Saturday, February 4, 2023

ಜೀವ ಪ್ರಪಂಚದೊಳಗಿನ ರಹಸ್ಯ !

ಜೀವ ಪ್ರಪಂಚದೊಳಗಿನ ರಹಸ್ಯ !

ಲೇಖಕರು : ಬಿ.ಜಿ.ರಾಮಚಂದ್ರ ಭಟ್ 
ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಬ್ಯಾಟರಾಯನಪುರ,
ಮೈಸೂರು ರಸ್ತೆ, ಬೆಂಗಳೂರು

ಜೀವ ಪ್ರಪಂಚ ಹಲವಾರು ಸೋಜಿಗಗಳ, ರಹಸ್ಯಗಳ ಆಗರ. ನಾವು ಅದರ ಬಗ್ಗೆ ತಿಳಿದಿರುವುದು ಬಹಳ ಕಡಿಮೆ. ತಿಳಿಯ ಬೇಕಾದ್ದು ಅಪಾರವಿದೆ. ಅಂಥ ಕೆಲವು ರಹಸ್ಯಗಳನ್ನು ನಿಮ್ಮ ಮುಂದೆ ತೆರೆದಿಟ್ಟು, ನಿಮ್ಮನ್ನು ಆಲೋಚನೆಗೆ ಹಚ್ಚುವ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡಿದ್ದಾರೆ,ʼಸವಿಜ್ಞಾನʼ ತಂಡದ ಶಿಕ್ಷಕ,    ಶ್ರೀ ರಾಮಚಂದ್ರ ಭಟ್‌ ಅವರು. 

“I think that if we think of nature as something remote and distant, accessible only to someone who can go to a national park, we lose the impetus to save and to protect it”.

Ed Yong,  Author of “An immense world” and Pulitzer prize winner

ಎಷ್ಟು ಅಜ್ಞಾನಿಗಳು ನಾವು!! ಎಷ್ಟು ಮೂರ್ಖರು ನಾವು!!! ಪ್ರಪಂಚವನ್ನೇ ಬಗೆದು ನೋಡಿದ್ದೇವೆಂಬ ಅಹಂನಲ್ಲಿ ಕಳೆದು ಹೋಗಿಯೇ ಬಿಟ್ಟಿದ್ದೇವೆ. ನಮ್ಮ ಸುತ್ತಮುತ್ತಲಿನ ಅದ್ಭುತ, ಸುಂದರಾತಿಸುಂದರ ದೃಶ್ಯಗಳನ್ನೇ ನೋಡುವ ಸಾಮರ್ಥ್ಯವಿಲ್ಲ, ಇಂಪಾದ  ಅವರ್ಣನೀಯ ಸುಶ್ರಾವ್ಯ ಇನಿದನಿಗಳನ್ನು ಕೇಳಿಸಿಕೊಳ್ಳಲೂ ಸಾಧ್ಯವಿಲ್ಲದ ನಿಸ್ಸಹಾಯಕ ವ್ಯಕ್ತಿಗಳಾದ ನಾವು, ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ. !

ವಿಶಾಲವಾ ಕಗ್ಗತ್ತಲೆಯ ಕೂಪದಲ್ಲಿ ಹಲವಾರು ವಸ್ತುಗಳನ್ನು ಹರಡಿ ನಿಮ್ಮನ್ನು ಅಲ್ಲಿ ನಾಲ್ಕಾರು ಗಂಟೆಗಳ ಕಾಲ ಕೂಡಿ ಹಾಕಿ, ಇಂತಹ ವಸ್ತುವನ್ನು ಹುಡುಕಿ ತನ್ನಿ ಎಂಬ ಸವಾಲೆಸೆದರೆ ಯಾವುದೇ ವಸ್ತುವನ್ನು ನೀವು ಹೇಗೆ ತೆಗೆದುಕೊಳ್ಳಬಲ್ಲಿರಿ? ನಿಮಗೂ, ಯಾವುದೇ ವಸ್ತುವಿಗೂ ಹಾನಿಯಾಗದಂತೆ, ನೀವು ಹೇಗೆ ಓಡಾಡಬಲ್ಲಿರಿ? ತಡವರಿಸದೆ ಯಾವುದೇ ವಸ್ತುವನ್ನು ನಿಖರವಾಗಿ ತೆಗೆದುಕೊಳ್ಳಬಲ್ಲಿರಾ? ಅಭ್ಯಾಸವಿದ್ದ ಕೊಠಡಿಯೇ ಆದಲ್ಲಿ, ಹಾಗೋ ಹೀಗೋ ಕೆಲವೊಂದು ವಸ್ತುಗಳನ್ನು ಹುಡುಕಿ ತೆಗೆದುಕೊಳ್ಳಬಲ್ಲಿರಿ.  ಅಪರಿಚಿತ ಕೊಠಡಿಯಾಗಿದ್ದಲ್ಲಿ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳುವ ವಿಷಯ ಬಿಡಿ. ಇರುವ ವಸ್ತುಗಳಿಗೇ ಡಿಕ್ಕಿ ಹೊಡೆದು ಎದ್ದು-ಬಿದ್ದು ನಿಮ್ಮನ್ನು ನೀವೇ ನೋಡಿಕೊಳ್ಳುವುದು, ಯಮ ಯಾತನೆಯೇ ಸರಿ. ಹಾಗಾದರೆ ಈ ಪ್ರಾಣಿಗಳು ಹೇಗೆ ಬದುಕಿದ್ದಾವೋ? ಪ್ರಪಂಚದಲ್ಲಿ ಎಂತೆಂತಹ ಅದ್ಭುತಗಳಿವೆ

ಅದು ಹೇಗೆ ಈ ಜೀವಿಗಳು ಬದುಕಿ ಉಳಿದಿವೆಯೋ? ಇದೇ ಗ್ಗತ್ತಲ ಕೂಪದಲ್ಲಿ ಪಕ್ಷಿಗಳೋ ಇನ್ನಿತರ ಜೀವಿಗಳೋ ಇದ್ದಲ್ಲಿ ಅವು ಯಾವುದೇ ಸಮಸ್ಯೆ ಇಲ್ಲದೇ ಸಹಜವಾಗಿಯೇ ತಮ್ಮ ದಿನಚರಿಯಲ್ಲಿ ತೊಡಗಬಲ್ಲವು. ಅದಾವ ವಿಶೇಷವಾದ ಶಕ್ತಿಯನ್ನು ಬಳಸಿಕೊಂಡು ತಮಗೆ ಬೇಕಾದಡೆ ಚಲಿಸಬಲ್ಲವೋ? ಇದು ಅಚ್ಚರಿಯಲ್ಲವೇ? ನಮಗೆ ಗೋಚರಿಸದ, ನಮ್ಮ ಅರಿವಿಗೇ ಬಾರದ ಸುತ್ತಲಿನ ಕಾಂತಕ್ಷೇತ್ರನ್ನು ಬಳಸಿಕೊಂಡು ತಮಗೆ ಬೇಕಾದಡೆಗೆ ಚಲಿಸಬಲ್ಲವು ಎನ್ನುವುದು ಅಚ್ಚರಿಯ ವಿಚಾರವಲ್ಲವೇ? ಈ ದಿವ್ಯಶಕ್ತಿಯನ್ನು ಗ್ರಹಿಸಿ ಬಳಸಿಕೊಳ್ಳಬಲ್ಲ ಚಾತುರ್ಯವನ್ನು ಸಿದ್ಧಿಸಿಕೊಂಡಿವೆ, ಪಕ್ಷಿಗಳಂತಹ ಜೀವಿಗಳು. ಹಾಗಾಗಿಯೇ, ಸಾವಿರಾರು ಕಿಲೋಮೀಟರ್ ದೂರದವರೆಗೂ ವಿವಿಧ ಕಾರಣಗಳಿಗಾಗಿ ಈ ಪಕ್ಷಿಗಳು ದಿಕ್ಕು ತಪ್ಪದೇ ವಲಸೆ ಹೋಗುತ್ತವೆ.

ನಮ್ಮ ಮೂಗೂ ಸಹಾ ಆಘ್ರಾಣಿಸದ, ಅದರ ಅರಿವಿಗೇ ಬಾರದ ಸೂಕ್ಷ್ಮ ವಾಸನೆಗಳನ್ನು ನಾಯಿಗಳು ಗ್ರಹಿಸಬಲ್ಲವು. ನಾಯಿಯು, ಮನುಷ್ಯ- ಮನುಷ್ಯರ ನಡುವ ವ್ಯತ್ಯಾಸ, ವಸ್ತುಗಳು ನಡುವಣ ವ್ಯತ್ಯಾಸಗಳನ್ನು ಗುರುತಿಸಬಲ್ಲುದು. ಇನ್ನರಿತ‌ ನಾವು ಈ ಸ್ನಿಫರ್ರ್‌ ನಾಯಿಗಳನ್ನು‌(sniffer dogs) ಈಗ ಶ್ವಾನದಳ, ಬಾಂಬ್‌ ನಿಷ್ಕ್ರಿಯ ದಳಗಳಲ್ಲಿ ಯಶಸ್ವಿಯಾಗಿ ಬಳಸುತ್ತಿದ್ದೇವೆ.

ರಾಟ್ಲ್ ಹಾವುಗಳು (Rattle snakes) ಹಾಗೂ ಹೆಬ್ಬಾವಿನ ಕುಟುಂಬಕ್ಕೆ ಸೇರಿದ ಕೆಲವು ಹಾವುಗಳು ಕೋಣೆಯಲ್ಲಿ ಮನುಷ್ಯರ ಇರುವಿಕೆಯನ್ನು ಮೀಟರ್‌ಗಟ್ಟಲೆ ದೂರದಿಂದಲೇ ಪತ್ತೆಹಚ್ಚಬಲ್ಲವು. ಅಷ್ಟು ದೂರದಿಂದಲೇ ನಿಖರವಾಗಿ ಅತ್ಯಾಧುನಿಕ ಕ್ಷಿಪಣಿ ದಾಳಿ ನಡೆಸಿದಂತೆ ಬಲಿಯ ಮೇಲೆರಗಬಲ್ಲವು!! .ಅಚ್ಚರಿಯಾಯಿತೇ?  ನಮ್ಮ ದೇಹದಿಂದ ಶಾಖವು ಅವಗೆಂಪು ವಿಕಿರಣಗಳ ರೂಪದಲ್ಲಿ ಹೊರಹೊಮ್ಮುತ್ತದೆ. ಈ ಹಾವುಗಳು ತಮ್ಮ ದೇಹದಲ್ಲಿರುವ ಅವಗೆಂಪು ವಿಕಿರಣಗಳನ್ನು ಗ್ರಹಿಸಬಲ್ಲ ಗ್ರಾಹಕ ಕೋಶಗಳಿಂದ ನಮ್ಮನ್ನು ಅಥವಾ ಇನ್ನಿತರ ಜೀವಿಗಳಲ್ಲಿನ ವ್ಯತ್ಯಾಸಗಳನ್ನು ಪತ್ತೆ ಮಾಡಬಲ್ಲವು. ಇವುಗಳ ಮೂತಿಯಲ್ಲಿ 5-30μm ತರಂಗದೂರವುಳ್ಳ ಉಷ್ಣ ವಿಕಿರಣಗಳಿಗೆ ಸೂಕ್ಷ್ಮಸಂವೇದಿ ಗ್ರಾಹಕಗಳುಳ್ಳ ರಚನೆಗಳಿವೆ. ಈ ಭಾಗಗಳನ್ನು ಕೆಳಗಿನ ಚಿತ್ರದಲ್ಲಿ ತೋರಿಸಿದೆ. ಇವು ಹಲವು ಮೀಟರ್‌ ದೂರದಿಂದಲೇ ಉಷ್ಣತೆಯಲ್ಲಿನ ವ್ಯತ್ಯಾಸವನ್ನು ನಿಖರವಾಗಿ ಗುರುತಿಸಿ ಬೇಟೆಯನ್ನು, ಶತ್ರುಪ್ರಾಣಿಗಳನ್ನು ಸುಲಭವಾಗಿ ಗುರುತಿಸಬಲ್ಲವು ಎಂದರೆ, ನಿಸರ್ಗ ಈ ರಚನೆಗಳ ನಿಖರತೆಯಲ್ಲಿ ಸಾಧಿಸಿದ್ದು. ಮಾನವ ಭಾಷೆಯಲ್ಲಿ ಹೇಳುವುದಾದರೆ ಇದು ಇವುಗಳು ಬೆಳೆಸಿಕೊಂಡ ಅತ್ಯಾಧುನಿಕ ತಂತ್ರಜ್ಞಾನವಾಗಿದೆ!!.


ಇಂತಹ ಅದೆಷ್ಟು ಅಚ್ಚರಿಗಳು ನವೀನ ಸಂಶೋಧನೆಗಳಿಗೆ ದಾರಿ ಮಾಡಿಕೊಟ್ಟಿವೆಯೋ? ಪತ್ರಿಕೋದ್ಯಮದಲ್ಲಿ ಪುಲಿಟ್ಜರ್‌ ಪ್ರಶಸ್ತಿಗಳಿಸಿದ ಅಮೇರಿಕದ ಎಡ್‌ ಯಂಗ್‌ “An immense world” ಎಂಬ ತಮ್ಮ ಕೃತಿಯಲ್ಲಿ ಜೀವಪ್ರಪಂಚದೊಳಗಿನ ಕೆಲ ರಹಸ್ಯಗಳನ್ನು ನಮ್ಮೆದುರಿಗೆ ತೆರೆದಿಟ್ಟಿದ್ದಾರೆ. ಇಲ್ಲಿ ಪ್ರಾಣಿ ಪ್ರಪಂಚದ ವೈವಿಧ್ಯ, ಜೀವಿಗಳ ವಿಶಿಷ್ಟ ಸಾಮರ್ಥ್ಯಗಳ ಅನ್ವೇಷಣೆಯ ಕಥನವಿದೆ. ಅತ್ಯಂತ ರೋಚಕ ವಿಚಾರಗಳನ್ನು ಮನೋಜ್ಞವಾಗಿ ತಿಳಿಸುತ್ತಾ ಮಾನವನ ಇತಿಮಿತಿಗಳ ಮೇಲೂ ಬೆಳಕು ಚೆಲ್ಲಿದ್ದಾರೆ.

ಪ್ರಾಣಿಯೊಂದು ತಾನು ಬದುಕುವ ಪರಿಸರಕ್ಕೆ ಹೊಂದಿಕೊಂಡಿರುತ್ತದೆ. ಪ್ರಾಣಿಯ ಸ್ವ-ಸಂವೇದನಾ ಪರಿಸರವೇ Umwelt. ಪ್ರಾಣಿಯು ತನ್ನ ಪರಿಸರವನ್ನು ನೋಡುವ ಪರಿಗ್ರಹಿಸುವ ದೃಷ್ಟಿಕೋನವನ್ನು Umwelt ಎನ್ನಬಹುದುಜರ್ಮನ್ ಭಾಷೆಯಲ್ಲಿ Umwelt ಎಂದರೆ ಪರಿಸರ ಅಥವಾ ಸುತ್ತುಮುತ್ತಲಿನ  ಪ್ರದೇಶ ಎಂದರ್ಥ. ಈ ಪದವನ್ನು ಟಂಕಿಸಿ ಪ್ರಚುರಪಡಿಸಿದಾತ ಜರ್ಮನಿಯ ಜೀವಶಾಸ್ತ್ರಜ್ಞ ಜಾಕೋಬ್‌ ವೋನ್‌ ಎಕ್ಸ್‌ಕುಲ್‌ (Jakob von Uexküll). ಜಾಕೋಬ್‌ ರವರು ಭೌತಿಕ ಪರಿಸರಕ್ಕಿಂತ ಪಂಚೇಂದ್ರಿಯಗಳನ್ನೊಳಗೊಂಡ ಜ್ಞಾನವಾಹಿ ಪರಿಸರ (sensory environment) ಎಂಬ ಅರ್ಥದಲ್ಲಿ ಬಳಸಿದ್ದರು. ಅಂದರೆ, ವಿಶಿಷ್ಟವೆನಿಸುವ ವಾಸನೆ, ದೃಕ್‌, ಶ್ರವಣ, ಸ್ಪರ್ಶಗಳುಳ್ಳ ಪಂಚೇಂದ್ರಿಯಗಳನ್ನು ಒಳಗೊಂಡ ಪ್ರಾಣಿಗ್ರಾಹ್ಯ ಪರಿಸರ.

    ಯಂಗ್‌ರವರ ಪ್ರಕಾರ ನಮಗೆ ಕ್ಷೀಣವಾದ ದುರ್ಬಲ ವಿದ್ಯುತ್ ಕ್ಷೇತ್ರ /ಆವೇಶಗಳ ಅರಿವಾಗದು. ಆದರೆ ಪ್ಲಾಟಿಪಸ್ ಶಾರ್ಕ್ಗಳಂತಹ ಪ್ರಾಣಿಗಳು ಈ ಕ್ಷೀಣವಾದ ಸಂವೇದನೆಗಳನ್ನೂ ಗ್ರಹಿಸಬಲ್ಲವು. ಪಕ್ಷಿಗಳು, ಸಮುದ್ರದ ಕಡಲಾಮೆಗಳು ಗ್ರಹಿಸಬಲ್ಲ ಕಾಂತ ಕ್ಷೇತ್ರವನ್ನು ಮಾನವನ ಅಸೂಕ್ಷ್ಮಮತಿತ್ವ ಗ್ರಹಿಸಲಾರದು.

 ನಮ್ಮ ಕಿವಿಗಳು ಗುರುತಿಸಲಾರದ ಸೂಕ್ಷ್ಮವಾದ ಶ್ರವಣಾತೀತ ತರಂಗಗಳನ್ನು ದಂಶಕಗಳು,  ಹೂಕುಟುರಗಳು, ಹಮ್ಮಿಂಗ್ ಬರ್ಡ್ಳು ಕೇಳಬಲ್ಲವು. ಇವುಗಳ ಮೂಲಕ ಪರಸ್ಪರ ಸಂವಹನ ನಡೆಸಬಲ್ಲವು.

ನಮ್ಮ ಕಣ್ಣಿಗೆ ಗೋಚರಿಸದ ನೇರಳಾತೀತ ಕಿರಣಗಳನ್ನು ಪಕ್ಷಿಗಳು ಗ್ರಹಿಸಬಲ್ಲವು. ಹಾಗಾದರೆ ಅವುಗಳ ಕಣ್ಣಿಗೆ ಅದೆಷ್ಟು ವೈವಿಧ್ಯಮಯವಾಗಿ ಈ ಪರಿಸರ ಕಂಡು ಬಂದೀತೋ? ಪರಾಗಸ್ಪರ್ಶ ನಡೆಸುವ ಕೀಟಗಳ ನೇರಳಾತೀತ ಕಿರಣಗಳ ಗ್ರಾಹ್ಯತೆಯಿಂದಾಗಿ ಅವುಗಳ ಹೂಗಳ ಕಡೆಗಿನ ದೃಷ್ಟಿಕೋನವೇ ವಿಭಿನ್ನವಾಗಿದೆ. ಹೂಗಳ ವಿಶಿಷ್ಟ ವಿನ್ಯಾಳು ನೇರಳಾತೀತ ವಿಕಿರಣಗಳಿಗೆ ಮಾತ್ರ ಗೋಚರವಾಗುವ ವಿಶಿಷ್ಟ ಜೋಡಣೆಗಳಾಗಿವೆ. ಇವು ಕೀಟಗಳನ್ನು ಮಕರಂದದತ್ತ ಕರೆದೊಯ್ಯುತ್ತವೆ. ನಿಸರ್ಗದ ವಿವಿಧ ಘಟಕಗಳ ನಡುವಿನ ತಾದಾತ್ಮತೆ ಮತ್ತು ಹೊಂದಾಣಿಕೆಗಳು ಅದ್ಭುತ ಅಲ್ಲವೇ?  ಕೀಟಗಳ ಈ ಸಾಮರ್ಥ್ಯವನ್ನು ಕಂಡೇ ಹೂಗಳು ವಿವಿಧ ರೀತಿಯ ವಿನ್ಯಾಸಗಳನ್ನು ರೂಪಿಸಿವೆ ಎಂದರೆ ತಪ್ಪಾಗಲಾರದು. ಈ ದಾರಿಯನ್ನು ಕಂಡುಕೊಂಡೇ ಜೇಡಗಳು ಇವುಗಳನ್ನು ಆಹಾರವಾಗಿಸುವ ಸಾಧ್ಯತೆಗಳನ್ನೂ ಕಂಡುಕೊಂಡಿವೆ!!! ಅಬ್ಬಾ ರುದ್ರರಮಣೀಯ ಜಗವಿದು !!!!

 ನಿರ್ದಿಷ್ಟ ಮೆದುಳಿಲ್ಲದ ಈ ಜೀವಿಗಳಲ್ಲಿನ ವೈವಿಧ್ಯತೆ ಏನು ಕಡಿಮೆಯೇ? ನಿಸರ್ಗದ ಕುಲುಮೆಯಲ್ಲಿ ಅದೆಂತಹ ಹೊಸ ಹೊಸ ಆಲೋಚನೆಗಳು ಹುಟ್ಟಿ ಹೊನಲಾಗಿ ಹರಿದಿವೆಯೋ? ನಮ್ಮ ಕಣ್ಣುಗಳಿಗೆ ಹೋಲಿಸಿದಲ್ಲಿ ಕೀಟಗಳ ಕಣ್ಣುಗಳು ನೀಲಿ - ಹಸಿರು ಮತ್ತು ನೇರಳಾತೀತ ಕಿರಣಗಳಿಗೆ ಸೂಕ್ಷ್ಮ ಸಂವೇದಿಯಾಗಿವೆ. ಕೀಟಗಳ ಉಗಮ ಮೊದಲು ನಡೆದು ಹೂ ಬಿಡುವ ಸಸ್ಯಗಳ ಮತ್ತು ಹೂಗಳ ವಿಕಾಸ ನಂತರ ಆಗಿದ್ದರೆ ಕೀಟಗಳ ಕಣ್ಣುಗಳನ್ನು ಆಕರ್ಷಿಸುವಂತಹ ಬಣ್ಣಗಳುಳ್ಳ ಹೂಗಳ ವಿಕಾಸವಾಗಿರಬೇಕು.  ಕೀಟಗಳಿಗಿಂತ, ಹೂಗಳಿಗೆ ಪರಾಗಸ್ಪರ್ಶವಾಗಿ ಸಂತಾನವೃದ್ಧಿ ಆಗಬೇಕಾದ ಜರೂರತ್ತು ಇದೆ. ಒಂದು ವೇಳೆ ಆವೃತ ಬೀಜ ಸಸ್ಯಗಳು ಕೀಟಗಳಿಗಿಂತ ಮೊದಲೇ ವಿಕಾಸಗೊಂಡಿವೆ ಎನ್ನೋಣ. ಆಗ ಆವೃತ ಬೀಜ ಸಸ್ಯಗಳು ತಮ್ಮ ಅಗತ್ಯತೆಗಾಗಿ ಕೀಟಗಳನ್ನು ಆಕರ್ಷಿಸಲು ತಮ್ಮ ಹೂಗಳ ರಚನೆಯಲ್ಲಿ ಮಾರ್ಪಾಡು ಮಾಡಿಕೊಂಡು ವಿಕಾಸಗೊಂಡಿರಬೇಕು ಅಂದರೆ, ಸೌಂದರ್ಯವು ಕಣ್ಣುಗಳಿಂದಲೇ ಆಗಿದೆ!! ಒಟ್ಟಿನಲ್ಲಿ ಆನಂದಮಯವೀ ಜಗ. ಕಣ್ಣುಗಳಿಂದಲೇ ಹೂಗಳ ಸೌಂದರ್ಯ ವಿಕಾಸ ಹೊಂದಿದೆ ಎಂದು ವಾದಿಸಬಹುದು!!! ನಿಸರ್ಗ ದೇವತೆಯ ಕಣ್ಣಿಗೆ ಕಾಣದ್ದು ಏನಾದರೂ ಇದೆಯೇ?

    ಎರಡನೇ ಮಹಾಯುದ್ಧದಲ್ಲಿ ಡಾಲ್ಫಿನ್ಳ ಬಳಕೆ ಮತ್ತದರ ಯಶಸ್ಸು ಎಲ್ಲರಿಗೂ ತಿಳಿದೇ ಇದೆ. ಡಾಲ್ಫಿನ್‌ ಮತ್ತು ಬಾವಲಿಗಳ ವಿಶಿಷ್ಟ ಸಾಮರ್ಥ್ಯ ರೆಡಾರ್ ಸೋನಾರ್‌ಗಳ ಆವಿಷ್ಕಾರಕ್ಕೆ ಕಾರಣವಾದದ್ದು ಒಂದು ಅದ್ಭುತವಾದ ರೋಚಕ ಕಥೆಯೇ ಸರಿ. ಕೋ ಲೊಕೇಶನ್ (echolocation)-ಪ್ರತಿಧ್ವನಿ ಗ್ರಹಣ ತಂತ್ರಜ್ಞಾನ ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು ಇದು ಪ್ರಪಂಚವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿದೆ. ಜ್ಞಾನದ ಹುಡುಕಾಟದಲ್ಲಿ ನಾವು ಬಗೆದದ್ದು ಮೊಗೆದದ್ದು ನಮ್ಮ ಪಾಲಿಗೊದಗಿದ ಪಂಚಾಮೃತವಷ್ಟೇ!!!

24 comments:

  1. Very Nice article and narration sir we humans think we are most superior species and we think we stand highest at the Pinnacle of evolution but alas we have soo many limitations.

    ReplyDelete
  2. Nice article sir. Your ability to use our mother tongue kannada is credible. All the best.

    ReplyDelete
  3. , ನಿಮ್ಮ ಲೇಖನ ಚೆನ್ನಾಗಿದೆ ಸರ್, ಬೇಗ ಮುಗ್ದೋಗ್ಬಿಡ್ತು ಅಂತ ಅನ್ನಿಸ್ಬಿಡ್ತು ಅಷ್ಟು ವಿಷಯಗಳು ಹಾಗೂ ಪ್ರಕೃತಿಯಲ್ಲಿ ಕಂಡುಬರುವ ವೈವಿಧ್ಯತೆ ಯನ್ನು ಕಣ್ಣಿಗೆ ಹಚ್ಚೊತ್ತುವಂತೆ ಅರ್ಥಗರ್ಭಿತವಾದಂತಹ ಬರವಣಿಗೆಯಲ್ಲಿ ಮೂಡಿ ಬಂದಿದೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
    ರಾಜೇಶ್ ಎಲ್ಎನ್
    ವಿಜ್ಞಾನ ಶಿಕ್ಷಕರು
    ಚಿತ್ರದುರ್ಗ

    ReplyDelete
  4. ಜೀವ ಲೋಕದ ಹಲವು ಸೋಜಿಗದ ಸಂಗತಿಗಳಲ್ಲಿ ಕೆಲವುಗಳ ಮೇಲೆ ಬೆಳಕು ಹರಡಿ ಗೋಚರಿಸುವಂತೆ ಮಾಡಿದ ತಮ್ಮ ಲೇಖನ ತುಂಬಾ ಸುಂದರವಾಗಿ ಮೂಡಿ ಬಂದಿದೆ ಸರ್.

    ReplyDelete
  5. ಪ್ರತಿ ಜೀವಿಯನ್ನು ವಿಶಿಷ್ಟವಾಗಿ ರೂಪಿಸಿರುವ ನಿಸರ್ಗವೆಂಬ ಅದ್ಭುತ ಪ್ರಯೋಗಶಾಲೆಯಲ್ಲಿ ತಾನೇ ಶ್ರೇಷ್ಠನೆಂಬ ಭ್ರಮೆಯಲ್ಲಿ ವಿಹರಿಸುವ ಹುಲುಮಾನವರನ್ನು ಎಚ್ಚರಿಸುವಂತಿದೆ ಸರ್ ನಿಮ್ಮ ಲೇಖನ.ಅಭಿನಂದನೆಗಳು
    -ತಾಂಡವಮೂರ್ತಿ

    ReplyDelete
  6. ನಿಸರ್ಗವೇ ಹಾಗೆ ಎಷ್ಟು ಅದ್ಭುತಗಳು. ಲೇಖನವೂ ಕೂಡಾ ಅದ್ಭುತವಾಗಿದೆ sir 👌👌👌

    ReplyDelete
  7. ವಿಸ್ಮಯ ವಿಶ್ವದಲ್ಲಿ ವಿಶೇಷತೆಯ ಲೇಖನ ಚೆನ್ನಾಗಿ ಮೂಡಿಬಂದಿದೆ Sir.
    ಧನ್ಯವಾದಗಳು

    ReplyDelete
  8. ಇಂದು ಮನುಷ್ಯನ ಅಹಂಗೆ ನಿಸರ್ಗದಿಂದ ಉತ್ತರ ದೊರೆತಂತಿದೆ ಸರ್ ನಿಮ್ಮ article, ತುಂಬಾ ಉತ್ತಮವಾಗಿದೆ. ಧನ್ಯವಾದಗಳು.

    ReplyDelete
  9. ನಿಸರ್ಗದ ನಿಗೂಢತೆ, ವಿಸ್ಮಯ
    ಮತ್ತು ಅದರ ಮಹತ್ವದ ಬಗ್ಗೆ ಬರೆದ ಈ ಲೇಖನವೂ ಕೂಡಾ ಅದ್ಭುತ
    ಗುರೂಜಿ..
    ಡಾ. ಶಶಿಧರ ಕುಂಬಾರ
    GHS ಹಿರೇಪಡಸಲಗಿ. ಜಮಖಂಡಿ ತಾ.

    ReplyDelete
  10. ಅತ್ಯುತ್ತಮ ಮಾಹಿತಿ ಸರ್ ಜಿ.

    ReplyDelete
  11. ಅದ್ಬುತವೆನಿಸುವ ಲೇಖನ ಸರ್. ಈ ನಿಗೂಢ, ವಿಸ್ಮಯಕರವಾದ ಜಗತ್ತಿನೊಳಗಿನ ರಹಸ್ಯಗಳನ್ನು ತಿಳಿಯುತ್ತಾ ಹೋದಂತೆ ಜೀವಜಗತ್ತಿನ ಆಗಾಧತೆಯ ಜೊತೆಜೊತೆಗೆ "ಅಹಂ ಬ್ರಹ್ಮಾಸ್ಮಿ " ಸೋಗಿನೊಂದಿಗೆ ಬೀಗುವ ಹುಲುಮಾನವನ ಇತಿಮಿತಿಗಳು ಅರಿವಾಗುತ್ತವೆ. ಆನಂತರವಾದರೂ ಮಾನವ ಪ್ರಕೃತಿಯ ಅತೀ ಸೂಕ್ಷ್ಮವಾದ ಅಂತರಸಂಬಂಧಗಳನ್ನು ಅರ್ಥಮಾಡಿಕೊಂಡು ಎಲ್ಲಾ ಜೀವಿಗಳೊಂದಿಗೆ ಸಹಕಾರದಿಂದ ಬಾಳಲಿ ಎಂದು ಆಶಿಸುತ್ತಾ....
    ಆಕರ್ಷಕ ಲೇಖನಕ್ಕೆ ಧನ್ಯವಾದಗಳು ಸರ್..

    ReplyDelete