Friday, August 4, 2023

ಪಕ್ಷಿಲೋಕದ ಡೈನೋಸಾರ್ : ಗಜಪಕ್ಷಿ

ಪಕ್ಷಿಲೋಕದ ಡೈನೋಸಾರ್ : ಗಜಪಕ್ಷಿ

  ಲೇಖಕರು : ತಾಂಡವಮೂರ್ತಿ.ಎ.ಎ,                     ಸಹಶಿಕ್ಷಕರು,

ಸರ್ಕಾರಿ ಪ್ರೌಢಶಾಲೆ, ಕಾರಮಂಗಲ,ಬಂಗಾ ರಪೇಟೆ.



ಮಡಗಾಸ್ಕರ್‌ ದ್ವೀಪದಲ್ಲಿ ಕೇವಲ ಒಂದೆರಡು ಸಾವಿರ ವರ್ಷಗಳ ಹಿಂದಿನವರೆಗೂ ಬದುಕಿದ್ದವೆಂದು ಹೇಳಲಾಗುವ ಅತ್ಯಂತ ದೈತ್ಯ ಗಾತ್ರದ ಹಕ್ಕಿಗಳಾದ ಗಜಪಕ್ಷಿಗಳ ಬಗ್ಗೆ ಕುತೂಹಲಭರಿತವಾದ ಮಾಹಿತಿಯನ್ನೊಳಗೊಂಡ ಈ ಲೇಖನವನ್ನು ಶಿಕ್ಷಕ ತಾಂಡವಮೂರ್ತಿ ಬರೆದಿದ್ದಾರೆ.

ತನ್ನದೇ  ವಿಶಿಷ್ಟ ವನ್ಯಜೀವಿಗಳು, ಪರಿಸರವ್ಯವಸ್ಥೆ ಮತ್ತು ಪಳೆಯುಳಿಕೆಗಳನ್ನು ತನ್ನ ಅಮೂಲ್ಯ ಭಂಡಾರದಲ್ಲಿ ಹುದುಗಿಸಿಕೊಂಡಿರುವ ಮಡಗಾಸ್ಕರ್ದ್ವೀಪ, ಚಾರ್ಲ್ಸ್ಡಾರ್ವಿನ್‌ನಂಥ ಅಗ್ರಗಣ್ಯ ವಿಜ್ಞಾನಿಗೆ ಜೀವವಿಕಾಸ ಸಿದ್ಧಾಂತವನ್ನು ಮಂಡಿಸಲು ಬಯಲು ಪ್ರಯೋಗಾಲಯದ ರೀತಿ ಪ್ರೇರಣೆಯನ್ನು ಒದಗಿಸಿದ ವಸುಂಧರೆಯ ಒಂದು ಅನರ್ಘ್ಯ ಭೂಪ್ರದೇಶ. ಮಡಗಾಸ್ಕರ್ ಖಜಾನೆಯಲ್ಲಿ ಜೀವವಿಕಾಸದ ಹಲವಾರು ಕೊಂಡಿಗಳ ಸರಪಳಿಯೇ ಅಡಗಿದೆ. ಇಂತಹ ವಿಶಿಷ್ಟ ಪ್ರಭೇದಗಳಲ್ಲಿ ಈಗಾಗಲೇ ಅಳಿದು ಹೋಗಿರುವ ಭೂಮಿಯ ಇತಿಹಾಸದಲ್ಲಿಯೇ ಅತ್ಯಂತ  ದೈತ್ಯ ಪಕ್ಷಿಯಾದ ಗಜಪಕ್ಷಿಯೂ ಒಂದು.  ಸುಮಾರು ಸಾವಿರದ ಮುನ್ನೂರು ವರ್ಷಗಳ ಹಿಂದಿನವರೆಗೂ ಮಡಗಾಸ್ಕರ್ದ್ವೀಪದ ಉದ್ದಕ್ಕೂ ತಮ್ಮ ಅಸ್ತಿತ್ವವನ್ನು ಸಾಧಿಸಿದ್ದ ಗಜಪಕ್ಷಿಗಳು (Elephant birds ) ಈಗ ಅಸ್ತಿತ್ವದಲ್ಲಿರುವ ಪ್ರಪಂಚದ ಅತ್ಯಂತ ದೊಡ್ಡ ಪಕ್ಷಿಗಳಾಗಿರುವ ಆಸ್ಟ್ರಿಚ್ ಗಳಿಗಿಂತ ಮೂರು ಪಟ್ಟು ಹೆಚ್ಚು ತೂಕವನ್ನು ಹೊಂದಿದ್ದವೆಂಬುದು ವಿಸ್ಮಯವಾದರೂ ಸತ್ಯ. ಗಜಪಕ್ಷಿಗಳ ಜಾತಿಯಲ್ಲೇ ಅತ್ಯಂತ ದೊಡ್ಡ ಪ್ರಭೇದವಾದ ಏಪ್ಯೋರ್ನಿಸ್‌ ಮ್ಯಾಕ್ಸಿಮಸ್‌  (Aepyornis maximus) ಸುಮಾರು  300 ರಿಂದ 600 ಕೆ.ಜಿ ತೂಕ ಮತ್ತು 3 ಮೀಟರ್ ತ್ತರದ ನಿಲುವನ್ನು ಹೊಂದಿತ್ತು ಎನ್ನಲಾಗಿದೆ. ಹಾರಲಾರದ ಪಕ್ಷಿಗಳ ವರ್ಗ ರಾಟಿಟೆ (Ratitae)ಗೆ ಸೇರುವ ಗಜಪಕ್ಷಿಗಳ ಎದೆಯ ಮೂಳೆಗಳಲ್ಲಿ ಹಾರಲು ಸಹಾಯ ಮಾಡುವ ಕೀಲ್(keel) ಎಂಬ ಮೂಳೆ ಕಂಡುಬರುವುದಿಲ್ಲ. ಆದ್ದರಿಂದ, ರೆಕ್ಕೆಗಳು ನಿಷ್ಕ್ರಿಯವಾಗಿದ್ದು, ಚಿಕ್ಕದಾಗಿದ್ದುವು.

ಅನ್ವೇ಼ಷಣೆ

ಗಜಪಕ್ಷಿಗಳ ಪಳೆಯುಳಿಕೆ ಅವಶೇಷಗಳು 19ನೇ ಶತಮಾನದಲ್ಲಿ ಫ್ರೆಂಚ್ಪ್ರಾಣಿಶಾಸ್ತ್ರಜ್ಞ ಜೆಫ್ರಿಸೆಂಟ್ಹಿಲೇರ್ಏಂಬುವರು ಮಡಗಾಸ್ಕರ್ದ್ವೀಪದಲ್ಲಿ ಪತ್ತೆ ಮಾಡಿದರು. ಸಂದರ್ಭದಲ್ಲಿ ವಿಸ್ತೃತ ಅಧ್ಯಯನ ನಡೆದು ಸುಮಾರು 13 ಪ್ರಭೇದಗಳ ಪಳೆಯುಳಿಕೆಗಳನ್ನು ಗುರುತಿಸಲಾಯಿತು. ಪಳೆಯುಳಿಕೆಗಳ ಅಧ್ಯಯನದ ಆಧಾರದ ಮೇಲೆ ಪಕ್ಷಿಗಳು ಸುಮಾರು 3 ಮೀಟರ್ಎತ್ತರದ ನಿಲುವನ್ನು ಹೊಂದಿದ್ದು, ಸರಾಸರಿ 450 ಕೆ.ಜಿ (300 ರಿಂದ 600 ಕೆ.ಜಿ) ತೂಕವನ್ನು ಹೊಂದಿರಬಹುದೆಂದು ಅಂದಾಜಿಸಲಾಯುತು. ಕಾರ್ಬನ್ಡೇಟಿಂಗ್‌ ವಿಧಾನ ಬಳಸಿ ಮಾಡಲಾದ  ಕಾಲನಿರ್ಣಯದಿಂದ ಈಪಕ್ಷಿಗಳು 1560-1300 ವರ್ಷಗಳ ಹಿಂದೆ ಮಡಗಾಸ್ಕರ್ದ್ವೀಪದಲ್ಲಿ ಅಸ್ತಿತ್ವದಲ್ಲಿದ್ದವೆಂದು ಅಂದಾಜು ಮಾಡಲಾಗಿದೆ.

ಅವನತಿ

ಗಜಪಕ್ಷಿಗಳ ಸಾಮೂಹಿಕ ಅವನತಿಗೆ ಮಾನವಜನ್ಯ ಅಂಶಗಳಾದ ಅರಣ್ಯನಾಶ, ಆವಾಸನಾಶ, ಬೇಟೆ, ಸ್ವಾಭಾವಿಕ ಸಸ್ಯವರ್ಗದ ಬದಲಾವಣೆ ಮತ್ತು ಹವಾಮಾನ ಬದಲಾವಣೆ, ಇವು  ಪ್ರಮುಖ ಕಾರಣಗಳು ಎಂದು ಗುರುತಿಸಲಾಗಿದೆ. ಗಜಪಕ್ಷಿಗಳಿಗೆ ಹತ್ತಿರದ ಸಂಬಂಧಿಗಳೆಂದರೆ, ಇವುಗಳ ಗಾತ್ರಕ್ಕೆ ಹೋಲಿಸಿದರೆ ಬಹಳ ಚಿಕ್ಕದಾಗಿರುವ ಕಿವಿ ಪಕ್ಷಿಗಳು ಎಂಬ ವಿಷಯ ಸೋಜಿಗವಾದರೂ ಸತ್ಯ.

    

  

ಚಿತ್ರ ೧ : ಗಜಪಕ್ಷಿಯ ಅಸ್ಥಿಪಂಜರ

 


ಚಿತ್ರ ೨ : ಗಜಪಕ್ಷಿಯ ಮೊಟ್ಟೆ ಮತ್ತು ಬೀ ಹಮಿಂಗ್‌ ಬರ್ಡ್‌ ನ ಮೊಟ್ಟೆಗಳ ಹೋಲಿಕೆ


ಚಿತ್ರ ಕೃಪೆ : ತಾಂಡವಮೂರ್ತಿ.ಎ.ಎನ್‌ @ Bird paradise,Singapore


No comments:

Post a Comment