Saturday, March 4, 2023

ಸವಾಲಿಗೆ ಸವಾಲ್– ನೀನಾ……

ಸವಾಲಿಗೆ ಸವಾಲ್ ನೀನಾ…… 

                                                                                                          ಲೇಖಕಿ:  ಚಂದ್ರಕಲಾ. ಆರ್.‌  ಗಣಿತಶಿಕ್ಷಕಿ

ಕರ್ನಾಟಕಪಬ್ಲಿಕ್‌ ಶಾಲೆ,  

ಕೊಡಿಗೆಹಳ್ಳಿ, ಬೆಂಗಳೂರುಉತ್ತರ ವಲಯ-4.

ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ತಮ್ಮ ಅಸಾಧಾರಣ ಪ್ರತಿಭೆಯಿಂದ ಅಂತರರಾಷ್ಟ್ರೀಯ ಮನ್ನಣೆ ಗಳಿಸಿರುವ ಗಣಿತಜ್ಞೆ ಪ್ರೊ. ನೀನಾಗುಪ್ತಾ ಅವರನ್ನು ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ʼಸವಿಜ್ಞಾನʼದ ಓದುಗರಿಗೆ ಪರಿಚಯಿಸುತ್ತಿದ್ದಾರೆ ಶಿಕ್ಷಕಿ ಚಂದ್ರಕಲಾ ಅವರು

          ಹಿಂದಿನ ಲೇಖನದಲ್ಲಿ ಭಾರತ ಸಂಜಾತ ಗಣಿತಶಾಸ್ತ್ರಜ್ಞೆ ಭಾಮ ಶ್ರೀನಿವಾಸನ್ ಬಗ್ಗೆ ನನ್ನ ಲೇಖನ ಓದಿದ ಕೆಲವು ವಿದ್ಯಾರ್ಥಿಗಳು, ಅಬ್ಬಾ! ಗಣಿತ ಕ್ಷೇತ್ರದಲ್ಲಿ ಮಹಿಳೆಯರೂ ಇದ್ದಾರಲ್ಲಾ ಎಂದುಸಮಾಧಾನಪಟ್ಟರೆ, ಕೆಲವರು, ಭಾರತ ಸಂಜಾತೆಯರು ಇರಲಿ ಮಿಸ್, ಭಾರತದಲ್ಲಿಯೇ ಯಾರೂ ಇಲ್ಲವೇ? ಎಂದು ಕೇಳಿದರು. ಯಾಕಿಲ್ಲ? ಜ್ಞಾನಕ್ಕೆ ಯಾವುದೇ ದೇಶ, ಭಾಷೆ,  ಸ್ಥಳ, ಕಾಲದ ಹಂಗಿಲ್ಲ. ಇದಕ್ಕೆ ಭಾರತವೂ ಹೊರತಲ್ಲ. ಈ ನಿಟ್ಟಿನಲ್ಲಿ ಚಿಂತಿಸಿದಾಗ, ಭಾರತದ ಒಂದು ಅಪ್ರತಿಮ, ಅಸಾಧಾರಣ, ಯುವ ಪ್ರತಿಭೆಯನ್ನು, ಅಂದರೆ ಗಣಿತಜ್ಞೆಯನ್ನು ನಿಮಗೆ ಪರಿಚಯ ಮಾಡಿಕೊಡಬೇಕು ಎನಿಸಿತು.

                ಅವರು ಯಾರಪ್ಪ! ಅಂತ ಯೋಚಿಸುತ್ತಿದ್ದೀರಾ?

 ಇವರು ಕೇವಲ 39 ವರ್ಷದ ಮಹಿಳೆ. ಓದುಗರಲ್ಲಿ ಕೆಲವರು ಓ ನನಗಿಂತ ಚಿಕ್ಕವರು! ಅಂತ ಅಚ್ಚರಿ ಪಡುತ್ತಾ ಇದ್ದೀರಿ ಅಲ್ವಾ?  ಆದರೆ, ಅವರು ಮಾಡಿದ್ದು ಒಂದು ಅಪರೂಪದ ಸಾಧನೆ. ಸುಮಾರು 70 ವರ್ಷಗಳಿಂದ ಸೈದ್ಧಾಂತಿಕ ಭೌತಶಾಸ್ತ್ರ ಮತ್ತು ಗಣಿತ (Theoretical Physics and Mathematics) ಕ್ಷೇತ್ರದಲ್ಲಿ ಸವಾಲಾಗಿ ಉಳಿದಿದ್ದಂಥ zariski cancellation problem ಗೆ ಪರಿಹಾರವನ್ನು ಸೂಚಿಸಿದ ಶ್ರೇಯ ಈಕೆಗೆ ಸಲ್ಲುತ್ತದೆ.

ಇವರೇ ನಮ್ಮ ನೀನಾಗುಪ್ತಪ್ರೊಫೆಸರ ನೀನಾಗುಪ್ತ International Centre for Theoretical Physics- Italy ವತಿಯಿಂದ  ರಾಮಾನುಜನ್‌ ಪ್ರಶಸ್ತಿ ಪಡೆದ ಯುವ ಗಣಿತಶಾಸ್ತ್ರಜ್ಞೆ.

ಇವರು ಜನಿಸಿದ್ದು 1984 ರಲ್ಲಿ, ಕೊಲ್ಕತ್ತಾದ ಒಂದು ಸಾಧಾರಣ ಪರಿವಾರದಲ್ಲಿ. ನೀನಾರಿಗೆ ಚಿಕ್ಕಂದಿನಿಂದಲೇ ಗಣಿತದಲ್ಲಿ ಅಪಾರ ಆಸಕ್ತಿ ಇತ್ತು. ತಂದೆಯೊಡನೆ ಗಣಿತದ ಒಗಟುಗಳನ್ನು ಬಿಡಿಸುವುದೆಂದರೆ ಇವರಿಗೆ ಇನ್ನಿಲ್ಲದ ಪ್ರೀತಿ. ಪ್ರತಿಭಾವಂತೆಯಾಗಿದ್ದ ಈಕೆ, ಈಗಿನ ಎಲ್ಲಾ ಮಕ್ಕಳಂತೆ ತನ್ನ ವೃತ್ತಿಯ ಕೋರ್ಸ್ ಆಯ್ಕೆ ಮಾಡಿಕೊಳ್ಳುವಾಗ ಇಂಜಿನಿಯರಿಂಗ್ ಅಥವಾ ಮೆಡಿಕಲ್‌ ತೆಗೆದುಕೊಳ್ಳಬೇಕೇ ? ಇಲ್ಲ, ಮೂಲ ವಿಜ್ಞಾನದ ಅಧ್ಯಯನ ಮುಂದುವರೆಸಬೇಕೆ ?ಎಂಬ ಸವಾಲು ಎದುರಾಯಿತು. ಈ ದ್ವಂದ್ವಕ್ಕೆ ಉತ್ತರಿಸಿದ್ದು ಇವರ ಹೃದಯ ಮತ್ತು ಸೆಳೆದದ್ದು ಮೂಲ ವಿಜ್ಞಾನ - ಗಣಿತ. ಹಾಗಾಗಿ, ಸೇರಿದ್ದು B. Sc honors mathematics, Bethune ಕಾಲೇಜ್, ಕೊಲ್ಕತ್ತಾ. 2006 ರಲ್ಲಿ.  ಇಲ್ಲಿಂದ ಗಣಿತದಲ್ಲಿ ಪದವಿ ಪಡೆದ ನಂತರ 2008 ರಲ್ಲಿ ಇವರು ಗಣಿತದಲ್ಲಿಯೇ ತಮ್ಮ ಸ್ನಾತಕೋತ್ತರ ಪದವಿಯನ್ನು Indian statistical Institute- ಕೊಲ್ಕತ್ತಾದಿಂದ ಪಡೆದರು. ನಂತರ ಮುಂದಿನ ಕೇವಲ ಎರಡೇ ವರ್ಷಗಳಲ್ಲಿ ತಮ್ಮ Ph.D ಪದವಿಯನ್ನು Commutative Algebra ಎಂಬ ವಿಷಯದ ಮೇಲಿನ ಪ್ರೌಢ ಪ್ರಬಂಧಕ್ಕಾಗಿ ಪಡೆದರು.

