Saturday, February 4, 2023

ಮಕ್ಕಳ ನೆಚ್ಚಿನ ಸರಳ ವ್ಯಕ್ತಿತ್ವದ ಸಂಪನ್ಮೂಲ ಕಣಜ ಮಯ್ಯ ಸರ್

ಮಕ್ಕಳ ನೆಚ್ಚಿನ ಸರಳ ವ್ಯಕ್ತಿತ್ವದ ಸಂಪನ್ಮೂಲ ಕಣಜ ಮಯ್ಯ ಸರ್

ಶ್ರೀ ಲಕ್ಷ್ಮೀಪ್ರಸಾದ ನಾಯಕ್ 

ನಾನು ಪ್ರೌಢಶಾಲಾಶಿಕ್ಷಕನಾಗಿ ಸೇವೆಗೆ ಸೇರಿದ ಪ್ರಾರಂಭದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಾಯವಾಗುವ ಪುಸ್ತಕ ಯಾವುದೆಂದು ನನ್ನ ಶಿಕ್ಷಕ ಮಿತ್ರರಲ್ಲಿ ಕೇಳಿದಾಗ ಅವರೆಲ್ಲ ಹೇಳಿದ ಒಂದು ಪುಸ್ತಕ ದಾವಣಗೆರೆ ಜಿಲ್ಲೆಯ ಶಿಕ್ಷಕರಾದ ಶ್ರೀಧರಮಯ್ಯರವರು ಬರೆದ ಕಣಜ ಪುಸ್ತಕ, ಹೇಗೋ ಮಾಡಿ ಅವರನ್ನು ಸಂಪರ್ಕಿಸಿ ಆ ಪುಸ್ತಕವನ್ನು ತರಿಸಿಕೊಂಡೆ. ಅದರಿಂದ ನಮ್ಮ ಶಾಲೆಯಲ್ಲಿ ಕೂಡ ಉತ್ತಮ ಫಲಿತಾಂಶ ಬಂದಿತ್ತು. ಆದರೆ ವ್ಯಕ್ತಿಯನ್ನು ಭೇಟಿಯಾಗುವ ಸುಸಂದರ್ಭ ನನಗೆ ಸಿಕ್ಕಿದ್ದು 2015 ರಲ್ಲಿ ಎನ್.ಸಿ..ಆರ್.ಟಿ. ವಿಜ್ಞಾನ ಪಠ್ಯಪುಸ್ತಕ ಭಾಷಾಂತರ ಮಾಡುವ ಹಾಗೂ ಶಿಕ್ಷಕ ತರಬೇತಿ ಸಾಹಿತ್ಯವನ್ನು ರಚಿಸುವ ಸಂದರ್ಭದಲ್ಲಿ. ದಿನಗಳಲ್ಲಿ ಅವರೊಡನೆ ಕಳೆದ ಕ್ಷಣಗಳಲ್ಲಿ ವಿಜ್ಞಾನ ವಿಷಯದಲ್ಲಿನ ಅವರ ಪಾಂಡಿತ್ಯ, ವಾಕ್ಚಾತುರ‍್ಯ, ಸರಳ ವ್ಯಕ್ತಿತ್ವ, ಉತ್ತಮ ಹಾಸ್ಯಪ್ರಜ್ಞೆ ನನ್ನ ಮನಸೂರೆಗೊಂಡಿತು. ಅವರಿಂದ ಅನೇಕ ವಿಷಯಗಳನ್ನು ನಾನು ಕಲಿಯುವಂತಾಯಿತು. ಇಂತಹ ಸರಳ ವ್ಯಕ್ತಿತ್ವದ ಶಿಕ್ಷಕರಿರಿಗೆ ಸಾಧನೆಯ ಹಾದಿಯಲ್ಲಿ ಸ್ಫೂರ್ತಿನೀಡುತ್ತಿರುವ ಸಂಪನ್ಮೂಲ ಕಣಜ ಆತ್ಮೀಯ ಸ್ನೇಹಿತ ಶ್ರೀಧರಮಯ್ಯ ಎಂ. ಎನ್. ರವರನ್ನು ಸವಿಜ್ಞಾನದ ಮೂಲಕ ನಿಮ್ಮೆಲ್ಲರಿಗೂ ಪರಿಚಯಿಸಲು ನನಗೆ ಬಹಳ ಹೆಮ್ಮೆ ಎನಿಸುತ್ತದೆ.


ತನ್ನಲ್ಲಿರುವ ಬತ್ತದ ಜ್ಞಾನಗಂಗೆಯನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದು ತೃಪ್ತಿ ಕಾಣುವ ಎಲೆಮರೆಯ ಕಾಯಿಯಂತಿರುವ ಎಷ್ಟೋ ಶಿಕ್ಷಕರು ನಮ್ಮಲ್ಲಿದ್ದಾರೆ. ಅಂತವರಲ್ಲಿ ಒಬ್ಬರು ನಮ್ಮ ಮಯ್ಯ ಸರ್. ರಾಜ್ಯದಾದ್ಯಂತ ಶಿಕ್ಷಕರಿಗೆ ಕಾರ್ಯಾಗಾರಗಳಲ್ಲಿ ತಮ್ಮ ವಿಭಿನ್ನ ಶೈಲಿಯ ವಿಜ್ಞಾನ ಸ್ವಾಗತ ಮತ್ತು ಬೋಧನೆಯ ಮೂಲಕ ಚಿರಪರಿಚಿತರಾಗಿರುವ ಶ್ರೀಧರ ಮಯ್ಯರವರು ಹುಟ್ಟಿದ್ದು ಸಾಗರದಲ್ಲಿ 1975 ಫೆಬ್ರವರಿ 17ರಂದು ಸಾಗರದಲ್ಲಿ ಪದವಿ ಶಿಕ್ಷಣ ಪೂರೈಸಿ, ಮೈಸೂರಿನಲ್ಲಿ ಬಿ.ಎಡ್ ವ್ಯಾಸಂಗ ಪೂರೈಸಿ ನಂತರ ಕುವೆಂಪು ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರ ಹಾಗೂ ಸಸ್ಯಶಾಸ್ತ್ರ ದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದುಕೊಂಡರು. ಇವರು 1998 ಅಕ್ಟೋಬರ್ 28 ರಂದು ಕೋಲಾರದ ಮಾಲೂರು ತಾಲೂಕಿನ ಶಿವಾರಪಟ್ಟಣದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಬಿಸಿ, 24 ಸಾರ್ಥಕ ಸೇವೆಯನ್ನು ಸಲ್ಲಿಸಿದ್ದಾರೆ. ತದ ನಂತರ 2003 ಜೂನ್ ತಿಂಗಳಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕಡರನಾಯಕನ ಹಳ್ಳಿಯಲ್ಲಿ ವರ್ಗಾವಣೆಗೊಂಡರು. ಪ್ರಸ್ತುತ ಸರ್ಕಾರಿ ಪ್ರೌಢಶಾಲೆ ಗುತ್ತೂರು, ಹರಿಹರ ತಾಲೂಕು, ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನಮುಟ್ಟುವ ವಿಭಿನ್ನ ಶೈಲಿಯ ಬೋಧನೆ ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪ್ರೀತಿಗೆ ಪಾತ್ರರಾಗಿರುವ ಇವರು ಅನೇಕ ಅಭಿಮಾನಿಗಳನ್ನು ರಾಜ್ಯಾದ್ಯಂತ ಹೊಂದಿರುತ್ತಾರೆ. ಪಠ್ಯಪುಸ್ತಕ ರಚನಾಕಾರರಾಗಿ, ವಿಜ್ಞಾನ ರಾಜ್ಯಸಂಪನ್ಮೂಲ ವ್ಯಕ್ತಿಯಾಗಿ, ಅನೇಕ ಕಾರ್ಯಾಗಾರಗಳಲ್ಲಿ ಶಿಕ್ಷಕರಿಗೆ ತರಬೇತಿಯನ್ನು ನೀಡುತ್ತಲೇ ಇದ್ದಾರೆ. ಉತ್ತಮ ವಾಗ್ಮಿಯಾಗಿರುವ ಇವರ ಸ್ಫೂರ್ತಿದಾಯಕ ಮಾತುಗಳನ್ನು ಕೇಳುತ್ತಾ ಕೂತರೆ ಕನ್ನಡ ಸರಸ್ವತಿಯ ಇವರ ಪದಗಳಲ್ಲಿ ಇರುವಂಥ ಅನುಭೂತಿ. ವಿದ್ಯಾರ್ಥಿಗಳೊಂದಿಗಿರುವ ಬಾಂಧವ್ಯ ಅಸಾಧಾರಣವಾದ್ದು. ಪ್ರೀತಿಯಿಂದ ಕಿರಿಯ ವಿದ್ಯಾರ್ಥಿ ಮಿತ್ರರ ಜೊತೆ ಮಾತಾಡಿ, ಸಂತೈಸುವ. ಕರುಣೆ, ಸಹನೆಯ ಗುಣ ನಿಜಕ್ಕೂ ಅನುಕರಣೀಯ. ಅವರ ಅದ್ವಿತೀಯ, ಆಕರ್ಷಕ ಬೋಧನಾ ವಿಧಾನ ನನಗೆ ಈಗಲೂ ನೆನಪಿದೆ.

ಸ್ನೇಹಿತರ ಜೊತೆಗೂಡಿ ವಿಜ್ಞಾನಕಿರಣ, ಬೆಳಕು, ಎನ್.ಎಸ್.ಆರ್ಪ್ಯಾಕೇಜ್, ಸಾಧನೆಯತ್ತ ಹೆಜ್ಜೆಗಳು, ವಿಜ್ಞಾನ ನಿಧಿ ಹಲವು ಪುಸ್ತಕಗಳ ರಚನಾ ಕಾರ‍್ಯದಲ್ಲಿ ಭಾಗಿಯಾಗಿದ್ದಾರೆ . ಇವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ನಡೆಯುವ ವಿಜ್ಞಾನ ಯೋಜನಾ ವರದಿಯಲ್ಲಿ 12 ಬಾರಿ ರಾಜ್ಯಮಟ್ಟಕ್ಕೆ, 2 ಬಾರಿ ರಾಷ್ಟ್ರಮಟ್ಟಕ್ಕೆ ಮಕ್ಕಳು ಆಯ್ಕೆಯಾಗಿರುತ್ತಾರೆ. ಜಿಲ್ಲಾ, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಸುಮಾರು 10 ಜಿಲ್ಲೆಗಳ ಕಾರ‍್ಯಾಗಾರದಲ್ಲಿ ಉಪನ್ಯಾಸ ನೀಡಿರುತ್ತಾರೆ. ಇಲಾಖೆಯ ಹಲವು ಶಿಕ್ಷಕರ ಕೈಪಿಡಿಗಳ, ಕಲಿಕಾ ಸಾಮಗ್ರಿಗಳ ರಚನೆಗಳಲ್ಲಿ ತಮ್ಮ ಅಮೂಲ್ಯ ಅನುಭವಗಳನ್ನು ಧಾರೆ ಎರೆದಿದ್ದಾರೆ. ಕಿರಿಯರಿಗೆ ಮಾರ್ಗ ದರ್ಶನ ನೀಡಿದ್ದಾರೆ. 100 ಕ್ಕೂ ಹೆಚ್ಚು ಯೂಟ್ಯೂಬ್ ವೀಡಿಯೋಗಳನ್ನು ತಯಾರಿಸಿ ಉಚಿತವಾಗಿ ಹಂಚಿದ್ದಾರೆ. ರಾಜ್ಯಾದ್ಯಂತ ವಾಟ್ಸಪ್ ಗುಂಪುಗಳ ಮೂಲಕ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಾವು ತಯಾರಿಸಿದ ವಿಜ್ಞಾನದ ರಸಪ್ರಶ್ನೆ , ಪವರ್ ಪಾಯಿಂಟ್ ಗಳನ್ನು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಬಂದಿದ್ದಾರೆ.

    ಶ್ರೀಧರ ಮಯ್ಯರವರ ಶಿಕ್ಷಣ ಸೇವೆಗೆ ಸಂದ ಪ್ರಶಸ್ತಿಗಳು ಹಲವಾರು ಅವುಗಳಲ್ಲಿ ಪ್ರಮುಖವಾದವು 2013 ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 2016 ರಲ್ಲಿ ರಾಜ್ಯಮಟ್ಟದ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ, 2021 ರಲ್ಲಿ ವಿಶ್ವ ಶರಣು ವಚನ ಫೌಂಡೇಶನ್ ವತಿಯಿಂದ ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿ, 2022 ಕಾಯಕ ರತ್ನ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.




ಈ ವರ್ಷದ ಜನವರಿ 22 ರಂದು ಇತ್ತೀಚೆಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ವತಿಯಿಂದ 2022 ಅನಿತಾಕೌಲ್ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುತ್ತಾರೆ. ಈ ಸುಂದರ್ಭದಲ್ಲಿ ಅತ್ಯಂತ ಸರಳ ವ್ಯಕ್ತಿತ್ವದ, ಎಂತಹ ನೋವಿನಲ್ಲೂ ಇತರರ ಮುಖದಲ್ಲಿ ನಗುತರಬಲ್ಲ ಸ್ನೇಹಿತ ಹಾಗೂ ಸವಿಜ್ಞಾನದ ಲೇಖಕಬಂಧುಗಳಾದ  ಶ್ರೀಧರಮಯ್ಯರವರಿಗೆ ಸವಿಜ್ಞಾನ ತಂಡದ ಶುಭ ಹಾರೈಕೆಗಳು.  

ಭವಿಷ್ಯದಲ್ಲಿ ರಾಷ್ರಮಟ್ಟದ ಪ್ರಶಸ್ತಿಗಳೂ ದೊರಕಲಿ ಹಾಗೆಯೇ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಶೈಕ್ಷಣಿಕ ಮಾರ್ಗದರ್ಶನ ಸದಾ ದೊರಕಲಿ . ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಶ್ರೀಯುತರ ಹೆಸರು ಚಿರಸ್ಥಾಯಿಯಾಗಲೆಂದು ಆಶಿಸುತ್ತೇನೆ.

 

1 comment:

  1. ಶ್ರೀಮಯ್ಯ ಸರ್ ಒಬ್ಬ ಅತ್ಯಂತ ಸರಳ ಸಜ್ಜನಿಕೆಯ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾಗಿದ್ದು ವಿಜ್ಞಾನದ ಕಲಿಕೆಯನ್ನು ಸುಲಭೀಕರಿಸಿ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಅವರ ಪ್ರಯತ್ನ ಇತರರಿಗೆ ಮಾದರಿಯಾಗಿದೆ. ಅವರೊಂದಿಗೆ ನಾನು ಕೂಡ ಮೊನ್ನೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ದಿ ಅನಿತಾ ಕೌಲ್ ಪ್ರಶಸ್ತಿ ಹಂಚಿಕೊಂಡದ್ದು ಖುಷಿ ಅನ್ನಿಸುತ್ತದೆ

    ReplyDelete