Saturday, November 4, 2023

ಬನ್ನಿ ಕ್ಯಾನ್ಸರ್ ಕುರಿತು ಜನಜಾಗೃತಿ ಮೂಡಿಸೋಣ

ಬನ್ನಿ ಕ್ಯಾನ್ಸರ್ ಕುರಿತು ಜನ ಜಾಗೃತಿ ಮೂಡಿಸೋಣ.



ಮಿಂಚಂಚೆ :basu.ygp@gmail.com 
✍️ಲೇಖನ✍️  ಬಸವರಾಜ ಎಮ್ ಯರಗುಪ್ಪಿ                                             ಬಿ ಆರ್ ಪಿ ಶಿರಹಟ್ಟಿ  ಸಾ.ಪೊ ರಾಮಗೇರಿ, 
ತಾಲ್ಲೂಕು ಲಕ್ಷ್ಮೇಶ್ವರ, ಜಿಲ್ಲಾ ಗದಗ 




                                                                                             *ಕ್ಯಾನ್ಸರ್ ಎಂದಾಕ್ಷಣ ಭಯವೇಕೆ.? ಶೀಘ್ರವೇ ವೈದ್ಯರನ್ನು ಕಾಣೀರಿ; ಅದಕ್ಕೂ ಮದ್ದಿದೆ ಎನ್ನುವುದನ್ನು ಮನಗಾಣಿರಿ.* *ನವ್ಹಂಬರ್  07 ರಾಷ್ಟ್ರೀಯ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ ತನ್ನಿಮಿತ್ತ ವಿಶೇಷ ಲೇಖನ.*

"ಕ್ಯಾನ್ಸರ್ ನಮ್ಮ ಜೀವನದ ಒಂದು ಭಾಗವಾಗಿದೆ,  ಆದರೆ ಇದು ನಮ್ಮ ಇಡೀ ಜೀವನವಲ್ಲ"ಎಂದು 'ನಿಕ್ ಪ್ರೊಚಾಕ್' ಹೇಳಿರುವಂತೆ ಕ್ಯಾನ್ಸರ್ ರೋಗಕ್ಕೆ ಅಂಜದೆ ಧೈರ್ಯದಿಂದ ಜೀವನ ಸಾಗಿಸಬೇಕು ಹಾಗು ಕ್ಯಾನ್ಸರ್ ಒಂದು ಪದ, ಒಂದು ವಾಕ್ಯವಲ್ಲ ಎಂದು ಮನಗಾಣಬೇಕು.ಇಂದಿನ ಆಧುನಿಕ ಯುಗದಲ್ಲಿ ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಯಾವ ವ್ಯಕ್ತಿಗೆ ಯಾವ ಕಾಯಿಲೆ ಇದೆ ಅಥವಾ ಯಾವ ವ್ಯಕ್ತಿ ಯಾವ ಕಾಯಿಲೆಗೆ ತುತ್ತಾಗುತ್ತಾನೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಬದಲಾಗುತ್ತಿರುವ ಕಾಲದಲ್ಲಿ,ರೋಗಗಳು ಒಂದರ ನಂತರ ಒಂದರಂತೆ ಬಂದೆರಗಿ ಜನರನ್ನು ಹೆದರಿಸುತ್ತಿವೆ.ಈ ಹಿಂದೆ 2020 ರಲ್ಲಿ ಜಗತ್ತನ್ನೇ ಕಾಡಿದ  ಮತ್ತು ಈಗಲೂ ಅಲ್ಲಲ್ಲಿ ಕಾಡುತ್ತಿರುವ  ಕರೋನಾವೈರಸ್ ತಂದಿರುವ ಸಾಂಕ್ರಾಮಿಕ ಮಹಾಮಾರಿಗೆ ಇಡೀ ಜಗತ್ತೇ ಬೆಚ್ಚಿಬಿದ್ದಿರುವುದನ್ನು ನಾವು ಮರೆತಿಲ್ಲ.  ಅದೇ ರೀತಿಯ ಭಯಾನಕ ಕಾಯಿಲೆಗಳಲ್ಲಿ ಕ್ಯಾನ್ಸರ್ (ಅರ್ಬುದ)ಕೂಡ ಒಂದು.ವಿಶ್ವದ ಎಲ್ಲಾ ಕಾಯಿಲೆಗಳಲ್ಲಿ ಕ್ಯಾನ್ಸರ್ ಅತ್ಯಂತ ಅಪಾಯಕಾರಿಯಾಗಿದೆ. ಈ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷ  ನವ್ಹಂಬರ 07 ರಂದು ಭಾರತದಾದ್ಯಂತ "ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ" ದಿನವನ್ನು ಆಚರಿಸಲಾಗುತ್ತದೆ. ಅದೆ ರೀತಿ ಪ್ರತಿ ವರ್ಷ ಫೆಬ್ರವರಿ 04 ರಂದು ವಿಶ್ವದಾದ್ಯಂತ 'ವಿಶ್ವ ಕ್ಯಾನ್ಸರ್' ದಿನವನ್ನು ಸಹ ಆಚರಿಸಲಾಗುತ್ತಿದೆ. 

ಈ ದಿನವನ್ನು ಭಾರತ ಸರ್ಕಾರದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇತರ ಕೆಲವು ಪ್ರಮುಖ ಕ್ಯಾನ್ಸರ್ ಸಂಘಗಳು,ಚಿಕಿತ್ಸಾ ಕೇಂದ್ರಗಳು, ಸಂಶೋಧನಾ ಸಂಸ್ಥೆಗಳು ಮತ್ತು ರೋಗಿಗಳ ಗುಂಪುಗಳ ಬೆಂಬಲದೊಂದಿಗೆ ಈ ದಿನವನ್ನು  ದೇಶದಾದ್ಯಂತ ಆಯೋಜಿಸಲಾಗುತ್ತದೆ.

*#ಉದ್ದೇಶ:* 

ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಅದನ್ನು ತಪ್ಪಿಸುವ ಮಾರ್ಗೋಪಾಯಗಳ ಬಗ್ಗೆ ಜಾಗೃತಿಗೊಳಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

*#ಇತಿಹಾಸ:*

ದೇಶದಲ್ಲಿ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮವನ್ನು 1975 ರಲ್ಲಿ ಪ್ರಾರಂಭಿಸಲಾಯಿತು. ಹೀಗೆ ಮುಂದುವರೆದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಮೊದಲ ಬಾರಿಗೆ ಭಾರತೀಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಸೆಪ್ಟೆಂಬರ್ 2014 ರಲ್ಲಿ ಘೋಷಿಸಿದರು. ಅಂದಿನಿಂದ ಇಂದಿನವರೆಗೆ ಈ ದಿನವನ್ನು ಆಚರಿಸುತ್ತಾ ಬಂದಿದ್ದೇವೆ. 

ಕ್ಯಾನ್ಸರ್ ಅಥವಾ ಅರ್ಬುದವು  ವಿಶ್ವದ ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ 2ನೆ ಅಗ್ರಸ್ಥಾನವನ್ನು ಪಡೆದಿದೆ. ಮೊದಲಸ್ಥಾನ ಹೃದಯಾಘಾತ ಅಲಂಕರಿಸಿದೆ.ವಿಶ್ವದಾದ್ಯಂತ ಕೊಟ್ಯಾಂತರ ಮಂದಿ ಕ್ಯಾನ್ಸರ್ ನಿಂದಾಗಿ ಸಾಯುತ್ತಿದ್ದಾರೆ. ಸರಿಸುಮಾರು ವರ್ಷದಲ್ಲಿ 15 ಮಿಲಿಯನ್ ಮಂದಿ ಕ್ಯಾನ್ಸರ್‍ನಿಂದಾಗಿ ಬಳಲುತ್ತಿದ್ದಾರೆ ಮತ್ತು 8 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ಬಾಯಿ,ಗಂಟಲು, ಶ್ವಾಸಕೋಸ, ಕರುಳಿನ ಕ್ಯಾನ್ಸರ್ ಮತ್ತು ಪ್ರೋಸ್ಟೆಟ್ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಿರುತ್ತದೆ. ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಜನನಾಂಗ (ಸರ್ವಿಕ್ಸ್ ಅಂದರೆ ಗರ್ಭಕೋಶದ ಕುತ್ತಿಗೆ) ದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಬಹುದು.ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ  ಒಂದು ಅಥವಾ 2ನೇ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ. ಆದರೆ ಭಾರತದಂತಹ  ಇನ್ನೂ ಮುಂದುವರಿಯುತ್ತಿರುವ ದೇಶಗಳಲ್ಲಿ ಜನರು ಅನಕ್ಷರತೆ, ಬಡತನ ಮೂಢನಂಬಿಕೆ, ಅಜ್ಞಾನ ಮತ್ತು ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ವೈದ್ಯರ ಬಳಿ ಬರುವಾಗಲೇ ಕ್ಯಾನ್ಸರ್ ಮೂರು ಅಥವಾ ನಾಲ್ಕನೇ ಹಂತಕ್ಕೆ ತಲಪಿರುತ್ತದೆ. ಈ ಹಂತದಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡಿ  ಗುಣಮುಖವಾಗಿಸುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಈ ನಿಟ್ಟಿನಲ್ಲಿ ನವಂಬರ್ 07ನ್ನು ಕ್ಯಾನ್ಸರ್ ಜಾಗೃತಿ ದಿನ ಎಂದು ಆಚರಿಸಿ ಜನರಲ್ಲಿ ಕ್ಯಾನ್ಸರ್ ಬಗೆಗಿನ ಮೂಢನಂಬಿಕೆ ಮತ್ತು ಅಜ್ಞಾನಗಳನ್ನು ತೊಡೆದು ಹಾಕಿ ಹೆಚ್ಚಿನ ತಿಳುವಳಿಕೆ ಮತ್ತು ಅರಿವು ನೀಡುವ ಕಾರ್ಯ ನಡೆಸಲಾಗುತ್ತದೆ.

*#ಅರ್ಬುದ ರೋಗ ಬರಲು ಕಾರಣಗಳೇನು..?:*

ಕ್ಯಾನ್ಸರ್‌ ಬರಲು ಶೇ.90ರಷ್ಟು ತಂಬಾಕು ಸೇವನೆಯೇ ಕಾರಣ. ಗುಟ್ಕಾ, ಪಾನ್‌ಪರಾಗ್‌, ಮಾರುತಿ ಮತ್ತು ಮಾಣಿಕ್‌ಚಂದ್‌ ಮುಂತಾದುವುಗಳಿಂದ ಬಾಯಿ, ಗಂಟಲು ಕ್ಯಾನ್ಸರ್‌ ಬರುತ್ತದೆ. ಇದರ ಜೊತೆಗೆ ಧೂಮಪಾನ, ಮಧ್ಯಪಾನ ಸೇರಿಕೊಂಡು ಶ್ವಾಸಕೋಶ, ಕರುಳು, ಅನ್ನನಾಳ.ಯಕೃತ್‌, ಮೂತ್ರಪಿಂಡ ಇತ್ಯಾದಿ ಕ್ಯಾನ್ಸರ್‌ಗೆ ತುತ್ತಾಗುತ್ತದೆ. 

ಅದೆ ರೀತಿ ಆಲ್ಕೋಹಾಲ್, ಡ್ರಗ್ಸ್ ಬಳಕೆ ಮತ್ತು ಕಳಪೆ ಆಹಾರ.ಅಸುರಕ್ಷಿತ ಲೈಂಗಿಕತೆಯು ಗರ್ಭಕಂಠದ ಕ್ಯಾನ್ಸರ್‌ಗೆ ಮುಖ್ಯ ಅಪಾಯಕಾರಿ ಅಂಶವಾಗಿದೆ.ಇದು ಮಹಿಳೆಯರಲ್ಲಿ ಎರಡನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ವಿಧವಾಗಿದೆ.ವಾಯು ಮಾಲಿನ್ಯದಿಂದಲೂ ಶ್ವಾಸಕೋಶದ ಕ್ಯಾನ್ಸರ್‌ನ ಹೆಚ್ಚಿನ ಅಪಾಯವಿದೆ. ಹಾಗೆಯೇ ಲ್ಯಾನ್ಸೆಟ್ ವರದಿಯು ತಂಬಾಕು ಸೇವನೆಯು 14 ವಿಧದ ಕ್ಯಾನ್ಸರ್ ಗಳಿಗೆ ಕಾರಣವಾದ ಅಂಶವಾಗಿದೆ ಎಂದು ಹೇಳುತ್ತದೆ. ಹೀಗಾಗಿ ಭಾರತದಲ್ಲಿ, ವಾರ್ಷಿಕವಾಗಿ ಸುಮಾರು 1.1 ಮಿಲಿಯನ್ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಮೂರನೇ ಎರಡರಷ್ಟು ಕ್ಯಾನ್ಸರ್ ಪ್ರಕರಣಗಳು ಮುಂದುವರಿದ ಹಂತದಲ್ಲಿ ರೋಗನಿರ್ಣಯ ಮಾಡಲ್ಪಡುತ್ತವೆ, ರೋಗಿಗಳ ಬದುಕುಳಿಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. 

*#ಕ್ಯಾನ್ಸರ್ ತಡೆಗಟ್ಟುವುದು ಹೇಗೆ..?:* 

*ಕ್ಯಾನ್ಸರ್ನಂತಹ ಮಾರಣಾಂತಿಕ ಯಾವುದೇ ಆರೋಗ್ಯ ಸಮಸ್ಯೆಯ ಕಾಯಿಲೆ ಬಂದಾಗ ಅದರ ತಡೆಗಟ್ಟುವಿಕೆಯ ಮೊದಲ ಹೆಜ್ಜೆ ಜಾಗೃತಿಯಾಗಿದೆ.

*ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವು ಆರಂಭಿಕ ಪತ್ತೆ ಮತ್ತು ಪ್ರಮುಖ ಕ್ಯಾನ್ಸರ್-ಉಂಟುಮಾಡುವ ಜೀವನಶೈಲಿಯನ್ನು ತಪ್ಪಿಸುವ ಬಗ್ಗೆ ಜಾಗೃತಿ ಮೂಡಿಸುವುದು. 

*ಕ್ಯಾನ್ಸರ್ ಗಡ್ಡೆಗಳನ್ನು ಚಿಕಿತ್ಸೆ ಮೂಲಕ ನಾಶ ಮಾಡಿ ಅದು ಮತ್ತೆ ಬೆಳೆಯದಂತೆ ಮಾಡಲಾಗುತ್ತದೆ.

*ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆಗೆ, ತ್ವರಿತವಾಗಿ ಸಂಶೋಧನೆಯನ್ನು ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು.

*ಕೊನೆಯದಾಗಿ ಮಕ್ಕಳಾಗಲಿ, ಯುವಕರಾಗಲಿ, ನಾಗರಿಕರಾಗಲಿ ಹಾಗೂ ವೃದ್ಧರಾಗಾರಲಿ ಅವರಿಗೆ ದುಶ್ಚಟಗಳಿಂದ ದೂರವಿದ್ದರೆ ಸಾಕು ಕ್ಯಾನ್ಸರ್‌ ಅನ್ನು ದೂರವಿಡಬಹುದು . 

*#ಚಿಕಿತ್ಸೆ ಹೇಗೆ..?:*

ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ.ಶೇಕಡಾ 90ರಷ್ಟು ಅರ್ಬುದ ರೋಗವನ್ನು ಶಸ್ತ್ರಚಿಕಿತ್ಸೆಯ ಮೂಲಕ  ತೆಗೆಯಲಾಗುತ್ತದೆ. ಆದರೆ ಕೆಲವೊಂದು ಬಗೆಯ ಅರ್ಬುದ ರೋಗಗಳನ್ನು ಕಿಮೋಥೆರಫಿಯಿಂದ ಗುಣಪಡಿಸಲಾಗುತ್ತದೆ.ಆರಂಭಿಕ ಹಂತದಲ್ಲಿ ಸರ್ಜರಿ ಖಂಡಿತವಾಗಿಯೂ ಉತ್ತಮ.ಆದರೆ ಮುಂದುವರಿದ ಹಂತದಲ್ಲಿ (3ನೆ ಮತ್ತು 4ನೆ ಹಂತದಲ್ಲಿ)

ಸರ್ಜರಿಯ ಜೊತೆಗೆ ಕಿಮೋಥೆರಫಿ ಮತ್ತು ರೆಡೀಯೋಥೆರಫಿಯ(ವಿಕಿರಣ ಚಿಕಿತ್ಸೆ) ಅವಶ್ಯಕತೆ ಇರುತ್ತದೆ. ಚಿಕಿತ್ಸೆಯ ಆಯ್ಕೆ ಮತ್ತು ನಿರ್ಧಾರವನ್ನು ವೈದ್ಯರು ನಿರ್ಧರಿಸುತ್ತಾರೆ. ವೈದ್ಯರ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಿದಲ್ಲಿ ಖಂಡಿತವಾಗಿಯೂ ಕ್ಯಾನ್ಸರ್ ರೋಗವನ್ನು ಗೆಲ್ಲಬಹುದು.

ಇಂದು ಮೇರಿ ಕ್ಯೂರಿ ನೆನೆಯೋಣ:

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ನವೆಂಬರ್ 07 ರಂದು ಕಾದಂಬರಿಗಾರ್ತಿ, ನೊಬೆಲ್ ಪ್ರಶಸ್ತಿ ವಿಜೇತೆ, ವಿಜ್ಞಾನಿ "ಮೇಡಮ್ ಕ್ಯೂರಿ" ಅವರ ಜನ್ಮ ವಾರ್ಷಿಕೋತ್ಸವವನ್ನು ಇಂದು ಆಚರಿಸಲಾಗುತ್ತದೆ.1867 ರಲ್ಲಿ ಪೋಲೆಂಡ್‌ನ ವಾರ್ಸಾದಲ್ಲಿ ಜನಿಸಿದ ಮೇರಿ ಕ್ಯೂರಿ ಅವರು ರೇಡಿಯಂ ಮತ್ತು ಪೊಲೊನಿಯಂನ ಆವಿಷ್ಕಾರದಿಂದಾಗಿ  ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅವರ ವೈಜ್ಞಾನಿಕ ಸಂಶೋಧನಾ ಕಾರ್ಯವು ಕ್ಯಾನ್ಸರ್ ಚಿಕಿತ್ಸೆಗಾಗಿ ಪರಮಾಣು ಶಕ್ತಿ ಮತ್ತು ರೇಡಿಯೊಥೆರಪಿಯ ಅಭಿವೃದ್ಧಿಗೆ ಕಾರಣವಾಯಿತು ಎಂದು ಇಲ್ಲಿ ಅವರ ಕೊಡುಗೆಯನ್ನು ನೆನಪಿಸಿಕೊಳ್ಳೋಣ.

*ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಿ; ಆದರೆ ಭಯವನ್ನಲ್ಲ:*

ದೇಹದಲ್ಲಿ ಯಾವುದೇ ರೀತಿಯ ಅಸಾಮಾನ್ಯ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ದೇಹದಲ್ಲಿ ಕ್ಯಾನ್ಸರ್ ಗಡ್ಡೆಗಳು ಬೆಳೆಯಲು ಆರಂಭಿಸಿದರೆ, ಆಗ ಅದು ದೇಹವಿಡಿ ವ್ಯಾಪಿಸಿ ಹಾನಿ ಉಂಟು ಮಾಡುತ್ತದೆ. ಇದು ಹೊಸ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ. ಹಾಗಾಗಿ ನಾವು ಎಲ್ಲದಕ್ಕೂ ಪರಿಹಾರವನ್ನು ಕಂಡುಕೊಂಡಿದ್ದೇವೆ ಆದರೆ ಇನ್ನೂ ಕ್ಯಾನ್ಸರ್ ರೋಗಿಗಳ ಮಾರಣಾಂತಿಕ ಸಮಸ್ಯೆ ಹಾಗೇ ಉಳಿದಿದೆ.ಇದು ನಮ್ಮೆಲ್ಲರಲ್ಲಿ ಅದರ ಬಗ್ಗೆ ಹುಟ್ಟುಹಾಕುವ ಅರಿವಿನ ಗುರಿಯನ್ನು ಹೊಂದಬೇಕಾಗಿದೆ. ಮೊದಲು ಕ್ಯಾನ್ಸರ್ ರೋಗದ ತೀವ್ರತೆಯ ಬಗ್ಗೆ ತಿಳುವಳಿಕೆಯನ್ನು ನೀಡಬೇಕಾಗಿದೆ.ನಂತರ ಅದರ ತಡೆಗಟ್ಟುವಿಕೆ, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯನ್ನು ಉತ್ತೇಜಿಸಲು ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿದೆ. ಆದ್ದರಿಂದ ನಾವೆಲ್ಲರೂ ಅದರಲ್ಲಿ ನಮ್ಮ ಕೊಡುಗೆಯನ್ನು ನೀಡುವ ಮತ್ತು ಉತ್ತಮವಾದ ಜಾಗತಿಕ ಆರೋಗ್ಯ ಪರಿಸರಕ್ಕೆ ದಾರಿ ಮಾಡಿಕೊಡಲು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಾವೆಲ್ಲರೂ ಶಪಥಗೈಯೋಣ.   ಬಡತನ, ಅನಕ್ಷರತೆ ಅಜ್ಞಾನ,ಮೂಢನಂಬಿಕೆಗಳಿಂದ ತುಂಬಿರುವ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್‍ನ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಪ್ರತಿಯೊಬ್ಬ ವಿದ್ಯಾವಂತ ಪ್ರಜೆ ತಮ್ಮ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದಲ್ಲಿ ಅರ್ಬುದ ರೋಗವನ್ನು ಖಂಡಿತವಾಗಿಯೂ ಜಯಿಸಬಹುದು ಮತ್ತು ಅದರಲ್ಲಿಯೇ ನಮ್ಮೆಲ್ಲರ ಸುಖ ಶಾಂತಿ ನೆಮ್ಮದಿ ಮತ್ತು ಭವಿಷ್ಯ ಅಡಗಿದೆ ಎಂದು ಜಾಗೃತಿ ಮೂಡಿಸೋಣ.ಏನಂತೀರಿ ತಾವುಗಳು..? 

ಒಟ್ಟಾರೆಯಾಗಿ ನಾವೆಲ್ಲರೂ ಒಂದಾಗಿ ಸಮಾಜದಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಬದಲಾವಣೆ ತರಲು ಪ್ರಯತ್ನಿಸೋಣ.ಕ್ಯಾನ್ಸರ್ ವಿರುದ್ಧ ಸಮರ ಸಾರಿರುವ ನಮ್ಮ ವೈದ್ಯಲೋಕದ ಸ್ಥೈರ್ಯವನ್ನು ಹೆಚ್ಚಿಸೋಣ.ಕ್ಯಾನ್ಸರ್ ಗುಣಪಡಿಸಲು ಪ್ರಯತ್ನಿಸುತ್ತಿರುವ ವೈದ್ಯಲೋಕಕ್ಕೆ ನಮ್ಮ ಬೆಂಬಲ ನೀಡೋಣ.ಕ್ಯಾನ್ಸರ್ ನಿಂದ ಬಳಲುತ್ತಿರುವವರಲ್ಲಿ ಆತ್ಮವಿಶ್ವಾಸ ಮೂಡಿಸಿ, ಅವರ ಬದುಕಿಗೆ ದಾರಿ ದೀಪ ವಾಗೋಣ.ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತರಾಗೋಣ. 

*#ಕೊನೆಯ ಮಾತು:*

"ನೀವು  ಕ್ಯಾನ್ಸರ್ ರೋಗಕ್ಕೆ ಅಂಜದೆ ಧೈರ್ಯದಿಂದ ಅದರ ವಿರುದ್ಧ ಹೋರಾಟಕ್ಕೆ ನಿಂತರೆ, ಆ ರೋಗವನ್ನು ಸುಲಭವಾಗಿ ದುರ್ಬಲಗೊಳಿಸಿ, ಸಂತೋಷದಿಂದ ಇರಲು ಸಾಧ್ಯವಾಗುತ್ತದೆ" ಎಂದು  ಡೇವಿಡ್ ಕೋಚ್ ಹೇಳಿರುವ ಮಾತುಗಳನ್ನು ಇಲ್ಲಿ ಸ್ಮರಿಸಬಹುದು.

ಚಿತ್ರ ಕೃಪೆ:ಜಾಲತಾಣ 



No comments:

Post a Comment