Saturday, November 4, 2023

ಜಗದೀಶ್ ಚಂದ್ರ ಬೋಸ್ – ವಿಜ್ಞಾನ ಲೋಕದ ಅಸಾಧಾರಣ ಸಂಶೋಧಕ.


 ಜಗದೀಶ್ ಚಂದ್ರ ಬೋಸ್ – ವಿಜ್ಞಾನ  ಲೋಕದ ಅಸಾಧಾರಣ  ಸಂಶೋಧಕ.

ಲೇಖಕರು :-                                                        

ಬಿ. ಎನ್. ರೂಪ,   ಸಹ  ಶಿಕ್ಷಕರು,

 ಕೆಪಿಎಸ್ ಜೀವನ್ ಭೀಮ ನಗರ ,

 ಬೆಂಗಳೂರು ದಕ್ಷಿಣ ವಲಯ -4. 

ಭೌತವಿಜ್ಞಾನ ಕ್ಷೇತ್ರ ಮಾತ್ರವಲ್ಲ ಸಸ್ಯವಿಜ್ಞಾನ ಕ್ಷೇತ್ರದಲ್ಲಿಯೂ ಸಂಶೋಧನೆ ನಡೆಸಿ ವಿಶ್ವ ಖ್ಯಾತಿ ಗಳಿಸಿದ  ಜಗದೀಶ ಚಂದ್ರ ಬೋಸ್‌ ಅವರ ವಿಶಿಷ್ಟ ವ್ಯಕ್ತಿತ್ವವನ್ನು ಪರಿಚಯಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಶಿಕ್ಷಕಿ ರೂಪಾ ಮಾಡಿದ್ದಾರೆ.

    ನಾವು ಜಗತ್ ವಿಖ್ಯಾತ, ಸುಪ್ರಸಿದ್ಧ ವಿಜ್ಞಾನಿಗಳ ಪಟ್ಟಿ ಹುಡುಕುತ್ತಾ ಹೋದಾಗ ಅಲ್ಬರ್ಟ್ ಐನ್ಸ್ಟೀನ್, ಮೆರಿ ಕ್ಯೂರಿ, ನ್ಯೂಟನ್ ,ಗೆಲಿಲಿಯೋ….. ಹೀಗೆ ಅನೇಕ ಸುಪ್ರಸಿದ್ಧ ವಿಜ್ಞಾನಿಗಳ ಹೆಸರುಗಳನ್ನು ನೋಡುತ್ತೇವೆ.

ಈ ಪಟ್ಟಿಯಲ್ಲಿ ನಮ್ಮ ಭಾರತೀಯ ವಿಜ್ಞಾನಿಗಳ ಹೆಸರು ಸಿಗುವುದು ಅಪರೂಪ. ಆದರೆ ನಮ್ಮ ಭಾರತೀಯ ವಿಜ್ಞಾನಿಗಳ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆಪಡುವಂತಹ ವಿಷಯವಾಗಿದೆ. ಇತ್ತೀಚಿಗೆ ನಮ್ಮ ಇಸ್ರೋ ವಿಜ್ಞಾನಿಗಳು ಚಂದ್ರಯಾನ-3ರ ವಿಷಯದಲ್ಲಿ ತೋರಿಸಿದ ಸಾಧನೆ ಅದ್ವಿತೀಯ ಹಾಗೂ ಪ್ರಶಂಸನೀಯ.  ನಮ್ಮ ಭಾರತೀಯ ವಿಜ್ಞಾನಿಗಳ ಪಟ್ಟಿಯನ್ನು ಗಮನಿಸುತ್ತಾ ಹೋದಂತೆ ನಮ್ಮ ಭಾರತೀಯರಾದ ಜಗದೀಶ್ ಚಂದ್ರ ಬೋಸ್ ಇವರ ಹೆಸರು  ನನ್ನ ಗಮನ ಸೆಳೆದದ್ದು ದಿಟ.

ಬೋಸ್‌ ಅವರು ನವಂಬರ್ 30, 1858ರಲ್ಲಿ ಬಂಗಾಳದ ಪ್ರಾಂತ್ಯದಲ್ಲಿರುವ ಮೈಮನ್ ಸಿಂಗ್ ಎಂಬ ಈಗಿನ ಬಾಂಗ್ಲಾದೇಶಕ್ಕೆ ಸೇರಿದ ಪ್ರಾಂತ್ಯದಲ್ಲಿ ಜನಿಸಿದರು. ಇವರ ತಂದೆ ಭಗವಾನ್ ಚಂದ್ರರು ಫರೀದಪುರದಲ್ಲಿ ಉಪ ವಿಭಾಗಾಧಿಕಾರಿಗಳಾಗಿದ್ದರು, ತಾಯಿ ಭಾಮ ಸುಂದರಿ ಬೋಸ್ ಸಾಂಪ್ರದಾಯಿಕ  ಗೃಹಿಣಿ . ಸ್ವತಃ ಶಿಕ್ಷಣ ತಜ್ಞರಾಗಿದ್ದ ಬೋಸರ ತಂದೆ ತಮ್ಮ ಮಗನಿಗೆ ಭಾರತದ ಬಗ್ಗೆ ಹಾಗೂ ಇಲ್ಲಿನ ಸಂಪ್ರದಾಯ  ಆಚಾರ ವಿಚಾರ ಅರ್ಥೈಸಲು ಬೋಸರನ್ನು ಸನಾತನ ಮಾದರಿಯ ಪಾಠಶಾಲೆಗೆ ಸೇರಿಸಿದರು. ಇದರಿಂದ ಬೋಸರಲ್ಲಿ ರಾಷ್ಟ್ರ ಭಕ್ತಿ ಹಾಗೂ ನಿಸರ್ಗದ ಬಗ್ಗೆ ಆಸಕ್ತಿ ಬೆಳೆಯಲು ಸಾಧ್ಯವಾಯಿತು.


 
ಕೊಲ್ಕತ್ತಾದ ಸೇಂಟ್ ಜೇವಿಯರ್ ಕಾಲೇಜು ಹಾಗೂ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಓದಿ ಪದವೀಧರರಾದರು .ಬೋಸರ ತಂದೆಯವರು ಮಗನ ಆಸಕ್ತಿಯನ್ನು ನೋಡಿ ವೈದ್ಯಕೀಯ ಅಥವಾ ವಿಜ್ಞಾನವೃತ್ತಿ ಆಯ್ಕೆ ಮಾಡಿಕೊಳ್ಳಲು ಸೂಚಿಸಿದರು .ಜಗದೀಶ್ ಚಂದ್ರರು 1880ರಲ್ಲಿ ಲಂಡನ್ ವೈದ್ಯಕೀಯ ವಿದ್ಯಾರ್ಥಿಯಾಗಿ ಸೇರಿಸಿದರು.ಮೊದಲ ವರ್ಷದ ನಂತರ ಕಾಲಾ ಅಜರ್ ಸೋಂಕಿ ನಿಂದಾಗಿ ವೈದ್ಯಕೀಯ ಶಿಕ್ಷಣವನ್ನು ಅನಿವಾರ್ಯವಾಗಿ ಬಿಟ್ಟು ಕೇಂಬ್ರಿಡ್ಜ್ ಗೆ ಹೋಗಿ ವಿಜ್ಞಾನದ ವಿದ್ಯಾರ್ಥಿಯಾದರು. 1884ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾನಿಲಯದಿಂದ ಬಿಎ ಹಾಗೂ ಮರು ವರ್ಷ ಲಂಡನ್ ವಿಶ್ವವಿದ್ಯಾನಿಲಯದಿಂದ ಬಿಎಸ್ಸಿ ಪದವಿ ಪಡೆದರು.

1884ರಲ್ಲಿ  ಕೊಲ್ಕತ್ತಾಗೆ ಮರಳಿ ಬಂದು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿಕೊಂಡರು. ಅಲ್ಲಿ ಬ್ರಿಟಿಷರ ಜನಾಂಗಭೇದ ಜಾರಿಯಲ್ಲಿತ್ತು. ಅದನ್ನು  ಪ್ರತಿಭಟಿಸಿ ಸಂಬಳ ತೆಗೆದುಕೊಳ್ಳದೆ ಮೂರು ವರ್ಷ ದುಡಿದರು. ಕಾಲೇಜಿನ ಪ್ರಾಂಶುಪಾಲರು ಮತ್ತು  ಇಲಾಖೆಯ ನಿರ್ದೇಶಕರು ಆಗಿದ್ದ ಬ್ರಿಟಿಷ್ ಅಧಿಕಾರಿ ಬೋಸರ ಪ್ರತಿಭೆ ಹಾಗೂ ವ್ಯಕ್ತಿತ್ವ ಗಮನಿಸಿ ಅವರ ಆತ್ಮೀಯ ಮಿತ್ರರಾದರು. ಅವಮಾನದ ವಿರುದ್ಧ ನೈತಿಕ ಜಯದ ಕುರುಹಾಗಿ ಬೋಸರಿಗೆ ಮೂರು ವರ್ಷದ ಸಂಪೂರ್ಣ ಪಗಾರದ ಬಾಕಿ ಪಾವತಿಯಾಯಿತು. ಈ ಅವಧಿಯಲ್ಲಿ ವಿಕ್ರಂಪುರದ ದುರ್ಗಾಮೋಹನ ದಾಸರ ಮಗಳಾದ  ಅಬಲಾ ಅವರೊಡನೆ ಬೋಸರ ವಿವಾಹವಾಯಿತು.  ಒಂದು ಶತಮಾನದಷ್ಟು ಹಿಂದೆಯೇ ಇವರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದರು ಎಂಬ ಸಂಗತಿ ಅಚ್ಚರಿ ಮೂಡಿಸುತ್ತದೆ .

    ಬೋಸ್ ರವರಿಗೆ ಸಂಶೋಧನೆ ಮಾಡಲು ಆಸಕ್ತಿ ಇದ್ದರೂ ಸಲಕರಣೆ, ಪರಿಕರ,  ಹಣದ ಸಹಾಯ ಇಲ್ಲದೆ ಸಂಶೋಧನೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೆ ಇವರ  ಸತತ ಪ್ರಯತ್ನದಿಂದಾಗಿ ಒಂದು ಸಣ್ಣ ಪ್ರಯೋಗಶಾಲಾ ಮಂಜೂರಾಗಿತ್ತು.

     ಸ್ಪಟಿಕಗಳಿಂದ ವಿದ್ಯುತ್ ತರಂಗಗಳ ಧ್ರುವೀಕರಣ ಎಂಬ ಪ್ರಥಮ ಸಂಶೋಧನಾ ಲೇಖನವನ್ನು 1895ರಲ್ಲಿ ‘ಜರ್ನಲ್ ಆಫ್ ದಿ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದರು.. ಅದೇ ವರ್ಷ ‘ವಿದ್ಯುತ್ ವಕ್ರೀಭವನ ಸೂಚ್ಯಂಕಗಳ ನಿರ್ಣಯ ‘ಎಂಬ ಅವರ ಎರಡನೇ ಸಂಶೋಧನಾ ಪ್ರಬಂಧ ‘ಎಲೆಕ್ಟ್ರಿಷಿಯನ್’ʼ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಇವರ ಸಂಶೋಧನಾ ಬದುಕಿಗೆ ಈ ಪ್ರಕಟಣೆ ಮಹತ್ವದ ತಿರುವು  ನೀಡಿತು. ಲಂಡನ್ನಿನ ರಾಯಲ್ ಸೊಸೈಟಿ ಇವರ ಸಂಶೋಧನೆಗೆ ಮನ್ನಣೆ ಕೊಟ್ಟು ಈ ಪ್ರಬಂಧಗಳನ್ನು ಪ್ರಕಟಿಸಿತಲ್ಲದೆ ಸಂಶೋಧನೆ ಮುಂದುವರಿಸಲು ಧನಸಹಾಯ ಸಹ ಮಾಡಿತು.

    ಇಟಲಿಯ ಮಾರ್ಕೊನಿಯು ಸೇರಿದಂತೆ ಆ ಕಾಲಕ್ಕೆ ಹಲವು ವಿಜ್ಞಾನಿಗಳು ತಂತಿಯ ಸಹಾಯವಿಲ್ಲದೆ ಸಂದೇಶಗಳನ್ನು ರವಾನಿಸುವ ವಿಧಾನದ ಬಗ್ಗೆ ಸಂಶೋಧನೆ ನಡೆಸಿದರು. ಇದನ್ನು ಪ್ರಥಮವಾಗಿ ಮಾಡಿದ ಕೀರ್ತಿ ನಮ್ಮ ಭಾರತದ ವಿಜ್ಞಾನಿ ಬೋಸರಿಗೆ ಸಲ್ಲಬೇಕು. 1895ರಲ್ಲಿ ಅವರು ತಾವು ಸಂಶೋಧಿಸಿ ನಿರ್ಮಿಸಿದ ನಿಷ್ಠಂತು ಪ್ರೇಕ್ಷಕವನ್ನು ಕೊಲ್ಕತ್ತಾದ ಪುರಭವನದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿದರು .

 

    ಈ ಸಂಶೋಧನೆ ಬಗ್ಗೆ ರಾಯಲ್ ಸೊಸೈಟಿ   ಅವರನ್ನು ಉಪನ್ಯಾಸಕಕ್ಕೆ ಆಹ್ವಾನಿಸಿದ ನಂತರ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ಭೌತಶಾಸ್ತ್ರದಲ್ಲಿ ಕೊಟ್ಟು ಪುರಸ್ಕರಿಸಿತು. ತದನಂತರ ಬೋಸ್ ರವರು ವಿದ್ಯುತ್ ತರಂಗಗಳನ್ನು ಉತ್ಪಾದಿಸಿದರು. ಎಲೆಕ್ಟ್ರಿಕಲ್ ರೇಡಿಯೇಟಿವ್ ಎಂಬ ಉಪಕರಣವನ್ನು ನಿರ್ಮಿಸಿದರು.

