Saturday, March 4, 2023

ಆಹಾ! ಅಂಡಮಾನ್‌ ಪ್ರವಾಸ

 

ಆಹಾ! ಅಂಡಮಾನ್‌ ಪ್ರವಾಸ

                                                        ಲೇಖಕಿಶ್ರೀಮತಿ ನಾಗವೇಣಿ.ಬಿ ಸಹಶಿಕ್ಷಕಿ, CBZ

KPS ಬಸವನಗುಡಿ. ಬೆಂಗಳೂರು ದ.ವ-1

ಭಾರತದ ಭಾಗವೇ ಆಗಿದ್ದರೂ ತನ್ನ ವಿಶಿಷ್ಟ ಪರಿಸರದಿಂದ ಭಿನ್ನವಾಗಿ ಗೋಚರಿಸುವ ಅಂಡಮಾನ್‌ – ನಿಕೋಬಾರ್‌ ದ್ವೀಪಗಳ ಸಮುಚ್ಚಯವು ಐತಿಹಾಸಿಕವಾಗಿಯೂ ಪ್ರಸಿದ್ಧಿ ಪಡೆದ ತಾಣ. ಅಲ್ಲಿಗೆ ಪ್ರವಾಸ ಹೋಗಿ ಬಂದ ತಮ್ಮ ಸುಂದರ ಅನುಭವವನ್ನು ಈ ಲೇಖನದಲ್ಲಿ ಹಂಚಿಕೊಂಡಿದ್ದಾರೆ, ಶಿಕ್ಷಕಿ ಶ್ರೀಮತಿ ಬಿ.ನಾಗವೇಣಿ

ನಾನು ಮತ್ತು ನನ್ನ ಪರಿವಾರ ಅಂಡಮಾನ್‌ ಪ್ರವಾಸ ಹೋಗಲು ತೀರ್ಮಾನಿಸಿ, ಒಂದು ಶುಭದಿನ ಹೊರಟು ನಿಂತೆವು. ಹೋಗುವ ಮೊದಲು ಅದೊಂದು ದ್ವೀಪ, ನಮ್ಮ ದೇಶದ ಒಂದು ಭಾಗ ಅನ್ನೋದನ್ನು ಬಿಟ್ಟು ಬೇರೇನೂ ನನಗೆ ಅಷ್ಟಾಗಿ ತಿಳಿದಿರಲಿಲ್ಲ.

ಬೆಂಗಳೂರಿಂದ ಅಂಡಮಾನ್‌ನ ರಾಜಧಾನಿಯಾದ ಪೋರ್ಟ್‌ಬ್ಲೇರ್‌ಗೆ ವಿಮಾನಯಾನದಲ್ಲಿ ತಲುಪಿದೆವು. ಅಲ್ಲಿ ತಲುಪಿದ ಮೇಲೆ ತಿಳಿಯಿತು, ಅಂಡಮಾನ್‌- ನಿಕೋಬಾರ್‌ ಅನೇಕ ದ್ವೀಪಗಳ ಸಮುಚ್ಛಯವೆಂದು.  ಅಂಡಮಾನ್‌ನ ಕೆಲವು ದ್ವೀಪಗಳು ಹಾಗೂ ನಿಕೋಬಾರ್‌ ದ್ವೀಪಕ್ಕೆ ಸರಕಾರದ ಅನುಮತಿ ಇಲ್ಲದೇ ಹೋಗಲು ಸಾಧ್ಯವಿಲ್ಲ. ಏಕೆಂದರೆ, ಕೆಲವು ದ್ವೀಪಗಳು ಮಾನವರಹಿತ ಹಾಗೂ ಸ್ಥಳೀಯ ಆದಿವಾಸಿಗಳು (indigenous tribes) ಇರುವುದರಿಂದ, ನಾಗರಿಕ ಮಾನವರ ಸಂಪರ್ಕ ಇರುವುದಿಲ್ಲ. ಹಾಗಾಗಿ, ಕೆಲವು ದ್ವೀಪಗಳು ಮಾತ್ರ ಪ್ರವಾಸಿ ತಾಣಗಳು. 

 

ಅಂಡಮಾನ್‌ ಉರಿಬಿಸಿಲಿನ ಪ್ರದೇಶ. ಅಲ್ಲಿ ಸ್ಥಳೀಯರಿಗಿಂತ ಪ್ರವಾಸಿಗರೇ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಾರೆ. ಸಮುದ್ರವು ದಟ್ಟ/ಕಡು ನೀಲಿ ಬಣ್ಣದಲ್ಲಿರುತ್ತದೆ. ಅಷ್ಟೊಂದು ಅಗಾಧ ಸಮುದ್ರವಿದ್ದರೂ ಖಾದ್ಯ ಯೋಗ್ಯ ಮೀನುಗಳು ಇಲ್ಲ, ಕೃಷಿ ಇಲ್ಲ, ಮಣ್ಣು ವ್ಯವಸಾಯಕ್ಕೆ ಯೋಗ್ಯವಿಲ್ಲ. ಪ್ರತಿ ಎರಡು ದಿನಕ್ಕೆ ಚೆನ್ನೈ ಮತ್ತು ಬಂಗಾಳದಿಂದ ಕಾರ್ಗೋ ಹಡಗುಗಳ  ಮೂಲಕ ಅಲ್ಲಿಗೆ ಆಹಾರ ಸರಬರಾಜಾಗುತ್ತದೆ.

ದಿನ ಶುರುವಾಗುವುದು ಬೆಳಿಗ್ಗೆ 4 ಗಂಟೆಗೆ ಹಾಗೂ ಮುಗಿಯುವುದು ಸಂಜೆ 6 ಗಂಟೆಗೆ. ಅದು ಭಾರತದ ಭಾಗವಾದರೂ, ಭಾರತದ ಕಾಲಮಾನ ಅನುಸರಿಸಿದರೂ ನಮ್ಮ ಮುಖ್ಯ ಭಾಗದಿಂದ ಬಹಳ ದೂರವಿದೆ. ಆದ್ದರಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತ ಬೇಗ ಆಗುತ್ತದೆ.

ಅನೇಕ ಸಮುದ್ರದ ಆಟಗಳಾದ Scuba Diving, Snorkeling, Under sea walk, glass bottom boat rides, ಮುಂತಾದುವು ಮುದನೀಡುತ್ತವೆ. 

ಇನ್ನು ಸಮುದ್ರದ ತಳ, ಅಬ್ಬಾ ! “ಬಹುರತ್ನಾನಿ ವಸುಂಧರಾ”  ಜಲರಾಶಿಯ ಸೌಂದರ್ಯ ಬಣ್ಣಿಸಲಾಗದು. ವಿಧ, ವಿಧ ಬಣ್ಣದ ಪಚ್ಚೆ, ಮುತ್ತು, ಹವಳಗಳು , ವಿವಿಧ ಗಾತ್ರದ ಮತ್ತು ಬಹು ಬಣ್ಣದ ಜಲಚರ ಜೀವಿಗಳನ್ನುನೋಡುವುದುಒಂದು ಸುಂದರ ಅನುಭವ! ಬೆಲೆಬಾಳುವ ನೀಲಿ ಹರಳುಗಳ ಇರುವಿಕೆಯಿಂದ ನೀರುಕಡು ನೀಲಿಯಾಗಿ ಗೋಚರಿಸುತ್ತದೆ.


  

ಉಬ್ಬರವಿಳಿತಗಳ ನಡುವೆ ಬಹಳ ವ್ಯತ್ಯಾಸ ಕಂಡುಬರುತ್ತದೆ. ಉಬ್ಬರವಿದ್ದಾಗ ನೀರಿನ ಅಲೆಗಳು ರಸ್ತೆಯ ವರೆಗೂ ಬರುಯ್ಯವೆ. ಇಳಿತವಿದ್ದಾಗ ಎಷ್ಟೋ ದೂರದವರೆಗೆ ಸಮುದ್ರದಲ್ಲಿ ನಡೆಯಬಹುದು.



ಕೆಲವು ಬೀಚ್‌ಗಳಲ್ಲಿ ಬಿಳಿ ಬಣ್ಣದ ಮರಳು. ಹ್ಯಾವ್‌ಲಾಕ್‌ ದ್ವೀಪದ ಬೀಚ್‌ನಲ್ಲಿ ರಾತ್ರಿ ಹೊತ್ತು ಡಯಾಟಮ್ ಗಳ ಇರುವಿಕೆಯಿಂದಾಗಿ, ಸಮುದ್ರ ಸುಂದರವಾಗಿ ಚಿನ್ನದಂತೆ ಹೊಳೆಯುವುದನ್ನು ನೋಡಬಹುದು.

