Friday, August 4, 2023

ಸಾವನ್ನೇ ದೂರವಿಟ್ಟ ಊರು ಲಾಂಗ್‌ ಇಯರ್‌ ಬೈನ್!!!!

 ಸಾವನ್ನೇ ದೂರವಿಟ್ಟ ಊರು - ಲಾಂಗ್‌ ಇಯರ್‌ ಬೈನ್!!!!

                                                                                 ಶ್ರೀ. ರಾಮಚಂದ್ರಭಟ್‌ ಬಿ.ಜಿ.          ವಿಜ್ಞಾನ ಶಿಕ್ಷಕರು 

ಹುಟ್ಟು-ಸಾವಿನ ಚಕ್ರ ನಿರಂತರವಾದದ್ದು. ಇದರಿಂದ ಯಾವ ಜೀವಿಯೂ ತಪ್ಪಿಸಿಕೊಳ್ಳದು.  ಹೀಗಿರುವಾಗ ಹುಟ್ಟು ಸಾವನ್ನೇ ದೂರವಿಟ್ಟ, ಸಾವಿಲ್ಲದ ಊರೊಂದಿದೆ ಎನ್ನುವುದೇ ಆಶ್ಚರ್ಯ. ಈ ಊರಿನ ಅಚ್ಚರಿಯ ವಿವರಗಳನ್ನು ನೀಡಿದ್ದಾರೆ ಶ್ರೀ ರಾಮಚಂದ್ರಭಟ್ ರವರು.  

ಅದು ಹುಟ್ಟು, ಸಾವುಗಳಿಲ್ಲದ ಅಮರ ನಗರಿ!!  ಅಲ್ಲಿ 1950 ನಂತರ ಅಲ್ಲಿ ಯಮರಾಜನಿಗೇ ಪ್ರವೇಶವನ್ನು ನಿರಾಕರಿಸಲಾಗಿದೆ. ಇಲ್ಲಿ ಯಾರೂ ಸತ್ತಿಲ್ಲ, ಯಾರೂ ಹುಟ್ಟಿಲ್ಲ !! ಇದೇನು ಅಚ್ಚರಿ? ಅಬ್ಬಾ ಅಂತಹ ಸ್ವರ್ಗ ಸದೃಶ ಊರು ಈ ಭೂಮಿಯ ಮೇಲೆ ಇದೆಯಾ? ಅಥವಾ ಇರೋಕೆ ಸಾಧ್ಯನಾ? ಎಂದು ಯೋಚನೆ ಮಾಡ್ತಾ ಇದ್ದೀರಾ? ಅಥವಾ,ಅಷ್ಟು ಬೇಗನೆ ಅಲ್ಲಿ ಹೋಗೋಕೆ ವಿಮಾನವೊ, ರೈಲೋ, ಹಡಗೋ ಇದ್ರೆ ಬುಕ್ ಮಾಡಿಯೇ ಬಿಡೋಣ ಅನ್ನೋ ಯೋಚನೆ ಮಾಡ್ತಾ ಇದ್ದೀರಾ?

ನಿಮ್ಮ ಕುತೂಹಲ ಕೆರಳದಿರದು. ಅದನ್ನು ತಣಿಸಲು ಒಂದು ಸಾರಿ ಆ ತಾಣವನ್ನು ಸುತ್ತಿ ಬರೋಣ.

ನಿಸರ್ಗ ಅಚ್ಚರಿಯ ಒಡಲು. ಹೆಜ್ಜೆ ಹೆಜ್ಜೆಗೂ ನಿಗೂಢತೆ ನಮ್ಮನ್ನು ದಿಗ್ಮೂಢರನ್ನಾಗಿಸದಿರದು. ಊಹಿಸಲೂ ಆಗದ ಅಚ್ಚರಿಗಳ ಆಗರವಾದ ನಾರ್ವೆ ದೇಶದ ಆ ನಗರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಈ ಲೇಖನದಲ್ಲಿ, ಹಂಚಿಕೊಳ್ಳುತ್ತೇನೆ.

ಅದು ನಾರ್ವೆ ದೇಶದ ಲಾಂಗ್‌ ಇಯರ್‌ ಬೈನ್ ಎಂಬ ಸುಂದರ ದ್ವೀಪ ನಗರ. “ಸಾವಿಲ್ಲದ ಊರು ಎಂಬ ಹಣೆಪಟ್ಟಿ ಕಟ್ಟಿಕೊಂಡ ಊರು. 1918ರಲ್ಲಿ ಸ್ಪ್ಯಾನಿಶ್ ಫ್ಲೂ ಎಂಬ ಸಾಮಕ್ರಾಮಿಕ ರೋಗ ಪ್ರಪಂಚದಾದ್ಯಂತ ೫೦ ಮಿಲಿಯನ್‌ಗೂ ಹೆಚ್ಚಿನ ಜನರನ್ನು ಬಲಿ ತೆಗೆದುಕೊಂಡಿತ್ತು.ಈ ರೋಗಕ್ಕೆ ಕಾರಣ  H1N1 ಎಂಬ ಇನ್ಫ್ಲುಯೆಂಜಾ ವೈರಸ್‌. ಹಕ್ಕಿ ಜ್ವರಕ್ಕೂ ಕಾರಣವಾಗುವ ವೈರಸ್‌ನ ಜ್ಞಾತಿ. ಲಾಂಗ್‌ಇಯರ್‌ ಬೈನ್‌ನಲ್ಲೂ ಸ್ಪ್ಯಾನಿಷ್ ಫ್ಲೂಗೆ 10ಕ್ಕೂ ಹೆಚ್ಚು ಮಂದಿ ಬಲಿಯಾಗುತ್ತಾರೆ. ಬಲಿಯಾದ ವ್ಯಕ್ತಿಗಳನ್ನು ಅಲ್ಲಿನ ಪದ್ಧತಿಯಂತೆ ಮಣ್ಣಿನಲ್ಲಿ ಹೂತು ಅಂತ್ಯಸಂಸ್ಕಾರ ಮಾಡಲಾಯಿತು. ಕ್ರಮೇಣ ಈ ಘಟನೆ ಜನಮಾನಸದಿಂದ ಅಳಿಸಿಹೋಯ್ತು. ಈ ನಡುವೆ 2ನೇ ಮಹಾಯುದ್ಧದಲ್ಲಿ ಈ ನಗರ ಜರ್ಮನರ ದಾಳಿಗೊಳಗಾಗಿ ಸಂಪೂರ್ಣವಾಗಿ ನಾಶವಾಯಿತು. ನಂತರ ಇದರ ಪುನರ್ನಿಮಾಣವೂ ಆಯಿತು. ಹೀಗಿರಬೇಕಾದರೆ, 1950ರಲ್ಲಿ ಒಮ್ಮೆ ಇಲ್ಲಿ ಭೂಮಿಯನ್ನು ಅಗೆಯುವಾಗ ಹೂತಿಟ್ಟ ಕೆಲವು ಹೆಣಗಳು ಪತ್ತೆಯಾದವು. ಅವು ಅದೇ ಸ್ಪಾನಿಷ್‌ ಫ್ಲೂಗೆ ಬಲಿಯಾದ ವ್ಯಕ್ತಿಗಳ ಹೆಣಗಳೇ ಆಗಿದ್ದವು. ಮಣ್ಣು ಮಾಡಿದ ೩ ದಶಕಗಳ ನಂತರವೂ ಇವು ಆಗಷ್ಟೇ ಮಣ್ಣು ಮಾಡಿದ ಹೆಣಗಳಂತೆ ಇದ್ದವು. ಸ್ವಲ್ಪವೂ ಕೊಳೆತಿರಲಿಲ್ಲ. ಈ ಪವಾಡ ಸದೃಶ ಘಟನೆಯನ್ನು ಕಂಡವರು ದಂಗಾಗಿ ಹೋದರು. ಈ ಪವಾಡದ ರಹಸ್ಯ ಹೊರಹಾಕಲು ಸಂಶೋಧಕರ ದಂಡೇ ಅಲ್ಲಿಗೆ ದಾಂಗುಡಿ ಇಟ್ಟಿತು. ಈ ಹೆಣಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೈದ್ಯರು ಮತ್ತು ಸಂಶೋಧಕರು ದಿಗ್ಭ್ರಾಂತಿಗೆ ಒಳಗಾದರು. ಅದಕ್ಕೆ ಕಾರಣ ಕೊಳೆಯದ ಹೆಣಗಳಲ್ಲ. ಬದಲಿಗೆ ಈ ಕೊಳೆಯದ ಹೆಣಗಳ ಮೈಯಲ್ಲಿ ಸ್ಯಾನಿಶ್ ಫ್ಲೂಗೆ ಕಾರಣವಾದ ವೈರಾಣುಗಳು ನಾಶವಾಗದೇ ಬದುಕಿದ್ದುದು. ಈ ಸಂಗತಿ ಜನರ ನಿದ್ದೆಗೆಡಿಸಿತು. ಆಧುನಿಕ ಕಾಲದಲ್ಲಿ ಕರೋನ ವೈರಸ್ಸಿನ ಭೀತಿ ಯಾವ ಮಟ್ಟಿಗೆ ಇತ್ತು ಎನ್ನುವುದು ನಮ್ಮೆಲ್ಲರಿಗೂ ಗೊತ್ತು. ಆ ವೈರಸ್‌ಗಳು ಆರೋಗ್ಯವಂತ ದೇಹಕ್ಕೆ ರೋಗವನ್ನು ಸೋಂಕಿಸುವ ಎಲ್ಲಾ ಸಾಮರ್ಥ್ಯವನ್ನು ಹಾಗೆಯೇ ಉಳಿಸಿಕೊಂಡಿದ್ದವು.

ಇಂಥ ಆಘಾತಕಾರಿ, ಸುದ್ದಿಯನ್ನು ತಿಳಿದ ಸರ್ಕಾರ ಈಗ ಒಂದು ತೀರ್ಮಾನಕ್ಕೆ ಬಂತು. ಇನ್ನು ಇಲ್ಲಿ ಯಾವುದೇ ಸಾವೂ ಸಂಭವಿಸಬಾರದು. ಸತ್ತ ಮನುಷ್ಯರ ದೇಹದಲ್ಲಿರುವ ಸೂಕ್ಷ್ಮಾಣು ಜೀವಿ ಆರೋಗ್ಯವಂತರಿಗೆ ಸೋಂಕು ತಗುಲಿಸದಂತೆ ಈ ಎಚ್ಚರಿಕೆ ವಹಿಸಲಾಯಿತು. ಹಾಗಾಗಿ, ಸಾಯುವುದಾದರೆ ನಾರ್ವೆಯ ಮುಖ್ಯ ಭೂಪ್ರದೇಶಕ್ಕೇ ಹೋಗಿ ಸಾಯಿರಿ ಎಂಬ ಫರ್ಮಾನನ್ನು ಸ್ಥಳೀಯ ಆಡಳಿತ ಹೊರಡಿಸಿತು. ಇಲ್ಲಿ ಸಾವೇ ಸಂಭವಿಸಬಾರದು ಎಂದು ಯಮಧರ್ಮನಿಗೂ ನಿಷೇಧ ಹೇರಿದ ಭೂಲೋಕದ ಏಕೈಕ ಸ್ಥಳ ಎಂದರೆ ಇದೇ!!. ಲಾಂಗ್‌ ಇಯರ್‌ ಬೈನ್‌ನಲ್ಲಿ ಸಾಯುವುದು ಕಾನೂನುಬಾಹಿರ ಎಂದು ಜನಪ್ರಿಯವಾಗಿ ಹೇಳಿಕೊಂಡಿದ್ದರೂ, ಈ ಹೇಳಿಕೆ ಸಂಪೂರ್ಣ ನಿಜವಲ್ಲ. ಏಕೆಂದರೆ ಸಾವು ಹೇಳಿಕೇಳಿ ಬರುತ್ತದೆಯೇ? ಪಟ್ಟಣದಲ್ಲಿ ಸಾಯುವುದು ನಿಜವಾಗಿ ಕಾನೂನು ಬಾಹಿರವಲ್ಲದಿದ್ದರೂ, ಅಲ್ಲಿ ಶವಗಳನ್ನು ಹೂಳಲು ಯಾವುದೇ ಆಯ್ಕೆಗಳಿಲ್ಲ. ಸರ್ಕಾರದ ಅನುಮತಿಯೊಂದಿಗೆ ಚಿತಾಭಸ್ಮವನ್ನು ಹೂಳಬಹುದು. ಈ ಆದೇಶದಂತೆ 1950ರ ನಂತರ ಇದುವರೆಗೂ ಇಲ್ಲಿ ಯಾರೂತ್ತಿಲ್ಲ. ಹಾಗೆಯೇ, ಯಾರೂ ಹುಟ್ಟಿಲ್ಲ!!!. ಮೃತ್ಯುಶಯ್ಯೆಯಲ್ಲಿರುವವರನ್ನು ತಕ್ಷಣವೇ ಮುಖ್ಯ ಭೂಮಿಗೆ (Main land) ಸಾಗಿಸಲಾಗುತ್ತದೆ. ಇಲ್ಲಿ ಹೆರಿಗೆ ಆಸ್ಪತ್ರೆಯೂ ಇಲ್ಲ . ಪ್ರಸವದ ಸಂದರ್ಭದಲ್ಲಿ ತಾಯಿ ಮಗು ಸಾವಿಗೀಡಾಗಬಾರದು  ಎಂಬ ಮುನ್ನೆಚ್ಚರಿಕೆ. ಇರುವುದರಿಂದ ಗರ್ಭಿಣಿಯರು ಮೈನ್‌ ಲ್ಯಾಂಡ್‌ಗೆ ಹೋಗಿ ಹೆರಿಗೆಯ ನಂತರ ಹಿಂದಿರುಗುತ್ತಾರೆ.

ಯಾಕೆ ಹೀಗೆ ? ಅದೆಂಥ ಪವಾಡ ಅಲ್ಲಿ ನಡೆಯುತ್ತದೆ?

ಧ್ರುವ ಪ್ರದೇಶದ ಈ ನೆಲ ವರ್ಷ ಪೂರ್ತಿ ಹಿಮಾಛ್ಚಾದಿತವಾಗಿರುತ್ತದೆ. ಇಲ್ಲಿ ಉಷ್ಣತೆಯು ಅತ್ಯಂತ ಕಡಿಮೆ.  ಸರಾಸರಿ ತಾಪಮಾನವೇ ಸುಮಾರು 4C, ಅಂದರೆ ನಮ್ಮ ರೆಫ್ರಿಜರೇಟರ್ ಗಳಲ್ಲಿರುವ ತಾಪಕ್ಕಿಂತ ಕಡಿಮೆ. ಕಳೆದ ದಶಕದಲ್ಲಿ ಒಮ್ಮೆ 21.70 C ಗೆ ಏರಿದ್ದೂ ಇದೆ. ದಶಕದ ಕನಿಷ್ಟ ತಾಪಮಾನ -46.30 C. ವಾರ್ಷಿಕ ಹಿಮಪಾತದ ಪ್ರಮಾಣ 212mm. ಇಂತಹ ಅಸಾಧ್ಯ ಕುಳಿರ್ಗಾಳಿಗೆ ಭೂಮಿಯೊಳಗಿನ ಮಣ್ಣೂ ಶಾಶ್ವತವಾಗಿ  ಹಿಮಗಡ್ಡೆಗಳಂತೆ  ಹೆಪ್ಪುಗಟ್ಟಿರುತ್ತದೆ. ಇದನ್ನು ಪರ್ಮಾಫ್ರಾಸ್ಟ್ ಎನ್ನುತ್ತಾರೆ.  

By ಪರ್ಮಾಫ್ರಾಸ್ಟ್‌ Dave Fox - Own work, CC BY-SA 4.0, https://commons.wikimedia.org/w/index.php?curid=65812173

ಈ ತಾಪದಲ್ಲಿ ಕಿಣ್ವಗಳ ಚಟುವಟಿಕೆಯೂ ನಿಷ್ಕ್ರಿಯ ಎನ್ನುವಷ್ಟು ಕಡಿಮೆಯಾಗಿರುತ್ತದೆ. ಹಾಗಾಗಿ,  ಸೂಕ್ಷ್ಮಾಣುಜೀವಿಗಳು ಹೂತಿರುವ ದೇಹವನ್ನು ವಿಘಟಿಸಲಾರವು. ಯಾವುದೇ ಹೆಣವನ್ನು ಮಣ್ಣು ಮಾಡಿದರೂ ವರ್ಷಗಳ ನಂತರವೂ  ದೇಹ ಕೊಳೆಯದು. ಅಂಥ ದೇಹಗಳು ಲಕ್ಷಾಂತರ ವರ್ಷಗಳ ನಂತರ ಪಳೆಯುಳಿಕೆಗಳಾಗಿ ಕಂಡು ಬರಬಹುದು.

ಕುತೂಹಲಿ ಸಂಶೋಧಕರು ಪದೇ ಪದೇ ಅಲ್ಲಿ ಈ ಪ್ರಯೋಗವನ್ನು ಮುಂದುವರಿಸಿ ದೇಹಗಳನ್ನು ಪರೀಕ್ಷಿಸಿದರು. 1998ರಲ್ಲೂ ಕೂಡ, 1918ರಲ್ಲಿ ಹೂತಿದ್ದ ಹೆಣಗಳು ಕೊಳೆಯದೆ ಹಾಗೆಯೇ ಉಳಿದುಕೊಂಡಿದ್ದವು. ಈಗ ವಿಜ್ಞಾನಿಗಳ ತಂಡ ಅಲ್ಲಿನ ಮಣ್ಣು ಹಾಗೂ ಅಲ್ಲಿನ ಸೂಕ್ಷ್ಮಾಣು ಜೀವಿಗಳ ಬದುಕನ್ನು ಅಧ್ಯಯನ ಮಾಡುತ್ತಿದ್ದಾರೆ. ಬಹುಷಃ ಇದು ಭವಿಷ್ಯದಲ್ಲಿ ಮತ್ತೊಂದು ಹೊಸ ಆವಿಷ್ಕಾರಕ್ಕೆ ಕಾರಣವಾಗಬಹುದು.

 


ಈ ಲಾಂಗ್‌ ಇಯರ್‌ ಬೈನ್‌ಗೆ 1926ರವರೆಗೂ ಲಾಂಗ್ಇಯರ್ ಸಿಟಿ ಎನ್ನುವ ಹೆಸರಿತ್ತು. ಇದು ವಿಶ್ವದ ಉತ್ತರ ಧ್ರುವದ ಅತ್ಯಂತ ದೊಡ್ಡ ಜನವಸತಿ ವಸಾಹತು ಎನಿಸಿದೆ. ಪ್ರದೇಶಕ್ಕೆ ಜಾನ್‌ ಮನ್ರೋ ಲಾಂಗ್ ಇಯರ್‌ ಎಂಬ ಅಮೇರಿಕದ ಉದ್ಯಮಿ ಕಲ್ಲಿದ್ದಲು ಗಣಿ ಸ್ಥಾಪಿಸುವ ಉದ್ದೇಶದಿಂದ ಭೇಟಿ ನೀಡುತ್ತಾನೆ. ನಂತರ 1906 ರಲ್ಲಿ ತನ್ನ ಗಣಿಗಾರಿಕೆ ಕಂಪನಿಗಾಗಿ ಅಲ್ಲೊಂದು ಕಂಪನಿ ನಗರ ನಿರ್ಮಾಣಕ್ಕೆ ಕೈ ಹಾಕುತ್ತಾನೆ. ಅದೇ ಲಾಂಗ್‌ ಇಯರ್ ಬೈನ್‌  ಸಿಟಿ ಎಂದು ಹೆಸರಾಗುತ್ತದೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ 1943 ರಲ್ಲಿ ಜರ್ಮನಿಯ ಸೈನ್ಯ ಈ ಕಣಿವೆ ನಗರವನ್ನು ಹಾಳುಗೆಡವಿತು. ನಂತರ ಈ ನಗರವನ್ನು ಮರು ನಿರ್ಮಾಣ ಮಾಡಲಾಯಿತು. ಕಾರ್ಮಿಕರಿಗಾಗಿ ಶಾಲೆ, ಕಾಲೇಜು, ಯುನಿವರ್ಸಿಟಿ, ಆಸ್ಪತ್ರೆ, ಅಂಗಡಿಗಳು, ಕಮರ್ಷಿಯಲ್ ಏರ್ಪೋರ್ಟ್, ಹೋಟೆಲ್‌ಗಳು ಹೀಗೆ ಏನೇನು ಬೇಕಿದೆಯೋ ಅವೆಲ್ಲವೂ ಆ ನಗರದಲ್ಲಿವೆ. ಇಲ್ಲಿ ಬರಲು ಯಾವುದೇ ಪಾಸ್ಪೋರ್ಟ್ ವೀಸಾದ ಅಗತ್ಯವಿಲ್ಲ. ಹಾಗೆಯೇ, ಅಲ್ಲಿ ಶಾಶ್ವತವಾಗಿ ಬದುಕುವ ಅವಕಾಶವೂ ಇಲ್ಲ.

 



ಇದು ಹಿಮ ಕರಡಿಗಳ ನೈಸರ್ಗಿಕ ಆವಾಸ ಸ್ಥಾನವೂ ಹೌದು. ಸುಂದರ ರಮಣೀಯ ತಾಣವೂ ಹೌದು. ಈ ಕಾರಣದಿಂದ ಇಲ್ಲಿನ ಯುನಿವರ್ಸಿಟಿಯಲ್ಲಿ ಅಧ್ಯಯನಕ್ಕಾಗಿ ಸಾಕಷ್ಟು ಸಂಶೋಧಕರೂ ಬರುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರೂ ಭೇಟಿ ನೀಡುತ್ತಾರೆ. ಅಲ್ಲಿನ ಮಣ್ಣು, ಅಲ್ಲಿನ ವಾತಾವರಣ, ಹಿಮ ಕರಡಿಗಳು ಇತ್ಯಾದಿಗಳ ಬಗ್ಗೆ ಸಾಕಷ್ಟು ಕುತೂಹಲಕರ ಅಧ್ಯಯನ ನಡೆಯುತ್ತಿದೆ.  ಒಂದು ಕಾಲದಲ್ಲಿ ಗಣಿಗಾರಿಕೆಗೆ ಹೆಸರಾದ ಈ ನಗರ ಇಂದು ಪ್ರವಾಸಿಗರ ಸ್ವರ್ಗವಾಗಿ ಮಾರ್ಪಡುತ್ತಿದೆ. ಇಲ್ಲಿ ಈಗ ಸುಮಾರು 50ಕ್ಕೂ ಹೆಚ್ಚು ದೇಶಗಳ ಸುಮಾರು 2000ಕ್ಕೂ ಹೆಚ್ಚಿನ ಜನ ತಾತ್ಕಾಲಿಕವಾಗಿ ಇಲ್ಲಿ ವಾಸ ಮಾಡುತ್ತಿದ್ದಾರೆ. ಇಲ್ಲಿನ ವಾಸ ಅಷ್ಟು ಸುಲಭವಲ್ಲ. ಏಕೆಂದರೆ, ಇದು ಹೇಳಿಕೇಳಿ ಹಿಮಕರಡಿಗಳ ನಾಡು. ಅವುಗಳ ಉಪಟಳ ತಡೆಯುವುದು ಅಸಾಧ್ಯವೂ ಹೌದು. ಕೈಯಲ್ಲಿ ಬಂದೂಕಿಲ್ಲದೆ ಇಲ್ಲಿ ಹೊರ ಸಂಚರಿಸುವುದು ಅಷ್ಟು ಕ್ಷೇಮಕರವಲ್ಲ. ಹಾಗಾಗಿ, ಸ್ಥಳೀಯ ಆಡಳಿತವೇ ಇಲ್ಲಿ ಬಂದೂಕು ಇಟ್ಟುಕೊಂಡೇ ಓಡಾಡಲು ಪರವಾನಗಿ ನೀಡಿದೆ.


ಇಲ್ಲಿ ಹಗಲು ರಾತ್ರಿಗಳೂ ಸುದೀರ್ಘವಾಗಿರುವುದು ವಿಶೇಷ. ಲಾಂಗ್ಇಯರ್‌ ಬೈನ್ ಸಾಮಾನ್ಯವಾಗಿ ಆರ್ಕ್ಟಿಕ್ ವೃತ್ತದೊಳಗಿನ ಇತರ ಪ್ರದೇಶಗಳಿಗಿಂತ  ಕಡಿಮೆ ಆರ್ದ್ರತೆಯನ್ನು ಹೊಂದಿದೆ. ಲಾಂಗ್ಇಯರ್‌ಬೈನ್ 18 ಏಪ್ರಿಲ್ ಮತ್ತು 23 ಆಗಸ್ಟ್ (ಸುಮಾರು 127 ದಿನಗಳು) ಅವಧಿಯಲ್ಲಿ ಮಧ್ಯರಾತ್ರಿಯ ಸೂರ್ಯ ಎನ್ನುವ ಸುದೀರ್ಘ ಹಗಲನ್ನು ಅನುಭವಿಸುತ್ತದೆ. 27 ಅಕ್ಟೋಬರ್‌ನಿಂ15 ಫೆಬ್ರವರಿಯವರೆಗೆ (ಸುಮಾರು 111 ದಿನಗಳು) ಮತ್ತು 13 ನವೆಂಬರ್‌ನಿಂದ 29 ಜನವರಿಯವರೆಗೂ ಧ್ರುವರಾತ್ರಿ ಎನ್ನಲಾಗುವ ಸುದೀರ್ಘ ಕತ್ತಲು ಕಂಡು ಬರುತ್ತದೆ. ಪರ್ವತಗಳ ನೆರಳಿನಿಂದಾಗಿ ಸುಮಾರು 8 ಮಾರ್ಚ್‌ವರೆಗೆ, ಲಾಂಗ್‌ಇಯರ್‌ಬೈನ್‌ನಲ್ಲಿ ಸೂರ್ಯನು ಗೋಚರಿಸುವುದೇ ಇಲ್ಲ ! ಸೂರ್ಯನು ದಿಗಂತದಿಂದ ಕನಿಷ್ಠ 6 ಡಿಗ್ರಿಗಳಷ್ಟು ಕೆಳಗಿರುವಾಗ ಬೆಳಕು ಕಾಣದಿರುವ ಪರಿಸ್ಥಿತಿಯೇ ಧ್ರುವ ರಾತ್ರಿ. ಇಂಥ ಪ್ರಕೃತಿ ವೈಚಿತ್ರಗಳು ಇಲ್ಲಿ ಹೇರಳ. 

 

EISCAT ರಾಡಾರ್


ಧ್ರುವೀಯ ಕಕ್ಷೆಯಲ್ಲಿರುವ ಉಪಗ್ರಹಗಳಿಂದ ಡೇಟಾವನ್ನು ಡೌನ್‌ಲೋಡ್ ಮಾಡಲು ಲಾಂಗ್‌ಇಯರ್‌ಬೈನ್‌ ಅತ್ಯುತ್ತಮ ತಾಣ. ಇದಕ್ಕಾಗಿ ಇಲ್ಲಿ NASA ಮತ್ತು ನಾರ್ವೇಜಿಯನ್ ಬಾಹ್ಯಾಕಾಶ ಕೇಂದ್ರದ ಸಹಕಾರದಿಂದ ಸ್ವಾಲ್ಬಾರ್ಡ್ ಉಪಗ್ರಹ ನಿಲ್ದಾಣವನ್ನು ನಿರ್ಮಿಸಲಾಗಿದೆ. ಜೊತೆಗೆ, ಇಲ್ಲೊಂದು EISCAT ರಾಡಾರ್ ಅನ್ನು ಸ್ಥಾಪಿಸಲಾಗಿದೆ.  ಗ್ಲೋಬಲ್ ಕ್ರಾಪ್ ಡೈವರ್ಸಿಟಿ ಟ್ರಸ್ಟ್ ನಿಂದ ನಿರ್ವಹಿಸಲ್ಪಡುವ ಸ್ವಾಲ್ಬಾರ್ಡ್ ಗ್ಲೋಬಲ್ ಸೀಡ್ ವಾಲ್ಟ್, ಲಕ್ಷಾಂತರ ಬೆಳೆ ಬೀಜಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ಸುರಕ್ಷಿತ ಭೂಗತ ತಾಣ ಇಲ್ಲಿದೆ. ಜಾಗತಿಕ ತಾಪಮಾನ ಏರಿಕೆ, ಪ್ರವಾಹ ಮತ್ತು ಬೆಂಕಿ ಮತ್ತು ಪರಮಾಣು ಶಕ್ತಿ ಸೇರಿದಂತೆ ನೈಸರ್ಗಿಕ ಮತ್ತು ಮಾನವ ವಿಪತ್ತುಗಳಿಂದ ರಕ್ಷಿಸಲು ಇಲ್ಲಿ ಯೋಜನೆಯೊಂದನ್ನು ವಿನ್ಯಾಸಗೊಳಿಸಲಾಗಿದೆ.

ಮೂಳೆ ಕೊರೆವ ಚಳಿಗೆ ನಮ್ಮಲ್ಲಿ ಔಷಧಿ ಇದೆ ಎಂದು ಮದ್ಯ ಸೇವನೆಯ ಆಲೋಚನೆ ಮಾಡಿದಿರೋ, ಅದಕ್ಕೂ ಅಲ್ಲಿ ಸಾಕಷ್ಟು ನಿರ್ಬಂಧಗಳಿವೆ!!!. ಚಳಿಯನ್ನು ತಡೆಯಲು ಜನರು ಮಿತಿಮೀರಿ ಕುಡಿದು ಸತ್ತು ಹೋದರೆ ಎಂಬ ಭೀತಿಯಿಂದ ಸ್ಥಳೀಯ ಆಡಳಿತ ಅದಕ್ಕೂ ಮಿತಿ ಹೇರಿದೆ !

ಒಟ್ಟಿನಲ್ಲಿ‌, ಸಾವಿಲ್ಲದ ಊರು ಎನ್ನುವುದಕ್ಕಿಂತ ಒಂದು ಸಂಶೋಧನಾ ಕೇಂದ್ರವಾಗಿ, ಪ್ರಕೃತಿಯ ರಹಸ್ಯಗಳ ಅನ್ವೇಷಣಾ ತಾಣವಾಗಿ, ಭವಿಷ್ಯದಲ್ಲಿ ಮನುಕುಲದ ಭವಿಷ್ಯವನ್ನು ಕಾಪಿಡುವ, ಸುಂದರ ಸೃಷ್ಟಿಯ ಸೊಬಗೇ ಈ ಲಾಂಗ್‌ಇಯರ್‌ಬೈನ್‌. ಈ ದೃಷ್ಟಿಯಿಂದ ಇಲ್ಲಿಗೆ ಪ್ರಯಾಣ ಸಹ್ಯವೇ ಹೌದು.


 

1 comment: