Saturday, February 4, 2023

ಗಂಡು ಗರ್ಭ ಧರಿಸುವ ಪ್ರಪಂಚದ ಏಕೈಕ ಪ್ರಾಣಿ......ಸಮುದ್ರ ಕುದುರೆ..!

 ಗಂಡು ಗರ್ಭ ಧರಿಸುವ ಪ್ರಪಂಚದ ಏಕೈಕ ಪ್ರಾಣಿ......ಸಮುದ್ರ ಕುದುರೆ..!

                        ಗಜಾನನ ಭಟ್ಟ (ವಿಜ್ಞಾನ ಶಿಕ್ಷಕರು ಹಾಗೂ ಹವ್ಯಾಸಿ ವಿಜ್ಞಾನ ಬರಹಗಾರರು) 



 ಗರ್ಭಧರಿಸುವ ಪ್ರಪಂಚದ ಏಕೈಕ ಗಂಡು ಪ್ರಾಣಿ......ಸಮುದ್ರದ ಕುದುರೆ..! 

ಪ್ರಾಣಿಗಳಲ್ಲಿ ಗರ್ಭಧಾರಣೆಯ ಜವಾಬ್ದಾರಿ ಹೆಣ್ಣಿನದು ಎಂಬುದೊಂದು ಪ್ರಕೃತಿ ನಿಯಮ.. ಈ ನಿಯಮಕ್ಕೆ ಅಪವಾದವಾಗಿರುವ ಸಮುದ್ರದ ಕುದುರೆ ಎಂಬ ಮೀನಿನಲ್ಲಿ ಗಂಡು ಗರ್ಭ ಧರಿಸಿ, ಮರಿಗಳಿಗೆ ಜನ್ಮ ನೀಡುವ ವಿಶಿಷ್ಟ ಪ್ರಕ್ರಿಯೆಯನ್ನು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ ಶಿಕ್ಷಕ ಗಜಾನನ ಭಟ್ ಅವರು



ಸೃಷ್ಟಿಯ ವೈಚಿತ್ರಗಳನ್ನು ಬಗೆಯುತ್ತಾ ಹೋದಂತೆ ಒಂದಿಲ್ಲೊಂದು ನವೀನ ಮಾಹಿತಿಗಳು ಪ್ರಕೃತಿಯ ಒಡಲಿನಿಂದ ಹೊರಬರುತ್ತಾ ಹೋಗುತ್ತದೆ. ನಿರಂತರವಾಗಿ ನಡೆಯುತ್ತಿರುವ ಸಂಶೋದನೆಗಳಿಂದಾಗಿ ಪ್ರತಿದಿನ ಬಹಳಷ್ಟು ಕೌತುಕಮಯ ವಿಷಯಗಳು ಪ್ರಕೃತಿಯಿಂದ ಹೊರಹೊಮ್ಮುತ್ತವೆಯಾದರೂ, ಪ್ರಕೃತಿಯು ತನ್ನ ಎದೆಯಾಳದಲ್ಲಿ ಹುದುಕಿಸಿಕೊಂಡಿರುವ ಅದೆಷ್ಟೋ ರಹಸ್ಯಗಳು ಇನ್ನೂ ಹೊರಬರಬೇಕಾಗಿದೆ.

.ನಮಗೆಲ್ಲ ತಿಳಿದ ಪ್ರಕಾರ, ಪ್ರಾಣಿ ಪ್ರಪಂಚದಲ್ಲಿ ಗರ್ಭಧರಿಸುವ ಜೈವಿಕ ಹಕ್ಕು ಹೆಣ್ಣು ಜೀವಿಗಳದ್ದು. ಇದು ಹೆಣ್ಣು ಜೀವಿಗಳಿಗೆ ಪ್ರಕೃತಿ ನೀಡಿರುವ ಕೊಡುಗೆ. ಆದರೆ ಈ ಸೃಷ್ಟಿ ನಿಯಮಕ್ಕೆ ಸಮುದ್ರದ ಕುದುರೆ(Hippocampusಅಪವಾದವಾಗಿ ನಿಲ್ಲುತ್ತದೆ. ಪ್ರಾಣಿ ಪ್ರಪಂಚದಲ್ಲೆ ಗರ್ಭಧರಿಸುವ ಏಕೈಕ ಗಂಡು ಪ್ರಾಣಿ ಸಮುದ್ರಕುದುರೆ !

 ಸಮುದ್ರದ ಕುದುರೆ ಮೀನಿನಲ್ಲಿ ಗರ್ಭದಾರಣೆ ಹೇಗೆ?

 ಮೀನುಗಳಲ್ಲಿ ಬಾಹ್ಯ ನಿಶೇಚನ ಪದ್ಧತಿ ಇರುವುದು ನಮಗೆ ತಿಳಿದಿದೆ. ಹೆಣ್ಣು ಮೀನುಗಳು ಅಂಡಾಣುಗಳನ್ನು ತಮ್ಮ ವಾಸನೆಲೆಯಾದ ನೀರಿನಲ್ಲಿ ಒಂದು ಸುರಕ್ಷಿತ ಜಾಗದಲ್ಲಿ ಬಿಡುಗಡೆ ಮಾಡುತ್ತವೆ, ಗಂಡು ಮೀನು ತನ್ನ ವರ‍್ಯಾಣುಗಳನ್ನು ಈ ಅಂಡಾಣು ಸಮೂಹದ ಮೇಲೆ ಬಿಡುಗಡೆ ಮಾಡಿ ನಿಶೇಚನಕ್ಕೆ ನೆರವಾಗುತ್ತವೆ. ಹಿಪ್ಪೋಕ್ಯಾಂಪಸ್ ಮೀನುಗಳಲ್ಲಿ ಅತ್ಯಂತ ವಿಶಿಷ್ಟವಾದ ಗಭಧಾರಣೆಯ ವಿಧಾನವನ್ನು ಕಾಣಬಹುದು. ಇಲ್ಲೊಂದು ವಿಶೇಷವಿದೆ. ಗಂಡು ಮೀನು ವಿಶೇಷ ಅಂಗಾಂಶಗಳಿಂದ ರಚಿತವಾದ ಚೀಲವೊಂದನ್ನು (pouch) ತನ್ನ ಉದರ ಭಾಗದಲ್ಲಿ ಹೊಂದಿದೆ. ಹೆಣ್ಣು ಮೀನು ತಾನು ಉತ್ಪಾದಿಸಿದ ಅಂಡಾಣುವನ್ನು ಗಂಡಿನಲ್ಲಿರುವ ಅಂಗಾಂಶ ಚೀಲಕ್ಕೆ ವರ್ಗಾಯಿಸುತ್ತದೆ. ಹೆಣ್ಣಿನ ಅಂಡಾಣುಗಳು ಅಂಗಾಂಶ ಚೀಲಕ್ಕೆ ಬರುತ್ತಿದ್ದಂತೆಯೇ ಗಂಡು ತನ್ನ ವೀರ್ಯಾಣುಗಳನ್ನು ತನ್ನ ಅಂಗಾಂಶ ಚೀಲಕ್ಕೆ ವರ್ಗಾಯಿಸಿ ಅಂಡಾಣುಗಳ ನಿಶೇಚನ ಪ್ರಕ್ರಿಯೆ ಪೂರ್ಣಗೊಳಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಬಹು ದಿನಗಳವರೆಗೆ ಈ ಗರ್ಭಧಾರಣೆ ಅವಧಿಯು ಮುಂದುವರೆಯುತ್ತದೆ. ಸಂತಾನೋತ್ಪತ್ತಿಗೆ ಸೂಕ್ತವಾದ ಅವಧಿಯಲ್ಲಿ ಮಾತ್ರ ಗಂಡು ಮೀನು ಪಕ್ವವಾದ ವೀರ್ಯಾಣುವನ್ನು ಉತ್ಪತ್ತಿ ಮಾಡುತ್ತದೆ ಹಾಗೂ ಇದೇ ಸಂದರ್ಭದಲ್ಲಿ ಹೆಣ್ಣುಮೀನು ಪಕ್ವವಾದ ಅಂಡಾಣುಗಳನ್ನು ಉತ್ಪಾದನೆ ಮಾಡಿ ಗಂಡುಮೀನಿನ ಅಂಗಾಂಶ ಚೀಲಕ್ಕೆ ಸಾಗಿಸಲು ಯಶಸ್ವಿಯಾಗುತ್ತದೆ. ಭ್ರೂಣದ ಬೆಳವಣಿಗೆಯ ಮುಂದಿನ ಎಲ್ಲಾ ಪ್ರಕ್ರಿಯೆ ಗಂಡು ಮೀನಿನ ಜವಾಬ್ದಾರಿ !

    ಗಂಡು ಸಮುದ್ರ ಕುದುರೆಯ ರ‍್ಭಚೀಲದಲ್ಲಿನ ಜೀವಕೋಶಗಳಲ್ಲಿ ಸುಮಾರು ೩೦೦೦ ಜೀನ್‌ಗಳನ್ನು ಗುರುತಿಸಲಾಗಿದೆ. ಈ ಜೀನ್‌ಗಳು ಭ್ರೂಣದ ಬೆಳವಣಿಗೆಗೆ ಅಗತ್ಯವಾದ ಎಲ್ಲ ಪೂರಕ ಅಂಶಗಳನ್ನು ವ್ಯಕ್ತಪಡಿಸುತ್ತವೆ. ಭ್ರೂಣಗಳು ಬೆಳೆಯುತ್ತಾ ಹೋದಂತೆ ರ‍್ಭ ಚೀಲದ ಗಾತ್ರವೂ ಹೆಚ್ಚುತ್ತಾ ಹೋಗುತ್ತದೆ. ಭ್ರೂಣಗಳ ಸಮಗ್ರ ಬೆಳವಣಿಗೆಗೆ ಅಗತ್ಯವಾದ ಕೊಬ್ಬು ಮತ್ತು ಕ್ಯಾಲ್ಷಿಯಂ ಪೋಷಕಾಂಶಗಳು ರ‍್ಮದ ಅಡಿಯಲ್ಲಿರುವ ಅಸ್ಥಿಪಂಜರ ಮತ್ತು ರ‍್ಮದ ಮೇಲಿರುವ ವೃತ್ತಾಕಾರದ ಮೂಳೆಗಳು ಬೆಳೆಯಲು ನೆರವಾಗುತ್ತವೆ. ಜೊತೆಗೆ, ಗರ್ಭ ಚೀಲದಲ್ಲಿ ಶಿಲೀಂದ್ರ ನಿರೋಧಕ ಹಾಗೂ ಬ್ಯಾಕ್ಟೀರಿಯಾ ನಿರೋಧಕ ಜೀವಕೋಶಗಳಿದ್ದು, ಅವು ಭ್ರೂಣಗಳನ್ನು ರೋಗಾಣುಗಳಿಂದ ರಕ್ಷಿಸುತ್ತವೆ.

ಜನ್ಮ ನೀಡುವಿಕೆ

    ಭ್ರೂಣಗಳ ಬೆಳವಣಿಗೆ ಪೂರ್ಣಗೊಂಡ ನಂತರ ಮರಿಗಳಿಗೆ ಜನ್ಮ ನೀಡುವ ಪ್ರಕ್ರಿಯೆ ಕೂಡ ಈ ಮೀನುಗಳಲ್ಲಿ ವಿಶಿಷ್ಟವಾಗಿದೆ. ಸುಮಾರು ಒಂದು ವಾರ ಮುಂಚೆಯೇ ಗಂಡು ಮೀನು ಕೆಲವು ಬಗೆಯ ಸಂವೇದನೆಗಳನ್ನು ಅನುಭವಿಸುತ್ತದೆ. ಭ್ರೂಣಗಳು ಬೆಳವಣಿಗೆಯ ಅಂತಿಮ ಹಂತ ತಲುಪಿದಾಗ ಗಂಡು ಮೀನು ಮರಿಗಳಿಗೆ ಜನ್ಮ ನೀಡುತ್ತದೆ.(ವಿಡಿಯೋ ನೋಡಿ). ನಂತರವೂ ಗಂಡು ಮೀನು ಮರಿಗಳ ಪೋಷಣೆಯಲ್ಲಿ‌ ನಿರ್ಣಾಯಕ ಪಾತ್ರ ವಹಿಸುತ್ತದೆ.        


ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ:  https://youtu.be/qki0JF053wQ  


ಗಜಾನನ ಭಟ್ಟ( ವಿಜ್ಞಾನ ಶಿಕ್ಷಕರು ಹಾಗೂ ಹವ್ಯಾಸಿ ವಿಜ್ಞಾನ ಬರಹಗಾರರು)

ದೂರವಾಣಿ: 9449799061

ಇ ಮೇಲ್ ವಿಳಸ: gnbsirsi185@gmail.com

No comments:

Post a Comment