 19ನೆಯ ಶತಮಾನದ ಕೊನೆಯ ವರ್ಷದಲ್ಲಿ  ಬೋಸರು ತಮ ಸಂಶೋಧನಾ ಕ್ಷೇತ್ರವನ್ನು ಭೌತವಿಜ್ಞಾನದಿಂದ ಜೀವವಿಜ್ಞಾನಕ್ಕೆ ಬದಲಾಯಿಸಿದರು. ಅನ್ಯ ಕ್ಷೇತ್ರದಲ್ಲಿ ಕಾಲಿಟ್ಟಾಗ  ಅವರಿಗೆ ಮುಕ್ತ ಹೃದಯದ ಸ್ವಾಗತ ಸಿಗಲಿಲ್ಲ. ಬೋಸರು ಸಸ್ಯಗಳ ಬಗ್ಗೆ ವಿವಿಧ ಪ್ರಯೋಗ ನಡೆಸಿ ಪ್ರಾಣಿಗಳಂತೆ ಸಸ್ಯಗಳು ಸಹ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ವ್ಯಕ್ತಪಡಿಸುತ್ತದೆ ಎಂದು ಪ್ರಯೋಗಗಳ ಮೂಲಕ ಸಾಧಿಸಿ ತೋರಿಸಿದರು. ಇಂಗ್ಲೆಂಡ್, ಅಮೇರಿಕಾ, ಪ್ರಪಂಚದ ಇತರ ರಾಷ್ಟ್ರ ,ವಿಜ್ಞಾನ ಸಂಸ್ಥೆ, ವಿಶ್ವವಿದ್ಯಾಲಯಗಳಿಗೆ ಭೇಟಿಕೊಟ್ಟು ಉಪನ್ಯಾಸವನ್ನು ಮಾಡಿದರು .ಸಸ್ಯದ ಬೆಳವಣಿಗೆಯನ್ನು ಸಾದರ ಪಡಿಸಲು ಕ್ರೆಸ್ಕೋಗ್ರಾಫ್ ಎಂಬ ಉಪಕರಣವನ್ನು ನಿರ್ಮಿಸಿದರು. ಈ ಉಪಕರಣವು ಸಸ್ಯದ ಬೆಳವಣಿಗೆಯನ್ನು ಅಳೆಯಲು ಇಂದಿಗೂ ಬಳಸುವ ಮಾಪನವಾಗಿದೆ.

ಬೋಸರಿಗೆ ಸಾಕಷ್ಟು ಪ್ರಶಸ್ತಿಗಳು ಈ ವೇಳೆಗೆ ಲಭಿಸಿದ್ದವು. ಕೊಲ್ಕತ್ತಾ ವಿಶ್ವವಿದ್ಯಾನಿಲಯ ಡಾಕ್ಟರ್ ಆಫ್ ಸೈನ್ಸ್ ಪದವಿ, ಆಗಿನ ಭಾರತ ಸರ್ಕಾರ 1903ರಲ್ಲಿ ಸಿ ಐ ಈ ಬಿರುದು 1911ರಲ್ಲಿ ಸಿ ಎಸ್ ಐ ಬಿರುದು, 1916 ರಲ್ಲಿ ಬ್ರಿಟಿಷ್ ಸರ್ಕಾರ ನೈಟ್ , 1920 ರಲ್ಲಿ ರಾಯಲ್ ಸೊಸೈಟಿಯ ಸದಸ್ಯರಾಗಿ ಚುನಾಯಿತರಾದರು. ಇವರ ಗೌರವಾರ್ಥವಾಗಿ ಚಂದ್ರನ  ಒಂದು ಕುಳಿಗೆ ಇವರ ಹೆಸರನ್ನು ನೀಡಲಾಗಿದೆ.

ಭಾರತದಲ್ಲಿ  ಹಿಂದೊಮ್ಮೆ  ನಳಂದ ಮತ್ತು ತಕ್ಷಶೀಲ ವಿಶ್ವವಿದ್ಯಾನಿಲಯಗಳಿದ್ದಂತೆ ವಿಜ್ಞಾನ ಸಂಶೋಧನೆಗೆ ಸಂಪೂರ್ಣವಾಗಿ ಮೀಸಲಾಗಿರುವ ಒಂದು ಸಂಸ್ಥೆ ಕಟ್ಟಬೇಕೆಂದು ಬೋಸರು ಕನಸು ಕಂಡರು.  1917ರ ನವಂಬರ್ 30ರಂದು ಕೋಲ್ಕತ್ತಾದಲ್ಲಿ ಬೋಸರ ಸಂಶೋಧನಾ ಸಂಸ್ಥೆಯ ಪ್ರಾರಂಭವಾಯಿತು ಹಾಗೂ ಅವರ ಕನಸು ನನಸಾಯ್ತು .ಬೋಸರು ಇದನ್ನು ದೇಶಕ್ಕಾಗಿ ಅರ್ಪಿಸಿ ಜಾತಿ ,ಭಾಷೆ, ಲಿಂಗಭೇದವಿಲ್ಲದೆ ಎಲ್ಲರೂ ಸಂಶೋಧನಾ ಕಾರ್ಯ ನಡೆಸಲೆಂದು ಹಾರೈಸಿದರು. ತಮ್ಮ ಸಂಸ್ಥೆಯಲ್ಲಿ ಪ್ರಬುದ್ಧವಾದ ಉಪನ್ಯಾಸಗಳನ್ನು ಮಾಡಿದರು . ನವೆಂಬರ್ 23 1937ರಲ್ಲಿ ಬೋಸರು ಡಾರ್ಜಿಲಿಂಗ್ ನಲ್ಲಿ ಅನಾರೋಗ್ಯದಿಂದ ತೀರಿಕೊಂಡರು.

ಅವರ ಧ್ಯೇಯ ಹಾಗೂ ಹೇಳಿಕೆಗಳು ಈಗಲೂ ಪ್ರಸ್ತುತ,

‘ ನಾನೇನು ಸೃಷ್ಟಿಕರ್ತನಲ್ಲ, ಈ ಜಗದಲ್ಲಿ ಅಂತರ್ಗತವಾಗಿರುವ ಕೆಲವೊಂದು  ವಸ್ತು ವಿಶೇಷಗಳು ನನ್ನ ಮೂಲಕ ಜಗತ್ತಿಗೆ ಕಾಣಿಸಿಕೊಂಡಿದೆ ಹಾಗಾಗಿ ಜ್ಞಾನ ಯಾರ ಸ್ವತ್ತು ಅಲ್ಲ ಅದನ್ನು ಎಲ್ಲರೂ ಮುಕ್ತವಾಗಿ ಹಂಚಿಕೊಳ್ಳಬೇಕು’  ಎಂಬ ಹೇಳಿಕೆ ಅವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ.

ಅನುಕೂಲಕರವಲ್ಲದ ವಾತಾವರಣದ ಹೊರತಾಗಿಯೂ, ಸುಸಜ್ಜಿತ ಪ್ರಯೋಗಾಲಯ ಉಪಕರಣಗಳ ಲಭ್ಯತೆಯಿಲ್ಲದಿರುವಿಕೆ, ಹಣಕಾಸಿನ ಸಹಾಯವಿಲ್ಲದಿರುವುದು, ಸಂಶೋಧನಾ ಪ್ರಬಂಧದ ಕೃತಿ ಚೌರ್ಯ,  ನಿರ್ಲಕ್ಷತೆ, ಭೌತಶಾಸ್ತ್ರದಿಂದ ಸಸ್ಯಶಾಸ್ತ್ರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದಾಗ ಸ್ವಾಗತಿಸದ ವಾತಾವರಣ. ಜಗದೀಶ್ ಚಂದ್ರ ಬೋಸ್ ಅವರು ತಮ್ಮ ನಿರಂತರ ಪರಿಶ್ರಮದಿಂದ ಈ ಎಲ್ಲಾ ಅಡೆತಡೆಗಳನ್ನು ದಾಟಿ, ಅಂದುಕೊಂಡಿದ್ದನ್ನು ಸಾಧಿಸಬೇಕು ಎಂದು ಬಿಟ್ಟುಕೊಡದ ಧೋರಣೆಯಿಂದಾಗಿ  ವೈಜ್ಞಾನಿಕ ಕ್ಷೇತ್ರಕ್ಕೆ ಅಪಾರ ಪ್ರಮಾಣದ ಕೊಡುಗೆಯನ್ನು ನೀಡಿದ್ದಾರೆ. ಕಿರಿಯ ವಿಜ್ಞಾನಿಗಳಿಗೆ ದಾರಿ ತೋರಿದ ಇಂತಹ ಮಹಾನ್ ವಿಜ್ಞಾನಿಗಳಿಗೆ ವಂದನೆಗಳು.

 

 

                                               

 

 

 



No comments:

Post a Comment