ರಾಸ್‌ಐಲ್ಯಾಂಡ್‌ ಎಂಬ ಪುಟ್ಟದ್ವೀಪ ಪೋರ್ಟ್‌ಬ್ಲೇರ್‌ನ  ಪಕ್ಕದಲ್ಲಿದ್ದು, ಅಲ್ಲಿ ಯಾವುದೇ ಜನವಾಸವಿಲ್ಲ. ಪ್ರವಾಸಿಗರು ಮಾತ್ರ ಹೋಗಿಬರಬಹುದು. ಅಲ್ಲಿ ಪಾಳುಬಿದ್ದ ಕಟ್ಟಡಗಳಿವೆ ಮತ್ತು ಸದ್ಯಕ್ಕೆ ಅದು ನೌಕಾಪಡೆಗೆ ಸೇರಿದ್ದಾಗಿದೆ. ಅಲ್ಲಿನ ನೈಸರ್ಗಿಕ ಪರಿಸರದಲ್ಲಿ ಮೊಲಗಳು, ಮತ್ತು  ಜಿಂಕೆಗಳು, ಹೇರಳವಾಗಿವೆ.


ಈ ದ್ವೀಪದ ಮಹತ್ವವೆಂದರೆ, ಇದು ಅರ್ಧಚಂದ್ರಾಕೃತಿಯ ರೂಪದಲ್ಲಿದ್ದು, ಸುನಾಮಿಯಂಥ ಪ್ರಕೃತಿ ವಿಕೋಪಗಳಿಂದ ಪೋರ್ಟ್‌ಬ್ಲೇರ್‌ಗೆ ಯಾವುದೇ ಅನಾಹುತ ಸಂಭವಿಸುವುದಿಲ್ಲ.

ಜಪಾನ್‌ ಮತ್ತು ಬ್ರಿಟೀಷ್‌ ಇಂಡಿಯಾ ನಡುವೆ ಯುದ್ಧವಾದಾಗ, ರಾಸ್‌ಐಲ್ಯಾಂಡ್‌ ಮತ್ತು ಪೋರ್ಟ್‌ಬ್ಲೇರ್‌ ಅನ್ನು ಜಪಾನೀಯರು ಆಕ್ರಮಿಸಿದ್ದರು. ಅಲ್ಲೀಗ, ಬಾಂಬ್‌ ಹಾಕಿರುವ ಸ್ಥಳ ಈಗಲೂ ಇದೆ. ಆಹಾರ ಕೊರತೆಯಿಂದಾಗಿ ಜಪಾನೀಯರು ಈ ಐಲ್ಯಾಂಡ್‌ ತೊರೆದರು.

ಬೀಚ್‌ ಎಂದಾಕ್ಷಣ ತೆಂಗಿನಮರ ಸಹಜವಾಗಿ ನೆನಪಾಗುತ್ತದಲ್ಲವೇ? . ಅಲ್ಲಿ ಎಳೆನೀರು ಹೇರಳವಾಗಿದ್ದು, ಬಳಕೆಯಾಗದೇ ಹೆಚ್ಚುವರಿಯಾಗಿ ಹಾಳಾಗುವುದು. ಇಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಅತೀದೊಡ್ಡ ಎಳೆನೀರನ್ನು ಹೊಟ್ಟೆತುಂಬ ಕುಡಿಯಬಹುದು!.

    ಸ್ಕೂಬಾ ಡೈವಿಂಗ್‌ ಹೋಗುವ ಮೊದಲು 15ನಿಮಿಷ ನೀರಿನೊಳಗೆ ಉಸಿರಾಡುವುದು ಹೇಗೆ?, ಆಕ್ಸಿಜನ್‌ ಟ್ಯಾಂಕ್‌ ಹೇಗೆ ಉಪಯೋಗಿಸುವುದು?. ಹ್ಯಾಂಡ್‌ ಸಿಗ್ನಲ್‌ ಹೇಗೆ ಬಳಸುವುದನ್ನುಎಂಬುದನ್ನು ಹೇಳಿಕೊಡಲಾಗುತ್ತದೆ. ನುರಿತ ಈಜುಗಾರರು ನಮ್ಮನ್ನು ಸಮುದ್ರದೊಳಗೆ 20 ಅಡಿ ಕರೆದುಕೊಂಡು ಹೋಗುತ್ತಾರೆ.  ಅಲ್ಲಿಯ ಅನುಭವ ಹೇಳತೀರದು. ಅಗಾಧ ಸಮುದ್ರದ ಮಧ್ಯ ಮಾನವ ಎಷ್ಟು ಶೂನ್ಯ, ನಿರುಪಯೋಗಿ ಹಾಗೂ ನಿಸ್ಸಹಾಯಕ ಎಂದು ಅನಿಸುತ್ತದೆ. ನೀರೊಳಗಿನ ಅತೀವ ನಿಶ್ಯಬ್ಧ ಭಯಮೂಡಿಸುತ್ತದೆ  ಹಾಗೂ ಎದೆ ಬಡಿತ ಜೋರಾಗುವುದು ಆ ಒಂದು  ಅನುಭವ ಮರೆಯಲು ಅಸಾಧ್ಯ. 



ಅನೇಕ ವಿದಧ, ಅನೇಕ ಬಣ್ಣದ,  ಮೀನುಗಳು ಜಲಸಸ್ಯಗಳು, ಅತ್ಯದ್ಭುತ ಹವಳ, ಮುತ್ತುಗಳ ನೈಜದರ್ಶನ ಅವರ್ಣನೀಯ!

ಸ್ಕೂಬಾ ಡೈವಿಂಗ್‌ ಅಸಾಧ್ಯವೆನಿಸಿದರೆ ಸ್ನೋರ್ಕ್ಲಿಂಗ್‌ ಮಾಡಬಹುದು. ಅದರಲ್ಲಿ ಆಳಕ್ಕೆ ಹೋಗದಿದ್ದರೂ ಸಮುದ್ರದ ಮೇಲ್ಮೈಯಿಂದ ಸಮುದ್ರವನ್ನು ನೋಡುವ ಅವಕಾಶ. ಅದೂ ಕೂಡಾ ಅತ್ಯದ್ಭುತ ಅನುಭವ.

ಇದೆಲ್ಲದರ ನಡುವೆ ಐತಿಹಾಸಿಕ ಸ್ಥಳಗಳನ್ನು, ಮುಖ್ಯವಾಗಿ ಕಾಲಾಪಾನಿ ಜೈಲಿಗೆ  ಭೇಟಿ, ವಸ್ತುಸಂಗ್ರಹಾಲಯ ವೀಕ್ಷಣೆಯು ನಡೆಯಿತು Zonal anthropological museumನ ವೈಶಿಷ್ಟ್ಯವೆಂದರೆ ಅನೇಕ ವಿಧದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳ ಮಾದರಿಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ. ಅಂಡಮಾನ್‌ ನಿಕೋಬಾರ್‌ ಜನಾಂಗದವರ, ಅಲ್ಲಿನ ಬುಡಕಟ್ಟಿನ ಇತಿಹಾಸ ಮತ್ತು ವೈಜ್ಞಾನಿಕ ಬೆಳವಣಿಗೆ ಹಾಗೂ ಜೀವನ ಶೈಲಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು.

ಹಿಂದಿರುಗುತ್ತಾ Government authorised  ಅಂಗಡಿಗಳಲ್ಲಿ   Pearls ಮತ್ತು Corals ನ್ನು ಖರೀದಿಸಬಹುದು. ಅಂಡಮಾನ್‌ ನಿಕೋಬಾರ್‌ ದ್ವೀಪ ಅಸಂಖ್ಯಾತ ಪ್ರಭೇದದ ಔಷಧೀಯ ಸಸ್ಯಗಳ ಹಾಗೂ ಜೈವಿಕ ಸಂಪನ್ಮೂಲಗಳ ಕಣಜವಾಗಿದ್ದು ಸರ್ಕಾರ ಅವುಗಳನ್ನು ಸಂರಕ್ಷಿಸಲು ಅನೇಕ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಆದ್ದರಿಂದ  ಕೆಲವೇ ದ್ವೀಪಗಳಿಗೆ ಮಾತ್ರ  ಪ್ರವೇಶ ಒದಗಿಸಿದೆ. ಸಮುದ್ರದಿಂದ ಯಾವುದೇ ಸಂಪತ್ತನ್ನು ತರಲು ಅವಕಾಶ ಇಲ್ಲದಿರುವುದೇ ಅಂಡಮಾನ್‌ ಇಂದಿಗೂ ಸುಸ್ಥಿತಿಯಲ್ಲಿರಲು ಕಾರಣ.

ಇನ್ನುSnake island ಎಂಬ ದ್ವೀಪದಲ್ಲಿ ಜನರಿಲ್ಲ. ಏಕೆಂದರೆ ಇಲ್ಲಿ 40 ಬಗೆಯ ಹಾವುಗಳ ಪ್ರಭೇದಗಳಿವೆ. ಅದರಲ್ಲಿ ಕೆಲವು   ಐಲ್ಯಾಂಡ್‌  ಬಿಟ್ಟು ಜಗತ್ತಿನಲ್ಲಿ ಎಲ್ಲೂ ಇಲ್ಲ.

4-5 ದಿನಗಳ ನನ್ನ ಈ ಪ್ರವಾಸ ಜೀವನದ ಕಹಿಯನ್ನೆಲ್ಲಾ ಮರೆಸಿತು. ಹಿಂದಿರುಗುವಾಗ ಮತ್ತೊಮ್ಮೆ ಇವೆಲ್ಲವನ್ನೂ ಅನುಭವಿಸುವ ಮಹದಾಸೆಯೊಂದಿಗೆ  ಈ ಪದ್ಯಬರೆಯಲು ಮನಸಾಯಿತು.

ಅಂಡಮಾನ್‌ ಅಂಡಮಾನ್‌

ಅಂಡಮಾನ್‌ ಪ್ರವಾಸ |

ಆಗುವುದೆಂದುಕೊಂಡೆ ಪ್ರಯಾಸ |

ಇರಲಿಲ್ಲ ಯಾವುದೇ ಆಯಾಸ |

ಈಗ ಮನದಾಳದಲ್ಲಿರುವುದು ಸಂತಸ ||

 

ಉರಿಬಿಸಿಲಿರಬಹುದೆಂದುಕೊಂಡೆ |

ಊಟ ಸೇರದೆಂದುಕೊಂಡೆ |

ಎಲ್ಲಿ ನೋಡಿದರೂ ಸಮುದ್ರವೋ |

ಏನೀ ಸುಂದರ ಪ್ರಪಂಚವೋ ||

 

ಕವಡೆ ಕಪ್ಪೆಚಿಪ್ಪುಗಳು |

ಬಣ್ಣ ಬಣ್ಣದ ಮೀನುಗಳು |

ಹವಳದ ದ್ವೀಪದ ಸೊಬಗನ್ನು |

ಹೇಗೆ ಹೊಗಳಲಿ ಎಲ್ಲವನು !

 

ಜಲಚರಗಳಲಿನ ಆನಂದ |

ಜಲಕ್ರೀಡೆಗಳಲಿನ ವಿನೋದ |

ಜಲರಾಶಿಯಲ್ಲಡಗಿದ ಐಶ್ವರ್ಯ |

ಚಕಿತಗೊಳಿಸುವ ಆ ಸೌಂದರ್ಯ |

ಆಹಾ !ಏನೀ ಆಶ್ಚರ್ಯ |

ಆಹಾ !ನೆನಪಿನ ಮಾಧುರ್ಯ |

ಆಹಾ !ಅಂಡಮಾನ್‌ ಅಂಡಮಾನ್‌ ||

ಒಳ್ಳೆಯ ಸವಿನುಡಿಗಳನಾಡುತ |

ಓದಿದ ಪದಗಳ ನೆನೆಯುತ |

ಅಂದದ ಅಂಡಮಾನ್‌ ಪ್ರವಾಸದ ಮಜವ |

ಆಹಾ !ಮುಗಿಸಿಬಂದ ಆ ಅನುಭವವ ||

 



 

 

 

 

No comments:

Post a Comment