Monday, December 4, 2023

ದೇಶದ ಅನ್ನದ ಬಟ್ಟಲನ್ನು ಹಿಗ್ಗಿಸಿದ ಡಾ. ಸ್ವಾಮಿನಾಥನ್

ದೇಶದ ಅನ್ನದ ಬಟ್ಟಲನ್ನು ಹಿಗ್ಗಿಸಿದ ಡಾ. ಸ್ವಾಮಿನಾಥನ್

                                                                                                                    

ಲೇಖಕರು : ರಮೇಶ, ವಿ,ಬಳ್ಳಾ

                                                                                                                                    ಅಧ್ಯಾಪಕರು

                                                                                                                ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು 

                                                                                                              (ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ 




ಇಂದು ಬಹುತೇಕ ತಂದೆ ತಾಯಿಗಳು ತಮ್ಮ ಮಗ ಡಾಕ್ಟರ್ ಆಗಬೇಕು, ಒಳ್ಳೆಯ ಸಂಪಾದನೆಯ ಜೊತೆಗೆ ಜನರ ಸೇವೆ ಮಾಡಬೇಕು ಎಂದು ಆಸೆ ಪಡುವುದು ಸಹಜ ಹಾಗೂ ಅದಕ್ಕಾಗಿ ಅವರು ಪಡುವ ಕಷ್ಟ, ಹರಸಾಹಸ ಹೇಳತೀರದು. ಎಲ್ಲೆಂದರಲ್ಲಿ ಉತ್ತಮ ಕಾಲೇಜ್ ಹುಡುಕಿ, ಕೋಚಿಂಗ್ ಕೊಡಿಸಿ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಸಫಲರಾದರೆ ಅದಕ್ಕಿಂತ ದೊಡ್ಡ ಖುಷಿ ಅವರಿಗೆ ಮತ್ತೊಂದಿಲ್ಲ. ಇದು ಈಗಿನ ಜಾಯಮಾನ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ತನ್ನ ಕಷ್ಟಗಳನ್ನೆಲ್ಲ ಮೀರಿ, ವೈದ್ಯ ಸೀಟು ದಕ್ಕಿಸಿಕೊಂಡು ಎಂಬಿಬಿಎಸ್ ಓದಲಾಗದೇ ಮೊಟಕುಗೊಳಿಸಿ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾನೆಂದರೆ ನೀವು ಆಶ್ಚರ್ಯಪಡುತ್ತೀರಿ ? 

