Saturday, March 4, 2023

ಕರೋನಾ ನಂತರದ ಕಲಿಕೆಯು. . . . ಪಬ್ಲಿಕ್‌ ಪರೀಕ್ಷೆಯು . . .

 ಕರೋನಾ ನಂತರದ ಕಲಿಕೆಯು. . .  . ಪಬ್ಲಿಕ್‌ ಪರೀಕ್ಷೆಯು . . . 

                                       ಶಶಿಕುಮಾರ್‌.ಬಿ.ಎಸ್

    

 

(“I find that the harder I work, the more luck I seem to have” Thomas Jefferson)

ಇನ್ನೇನು ಮಾರ್ಚ್‌ ತಿಂಗಳಲ್ಲಿ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಈ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಹೇಗೆ ತಯಾರು ಮಾಡಬೇಕು? ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಕರೋನಾದಂತಹ ಪ್ಯಾಂಡಮಿಕ್‌ ನಂತರ ಹೇಗೆ ಸಾಧಿಸುವುದು? ನಾವುಗಳು ಇನ್ನುಳಿದ ಪರೀಕ್ಷಾ ದಿನಗಳನ್ನು ವಿದ್ಯಾರ್ಥಿಗಳಿಗೆ ಸದುಪಯೋಗ  ಪಡಿಸಿಕೊಳ್ಳುವಂತೆ ಹೇಗೆ ಯೋಜನೆ ರೂಪಿಸುವುದು ಎನ್ನುವ ಹಲವು ಹತ್ತು ಸಮಸ್ಯೆಗಳು ಎದುರಾಗಿವೆ. ಇದಕ್ಕೆ ಕಾರಣ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಈ ವರ್ಷ ಪ್ರಾರಂಭವಾಗಿರುವುದು. ಅದರಲ್ಲೂ ಈ ಶೈಕ್ಷಣಿಕ ವರ್ಷವು ೨೦೨೨ರ ಮೇ ತಿಂಗಳ ೧೫ನೇ ತಾರೀಖಿನಿಂದಲೇ ಪ್ರಾರಂಭವಾದವು. ಶಾಲೆ ಏನೋ ಪ್ರಾರಂಭವಾಯಿತು ಆದರೇ, ವಿದ್ಯಾರ್ಥಿಗಳಿಗೆ ಕಲಿಕೆ ಅನುಕೂಲಿಸುವ ವಿಧಾನವು ಸಂಪೂರ್ಣವಾಗಿ ಬದಲಾಯಿತು. ಪ್ರಾರಂಭದಲ್ಲಿ ಹೊಸ ಪದ್ಧತಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳಲು ಕಷ್ಟವೆನಿಸಿದರೂ, ನಾವೀನ್ಯಾತಾ ಬೋಧನಾ ವಿಧಾನಗಳನ್ನು ಅಳವಡಿಸಿ ಶೈಕ್ಷಣಿಕ ವರ್ಷದ ಅಂತ್ಯವನ್ನು ತಲುಪಿದ್ದೇವೆ. ಸ್ನೇಹಿತರೇ ಈ ಶೈಕ್ಷಣಿಕ ಸಾಲಿನಲ್ಲಿ ನಾವು ಗರಿಷ್ಟ ತರಗತಿಗಳನ್ನು ಕೈಗೊಂಡಿದ್ದೇವೆ. ಆದರೂ ನಮ್ಮ ವಿದ್ಯಾರ್ಥಿಗಳ ಕಲಿಕೆಯಲ್ಲಿ ನಾವು ಪ್ರಗತಿ ಸಾಧಿಸಲು ನಾವು ಕೊಂಚ ಹಿಂದುಳಿದಿದ್ದೇವೆ ಎನ್ನವುದು ನನ್ನ ವೈಯಕ್ತಿಕ ಅನಿಸಿಕೆ. ಅದರಲ್ಲೂ ನಾವು ಈ ವರ್ಷ ಗುಣಾತ್ಮಕ ಶಿಕ್ಷಣದ ಪ್ರಗತಿ ಸಾಧಿಸುವ ಸಲುವಾಗಿ ಇಲಾಖೆಯು ೧೦ನೇ ತರಗತಿಯ ಜೊತೆಗೆ 5ನೇ ತರಗತಿ ಮತ್ತು 8ನೇ ತರಗತಿಗೂ ಪಬ್ಲಿಕ್‌ ಪರೀಕ್ಷೆಯ ರೀತಿ ಪರೀಕ್ಷೆ ಕೈಗೊಳ್ಳುತ್ತಿರುವುದರಿಂದ  ನಾವುಗಳೆಲ್ಲರೂ ಕಠಿಣ ಪರಿಶ್ರಮ ಮತ್ತು ಸುಲಭ ತಂತ್ರಗಳಿಂದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಾಗಿದೆ. ಹಾಗಾಗಿ ನನ್ನ ಅನುಭವದ ಕೆಲವು ಸಲಹಾತ್ಮಕ ಯೋಜನೆಗಳನ್ನು ನಿಮ್ಮ ಮುಂದೆ ಈ ಅಂಕಣದಲ್ಲಿ ಪರಿಚಯಿಸಲು ಇಚ್ಛಿಸುತ್ತೇನೆ.

ಕರೋನಾ ನಂತರದಲ್ಲಿ ಬೋಧನೆ ಮತ್ತು ಕಲಿಕೆ ಎಲ್ಲವೂ ಬದಲಾಗಿದೆ. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಕುಂಠಿತವಾಗಿದೆ. ಶಿಕ್ಷಕರಾದ ನಾವುಗಳು ವಿದ್ಯಾರ್ಥಿಗಳ ಕಲಿಕೆಗೆ ಶ್ರಮಪಡುವುದಕ್ಕಿಂತ, ಅವರುಗಳನ್ನು ತರಗತಿ ಕೋಣೆಯಲ್ಲಿ ಹಿಡಿದಿಟ್ಟುಕೊಳ್ಳುವುದೇ ದೊಡ್ಡ ಸಾಧನೆಯಾಗಿದೆ. ಕರೋನಾ ಪ್ಯಾಂಡಮಿಕ್‌ ಕಾಲದಲ್ಲಿ ಮೊಬೈಲ್‌ ಬಳಕೆಯಿಂದಲಾದರೂ ಒಂದಷ್ಟು ಕಲಿಕೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಇಲಾಖೆ ಶಿಕ್ಷಕರಿಗೆ ಪ್ರೋತ್ಸಾಹಿಸಿ ಆನ್‌ಲೈನ್‌ ಬೋಧನೆ, ದೂರದರ್ಶನ ಪಾಠ, ವೆಬಿನಾರ್‌ಗಳ ಬಳಕೆ ಹೀಗೆ ನಾನಾ ರೀತಿಯಲ್ಲಿ ಪ್ರಯತ್ನಿಸಿತಾದರೂ ಮಕ್ಕಳಲ್ಲಿ ಕಲಿಕೆ ಕನಿಷ್ಟವಾಗಿದೆ. ಆದರೆ ಇಲೆಕ್ಟ್ರಾನಿಕ್‌ ಸಾಧನಗಳ ಬಳಕೆಯಲ್ಲಿ ವಿದ್ಯಾರ್ಥಿಗಳು ನಿಪುಣರಾಗಿದಾರೆ. ನಗರ ಪ್ರದೇಶದ ಶಾಲೆಗಳಲ್ಲಂತೂ ಈ ಸಾಧನಗಳ ಬಳಕೆಯಲ್ಲಿ ವಿದ್ಯಾರ್ಥಿಗಳನ್ನು ನಿಯಂತ್ರಿಸುವುದು ಸವಾಲೆನಿಸಿದೆ. ಇದರ ಹೊರತಾಗಿಯೂ ಗುಣಾತ್ಮಕ ಶಿಕ್ಷಣ ಮತ್ತು ಗುಣಾತ್ಮಕ ಶೈಕ್ಷಣಿಕ ಪ್ರಗತಿಗೆ ನಾವೆಲ್ಲಾ ಶ್ರಮಿಸಬೇಕಿದೆ.


ನಾವೀಗ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಲ್ಲಿರುವ ಜ್ಞಾನ ತುಂಬುವುದಕ್ಕಿಂತ, ನೈತಿಕಶಿಕ್ಷಣ ಮತ್ತು ಜೀವನಕೌಶಲಗಳ ಜ್ಞಾನ ತುಂಬುವ ಕಾರ್ಯ ಹೆಚ್ಚು ಮಾಡಬೇಕಿದೆ. ಪರೀಕ್ಷೆ ಎಂದರೆ ಭಯ ಅನ್ನುವ ಬದಲು ಮಕ್ಕಳು ಪರೀಕ್ಷೆ ಎಂದರೆ ಹಬ್ಬ ಎನ್ನುವ ರೀತಿಯಲ್ಲಿ ಮಕ್ಕಳನ್ನು ಸ್ಫೂರ್ತಿದಾಯಕ ಮಾತುಗಳಿಂದ ಪ್ರೇರೇಪಿಸಬೇಕಾಗಿದೆ. ಶಿಕ್ಷಕರು ಆಯಾ ವಿಷಯಗಳಲ್ಲಿ ಯಾವ ವಿದ್ಯಾರ್ಥಿಗಳು ಎಷ್ಟರ ಮಟ್ಟಿಗೆ ಕಲಿಕೆಯನ್ನು ರೂಢಿಸಿಕೊಂಡಿದ್ದಾರೆ ಎನ್ನವುದನ್ನು ಖಾತ್ರಿ ಪಡಿಸಿಕೊಂದು ವಿದ್ಯಾರ್ಥಿಗಳ ಕಲಿಕೆಯ ಮಟ್ಟಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆ ರೂಪಿಸಿಕೊಳ್ಳಬೇಕು. ಉದಾಹರಣೆಗೆ ಕಲಿಕೆಯಲ್ಲಿ ತಮ್ಮನ್ನು ಉತ್ತಮವಾಗಿ ತೊಡಗಿಸಿಕೊಂಡ ವಿದ್ಯಾರ್ಥಿಗಳಿಗೆ ಪೂರ್ಣ ಕಲಿಕಾ ಸಾಮರ್ಥ್ಯಗಳನ್ನು ಅಭ್ಯಾಸ ಮಾಡಿ ಸಿದ್ಧರಾಗಲು ತಿಳುವಳಿಕೆ ನೀಡುವುದು. ಕಲಿಕೆಯಲ್ಲಿ ಸಾಮಾನ್ಯವಾಗಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಬಹು ನೀರೀಕ್ಷಿತ ಕಲಿಕಾ ಸಾಮರ್ಥ್ಯಗಳನ್ನು ಅಭ್ಯಾಸ ಮಾಡಿ ಸಿದ್ಧರಾಗಲು ಯೋಜನೆ ರೂಪಿಸುವುದು. ಸಮಸ್ಯೆಯೆಂದರೆ ನಿಧಾನಗತಿ ಕಲಿಕೆಯಲ್ಲಿರುವವರಿಗೆ ಮತ್ತು ಕಲಿಕೆಗೆ ಆಸಕ್ತಿ ತೋರದೇ ಇರುವ ವಿದ್ಯಾರ್ಥಿಗಳಿಗೆ ಯೋಜನೆ ರೂಪಿಸುವುದ. ಇಂತಹ ವಿದ್ಯಾರ್ಥಿ ಸಮೂಹಕ್ಕೆ ಎಂತಹ ಕಲಿಕಾ ಸಾಮರ್ಥ್ಯಗಳನ್ನು ಆಯ್ಕೆಮಾಡಿ ಯೋಜನೇ ರೂಪಿಸಿದರೂ ಆ ವಿದ್ಯಾರ್ಥಿಗಳಿಗೆ ಕಷ್ಟಕರವೇ. ಆದರೂ ವಿದ್ಯಾರ್ಥಿಗಳಲ್ಲಿ ಕನಿಷ್ಟ ಕಲಿಕೆಯನ್ನಾದರೂ ಖಾತ್ರಿ ಪಡಿಸುವ ಉದ್ದೇಶದಿಂದ ಯೋಜನೆ ರೂಪಿಸಲೇ ಬೇಕಾಗಿದೆ.

ಈ ನಿಟ್ಟಿನಲ್ಲಿ ವಿಜ್ಞಾನ ಶಿಕ್ಷಕನಾದ ನಾನು ವಿಜ್ಞಾನ ವಿಷಯದಲ್ಲಿ ಅಂದರೆ ಹತ್ತನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಮೂರೂ ಗುಂಪಿನ ವಿದ್ಯಾರ್ಥಿಗಳಿಗೆ  ಮುಂದಿನ ವಾರ್ಷಿಕ ಪರೀಕ್ಷೆಗೆ ಇನ್ನುಳಿದ ದಿನಗಳಲ್ಲಿ ಹೇಗೆ ತಯಾರಿ ನಡೆಸುವುದು ಎನ್ನುವ ಕೆಲವು ಮಾರ್ಗೋಪಾಯಗಳ ಸಲಹೆ ನೀಡಲಿಚ್ಚಿಸುತ್ತೇನೆ. ಈ ರೀತಿಯ ಕ್ರಿಯಾ ಯೋಜನೆ ರೂಪಿಸಿಕೊಂಡು ನಾನು ನನ್ನ ವಿಷಯದಲ್ಲಿ ಯಶಸ್ಸು ಕಂಡದ್ದೂ ಇದೆ. ಇದಕ್ಕೆ ಪೂರಕವಾಗಿ ಕಳೆದ ಹತ್ತು ವರ್ಷಗಳಿಂದ ನಾನು ಬೋಧಿಸುವ ವಿಜ್ಞಾನ ವಿಷಯದಲ್ಲಿ ಪ್ರತಿಶತ ೧೦೦ಕ್ಕೆ ೧೦೦ ರಷ್ಟು ಫಲಿತಾಂಶವೇ ಸಾಕ್ಷಿಯಾಗಿದೆ. ಅದರಲ್ಲೂ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳು ಶೇಕಡಾ ೭೦ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುವುದು ಆಸಕ್ತಿದಾಯಕ ವಿಷಯವಾಗಿದೆ.

ಹಾಗಾಗಿ ನೀವುಗಳು ಕೂಡ ಇದೇ ರೀತಿಯ ಕ್ರಿಯಾ ಯೋಜನೆ ರೂಪಿಸಿದರೆ ಯಶಸ್ಸು ನಿಶ್ಚಿತ.

ವಿಜ್ಞಾನ ವಿಷಯದಲ್ಲಿ ಸ್ಮಾರ್ಟ್‌ ಆಗಿ ಪರೀಕ್ಷೆಗೆ ಅಭ್ಯಾಸ ನಡೆಸುವ ವಿಧಾನ ಹೇಗೆ? ನೋಡೋಣ.

೧. ಪರೀಕ್ಷಾ ಮಂಡಲಿಯಿಂದ ಈಗಾಗಲೇ ಹೊಸ ಪಠ್ಯಕ್ರಮವನ್ನು ಅನುಷ್ಟಾನಗೊಳಿಸಿದಾಗ ನೀಡಲಾದ ೩೦ ಚಿತ್ರಗಳ ಪಟ್ಟಿ ಇದೆ. ಈ ಚಿತ್ರಗಳನ್ನು ದಿನಕ್ಕೆ ಮೂರು ಚಿತ್ರಗಳಂತೆ ಅಭ್ಯಾಸ ಮಾಡಿದರೆ ಹತ್ತು ದಿನಗಳಲ್ಲಿ ೧೨ ಅಂಕಗಳಿಗೆ ಸಿದ್ಧಗೊಳ್ಳಬಹುದು.

 
೨. ಕಾರ್ಬನ್‌ ಮತ್ತು ಅದರ ಸಂಯುಕ್ತಗಳು ಅಧ್ಯಾಯದಲ್ಲಿ ಇಲೆಕ್ಟ್ರಾನ್‌ ಚುಕ್ಕಿ ರಚನೆ/ಹೈಡ್ರೋಕಾರ್ಬನ್‌ಗಳ ಅಣು ಸೂತ್ರ/ ರಚನಾ ವಿನ್ಯಾಸ/ ಹೈಡ್ರೋಕಾರ್ಬನ್‌ ಸಂಯುಕ್ತಗಳನ್ನು ಹೆಸರಿಸುವುದನ್ನು ಅಭ್ಯಾಸ ಮಾಡಿದರೆ ಕನಿಷ್ಟ ಅಂಕಗಳು

೩. ಆಮ್ಲಗಳು ಮತ್ತು ಪ್ರತ್ಯಾಮ್ಲಗಳ ಅಧ್ಯಾಯದಲ್ಲಿನ ಲವಣಗಳ ಉಪಯೋಗ, ಎಥನಾಲ್‌/ ಎಥನೋಯಿಕ್‌ ಆಮ್ಲ ಇವುಗಳ ಅಣು ಸೂತ್ರ/ ಸಾಮಾನ್ಯ ಹೆಸರು/ ರಾಸಾಯನಿಕ ಹೆಸರು ಮತ್ತು ಈ ಸಂಯುಕ್ತಗಳ ಕನಿಷ್ಟ ಎರಡು ಉಪಯೋಗಗಳನ್ನು ಅಭ್ಯಾಸ ಮಾಡಿ ನೆನಪಿಟ್ಟು ಕೊಂಡರೆ ಕನಿಷ್ಟ ಅಂಕಗಳು.

೪. ಸರಳವಾದ ರಾಸಾಯನಿಕ ಸಮೀಕರಣಗಳನ್ನು ಬರೆಯುವುದು ಮತ್ತು ಅವುಗಳನ್ನು ಸರಿದೂಗಿಸುವುದು ಕಲಿತರೆ ಕನಿಷ್ಟ ಅಂಕಗಳು.


೫. ಲೆಕ್ಕದ ಸಮಸ್ಯೆಗಳನ್ನು ಪರಿಹರಿಸಲು ಕೇವಲ ಎರಡು ಅಧ್ಯಾಯಗಳು ಅಂದರೆ ವಿದ್ಯುಚ್ಛಕ್ತಿ ಮತ್ತು ಬೆಳಕು: ಪ್ರತಿಫಲನ ಮತ್ತು ವಕ್ರೀಭವನ ಗಳಲ್ಲಿನ ಸೂತ್ರಗಳು ಮತ್ತು ಏಕಮಾನಗಳನ್ನು ನೆನಪಿಟ್ಟುಕೊಂಡರೆ ಕನಿಷ್ಟ ಅಂಕಗಳನ್ನು ಪಡೆಯಬಹುದಾಗಿದೆ.

೬. ಲೋಹಗಳು ಮತ್ತು ಅಲೋಹಗಳು  ಅಧ್ಯಾಯದಲ್ಲಿನ ಕ್ರಿಯಾಶೀಲ ಸರಣಿ ನೆನಪಿಟ್ಟು ಕೊಂಡರೆ- ಸಂಬಂಧಿಸಿದ ಪ್ರಶ್ನೆಗಳಿಂದ ಕನಿಷ್ಟ ಅಂಕಗಳನ್ನು ಪಡೆಯಲು ಸಾಧ್ಯವಿದೆ.

೭. ಆಯ್ದ ಅಧ್ಯಾಯಗಳಲ್ಲಿನ ಪ್ರಮುಖ ಪ್ರಾಸಬದ್ಧ ಪರಿಕಲ್ಪನೆಗಳಿಗೆ ವ್ಯತ್ಯಾಸಗಳನ್ನು ಬರೆದು ಅಭ್ಯಾಸ ಮಾಡಿಸಿದರೆ ಕನಿಷ್ಟ ಅಂಕಗಳನ್ನು ಪಡೆಯಬಹುದು.

೮. ಇವುಗಳ ಜೊತೆಯಲ್ಲಿ ಈ ಹಿಂದಿನ ಮಾದರಿ ಪ್ರಶ್ನೆ ಪತ್ರಿಕೆಗಳು/ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆಗಳು/ ವಾರ್ಷಿಕ ಪರೀಕ್ಷಾ ಪ್ರಶ್ನೆ ಪತ್ರಿಕೆಗಳಲ್ಲಿನ ಅಧ್ಯಾಯವಾರು ಪ್ರಶ್ನೆಗಳು ಮತ್ತು ಉತ್ತರ ಬರೆದುಕೊಂಡು ಅಭ್ಯಾಸ ಮಾಡಿದರೆ ೬೦ ಕ್ಕೂ ಹೆಚ್ಚಿನ ಅಂಕಗಳನ್ನು (೬೦/೮೦) ಗಳಿಸಲು ಸಾಧ್ಯವಿದೆ ಸ್ನೇಹಿತರೆ. ‌

 ಈ ರೀತಿಯ ಕ್ರಿಯಾ ಯೋಜನೆ ರೂಪಿಸಿದ್ದಲ್ಲಿ ಖಂಡಿತವಾಗಿಯೂ ನೀವು ಯಶಸ್ಸು ಕಾಣುವಿರಿ. ಸಮೂಹ ಮಾಧ್ಯಮಗಳಲ್ಲಿ ದಿನಕ್ಕೆ ೨೦ ಪ್ಯಾಕೇಜ್‌ಗಳು ಹರಿದಾಡುತ್ತವೆ. ಒಂದಂತೂ ಅರ್ಥಮಾಡಿಕೊಳ್ಳಬೇಕು ಎಲ್ಲಾ ಪ್ಯಾಕೇಜ್‌ಗಳಲ್ಲಿರುವುದು ಇವೇ ಪ್ರಶ್ನೋತ್ತರಗಳೇ. ವಿದ್ಯಾರ್ಥಿಗಳು ಅಭ್ಯಾಸ ಮಾಡದೇ, ಎಷ್ಟು ಪ್ಯಾಕೇಜ್‌ಗಳನ್ನು ಸಂಗ್ರಹಿಸಿದರೆ ಏನು ಬಂತು? ಯಶಸ್ಸು ಪಡೆಯಬೇಕೆಂದರೆ ಸಿ‍ದ್ಧತೆ ಮತ್ತು ಕಠಿಣ ಶ್ರಮ ಅಗತ್ಯ.

ಆದುದರಿಂದ ನಮ್ಮೆಲ್ಲ ಶಿಕ್ಷಕ ಮಿತ್ರರಿಗೆ ತಿಳಿಸಲಿಚ್ಚಿಸುವುದೇನೆಂದರೆ ಯಾವ ವಿದ್ಯಾರ್ಥಿಯೂ ದಡ್ಡನಲ್ಲ. ಕಲಿಕೆಯ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವಲ್ಲಿ ಅವರು ಸೋಮಾರಿಗಳಾದುದರಿಂದ ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಶಿಕ್ಷಕರಾದ ನಾವುಗಳು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕನುಗುಣವಾಗಿ ತಮ್ಮದೇ ಆದ ವೈಯಕ್ತಿಕ ಕ್ರಿಯಾಯೋಜನೆ ರೂಪಿಸಿಕೊಂಡಲ್ಲಿ ನಿಮ್ಮ ನಿಮ್ಮ ವಿಷಯಗಳಲ್ಲಿ ಯಶಸ್ಸು ಕಾಣುವಿರಿ. ಮುಂದಿನ ನಿಮ್ಮ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ಶುಭವಾಗಲಿ. 


No comments:

Post a Comment