 ಪದವಿ ಪಡೆಯುವ ಸಂದರ್ಭದಲ್ಲಿಯೇ ಇವರಿಗೆ ಅಲ್ಲಿಯವರೆಗೂ ಯಾರೂ ಬಿಡಿಸದ ಸವಾಲಾಗಿದ್ದ “Zariski cancellation problem” ನಲ್ಲಿ ಇವರಿಗೆ ಅತೀವ ಆಸಕ್ತಿ ಮೂಡಿತು. ಅದನ್ನು ಬಿಡಿಸುವ ಮನಸ್ಸು ಮಾಡಿದರು. ಆದರೆ, ಇವರ ಗುರುಗಳಾದ ಅಮರ್ತ್ಯದತ್ತರಿಂದ ದೊರೆತ ಮಾರ್ಗದರ್ಶನದಂತೆ ಮೊದಲು Ph.D ಕಡೆಗೆ ಗಮನಹರಿಸಿ ಆ ಪದವಿಯನ್ನು ಪಡೆದರು. ಆದರೆ, ಅವರ ನಿದ್ದೆಗೆಡಿಸುತ್ತಿದ್ದದ್ದು ಮಾತ್ರ Zariski cancellation problem. ಇದನ್ನು ಅವರದೇ ಮಾತುಗಳಲ್ಲಿ ಅರ್ಥಮಾಡಿಕೊಳ್ಳುವುದಾದರೆ,

 a X x  = a X y   ಆದರೆ   a =  y 

 ಓ ! ಅರ್ಥ ಮಾಡಿಕೊಳ್ಳುವುದು ತುಂಬಾ ಸುಲಭ .ಅನಿಸುತ್ತದೆ ಅಲ್ಲವೇ?

ಏನಾದರೂ ಸೊನ್ನೆ ಆದರೆ?? (if a = 0)

 ನಾವಂದುಕೊಂಡಂತೆ x =y ಆಗುವುದಿಲ್ಲ. ಹಾಗಾಗಿ, ನಾವು ಎಚ್ಚರಿಕೆಯಿಂದ ಇರಬೇಕು.

 ಅದರಲ್ಲೂ ಇವರು ಅಧ್ಯಯನ ಮಾಡುತ್ತಿರುವುದು Algebraic Number Theory ಯಲ್ಲಿ ಬರುವ  Rings ಮತ್ತು  Groups ಇತ್ಯಾದಿಗಳ ಬಗ್ಗೆ, ಮೂರಕ್ಕಿಂತ ಹೆಚ್ಚು ಆಯಾಮಗಳ ಬಗ್ಗೆ. ( about multi dimensions in space and universe ). ಅವರೇ ಹೇಳುವಂತೆ,

" If you have cylinders over 2 geometric structures  that have similar forms. Can one conclude that the original base structures have similar forms? "




 ಅಂದರೆ, ಯಾವುದಾದರೂ ಒಂದೇ ತೆರೆನಾದ ರೇಖಾ ಗಣಿತೀಯ ಸಂರಚನೆಗಳ (Structures) ಮೇಲೆ ಸಿಲಿಂಡರ್‌ಗಳು ಇದ್ದರೆ, ಮೂಲ ಸಂರಚನೆಯು ಒಂದೇ ಆಗಿದೆ ಎಂದು ತೀರ್ಮಾನಿಸಲು ಸಾಧ್ಯವೇ? ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಸೂಚಿಸಬಹುದಾದ ಗಣಿತ ಸಮಸ್ಯೆಗಳನ್ನು ಬಿಡಿಸುವುದರಲ್ಲಿ ನೀನಾಗುಪ್ತ ತೊಡಗಿಸಿಕೊಂಡರು. ತಾವು ಕಂಡುಕೊಂಡಂಥ ಪರಿಹಾರವನ್ನು ಗುರುಗಳೊಂದಿಗೆ ಹಂಚಿಕೊಂಡರು.

ಧನ ಆಯಾಮಗಳಿಗೆ ಈವರೆಗೂ ಬಿಡಿಸಲಾಗದ ಸಮಸ್ಯೆ ಆದಂಥ Zariski cancellation problem ಗೆ ಪರಿಹಾರ ಕಂಡುಹಿಡಿದ ಮೊದಲಿಗರಾದರು. ಇವರ ಈ ಅಧ್ಯಯನವು String theory ಯಂಥ ಅನೇಕ ಸೈದ್ಧಾಂತಿಕ ಭೌತ ಪರಿಕಲ್ಪನೆಗಳಿಗೆ ಪುಷ್ಟಿ ನೀಡುವುದಾಗಿದ್ದು ಬಹಳ ಮಹತ್ವವನ್ನು ಪಡೆದಿದೆ.

ಈಗಲೂ ಇವರ ಅಧ್ಯಯನ ಮತ್ತು ಅಧ್ಯಾಪನ ಈ ಕೆಳಗಿನ ಕ್ಷೇತ್ರಗಳಲ್ಲಿ ನಡೆಯುತ್ತಿದೆ.

  •  Commutative Algebra
  •  Affine Algebraic Geometry

 ಇವರ ಈ ಸಾಧನೆಗಳಿಗಾಗಿ ಅನೇಕ ಪ್ರಶಸ್ತಿಗಳು ಇವರನ್ನು ಅರಸಿಬಂದಿವೆ.

2013 ರಲ್ಲಿ ಸರಸ್ವತಿ ಕೌಶಿಕ್‌ ಮೆಡಲ್ TIFR ( Tata Institute of Fundamental Research) ವತಿಯಿಂದ.

2014 ರಲ್ಲಿ ಯುವ ವಿಜ್ಞಾನಿ ಪುರಸ್ಕಾರ Indian National Science Academy ಯಿಂದ.

2019 ರಲ್ಲಿ ಶಾಂತಿ ಸ್ವರೂಪ ಭಟ್ನಾಗರ್‌ ಪ್ರಶಸ್ತಿ.

2022 ರಲ್ಲಿ ಭಾರತ ಸರ್ಕಾರದಿಂದ ನಾರಿಶಕ್ತಿ ಪುರಸ್ಕಾರ.

2022 ರಲ್ಲಿ ರಾಮಾನುಜನ್‌ ಪುರಸ್ಕಾರ.

ರಾಮಾನುಜನ್‌ ಪ್ರಶಸ್ತಿಯನ್ನು ಪಡೆದ ಮೂರನೆಯ ಭಾರತೀಯರು ಮತ್ತು ಎರಡನೆಯ ಮಹಿಳೆ ಎಂಬ ಹೆಗ್ಗಳಿಕೆಗೆ ಪ್ರೊಫೆಸರ್‌ ನೀನಾಗುಪ್ತ ಪಾತ್ರರಾಗಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಪ್ರಶಸ್ತಿಯನ್ನು 45 ವರ್ಷಕ್ಕಿಂತ ಚಿಕ್ಕಪ್ರಾಯದ ಗಣಿತಜ್ಞರಿಗೆ ಮಾತ್ರ ನೀಡಲಾಗುತ್ತದೆ.

ಇವೇ ಅಲ್ಲದೆ 2022ರಲ್ಲಿ ಇವರನ್ನು International Congress of  Mathematicians (ಅಂತರರಾಷ್ಟ್ರೀಯ ಗಣಿತಶಾಸ್ತ್ರಜ್ಞರ ಸಮ್ಮೇಳನ) ದಲ್ಲಿ ತಮ್ಮ ವಿಚಾರವನ್ನು ಮಂಡಿಸಲು ಆಹ್ವಾನಿಸಲಾಗಿತ್ತು.

  ಇಂಥ ಅಪ್ರತಿಮ ಪ್ರತಿಭೆ ಪ್ರೊಫೆಸರ್ ನೀನಾಗುಪ್ತ ಪ್ರಸ್ತುತ Indian statistical Institute ನಲ್ಲಿ ಗಣಿತ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ತಮ್ಮ ಸಂಶೋಧನೆಯನ್ನು ಮುಂದುವರೆಸುತ್ತಿದ್ದಾರೆ……ಇಂಥ ಅಪ್ರತಿಮ ಪ್ರತಿಭೆ ನಮ್ಮೆಲ್ಲರಿಗೂ ಸ್ಫೂರ್ತಿ. ಇವರು ಇನ್ನೂ ಹೆಚ್ಚಿನದನ್ನು ಸಾಧಿಸಲಿ ಎಂದು ನಾವೆಲ್ಲರೂ ಆಶಿಸೋಣ……………….



 


2 comments:

  1. ವಿವರವಾದಂತಹ ಮಾಹಿತಿಗೆ ಧನ್ಯವಾದಗಳು ಮೇಡಂ ನಿಮ್ಮ ಶೈಲಿ ಅದ್ಭುತವಾಗಿದೆ ಮುಂದುವರೆಸಿ ನಿಮ್ಮಿಂದ ಇನ್ನೂ ಉತ್ತಮ ಲೇಖನಗಳು ಬರಲಿ

    ReplyDelete