Monday, December 4, 2023

ಅನ್ನ ಬ್ರಹ್ಮ …… ಅನ್ನವೇ ದೇವರು.

ಅನ್ನ ಬ್ರಹ್ಮ…… ಅನ್ನವೇ ದೇವರು.

                                    ರಚನೆ: ‌ವಿಜಯಕುಮಾರ್‌ ಹೆಚ್‌. ಜಿ                                        ಸ.ಶಿ. ಸ.ಪ್ರೌ.ಶಾಲೆ, ಕಾವಲ್‌ ಭೈರಸಂದ್ರ.                                                     ಮತ್ತು     
                                            ಚಂದ್ರಕಲಾ ಆರ್. ಸ.ಶಿ.                                                 ಕೆ.ಪಿ.ಎಸ್.‌ ಕೊಡಿಗೆಹಳ್ಳಿ.

ಈ ಬಾರಿ ಶ್ರೀಯುತ ವಿಜಯಕುಮಾರ್‌ ಹಾಗೂ ಶ್ರೀಮತಿ ಚಂದ್ರಕಲಾರವರು ರಚಿಸಿದ ಅನ್ನ ಬ್ರಹ್ಮ ..... ಈ ವಿಜ್ಞಾನ ನಾಟಕವು ಡಿವಿಷನ್‌ ಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿ ಸಮಾಧಾನಕರ ಬಹುಮಾನ ಪಡೆದುಕೊಂಡಿತ್ತು. ಅದನ್ನು ವಿಜ್ಞಾನ ಶಿಕ್ಷಕರ ಅನುಕೂಲಕ್ಕಾಗಿ ನೀಡಲಾಗಿದೆ.  ವಿಜ್ಞಾನ ನಾಟಕ ರಚನೆಯಲ್ಲಿ ಇದು ನಿಮಗೆ ಒಂದಷ್ಟು ಒಳ ನೋಟವನ್ನು ನೀಡಬಹುದು. ನಮ್ಮ ಸವಿಜ್ಞಾನದ ಲೇಖಕ ಮಿತ್ರರ ಈ ಸಾಧನೆಗಾಗಿ, ಅವರಿಗೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತಿದ್ದೇವೆ.‌     

-------------------------------------------------------------------------                                              
 

ನಾಂದಿ: (ಪಾತ್ರಧಾರಿಗಳು ಕೈಗಳಲ್ಲಿ ಹಣತೆಗಳನ್ನು ಹಿಡಿದು, ಉಪನಿಷತ್‌ ವಾಕ್ಯಗಳನ್ನು ಹೇಳುತ್ತಾ ರಂಗಸ್ಥಳದಲ್ಲಿ ಸುತ್ತಾಡಿ ಕೈಯಲ್ಲಿನ ಹಣತೆಗಳನ್ನು ರಂಗಸ್ಥಳದ ಮುಂಭಾಗದಲ್ಲಿ ಇಟ್ಟಿರುವ ಸಿರಿಧಾನ್ಯಗಳಿಂದ ತುಂಬಿದ ಸೇರುಗಳ ಮೇಲೆ ಇಟ್ಟು ಹೊರಗೆ ಹೋಗುವರು)

ಪಾತ್ರಧಾರಿಗಳು ಒಟ್ಟಾಗಿ: “ಅನ್ನಂ ಬ್ರಹ್ಮೇತಿವ್ಯಜಾನಾತ್‌,

                       ಅನ್ನಾದ್ಯೇವ ಖಲ್ವಿಮಾನಿ ಭೂತಾನಿ ಜಾಯಂತೆ,

                       ಅನ್ನೇನ ಜಾತಾನಿ ಜೀವಂತಿ…………||       

                       ಅನ್ನಂ ನ ನಿಂದ್ಯಾತ್‌, ತದ್ವ್ರತಂ,

                       ಪ್ರಾಣೋವಾ ಅನ್ನಂ, ಶರೀರ ಮನ್ನಾದಂ,

                       ಶರೀರೆ ಪಾಣಃ ಪ್ರತಿಷ್ಠಿತಃ……………||

                       ಅನ್ನಂ ಬಹುಕುರ್ವೀತ, ತದ್ವ್ರತಂ | …………… (ನಿಷ್ಕ್ರಮಣ)

                        ಪ್ರವೇಶ (ಎರಡೂ ಬದಿಗಳಿಂದ ಸೂತ್ರಧಾರರ ಪ್ರವೇಶ)

ಸೂತ್ರಧಾರ 1: ಗೆಳತಿ ಕೇಳಿದೆಯಾ ಅವರು ಹೇಳಿಕೊಂಡು ಹೋಗಿದ್ದನ್ನ?

ಸೂತ್ರಧಾರ 2: ಹ್ಞಾಂ ಕೇಳಿದೆ. ಏನದು?  ನನಗೆ ಪೂರ್ತಿ ಅರ್ಥ ಆಗಲಿಲ್ಲ.

ಸೂತ್ರಧಾರ 1: ಅವು ಉಪನಿಷತ್ತಿನ ವಾಕ್ಯಗಳು. ಅನ್ನದ ಮಹತ್ವ ತಿಳಿಸುವ ಮಾತುಗಳು.

ಸೂತ್ರಧಾರ 2: ಓ. ಅದೇ ಅಕ್ಕಿಯಲ್ಲಿ ಮಾಡ್ತಾರಲ್ಲ ಅನ್ನ, Rice ಅದೇ ತಾನೆ?

ಸೂತ್ರಧಾರ 1: (ನಗುತ್ತಾ) ಅನ್ನ ಅಂದರೆ ಬರೀ Rice ಅಲ್ಲ. ಒಟ್ಟಾರೆ ಆಹಾರ ಎಂದು ಅರ್ಥ.

ಸೂತ್ರಧಾರ 2: ಓಹೋ! ಹೌದಾ? ಮತ್ತೆ ಏನೇನು ಹೇಳಿದರು ಈಗ, ಉಪನಿಷತ್‌ ವಾಕ್ಯಗಳನ್ನು.

ಸೂತ್ರಧಾರ 1: ಅನ್ನಂ ಬ್ರಹ್ಮೇತಿವ್ಯಜಾನಾತ್- ಅನ್ನವೇ ಪರಮಶ್ರೇಷ್ಠವಾದ ಬ್ರಹ್ಮ ಎಂದು ಹೇಳಿದರು,

            ಅನ್ನದಿಂದಲೇ - ಅಂದರೆ ಆಹಾರದಿಂದಲೇ ನಾವೆಲ್ಲಾ ಜೀವಿಸಿರುವುದು

            ಆದ್ದರಿಂದ ಅನ್ನವನ್ನು ಅಂದರೆ ಆಹಾರವನ್ನು ವ್ಯರ್ಥ ಮಾಡಬಾರದು,

            ಅನ್ನದಿಂದಲೇ ಪ್ರಾಣ, ಶರೀರವೂ ಅನ್ನದಿಂದಲೇ ಆಗಿರುವುದು. ಶರೀರದಲ್ಲಿನ ಪ್ರಾಣವೂ ಅನ್ನದಿಂದಲೇ,  ಆದ್ದರಿಂದ ನಾವು ಬೇರೆ ಬೇರೆ ವಿಧಾನಗಳಿಂದ ಅನ್ನವನ್ನು ಅಂದರೆ ಆಹಾರವನ್ನು  “ಬಹುಕುರ್ವೀತ” ಅಂದರೆ ಹೆಚ್ಚು ಹೆಚ್ಚು ಬೆಳೆಯಬೇಕು, ವಿವಿಧ ಆಹಾರಗಳನ್ನು ಬೆಳೆಯಬೇಕು ಎಂದು ಅರ್ಥ ಬರುವ ಮಾತುಗಳನ್ನು ಬಹಳ ಹಿಂದೆಯೇ ಹೇಳಿದ್ದಾರೆ ನೋಡು.

ಸೂತ್ರಧಾರ 2: ಅಬ್ಬಾ! ಹಾಗಾದರೆ, ಇಂದಿನ ನಾವು ಆಹಾರದ ಬಗ್ಗೆ ತಿಳಿಯೋದು ಬಹಳ ಇದೆ ಅಲ್ವಾ?

ಸೂತ್ರಧಾರ 1: ಹೌದು ಖಂಡಿತ ಅದಕ್ಕೆಂದೇ ವಿಶ್ವಸಂಸ್ಥೆ (U.N.O) 2023 ನೇ ವರ್ಷವನ್ನು YEAR OF MILLETS ಅಂದರೆ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ.

ಸೂತ್ರಧಾರ 2: YEAR OF MILLETS ಏನು ಹಾಗಂದ್ರೆ?

ಸೂತ್ರಧಾರ 1: ಬಾ. ನಾಟಕ “ಅನ್ನಬ್ರಹ್ಮ” ನೋಡಿದರೆ ನಿನಗೇ ಎಲ್ಲಾ ತಿಳಿಯುತ್ತೆ.

ಸೂತ್ರಧಾರ 2: ಸರಿ. ಬಾ! ನೋಡೋಣ, ನಡಿ, ನಡಿ, ಬೇಗ ಹೋಗಿ ಮುಂದಿನ ಸಾಲಿನಲ್ಲಿ ನಿಶ್ಯಬ್ದವಾಗಿ ಕುಳಿತು. ಗಮನವಿಟ್ಟು ನಾಟಕ ನೋಡೋಣ. ನಾಟಕ ನೋಡೋದೆ ಮಜಾ ನಡಿ,ನಡಿ.

                                        ______________

ದೃಶ್ಯ 2

ಬೆಳಗಾಗಿ ನಾನೆದ್ದು ಯಾರ್‌ ಯಾರ ನೆನೆಯಲಿ,

ಎಳ್ಳು ಜೀರಿಗೆ ಬೆಳೆಯೋಳೆ,

ಭೂಮ್ತಾಯಿ ಎದ್ದೊಂದು ಘಳಿಗೆ ನೆನೆದೇನ.

(ತಾಯಿ ಹಾಡು ಹೇಳುತ್ತಾ ರಂಗೋಲಿ ಇಡುತ್ತಿರುತ್ತಾಳೆ ಚಂಡಿನಾಟ ಆಡುತ್ತಾ ಬಂದ ಮಗ ತಲೆ ತಿರುಗಿ ಬೀಳುತ್ತಾನೆ. ತಾಯಿ ಓಡಿ ಹೋಗಿ ಉಪಚರಿಸುತ್ತಾಳೆ)

 ತಾಯಿ: ಅಯ್ಯೋ! ಮಗು ಏನಾಯ್ತೋ? ಏಳೋ, ಎಚ್ಚರ ಮಾಡ್ಕೋ, (ಆಚೀಚೆ ಗಾಬರಿಯಿಂದ ಓಡಾಡುವಳು, ಸಹಾಯಕ್ಕಾಗಿ ಕೂಗುವಳು) ಯಾರಾದ್ರು ಬನ್ರಪ್ಪ, ಸಹಾಯಕ್ಕೆ, ನೀರುನೀರು ತನ್ನಿ ಯಾರಾದ್ರು.

ಜನ 1: (ನೀರಿನೊಂದಿಗೆ ಓಡಿಬರುವನು, ತಾಯಿ ನೀರನ್ನು ತೆಗೆದುಕೊಂಡು ಉಪಚರಿಸುವಳು) ಏನಾಯ್ತಮ್ಮ?

ತಾಯಿ: ಮನೆಯಿಂದ ಈಗ ಹೊರಗೆ ಬಂದ, ನಾನೂ ನೋಡ್ತಾ ಇದ್ದೆ ಹಾಗೆ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟ ಅಣ್ಣ. ಏಳೋ ಕಂದ.  ಏಳೋ..


ಜನ1: ಊಟ ಮಾಡಿದ್ನೋ ಇಲ್ವೋ? ಏನು ತಿಂದಿದ್ದ?

ತಾಯಿ: ಇನ್ನೇನು ತಿನ್ನೋದು ನಮ್ಮಂತೋರು. ಅದೇ ದಿನಾ ತಿನ್ನೋದು, ಅನ್ನ ರಸ. - ರಾಜ ಎಚ್ಚರ ಮಾಡ್ಕೋಳೋ.

ಜನ 2: ಯಾವಾಗ್ಲೂ ಹೀಗಾಗುತ್ತಾ?

ತಾಯಿ: (ಉಪಚಾರ ಮುಂದುವರಿಸುತ್ತ) ಹ್ಞೂಂನಣ್ಣ ಆಗಾಗ ಸ್ಕೂಲ್‌ ನಲ್ಲೂ ಹೀಗೆ ಜ್ಞಾನ ತಪ್ಪಿ ಬೀಳೋನಂತೆ. ಅದಕ್ಕೆ ಸ್ಕೂಲ್‌ಗೂ ಕಳಿಸಿಲ್ಲ.

ಜನ3: ಮತ್ತೆ ಆಸ್ಪತ್ರೆಗೆ ಕರ್ಕೊಂಡು ಹೋಗಲಿಲ್ವೇನಮ್ಮ? ಔಷಧಿ ಕೊಡಿಸಬೇಕಿತ್ತು.

ತಾಯಿ: ಅಬ್ಬಾ. ಎದ್ದ.ಹ್ಞಾಂ ಹಾಗೆ. ಏಳಪ್ಪ. (ಎಚ್ಚರಗೊಳ್ಳುತ್ತಿರುವ ಮಗನನ್ನು ಕೂರಿಸಿ) ಕರಕೊಂಡು ಹೋಗಿದ್ವಿ. ಡಾಕ್ಟರು, ಪೋಷಕಾಂಶದ ಕೊರತೆಯಿದೆ. ಒಳ್ಳೆ ಆಹಾರ ಕೊಡಿ ಅಂದ್ರು. ಏನು ಕೊಡೋದೋ ಏನೋ?

ಜನ3: ಸರಿ ಹಾಗಾದ್ರೆ. ಮಗನಿಗೆ ಎಚ್ಚರ ಆಯ್ತು. ನೀರು ಕುಡಿಸಿ. ಮನೆಗೆ ಕರಕೊಂಡು ಹೋಗಿ ಉಪಚಾರ ಮಾಡಿ ಎಲ್ಲಾ

      ಸರಿಯಾಗುತ್ತೆ. ನಡೀರಪ್ಪ ಎಲ್ಲಾ ನಡೀರಿ.

ಜನ2: ಏನಾದ್ರು ಸಹಾಯ ಬೇಕಾದ್ರೆ ಹೇಳಮ್ಮ.

ತಾಯಿ: ತುಂಬಾ ಉಪಕಾರ ಆಯ್ತು, (ಎಲ್ಲರಿಗೂ ನಮಿಸುವಳು. ಮಗನನ್ನು ಮೆಲ್ಲಗೆ ಕರೆದುಕೊಂಡು ಮನೆಗೆ ಹೋಗುವಳು).

             (ಗುಂಪಿನಲ್ಲೇ ಇದ್ದ ಮಂತ್ರವಾದಿ ಮತ್ತು ನಾಗರಿಕರಿಬ್ಬರು ಅತ್ತಿಂದಿತ್ತ ಠಳಾಯಿಸುವರು.)

ಮಂತ್ರವಾದಿ: ಹೇ! ನನಗೆ ಒಂದು ಕೋಳಿ ನಾಲ್ಕು ಕಾಸು ಕೊಟ್ಟಿದ್ದರೆ, ಯಂತ್ರ ಕಟ್ಟಿಸಿ, ಮಂತ್ರ ಹಾಕಿ ಮಾಯ ಮಾಡುತಿದ್ದೆ ಕಾಯಿಲೆನ. ಡಾಕ್ಟ್ರು ತಾವ ಹೋಯ್ತರಂತೆ, ಅವರು ಆ ಪರೀಕ್ಷೆ ಈ ಪರೀಕ್ಷೆ ಅಂತ ಮಾಡಿ ಹಣ ಕಿತ್ತಕೋತಾರೆ ಅಷ್ಟೆ.

ನಾಗರಿಕ: ಅಯ್ಯೋ! ಇವನು ಯಾವ ಕಾಲದವನು, ಚಂದ್ರನ ಮ್ಯಾಲೆ ನೌಕೆ ಇಳ್ಸಿ, ಸೂರ್ಯಂ ತಾಕೂ ನೌಕೆ ಕಳ್ಸೋ ಕಾಲ ಇದು. ಈ ಕಾಲದಲ್ಲೂ ಮಂತ್ರ ಹಾಕಿ ತಾಯಿತ ಕಟ್ಟಿ ಕಾಯಿಲೆ ವಾಸಿ ಮಾಡ್ತೀನಿ ಅಂತಾನಲ್ಲ. ಆದೀತಾ? ಅಯ್ಯೋ ಮೂಢ.

ಇಷ್ಟಕ್ಕೂ ಆ ಹುಡುಗನಿಗೆ ಅಂತ ಕಾಯಿಲೆ ಏನೂ ಆಗಿಲ್ಲ. “ಊಟ ಬಲ್ಲವನಿಗೆ ರೋಗವಿಲ್ಲ” ಅಂತಾರಲ್ಲ. ಹಾಗೆ ಸಮತೋಲನ ಆಹಾರ ಸೇವಿಸಿ, ಒಳ್ಳೆ ಅಭ್ಯಾಸಗಳನ್ನು ರೂಢಿಸಿಕೊಂಡರೆ ಆರೋಗ್ಯ ನಮ್ಮ ಅಂಗೈಯಲ್ಲೇ ಇರುತ್ತೆ. ನಡೆಯಪ್ಪ ನಡಿ. ಅಯ್ಯೋ.

 

ದೃಶ್ಯ 3

ಕೋsರುಕ್?‌ ಕೋsರುಕ್?‌ ಕೋsರುಕ್?‌ ಕೋsರುಕ್?‌

ಹಿತಭುಕ್‌, ಮಿತಭುಕ್‌, ಕ್ಷುತಭುಕ್‌, ಋತಭುಕ್‌

ಸೋ‌sರುಕ್‌, ಸೋsರುಕ್‌, ಸೋsರುಕ್, ಸೋsರುಕ್.

(ಮಗನ ಜೊತೆ ಪ್ರವೇಶ- ಅಜ್ಜಿ ಮೊರದಲ್ಲಿ ಯಾವುದೋ ಧಾನ್ಯವನ್ನು ಸ್ವಚ್ಛಗೊಳಿಸುತ್ತಾ ಕುಳಿತಿರುತ್ತಾಳೆ. ಮೊಮ್ಮಗನ್ನು ನೋಡಿ ಓಡಿ ಬರುತ್ತಾಳೆ)

ಅಜ್ಜಿ: ಏನಾಯ್ತು ಮಗ? ಯಾಕೆ? ಮತ್ತೆ ಏನಾದ್ರು ಜ್ಞಾನ ತಪ್ಪಿ ಬಿದ್ನಾ?

ತಾಯಿ: ಹ್ಞೂಂನಮ್ಮ ಇಲ್ಲೇ ಮನೆ ಹತ್ರ ಬಿದ್ದುಬಿಟ್ಟ.ನೋಡಿ ಓಡಿ ಹೋದೆ.

ಅಜ್ಜಿ: ಏನು ಹುಡುಗರೋ ಏನೋ. ಇನ್ನೂ ಬೆಳೆಯೋ ವಯಸ್ಸಿನಲ್ಲೇ ಹಿಂಗಾದ್ರೆ ಹೆಂಗೆ? ನಮ್ಮ ಕಾಲದಲ್ಲಿ ನಾವು ರಾಗಿಮುದ್ದೆ, ಜೋಳದ ರೊಟ್ಟಿ, ನವಣೆ ಅನ್ನ, ಸಜ್ಜೆ ರೊಟ್ಟಿ, ಊದಲ ಉಪ್ಪಿಟ್ಟು, ಹಾರಕದ ನುಚ್ಚಿನ ಅಂಬ್ಲಿ ಅಂತೆಲ್ಲಾ ತಿಂತಿದ್ವಿ, ಈಗಿನೋರಿಗೆ ಅದೆಲ್ಲಾ ಗೊತ್ತೇ ಇಲ್ಲ. ಪಾಲಿಶ್‌ ಮಾಡಿದ ಬಿಳಿ ಅಕ್ಕಿ ಅನ್ನ ತಿಂದೂ ತಿಂದೂ ತ್ರಾಣನೇ ಇಲ್ಲ. ಅದೂ ತಿನ್ನೋದು ಇಷ್ಟಿಷ್ಟೇ. ಪಾಕೆಟ್‌ ಫುಡ್‌, ಜಂಕ್‌ ಫುಡ್‌ ಬೇರೆ. ನೀರೂ ಸರಿಯಾಗಿ ಕುಡಿಯಲ್ಲ. ನಮ್ಮ ಅಪ್ಪ ಹೇಳೋರು.  

“ಅಕ್ಕಿಯನು ತಿಂಬುವನು ಹಕ್ಕಿಯಂತಾಗುವನು

ಜೋಳವನು ತಿಂಬುವನು ತೋಳದಂತಾಗುವನು

ರಾಗಿಯನು ತಿಂಬುವನು ನಿರೋಗಿಯಾಗುವನು” ಅಂತ.

(ಹಾಡು ಕೋರಸ್‌ನಲ್ಲಿ)

     ಮತ್ತೆ ನಾವು ರಾಗಿ ಮುದ್ದೆ ತಿಂದು “ಇಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ” (ಕೋರಸ್) ಎಂದು ‌ಹಾಡುತಿದ್ವಿ.

ಹುಡುಗ: ಹೌದಾ ಅಜ್ಜಿ ಹೇಳಜ್ಜಿ ಕೇಳಕ್ಕೆ ಚನ್ನಾಗಿದೆ. ನಾನು ಏನು ತಿನ್ನಬೇಕು. ಏನು ತಿಂದ್ರೆ ಆರೋಗ್ಯಕ್ಕೆ ಒಳ್ಳೇದು ಹೇಳಜ್ಜಿ.

       ನನಗೂ ಪ್ರಜ್ಞೆ ತಪ್ಪಿ ಬೀಳೋದು ಬೇಜಾರು. ಶಾಲೆಗೆ ಹೋಗಬೇಕು ನಾನು. ನೀನು ಎಷ್ಟೊಂದು ಕತೆ ಹೇಳ್ತೀಯ.   

       ಆಹಾರದ ಬಗ್ಗೆನೂ ಏನಾದ್ರು ಕತೆ ಇದ್ದರೆ ಹೇಳಜ್ಜಿ. ನನಗೆ ತುಂಬಾ ಇಷ್ಟ.

ತಾಯಿ: ಆಹಾರ-ಆರೋಗ್ಯದ ಬಗ್ಗೆ ಇದ್ದರೆ ತಿಳ್ಕೊಂಡಂಗೂ ಆಗುತ್ತೆ. ಹೇಳಿ ಅತ್ತೆ, ಕತೆ ಇದ್ಯಾ?

ಅಜ್ಜಿ: ಆಹಾರದ ಬಗ್ಗೆ ಕತೆ. ಯಾಕಿಲ್ಲ. ಇದೆ. ಕನಕದಾಸರು ಈ ಆಹಾರ ಧಾನ್ಯಗಳ ಬಗ್ಗೆನೇ ಒಂದು ಕತೆ ಬರೆದಿದ್ದಾರೆ. “ರಾಮಧಾನ್ಯ ಚರಿತೆ” (ಕೋರಸ್‌ ನಲ್ಲಿ 2-3ಬಾರಿ) ಅಂತ. ಈ ಕತೇಲಿ, ಅಕ್ಕಿಗೂ ರಾಗಿಗೂ ಜಗಳ ಹತ್ಕೋಳತ್ತೆ, ನಾನೇ ಮೇಲೂ ಅಂತ ಅಕ್ಕಿ, ಇಲ್ಲ ನಾನು ಮೇಲು ಅಂತ ರಾಗಿ, (ಅಕ್ಕಿ, ರಾಗಿ ಜಗಳ ಪ್ರದರ್ಶನ)

ಅಕ್ಕಿ: ನಾನು ನೋಡು ಎಷ್ಟು ಬಿಳಿ. ಬೆಣ್ಣೆ ತರ, ನೀನು ಕರಿ ಮುಸುಡಿ ಕೋತಿ

ರಾಗಿ: ಆಕಳು ಕಪ್ಪಾದರೆ ಹಾಲು ಕಪ್ಪೆ? ಗಟ್ಟಿ ಮುಟ್ಟಾಗಿರಬೇಕಂದ್ರೆ ನನ್ನನ್ನೇ ತಿನ್ನಬೇಕು.

ಅಕ್ಕಿ: ಎಲ್ಲಾ ಮಂಗಳ ಕಾರ್ಯಗಳಲ್ಲೂ ನಾನೇ ಬೇಕು ಅಕ್ಷತೆಗೆ.

ರಾಗಿ: ಆದರೆ ಏನು ನೀನು ದುಬಾರಿ, ಕೈಗೆ ಸಿಗದ ಸೊಕ್ಕು, ನಾನು ಬಡವರ ಬಂಧು

ಅಕ್ಕಿ: ನನಗಿರೋ ಆಹಾರವೈವಿಧ್ಯ ನಿನಗಿಲ್ಲ.

ರಾಗಿ: ನಿನ್ನ ತಿಂದರೆ ರೋಗ, ನಾನು ಆರೋಗ್ಯದ ಸಿರಿ ಧಾನ್ಯ. (ಹಾಡು ಕೋರಸ್)‌ “ಸಿರಿ ಧಾನ್ಯ” ಕೋರಸ್ನಲ್ಲಿ.

ಅಜ್ಜಿ: ಹೀಗೆ ಜಗಳ ಆಡ್ತಾ ಅವು ರಾಮನ ಬಳಿಗೆ ಹೋದವು ಅವನೇ ತೀರ್ಮಾನ ಕೊಟ್ಟ. ಇದೇ ರೀತಿ ಈಗ ಅಕ್ಕಿ,ಗೋಧಿ ಮತ್ತು ಸಿರಿಧಾನ್ಯಗಳ ನಡುವೆ ಸ್ಪರ್ಧೆ ಉಂಟಾಗಿದೆ. ಅವು ಹೀಗೆ………ಜಗಳ ಆಡತಿರಬಹುದು.

 

ದೃಶ್ಯ-04

(ಅಕ್ಕಿ, ಗೋಧಿ ಒಂದು ಬಣ, ಇನ್ನುಳಿದ ಸಿರಿಧಾನ್ಯಗಳು ಒಂದು ಬಣವಾಗಿ ವಾಗ್ವಾದ ಮಾಡುತ್ತಾ ಚೂರು ಚೂರು ಕೈ ಕೈ ಮಿಲಾಯಿಸೋ ಮಟ್ಟಕ್ಕೆ ಹೋಗುತ್ತವೆ.)

 (ಘೋಷಣೆ: ಆಹಾರ ಧಾನ್ಯಗಳ ರಾಜ, ಪ್ರಪಂಚದಾದ್ಯಂತ ಬೆಳೆವ ಕೃಷಿ ಬೆಳೆಗಳಲ್ಲಿ ಉನ್ನತ ಸ್ಥಾನದಲ್ಲಿರೋ

            ಭೂಪ ಅಕ್ಕಿಯವರು ತಮ್ಮ ಮಿತ್ರ ಗೋಧಿ ಜೊತೆ ಬರುತ್ತಿದ್ದಾರೆ)

ಅಕ್ಕಿ: ಮಿತ್ರ, ನೋಡಿದೆಯಾ ನಮ್ಮ ಮೇಲೆ ಜನ ಹೇಗೆ ಅವಲಂಬಿತರಾಗಿದ್ದಾರೆ, ನಮ್ಮನ್ನೇ ಹೆಚ್ಚು ಹೆಚ್ಚು ಬೆಳೆದು  

     ಉಪಯೋಗಿಸುತ್ತಿದ್ದಾರೆ. ನಾವಿಲ್ಲದೆ ಇವರ್ಯಾರೂ ಇಲ್ಲ.

ಗೋಧಿ: ಹೌದು ಹೌದು. ಜನರಿಗೆ ಶಕ್ತಿ ನೀಡೋ ಕಾರ್ಬೋಹೈಡ್ರೇಟ್‌ಗಳನ್ನು ಕೊಡೋರು ನಾವಲ್ಲದೆ ಮತ್ಯಾರು? ಹಹಹ್ಹಹ.

(ಸಿರಿಧಾನ್ಯಗಳು ಒಟ್ಟಾಗಿ ಪ್ರವೇಶ- ರಾಗಿ, ಸಜ್ಜೆ, ನವಣೆ, ಬಿಳಿಜೋಳ. ಸ್ವಲ್ಪ ದೂರದಲ್ಲೇ ನಿಂತು ಪರಸ್ಪರ ಸಂಭಾಷಣೆ)

ಹಾರಕ: ನೋಡಿದ್ರಾ ಗೆಳೆಯರೆ, ಅಕ್ಕಿ,ಗೋಧಿ ಗೆ ಎಂಥಾ ಬಹುಪರಾಕು, ನಮ್ಮನ್ನ ಕೇಳೋರೇ ಇಲ್ಲ.

ಸಾಮೆ: ನಮ್ಮ ಬೆಲೆ ಇವರಿಗೆ ಗೊತ್ತಿಲ್ಲ.

ನವಣೆ: ನಮ್ಮ ಪರಿಚಯ ಕೂಡ ಇದೆಯೋ ಇಲ್ವೋ ಅನುಮಾನ

ಸಾಮೆ: ನಮಗೂ ಒಂದು ಕಾಲ ಬರುತ್ತೆ. ಯೋಚನೆ ಮಾಡಬೇಡಿ.

ಅಕ್ಕಿ: ಓಹೋ ಬರಬೇಕು, ಬರಬೇಕು, ಒರಟು ಮೈಯ ಕಿರುಧಾನ್ಯಗಳು.(ಕೋರಸ್-ಅಣಕ)

ಹಾರಕ: ನಾವು ಒರಟು ಸರಿ, ನೀವು ಭಾರಿ ನೀರು ಕುಡಿದು ಬೆಳೆವ ದುಂದುಗಾರರು. ನಾವು ಕಡಿಮೆ ನೀರಿನಲ್ಲೂ ಬೆಳೆದು ಬಡವರ ಹೊಟ್ಟೆ ತುಂಬಿಸುವವರು.

ಗೋಧಿ: ಯಾರು ಮೂಸುತ್ತಾರೆ ನಿಮ್ಮನ್ನು, ರೋಟಿ, ಚಪಾತಿ, ಪರಾಟ, ಪಲಾವ್‌, ರೈಸ್ಬಾತ್ ಗಳು ನಮ್ಮಿಂದ.

ಸಾಮೆ: ಭಾರತ ಇಂದು ಮಧುಮೇಹದ ರಾಜಧಾನಿ ಯಾಗಿರುವಾಗ, ನಿಮ್ಮ ಸೇವನೆಯಿಂದ ಸುಖವಿಲ್ಲ. ನಾವು ಬೇಕು. ಆರೋಗ್ಯಕ್ಕೆ. ಮರೆತು ಹೋಗಿದ್ದ ನಮ್ಮನ್ನು ಜನ ಕೈಹಿಡಿದು ಕರೆದೊಯ್ದು ಬಳಸುತ್ತಿದ್ದಾರೆ.

ಅಕ್ಕಿ: ನಮ್ಮಿಂದ ತಯಾರಿಸಬಹುದಾದ ಖಾದ್ಯಗಳಿಗೆ ಲೆಕ್ಕವಿಲ್ಲ. ನೀವು ನಮಗೆ ಸಮ ಆಗಲಾರಿರಿ.

ನವಣೆ: ಇಲ್ಲ. ನಮ್ಮನ್ನು ಸಿರಿಧಾನ್ಯಗಳೆಂದು ಗೌರವಿಸುತ್ತಿದ್ದಾರೆ. ನಾವು ನಿಧಾನವಾಗಿ ಜೀರ್ಣವಾಗುವುದರಿಂದ ರಕ್ತಕ್ಕೆ ಸಕ್ಕರೆಯನ್ನು ನಿಮ್ಮಷ್ಟು ಬೇಗ ಸೇರಿಸುವುದಿಲ್ಲ

ಹಾರಕ: (Glycemic Index 71ನಿಮ್ಮದು, ನಮ್ಮದು ಬರೀ60). ಹಾಗಾಗಿ, ಮಧುಮೇಹಿಗಳಿಗೆ (ಡಯಾಬಿಟೀಸ್) ನಾವು‌ ಉತ್ತಮ ಆಯ್ಕೆ.

ಗೋಧಿ: ಅದೇ ರೋಗಿಗಳಷ್ಟೆ ತಿನ್ನಬೇಕು ನಿಮ್ಮನ್ನು.

ಹಾರಕ: ಹಾಗೇನಿಲ್ಲ.ನಮ್ಮಲ್ಲಿ ನಾರಿನಂಶ ಹೆಚ್ಚು(ಪ್ರತಿದಿನ ಬೇಕಾದ ನಾರಿನಂಶದ 36% ನಾವೇ ಕೊಡುತ್ತೇವೆ) ