Thursday, May 4, 2023

ಸಿಕಾಡ ಎಂಬ ವಿಶಿಷ್ಟ ಕೀಟ

 ಸಿಕಾಡ ಎಂಬ ವಿಶಿಷ್ಟ ಕೀಟ 

                                                        ಶ್ರೀ ಕೃಷ್ಣಚೈತನ್ಯ 

                                                  ಶಿಕ್ಷಕ ಹಾಗೂ ವನ್ಯಜೀವಿತಜ್ಞರು 


ಜೀಜಿಂಬೆ ಅಥವಾ ಜಿರ್ಜಿಂಬೆ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುವ ಸಿಕಾಡ ಎಂಬ ವಿಶಿಷ್ಟ ಕೀಟವನ್ನು ಪರಿಚಯಿಸುವ ಪ್ರಯತ್ನವನ್ನು ಈ ಲೇಖನದಲ್ಲಿ  ಮಾಡಿದ್ದಾರೆ, ಶಿಕ್ಷಕ ಹಾಗೂ ವನ್ಯಜೀವಿತಜ್ಞ ಶ್ರೀ ಕೃಷ್ಣಚೈತನ್ಯ ಅವರು

ʼಮನಸೆಲ್ಲಾ ನೀನೆʼ ಎಂಬ ಸಿನೆಮಾದ ಜೀಜಿಂಬೆ ಜೀಜಿಂಬೆ, ಹಾಡೋಣ ಜೊತೆಗೆ, ಹಾಡು ನನ್ನ ಹಾಗೆ. ಎಂಬ ಪ್ರಸಿದ್ದ ಪ್ರಕೃತಿ ಹಾಡನ್ನು ತಾವೆಲ್ಲಾ ಕೇಳಿದ್ದೀರಿ. ಇದರಲ್ಲಿ ಬರುವ ಜೀಜಿಂಬೆ ಅಥವಾ ಜಿರ್ ಜಿಂಬೆ ಎಂಬ ಕೀಟದ ಬಗ್ಗೆ ನಮಗೆಷ್ಟು ಗೊತ್ತು?  ಆ ಕೀಟದ ಶಬ್ಧವನ್ನಾದರೂ ಕೇಳಿಯೇ ಇರುತ್ತೇವೆ. ಯಾರಾದರೂ ಈ  ಕೀಟವನ್ನು ಅರಸಿ ಹೋಗಿರುವ ಸಾದ್ಯತೆ ಉಂಟೆ? ಇಲ್ಲ. ಅದೇನೊ ಕೂಗುತ್ತಿರುತ್ತೆ ಎಂದು ಅದರ ಗೊಡವೆಗೇ ಹೋಗಿರುವುದಿಲ್ಲ. ಬೇಸಿಗೆ ಬಂತೆಂದರೆ ಬಯಲು ಸೀಮೆಯಲ್ಲಿ  ಮರಗಳೆಡೆಯಿಂದ  ಕಿರ್..ರ್... ಎನ್ನುವ  ಶಬ್ದವನ್ನು ಎಲ್ಲರೂ ಕೇಳಿರುತ್ತೇವೆ. ಕುತೂಹಲದಿಂದ ನಾವೇನಾದರು ಅದನ್ನು ಅರಸುತ್ತಾ ಹೋದರೆ, ನಮ್ಮ ಆಗಮನವನ್ನು ಗುರುತಿಸಿ ನಿಶ್ಯಬ್ಧವಾಗಿಬಿಡುತ್ತದೆ. ಮುಂದುವರಿದು ನೀವು ಹೋದರೆ, ಒಂದು ದುಂಬಿ ಮರದಿಂದ ದೂರಕ್ಕೆ ಹಾರಿಹೋಗುವುದನ್ನು ಕಾಣುತ್ತೇವೆ. ತಕ್ಷಣಕ್ಕೆ ಅದು ಕಾಣದಿದ್ದರೂ ಬಹು ಎಚ್ಚರಿಕೆಯಿಂದ ನಿಶ್ಯಬ್ಧವಾಗಿ ಹೆಜ್ಜೆ ಹಾಕುತ್ತಾ ಹೋದರೆ ಮರದ ತೊಗಟೆಯ ಬಣ್ಣಕ್ಕೆ ಬೆರೆತು ಹೋಗುವ ಮೈಬಣ್ಣವನ್ನು ಹೊಂದಿರುವ ಸಣ್ಣ ದುಂಬಿಯೊAದು ಕಣ್ಣಿಗೆ ಬೀಳುತ್ತದೆ. ಅದೇ ಸಿಕಾಡ. ಆರ್ಥಾತ್ ಜೀರುಂಡೆ!.

 


ಮಲೆನಾಡಿನ ಕಡೆ ಹೋದರಂತೂ, ಹಲವಾರು ಬಗೆಯ ಸಿಕಾಡಗಳನ್ನು ಕಾಣುತ್ತೇವೆ. ವರ್ಷದ ವಿವಿಧ ಅವಧಿಯಲ್ಲಿ ಬೇರೆ ಬೇರೆ ರೀತಿಯ ಜೀರುಂಡೆಗಳು ಗೋಚರಿಸುತ್ತವೆ. 

ಮಲೆನಾಡಿನಲ್ಲೇ ಸುಮಾರು ಒಂಬತ್ತು ಬಗೆಯ ಸಿಕಾಡಗಳನ್ನು ಕಾಣಬಹುದು. ಅಲ್ಲಿ ಅದನ್ನು ಗೀಜೆ, ಕಿರಂಗಿಣಿ ಎಂದೂ, ಮತ್ತೆ ಕೆಲವು ಕಡೆ ಜೀಜಿಂಬೆ ಎಂತಲೂ ಕರೆಯಲಾಗುತ್ತದೆ. ಮಲೆನಾಡಿನಲ್ಲೆ ಇದ್ದವರಿಗಂತೂ ವರ್ಷ ಪೂರ್ತಿ ಒಂದಲ್ಲಾ ಒಂದು ಜೀರುಂಡೆಯ ಸದ್ದು ಕಿವಿಗೆ ಮಾರ್ದನಿಸುತ್ತಿರುತ್ತದೆ. ಮಳೆಗಾಲ ಕಾಲಿಟ್ಟರೆ ಪ್ರಕೃತಿ ಪ್ರಿಯರಿಗೆ ರಸದೌತಣ. ಮುಂಗಾರು ಆರಂಭಗೊಳ್ಳುವ ಸೂಚನೆಯಂತೆ ಬೆಟ್ಟಗಳ ಸಾಲನ್ನು ಮೇಘಗಳು ಮುತ್ತಿಕೊಳ್ಳುವ ನೋಟ ವರ್ಣಿಸಲು ಅಸಾದ್ಯ. ಗಿರಿ-ಶಿಖರ ಹಸಿರು ಹೊದ್ದು ವಧುವಿನಂತೆ ಶೃಂಗಾರಗೊಳ್ಳುತ್ತದೆ. ನದಿ, ಹಳ್ಳ-ಕೊಳ್ಳಗಳು ಜೀವ ತಳೆದುಜಡೆ ಹೆಣೆದಂತೆ ಇಳಿದರೆ, ಜಲಪಾತಗಳು ಮೈದುಂಬಿ ಭೋರ್ಗರೆಯತೊಡಗುತ್ತವೆ.

  ಬಯಲು ಸೀಮೆಯಲ್ಲಿ ಕಂಡುಬರುವ ಸಿಕಾಡ ಮಲೆನಾಡಿನಲ್ಲೂ ಕಂಡುಬಂದರೂ ಅದರ ಜತೆಗೆ ವಿಶಿಷ್ಟವಾಗಿರುವ ಹಲವು ಬಗೆ ಸಿಕಾಡಗಳು ಕಾಣಸಿಗುತ್ತವೆ. ಕರ್ಕ್, ‍ಕರ್ಕ್ ಎಂದು ಮದ್ಯ ಮದ್ಯ ನಿಲ್ಲಿಸಿ ನಂತರ ಒಂದೇ ಸಮನೆ ಬೀ..ಬೀ..ಬೀ..ಬೀ.. ಎಂದು ತಾರಕ ಸ್ಥಾಯಿಯಲ್ಲಿ ಕೂಗುತ್ತಾ, ಕ್ರಮೇಣ ಸ್ವರ ಅವರೋಹಣ ಕ್ರಮದಲ್ಲಿ ಕಡಿಮೆಯಾಗುತ್ತಾ ಕೊನೆಗೆ ನಿಲ್ಲಿಸುತ್ತದೆ. ಚೀ ಚೀನ್ ಚೀ, ಚೀ ಚೀನ್ ಚೀ ಎಂದು ಕೂಗುವ, ಪತಂಗದಂತೆ ಕಾಣುವ ಮತ್ತೊಂದು ಬಗೆಯ ಸಿಕಾಡವು ಇದೆ.

 

  ಸಂದೀಪದಿಗಳ ವಂಶದಲ್ಲಿ, ಹೆಮಿಪ್ಟೆರ ವರ್ಗಕ್ಕೆ ಸಿಕ್ಯಾಡಿಡೆ ಕುಟುಂಬಕ್ಕೆ ಸೇರಿರುವ ಇವುಗಳಲ್ಲಿ ಪ್ರಪಂಚದಾದ್ಯಂತ ೨೫೦೦ಕ್ಕು ಹೆಚ್ಚು ಪ್ರಭೇದಗಳಿವೆ. ಹೆಣ್ಣು ಸಾಮಾನ್ಯವಾಗಿ ಮರದ ತೊಗಟೆಯ ಬಿರುಕುಗಳಲ್ಲಿ ೩-೫ ಅಕ್ಕಿಯಾಕಾರದ ಮೊಟ್ಟೆಗಳನ್ನು ಇಡುತ್ತದೆ. ಈ ಮೊಟ್ಟೆಗಳಿಂದ ಮರಿಗಳು ಹೊರಬಂದು ಗಿಡದ ರಸವನ್ನು ಹೀರುತ್ತಾ ನೆಲಕ್ಕೆ ಉದುರಿ ಮಣ್ಣಿನಲ್ಲಿ ಸೇರಿಕೊಳ್ಳುತ್ತವೆ. ಅನಂತರ, ಬೇರು ಸಿಗುವವರೆಗೂ ನೆಲವನ್ನು ಕೊರೆದು ಸುಮಾರು ೨ ರಿಂದ ೧೬ ವರ್ಷದವರೆಗೂ ಬೇರಿನ ರಸ ಹೀರುತ್ತಾ ಲಾರ್ವಾಗಳು ಅಲ್ಲೆ ಜೀವಿಸುತ್ತವೆ (ಪ್ರಭೇದವಾರು ವಿಭಿನ್ನ). ಆ ಹಂತದವರೆಗೂ ಅವುಗಳಿಗೆ ರೆಕ್ಕೆಗಳು ಇರುವುದಿಲ್ಲ. ತದನಂತರ, ಮಳೆಗಾಲದ ಸಮಯದಲ್ಲಿ ನೆಲದಲ್ಲಿ ರಂಧ್ರ ಕೊರೆದು ಸೈನಿಕರಂತೆ ಹೊರಕ್ಕೆ ಹರಿದು ಬರುವ ಇವು,  ಅದೇ ಮರವನ್ನೇರಿ ಚಿತ್ರ-ವಿಚಿತ್ರವಾದ ಚೀರಾಟ ನಡೆಸುತ್ತವೆ. ದೇಹದ ಮೇಲೆ ಕ್ಯೂಟಿಕಲ್‌ನಿಂದಾದ ಗಟ್ಟಿಯಾದ ಕವಚವನ್ನು ಹೊಂದಿದ್ದು ಜೀರುಂಡೆಗಳು  ಬೆಳೆದಂತೆಲ್ಲಾ ಕವಚ ಬೆಳೆಯುವುದಿಲ್ಲ. ಹಾಗಾಗಿ, ಆಗಾಗ್ಗೆ ಆ ಕವಚವನ್ನು ಬೆನ್ನಿನ ಮದ್ಯ ಭಾಗದಲ್ಲಿ ಸೀಳಿಕೊಂಡು ಹೊರಬರುತ್ತವೆ. ಇದೇ ಪೊರೆ ಕಳಚುವಿಕೆ ಕ್ರಿಯೆ.

ಪೊರೆ ಕಳಚುವಾಗ, ಅವುಗಳ ಕಾಲುಗಳ ತುದಿಯಲ್ಲಿರುವ ಕೊಕ್ಕೆಯಂಥ ರಚನೆಗಳಿಂದ ಎಲೆ ಅಥವಾ ಕಾಂಡದ ಒಂದು ಬದಿಗೆ ಚುಚ್ಚಿ ಹಿಡಿದುಕೊಳ್ಳುತ್ತದೆ. ಆ ಸ್ಥಿತಿಯಲ್ಲೇ ಸ್ಥಿರವಾಗಿದ್ದು ಒಂದೆರಡು ದಿನಗಳಲ್ಲೆ ಪೊರೆ ಕಳಚುತ್ತವೆ. ಪೊರೆ ಕಳಚಿದಾಗ ದುಂಬಿಯು ಹೆಚ್ಚು ಪಾರದರ್ಶಕವಾದ ರೆಕ್ಕೆಗಳನ್ನು ಹೊಂದಿದ್ದು, ದೇಹ ವರ್ಣರಹಿತವಾಗಿರುತ್ತದೆ. ಸ್ವಲ್ಪ ಸಮಯದಲ್ಲೆ ಸೂರ್ಯನ ಬೆಳಕು ಮತ್ತು ವಾತಾವರಣದ ಅನಿಲಗಳ ಪ್ರಭಾವದಿಂದ ದುಂಬಿ ತನ್ನ ನಿಜವಾದ ಬಣ್ಣ ಹೊಂದುತ್ತದೆ. ಸಾಮಾನ್ಯವಾಗಿ ನಾನಾ ರೀತಿಯಲ್ಲಿ ಕೂಗುವ ದುಂಬಿಗಳೆಲ್ಲವೂ ಗಂಡುಗಳಾಗಿರುತ್ತವೆ. ಈ ಕೂಗಿಗೆ ಪ್ರತಿಕ್ರಿಯಿಸುವ ಹೆಣ್ಣುಗಳು ತಮ್ಮ ದೇಹದ ಹಿಂಭಾಗವನ್ನು ಮರದ ರೆಂಬೆ ಅಥವಾ ಕೊಂಬೆಗೆ ಟಪ್..ಟಪ್ ಎಂದು ಬಡಿದು ಶಬ್ಧ ಮಾಡುತ್ತದೆ. ಗಂಡು ಹೆಣ್ಣಿನ ಮಿಲನದ ನಂತರ ಹೆಣ್ಣು ಮರದ ತೊಗಟೆ ಸಂದುಗಳಲ್ಲಿ ಮೊಟ್ಟೆ ಇಟ್ಟು ಮತ್ತೆ ಜೀವನ ಚಕ್ರ ಮುಂದುವರಿಸುತ್ತವೆ.

  ಇವುಗಳಿಗೆ ಬಹುದೊಡ್ಡ ಶತ್ರಗಳೆಂದರೆ ಪಕ್ಷಿಗಳು. ಜೀವಜಾಲದಲ್ಲಿ ಆಹಾರಕ್ಕಾಗಿ ಒಂದನ್ನೊಂದು ಅವಲಂಬಿಸಿರುವುದರಿಂದ ಪಕ್ಷಿಗಳಾದ ಮಿನಿವೆಟ್, ಮರಿಗಳ ಪೋಷಣೆಯ ಸಮಯದಲ್ಲಿ ಕುಟ್ರು ಪಕ್ಷಿ, ನೊಣಹಿಡುಕಗಳು, ಬುಲ್-ಬುಲ್ಗಳು, ಕೆಲವೊಮ್ಮೆ ಬೆಳ್ಳಕ್ಕಿಗಳೂ  ಸಹ ಬೇಟೆಯಾಡಿ ತಿನ್ನುವುದುಂಟು. ಅವುಗಳ ಸಂತತಿಯನ್ನೂ ನಿಯಂತ್ರಿಸಬೇಕಲ್ಲವೆ? 




No comments:

Post a Comment