸೇವಿಸಿದ್ದನೆಂಬುದು ತಿಳಿದು ಬಂತು. ಅಲ್ಲದೇ ಆಹಾರದೊಂದಿಗೆ ಕಂಡುಬಂದ ಪರಾಗರೇಣುಗಳ ಆಧಾರದ ಮೇಲೆ ಅವನು ಸತ್ತ  ಋತುಮಾನವನ್ನು ಸಹ ಅಂದಾಜು ಮಾಡಲಾಯಿತು. ಅಲ್ಲದೇ ಅವನು ಜಂತು ಹುಳುಗಳ ಬಾಧೆಗೂ ಒಳಗಾಗಿದ್ದನೆಂದೂ, ಜಠರಾಗ್ನಿಗೆ ಕಾರಣವಾಗುವ ನಂಜನ್ನು ಉಂಟು ಮಾಡುವ ಪೈಲೋರಿ ಬ್ಯಾಕ್ಟೀರೀಯಾಗಳು ಅವನನ್ನು ಬಾಧಿಸಿದ್ದವೆಂಬುದು ಪತ್ತೆಯಾಯಿತು. 

ರಾಸಾಯನಿಕ ವಿಶ್ಲೇಷಣೆಯಿಂದ ಅವನ ತಲೆ ಕೂದಲಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಮ್ರ ಮತ್ತು ಆರ್ಸೇನಿಕ್ ಅಂಶ ಕಂಡು ಬಂದುದ್ದರಿಂದ ಅವನು ತಾಮ್ರದ ಉದ್ದರಣೆಯಲ್ಲಿ ತೊಡಗಿದ್ದನೆಂದು ಊಹಿಸಲಾಯಿತು. ಅವನ ಬಳಿ ದೊರೆತ ತಾಮ್ರದ ಕೊಡಲಿಯು ಅತ್ಯಂತ ಪರಿಶುದ್ಧ ತಾಮ್ರದಿಂದ ತಯಾರಿಸಲಾಗಿದ್ದಿತು ಎಂಬುದು ಮತ್ತೊಂದು ಕುತೂಹಲಕರ ವಿಚಾರ.

ಆಟ್ಸಿಯ ದಂತಗಳನ್ನು ಪರೀಕ್ಷಿಸಿದ ತಜ್ಞರು ಅವನು ದಂತ ಕ್ಷಯದಿಂದ ಬಳಲುತ್ತಿದ್ದ ಎಂಬುದನ್ನು ಖಚಿತ ಪಡಿದಸಿದರು. ಅವನ ಒಂದು ಹಲ್ಲನ್ನು ಕೊರೆದು ತೆಗೆದ ಚೂರನ್ನು ಜೆನೆಟಿಕ್ ವಿಶ್ಲೇಷಣೆಗೆ ಒಳಪಡಿಸಿದರು. ಮಹಾಪಧಮನಿಯಲ್ಲಿ ಕ್ಯಾಲ್ಸಿಯಂ ಗರಣಿಗಟ್ಟಿ ಅವನು ಹೃದ್ರೋಗದಿಂದ ಬಳಲುತ್ತಿದ್ದ, ಅವನ ರಕ್ತದ ಗುಂಪು ಒ ಎಂಬುದನ್ನು ಪತ್ತೆ ಮಾಡಿದರು.  ಆಟ್ಸಿಯ  ಹುಟ್ಟು ಬೆಳವಣಿಗೆ ಈ ಎಲ್ಲವೂ ಅವನ ದೇಹ ಸಿಕ್ಕಿದ ಪ್ರದೇಶದ ಆಸುಪಾಸಿನಲ್ಲೇ ಕಳೆದಿತ್ತೆಂದು ದೇಹದ ವಿವಿಧ ಪರೀಕ್ಷೆಗಳಿಂದ ಕಂಡು ಬಂತು.  ಹೀಗೆ ಆಟ್ಸಿಯು ದೊರೆತ ದಿನದಿಂದ ಆರಂಭಿಸಿ ಈ ವರೆಗೆ ಅವನ ದೇಹದ ಮೇಲೆ ವಿವಿಧ ತಜ್ಞ ವೈದ್ಯರು, ಅವನ ಬಳಿ ದೊರೆತ ವಸ್ತುಗಳ ಮೇಲೆ ಪುರಾತತ್ವ ಶಾಸ್ತ್ರಜ್ಞರು ಸಾವಿರಾರು ಬಗೆಯ ಪರೀಕ್ಷೆಗಳನ್ನು ನಡೆಸಿ ಐದು ಸಾವಿರ ವರ್ಷಗಳ ಹಿಂದೆ ತಾಮ್ರ ಮತ್ತು ಕಂಚಿನ ಯುಗದ ನಡುವಿನ ಸಂಕ್ರಮಣ ಕಾಲದಲ್ಲಿ ಜನರ ಜೀವನ ಹೇಗಿದ್ದಿತು ಎಂಬುದನ್ನು ಕುರಿತು ಹಲವಾರು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.   ಹೊಸ ಹೊಸ ವೈದ್ಯಕೀಯ ತಂತ್ರಜ್ಞಾನವು  ಆವಿಷ್ಕಾರವಾದಂತೆ ಅದನ್ನು  ಉಪಯೋಗಿಸಿ ಆಟ್ಸಿಯನ್ನು ಪರೀಕ್ಷಿಸುವ  ಪ್ರಕ್ರಿಯೆಗಳು , ಸಂಶೋಧನೆಗಳು .ಹೀಗೆ  ಮುಂದುವರೆಯುತ್ತಲೇ ಇವೆ.

ಇಲ್ಲಿ ಕುತೂಹಲ ಕೆರಳಿಸಿದ ವಿಚಾರಗಳೆಂದರೆ ಆಟ್ಸಿಯು ಈ ಹಿಮಾಚ್ಛಾದಿತ ಪರ್ವತಕ್ಕೆ ಬಂದಿದ್ದಾದರೂ ಏಕೆ? ಅವನನ್ನು  ಕೊಲೆ ಮಾಡಿದವರು ಯಾರು? ಏಕೆ ಮಾಡಿದರು  ಎ೦ಬುದು. ಅವನ ಬೆನ್ನಿನಲ್ಲಿ ಎಡಗಡೆ ನೆಟ್ಟ ಬಾಣದ ಮೊನೆ  ಮಾತ್ರವಿದ್ದು  ಬಾಣ ಹೇಗೆ ನಾಪತ್ತೆಯಾಯಿತು?. ೫ ಸಾವಿರ ವರ್ಷಗಳವರೆಗೆ ಹಿಮದಲ್ಲಿ ಹೂತು ಹೋಗಿದ್ದ ಆಟ್ಸಿಯ ಮಮ್ಮಿಯು  ಮೇಲೆದ್ದು ಬಂದದ್ದಾದರೂ ಹೇಗೆ? ಇನ್ನೂ ಇಂತಹ ಮಮ್ಮಿಗಳು ಭವಿಷ್ಯದಲ್ಲಿ  ಕಾಣಿಸಿಕೊಳ್ಳಬಹುದೇಶತಮಾನಗಳವರೆಗೆ ಘನೀಭವಿಸಿದ್ದ ಮಂಜು ಕರಗುತ್ತಿರುವುದು ಭೂತಾಪಮಾನದ ಏರಿಕೆಯ ಪರಿಣಾಮವೇ? ಹೀಗೆ ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡದೆ ಬಿಡುವುದಿಲ್ಲ. ಸದ್ಯಕ್ಕೆ ಆಟ್ಸಿಗಾಗಿಯೇ ಇಟಲಿಯ ಬೊಲ್ಜೋನಾದ ಒಂದು ವಸ್ತು ಪ್ರದರ್ಶನಾಲಯವನ್ನು ನಿರ್ಮಿಸಲಾಗಿದ್ದು , ಈ ಆಟ್ಸಿ  ವಸ್ತು ಸಂಗ್ರಾಲಯದಲ್ಲಿ ಅವನಿಗೆ ಸೇರಿದ ವಸ್ತುಗಳನ್ನು ಮತ್ತು ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಆಟ್ಸಿಯ ಪ್ರತಿಮೆಯನ್ನು ಇಡಲಾಗಿದೆ. ಅಲ್ಲದೇ ಬಹಳ ಮುಖ್ಯವಾಗಿ   ಶೀತಲೀಕರಿಸಿದ ಕೋಣೆಯಲ್ಲಿ  ಸಾರ್ವಜನಿಕರಿಗೆ ಆಟ್ಸಿಯ ಮಮ್ಮಿಯನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.

3 comments:

  1. ನಿಮ್ಮ ಲೇಖನದಲ್ಲಿ ಆಟ್ಸಿಯ ಎಲ್ಲಾ ಮಾಹಿತಿ ದೊರೆಯಿತು ಎಂಬಂತೆ ಎಲ್ಲಾ ಅಂಶಗಳನ್ನು ಕೊನೆಗೆ ಉತ್ತರ ಸಿಗದ ಹಲವು ಪ್ರಶ್ನೆಗಳನ್ನು ಸಂದಿಸಿದ್ದೀರಿ. ಅದ್ಭುತ ಲೇಖನ ಸರ್, ಅಭಿನಂದನೆಗಳು.

    ReplyDelete
  2. ondondoo romanchakari maahithi sir. kutoohala keraliside. wow.!!!!!

    ReplyDelete
  3. ಅದ್ಭುತವಾದ ಬರವಣಿಗೆ sr . ಹಿಮಾಚ್ಛಾದಿತ ಪ್ರದೇಶದಲ್ಲಿ ದೊರೆತ ಅಟ್ಸಿಯ ದೇಹವನ್ನು ಆಧುನಿಕ ತಂತ್ರಜ್ಞಾನ ಬಳಸಿ ಹೇಗೆಲ್ಲಾ ಅಂದಾಜು ಮಾಡಬಹುದು ಹಾಗೂ ಒಂದು ಸಂಶೋಧನೆಯನ್ನು ಕೈಗೊಂಡಾಗ ಯಾವೆಲ್ಲ ಆಯಾಮಗಳಿಂದ ಕೈಗೊಳ್ಳಬಹುದು ಎನ್ನುವ ಪರಿಯನ್ನು ವಿಸ್ತಾರವಾಗಿ ತಿಳಿಸಿದ್ದೀರಿ... ಹಮ ಮಾಚಾದಿತ ಪ್ರದೇಶದಲ್ಲಿ ಇವಾಗ ದೊರೆತಿದೆ ಎಂದರೆ ಮಂಜುಗಡ್ಡೆ ಯ ಪ್ರಮಾಣ ಕಡಿಮೆ ಯಾಗಿರಬಹುದು ಎಂದು ಅಂದಾಜು ಮಾಡಬಹುದು.. ಉತ್ತಮ ಲೇಖನ ಒದಗಿಸಿದ್ದಕ್ಕೆ ಧನ್ಯವಾದಗಳು

    ReplyDelete