Saturday, November 4, 2023

‘ಮರಳು’ಗೆ ಮರುಳಾಗದವರು ಉಂಟೆ ?

 ‘ಮರಳು’ಗೆ ಮರುಳಾಗದವರು ಉಂಟೆ ?

                      


 ಲೇಖಕರು ;  ರಮೇಶ,ವಿ ಬಳ್ಳಾ 

 ಅಧ್ಯಾಪಕರು, ಸರ್ಕಾರಿ ಪ್ರೌಢಶಾಲೆ ಮುರಡಿ -587202

 ತಾ;ಹುನಗುಂದ ಜಿ; ಬಾಗಲಕೋಟೆ


 

        ಮರಳಿನಲ್ಲಿ ಅಡುತ್ತಾ ಖುಶಿಪಡುತ್ತಿದ್ದ ನಮ್ಮ ಬಾಲ್ಯದ ನೆನಪನ್ನು ಕೆದಕುತ್ತಾ ಶಿಕ್ಸಕ ರಮೇಶ್‌ ವಿ ಬಳ್ಳಾ ಅವರು ಮರಳಿನ ಉತ್ಪತ್ತಿ ಹಾಗೂ ಉಪಯುಕ್ತತೆ ಬಗ್ಗೆ ಈ ಲೇಖನದಲ್ಲಿ ವಿವರವಾಗಿ ಬೆಳಕು ಚೆಲ್ಲಿದ್ದಾರೆ.

ರಾಮಾಯಣದಲ್ಲಿ ಬರುವ “ಶ್ರೀರಾಮ ಸೇತುವೆ”ಯ ನಿರ್ಮಾಣ ಕಾರ್ಯದಲ್ಲಿ ಪುಟ್ಟ ಅಳಿಲೊಂದು ‘ಮರಳು’ಸೇವೆ ಮಾಡಿ ಕೃತಾರ್ಥವಾದದ್ದನ್ನು ನೆನಪಿಸಿಕೊಳ್ಳಬಹುದು. ಹಾಗೆಯೇ, ಇತ್ತೀಚಿಗೆ ಸುದ್ಧಿ ವಾಹಿನಿಗಳು ನಿರಂತರ ಬಿತ್ತರಿಸುತ್ತಿರುವ  ಮರಳು ಮಾಫಿಯಾದ ಕರಾಳ ಮುಖಗಳ ದರ್ಶನ ಬೆಚ್ಚಿ ಬೀಳಿಸುವಂತದ್ದು. ಇವೆಲ್ಲದರ ನಡುವೆ ನಾಗರೀಕತೆಯ ನಾಗಾಲೋಟದಲ್ಲಿ ಮನುಷ್ಯನ ಸ್ವಾರ್ಥಕ್ಕೆ ತುತ್ತಾಗುತ್ತಿರುವ ಕಾಡುಗಳು ಅವನತಿ ಹೊಂದಿ, ಆಧುನಿಕ ಭರಾಟೆಯಲ್ಲಿ ಕಾಂಕ್ರೀಟ್ ಕಾಡುಗಳು ಮೇಲುಗೈ ಸಾಧಿಸುವಲ್ಲಿಯೂ ಮರಳು ಪ್ರಮುಖ ಪಾತ್ರ ವಹಿಸುತ್ತಿದೆ. ಮರಳು ಯಾರಿಗೆ ಬೇಡ? ಚಿಕ್ಕದಾದ ಉಸುಕಿನ ಕಾಗದದ   (emery paper) ತಯಾರಿಕೆಯಿಂದ ಹಿಡಿದು ಬೃಹತ್ತಾದ ಅಪಾರ್ಟ್‍ಮೆಂಟ್‍ಗಳ ನಿರ್ಮಾಣದವರೆಗೂ ಮರಳು ಮಹತ್ವ ಪಡೆಯುತ್ತದೆ.

‘ಮರಳು’ಗೆ ಮರುಳಾಗದವರುಂಟೆ ? ಚಿಕ್ಕವರಿದ್ದಾಗ ಕಟ್ಟಡಕ್ಕೆಂದು ಗುಡ್ಡೆ ಹಾಕಿದ ಉಸುಕಿನಲ್ಲಿ ಆಟವಾಡುತ್ತಾ ಪಾದದ ತುಂಬ ಉಸುಕು ತುಂಬಿ ‘ಗುಬ್ಬಿ ಮನೆ’ಕಟ್ಟಿದ್ದು ನಾವು ಮರೆಯಲಾರೆವು. ಸಡಿಲವಾದ ಚೊಣ್ಣಗಳಲ್ಲಿ ಉಸುಕು ತುಂಬಿ ಫಳ...ಫಳ.. ಅಂತಾ ಚೆಲ್ಲುತ್ತಾ ಮೋಜಿನಾಟವಾಡಿದ್ದು, ಹೊರಗಿನಿಂದ ಆಡಿ ಬಂದ ಮಗನ ಸ್ನಾನ ಮಾಡಿಸಲೆಂದು ಅವ್ವ ತಲೆಗೆ ಎಣ್ಣೆ ಹಚ್ಚುವಾಗ ಕೆರೆದಾಗ ಬೊಗಸೆಗಟ್ಟಲೆ ಉಸುಕು ಸಂಗ್ರಹವಾಗಿದ್ದು, ಇವೆಲ್ಲ ಎಳೆಯ ನೆನಪುಗಳೊಂದಿಗೆ ಮರಳು ತಳಕು ಹಾಕಿಕೊಂಡು ನಮಗೆಲ್ಲಾ ವಿಶಿಷ್ಟ ಅನುಭವ ನೀಡುತ್ತಿವೆ.


ಮರಳು ಏನು ? ಎಂತು ?

    ಈ ಭೂಮಿಯ ಮೇಲೆ ಭೌತಿಕ ಪರಿಸರದ ಒಂದು ಬೃಹತ್ ಭಾಗವಾಗಿ ಶಿಲಾರಾಶಿ ಆವರಿಸಿದೆ. ಬೆಟ್ಟಗುಡ್ಡ,ನದಿ ಸರೋವರ ಹಳ್ಳಕೊಳ್ಳ ಎಲ್ಲೆಂದರಲ್ಲಿ ಕಲ್ಲು, ಕಾಣಸಿಗುತ್ತದೆ. ಒತ್ತಡ, ಗಾಳಿ, ಉಷ್ಣತೆ, ಘರ್ಷಣೆ ಇತ್ಯಾದಿ, ಕೆಲ ಬಾಹ್ಯ ಪರಿಸ್ಥಿತಿಗಳ  ಪರಿಣಾಮ ಕಲ್ಲು ಆಂತರಿಕವಾಗಿ ಸಡಿಲಗೊಂಡು, ತನ್ನ ಪದರು ಸತ್ವ ಕಳೆದುಕೊಂಡು ಕ್ಷಯಿಸಿ ಹರಳುಗಳಾಗಿ ರೂಪು ಪಡೆಯುತ್ತದೆ. ಈ ಹರಳಿನ ರೂಪದ ಕಲ್ಲಿನ ಸಣ್ಣ ಸಣ್ಣ ತುಣುಕು (grains)ಗಳೇ ಮರಳು.

    ಮರಳು ಕಲ್ಲುರಾಶಿಯ ಉತ್ಪನ್ನ ಎಂಬುದು ಸ್ಪಷ್ಟ. ಹೀಗೆ ಕಲ್ಲಿಂದ ಉತ್ಪತ್ತಿಯಾಗುವ ಉತ್ಪನ್ನವನ್ನು ಹರಳಿನ ಗಾತ್ರದ ಆಧಾರದಲ್ಲಿ ಎರಡು ರೀತಿಯಲ್ಲಿ ವರ್ಗಿಕರಿಸಲಾಗುತ್ತದೆ. ಸ್ವಲ್ಪ ದೊಡ್ಡದಾದ ಕಣಗಳನ್ನು ಹರಳು, ಮರಳು, ಗರಸು (gravel) ಎಂದೆಲ್ಲಾ ಕರೆಯಲಾಗುತ್ತದೆ. ಹಾಗೆಯೇ, ಅತ್ಯಂತ ಚಿಕ್ಕದಾದ, ಕಡಿಮೆ ಗಾತ್ರದ ಉತ್ಪನ್ನವನ್ನು ಸೂಸುಮಣ್ಣು(silt), ಕೆಸರು, ಮಣ್ಣು(‌Clay) ಇತ್ಯಾದಿಯಾಗಿ ಕರೆಯಲಾಗುತ್ತದೆ. ಈ ಮರಳಿನ ಹರಳು ಗಾತ್ರ ಸಾಮಾನ್ಯವಾಗಿ 1/16 ಮಿ,ಮೀ ಯಿಂದ 2 ಮಿ,ಮೀವರೆಗೂ ವ್ಯಾಸವನ್ನು ಹೊಂದಿರುತ್ತದೆ. ಕಲ್ಲುಗಳ ಒಡಲಿನಿಂದ ಬೇರ್ಪಟ್ಟು ಮಳೆ ಗಾಳಿ ಮತ್ತು ನೀರಿನ ರಭಸಕ್ಕೆ ಒತ್ತಿ ಬಂದು ನದಿ ಮುಖಜಭೂಮಿ(ಜeಟಣಚಿs)ಗಳಲ್ಲಿ ಸಮುದ್ರ ತೀರದ (dune) ಪಾತ್ರಗಳಲ್ಲಿ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹಿತವಾದ ಇದೇ ಮರಳು ಕಾಲಕ್ರಮೇಣ ಗಟ್ಟಿಗೊಂಡು ಮರಳುಕಲ್ಲು (sandstone)ಗಳಾಗುತ್ತವೆ.


    ಮರಳು ರೂಪುಗೊಳ್ಳುವ ಬಹುಸಾಮಾನ್ಯ ಪ್ರಕ್ರಿಯೆಯು ವಾತಾವರಣವನ್ನು ಅವಲಂಬಿಸಿದೆ. ಭೂಮಿಯ ಮೇಲಿನ ಹೊರಹೊದಿಕೆಯು ಅನೇಕ ಖನಿಜಗಳಿಂದ ತುಂಬಿದೆ. ಅದರಲ್ಲಿ ಬೆಣಚುಕಲ್ಲು ಕೂಡಾ ಒಂದು. ಸಾಮಾನ್ಯವಾಗಿ ನಾವು ಬಳಸುವ ಮರಳು ಇದರ ಉತ್ಪನ್ನವೇ. ಅಂದರೆ ಮರಳಿನ ಮೂಲ ಬೆಣಚುಶಿಲೆ. ಬೇರೆ ಬೇರೆ ಶಿಲೆಗಳಿಂದಲೂ ಮರಳು ಸಿಗುತ್ತದೆ. ಆದg,É ಅದರ ಗುಣಮಟ್ಟ, ಶುದ್ಧತೆ, ಬಣ್ಣ ಎಲ್ಲವೂ ವಿಭಿನ್ನ. ಕರಾವಳಿ ಭಾಗದಲ್ಲಿ ಮಾನ್‍ಸೈಟ್, ಇಲ್ಮನೈಟ್, ಗಾರ್ನೆಟ್, ಬಿಳಿ ಮರಳು ಇತ್ಯಾದಿ ಬಗೆಗಳನ್ನು ನೋಡಬಹುದಾಗಿದೆ. ಬೆಣಚು ಮುಖ್ಯವಾಗಿ ಗ್ರಾನೈಟ್, ಪೆಗ್ಮಟೈಟ್ ನಂತಹ ಶಿಲೆಗಳಲ್ಲಿ ದೊರೆಯುತ್ತದೆ. ಇಂದು ನಾವು ಕಟ್ಟಡ ಕಾಮಗಾರಿಗಳಿಗೆ ಬಳಸುವ ಸಾಮಾನ್ಯ ಉಸುಕು ಬೆಣಚು ಶಿಲೆಯಿಂದಾದದ್ದು. ಉದಾಹರಣೆಗಾಗಿ, ಗ್ರಾನೈಟ್ ಶಿಲೆಯನ್ನು ತೆಗೆದುಕೊಂಡರೆ, ಇದು  ಬೆಣಚು ಕಲ್ಲು (quartz), ಫೆಲ್ಡಸ್ಪಾರ್ ಮತ್ತು ಇತರ ಖನಿಜಗಳನ್ನೊಳಗೊಂಡಿದೆ. ಈ ಕಲ್ಲು ಗಾಳಿಮಳೆ ರಭಸಕ್ಕೆ ಸಿಕ್ಕು ರಾಸಾಯನಿಕವಾಗಿ ಬಹುಬೇಗ ಕ್ಷಯಗೊಳ್ಳುತ್ತದೆ. ಹೀಗೆ ಮರಳು ರೂಪುಗೊಳ್ಳುವುದಕ್ಕೆ ಎಪಿಕ್ಲಾಸ್ಟಿಕ್ ಎನ್ನಲಾಗುತ್ತದೆ.

ಮರಳಿನ ರಾಸಾಯನಿಕ ಮರ್ಮ

ಮರಳು ಸಿಲಿಕೇಟುಗಳ ಹರಳು. ಮರಳನ್ನು ಸಾಮಾನ್ಯವಾಗಿ ಸಿಲಿಕಾ ಎಂದೇ ಗುರುತಿಸಲಾಗುತ್ತದೆ. ಮೊದಮೊದಲು ಸಿಲಿಕಾ ಒಂದು ಧಾತು ಎಂದೆ ಪರಿಗಣಿತವಾಗಿತ್ತು. ಬರ್ಜೀಲಿಯಸ್‍ನ ಸಂಶೋಧನೆ ಸಾಕಾರಗೊಂಡ ನಂತರ ಇದು ಒಂದು ಸಂಯುಕ್ತ ಎಂದು ತಿಳಿಯಿತು.  ಅತ ಸಿಲಿಕಾನ್ ಡೈ ಆಕ್ಸೈಡ್(SiO2) ನಿಂದ ಸಿಲಿಕಾ ಅನ್ನು ಪ್ರತ್ಯೇಕಿಸಿ ಧಾತು ಎಂದು ಸಾಧಿಸಿ ತೋರಿಸಿದ. ಬೆಣಚು ಪೂರ್ಣ ಪ್ರಮಾಣದ ಸಿಲಿಕಾಂಶವುಳ್ಳ ಒಂದು ಖನಿಜ. ಷಡ್ಭುಜಾಕೃತಿಯುಳ್ಳ ಬೆಣಚಿನ ಹರಳುಗಳು ತುದಿಯಲ್ಲಿ ಪಿರಾಮಿಡ್ ಆಕಾರದಲ್ಲಿ ಕಾಣುತ್ತವೆ. ಇದು ಬಲು ಗಡುಸಾದ ಖನಿಜ. ಉತ್ತಮ ಗುಣಮಟ್ಟದ ಬೆಣಚು ಕಲ್ಲು 97% ರಷ್ಟು ಸಿಲಿಕಾಂಶವನ್ನು ಹೊಂದಿರುತ್ತದೆ.

    ಮರಳನ್ನು ಕಾಯಿಸಿದಾಗ ಯಾವುದೇ ರೀತಿ ರಾಸಾಯನಿಕ ಕ್ರಿಯೆಗೆ ಒಳಪಡುವುದಿಲ್ಲ. ಇದಕ್ಕಿರುವ ವಿಶೇಷ ಗುಣಗಳಾದ ಅದಹ್ಯತೆ ಮತ್ತು ಉಷ್ಣಧಾರಣೆಯ ಕಾರಣದಿಂದ ಹುರಿಯುವಿಕೆಯಲ್ಲಿ ಬಳಸಲಾಗುತ್ತದೆ. ರಸ್ತೆಯ ಮೇಲೆ ಅರಳು, ನೆಲಗಡಲೆ, ಹಪ್ಪಳಗಳನ್ನು ಹುರಿಯುತ್ತಾ ಜನರನ್ನು ಆಕರ್ಷಿಸುವ ವ್ಯಾಪಾರಿಗಳನ್ನು ನೋಡಿರಬಹುದು. ಎಣ್ಣೆಯ ಅವಶ್ಯಕತೆಯಿಲ್ಲದ ಇವುಗಳನ್ನು ಕೊಂಡುಕೊಳ್ಳಲು ಜನ ಮುಗಿಬೀಳುವುದನ್ನು ಕಾಣಬಹುದು.

ಮರಳಿನ ಹರವು

ತಲಕಾಡಿನಲ್ಲಿ ಹರಡಿದ ಮರಳಿನ ದಿಬ್ಬಗಳಲ್ಲಿ ಕಾಲು ಕೀಳಲಾಗದು. ರಾಜಸ್ಥಾನದ ಮರಳುಗಾಡಿನಲ್ಲಿ ನಾವು ಒಂಟೆಯಂತೆ ನಡೆದಾಡುವುದು ಸುಲಭವಲ್ಲ. ಸಮುದ್ರ, ನದಿ ದಂಡೆಯಲ್ಲಿ ಸರಾಗವಾಗಿ ಓಡಾಡುವುದು ಕಷ್ಅಟ ಸಾಧ್ಯ. ಈ ಮರಳೆಲ್ಲಾ ಹೇಗೆ ಬಂತು ಎಂದು ಯೋಚಿಸುತ್ತಾ ಅದರ ಹರವು ಎಲ್ಲೆಲ್ಲಿ, ಹೇಗೆ ವಿಸ್ತರಿಸಿದೆ ಎಂದು ನೋಡೋಣ. ಬೇಸಿಗೆ ಕಾಲಕ್ಕೆ ನದಿ ಪಾತ್ರದಲ್ಲಿ ನೀರು ಖಾಲಿಯಾದಾಗ ಸಂಗ್ರಹಗೊಂಡಿರುವ ಮರಳು ನದಿ ಒಡಲು ತುಂಬಿ ತುಳುಕುವಂತೆ ಮಾಡುತ್ತದೆ. ಕಡಲತೀರ ಪಾತ್ರದಲ್ಲಿ ಉಕ್ಕಿಬರುವ ಅಲೆಗಳು ರಭಸದಿಂದ ಮರಳನ್ನು ಒತ್ತಿ ತರುತ್ತದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿವಿಧ ಕಡೆ ಸಾಮಾನ್ಯ ಕಟ್ಟಡ ಮರಳು ಲಕ್ಷ ಲಕ್ಷ ಟನ್‍ಗಳಲ್ಲಿ ಸಿಗುತ್ತದೆ. ಇನ್ನು ಕೆಲವು ಕಡೆಗಳಲ್ಲಿ ವಿಶೇಷ ಮರಳು ವಿಶಿಷ್ಟವಾಗಿ ದೊರೆಯುತ್ತದೆ. ಕರಾವಳಿ ಭಾಗದಲ್ಲಿ ದೊರೆಯುವ ಬಿಳಿ ಮರಳನ್ನು ‘ಬಿಳಿ ಬೆಳ್ಳಿ’ ಎಂದೆ ಕರೆಯಲಾಗುತ್ತದೆ. ಘಟಪ್ರಭಾ, ಮಲಪ್ರಭಾ ನದಿಪಾತ್ರದ ವಿಶೇಷ ಮರಳು ಎರಕ ಹುಯ್ಯುವ ಕೈಗಾರಿಕೆಗಳಿಗೆ ಹಾಗೂ ಕಮ್ಮಾರಸಾಲೆಗೆ ಬೇಕಾಗುತ್ತದೆ. ನಯವಾದ, ಮೃದು ಉಸುಕು ಕೆಲವೇ ಭಾಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ. ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಳಿಗೆ ಬೇಕಾಗುವ ಅಚ್ಚಿನ ಮರಳು(moulding sand) ಚಿತ್ರದುರ್ಗ, ಬಳ್ಳಾರಿ, ಗುಲ್ಬರ್ಗಾ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಲಭ್ಯವಾಗುತ್ತದೆ.

ಮರಳಿನ ನೆರವು

ಬಹು ಮುಖ್ಯವಾಗಿ ಕಟ್ಟಡ ಕಾಮಗಾರಿಗಳಿಗೆ ಸಿಮೆಂಟ್‍ದೊಂದಿಗೆ ಬೆರೆಸಿ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಲು ಮರಳು ಮಹತ್ವದ ಪಾತ್ರವಹಿಸುತ್ತದೆ. ಶುಭ್ರ ಬಣ್ಣದ ಮರಳನ್ನು ಗಾಜಿನ ತಯಾರಿಕೆಯಲ್ಲಿ ಬಳಸುವ ಮೂಲಕ ನಾನಾ ವಿಧದ ಗಾಜಿನ ಪಾತ್ರೆ ಪಗಡೆಗಳನ್ನು ಸೃಷ್ಠಿಸಬಹುದಾಗಿದೆ. ಎರಕ ಹುಯ್ಯುವಲ್ಲಿ, ಅಚ್ಚುಗಳ ತಯಾರಿಕೆಯಲ್ಲಿ ಮರಳು ನೆರವಾಗುತ್ತದೆ.

ಇತ್ತೀಚಿಗೆ ಹೆಚ್ಚು ಪ್ರಚಲಿತವಾಗುತ್ತಿರುವ ಮರಳು ಕಲಾಕೃತಿಗಳ ಬಗ್ಗೆ ಕೇಳಿರಬಹುದು. ಮಹಾನ್ ವ್ಯಕ್ತಿಗಳ, ಶ್ರೇಷ್ಠ ಸ್ಮಾರಕಗಳ ಮುಂತಾದ ಚಿತ್ರಗಳನ್ನು ಉಸುಕಿನಲ್ಲಿ ಬಿಡಿಸಿ ಬೆರಗುಗೊಳಿಸುವವರು ಸಾಕಷ್ಟಿದ್ದಾರೆ. ಅವರ ಸಾಧನೆಗೆ ಈ ಮರಳೇ ಸ್ಫೂರ್ತಿ ಹಾಗೂ ಸಹಾಯಕವಲ್ಲವೇ?. ಮರಳು ಕಾಗದದಿಂದ ಒರಟು ಮರದ ಹಲಗೆಗಳನ್ನು, ಜಂಗು ಹತ್ತಿದ ಕಬ್ಬಿಣದ ಸಾಮಗ್ರಿಗಳಾದ ಮಂಚ, ಕುರ್ಚಿ, ಟ್ರೇಜರಿ ಮುಂತಾದವುಗಳನ್ನು ತಿಕ್ಕಿ ನಯಗೊಳಿಸಿ ಅಂದ ಮಾಡುವಲ್ಲಿ ಮರಳಿನ ಕರಾಮತ್ತಿದೆ. ಮಕ್ಕಳಿಗೆ ಬಲು ಇಷ್ಟವಾದ ಕುರಕಲು ತಿನಿಸುಗಳನ್ನು ಹುರಿದು ತಯಾರಿಸುವಲ್ಲಿ ಮರಳು ನೆರವಾಗಿದೆ.

ಇಷ್ಟೆಲ್ಲಾ ನೆರವಿನ ಈ ಮರಳು ಮಕ್ಕಳಿಗೆ ಆಟದ ವಸ್ತುವಾಗಿ, ಕಟ್ಟಡಗಾರರಿಗೆ, ಕೈಗಾರಿಕೊದ್ಯಮಿಗಳಿಗೆ ಬಹುಬೇಡಿಕೆಯ ಪದಾರ್ಥವಾಗಿ ಪರಿಣಮಿಸಿದೆ. ಹಾಗಾಗಿ ಮರಳು ನಮ್ಮನ್ನೆಲ್ಲ ಒಂದು ರೀತಿಯಲ್ಲಿ ಮರುಳು ಮಾಡಿದೆ ಎಂತಲೇ ಹೇಳಬಹುದು ಅಲ್ಲವೇ?.

 

                                                       *****************

                                            

 

No comments:

Post a Comment