Saturday, March 4, 2023

ವಿಜ್ಞಾನ ಕ್ಷೇತ್ರಕ್ಕೆ ನಾರಿ ಶಕ್ತಿಯ ದೀವಿಗೆ.

 

ವಿಜ್ಞಾನ ಕ್ಷೇತ್ರಕ್ಕೆ ನಾರಿ ಶಕ್ತಿಯ ದೀವಿಗೆ.

 ಲೇಖಕರು,    ಬಿ.ಎನ್.ರೂಪ,  ಸಹಶಿಕ್ಷಕರು ,

 ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢಶಾಲೆ ಗೋರಿಪಾಳ್ಯ,

                                                                                 ಬೆಂಗಳೂರು ದಕ್ಷಿಣ ತಾಲ್ಲೂಕು-2.                                 

ವಿಜ್ಞಾನದ ವಿವಿಧ  ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿರುವ ಅನೇಕ ಭಾರತೀಯ ಮಹಿಳಾ ವಿಜ್ಞಾನಿಗಳ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಅಂಥ ಹನ್ನೊಂದು ಮಂದಿ ಮಹಿಳಾ ವಿಜ್ಞಾನಿಗಳ ಹೆಸರಿನಲ್ಲಿ ಈಗ ಕೇಂದ್ರ ಸರ್ಕಾರ ಪೀಠಗಳನ್ನು ಸ್ಥಾಪಿಸಿ ಅವರನ್ನು ಸ್ಮರಿಸುತ್ತಿದೆ. ಈ ಸಂದರ್ಭದಲ್ಲಿ ಈ ಮಹಿಳಾ ವಿಜ್ಞಾನಿಗಳ ಕಿರು ಪರಿಚಯ ಮಾಡಿಕೊಡುತ್ತಿದ್ದಾರೆ, ಶಿಕ್ಷಕಿ ಭಿ.ಎನ್‌ ರೂಪಾ ಅವರು

    ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಅತ್ಯುನ್ನತ ಸ್ಥಾನಕ್ಕೆ ಏರುವುದು ಸುಲಭದ ಮಾತಲ್ಲ. ಮಹಿಳೆಯಾಗಿ ತನ್ನ ವೈಯುಕ್ತಿಕ ಕರ್ತವ್ಯಗಳ ಜೊತೆಗೆ ಪ್ರಯೋಗಾಲಯಗಳಲ್ಲಿ ಗುದ್ದಾಡುತ್ತಲೇ ಮೆಟ್ಟಲೇರಬೇಕಾದ ಸ್ಥಿತಿ ಈಗಲೂ ಅನೇಕ ಕಡೆ ಇದೆ.  ನಮಗೆ ತಿಳಿದಿರುವ ಹಾಗೆ ಎಲ್ಲಾ ಕ್ಷೇತ್ರಗಳಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಇರುವುದು ನಿಜ. ಅಲ್ಲಿ ಚಲನಶೀಲತೆ ತುಂಬಲು ಈ ರೀತಿಯ ಬದಲಾವಣೆ ಅಗತ್ಯ. ಸಿ ವಿ ರಾಮನ್, ಮೇಘನಾದ ಸಹಾ ,  ಎ.ಪಿ.ಜೆ ಅಬ್ದುಲ್ ಕಲಾಂ ಅವರಂಥ ಮಹಾನ್ ವಿಜ್ಞಾನಿಗಳ ಅಮೂಲ್ಯ ಕೊಡುಗೆಗಳ ಬಗ್ಗೆ ನಮಗೆ ತಿಳಿದಿದ್ದರೂ, ನಮ್ಮಲ್ಲಿ ಅನೇಕರಿಗೆ ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯ ಮಹಿಳೆಯರ ಕೊಡುಗೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ವಿಜ್ಞಾನ ಕ್ಷೇತ್ರದಲ್ಲಿ ಅನೇಕ ಭಾರತೀಯ ಮಹಿಳೆಯರು ಉನ್ನತವಾದ ಕೊಡುಗೆಗಳನ್ನು ನೀಡಿ ವೈಜ್ಞಾನಿಕ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿ, ಅಭಿವೃದ್ಧಿ ಹೊಂದಲು ಚುಕ್ಕಾಣಿ ಹಿಡಿದು ಮುನ್ನಡೆಸಿರುವ ಬಗ್ಗೆ ನಮ್ಮ ಭಾರತದ ಪ್ರಜೆಗಳೆಲ್ಲರೂ ಹೆಮ್ಮೆ ಪಡಲೇಬೇಕು.

 ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಗಮನಾರ್ಹ. ಅಂತರಾಷ್ಟ್ರೀಯ ಮಹಿಳಾದಿನ ಹಾಗೂ ರಾಷ್ಟ್ರೀಯ ವಿಜ್ಞಾನ ದಿನದ ಹೊಸ್ತಿಲಿನಲ್ಲಿ ಶ್ರೀ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ನಮ್ಮ ದೇಶಾದ್ಯಂತ ಇರುವ 11 ಪ್ರಮುಖ ವೈಜ್ಞಾನಿಕ ಸಂಸ್ಥೆಗಳಲ್ಲಿ ಭಾರತೀಯ ಮಹಿಳಾ‌ ವಿಜ್ಞಾನಿಗಳ ಹೆಸರಿನ ಪೀಠವನ್ನು ಸ್ಥಾಪಿಸಲು ಮುಂದಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ಅದ್ಭುತ ಸಾಧನೆಯನ್ನು ತೋರಿಸಿದಂಥ ಅದ್ವಿತೀಯ ಮಹಿಳೆಯರನ್ನು ಪ್ರೇರೆಪಿಸಲು ಪ್ರೋತ್ಸಾಹಿಸಲು ಸಬಲೀಕರಣಗೊಳಿಸಲು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮಹಿಳಾ ಸಂಶೋಧಕರಿಗೆ ಸೂಕ್ತ ಮನ್ನಣೆ ನೀಡಲು 11 ಪೀಠಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಯುವತಿಯರು STEM ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾಗವಹಿಸುವಿಕೆಯನ್ನು ಎದುರು ನೋಡುವಂತೆ ಮಾಡಿದೆ.

ಈ ಹಿನ್ನೆಲೆಯಲ್ಲಿ, ನಮ್ಮ ಭಾರತದ ಕೆಲವು ಹೆಮ್ಮೆಯ  ಮಹಿಳಾ ವಿಜ್ಞಾನಿಗಳ ಯಶೋಗಾಥೆಯನ್ನು ಹಂಚಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತಿದೆ. ಈ ನಾರೀಮಣಿಯರ ವಿವರಗಳು ಈ ಕೆಳಗಿನಂತಿದೆ,

 

ಚಿತ್ರಕೃಪೆ  : ವಿಜ್ಞಾನ ಸಚಿವಾಲಯದ ಫೋಟೋಗಳು

1.ಅರ್ಚನಾ ಶರ್ಮಾ (16 ಫೆಬ್ರವರಿ 1932- 14 ಫೆಬ್ರವರಿ 2008 ) - 

ಅರ್ಚನಾ ಶರ್ಮಾ ಅವರು ಬಿಕಾನೆರ್‌ನಲ್ಲಿ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾಗಿದ್ದ, ಶಿಕ್ಷಣ ತಜ್ಞ ಎನ್.ಪಿ. ಮುಖರ್ಜಿಯವರ ಕುಟುಂಬದಲ್ಲಿ ಜನಿಸಿದರು. ಇವರು ಆರಂಭಿಕ ಶಿಕ್ಷಣವನ್ನು ರಾಜಸ್ಥಾನದಲ್ಲಿ, ನಂತರ ಬಿಎಸ್ಸಿ, ಎಂಎಸ್ಸಿ, ಮಾಡಿದ ನಂತರ 1951 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದ ವಿಭಾಗದಲ್ಲಿ ತಮ್ಮ PhD ಪೂರ್ಣಗೊಳಿಸಿದರು. ಜೀವಕೋಶ ತಳಿಶಾಸ್ತ್ರ, ಮಾನವ ತಳಿಶಾಸ್ತ್ರ ಮತ್ತು ಪರಿಸರದಿಂದಾಗುವ ಉತ್ಪರಿವರ್ತನೆಯಲ್ಲಿ ಪರಿಣಿತಿ ಪಡೆದರು. ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಡಿ.ಎಸ್ಸಿ ಪಡೆದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸಂತಾನೋತ್ಪತ್ತಿ ಮಾಡುವ ಜಾತಿ ಹಾಗೂ ವಿಧಗಳ ಅಧ್ಯಯನ,  ವಯಸ್ಕ ನ್ಯೂಕ್ಲಿಯಸ್‌ಗಳಲ್ಲಿ ಕೋಶವಿಭಜನೆಯ ಪ್ರಚೋದನೆ, ಸಸ್ಯಗಳಲ್ಲಿನ ವಿಭಿನ್ನ ಅಂಗಾಂಶಗಳಲ್ಲಿ ಪಾಲಿಟೆನಿಕಾರಣ, ಹೂಬಿಡುವ ಸಸ್ಯಗಳ ಕೋಶ ವರ್ಗೀಕರಣ ಮತ್ತು ನೀರಿನಲ್ಲಿ ಆರ್ಸೆನಿಕ್‌ ಅಂಶದ ಪರಿಣಾಮಗಳು, ಇವು ವ್ಯಾಪಕವಾಗಿ ಗುರುತಿಸಲ್ಪಟ್ಟ ಅರ್ಚನಾ ಅವರ ಕೊಡುಗೆಗಳಲ್ಲಿ ಕೆಲವು.

 

2.ಎಡವಲತ್ ಕಕ್ಕಟ್ ಜಾನಕಿ ಅಮ್ಮಾಳ್( 4 ನವೆಂಬರ್ 1897- 7 ಫೆಬ್ರವರಿ 1984)-

ದಿವಾನ್‌ ಬಹದ್ದೂರ್‌ ಎಡವಲತ್‌ ಕಕ್ಕಟ್‌ ಕೃಷ್ಣನ್ ಹಾಗೂ ದೇವಿ ಕುರುವಾಯಿ ಅವರ ಮಗಳಾಗಿ ತಲಶ್ಶೇರಿಯಲ್ಲಿ ಜನಿಸಿದ ಜಾನಕಿ ಅಮ್ಮಾಳ್ ಅವರು ಸಸ್ಯತಳಿ, ಜೀವಕೋಶ ತಳಿಶಾಸ್ತ್ರ ಮತ್ತು ಫೈಟೊ ಜಿಯೋಗ್ರಫಿಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಸಸ್ಯಶಾಸ್ತ್ರಜ್ಞರಾಗಿದ್ದರು. ಅವರ ಅತ್ಯಂತ ಗಮನಾರ್ಹ ಸಂಶೋಧನೆ ಎಂದರೆ ಕಬ್ಬು ಮತ್ತು ಬಿಳಿ ಬದನೆ ಕುರಿತು ನಡೆಸಿದ ಅಧ್ಯಯನಗಳು.

ಡಾ. ಜಾನಕಿ ಅಮ್ಮಾಳ್ ಭಾರತದ ಮೊದಲ ಮಹಿಳಾ ಸಸ್ಯಶಾಸ್ತ್ರಜ್ಞೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.. 1913 ರಲ್ಲಿ ಅಮೆರಿಕದಲ್ಲಿ ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ಮೊದಲ ಭಾರತೀಯ ಮಹಿಳೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರಲ್ಲಿ ಸಾಕ್ಷರತೆಯು ಶೇಕಡಾ ಒಂದಕ್ಕಿಂತ ಕಡಿಮೆ ಇದ್ದ ಸಂದರ್ಭದಲ್ಲಿ ಮೇರು ಸಾಧನೆಯನ್ನು ಮಾಡಿದಂತಹ ಮಹಿಳೆ ಇವರು. 1924ರಲ್ಲಿ ಅಮೆರಿಕದಲ್ಲಿ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸಸ್ಯ ಜೀವವಿಜ್ಞಾನದ ಬಗ್ಗೆ ಸಂಶೋಧನೆ ನಡೆಸಿದರು.

ಅವರು ಭಾರತದ ಹವಾಮಾನಕ್ಕೆ ಸೂಕ್ತವಾದ ಕಬ್ಬಿನ ಬೆಳೆಗಳನ್ನು ಅಭಿವೃದ್ಧಿ ಪಡಿಸಲು ತಮ್ಮ ಪರಿಣತಿಯನ್ನು ಬಳಸಿದರು. ಜಾನ್ ಇನ್ಸ್ಸ್ಟಿಟ್ಯೂಟ್ನಲ್ಲಿ ಕೆಲಸ ಮಾಡಲು ಇಂಗ್ಲೆಂಡ್ ಗೆ  ತೆರಳಿದಾಗ ಅಲ್ಲಿ ಅವರು ಕ್ರೋಮೋಸೋಮ್ ಅಟ್ಲಾಸ್ ಆಫ್‌ ಕಲ್ಟಿವೇಟೆಡ್‌ ಪ್ಲಾಂಟ್ಸ್‌ ಎಂಬ ಪುಸ್ತಕದ ಸಹ ಲೇಖಕರಾಗಿದ್ದರು.

ರಾಯಲ್‌ ಹಾರ್ಟಿಕಲ್ಚರಲ್ ಸೊಸೈಟಿಯಲ್ಲಿ, ಕೊಲ್ಚಿಸಿನ್ ಎಂಬ ರಾಸಾಯನಿಕ ಬಳಸಿಕೊಂಡು ಸಸ್ಯಗಳನ್ನು ಹೇಗೆ ವೇಗವಾಗಿ ಬೆಳೆಯುವುದು ಎಂಬ ಬಗ್ಗೆ ಇವರು ಅಧ್ಯಯನ ಮಾಡಿದರು. ಇವರ ಕೊಡುಗೆಗಳನ್ನು ಸ್ಮರಿಸಿ, ಮ್ಯಾಗ್ನೋಲಿಯಾ ಸಸ್ಯದ ಒಂದು ಪ್ರಭೇದ ಮತ್ತು ಹೈಬ್ರಿಡ್‌ ಗುಲಾಬಿಯ ಸಸ್ಯ ಪ್ರಭೇದವೊಂದಕ್ಕೆ  ಇವರ ಹೆಸರನ್ನು ಇಡಲಾಗಿದೆ. ದೇಶದಲ್ಲಿ ಬರಗಾಲದ ಸರಣಿಯ ನಂತರ, ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡಲು ತಮ್ಮ ಜ್ಞಾನವನ್ನು ಒದಗಿಸುವಂತೆ ಪ್ರಧಾನಮಂತ್ರಿ ಮಾಡಿದ ಕೋರಿಕೆಯ ಮೇರೆಗೆ ಅವರು ಭಾರತಕ್ಕೆ ಮರಳಿದರು.  ಹೆಚ್ಚು ಆಹಾರವನ್ನು ಬೆಳೆಯುವ ಪ್ರಯತ್ನದಲ್ಲಿ ದೇಶದಲ್ಲಿ ನಡೆಯುತ್ತಿರುವ ಅರಣ್ಯ ನಾಶವನ್ನು ಅವರು ವಿರೋಧಿಸಿದರು. ಅವರು ಸ್ಥಳೀಯ ಸಸ್ಯಗಳ ಸಂರಕ್ಷಣೆಗಾಗಿ ವಕೀಲರಾದರು ಮತ್ತು ಜಲ ವಿದ್ಯುತ್‌ ಯೋಜನೆಯಿಂದ ಸೈಲೆಂಟ್‌ ವ್ಯಾಲಿಯನ್ನು ಉಳಿಸುವಲ್ಲಿ ಯಶಸ್ವಿಯಾದರು. ಉಳಿಸಿದರು. ಇದು ಈಗ ಒಂದು ಪ್ರಮುಖ ರಾಷ್ಟ್ರೀಯ ಉದ್ಯಾನವನವಾಗಿದೆ.

3. ದರ್ಶನ್‌ ರಂಗನಾಥನ್ (4 ಜೂನ್ 1941 - 4 ಜೂನ್ 2001) -

ದರ್ಶನ್‌ ರಂಗನಾಥನ್ ಅವರು ದೆಹಲಿಯಲ್ಲಿ ವಿದ್ಯಾವತಿ ಮಾರ್ಕನ್ ಮತ್ತು ಶಾಂತಿಸ್ವರೂಪ್ ದಂಪತಿಗಳಿಗೆ ಜನಿಸಿದರು.  ದೆಹಲಿಯಲ್ಲಿ ಅವರ ವಿದ್ಯಾಭ್ಯಾಸದ ನಂತರ ಪಿ.ಎಚ್ಡಿ ಪದವಿಯನ್ನು ದೆಹಲಿ ವಿವಿಯಲ್ಲಿ‌ ಪಡೆದರು. 1967 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರದಲ್ಲಿ ಮೊದಲ ಉಪನ್ಯಾಸಕರಾಗಿ ನೇಮಕಗೊಂಡರು. ಅವರು ದೆಹಲಿಯ ಮಿರಾಂಡಾ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ರಾಯಲ್ ಸೊಸೈಟಿಯಿಂದ  ಸಂಶೋಧನಾ ಫೆಲೋಶಿಪ್ಅನ್ನು ಪಡೆದರು. ಇವರು ಸಾವಯವ ರಸಾಯನಶಾಸ್ತ್ರಜ್ಞರಾಗಿದ್ದು, "ಪ್ರೋಟೀನ್‌ ಫೋಲ್ಡಿಂಗ್ನಲ್ಲಿನ ಪ್ರವರ್ತಕ ಕೆಲಸ" ಸೇರಿದಂತೆ  ಜೈವಿಕ-ಸಾವಯವ ರಸಾಯನ ಶಾಸ್ತ್ರದಲ್ಲಿ ಅವರ ಸಂಶೋಧನೆಗೆ ಹೆಸರು ಪಡೆದರು.   

ದರ್ಶನ್‌ ರಂಗನಾಥನ್‌ ಪ್ರಯೋಗಾಲಯದಲ್ಲಿ ನೈಸರ್ಗಿಕವಾಗಿ ಸಂಭವಿಸುವ ಜೈವಿಕ ಪ್ರತಿಕ್ರಿಯೆಗಳನ್ನು ಮರುಸೃಷ್ಟಿಸುವಲ್ಲಿ ಪರಿಣಿತಿ ಹೊಂದಿದ್ದರು. ರಸಾಯನಶಾಸ್ತ್ರದಲ್ಲಿ ಮುಖ್ಯವಾದ ರಚನಾತ್ಮಕ ಪ್ರೋಟೀನ್ ಗಳು ಮತ್ತು ಇತರ ನ್ಯಾನೊ ರಚನೆಗಳನ್ನು ವಿನ್ಯಾಸಗೊಳಿಸುವಲ್ಲಿ ವಿಶೇಷ ಪರಿಣಿತಿ ಹೊಂದಿದ್ದರು.

 

 

4.ಅಸೀಮಾ ಚಟರ್ಜಿ (23ಸೆಪ್ಟೆಂಬರ್1917-22ನವೆಂಬರ್2006)

ಅಸೀಮಾ ಚಟರ್ಜಿಯವರು ಪಶ್ಚಿಮ ಬಂಗಾಳದಲ್ಲಿ ಜನಿಸಿದರು. ಕೊಲ್ಕತ್ತಾದಲ್ಲಿ ಬೆಳೆದ ಇವರು ಬಹಳ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದರು. ಶಾಲೆಯನ್ನು ಮುಗಿಸಿ, ಕೊಲ್ಕತ್ತಾ ವಿಶ್ವವಿದ್ಯಾಲಯದ ಸ್ಕಾಟಿಶ್‌ ಚರ್ಚ್‌ ಕಾಲೇಜಿನಲ್ಲಿ ರಸಾಯನಶಾಸ್ತ್ರ  ವಿಷಯದಲ್ಲಿ ಆನರ್ಸ ಪದವಿ ಪಡೆದರು.

ಅಸಿಮಾ ಚಟರ್ಜಿ ಒಬ್ಬ ಸಾವಯವ ರಸಾಯನ ಶಾಸ್ತ್ರಜ್ಞರಾಗಿದ್ದು,  ಫೈಟೋಮೆಡಿಸಿನ್ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಮಲೇರಿಯಾವಿರೋಧಿ ಕಿಮೊಥೆರಪಿ ಮತ್ತು ಆಂಟಿ-ಎಪಿಲೆಪ್ಸಿ ಔಷಧಿಗಳ ಅಭಿವೃದ್ಧಿಯಲ್ಲಿನ ಇವರ ಕೊಡುಗೆಗಳಿಂದ  ಖ್ಯಾತಿಯನ್ನು ಹೊಂದಿದ್ದಾರೆ. ಇವರು ಭಾರತೀಯ ಉಪಖಂಡದಲ್ಲಿ ಕಂಡುಬರುವ ಔಷಧೀಯ ಸಸ್ಯಗಳ ಮೇಲೆ ವ್ಯಾಪಕವಾದ ಸಂಶೋಧನೆ ನಡೆಸಿದರು.  ಜೀವಕೋಶಗಳ ಬೆಳವಣಿಗೆಯನ್ನು  ತಡೆಯಲು ಕೀಮೋಥೆರಪಿಯಲ್ಲಿ ಬಳಸಲಾಗುವ ಆಲ್ಕಲಾಯಿಡ್ ಗಳ ಮೇಲೆ ಅವರು ಸುಮಾರು ಅರ್ಧ ಶತಮಾನದವರೆಗೆ ಕೆಲಸ ಮಾಡಿದರು.

 

  5. ಇರಾವತಿ ಕರ್ವೆ (15 ಡಿಸೆಂಬರ್ 1905- 11 ಆಗಸ್ಟ್ 1970 )-

ಇರಾವತಿ ಅವರು ಈಗಿನ ಮಯನ್ಮಾರ್ (ಆಗಿನ ಬರ್ಮ) ದೇಶದಲ್ಲಿ ಶ್ರೀಮಂತ ಚಿತ್ಪಾವನಾ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಗಣೇಶ ಹರಿಕರ್ಮಾರ್ಕರ್‌ರವರು ಹತ್ತಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇರಾವತಿಯವರು ಪುಣೆಯಲ್ಲಿ ವಸತಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ, ನಂತರ ಖ್ಯಾತ ಫರ್ಗುಸನ್‌ ಕಾಲೇಜಿನಲ್ಲಿ ತತ್ವಶಾಸ್ತ್ರ ಕಲಿತರು.

ಇರಾವತಿ ಕರ್ವೆ ಒಬ್ಬ ಪ್ರಸಿದ್ಧ ಶಿಕ್ಷಣ ತಜ್ಞೆ, ಲೇಖಕಿ ಮತ್ತು ಮಾನವಶಾಸ್ತ್ರಜ್ಞೆ. ಭಾರತದಲ್ಲಿ ಆಗಿನ್ನೂ ಮಾನವಶಾಸ್ತ್ರ ಎಂಬ ವಿಷಯವು ಶೈಶವಾವಸ್ಥೆಯಲ್ಲಿದ್ದಾಗ ಅದರಲ್ಲಿ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆ.

ಇವರು ಭಾರತದ ಮೊದಲ ಮಾನವಶಾಸ್ತ್ರಜ್ಞರಾಗಿದ್ದು, ಸಮಾಜಶಾಸ್ತ್ರವನ್ನೂ ಸಹ ಅಭ್ಯಸಿಸುತ್ತಿದ್ದರು. ವಪಳೆಯುಳಿಕೆಶಾಸ್ತ್ರ ಮಾನವ ಮಾಪನ, ಮತ್ತು ಸೀರಂ ಶಾಸ್ತ್ರ ಆಕೆಯ ಪರಿಣತಿಯಕ್ಷೇತ್ರ. ಇವರು ಮಹಿಳಾ ಶಿಕ್ಷಣದ ಪ್ರವರ್ತಕರಾಗಿದ್ದರು.

 

6.ಕದಂಬಿನಿ ಗಂಗೂಲಿ(18  ಜುಲೈ 1861 -   3 ಅಕ್ಟೋಬರ್ 1923 )-

ಬ್ರಹ್ಮಸಮಾಜದ ಸುಧಾರಕರಾದ ಬ್ರಜ ಕಿಶೋರ್‌ ಬಸು ಅವರ ಮಗಳಾಗಿ ಭಾಗಲ್ಪುರಾ, ಬಿಹಾರಿನಲ್ಲಿ ಕದಂಬಿನಿ  ಜನಿಸಿದರು. ಅವರ ಕುಟುಂಬ ಮೂಲತಃ ಈಗ ಬಾಂಗ್ಲಾದೇಶದಲ್ಲಿರುವ ಬಾರಿಸಲ್‌ ಪ್ರದೇಶದ ಚಾಂದ್ಸಿ ಎಂಬ ಊರಾಗಿತ್ತು.

ಕದಂಬಿನಿ ಗಂಗೂಲಿ ಮತ್ತು ಚಂದ್ರಮುಖಿ ಬಸು ಆಗಿನ ಭಾರತದ ಹಾಗು ಬ್ರಿಟಿಷ್‌ ಸಾಮ್ರಾಜ್ಯದಲ್ಲಿದ್ದ ಇಬ್ಬರೇ ಮಹಿಳಾ ಪದವಿಧರರು. ಕದಂಬಿನಿ ಗಂಗೂಲಿ ದಕ್ಷಿಣ ಏಷ್ಯಾದಲ್ಲಿ ಪಾಶ್ಚಾತ್ಯ ಮದ್ದಿನ ತರಬೇತಿ ಪಡೆದುಕೊಂಡ ಮೊದಲನೇ ಮಹಿಳಾ ವೈದ್ಯೆ . ಆನಂದಿ ಗೋಪಾಲ್ ಜೋಶಿ, ಇನ್ನೋರ್ವ ಭಾರತೀಯ ಮಹಿಳೆ. ಅದೇ ಸಮಯದಲ್ಲಿ (೧೮೮೬) ಅಮೆರಿಕಾದಲ್ಲಿ ವೈದ್ಯರಾಗಿ ಉತ್ತೀರ್ಣಗೊಂಡರು. ಇವರು ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಗಂಗೂಲಿಯವರು ಅನೇಕ ಬಗೆಯ ಪೂರ್ವಾಗ್ರಹ ಪೀಡಿತ ಮನಸ್ಥಿತಿ ಹಾಗೂ ತಾರತಮ್ಯತೆ ವಿರುದ್ಧವೂ ಹೋರಾಡಿದವರು. ಇವರು ವೈಯಕ್ತಿಕವಾಗಿ ಸ್ವತಂತ್ರವಾಗಿ ವೈದ್ಯಕೀಯ ಅಭ್ಯಾಸವನ್ನು ಮಾಡುತ್ತಿದ್ದರಲ್ಲದೆ ರಾಜಕೀಯ ವಲಯದಲ್ಲೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಭಾರತ ದೇಶದ ಸ್ವಾತಂತ್ರ ಹೋರಾಟಗಾರ್ತಿಯಾಗಿ, ಉಪ್ಪಿನಸತ್ಯಾಗ್ರಹವನ್ನು, ಬ್ರಿಟಿಷ್ಆಳ್ವಿಕೆಯ ವಿರುದ್ಧವಾಗಿ ಸಭೆಗಳನ್ನು ಆಯೋಜಿಸಿದರು. 1906ರಲ್ಲಿ ಬಂಗಾಳದ ವಿಭಜನೆಯಾದ ನಂತರ ಕಲ್ಲಿದ್ದಲಿನ ಗಣಿಗಾರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಕಾರ್ಮಿಕರ ಸ್ಥಿತಿಯನ್ನು ಉತ್ತಮ ಪಡಿಸಲು ಹಗಲಿರುಳೆನ್ನದೆ ಶ್ರಮಿಸಿದರು.

 

7.ಅನ್ನಾಮಣಿ (23 ಆಗಸ್ಟ್ 1918  -16 ಆಗಸ್ಟ್ 2001)-

ಅನ್ನಾಮಣಿಯವರು ಕೇರಳ ಪೀರುಮೆಡು ಎಂಬಲ್ಲಿ ಜನಿಸಿದರು. ಇವರ ತಂದೆ ಸಿವಿಲ್ಇಂಜಿನೀಯರ್. ಒಟ್ಟು ಎಂಟು ಜನ ಮಕ್ಕಳಲ್ಲಿ ಅನ್ನಾಮಣಿಯವರು ಏಳನೇಯವರು. ಚಿಕ್ಕಂದಿನಿಂದಲೂ ಅವರು ತೀವ್ರ ತರದ ಓದುಗರಾಗಿದ್ದರು.

ಅನ್ನಾಮಣಿ ಒಬ್ಬ ಭಾರತೀಯ ಮಹಿಳಾ ಭೌತವಿಜ್ಞಾನಿ ಹಾಗು ಪವನಶಾಸ್ತ್ರ ವಿಜ್ಞಾನಿ.  ಇವರು ಭಾರತೀಯ ಪವನವಿಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ಮಹತ್ವದ ಕಾಣಿಕೆಯನ್ನು ಸಲ್ಲಿಸಿದ್ದಾರೆ.

ಪುಣೆಯಲ್ಲಿ ತಮ್ಮ ಸಂಶೋಧನೆ ಕೈಗೊಂಡ ಅನ್ನಾಮಣಿ. ಹವಾಮಾನ ಉಪಕರಣಗಳ ಕುರಿತು ಹಲವಾರು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. ತರಬೇತಿಯ ಮೂಲಕ ಭೌತಶಾಸ್ತ್ರಜ್ಞರಾಗಿದ್ದರು. ಹವಾಮಾನಶಾಸ್ತ್ರದಲ್ಲಿ ಪರಿಣತಿಯನ್ನು ಪಡೆದರು ಮತ್ತು ಭಾರತೀಯ ಹವಾಮಾನ ಮೇಲ್ವಿಚಾರಣಾ ವ್ಯವಸ್ಥೆಗಳಲ್ಲಿ ಅದ್ಭುತ ಬದಲಾವಣೆಗಳನ್ನು ಮಾಡಿದರು.

ಸೌರ ವಿಕಿರಣವನ್ನು ಪ್ರಮಾಣೀಕರಿಸಿದ ರೇಖಾಚಿತ್ರಗಳನ್ನು ಅಳೆಯಲು ಇವರು ಕೇಂದ್ರಗಳ ಜಾಲವನ್ನು ಸ್ಥಾಪಿಸಿದರು. ಗಾಳಿಯ ವೇಗ ಮತ್ತು ಸೌರಶಕ್ತಿಯನ್ನು ಅಳೆಯುವ ಉಪಕರಣಗಳನ್ನು ತಯಾರಿಸಲು ಕಾರ್ಯಾಗಾರಗಳನ್ನು ಹಮ್ಮಿಕೊಂಡರು ಮತ್ತು ಓಝೋನ ಪದರವನ್ನು ಅಳೆಯಲು ಉಪಕರಣವನ್ನುಅಭಿವೃದ್ಧಿಪಡಿಸಿದರು.

 

8.ರಾಜೇಶ್ವರಿ ಚಟರ್ಜಿ (24 ಜನವರಿ 1922 -  3  ಸೆಪ್ಟೆಂಬರ್  2010)-

ರಾಜೇಶ್ವರಿಯವರು  ಮೈಸೂರಿನ ಹತ್ತಿರದ ನಂಜನಗೂಡಿನಲ್ಲಿ. ಅವರ ತಂದೆ ಬಿ ಎಂ ಶಿವರಾಮಯ್ಯ, ನಂಜನಗೂಡಿನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು.

ರಾಜೇಶ್ವರಿ ಒಬ್ಬ ಕನ್ನಡತಿ ವಿಜ್ಞಾನಿ ಮತ್ತು ಶಿಕ್ಷಣತಜ್ಞೆ. ಇವರು ಕರ್ನಾಟಕದ ಮೊತ್ತ ಮೊದಲ ಮಹಿಳಾ ಎಂಜಿನಿಯರ್, ಮಾತ್ರವಲ್ಲ ಭಾರತೀಯ ವಿಜ್ಞಾನಮಂದಿರದ ಇಂಜಿನೀಯರಿಂಗ್‌ ವಿಭಾಗಕ್ಕೆ ನೇಮಕವಾದ ಮೊತ್ತ ಮೊದಲ ಮಹಿಳಾ ಉದ್ಯೋಗಿಯಾಗಿದ್ದರು. ಭಾರತೀಯ ವಿಜ್ಞಾನಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಇವರು ಎಲೆಕ್ಟ್ರಿಕಲ್‌ ಕಮ್ಯುನಿಕೇಷನ್ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಾಗಿದ್ದರು. ಅವರ ಜೀವಿತಾವಧಿಯಲ್ಲಿ ಇವರು 20 ಪಿಎಚ್ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಸುಮಾರು ನೂರಕ್ಕೂ ಸಂಶೋಧನಾ ಪತ್ರಿಕೆಗಳನ್ನು ಹಾಗೂ ಏಳು ಪುಸ್ತಕಗಳನ್ನು ಬರೆದಿದ್ದಾರೆ.

ರಾಜೇಶ್ವರಿ ಚಟರ್ಜಿಯವರು ತಮ್ಮ ಜೀವನವನ್ನು ವಿಜ್ಞಾನಕ್ಕೆಮುಡಿಪಾಗಿಟ್ಟಿದ್ದರು. 

9.ರಾಮನ ಪರಿಮಳಾ (ಜನನ 21 ನವೆಂಬರ್ 1948)

ಇವರು ಭಾರತದ ತಮಿಳುನಾಡಿನಲ್ಲಿ ಹುಟ್ಟಿ ಬೆಳೆದರು. ಶಾರದಾ ವಿದ್ಯಾಲಯ ಬಾಲಕಿಯರ ಪ್ರೌಢಶಾಲೆ ಮತ್ತು ಚೆನ್ನೈನ ಸ್ಟೆಲ್ಲಾ ಮಾರಿಸ್‌ ಕಾಲೇಜಿನಲ್ಲಿ ಓದಿದರು. ತಮ್ಮ ಎಂ.ಎಸ್ಸಿ. ಮದ್ರಾಸ್‌ ವಿಶ್ವವಿದ್ಯಾಲಯದಿಂದ (1970) ಮತ್ತು PhD ಮುಂಬೈ ವಿಶ್ವವಿದ್ಯಾಲಯದಿಂದ (1976)ಪದವಿಯನ್ನು ಪಡೆದಿದ್ದಾರೆ.

ರಾಮನ್‌ ಪರಿಮಳ ಈ ಪಟ್ಟಿಯಲ್ಲಿರುವ ಏಕೈಕ ಗಣಿತಶಾಸ್ತ್ರಜ್ಞೆ .ಬೀಜಗಣಿತಕ್ಕೆ ನೀಡಿದ ಕೊಡುಗೆಗಳಿಂದ ಹೆಸರುವಾಸಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಪರಿಣತರನ್ನು ಅಚ್ಚರಿಗೊಳಿಸುವ ಚಲನೆಯಲ್ಲಿ ಅಫೈನ್‌ ಪ್ಲೇನ್‌ನಲ್ಲಿ ಉದಾಹರಣೆಯನ್ನು ಅವರು ಪ್ರದರ್ಶಿಸಿದ್ದಾರೆ. ಅವರು ಸಂಖ್ಯಾ ಸಿದ್ಧಾಂತ, ಬೀಜಗಣಿತ, ರೇಖಾಗಣಿತ ಮತ್ತು ಸ್ಥಳಶಾಸ್ತ್ರವನ್ನು ಬಳಸುವುದರಲ್ಲಿ ಅಪಾರ ಪರಿಣತಿ ಹೊಂದಿದ್ದಾರೆ.

ರಾಮನ್‌ ಪರಿಮಳ ಇವರು ಬೀಜಗಣಿತಕ್ಕೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿ ಇವರು ಎಮೋರಿ ವಿಶ್ವವಿದ್ಯಾನಿಲಯದಲ್ಲಿ ಕಲೆ ಮತ್ತು ವಿಜ್ಞಾನದ ಗಣಿತಶಾಸ್ತ್ರದ ವಿಶೇಷ ಪ್ರಾಧ್ಯಾಪಕರಾಗಿದ್ದಾರೆ. ಹಲವು ವರ್ಷಗಳ ಕಾಲ, ಅವರು ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್‌ ಫಂಡಮೆಂಟಲ್‌ ರೀಸರ್ಚ್‌  (ಟಿಐಎಫ್ಆರ್) ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದರು. ಇವರು 2019 ರಿಂದಇನ್ಫೋಸಿಸ್‌ ಫೌಂಡೇಷನ್‌ನ ಪ್ರಶಸ್ತಿಗಾಗಿ ಗಣಿತವಿಜ್ಞಾನದ ತೀರ್ಪುಗಾರರಾಗಿದ್ದಾರೆ ಮತ್ತು  2021-2022 ರ ಅಬೆಲ್‌ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿದ್ದಾರೆ.

 

10.ಬಿಭಾ ಚೌಧುರಿ (3 ಜುಲೈ 1913 - 2 ಜೂನ್ 1991)-

ಬಿಭಾ ಚೌಧುರಿ ಇವರು ಜನಿಸಿದ್ದು ಕೋಲ್ಕತ್ತಾದಲ್ಲಿ.  ಅವರ ತಂದೆ ಬಂಕು ಬಿಹಾರಿ ಚೌಧುರಿ ವೈದ್ಯರಾಗಿದ್ದರು. ಕಣ ಭೌತಶಾಸ್ತ್ರ ಹಾಗೂ ಕಾಸ್ಮಿಕ್‌ ಕಿರಣಗಳ ಮೇಲಿನ ಇವರ ಸಂಶೋಧನೆಗಳಿಗಾಗಿ ಇವರು ಹೆಸರುವಾಸಿಯಾಗಿದ್ದಾರೆ.

ತಮ್ಮ ಪ್ರಯೋಗಗಳಿಂದ ಪೈ-ಮೆಸಾನ್ ಎಂಬ ಹೊಸ ಉಪಪರಮಾಣು ಕಣದ ಆವಿಷ್ಕಾರಕ್ಕೆ ನಾಂದಿ ಹಾಡಿದ್ದಾರೆ. ಅವರು ಭೌತಶಾಸ್ತ್ರಜ್ಞ ದೆಬೇಂದ್ರ ಬೋಸ್ ಅವರ ಅಡಿಯಲ್ಲಿ ಕೆಲಸ ಮಾಡಿದರು. ಕಾಸ್ಮಿಕ್‌ ಕಿರಣಗಳ ಮೇಲೆ ಕಾರ್ಯನಿರ್ವಹಿಸಿದ, ನೋಬಲ್‌ ಪ್ರಶಸ್ತಿ ವಿಜೇತ ಪ್ಯಾಟ್ರಿಕ್‌ ಬ್ಲಾಕೆಟ್ ಅವರೊಂದಿಗೆ ಕೂಡ ಕೆಲಸಮಾಡಿದರು. ಭಾರತಕ್ಕೆ ಬಂದ ನಂತರ ಅವರು ಪರಮಾಣು ಭೌತಶಾಸ್ತ್ರ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಹಳದಿ, ಬಿಳಿ ಕುಬ್ಜ ಆಕಾಶಕಾಯ HD 86081 ಗೆ ಇವರ ಕೊಡುಗೆಯ ಗೌರವಾರ್ಥವಾಗಿ ಬಿಭಾ ಎಂದು ಮರು ನಾಮಕರಣ ಮಾಡಲಾಗಿದೆ.

 11. ಕಮಲ ರಣದಿವ್ ( 8 ನವೆಂಬರ್ 1917-2001 )

ಕಮಲ್ ಅವರು ಪುಣೆಯಲ್ಲಿ ಜನಿಸಿದರು. ತಂದೆ ದಿನಕರ ದತ್ತಾತ್ರೇಯ ಸಮರ್ಥಂ ಮತ್ತು ತಾಯಿ ಶಾಂತಾಬಾಯಿ. ತಂದೆ ಫ಼ರ್ಗೂಸನ್‌ ಕಾಲೇಜಿನಲ್ಲಿ ಜೀವಶಾಸ್ತ್ರಜ್ಞರಾಗಿದ್ದರು. ಇವರು ಜೀವವೈದ್ಯಕೀಯ ಸಂಶೋಧಕರು, ಕ್ಯಾನ್ಸರ್‌ ಮತ್ತು ವೈರಸ್‌ಗಳ ನಡುವಿನ ಸಂಬಂಧದ ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. ಇವರು ಅಮೆರಿಕಾದ ಜಾನ್‌ ಹಾಪ್ಕಿನ್‌ ವಿಶ್ವವಿದ್ಯಾಲಯದಲ್ಲಿ ಅಂಗಾಂಶ ಕೃಷಿ ತಂತ್ರಜ್ಞಾನ ಅಭಿವೃದ್ಧಿಯ ಕ್ಷೇತ್ರದಲ್ಲಿ ಕೆಲಸ ಮಾಡಿದರು.

ಮುಂಬೈನಲ್ಲಿ ಜೀವಶಾಸ್ತ್ರದ ಪ್ರಾಯೋಗಿಕ ಪ್ರಯೋಗಾಲಯ ಮತ್ತು ಅಂಗಾಂಶಕೃಷಿ ಪ್ರಯೋಗಾಲಯವನ್ನು ಸ್ಥಾಪಿಸಲು ಅವರು ಭಾರತಕ್ಕೆ ಮರಳಿದರು. ಇವರು ಭಾರತೀಯ ಕ್ಯಾನ್ಸರ್‌ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು.

ಇವರು ಕ್ಯಾನ್ಸರ್‌ ಮತ್ತು ತಳಿಶಾಸ್ತ್ರದ ನಡುವಿನ ಸಂಬಂಧವನ್ನು ಕಂಡುಹಿಡಿಯಲು ಪ್ರಯೋಗಗಳನ್ನು ನಡೆಸಿದರು. ಇವರ ಕೆಲಸವು ಲ್ಯುಕೇಮಿಯಾ, ಸ್ತನ ಕ್ಯಾನ್ಸರ್‌ ಮತ್ತು ಅನ್ನನಾಳದ ಕ್ಯಾನ್ಸರ್‌ ನಂಥ ರೋಗಗಳ ಕಾರಣಕ್ಕೆ ನಾಂದಿ ಹಾಡಿತು. ಅವರು ಭಾರತೀಯ ಮಹಿಳಾ ವಿಜ್ಞಾನ ಸಂಘದ ಸ್ಥಾಪಕ ಸದಸ್ಯೆಯಾಗಿದ್ದರು. ೧೯೬೦ರಲ್ಲಿ ಭಾರತದ ಮೊದಲ ಅಂಗಾಂಶ ಕೃಷಿ ಪ್ರಯೋಗಾಲಯವನ್ನು ಭಾರತೀಯ ಕ್ಯಾನ್ಸರ ಸಂಶೋಧನಾ ಕೇಂದ್ರದಲ್ಲಿ(ಐ.ಸಿ.ಆರ್.ಸಿ) ಸ್ಥಾಪಿಸಿದರು.

 ‘ಹಿತ್ತಲಗಿಡಮದ್ದಲ್ಲ’ ಎನ್ನುವ ನಾಣ್ಣುಡಿಯಂತೆ ನಮ್ಮ ಭಾರತ ದೇಶದಲ್ಲಿ ಜನಿಸಿ, ಅತ್ಯುನ್ನತ ಸಾಧನೆಯನ್ನು ತೋರಿದಂಥ ಮಹಿಳಾಮಣಿಯರನ್ನು ಬಹುತೇಕ ಮರೆತಂತೆ ಆಗಿತ್ತು. ಆದರೆ, ಈಗ ನಮ್ಮ ಕೇಂದ್ರ ಸರ್ಕಾರವು ಇವರ ಹೆಸರಿನಲ್ಲಿ 11 ಪೀಠವನ್ನು ಸ್ಥಾಪಿಸಿರುವುದು ಅತ್ಯಂತ ಸ್ವಾಗತಾರ್ಹವಾಗಿದ್ದು, ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ನಮಗೆ ವಿವಿಧ ರಾಷ್ಟ್ರಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮೇರು ಸಾಧನೆಗೈದ ಮಹಿಳಾ ಸಾಧಕಿಯರ ಬಗ್ಗೆ ತಿಳಿದಿದೆ, ಆದರೆ ನಮ್ಮವರ ಬಗ್ಗೆ ನಮಗೇ ಪರಿಚಯವಿಲ್ಲ. ಈ ನಿಟ್ಟಿನಲ್ಲಿ ಈ ಲೇಖನ ಒಂದು ಸಣ್ಣ ಪ್ರಯತ್ನ.

ಈ ಸಾಧಕರಿಂದಾಗಿ ಮಹಿಳೆಯರಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟಂತೆ ಆಗಿದೆ. ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರಿಗೆ ಇವರೆಲ್ಲಾ ಉತ್ತಮ ಸ್ಫೂರ್ತಿ ಮತ್ತು ಪ್ರೇರಕರಾಗಿದ್ದಾರೆ. ಇವರ ಸಾಧನೆ, ಕಾರ್ಯಕ್ಷಮತೆ, ಹಾಗೂ ಕಾರ್ಯತತ್ಪರತೆಗೆ ನನ್ನದೊಂದು ದೊಡ್ಡ ನಮಸ್ಕಾರ.

 

 

7 comments:

  1. ಮಹಿಳಾ ದಿನಕ್ಕೆ ಸಮರ್ಪಕ ಮಾಹಿತಿಯನ್ನೊ ಳಗೊಂಡ ಮತ್ತು ಅತ್ಯುತ್ತಮ ಲೇಖನ 👌👌

    ReplyDelete
  2. ಉತ್ತಮ ವಾದ ಲೇಖನ ರೂಪ ಮೇಡಂ

    ReplyDelete
  3. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಎಲೆಮರೆಯ ಕಾಯಂತಿದ್ದ ಅಪ್ರತಿಮ ಸಾಧಕರುಗಳನ್ನು 11 ಜನ ಸಸ್ಯಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ಮೊಟ್ಟಮೊದಲ ಇಂಜಿನಿಯರ್, ( ಅಭಿಯಂತರು) ಇವರ ಸಾಧನೆ ಕೊಡುಗೆಗಳನ್ನು ಪರಿಚಯಿಸಿದ ರೂಪ ಮೇಡಂ ರವರಿಗೆ ಧನ್ಯವಾದಗಳು

    ReplyDelete
  4. Superb article great women kudos to you mam

    ReplyDelete