Wednesday, October 4, 2023

ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್‌

ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್‌

ಲೇ. ರಾಮಚಂದ್ರ ಭಟ್‌ ಬಿ.ಜಿ.

                                                                                                    ಕಳೆದ ‌ವಾರ ನಮ್ಮನ್ನಗಲಿದ ಖ್ಯಾತ ವಿಜ್ಞಾನಿ ಡಾ. ಎಮ್.‌ ಎಸ್. ಸ್ವಾಮಿನಾಥನ್ ಅವರು ಸ್ವಾತಂತ್ರೋತ್ತರ ಭಾರತದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸುವ ಲೇಖನ


ದೇಶಕ್ಕೆ ಸ್ವಾತಂತ್ರ್ಯ ಬಂದ ದಿನಗಳವು ಹಲವು ಸಮಸ್ಯೆಗಳು ದೇಶದ ಅಂತಃಸತ್ವವನ್ನೇ ಉಡುಗಿಸಿದ್ದವು. ಬ್ರಿಟಿಷರು ದೇಶದ ಸಮಸ್ತ ಸಂಪತ್ತನ್ನೂ ಕೊಳ್ಳೆ ಹೊಡೆದು ಮೂಳೆ ಚಕ್ಕಳದ ಪ್ರಜೆಗಳನ್ನು ಬಿಟ್ಟುಹೋಗಿದ್ದರು. ಕೃಷಿಯೂ ಸೊರಗಿತ್ತು. ಆ ಸಂದರ್ಭದಲ್ಲಿ ಹಸಿದ ಹೊಟ್ಟೆಗಳನ್ನು ತುಂಬಿಸುವ ಕಾಯಕವೇ ಸರ್ಕಾರದ ಆದ್ಯ ಕರ್ತವ್ಯವಾಗಿತ್ತು. ಮೊದಲ ಪಂಚವಾರ್ಷಿಕ ಯೋಜನೆಗಳೂ ಕೃಷಿ, ನೀರಾವರಿಯತ್ತ ಗಮನಹರಿಸಲೇಬೇಕಿತ್ತು. ಆಹಾರಧಾನ್ಯಗಳಿಗಾಗಿ ಇತರ ದೇಶಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆಯೂ ಇತ್ತು.  ಪಾಕಿಸ್ತಾನ, ಚೀನಾಗಳೊಂದಿಗಿನ ಯುದ್ಧಗಳೂ ದೇಶದ ಆರ್ಥಿಕ ಶಕ್ತಿಗೆ ಅಪಾರ ಹಾನಿಯನ್ನುಂಟುಮಾಡಿದ್ದವು. 1960ರ ದಶಕದಲ್ಲಿ ಅಮೆರಿಕದ ಸಮೀಕ್ಷೆಯೊಂದು 'ಎಷ್ಟೇ ಆಹಾರ ಕಳುಹಿಸಿದರೂ ಭಾರತವನ್ನು ಬದುಕಿಸಲು ಅಸಾಧ್ಯ' ಎಂಬ ವರದಿ ನೀಡಿತ್ತು. ಇದು ಅಂದಿನ ನಮ್ಮ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು. ಇಂತಹ ಸನ್ನಿವೇಶದಲ್ಲಿ ಮೊಳಕೆಯೊಡೆದಿದ್ದು ಹಸಿರು ಕ್ರಾಂತಿ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಆಪದ್ಭಾಂಧವನಂತೆ ಕೃಷಿಕ್ಷೇತ್ರಕ್ಕೆ ಒದಗಿ ಬಂದವರೇ ಡಾ. ಎಂ.ಎಸ್‌. ಸ್ವಾಮಿನಾಥನ್‌. 

ಈ ಸಂದರ್ಭಕ್ಕೆ ಸಂಬಂಧಿಸಿದಂತೆ ದೇಶದ ರಕ್ಷಣೆಗೆ ಬೇಕಿರುವುದು ಆಹಾರ ಧಾನ್ಯವೇ ಹೊರತು ಬಂದೂಕುಗಳಲ್ಲ' ಎಂಬ ಮಾತನ್ನು ಹೇಳಿದ್ದರು. ಇದು ನಮ್ಮ ದೇಶದ ಅಂದಿನ ಆಹಾರ ಭದ್ರತೆಯ ದುಸ್ಥಿತಿಯನ್ನು ಹೇಳುತ್ತದೆ.

ಇಂತಹ ಆಪದ್ಭಾಂಧವ ಮೊಂಕೊಂಬು ಸಾಂಬಶಿವನ್ ಸ್ವಾಮಿನಾಥನ್ ವರು 1925ಆಗಸ್ಟ್‌ 7ರಂದು ತಮಿಳುನಾಡಿನಲ್ಲಿ ಜನಿಸಿದರು. ಕೃಷಿವಿಜ್ಞಾನಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅವರು ಹವಾಮಾನ ತಜ್ಞ, ಕೃಷಿ ವಿಜ್ಞಾನಿ, ಸಸ್ಯ ತಳಿವಿಜ್ಞಾನಿಯೂ ಆಗಿದ್ದ ಅವರು ಭಾರತದ ಕೃಷಿ ತಳಿಗಳ ಅಭಿವೃದ್ಧಿ ಮೂಲಕ ದೇಶದ ಆರ್ಥಿಕತೆ ಉತ್ತಮಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು.

60ರ ದಶಕದಲ್ಲಿ  ವಿಶ್ವದ ಹಸಿರು ಕ್ರಾಂತಿಯ ಪಿತಾಮಹರೆನಿಸಿದ  ಡಾ. ನಾರ್ಮನ್ ಬೋರ್ಲಾಗ್ ಅವರು ಹೊಸದಾಗಿ ಅಭಿವೃದ್ಧಿಪಡಿಸಿದ ಹೆಚ್ಚಿನ ಇಳುವರಿ ಕೊಡುವ ಮೆಕ್ಸಿಕನ್ ಕುಬ್ಜ ಗೋಧಿ ತಳಿಯ ಬಗ್ಗೆ ಸ್ವಾಮಿನಾಥನ್‌  ತಿಳಿದುಕೊಂಡರು.  ಬೋರ್ಲಾಗ್‌ರವರನ್ನು ಭಾರತಕ್ಕೆ ಆಹ್ವಾನಿಸಿದರು. ಅವರ ಸಹಕಾರದೊಂದಿಗೆ ಅಧಿಕ ಇಳುವರಿ ನೀಡುವ ಗೋಧಿ ಬೀಜಗಳನ್ನು ಅಭಿವೃದ್ಧಿಪಡಿಸಿದರು. 


By President's Secretariat (GODL-India), GODL-India, https://commons.wikimedia.org/w/index.php?curid=71524786
ಭಾರತದ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪ್ರಥಮ ಡಾ.ಎಂ.ಎಸ್.ಸ್ವಾಮಿನಾಥನ್ ಪ್ರಶಸ್ತಿಯನ್ನು  ಕೃಷಿಕ್ಷೇತ್ರದಲ್ಲಿನ ನಾಯಕತ್ವಕ್ಕಾಗಿ ಮಾರ್ಚ್ 15, 2005 ರಂದು ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಡಾ. ನಾರ್ಮನ್ ಇ. ಬೋರ್ಲಾಗ್ ಅವರಿಗೆ ಪ್ರದಾನ ಮಾಡಿ ಗೌರವಿಸಿದರು.

1960 ಹಾಗೂ 70ರ ದಶಕದಲ್ಲಿ ರಾಸಾಯನಿಕ ಹಾಗೂ ಜೈವಿಕ ತಂತ್ರಜ್ಞಾನದ ಮೂಲಕ ಅಕ್ಕಿ ಮತ್ತು ಗೋಧಿಯ ಉತ್ಪಾದನೆ ಹೆಚ್ಚಿಸಲು ರೂಪಿಸಲಾದ ಹಸಿರು ಕ್ರಾಂತಿ ಯೋಜನೆಯಲ್ಲಿ ಅಂದಿನ ಕೇಂದ್ರ ಕೃಷಿ ಸಚಿವರಾಗಿದ್ದ ಸಿ.ಸುಬ್ರಮಣಿಯಂ, ಜಗಜೀವನ್ ರಾಮ್ ಅವರೊಂದಿಗೆ ಸ್ವಾಮಿನಾಥನ್‌ ಕೆಲಸ ಮಾಡಿದ್ದರು.


      ಹೆಚ್ಚು ಇಳುವರಿ ನೀಡುವ ಗೋಧಿ ಮತ್ತು ಅಕ್ಕಿಯ ತಳಿಗಳ ಅಭಿವೃದ್ಧಿ, ರಸಗೊಬ್ಬರಗಳು ಮತ್ತು ಹೆಚ್ಚು ಪರಿಣಾಮಕಾರಿ ಕೃಷಿತಂತ್ರಗಳ ಸಂಯೋಜನೆಯನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಉತ್ಪಾದನೆಯನ್ನು ಹೆಚ್ಚಿಸುವುದು ಹೇಗೆ ಎಂಬುದನ್ನು ಭಾರತೀಯ ರೈತರಿಗೆ ಸ್ವಾಮಿನಾಥನ್ ತಿಳಿಸಿಕೊಟ್ಟರು. ಇದು ಭಾರತದಲ್ಲಿ ಕೃಷಿ ಉತ್ಪಾದನೆಹೆಚ್ಚಿಸಿ ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಕಾರಣವಾಯಿತು.

    ಅಧಿಕ ಇಳುವರಿಯ ಭತ್ತ ಹಾಗೂ ಗೋಧಿ ತಳಿಯ ಅಭಿವೃದ್ಧಿಗಾಗಿ 1987ರಲ್ಲಿ ಅವರಿಗೆ ಜಾಗತಿಕ ಆಹಾರ ಕ್ಷೇತ್ರದ ಬಹುಮಾನ ಲಭಿಸಿತ್ತು. ಈ ಪ್ರಶಸ್ತಿಯ ಹಣದಿಂದ ಅವರು ಚೆನ್ನೈನಲ್ಲಿ ಎಂಎಸ್ ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಸಂಶೋಧನಾ ಪ್ರತಿಷ್ಠಾನ ಮೂಲಕ ಕೃಷಿ ಕ್ಷೇತ್ರದ ಬೆಳವಣಿಗೆಗೆ ನಿರಂತರ ಪ್ರೋತ್ಸಾಹ ನೀಡಲು ಪ್ರಾರಂಭಿಸಿದರು. ಕೃಷಿ ವಿಜ್ಞಾನಿಗಳು, ಸಾಮಾಜಿಕ ವಿಜ್ಞಾನಿಗಳು ಮತ್ತು ಕ್ಷೇತ್ರ ಕಾರ್ಯಕರ್ತರ ನಡುವೆ ಸಂವಾದವನ್ನು ಪ್ರಾರಂಭಿಸಿದರು .  "ತಲುಪಿಲ್ಲದವರನ್ನು ತಲುಪಲು." ಫೌಂಡೇಶನ್‌ನ ಯೋಜನೆಗಳನ್ನು ಹಮ್ಮಿಕೊಂಡರು. ಕರಾವಳಿಯ ಜೀವವೈವಿಧ್ಯತೆಯನ್ನು ರಕ್ಷಿಸುವುದು, ಸೂಕ್ಷ್ಮ ಮಟ್ಟದ ಕೃಷಿಗೆ ಜೈವಿಕ ತಂತ್ರಜ್ಞಾನದ ವಿಧಾನಗಳನ್ನು ಉತ್ತೇಜಿಸುವುದು, ಪರಿಸರ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳನ್ನು ಅನುಸರಿಸುವುದು, ಸಮುದಾಯ ಶಿಕ್ಷಣ ಮತ್ತು ತಾಂತ್ರಿಕ ತರಬೇತಿಗಾಗಿ ಹೊಸ ವಿಧಾನಗಳನ್ನು ಬೆಳೆಸುವುದು, ಹೀಗೆ ಹತ್ತು ಹಲವು ಕಾರ್ಯಗಳನ್ನು ತಮ್ಮ ಸಂಸ್ಥೆಯ ಮೂಲಕ ಮಾಡುತ್ತಾ ಬಂದರು. ಅವರು ರಾಜ್ಯಸಭೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದು, ದೇಶಕ್ಕೊಂದು ಉತ್ತಮ ಕೃಷಿ ನೀತಿ ರೂಪಿಸಲೂ ಕಾರಣರಾಗಿದ್ದಾರೆ.

1961: ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ

1965: ಜೆಕೊಸ್ಲೋವಾಕ್ ಅಕಾಡೆಮಿ ಆಫ್ ಸೈನ್ಸಸ್‌ನಿಂದ ಮೆಂಡೆಲ್ ಸ್ಮಾರಕ ಪದಕ

1971: ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ

1986: ಆಲ್ಬರ್ಟ್ ಐನ್ಸ್ಟೈನ್ ವಿಶ್ವ ವಿಜ್ಞಾನ ಪ್ರಶಸ್ತಿ

1987: ಮೊದಲ ವಿಶ್ವ ಆಹಾರ ಪ್ರಶಸ್ತಿ

1991: ಪರಿಸರ ಸಾಧನೆಗಾಗಿ ಟೈಲರ್ ಪ್ರಶಸ್ತಿ

2000: ನಾಲ್ಕು ಸ್ವಾತಂತ್ರ್ಯಗಳ ಪ್ರಶಸ್ತಿ

2000: ಅಂತಾರಾಷ್ಟ್ರೀಯ ಭೌಗೋಳಿಕ ಒಕ್ಕೂಟದ ಪ್ಲಾನೆಟ್ ಮತ್ತು ಮಾನವೀಯತೆಯ ಪದಕ


ಇದಲ್ಲದೆ, ಅವರಿಗೆ ಆರ್ಡರ್ ಆಫ್ ದಿ ಗೋಲ್ಡನ್ ಹಾರ್ಟ್ ಆಫ್ ದಿ ಫಿಲಿಪೈನ್ಸ್, ಆರ್ಡರ್ ಆಫ್ ಅಗ್ರಿಕಲ್ಚರಲ್ ಮೆರಿಟ್ ಆಫ್ ಫ್ರಾನ್ಸ್, ಆರ್ಡರ್ ಆಫ್ ದಿ ಗೋಲ್ಡನ್ ಆರ್ಕ್ ಆಫ್ ದಿ ನೆದರ್ಲ್ಯಾಂಡ್ಸ್ ಮತ್ತು ರಾಯಲ್ ಆರ್ಡರ್ ಆಫ್ ಸಹಮೆಟ್ರಿ ಆಫ್ ಕಾಂಬೋಡಿಯಾ ಪ್ರಶಸ್ತಿಗಳನ್ನು ನೀಡಲಾಯಿತು.


ಭಾರತ ರತ್ನವನ್ನು ನೀಡುವ ಮೊದಲು, ಅವರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು, ಜೊತೆಗೆ ಎಚ್ ಕೆ ಫಿರೋಡಿಯಾ ಪ್ರಶಸ್ತಿ, ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ ಮತ್ತು ಇಂದಿರಾ ಗಾಂಧಿ ಪ್ರಶಸ್ತಿಯನ್ನು ಸಹ ನೀಡಲಾಯಿತು.




    ಸ್ವಾಮಿನಾಥನ್ ಅವರ ಹಲವು ದಶಕಗಳ ಸಂಶೋಧನೆಗಳು ಅವರಿಗೆ ಅನೇಕ ಅಂತಾರಾಷ್ಟ್ರೀಯ ಮನ್ನಣೆಗಳನ್ನು ತಂದುಕೊಟ್ಟಿವೆ. ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮವು ಸ್ವಾಮಿನಾಥನ್ ಅವರನ್ನು 'ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ' ಎಂದು ಬಣ್ಣಿಸಿದೆ. 1971ರಲ್ಲಿ ರೇಮನ್ ಮ್ಯಾಗ್ನೆಸೆ ಹಾಗೂ 1986ರಲ್ಲಿ ಆಲ್ಬರ್ಟ್ ಐನ್‌ಸ್ಟೀನ್‌ ವಿಶ್ವ ವಿಜ್ಞಾನ ಪ್ರಶಸ್ತಿಗಳೂ ಅವರಿಗೆ ಸಂದಿವೆ. 1999ರಲ್ಲಿ UNESCO  ಚಿನ್ನದ ಪದಕ, 1999 ಇಂದಿರಾ ಗಾಂಧಿ ಪ್ರಶಸ್ತಿ ಮತ್ತು 2000 ರಲ್ಲಿ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಫೋರ್ ಫ್ರೀಡಮ್ಸ್ ಪ್ರಶಸ್ತಿ, ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿಗಳೂ ಸ್ವಾಮಿನಾಥನ್‌ ಅವರಿಗೆ ಸಂದಿವೆ. ಇವುಗಳೊಂದಿಗೆ, ಭಾರತ ಸರ್ಕಾರವು ಪದ್ಮಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳನ್ನುನೀಡಿ ಸ್ವಾಮಿನಾಥನ್‌ ಅವರನ್ನು ಗೌರವಿಸಿದೆ. ಇವುಗಳಲ್ಲದೆ, ಹಲವಾರು ಅಂತಾರಾಷ್ಟ್ರೀಯ ಸಮ್ಮೇಳನಗಳು ಸಂಘ ಸಂಸ್ಥೆಗಳ ಸದಸ್ಯತ್ವಗಳು, ಫೆಲೋಶಿಪ್‌ಗಳು, ೮೪ ಕ್ಕೂ ಹೆಚ್ಚು ದೇಶ ವಿದೇಶಗಳ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್‌ ಸಮ್ಮಾನಗಳು ಅವರ ಮುಡಿಗೇರಿವೆ.  ಟೈಮ್ಸ್‌ ನಿಯತಕಾಲಿಕೆ ಪ್ರಕಟಿಸಿದ 20ನೇ ಶತಮಾನದ 20 ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ಸ್ವಾಮಿನಾಥನ್‌ ಅವರ ಹೆಸರು ಸೇರಿತ್ತು ಎನ್ನುವುದು ಅವರ ಸಾಧನೆಯ ದ್ಯೋತಕವಾಗಿದೆ. 

ಹಸಿರು ಕ್ರಾಂತಿಗೆ ೫೦ ವರ್ಷ ತುಂಬಿದ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಿ     

   ಕೆಲ ದಿನಗಳ ಹಿಂದೆ, 28 ಸೆಪ್ಟೆಂಬರ್ 2023 ರಂದು ತಮ್ಮ ೯೮ನೇ ವಯಸ್ಸಿನಲ್ಲಿ  ಚೆನ್ನೈನ ಸ್ವಗೃಹದಲ್ಲಿ ನಿಧನರಾದ ಎಂ.ಎಸ್‌ ಸ್ವಾಮಿನಾಥನ್‌ರವರ ಜೀವನ ಗಾಥೆ ಜಗದ ಯುವ ಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗಿದೆ. ಹಸಿರು ಕ್ರಾಂತಿಯ ಹರಿಕಾರನ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಹಲವು ಗಣ್ಯರು ಅವರ ಸಾಧನೆಯನ್ನು ಸ್ಮರಿಸಿ ಕಂಬನಿ ಮಿಡಿದಿದ್ದಾರೆ.

4 comments:

  1. ಡಾ ಎಮ್.ಎಸ್ ಸ್ವಾಮಿನಾಥನ್.. ಕೇವಲ ಒಬ್ಬ ಕೃಷಿ ತಜ್ಞರಾಗಿರದೆ ಅವರ ವಿವಿದ ಆಯಾಮದ ಮುಖಗಳನ್ನು ಪರಿಚಯಿಸಿದ ತಮ್ಮ ಈ ಲೇಖನಕ್ಕೆ ನನ್ನ ಕೋಟಿ ಕೋಟಿ ನಮನಗಳು.. ಒಬ್ಬ ತಾಯಿ ಕೇವಲ ತನ್ನ ಮಕ್ಕಳಿಗೆ ಊಣ್ಣಬಡಿಸದರೆ ಡಾ.ಸ್ವಾಮಿನಾಥನ್ ಅವರು ಇಡಿ ದೇಶದ ಮತ್ತು ವಿಶ್ವದ ಹೊಟ್ಟೆ ತುಂಬಿದರು. ಡಾ ಸ್ವಾಮಿನಾಥನ್ ಅವರು ಹೇಗೆ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಸಾಲಿನ ನಿಲ್ಲುತ್ತಾರೆ ಎಂದರೆ ಅವರು ತಮಗೆ 1987ರಲ್ಲಿ ಬಂದ ಜಾಗತಿಕ ಆಹಾರ ಕ್ಷೇತ್ರದ ಬಹುಮಾನದ ಮೊತ್ತದ ಹಣವನ್ನು ಸಂಶೋಧನಾ ಕೇಂದ್ರ ಸ್ಥಾಪಿಸಲು ಬಳಸಿಕೊಂಡಿರುವದೆ ಸಾಕ್ಷಿ. ಅಲ್ಲದೆ ಕೇವಲ ಬಯಲು ಸಿಮೇಗೆ ತಮ್ಮ ವಾಪ್ತಿಯನ್ನು ಸಿಮಿತ್ತಗೊಳಿಸದೆ ಕರಾವಳಿಯ ಜೀವವೈವಿಧ್ಯತೆಯ ರಕ್ಷಣೆಯ ಮಹತ್ವ, ಅಂದಿನ ದಿನಗಳಲ್ಲೂ ಆಧುನಿಕ ಜೈವಿಕ ತಂತ್ರಜ್ಞಾನದ ಅಳವಿಡಿಕೆಯು ಕೇವಲ ಭಾರತದ ಹಸಿವನ್ನು ನೀಗಿ ಮತ್ತು ವಿಶ್ವಕ್ಕೆ ಅಣ್ಣವನ್ನು ಇಕ್ಕುವ ಅಕ್ಷಯ ಪಾತ್ರೆ ಆಗುವಂತೆ ಮಾಡಿದ ಅವರ ಮುಂದಾಲೋಚನೆಗೆ ಹಿಡಿದ ಕೈಗನ್ನಡಿ. ಡಾ.ಸ್ವಾಮಿನಾಥನ್ ಇಂದಿನ ಯುವಪಿಳಿಗೆಯ ವಿಜ್ಞಾನಿಗಳಿಗೆ ಕೇವಲ ಆರ್ಥಿಕ ವಿಜ್ಞಾನಿಗಳಾಗದೆ ಪರಿಸರದ ಮಹತ್ವವನ್ನು ತಿಳಿಸುವ " ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ" ನಾಗುವ ಪರಿಯನ್ನು ತಿಳಿಸಿದ್ದಾರೆ.. ಅವರ ಕಾಯಕಕ್ಕೆ ಭಾರತದಿಂದ ಅರಸಿಬಂದ ಬಿರುದು, ಪ್ರಶಸ್ತಿ ಸನ್ಮಾನಗಳು ಸಾವಿರಾರು.. ಅಂತರಾಷ್ಟ್ರೀಯ ಪ್ರಶಸ್ತಿ, ಸನ್ಮಾನ ಹಾಗೂ 84+ ರಾಷ್ಟ್ರಗಳು ಡಾಕ್ಟರೇಟ್‌ ನೀಡಿರುವುದು. ನಮ್ಮ ಇಂದಿನ ಪೀಳಿಗೆ ಸ್ಪೂರ್ತಿ..
    ಭಾರತದ ಹಸಿವನ್ನು ನೀಗಿದ ನಮ್ಮ ಈ ವಿಜ್ಞಾನಶ್ರೇಷ್ಠ ಸಂತನ್ನಿಗೆ ಭಾರತದ ಅತ್ಯುನ್ನತ ಪ್ರಶಸ್ತಿ "ಭಾರತ ರತ್ನ" ಆದಸ್ಟು ಬೇಗ ಲಭಿಸುವಂತಾಗಲಿ ಎಂದು ನಮ್ಮೆಲ್ಲರ ಹಾರೈಕೆ..
    ಗುರೂಜಿ ತಮ್ಮ ಇಂತಹ ಸ್ಪೂರ್ತಿದಾಯಕ ಲೇಖನಗಳು ಇನ್ನಸ್ಟು ಬರಲಿ ಎಂದು ಆಶಿಸುತ್ತಾ..
    ವಂದನೆಗಳೊಂದಿಗೆ..🙏
    ಧನ್ಯವಾದಗಳು...🙏💐🙏
    ಡಾ. ಶಶಿಧರ ಕುಂಬಾರ ಸಶಿ.
    ಸರಕಾರಿ ಪ್ರೌಢಶಾಲೆ ಹಿರೇಪಡಸಲಗಿ.
    ತಾ. ಜಮಖಂಡಿ . ಜಿ. ಬಾಗಲಕೋಟೆ

    ReplyDelete
  2. ಸಕಾಲಿಕ ಸಂಸ್ಮರಣ ಲೇಖನಕ್ಕೆ ಧನ್ಯವಾದಗಳು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ IISc ನಲ್ಲಿ National Science Summit ಗೆ ಸ್ವಯಂ ಸೇವಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು ಆಗ ಈ ಮಹಾನ್ ವಿಜ್ಞಾನಿ ಸಾಮಾನ್ಯರಂತೆ ನಮ್ಮೊಂದಿಗೆ ಉಪಾಹಾರ ಸೇವಿಸಿದ್ದು ಕಣ್ಣಿಗೆ ಕಟ್ಟಿದಂತಿದೆ. ಸಿ. ಎನ್ ಆರ್ ರಾವ್ ಅವರೂ ಇದ್ದರು ಜೊತೆಗೆ. 🙏

    ReplyDelete
    Replies
    1. ಅದ್ಭುತ ಸವಿನೆನಪುಗಳು ಸರ್ 👌👌👌
      ನೀವು ಅವರ ಜೊತೆಗಿನ ಇನ್ನೊಂದಷ್ಟು ಮಾಹಿತಿಗಳನ್ನು ಒಳಗೊಂಡ ಲೇಖನ ಬರೆಯಬೇಕಿತ್ತು.

      Delete