ಹೌದು ! ಅದು ಭಾರತ ಸ್ವಾತಂತ್ರ್ಯದ ಕಿಚ್ಚು ಹತ್ತಿದ್ದ ಸಮಯ. ಆ ಕಾಲಕ್ಕೆ ಅಂದರೆ 1942ರಲ್ಲಿ ಭಾರತ ಸ್ವಾತಂತ್ರ್ಯದ ಮುಂಚೂಣಿ ನಾಯಕ ಮಹಾತ್ಮ ಗಾಂಧಿಜೀಯವರು ಕ್ವಿಟ್ ಇಂಡಿಯಾ ಚಳುವಳಿಗೆ ಕರೆ ಕೊಟ್ಟಿದ್ದ ಕಾಲ. ದೇಶದ ಜನರನ್ನು ಹುರಿದುಂಬಿಸುತ್ತಾ, ಭಾರತವನ್ನು ಬ್ರೀಟೀಷರ ಕಪಿಮುಷ್ಠಿಯಿಂದ ಪಾರು ಮಾಡಲು ಚಳುವಳಿಯನ್ನು ನಿರ್ಣಾಯಕ ಹಂತದತ್ತ ಕೊಂಡೊಯ್ಯಲು ಪಣ ತೊಟ್ಟಿದ್ದರು. ಅದೇ ಸಮಯಕ್ಕೆ ಅಂದರೆ 1942-43ರ ಹೊತ್ತಿಗೆ ಬಂಗಾಳ ಭೀಕರ ಬರಗಾಲವನ್ನು ಎದುರಿಸುತ್ತಿತ್ತು. ಕುಡಿಯಲು ನೀರು, ತಿನ್ನಲು ಆಹಾರವಿಲ್ಲದೇ ಜನ ತತ್ತರಿಸಿ ಹೋಗಿದ್ದರು. ಈ ಕ್ಷಾಮ ಎಷ್ಟು ದುರ್ಬರತೆಯನ್ನು ಸೃಷ್ಠಿಸಿತ್ತು ಎಂದರೆ 25 ರಿಂದ 30 ಲಕ್ಷ ಜನ ಬರಗಾಲಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಇದನ್ನರಿತು ಆಗಿನ ಅನೇಕ ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಯ ದಿಶೆಯನ್ನೇ ಬದಲಿಸಿ ದೇಶ ಸೇವೆಯ ಪಣ ತೊಟ್ಟರು. ಹಾಗೇ ಇದ್ದ ವಿದ್ಯಾರ್ಥಿಗಳಲೊಬ್ಬ ವೈದ್ಯಕೀಯ ವಿದ್ಯಾಭ್ಯಾಸ ಮಾಡಬೇಕಾದ ಆತ ಜನರ ಹಸಿವು ಅರಿತು, ಆಹಾರದ ಬಟ್ಟಲು ತುಂಬುವ ಕಾಯಕದ ಅಭಿವೃದ್ಧಿಯ ಕನಸು ಹೊತ್ತು ಕೃಷಿ ಅಧ್ಯಯನಕ್ಕೆ ಮುಂದಾದ. ತನ್ನ ವೈದ್ಯ ಕಾಲೇಜ್‌ಗೆ ಗುಡ್ ಬಾಯ್ ಹೇಳಿ, ಕೊಯಮತ್ತೂರಿನ ಕೃಷಿ ಕಾಲೇಜ್ ಸೇರಿಕೊಂಡು ಆ ಕ್ಷೇತ್ರದಲ್ಲಿ ಮಹಾನ್ ಕ್ರಾಂತಿಯನ್ನೇ ಮಾಡಿದ. ಆ ವಿದ್ಯಾರ್ಥಿ ಬೇರೆ ಯಾರೂ ಅಲ್ಲ, ಇತ್ತೀಚೆಗೆ ನಮ್ಮನ್ನಗಲಿದ ಹಸಿರು ಕ್ರಾಂತಿಯ ಹರಿಕಾರ, ಶ್ರೇಷ್ಠ ಕೃಷಿ ವಿಜ್ಞಾನಿ, ಸಸ್ಯಶಾಸ್ತ್ರಜ್ಞ ಡಾ. ಎಂ. ಎಸ್. ಸ್ವಾಮಿನಾಥನ್.

ಇವರ ಪೂರ್ಣ ಹೆಸರು ಮಾಂಕಾಂಬ ಸಾಂಬಶಿವನ್ ಸ್ವಾಮಿನಾಥನ್. ಇವರು ಹುಟ್ಟಿದ್ದು 7ನೇ ಆಗಷ್ಟ್ 1925, ಇಂದಿನ ತಮಿಳುನಾಡಿನ ಕುಂಬಕೋಣಂನಲ್ಲಿ. ತಂದೆ ಎಮ್. ಕೆ. ಸಾಂಬಶಿವನ್ ವೈದ್ಯರಾಗಿದ್ದರು. ತಾಯಿ ಪಾರ್ವತಿ ತಂಗಮ್ಮಳ್ ಸುಸಂಕೃತ ಸಾಂಪ್ರದಾಯಿಕ ಗೃಹಿಣಿಯಾಗಿದ್ದರು. ಕುಂಬಕೋಣಂನಲ್ಲಿಯ ಕ್ಯಾಥೋಲಿಕ್ ಲಿಟ್ಲ್ ಪ್ಲವರ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಕಲಿತು ಮೆಟ್ರಿಕ್ಯೂಲೇಷನ್ ಮುಗಿಸಿದರು. ಕೇರಳದ ತಿರುವನಂತಪುರದ ಮಹಾರಾಜ ಕಾಲೇಜಿನಲ್ಲಿ ಪದವಿಪೂರ್ವ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದರು. ತುಂಬಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸ್ವಾಮಿನಾಥನ್‌ನನ್ನು ತಂದೆತಾಯಿಗಳು ವೈದ್ಯನನ್ನಾಗಿ ಮಾಡಬೇಕೆಂದು ಕನಸು ಕಂಡಿದ್ದರು. ಹಾಗೇ ವೈದ್ಯ ವಿದ್ಯಾರ್ಥಿಯಾಗಿಯೂ ಕಾಲೇಜು ಸೇರಿದ್ದರು. ಆದರೆ ಆಗಿನ ಬಂಗಾಲದ ಭೀಕರ ಬರ ಪರಸ್ಥಿತಿ ಅವರ ಮನಸ್ಸಿನ ಮೇಲೆ ಅಘಾದ ಪರಿಣಾಮ ಬೀರಿತ್ತು. 18ನೇ ವಯಸ್ಸಿನಲ್ಲಿ ಒಂದು ದೃಢ ನಿರ್ಧಾರ ಮಾಡಿ ಆಯ್ಕೆಯನ್ನು ಬದಲಿಸಿಕೊಂಡರು. ಹಾಗೇ ನೋಡಿದರೆ ಅವರಿಗೆ ಬಾಲ್ಯದಿಂದಲೂ ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು ಎಂದು ಹೇಳಲಾಗುತ್ತದೆ. ಅನಂತರ 1944ರಲ್ಲಿ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಪದವಿ ಪೂರೈಸಿದರು. ಮುಂದೆ 1947ರಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನ್ಯೂಡೆಲ್ಲಿಯಲ್ಲಿ ತಳಿಶಾಸ್ತçದ ಉನ್ನತ ಅಧ್ಯಯನಕ್ಕೆ ಸೇರ್ಪಡೆಗೊಂಡರು. ಅಲ್ಲಿಯೂ ಕೂಡ ಸೈಟೋಜೆನೆಟಿಕ್ಸ್ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸ್ನಾತಕ ಪದವಿ ಪೂರ್ಣಗೊಳಿಸಿದರು. ಹೀಗೆ ಅವರ ಶೈಕ್ಷಣಿಕ ಪಯಣ ಮುಂದುವರೆದು ಜಾಗತಿಕ ಮಟ್ಟದ ಬಹುದೊಡ್ಡ ಕೃಷಿ ವಿಜ್ಞಾನಿಯಾಗಿ ಭಾರತಕ್ಕೆ ಹೆಮ್ಮೆ ತಂದರು.

ದೇಶ ವಿದೇಶಗಳನ್ನು ಸುತ್ತಿ ಕೃಷಿ ಕ್ಷೇತ್ರದ ಅಧ್ಯಯನ, ಸಂಶೋಧನೆ ಮಾಡಿ ಪಕ್ವಗೊಂಡರು. ತಾಯಿನೆಲದ ಆಹಾರ ಸಮಸ್ಯೆಯ ಭೀಕರ ಪರಿಸ್ಥಿತಿಗಳನ್ನು ಕಂಡು ಮಮ್ಮಲ ಮರುಗಿದರು. ಮುಂದೆ ಸ್ಥಳೀಯ ರೈತ ಜನಸಂಸ್ಕೃತಿಯ ಅವಿಚ್ಛಿನ್ನ ಜ್ಞಾನ ಪರಂಪರೆಯನ್ನು ಅವಲೋಕಿಸಿದರು. ಈ ಸಾಂಪ್ರದಾಯಿಕ ಕೃಷಿ ಮೂಲ ಜ್ಞಾನದಿಂದಷ್ಟೇ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಅರಿತು ತಮ್ಮ ವಿಶೇಷ ಆಸಕ್ತಿ, ಅಭಿವೃದ್ಧಿಯ ಕಾಳಜಿಯೊಂದಿಗೆ ಹೊಸ ತಲೆಮಾರನ್ನು ಸೃಷ್ಠಿಸಲು ಪಣತೊಟ್ಟರು. ಆ ಸಮಯದಲ್ಲಿ ಹಸಿವಿನ ಬರ ನೀಗಿಸಲು ಹೆಚ್ಚು ಇಳುವರಿಯ ಅವಶ್ಯಕತೆ ಮನಗಂಡು ಅಧಿಕ ಇಳುವರಿ ತಳಿಗಳ ಶೋಧನೆಯನ್ನು ಮಾಡಲು ಅಣಿಯಾದರು. ಮೆಕ್ಸಿಕೊ ದೇಶದ ಕೃಷಿವಿಜ್ಞಾನಿ ಡಾ. ನಾರ್ಮನ್ ಬೋರ್ಲಾಗ್‌ರೊಡಗೂಡಿ ಕುಬ್ಜ ತಳಿಯ ಬಗ್ಗೆ ತಲೆ ಕೆಡಿಸಿಕೊಂಡು ಅಧಿಕ ಇಳುವರಿ ಹಾಗೂ ರೋಗನಿರೋಧಕ ಶಕ್ತಿ ಹೊಂದಿದ ಗೋಧಿಯನ್ನು ಭಾರತದಾದ್ಯಂತ ಆಮದು ಮಾಡಿ ತಂದು ಪರಿಚಯಿಸಲು ಮುಂದಾದರು. ಈ ತಳಿ ಶೀಘ್ರ ಬೆಳವಣಿಗೆ ಗುಣ ಹೊಂದಿತ್ತಲ್ಲದೆ ರಾಸಾಯನಿಕ ಗೊಬ್ಬರಗಳಿಗೆ ಸ್ಪಂದಿಸಿ ವಿಶೇಷವಾಗಿ ಕಂಡಿತು. ಈಗಾಗಲೇ ನಾರ್ಮನ್ ಸಂಶೋಧಿಸಿದ್ದ ಈ ತಳಿ ಭಾರತದಲ್ಲಿ ಕಾಲಿಟ್ಟು ವ್ಯಾಪಕ ಬದಲಾವಣೆಗೆ ನಾಂದಿಯಾಯಿತು. ಅಂದಿನ ಪಾರಂಪರಿಕ ಕೃಷಿ ವಿಧಾನಗಳಿಂದ ಹೊರಬರದ ರೈತರು ಹೊಸ ತಳಿಗಳನ್ನು ಬೆಳೆಯಲು ಹಿಂಜರಿಯುತ್ತಿದ್ದರು. ಇದನ್ನು ಮನಗಂಡ ಸ್ವಾಮಿನಾಥನ್ ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಮನವರಿಕೆ ಮಾಡಿಕೊಟ್ಟರು. ದೆಹಲಿ, ಹರಿಯಾಣ ಮತ್ತು ಪಂಜಾಬ ಭಾಗಗಳಲ್ಲಿ ರೈತರ ಹೊಲಗಳಲ್ಲಿ ಸಾವಿರಾರು ಪ್ರದರ್ಶನಗಳನ್ನು ಕೈಗೊಂಡು ಸುಮಾರು 18000 ಮೆಟ್ರಿಕ್ ಟನ್ ವಿನೂತನ ತಳಿ ಗೋಧಿಯನ್ನು ಆಮದು ಮಾಡಿಕೊಂಡು ಪಾಕೇಟ್ ಮಾಡಿ ರೈತರು ಬೆಳೆಯಲು ಉತ್ತೇಜಿಸಿದರು. 1966ರಲ್ಲಿ ನಡೆದ ಈ ಉತ್ತೇಜನದಿಂದ ರೈತರು 11 ಮಿಲಿಯನ್ ಟನ್ ಬಂಪರ್ ಬೆಳೆ ತೆಗೆದರು. ಪ್ರಯೋಗಾಲಯದ ಪರೀಕ್ಷೆಗಳಿಂದ ಪರಿಣಾಮಕಾರಿಯಾಗಿ ಪ್ರಭಾವ ಬೀರಿದ ತಳಿಗಳಿಂದ ರೈತರ ಆತಂಕ ದೂರವಾದವು. ಅಧಿಕ ಇಳುವರಿಯ ಹೊಸ ಗೋಧಿ ತಳಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತು. 1968ರ ಹೊತ್ತಿಗೆ ಈ ಉತ್ಪಾದನೆ 17 ಮಿಲಿಯನ್ ಟನ್‌ಗೆ ಏರಿಕೆಯಾಗಿ ಮೈಲುಗಲ್ಲು ಸ್ಥಾಪಿಸಿತು. ಭಾರತೀಯ ಕೃಷಿ ವಿಜ್ಞಾನಿಗಳು ಹಾಗೂ ಸ್ವಾಮಿನಾಥನ್‌ರ ಹಾಗೂ ಇತರ ತಳಿಶಾಸ್ತçಜ್ಞರ ಸಹಾಯದಿಂದ 1971ರಲ್ಲಿ ಭಾರತವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಎಂದು ಘೋಷಿಸಲಾಯಿತು. ಆ ಮೂಲಕ ಸ್ವಾಮಿನಾಥನ್ 1960-70ರ ದಶಕದಲ್ಲಿ ಭಾರತದ ಕೃಷಿ ವಲಯದ ಅಭೂತಪೂರ್ವ ಬದಲಾವಣೆಗೆ ಕಾರಣೀಕರ್ತರಾಗಿ ‘ಭಾರತ ಹಸಿರು ಕ್ರಾಂತಿಯ ಪಿತಾಮಹ’ ಎಂದು ಖ್ಯಾತಿ ಗಳಿಸಿದರು. 

ಹೊಸ ತಳಿ ಬೆಳೆಗಳೊಂದಿಗೆ ಮುನ್ನುಗ್ಗಿದ ಭಾರತದ ಕೃಷಿ ವಲಯ ಅಗಾಧ ಪ್ರಮಾಣದ ಬೆಳವಣಿಗೆ ಕಂಡಿತು. ಗೋಧಿ ಮಾತ್ರವಲ್ಲದೇ ಅಕ್ಕಿ, ಕಬ್ಬು, ಹತ್ತಿ, ಹಣ್ಣು, ತರಕಾರಿ ಮುಂತಾದ ಬೆಳೆಗಳ ಇಳುವರಿ ಏರುತ್ತಾ ಸಾಗಿತು. ನವೀನ ತಂತ್ರಜ್ಞಾನ ಹಾಗೂ ವೈಜ್ಞಾನಿಕತೆಯನ್ನು ವ್ಯಾಪಕವಾಗಿ ಅಳವಡಿಸಿಕೊಂಡ ಪರಿಣಾಮ ಇಳುವರಿಯಲ್ಲಿ, ಬೆಳೆಯ ಗುಣಮಟ್ಟದಲ್ಲಿ ಗಣನೀಯ ವೃದ್ಧಿಯಾಗಿ ಜಾಗತಿಕ ಮಟ್ಟದಲ್ಲಿ ಭಾರತವೂ ಕೂಡ ಆಹಾರ ಉತ್ಪಾದನೆ ಹಾಗೂ ರಪ್ತು ಮಾಡುವಲ್ಲಿ ಪ್ರಮುಖ ದೇಶವಾಗಿ ಹೊರಹೊಮ್ಮಿತು. ಈ ಎಲ್ಲ ಮಹತ್ ಸಾಧನೆಯ ಹಿಂದೆ ಸ್ವಾಮೀನಾಥನ್ ಇದ್ದಾರೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.

ಜಗತ್ತಿನ ಸ್ಥಳೀಯ ನೆಲಮೂಲ ಜ್ಞಾನ ಹಾಗೂ ಸಾಮುದಾಯಿಕ ಪರಂಪರೆಗಳು ಬದಲಾವಣೆಯ ಕಾಲಘಟ್ಟದಲ್ಲೂ ತಮ್ಮತನವನ್ನು ಸಮರ್ಥವಾಗಿ ಪ್ರತಿಬಿಂಬಿಸಿದ ಉದಾಹರಣೆಗಳು ಅನೇಕ. ಅಂತಹುಗಳಲ್ಲಿ ನಮ್ಮ ಭಾರತೀಯ ರೈತ ಸಮುದಾಯ, ಬುಡಕಟ್ಟು ಪರಂಪರೆ ವಿಶೇಷವಾಗಿ ಗುರುತಿಸಲ್ಪಡುತ್ತದೆ. ರೈತರು, ಆದಿವಾಸಿಗಳು, ಬುಡಕಟ್ಟು ಜನಾಂಗಗಳು, ಸಮುದಾಯಗಳು ನದಿ, ಕಣಿವೆ, ಹಳ್ಳ, ತೊರೆಗಳ ಆಸುಪಾಸಿನ ನೀರು ಸಂಪನ್ಮೂಲವನ್ನು ಗುರಿಯಾಗಿಟ್ಟುಕೊಂಡು ಬೆಳೆಗಳನ್ನು ಬೆಳೆಯುತ್ತಾ ಬಂದಿರುವುದು ಆ ಮೂಲಕ ತಮ್ಮ ಅಗತ್ಯ ಆಹಾರ ಪೂರೈಕೆಯನ್ನು ಕಂಡುಕೊAಡದ್ದು ತಿಳಿದು ಬರುತ್ತದೆ. ಅಷ್ಟೇ ಅಲ್ಲ ಪರಿಸರ ಮತ್ತು ಮಾನವನ ನಡುವಿನ ಸಂಬAಧಗಳಿಗೆ ದಕ್ಕೆ ಬಾರದ ರೀತಿಯಲ್ಲಿ ಪ್ರಾಕೃತಿಕ ಸಮತೋಲನವನ್ನು ಕಾಪಿಟ್ಟುಕೊಂಡು ನಿಸರ್ಗಾಧಾರಿತ ಜೀವನ ಸವೆಸಿದ್ದು ಒಂದು ಕಾಲದ ಮುಖ್ಯ ಹೆಗ್ಗುರುತು. ಯಾವಾಗ ಹಸಿರು ಕ್ರಾಂತಿಯಾಯಿತೊ ಅಲ್ಲಿಂದ ಹೆಚ್ಚು ಬೆಳೆ ಬೆಳೆಯುವ ಉಮೇದಿಯಲ್ಲಿ ನೈಸರ್ಗಿಕ ಜೀವ ಪರಿಸರದ ಹಾನಿಗೆ ಮಾನವ ಕೈ ಹಾಕಿದ. ಇದರರ್ಥ ಅಧಿಕ ರಸಗೊಬ್ಬರಗಳ ಬಳಕೆ, ನವ ನವೀನ ಕುಲಾಂತರಿ ಬೀಜ ತಳಿಗಳ ಬಳಕೆ, ಎಲ್ಲೆ ಮೀರಿದ ವಿಜ್ಞಾನ ತಂತ್ರಜ್ಞಾನ ಎಲ್ಲವೂ ಎಲ್ಲೋ ಒಂದು ಕಡೆಗೆ ಆವಾಂತರ ಸೃಷ್ಠಿಸುತ್ತಿರುವಂತೆ ತೋರಿತು. ಇದರ ಜೊತೆಗೆ ಜನಸಂಖ್ಯೆ ಬೆಳೆದಂತೆಲ್ಲಾ ನಗರೀಕರಣ, ಕೈಗಾರಿಕೀಕರಣ, ವಾಣಿಜ್ಯ ವ್ಯಾಪಾರದ ಏರುಗತಿ ಎಲ್ಲವೂ ಮೇಳೈಸಿ ನಿಸರ್ಗದ ಜೀವಜಾಲ ಹಾಗೂ ಪರಿಸರ ವ್ಯವಸ್ಥೆಯ ಒಟ್ಟು ಸಮತೋಲನವನ್ನು ದಿಕ್ಕು ತಪ್ಪಿಸಿತು. ಪರಿಣಾಮ ಗ್ರಾಮೀಣ, ದೇಶೀಯತೆಯ ತಳಸಮುದಾಯಗಳ ಪಾರಂಪರಿಕ ಜೀವನ ವಿಧಾನ ಹಾಗೂ ನಿಸರ್ಗವಾದದ ತತ್ವ ಅಳಿದು ಹೋಗಲು ಪ್ರಾರಂಭಿಸಿತು. ಅಲ್ಲದೇ ಸ್ಥಳೀಯ ಜೀವವೈವಿಧ್ಯದ ಅಳಿವು ಉಲ್ಬಣಗೊಂಡಿತು. ಕೃಷಿಯಲ್ಲಿ ಆದ ಈ ವಿಕೃತತೆ ನೈಸರ್ಗಿಕ ಸಂಪನ್ಮೂಲಗಳ ವಿನಾಶಕ್ಕೆ ಕಾರಣವಾಗಿ ಸ್ಥಳೀಯ ಜೀವಿ ಪ್ರಭೇದಗಳ ವಂಶವಾಹಿಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಸಿತೆಂದೇ ಹೇಳಬಹುದು. ಅಲ್ಲಿಯವರೆಗೂ ಪರಿಚಿತವಿದ್ದ ದೇಶಿ ಬೀಜ ತಳಿಗಳ ವೈವಿದ್ಯದಲ್ಲಿ ಗಣನೀಯ ಇಳಿಕೆ ಕಂಡು ವಿನಾಶದ ಕೂಪಕ್ಕೆ ತಳ್ಳಲ್ಪಟ್ಟಿತು. ಇದಕ್ಕೊಂದು ಉದಾಹರಣೆಯಾಗಿ ಹೇಳುವುದಾದರೆ 1750 ರಷ್ಟಿದ್ದ ದೇಶಿ ಭತ್ತದ ತಳಿಗಳು ನೂರರ ಆಸುಪಾಸು ಬಂದು ತಲುಪಿದವು. ವೈವಿಧ್ಯಮಯ ಬೀಜಗಳು ನೆಲಮೂಲ ಸಂಸ್ಕೃತಿಯ ದ್ಯೋತಕಗಳು. ಅವುಗಳ ಉಳಿವಿಗೆ ಸಮಯಾನುಸಾರ ಉಪಕ್ರಮಗಳ ಅಗತ್ಯತೆ ಎದ್ದು ಕಂಡಿತು. 

ಅತ್ಯಂತ ಕಠಿಣ ಪಾರಿಸರಿಕ ವಾತಾವರಣದಲ್ಲಿ ಬುಡಕಟ್ಟು ಸಮುದಾಯವೊಂದು ಹೊಸ ಪ್ರಯೋಗಕ್ಕಿಳಿದು ಕೃಷಿ ಕ್ಷೇತ್ರದಲ್ಲೊಂದು ಮೈಲುಗಲ್ಲು ಸ್ಥಾಪಿಸುವಲ್ಲಿ ಯಶಸ್ವಿಯಾಯಿತು. ಕೃಷಿ ಜೀವ-ವೈವಿದ್ಯದ ಸಂರಕ್ಷಣಾ ಕಾರ್ಯದಲ್ಲಿ ಮುಂದಡಿಯಿಟ್ಟು, ವಂಶವಾಹಿ ಬೀಜ ಬ್ಯಾಂಕ್‌ಗಳ ಸ್ಥಾಪನೆ, ಮಳೆನೀರು ಕೊಯ್ಲು ಅಳವಡಿಕೆ, ಸಾಮುದಾಯಿಕ ಜೀವವೈವಿದ್ಯ ರಜಿಸ್ಟರ್ ನಿರ್ವಹಣೆ, ಸಸ್ಯ ವರ್ಧನಾ ಕ್ರಮಗಳು, ಬೆಲೆ ಬಾಳುವ ಔಷಧಿ ಸಸ್ಯಗಳ ಕಾಪಾಡುವಿಕೆ, ಅರಣ್ಯ ರಕ್ಷಣೆಯ ಜವಾಬ್ದಾರಿ ಹೀಗೆ ಹತ್ತು ಹಲವು ಉಪಕ್ರಮಗಳ ಮೂಲಕ ಸಶಕ್ತ ಜೀವನ ಹಾಗೂ ಸುಸ್ಥಿರ ಬದುಕನ್ನು ಸಾಧಿಸಿತು. ಈ ಪಾರಂಪರಿಕ ಜ್ಞಾನವನ್ನು ಹಲವಾರು ಬುಡಕಟ್ಟು ಸಮುದಾಯಗಳ ನೆರವಿನಿಂದ ಹಂಚಿಕೆ ಮಾಡಿಕೊಂಡು ಆಧುನಿಕ ಕೃಷಿ ವ್ಯವಸ್ಥೆಯ ಕೆಲ ಲೋಪಗಳನ್ನು ತಿದ್ದಿಕೊಂಡು ಮೇಲೇದ್ದ ಪರಿ ರೋಚಕವಾದುದು. ಈ ಕೃಷಿ ಸಂಬಂಧಿತ ಸಾಮುದಾಯಿಕ ಪಾರಂಪರಿಕ ಜ್ಞಾನ ಹಾಗೂ ಹೊಸ ತಳಿ ತಂತ್ರಜ್ಞಾನ, ಕೃಷಿ ಮುನ್ನೋಟಗಳ ಮೇಳೈಕೆಯ ಪ್ರಯೋಗ ನಡೆದದ್ದು ಒರಿಸ್ಸಾದ ಜೋಪುರ್‌ನಲ್ಲಿ. ಈ ಎಲ್ಲ ಮಹತ್ಕಾರ್ಯದ ಹಿಂದಿನ ಶಕ್ತಿಯಾಗಿ ನಿಂತಿದ್ದು ಮಾತ್ರ ಎಂ ಎಸ್ ಸ್ವಾಮಿನಾಥನ್. 

ಹಸಿರು ಕ್ರಾಂತಿಯ ಹರಿಕಾರರಾಗಿ, ಸಸ್ಯ ತಳಿ ವಂಶವಾಹಿ ವಿಜ್ಞಾನಿಯಾಗಿ ಅಮೋಘ ಸಾಧನೆಗೈದ ಎಂ.ಎಸ್. ಸ್ವಾಮಿನಾಥನ್ ಕೊಡುಗೆ ಅಷ್ಟಿಷ್ಟಲ್ಲ. ಭಾರತೀಯ ಕೃಷಿ ಕ್ಷೇತ್ರಕ್ಕೆ ಮಾತ್ರ ಇವರ ಸೇವೆ ಸೀಮಿತವಾಗದೇ ಸರ್ವವ್ಯಾಪಿಯಾಗಿ ಬೆಳಗಿತು. 20ನೇ ಶತಮಾನದ ಏಷ್ಯಾದ 20 ಶ್ರೇಷ್ಠ ವಿಜ್ಞಾನಿಗಳಲ್ಲಿ ಇವರೂ ಒಬ್ಬರಾಗಿ ಕೃಷಿ ವಲಯವನ್ನು ಅಭಿವೃದ್ಧಿಯತ್ತ ಕೊಂಡೊಯ್ದರು. ಆ ಮೂಲಕ ಕೃಷಿ ಕ್ರಾಂತಿಯ ವೈಜ್ಞಾನಿಕ ಪ್ರವರ್ತಕರಾಗಿ ಜನಮಾನಸದಲ್ಲಿ ನೆಲೆಗೊಂಡರು. ಅವರ ಈ ಮಹೋನ್ನತ ಸಾಧನೆಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು ಮುಡಿಗೇರಿದವು. ಅಲ್ಲದೇ ವಿಶ್ವ ಆಹಾರ ಪ್ರಶಸ್ತಿ 1987ರಲ್ಲಿ ಮತ್ತು ಮ್ಯಾಗ್ಸೆಸೆ ಪ್ರಶಸ್ತಿಗಳು ಇವರನ್ನು ಅರಸಿ ಬಂದವು. ಇಂತಹ ಹಸಿರು ಹಬ್ಬಿಸಿದ ಮಹಾಚೇತನ ಇತ್ತೀಚಿಗೆ ಅಂದರೆ 2023ರ ಸಪ್ಟೆಂಬರ್ 28ರಂದು ನಮ್ಮನ್ನಗಲಿದರು. 98 ವರ್ಷಗಳ ಸುದೀರ್ಘ ತುಂಬು ಜೀವನ ನಡೆಸಿದ ಡಾ. ಎಂ. ಎಸ್. ಸ್ವಾಮಿನಾಥನ್ ಯಾರೂ ಮರೆಯದ ಭಾರತೀಯ ಕೃಷಿ ವಿಜ್ಞಾನದ ಮೇರು ವ್ಯಕ್ತಿತ್ವ.



ಆಕರಗಳು : 

ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ದಾರಿ – ಡಾ. ಜೆ ಬಾಲಕೃಷ್ಣ

ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್.ಸ್ವಾಮಿನಾಥನ್- ನವೀನಕುಮಾರ ಎನ್.

ಯೋಜನಾ-2023

ನಾಪತ್ತೆಯಾದ ಗ್ರಾಂಪೋನುಗಳು ಮತ್ತು ಇತರ ಪ್ರಬಂಧಗಳು- ಎಸ್. ದಿವಾಕರ

ಜಾಲತಾಣ 


No comments:

Post a Comment