Wednesday, January 4, 2023

DNA ಅಣುವಿನ ರಚನೆಯ ಆವಿಷ್ಕಾರದ ಹಿಂದಿರುವ ಸತ್ಯ

 DNA ಅಣುವಿನ ರಚನೆಯ ಆವಿಷ್ಕಾರದ ಹಿಂದಿರುವ ಸತ್ಯ

DARK LADY OF DNA - ROSALIND FRANKLIN

ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳೆಯರನ್ನು ಸುತ್ತುವರೆದಿರುವ ವಿವಾದಗಳು ಹೊಸದೇನಲ್ಲ, ಬ್ರಿಟಿಷ್ ರಸಾಯನಶಾಸ್ತ್ರಜ್ಷೆ ಮತ್ತು ಸಂಶೋಧಕಿ, ರೊಸಾಲಿಂಡ್ ಫ್ರಾಂಕ್ಲಿನ್‌ ರವರ ಸಂಶೋಧನೆಯು ಇಲ್ಲಿಯವರೆಗಿನ ಸಂಶೋಧನೆಯಲ್ಲಿ ಅತ್ಯಂತ ವಿವಾದಾತ್ಮಕವೆಂದು ಪರಿಗಣಿಸಲಾಗಿದೆ. 


ಡಾ. ಫ್ರಾಂಕ್ಲಿನ್‌ರ ಜೀವನ ಮತ್ತು ಕೆಲಸವನ್ನು ಅವರ ಬಹುತೇಕ ಪುರುಷ ಸಹೋದ್ಯೋಗಿಗಳು ಟೀಕಿಸಿದರು. ಜೀವದ ನೀಲನಕಾಶೆ ಎನಿಸಿದ, ಜೀವಿಗಳ ಆನುವಂಶೀಯ ವಸ್ತುವಾದ ಡಿಎನ್‌ಎ ದ್ವಿಸುರುಳಿ ರಚನೆಯ ಆವಿಷ್ಕಾರದ ಗೌರವದಲ್ಲಿ ಸಿಂಹಪಾಲು ರೋಸಾಲಿಂಡ್‌ ಫ್ರಾಂಕ್ಲಿನ್‌ ರವರಿಗೇ ಸಲ್ಲಬೇಕು. ನಾನೀಗ ಹೇಳ ಹೊರಟಿರುವುದು ಡಿಎನ್‌ಎ ದ್ವಿಸುರುಳಿ ಮಾದರಿಯ ಆವಿಷ್ಕಾರದ ಖ್ಯಾತಿಯ ಸತ್ಯಾಸತ್ಯತೆ. 

ಡಾ.ಫ್ರಾಂಕ್ಲಿನ್ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ನ್ಯೂನ್‌ಹ್ಯಾಮ್ ಮಹಿಳಾ ಕಾಲೇಜಿನಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರವನ್ನು ಅಧ್ಯಯನ ಮಾಡುವ ಮೂಲಕ ತಮ್ಮ ಪ್ರಭಾವಶಾಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕಾರ್ಬನ್ ಮತ್ತು ಗ್ರ್ಯಾಫೈಟ್ ಮೈಕ್ರೋಸ್ಟ್ರಕ್ಚರ್‌ಗಳನ್ನು ವಿಶ್ಲೇಷಿಸುವ ಬ್ರಿಟಿಷ್ ಕೋಲ್ ಯುಟಿಲೈಸೇಶನ್ ರಿಸರ್ಚ್ ಅಸೋಸಿಯೇಷನ್ ​​(BCURA) ಗಾಗಿ ಅವರು ಕೆಲಸ ಮಾಡಿದರು.

ಹಲವಾರು ವರ್ಷಗಳ ನಂತರ, ಡಾ. ಫ್ರಾಂಕ್ಲಿನ್ ಅವರು ಟರ್ನರ್ ಮತ್ತು ನೆವಾಲ್ ಫೆಲೋಶಿಪ್ ಪಡೆದರು


ಮತ್ತು ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ಜಾನ್ ಟಿ. ರಾಂಡಾಲ್ ಅವರ ಜೈವಿಕ ಭೌತಶಾಸ್ತ್ರ ಘಟಕವನ್ನು ಸೇರಿದರು. ಆರಂಭದಲ್ಲಿ X-ಕಿರಣ ಸ್ಫಟಿಕಶಾಸ್ತ್ರದ ಘಟಕವನ್ನು ರಚಿಸುವ ಕಾರ್ಯವನ್ನು ಹೊಂದಿದ್ದರು. ನಂತರ ರೋಸಾಲಿನ್‌ ಫ್ರಾಂಕ್ಲಿನ್‌ ರವರು ತಮ್ಮ ಸಂಶೋಧನೆಯ ಗಮನವನ್ನು DNAಯ ಆಣ್ವಿಕ ರಚನೆಯತ್ತ ಮುಂದುವರಿಸಿದರು. DNA ಯ ಡಬಲ್ ಹೆಲಿಕ್ಸ್ ರಚನೆಯ ಆವಿಷ್ಕಾರಕ್ಕೆ ಅವರ ಅಧ್ಯಯನಗಳು ಮಹತ್ವದ ತಿರುವು ನೀಡಿದವು. ಗಮನಾರ್ಹವಾದ ಅಂಶವೆಂದರೆ ಜೀವದ ಮೂಲವನ್ನು ಹುಡುಕಲು ಈ ಆವಿಷ್ಕಾರವು ವಿಜ್ಞಾನಿಗಳಿಗೆ ಅವರಲ್ಲಿದ್ದ ಹಲವು ಸಂಶಯಗಳಿಗೆ ಪರಿಹಾರವನ್ನೊದಗಿಸಿತು. 

ಫ್ರಾಂಕ್ಲಿನ್‌ ರವರು ಡಿಎನ್‌ಎ ದ್ವಿಸುರುಳಿ ರಚನೆಯ ಅಧ್ಯಯನಕ್ಕೆ ಎಕ್ಸ್‌ರೇ ಕ್ರಿಸ್ಟಲೋಗ್ರಫಿ ತಂತ್ರವನ್ನು ಸಂಶೋಧಿಸಿದರು. ಅದನ್ನು ಫೋಟೋ-51 ಎಂದು ಕರೆಯಲಾಗಿದೆ. ಅವರು ಸಂಶೋಧಿಸಿದ ದಿನಗಳಲ್ಲಿ ತಾವು ಆವಿಷ್ಕರಿಸಿರುವ ಈ ರಚನೆ ಮುಂದೆ ಇಷ್ಟೊಂದು ಪ್ರಖ್ಯಾತಿ ಹೊಂದಬಹುದೆಂಬ ಯಾವುದೇ ಕಲ್ಪನೆಯೂ ಅವರಿಗೆ ಇರಲಿಲ್ಲ. ಕರ್ತವ್ಯ ನಿಷ್ಟೆ ಮತ್ತು ತನ್ನ ಸಂಶೋಧನೆಯಲ್ಲಿದ್ದ ಬದ್ಧತೆಯುಳ್ಳ ಫ್ರಾಂಕ್ಲಿನ್‌ರವರು ತಮ್ಮ ಸಹೋದ್ಯೋಗಿಗಳಿಂದ ಅವಗಣನೆಗೊಳಗಾದರು ಎನ್ನುವುದೇ ಐತಿಹಾಸಿಕ ವ್ಯಂಗ್ಯ. 

ಡಿಎನ್‌ಎ ಅಣುವಿನ ರಚನೆಯ ಬಗೆಗಿನ ಸಂಶೋಧನೆಯು ಸಾಕಷ್ಟು ಮುಂದುವರಿಯಿತು. ಫ್ರಾಂಕ್ಲಿನ್‌ರವರ

ಸಂಶೋಧನಾ ಸಂಸ್ಥೆಯ ಸಹಾಯಕ ಮುಖ್ಯಸ್ಥರಾಗಿದ್ದಂತಹ ವಿಲ್ಕಿನ್ಸ್‌ ರವರಿಗೆ ಫ್ರಾಂಕ್ಲಿನ್‌ರವರು ಸಂಶೋಧಿಸಿದ ಡಿಎನ್‌ಎ ದ್ವಿಸುರುಳಿ ಮಾದರಿಯ ಮಾಹಿತಿ ಬಗ್ಗೆ ತಿಳಿಯಿತು. ವಿಲ್ಕಿನ್ಸ್‌ ರವರು ಪ್ರಾರಂಭದಲ್ಲಿ ಫ್ರಾಂಕ್ಲಿನ್‌ರವರನ್ನು ತಮ್ಮ ಜೊತೆ ಡಿಎನ್‌ಎ ಸಂಶೋಧನೆಯ ಬಗ್ಗೆ ಕಾರ್ಯನಿರ್ವಹಿಸಲು ಕೇಳಿಕೊಂಡರು.
 ಆದರೆ ಸಂಸ್ಥೆಯ ಮುಖ್ಯಸ್ಥರ ಆದೇಶದ ಮೇರೆಗೆ ಅವರು ಇವರ ಜೊತೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. 

ಮುಂದಿನ ದಿನಗಳಲ್ಲಿ ವಿಲ್ಕಿನ್ಸ್‌ರವರು ಫ್ರಾಂಕ್ಲಿನ್‌ರವರ ಕಾರ್ಯವನ್ನು ಹೆಗೋ ಫ್ರಾಂಕ್ಲಿನ್‌ ರವರಿಗೆ ಗೊತ್ತಿಲ್ಲದಂತೆ ಪಡೆದು ಸಂಶೋಧನೆಯನ್ನು ತಮ್ಮ ಇತರೆ ಸ್ನೇಹಿತರಾದ ಜೆ.ಡಿ. ವ್ಯಾಟ್ಸನ್‌ ಮತ್ತು ಫ್ರಾನ್ಸಿಸ್‌ ಕ್ರಿಕ್‌ ರವರ ಜೊತೆ ಮುಂದುವರಿಸುತ್ತಾರೆ. ಈ ವಿಷಯ ಫ್ರಾಂಕ್ಲಿನ್‌ರವರಿಗೆ ತಿಳಿಯುವುದೇ ಇಲ್ಲ. 

1958ರಲ್ಲಿ ರೋಸಾಲಿಂಡ್‌ ಫ್ರಾಂಕ್ಲಿನ್‌ರವರು ಅನಾರೋಗ್ಯ ಹೊಂದಿ ಅಂಡಾಶಯದ ಕ್ಯಾನ್ಸರ್‌ನಿಂದ ಮೃತರಾಗುತ್ತಾರೆ. ಅವರ ಮರಣಾನಂತರ ಡಿಎನ್‌ಎ ರಚನೆಯ ಮೇಲಿನ ಸಂಶೋಧನೆಯನ್ನು ಈ ಮೂರು ಸ್ನೇಹಿತರು ಮುಂದುವರಿಸುತ್ತಾರೆ. ಜೀವಿಗಳ ಪ್ರತಿಯೊಂದು ಲಕ್ಷಣಗಳು ಡಿಎನ್‌ಎ ರಚನೆಯ ಮೇಲೆಯೇ ಅವಲಂಬಿತವಾಗಿದೆ ಎನ್ನುವುದನ್ನು ಇವರ ಸಂಶೋಧನೆಯು ಸಾಬೀತುಪಡಿಸುತ್ತದೆ.

ಇವರುಗಳ ಈ ಸಂಶೋಧನೆಯು 1962ರಲ್ಲಿ ವೈದ್ಯಕೀಯ ಮತ್ತು ಶರೀರ ಶಾಸ್ತ್ರಕ್ಕೆ ಕೊಡಲಾಗುವ ನೊಬೆಲ್‌ ಪಾರಿತೋಷಕವನ್ನು ಗಳಿಸುತ್ತದೆ. ಇಲ್ಲಿ ಡಿಎನ್‌ಎ ದ್ವಿಸುರುಳಿ ಮಾದರಿಯ ಆವಿಷ್ಕಾರಕ್ಕೆ ನೊಬೆಲ್‌ ಪಾರಿತೋಷಕ ಬಂದಿತು ಎನ್ನುವ ಸಂತೋಷಕ್ಕಿಂತ, ದ್ವಿಸುರುಳಿ ರಚನೆಯ ಆವಿಷ್ಕಾರದ ಮೂಲಕ್ಕೆ ಕಾರಣವಾದ ರೋಸಾಲಿಂಡ್‌ ಫ್ರಾಂಕ್ಲಿನ್‌ರವರನ್ನು ಎಲ್ಲಿಯೂ ಕೂಡ ಪರಿಗಣಿಸಲಿಲ್ಲ ಎನ್ನುವುದು ವಿಷಾದನೀಯ.

ಡಾ. ಫ್ರಾಂಕ್ಲಿನ್‌ರ ಡಿಎನ್‌ಎ ಸಂಶೋಧನೆಯು ನೊಬೆಲ್‌ಗೆ ಅರ್ಹವಾಗಿದೆ ಎಂದು ವ್ಯಾಪಕವಾಗಿ ಭಾವಿಸಲಾಗಿದ್ದರೂ, ಅವರು ಹೆಚ್ಚಾಗಿ ಕಡೆಗಣಿಸಲ್ಪಟ್ಟರು, ಆಕೆಯ ಜೀವನಚರಿತ್ರೆ ರಚಿಸಿದ ಬ್ರೆಂಡಾ ಮ್ಯಾಡಾಕ್ಸ್ ರವರು ಅವರನ್ನು "ದಿ ಡಾರ್ಕ್ ಲೇಡಿ ಆಫ್ ಡಿಎನ್‌ಎ" ಎಂದು ಕರೆದರು. ಸಹೋದ್ಯೋಗಿಯಾದ ವಿಲ್ಕಿನ್ಸ್‌ರವರ ಅವಹೇಳನಕಾರಿ ಉಲ್ಲೇಖವು ‍ಫ್ರಾಂಕ್ಲಿನ್‌ರವರ ಕೊಡುಗೆಯನ್ನು ಕತ್ತಲೆಯಲ್ಲಿ ಇರಿಸಿತು. ಸಂಶೋಧನಾ ಕ್ಷಿತಿಜದ ಉತ್ಕ್ರಾಂತಿ ಎನಿಸಿದ ದ್ವಿಸುರುಳಿ ರಚನೆಯ ಹಿಂದಿನ ‍ಫ್ರಾಂಕ್ಲಿನ್‌ರವರ ಸಂಶೋಧನಾ ಶ್ರಮವನ್ನು ಪುರುಷ ಪ್ರಧಾನ ಸಮಾಜವು ಮನ್ನಿಸಲಿಲ್ಲ. ಧುವತಾರೆಯಂತೆ ಮಿನುಗಬೇಕಿದ್ದ ಡಾ. ಫ್ರಾಂಕ್ಲಿನ್‌ರವರಿಗೆ ಯಾವುದೇ ಗೌರವ ನೀಡಲಿಲ್ಲ- ಆದರೆ ನಂತರ ಒಬ್ಬರು ಫ್ರಾಂಕ್ಲಿನ್‌ರವರು ರಸಾಯನಶಾಸ್ತ್ರಕ್ಕಾಗಿ ನೊಬೆಲ್‌ಗೆ ಅರ್ಹರು ಎಂದು ಸೂಚಿಸಿದರೂ, ಮರಣೋತ್ತರ ನಾಮನಿರ್ದೇಶನಗಳೂ ಆಗಲಿಲ್ಲ.


ಫ್ರಾಂಕ್ಲಿನ್ ಅವರ ಜೀವನವನ್ನು ಅನಾರೋಗ್ಯ ತಿಂದು ಹಾಕದೇ ಇದ್ದಿದ್ದರೆ, ಬಹುಷಃ ಅವರ ಸಂಶೋಧನೆಗಳು ಔಷಧ-ವಿಜ್ಞಾನದಲ್ಲಿ ಮಹಾಕಾಂತಿಯನ್ನೇ ಉಂಟುಮಾಡುತ್ತಿದ್ದವು ಎಂಬುದರಲ್ಲಿ ಸಂದೇಹವಿಲ್ಲ. ಅವರ ಅದ್ಭುತ ವೃತ್ತಿಜೀವನವು ಇನ್ನೂ ಸಂಪೂರ್ಣವಾಗಿ ಅನಾವರಣಗೊಳ್ಳದಿದ್ದರೂ ಲಂಡನ್‌ನ ವಿಲ್ಲೆಸ್ಡೆನ್ ಯಹೂದಿ ಸ್ಮಶಾನದಲ್ಲಿರುವ ಡಾ. ಫ್ರಾಂಕ್ಲಿನ್ ಅವರ ಸಮಾಧಿಯ ಮೇಲಿನ ಫಲಕದಲ್ಲಿ ಡಿ ಎನ್‌ ಎ ಅಣುವಿನ ರಚನೆಯ ಸಂಶೋಧನೆಯಲ್ಲಿ ಅವರ
 ಪಾತ್ರವನ್ನು ಸ್ಮರಿಸಲಾಗಿದೆ.




ಕೃಪೆ: ಆಟೋಬಯೋಗ್ರಫಿ ಆಫ್‌ ಬ್ರೆಂಡನ್‌ ಮೆಡಾಕ್ಸ್‌.

 




ಸಂಗ್ರಹ ಮತ್ತು ಅನುವಾದ


ಶಶಿಕುಮಾರ್‌ ಬಿ.ಎಸ್. 

ವಿಜ್ಞಾನ ಶಿಕ್ಷಕರು. 

ಸರ್ಕಾರಿ ಪ್ರೌಢಶಾಲೆ, ಎಲೆಕ್ಯಾತನಹಳ್ಳಿ, 

ನೆಲಮಂಗಲ ತಾ. ಬೆಂಗಳೂರು ಗ್ರಾ,ಜಿಲ್ಲೆ.- 562111. 

ದೂ: 9900276979

5 comments:

  1. ಫ್ರಾಂಕ್ಲಿನ್ ನಡೆದ ದ್ರೋಹ ಅಕ್ಷಮ್ಯ ಅಪರಾದ, ವಿಜ್ಞಾನ ಕ್ಷೇತ್ರದಲ್ಲಿ ನಡೆದ ಈ ಕೃತ್ಯಕ್ಕೆ ದಿಕ್ಕಾರವಿರಲಿ. ನಿಮ್ಮ ಲೇಖನ ಮೂಲಕ ಮತ್ತೊಮ್ಮೆ ಅವರ ಕೊಡುಗೆಯನ್ನು ಸ್ಮರಿಸಿದ್ದೀರಿ, ಧನ್ಯವಾದಗಳು.

    ReplyDelete
  2. ಸಂಶೋಧನಾ ಕ್ಷೇತ್ರದಲ್ಲಿ ಒಬ್ಬರ ಶ್ರಮದ ಫಲ ಮತ್ತೊಬ್ಬರು ಪಡೆದಿರುವ ಹಲವಾರು ಇತಿಹಾಸ ಸಿಗುತ್ತದೆ. ಫ್ರಾಂಕ್ಲಿನ್ ಅವರಿಗೆ ಆಗಿರುವ ಅನ್ಯಾಯ ಅಕ್ಷಮ್ಯ. ಅವರ ಸಂಶೋಧನಾ ಕೊಡುಗೆಯನ್ನು ನೆನಪು ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete