Saturday, November 4, 2023

ತ್ರಿಶಂಕು ಲೋಕ ಸೃಜಿಸಿದ ವಿಜ್ಞಾನಿ

                        ತ್ರಿಶಂಕು ಲೋಕ ಸೃಜಿಸಿದ ವಿಜ್ಞಾನಿ

ಲೇ. ರಾಮಾಚಂದ್ರಭಟ್‌ ಬಿ.ಜಿ.

 ತೈಲಹನಿಗಳ ಮೇಲಿನ ತಮ್ಮ ವಿಶಿಷ್ಠ ಪ್ರಯೋಗದಿಂದ ಪರಮಾಣುಗಳ ವಿದ್ಯುದಾವೇಶವನ್ನು ಕಂಡುಹಿಡಿಯುವ ವಿಧಾನವನ್ನು ರೂಪಿಸಿದ ವಿಜ್ಞಾನಿ ಮಿಲಿಕನ್‌, ಗಂಭೀರ ಸಂಶೋದಕರಷ್ಟೇ ಅಲ್ಲ, ತಮ್ಮ ಹಾಸ್ಯ ಪ್ರವೃತ್ತಿ ಮತ್ತು ಸ್ನೇಹಪರತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ವಿಶಿಷ್ಟ ವ್ಯಕ್ತಿತ್ವ ಹಾಗೂ ಸಾಧನೆಗಳನ್ನು ಈ ಲೇಖನದಲ್ಲಿ ಶಿಕ್ಷಕ ರಾಮಚಂದ್ರ ಭಟ್‌ ಸೊಗಸಾಗಿ ವಿವರಿಸಿದ್ದಾರೆ . 

ಅದೊಂದು ಕಗ್ಗಂಟಾದ ಸಮಸ್ಯೆ. ಓಹ್‌!! ಇದು ಎಂತಹ ಸಮಸ್ಯೆ. ವರ್ಷಗಟ್ಟಲೆ ಕಾಡಿ ತಲೆನೋವು ತರುತ್ತಲೇ ಇದೆ!! ಕಣ್ಣಿಗೇ ಕಾಣದ ಈ ಯಕಃಶ್ಚಿತ್‌ ಕಣದ ವಿದ್ಯುದಾವೇಶವನ್ನು ಲೆಕ್ಕ ಹಾಕುವುದು ಹೇಗೆಎನ್ನುವುದು ಈ ವಿಜ್ಞಾನಿ ಮತ್ತವರ ತಂಡವನ್ನು ಕಾಡುತ್ತಲೇ ಇತ್ತು. ಅದೆಷ್ಟು ಯೋಚಿಸಿದರೂ ಪರಿಹಾರ ಹೊಳೆಯುತ್ತಿಲ್ಲ. ಆದರೂ, ಛಲಬಿಡದ ತ್ರಿವಿಕ್ರಮನಂತೆ ಸಮಸ್ಯೆಯ ಪರಿಹಾರಕ್ಕಾಗಿ ತಂಡ ಪ್ರಯತ್ನಿಸುತ್ತಲೇ ಇತ್ತು. ಸದಾ ಈ ಯೋಚನೆಯಲ್ಲೇ ಮುಳುಗೇಳುತ್ತಿದ್ದ ಅ ವಿಜ್ಞಾನಿ ಅದೊಂದು ದಿನ ತಮ್ಮ ತೋಟದಲ್ಲಿ ಅಡ್ಡಾಡುತ್ತಿದ್ದರು. ಆಗ ಕೆಲವೊಂದು ತೈಲ ಕಣಗಳು ಗಾಳಿಯಲ್ಲಿ ತೇಲುತ್ತಿದ್ದುದು ಆಕಸ್ಮಿಕವಾಗಿ ಅವರ ಸಂಶೋಧನಾ ಕಣ್ಣಿಗೆ ಬಿತ್ತು. ಅವರ ಒಳಗಣ್ಣು ವಿಶೇಷವೊಂದನ್ನು ಗ್ರಹಿಸಿತು!! .ಎಣ್ಣೆತುಂತುರು ಹನಿಗಳನ್ನು ವಿದ್ಯುತ್ ಕ್ಷೇತ್ರಕ್ಕೆ ಒಳಪಡಿಸಿದರೆ ತಮ್ಮ ಸಮಸ್ಯೆಗೆ ಪರಿಹಾರ ದೊರೆಯಬಹುದೇ ಎಂದು ಆಲೋಚಿಸಿದರು. ಈ ಆಕಸ್ಮಿಕ ದರ್ಶನವೊಂದು ಬಹುಕಾಲದಿಂದಲೂ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರವನ್ನು ಒದಗಿಸಿತ್ತು!!!. ಈ ಕಲ್ಪನೆಯು ಅವರಿಗೆ 1923ರ ನೋಬೆಲ್ ಪ್ರಶಸ್ತಿಯನ್ನೂ ದೊರಕಿಸಿತು. ಹಾಗಾದರೆ, ಈ ಸಂಶೋಧಕ ಯಾರು ಎಂದು ಊಹಿಸುತ್ತಿದ್ದೀರಾ? ಅವರೇ ಖ್ಯಾತ ಭೌತಶಾಸ್ತ್ರಜ್ಞ ರಾಬರ್ಟ್‌ ಆಂಡ್ರೂಸ್‌ ಮಿಲಿಕನ್.

ರಾಬರ್ಟ್ ಮಿಲಿಕನ್ ಮಾರ್ಚ್ 22, 1868 ರಂದು ಅಮೇರಿಕದ ಇಲಿನಾಯ್ಸ ಮಾರಿಸನ್‌ನಲ್ಲಿ ಜನಿಸಿದರು.ಬಾಲ್ಯದಿಂದಲೂ ಶಿಕ್ಷಣದಲ್ಲಿ ಆಸಕ್ತಿ ಹೊಂದಿದ್ದ ಮಿಲಿಕನ್‌ ೧೮೮೬ರಲ್ಲಿ ಒಬರ್ಲಿನ್‌ ಕಾಲೇಜಿನಲ್ಲಿ ಟ್ರಿಗ್ನೋಮೆಟ್ರಿ (ತ್ರಿಕೋನಮಿತಿ), ರೇಖಾಗಣಿತದೊಂದಿಗೆ ಗ್ರೀಕ್‌ ಭಾಷೆಯನ್ನು ಅಧ್ಯಯನ ಮಾಡಿದರು. ಬೆಳೆಯುವಪೈರುಮೊಳಕೆಯಲ್ಲಿಎನ್ನುವಂತೆಮಿಲಿಕನ್‌ ವಿದ್ಯಾರ್ಥಿ ದೆಸೆಯಿಂದಲೇ ಅವರು ತಮ್ಮ ಕಿರಿಯ ಸ್ನೇಹಿತರಿಗೆ ಭೌತಶಾಸ್ತ್ರವನ್ನು ಬೋಧಿಸುತ್ತಿದ್ದರು.

1893 ರಲ್ಲಿ, ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ, ಅವರನ್ನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಫೆಲೋ ಆಗಿ ನೇಮಿಸಲಾಯಿತು. 1895ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ತಾಪದೀಪ್ತ ಮೇಲ್ಮೈಗಳಿಂದ ಹೊರಸೂಸಲ್ಪಟ್ಟ ಬೆಳಕಿನ ಧ್ರುವೀಕರಣಕ್ಕೆಸಂಬಂಧಿಸಿದ ಸಂಶೋಧನೆಗಾಗಿ  ಅವರು ತಮ್ಮ ಪಿಎಚ್‌ಡಿ ಪಡೆದರು. ಈ ಉದ್ದೇಶಕ್ಕಾಗಿ ಚಿನ್ನ ಮತ್ತು ಬೆಳ್ಳಿಗಳನ್ನು ಬಳಸಿದರು.

ತಮ್ಮ ಪ್ರಾಧ್ಯಾಪಕರ ಮಾರ್ಗದರ್ಶನದ ಮೇರೆಗೆ, ಮಿಲಿಕನ್ ಜರ್ಮನಿಯಲ್ಲಿ ಬರ್ಲಿನ್ ಮತ್ತು ಗೊಟ್ಟಿಂಗನ್ ವಿಶ್ವವಿದ್ಯಾಲಯಗಳಲ್ಲಿ ಒಂದು ವರ್ಷ (1895-1896) ಸಂಶೋಧನೆಯಲ್ಲಿ ಕಳೆದರು. ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ (1896) ಹೊಸದಾಗಿ ಸ್ಥಾಪಿಸಲಾದ ರೈರ್ಸನ್ ಪ್ರಯೋಗಾಲಯದಲ್ಲಿ ಸಹಾಯಕರಾಗಲು ಅವರು A. A. ಮೈಕೆಲ್ಸನ್ ಅವರ ಆಹ್ವಾನದ ಮೇರೆಗೆ ಹಿಂದಿರುಗಿದರು.ನಂತರ, ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಅಲ್ಲಿ ಮಿಲಿಕನ್ ದಿನಕ್ಕೆಹನ್ನೆರಡು ಗಂಟೆ ಕೆಲಸ ಮಾಡುತ್ತಿದ್ದರು. ಅದರಲ್ಲಿ ಆರು ಗಂಟೆಗಳ ಬೋಧನೆ ಮತ್ತು ಪಠ್ಯಪುಸ್ತಕ ರಚನೆ, ಬರಹಕ್ಕೆ ಮೀಸಲಿಟ್ಟರೆ ಉಳಿದ ಆರು ಗಂಟೆಗಳನ್ನು ಸಂಶೋಧನೆಯಲ್ಲಿ ಕಳೆಯುತ್ತಿದ್ದರು.ಅವರೊಬ್ಬ ಮಾದರಿ ಶಿಕ್ಷಕರಾಗಿದ್ದರು. ಸಾಂಪ್ರದಾಯಿಕ ಬೋಧನೆಗಿಂತ ವಿಭಿನ್ನವಾಗಿ ಬೋಧಿಸಬೇಕೆಂಬ ನಿಲುವನ್ನು ಹೊಂದಿದ್ದರು. ವಿದ್ಯಾರ್ಥಿಗಳ ಪಾಲಿಗೆ ಸ್ಫೂರ್ತಿಯ ಸೆಲೆಯಾಗಿದ್ದರು.   ಅವರನ್ನು ಯಾವಾಗಲೂ ಪ್ರೋತ್ಸಾಹಿಸುತ್ತಿದ್ದರು. ಅಮೇರಿಕದ ಖ್ಯಾತ ಲೇಖಕ ಮತ್ತು ಶಿಕ್ಷಣತಜ್ಞ ಹಾಗೂ ಸ್ಫೂರ್ತಿದಾಯಕ ವಾಗ್ಮಿ ವಿಲಿಯಂ ಆರ್ಥರ್ ವಾರ್ಡ್ಶಿ ಕ್ಷಕರವಿಧಗಳನ್ನು ಹೀಗೆ ವ್ಯಾಖ್ಯಾನಿಸುತ್ತಾರೆ.The mediocre teacher tells. The good teacher explains. The superior teacher demonstrates. The great teacher inspires. ಶ್ರೇಷ್ಠ ಶಿಕ್ಷಕರಾದ ಮಿಲಿಕನ್‌ ತಮ್ಮ ವಿದ್ಯಾರ್ಥಿಗಳಿಗೆ ಪ್ರೇರಕ ವ್ಯಕ್ತಿತ್ವವಾಗಿದ್ದಾರೆ. ಅವರ ಅನೇಕ ಶಿಷ್ಯರು ಅಪಾರ ಸಾಧನೆ ಮಾಡಲು ಕಾರಣರಾಗಿದ್ದಾರೆ. ಅವರ ಅನೇಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ರೂಪುಗೊಲ್ಲುವಲ್ಲಿ, ತಮ್ಮ ಸಾಧನೆಯ ಹಿಂದಿನ ಪ್ರೇರಕ ಶಕ್ತಿಯಾಗಿ ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಶಿಕ್ಷಕನಿಗೆ ಇದಕ್ಕಿಂತ ಉತ್ಕೃಷ್ಟ ಪ್ರಶಸ್ತಿ ಯಾವುದಿದೆ?

ಅವರವಿದ್ಯಾರ್ಥಿಯಾಗಿದ್ದ ಹಾರ್ವರ್ಡ್ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರೊಫೆಸರ್ ಜಾನ್ ಹ್ಯಾಸ್ಬ್ರೂಕ್ ವ್ಯಾನ್ ವಿಲೆಕ್‌ ತಮ್ಮಗುರುಗಳಾದ ಮಿಲಿಕನ್‌ ರವರ ಬಗ್ಗೆ ಹೀಗೆನ್ನುತ್ತಾರೆ.

"ಮಿಲಿಕನ್ ಅವರು ಭೌತಶಾಸ್ತ್ರದ ಸಂಕೀರ್ಣ ಪರಿಕಲ್ಪನೆಗಳನ್ನು ಸರಳವಾಗಿ ಮತ್ತು ಸ್ಪಷ್ಟವಾಗಿ ವಿವರಿಸುತ್ತಿದ್ದರು. ಈ  ಮೂಲಕ ಭೌತಶಾಸ್ತ್ರದೆಡೆಗೆ ನನ್ನಆಸಕ್ತಿ ಮೂಡಿಸಿದ ಅದ್ಭುತಶಿಕ್ಷಕರಾಗಿದ್ದರು. ಅವರು ತಮ್ಮ ವಿದ್ಯಾರ್ಥಿಗಳ ಪ್ರಗತಿಯಲ್ಲಿ ಆಸಕ್ತಿ ತೋರುವುದಲ್ಲದೆ ಅವರ ಯಶಸ್ಸಿಗೂ ಬದ್ಧರಾಗಿದ್ದರು."

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರೊಫೆಸರ್ ಆದ ಶಿಷ್ಯ ವಿಲಿಯಂ ಎ. ಫೌಲರ್ ಹೀಗೆನ್ನುತ್ತಾರೆ. "ಮಿಲಿಕನ್ ಅವರು ನನಗೆ ಒಬ್ಬ ಮಾದರಿ ಶಿಕ್ಷಕರಾಗಿದ್ದರು. ಅವರು ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಮತ್ತು ಬೌದ್ಧಿಕ ಪ್ರಾಮಾಣಿಕತೆಯ ಮೌಲ್ಯಗಳನ್ನು ನನಗೆ ಕಲಿಸಿದರು…."

ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಆರ್ಥರ್ ಕಾಂಪ್ಟನ್ ಅವರ ಪ್ರಕಾರ "ಮಿಲಿಕನ್ಸದಾಸ್ಫೂರ್ತಿ, ಪ್ರೋತ್ಸಾಹಗಳನ್ನುನೀಡುವ ಪ್ರಾಧ್ಯಾಪಕರಾಗಿದ್ದರು. ಅವರು ನನಗೆ ನನ್ನ ಸಾಮರ್ಥ್ಯದಲ್ಲಿನಂಬಿಕೆಇಡಲು, ನನ್ನ ಗುರಿಗಳೆಡೆಗೆ ಸಾಗುವಲ್ಲಿ ಶ್ರಮಿಸಲು ಸಹಾಯ ಮಾಡಿದರು. ಅವರ ಮಾರ್ಗದರ್ಶನ ಮತ್ತು ಬೆಂಬಲವಿಲ್ಲದೆ ನಾನು ನನ್ನ ವೃತ್ತಿಜೀವನದಲ್ಲಿ ಸಾಧಿಸಿದ್ದನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ."

ಶಿಕ್ಷಕರಾಗಿ ಅವರು ಸ್ವತಂತ್ರವಾಗಿ ಹಾಗೂ ಸಹ ಲೇಖಕರಾಗಿ ಅನೇಕ ಪುಸ್ತಕಗಳನ್ನು ಬರೆದರು. ಎಸ್.ಡಬ್ಲ್ಯೂ. ಸ್ಟ್ರಾಟನ್ರವರೊಂದಿಗೆ 1898ರಲ್ಲಿ  ಎ ಕಾಲೇಜ್ ಕೋರ್ಸ್ ಇನ್ ಫಿಸಿಕ್ಸ್,; 1902ರಲ್ಲಿಯಂತ್ರಶಾಸ್ತ್ರ, ಆಣ್ವಿಕ ಭೌತಶಾಸ್ತ್ರ ಮತ್ತು ಶಾಖ; 1903ರಲ್ಲಿ ಸಿ.ಆರ್. ಮನ್ರವರೊಡನೆಸೇರಿ “ದ ಥಿಯರಿ ಆಫ್ ಆಪ್ಟಿಕ್ಸ್” ಕೃತಿಯನ್ನು ಜರ್ಮನ್ ಭಾಷೆಯಿಂದ ಅನುವಾದಿಸಿದರು.  1906 ರಲ್ಲಿ H.G.ಗೇಲ್ರವರೊಂದಿಗೆ ಭೌತಶಾಸ್ತ್ರದಲ್ಲಿ ಮೊದಲ ಕೋರ್ಸ್ (A First Course in Physics), ಹಾಗೂ 1907ರಲ್ಲಿ H.G. ಗೇಲ್ರವರೊಂದಿಗೆ ಸೆಕೆಂಡರಿ ಶಾಲೆಗಳಿಗೆ ಭೌತಶಾಸ್ತ್ರ ಪ್ರಯೋಗಾಲಯ ಕೋರ್ಸ್; J. ಮಿಲ್ಸ್‌ನೊಂದಿಗೆ 1908ರಲ್ಲಿ ವಿದ್ಯುತ್ಶಕ್ತಿ, ಶಬ್ದ ಮತ್ತು ಬೆಳಕು; 1920ರಲ್ಲಿ ಪ್ರಾಯೋಗಿಕ ಭೌತಶಾಸ್ತ್ರ - ಮೊದಲ ಕೋರ್ಸ್‌ನ್ನು ಪರಿಷ್ಕರಿಸಿದರು.  1917ರಲ್ಲಿ ದಿ ಎಲೆಕ್ಟ್ರಾನ್, ಹೀಗೆ ಅನೇಕ ಪಠ್ಯ ಮತ್ತು ಸಂಶೋಧನಾ ಕೃತಿಗಳನ್ನು ರಚಿಸಿದರು. ‌

1921 ರಲ್ಲಿ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸೇರಿದ ಮಿಲಿಕನ್‌ ಅದನ್ನು ವಿಶ್ವದ ಅಗ್ರಗಣ್ಯ ಭೌತಶಾಸ್ತ್ರ ಸಂಸ್ಥೆಯಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅತ್ಯದ್ಭುತ ಪ್ರಯೋಗ ಒಂದರಲ್ಲಿ ಅದಾಗಲೇ 1897 ರಲ್ಲಿಜೆ.ಜೆ. ಥಾಮ್ಸನ್‌ರವರು ಇಲೆಕ್ಟ್ರಾನ್‌ಗಳನ್ನು ಆವಿಷ್ಕರಿಸಿದ್ದರು. ಈ ಇಲೆಕ್ಟ್ರಾನ್‌ಗಳು ಋಣ ವಿದ್ಯದಾವೇಶ ಹೊಂದಿವೆ ಎಂದೂ ಕಂಡುಹಿಡಿಯಲಾಗಿತ್ತು. ಆದರೆ, ಇವುಗಳ ವಿದ್ಯುದಾವೇಶದ ಪರಿಮಾಣವನ್ನು ಕಂಡುಕೊಳ್ಳುವುದು ದೊಡ್ಡ ಸವಾಲಾಗಿತ್ತು. ಅನೇಕ ವಿಜ್ಞಾನಿಗಳು ಈ ಕುರಿತು ತಲೆಕೆಡಿಸಿಕೊಂಡರೂ ಪರಿಣಾಮ ಮಾತ್ರ ಶೂನ್ಯ ರಾಬರ್ಟ್ ಮಿಲಿಕನ್ ಕೂಡ ಈ ದಿಸೆಯಲ್ಲಿ ಸಂಶೋಧನಾ ನಿರತರಾಗಿದ್ದರು.

ಈ ಹಿಂದೆ ಹೇಳಿದಂತೆ 1909 ರಲ್ಲಿ ರಾಬರ್ಟ್ ಆಂಡ್ರ್ಯೂಸ್ ಮಿಲಿಕನ್ರ ಅವರು ಹಾರ್ವಿ ಫ್ಲೆಚರ್ರವರ ಜೊತೆಗೂಡಿ ಎಣ್ಣೆ ಹನಿಗಳ ಪ್ರಯೋಗವನ್ನು ಚಿಕಾಗೋ ವಿಶ್ವವಿದ್ಯಾಲಯದಲ್ಲಿರುವ ರೈರ್ಸನ್ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ನಡೆಸಿದರು.  1910 ರಲ್ಲಿ ರಾಬರ್ಟ್ ಮಿಲಿಕನ್ ಎಲೆಕ್ಟ್ರಾನ್ನ ವಿದ್ಯುದಾವೇಶವನ್ನು ನಿಖರವಾಗಿ ನಿರ್ಧರಿಸುವಲ್ಲಿ ಯಶಸ್ವಿಯಾದರು. ಮಿಲಿಕನ್ ಈ ವಿಧಾನದಲ್ಲಿ, ಎರಡು ಸಮತಲ ಲೋಹದ ತಟ್ಟೆಗಳನ್ನು ಪರಸ್ಪರ ಸಮಾನಾಂತರವಾಗಿರಿಸಿ ಮೇಲಿನ ತಟ್ಟೆಯನ್ನು ಧನಾಗ್ರಕ್ಕೂ ಕೆಳಗಿನ ತಟ್ಟೆಯನ್ನು ಋಣವಿದ್ಯುದ್ವಾರಕ್ಕೂ ಸಂಪರ್ಕಿಸಿದ್ದರು ಎಣ್ಣಿಯ ಸೂಕ್ಷ್ಮ ಹನಿಗಳನ್ನು ತಟ್ಟೆಗಳ ನಡುವೆ ಸಿಂಪಡಿಸಲಾಯಿತು. ಎಣ್ಣೆ ಹನಿಗಳು ಗುರುತ್ವಾಕರ್ಷಣೆಯಿಂದಾಗಿ ಕೆಳಕ್ಕೆ ಬೀಳಲು ಪ್ರಾರಂಭಿಸಿದವು .ತಟ್ಟೆಗಳ ನಡುವಿನ ಗಾಳಿಯ ಮೂಲಕ ಎಕ್ಸ್-ರೇ ಹಾಯಿಸಿ ಗಾಳಿಯ ಕಣಗಳನ್ನು ಅಯಾನೀಕರಿಸಲಾಯಿತು. ಅಯಾನೀಕರಿಸಲ್ಪಟ್ಟ ಕಣಗಳ ಸಂಪರ್ಕಕ್ಕೆ ಬಂದ ಎಣ್ಣೆ ಹನಿಗಳೂ ವಿದ್ಯುದಾವೇಶವನ್ನು ಗಳಿಸಿಕೊಂಡವು. ವಿದ್ಯುದಾವಿಷ್ಟ ತೈಲಹನಿಗಳು ವಿದ್ಯುತ್‌ ಕ್ಷೇತ್ರದೊಂದಿಗೆ ವರ್ತಿಸಿ ಮೇಲ್ಮುಖವಾಗಿ ಚಲಿಸಲಾರಂಭಿಸಿದವು. ಈ ಹನಿಗಳ ಚಲನೆಯನ್ನು ದೂರದರ್ಶಕದ ಮೂಲಕ ವೀಕ್ಷಿಸಲಾಯಿತು. ವಿದ್ಯುದಾವಿಷ್ಟ ಹನಿಗಳ ಚಲನೆಯ ವೇಗವು ಹನಿಗಳ ವಿದ್ಯುದಾವೇಶ, ರಾಶಿ, ವಿಭವಾಂತರಪರಿಮಾಣಗಳನ್ನು ಅವಲಂಬಿಸಿತ್ತು. ವಿಭವಾಂತರವನ್ನು ಬದಲಾವಣೆ ಮಾಡುವ ಮೂಲಕ ತೈಲಹನಿಗಳ ಚಲನೆಯನ್ನು ವೇಗೋತ್ಕರ್ಷ ಅಥವಾ ವೇಗಾಪಕರ್ಷಕ್ಕೆ ಒಳಪಡಿಸಬಹುದಾಗಿತ್ತು ಅಥವಾ ಮಧ್ಯದಲ್ಲಿ ತೇಲುವಂತೆ ಮಾಡಬಹುದಾಗಿತ್ತು. ವಿಶ್ವಾಮಿತ್ರರು ತಪೋಬಲದಿಂದ ತ್ರಿಶಂಕು ಸ್ವರ್ಗವನ್ನು ಸೃಜಿಸಿದಂತೆ ಜ್ಞಾನದೃಷ್ಟಾರ ಮಿಲಿಕನ್‌ ತಮ್ಮ ಜ್ಞಾನದೋಜಸ್ಸಿನಿಂದ ಎಣ್ಣೆ ಹನಿಗಳನ್ನು ವಿದ್ಯುದ್ವಾರಗಳ ನಡುವೆ ತೇಲುವಂತೆ ಮಾಡಿದರು.

ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸಿ ಅವುಗಳ ವೇಗವನ್ನು ಅಳೆದರು. ಹೀಗೆ, ತೈಲ ಹನಿಗಳ ಚಲನೆಯ ಮೇಲೆ ತಟ್ಟೆಯ ಮೇಲೆ ಆರೋಪಿತ ವಿದ್ಯುತ್ ಕ್ಷೇತ್ರದ ಸಾಮರ್ಥ್ಯದ ಪರಿಣಾಮಗಳನ್ನು ಎಚ್ಚರಿಕೆಯಿಂದ ಅಳೆಯುವ ಮೂಲಕ, ಮಿಲಿಕನ್ ದ್ರವ್ಯರಾಶಿಯನ್ನು ಕರಾರುವಕ್ಕಾಗಿ ಲೆಕ್ಕಾಚಾರ ಮಾಡಿದರು. ಮಿಲಿಕನ್ ಅವರು ಎಲೆಕ್ಟ್ರಾನಿನ ವಿದ್ಯುದಾವೇಶವು 1.೫೯೨ x 10-19ಕೂಲಂಬ್ಸ್ ಎಂದು ನಿರ್ಧರಿಸಿದರು. ಅಂತಿಮವಾಗಿ ೨೦೧೪ರಲ್ಲಿ ಈ ಮೌಲ್ಯವನ್ನು 1.60217662 x 10-19ಕೂಲಂಬ್ಸ್ಎಂದು ನಿರ್ಧರಿಸಲಾಯಿತು. ಇದೊಂದು ಅತ್ಯದ್ಭುತ ಯಕ್ಷಿಣಿಯಂತಹ ಪ್ರಯೋಗವೇ ಆಗಿತ್ತು.

ಮಿಲಿಕನ್ ಅವರ ತೈಲದ ಹನಿ ಪ್ರಯೋಗದ ಕುರಿತು ಮತ್ತೊಬ್ಬ ವಿಶ್ವಪ್ರಸಿದ್ಧ ನೋಬಲ್‌ ಪ್ರಶಸ್ತಿ ಪಡೆದ ಹಾಗೂ ಪರಮಾಣು ರಚನೆಯ ಬೋರ್ ಮಾದರಿಯನ್ನು ನೀಡಿದ ಭೌತಶಾಸ್ತ್ರಜ್ಞ ನೀಲ್ಸ್ ಬೋರ್ ಅವರು ಬಗ್ಗೆ ಹೀಗೆ ಹೇಳಿದ್ದಾರೆ: "ಮಿಲಿಕನ್ ಅವರ ಪ್ರಯೋಗವು ಎಲೆಕ್ಟ್ರಾನ್ವಿದ್ಯುದಾವೇಶವನ್ನು ಅತ್ಯಂತ ನಿಖರವಾಗಿ ಅಳೆಯಲು ಮೊದಲ ಬಾರಿಗೆ ಅವಕಾಶ ಮಾಡಿಕೊಟ್ಟಿತು. ಇದು ಭೌತಶಾಸ್ತ್ರದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಪ್ರಯೋಗಗಳಲ್ಲಿ  ಒಂದಾಗಿದೆ. ಏಕೆಂದರೆ ಇದು ಪರಮಾಣು ಮತ್ತು ಅಣುಗಳ ರಚನೆಯನ್ನು ಅರ್ಥಮಾಢಿಕೊಳ್ಳಲು ನಮಗೆ ಸಹಾಯ ಮಾಡುತ್ತದೆʼʼ.

ನಾವಿಂದು ಬಳಸುವ ಹಲವು ತಂತ್ರಜ್ಞಾನಗಳಿಗೆ ಈ ಸಂಶೋಧನೆಯು ಆಧಾರವಾಗಿದೆ.ಮಿಲಿಕನ್ ಅವರ ಪ್ರಯೋಗದಲ್ಲಿ ಬಳಸಿದ ತತ್ವಗಳನ್ನು CRT ಟ್ಯೂಬ್‌ಗಳು, LCD ಡಿಸ್ಪ್ಲೇಗಳು ಮತ್ತು ಲೇಸರ್‌ಗಳಂತಹ ಉಪಕರಣಗಳಲ್ಲಿ ಬಳಸಲಾಗುತ್ತದೆ.ಅಲ್ಲದೆ,ಇದು ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ತಂತ್ರಜ್ಞಾನದ ಬೆಳವಣಿಗೆಗೆ ಕಾರಣವಾಗಿದೆ.

ರಾಬರ್ಟ್ ಎ. ಮಿಲಿಕನ್ ಅವರು 1902 ರಲ್ಲಿ ಗ್ರೆಚೆನ್ ಬ್ಲ್ಯಾಂಚರ್ಡ್ ಅವರನ್ನು ವಿವಾಹವಾದರು.

ಅವರಿಗೆ ರಾಬರ್ಟ್ ಎ. ಮಿಲಿಕನ್ ಜೂನಿಯರ್, ಗ್ರೆಟಾ ಮಿಲಿಕನ್ ಮತ್ತು ಮ್ಯಾಕ್ಸ್ ಮಿಲಿಕನ್ ಎಂಬ ಮೂರು ಮಕ್ಕಳಿದ್ದರು.ಇವರಲ್ಲಿರಾಬರ್ಟ್‌ ತಂದೆಯ ತೈಲಹನಿ ಪ್ರಯೋಗದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮಿಲಿಕನ್ ಅವರ ಪತ್ನಿ ಗ್ರೆಚೆನ್ ಅವರು ಶಿಕ್ಷಕಿಯಾಗಿದ್ದರು. ಸಂಶೋಧನೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ತಮ್ಮ ಪತಿಯ ವೃತ್ತಿ ಜೀವನದ ಉತ್ಕರ್ಷಕ್ಕೆ ಪೂರಕವಾಗಿದ್ದರು. ಮಿಲಿಕನ್ ಕೌಟುಂಬಿಕ ವ್ಯಕ್ತಿಯಾಗಿದ್ದರು. ಅವರು ಪತ್ನಿ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಅವರೊಂದಿಗೆ ಸಮಯ ಕಳೆಯುವುದನ್ನುಇಷ್ಟಪಡುತ್ತಿದ್ದರು.

ಪ್ರಯೋಗಾಲಯದಲ್ಲಿ ತದೇಕಚಿತ್ತದಿಂದ ಗಂಭೀರವಾಗಿ ಕಾರ್ಯನಿರ್ವಹಿಸಬೇಕಾದ. ಸಂಶೋಧಕನಿಗೆ ಅತಿ ಎಚ್ಚರ ಅತ್ಯಗತ್ಯ.ಇಂತಹ ವಾತಾವರಣವನ್ನು ತಿಳಿಗೊಳಿಸುವುದೂ ಅವಶ್ಯಕ. ಮಿಲಿಕನ್ರವರ ವ್ಯಕ್ತಿತ್ವ ಹಾಸ್ಯಪ್ರಜ್ಞೆಯಿಂದ ಹದಗೊಂಡಿತ್ತು. ತೈಲಹನಿಗಳ ಪ್ರಯೋಗ ನಡೆಸುವಾಗ ಎಣ್ಣೆಯ ಹನಿಗಳುವಿದ್ಯುತ್‌ ಫಲಕಗಳ ನಡುವೆ ತೇಲಲಾರಂಭಿಸಿದವು. ಸಂತೋಷಗೊಂಡ ಮಿಲಿಕನ್‌ ತಕ್ಷಣವೇ "ಎಲ್ರೂನೋಡ್ರಪ್ಪ,ನಾನು ಎಣ್ಣೆ ಹನಿಗಳಿಗೆ ನೃತ್ಯ ಮಾಡಲು ಕಲಿಸಿದ್ದೇನೆ!"ಎಂದರು !

ಇನ್ನೊಮ್ಮೆ, ಮಿಲಿಕನ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಎಣ್ಣೆ ಹನಿಗಳ ಪ್ರಯೋಗವನ್ನು ಪ್ರದರ್ಶಿಸುತ್ತಿದ್ದರು. ಆಗ ಎಣ್ಣೆ ಹನಿಯೊಂದು ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಮೇಲ್ಮುಖವಾಗಿ ಚಲಿಸಲು ಪ್ರಾರಂಭಿಸಿತು. ಮಿಲಿಕನ್ ಅವರು ತಕ್ಷಣವೇ "ಓಹ್, ನೋಡಿ, ಇದೊಂದು ದಂಗೆಕೋರ ಹನಿ! ದಾರಿತಪ್ಪಿದೆ" ಎನ್ನಲು ವಿದ್ಯಾರ್ಥಿಗಳು ಗೊಳ್ಳನೆ ನಗಲಾರಂಭಿಸಿದರು. ಮಿಲಿಕನ್ ಅವರ ಹಾಸ್ಯ ಮತ್ತು ವಿನೋದದ ಪ್ರಜ್ಞೆಯು ಅವರ ಸಂಶೋಧನಾ ಕಾರ್ಯದ ಒತ್ತಡವನ್ನು ಕಡಿಮೆ ಮಾಡಿ ಆಹ್ಲಾದಕರ ವಾತಾವರಣವನ್ನು ಉಂಟುಮಾಡುತ್ತಿತ್ತು. ಇದು ಅವರ ಸಂಶೋಧನೆಯ ಯಶಸ್ಸಿಗೆ ಕಾರಣವಾಯಿತು.ಸಂತೋಷದ ಮತ್ತು ಉತ್ಸಾಹಭರಿತ ವಾತಾವರಣವು ಸೃಜನಶೀಲತೆ ಮತ್ತು ನಾವೀನ್ಯತೆಗೆ ಕಾರಣವಾಗಿದೆ.



ಸೋಲೊಪ್ಪಿಕೊಳ್ಳದಿರುವುದು ಸಂಶೋಧಕನ ಮೂಲ ಪ್ರವೃತ್ತಿ. ಮತ್ತೊಂದು ಸಂದರ್ಭದಲ್ಲಿ, ಮಿಲಿಕನ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದ ನಿಯಮಗಳನ್ನು ಮನವರಿಕೆ ಮಾಡಲು ಪ್ರಯೋಗವನ್ನು ನಡೆಸುತ್ತಿದ್ದರು. ನಮ್ಮತರಗತಿಗಳಲ್ಲಿ ನಡೆಯುವಂತೆ ಅವರ ಪ್ರಯೋಗವೂ ವಿಫಲವಾಯಿತು. ಅವರು ತಮ್ಮ ವಿದ್ಯಾರ್ಥಿಗಳಿಗೆ ಹೇಳಿದರು, "ನೀವು ನೋಡುವಂತೆ, ಭೌತಶಾಸ್ತ್ರದ ನಿಯಮಗಳು ಯಾವಾಗಲೂ ನಮ್ಮ ನಿರೀಕ್ಷೆಯಂತೆ ಕೆಲಸ ಮಾಡುವುದಿಲ್ಲ. ಆದರೆ ನಾವು ಅವುಗಳು ಕೆಲಸ ಮಾಡುವಂತೆ ಮಾಡಲು ಪ್ರಯತ್ನಿಸುವುದನ್ನು ನಿಲ್ಲಿಸುವುದಿಲ್ಲ!". ಸೋಲೇ ಗೆಲುವಿನ ಸೋಪಾನ ಎಂಬಂತೆ ಸಾಧಕನೊಬ್ಬ ತನ್ನಲ್ಲಿ ಬೆಳೆಸಿಕೊಳ್ಳಬೇಕಾದ ಗುಣವೇ ಸೋಲನ್ನು ಮೆಟ್ಟಿನಿಲ್ಲುವುದು.

ಮರಳಿಯತ್ನವಮಾಡು, ಮರಳಿಯತ್ನವಮಾಡು

ತೊರೆಯದಿರು ಮೊದಲು ಕೈಗೂಡದಿರಲು

ಭರದಿ ಧೈರ್ಯವ ತಾಳು…..

ನೆಲೆಗೆಡದೆ ಯತ್ನವನು ಮಾಡು ಮಗುವೇ

ಎಂಬ ಕವಿವಾಣಿಯಂತೆ ಯಾವುದೇ ಕಾರ್ಯವನ್ನು ಯಶ ಸಿಗುವವರೆಗೂ ಬಿಡದೆ ಮಾಡಬೇಕೆಂಬುದಕ್ಕೆ ಮಿಲಿಕನ್‌ಎಲ್ಲ ಕಾಲಕ್ಕೂ ಮಾದರಿಯಾಗಿದ್ದಾರೆ.


ಮಿಲಿಕನ್ ಅವರ ಎಣ್ಣೆಹನಿ ಪ್ರಯೋಗವು ವಿಜ್ಞಾನದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಪ್ರಯೋಗಗಳಲ್ಲಿ ಒಂದಾಗಿದೆ. ಇದು ಪರಮಾಣುವಿನ ರಚನೆಯ ಕುರಿತ ನಮ್ಮ ಅರಿವಿನ ಕ್ಷಿತಿಜವನ್ನು ಮತ್ತಷ್ಟು ಹಿಗ್ಗಿಸಿತು. ಆಧುನಿಕ ಪರಮಾಣು ವಿಜ್ಞಾನಕ್ಕೆ ಭದ್ರಬುನಾದಿಯನ್ನು ಹಾಕಿತು.

2 comments: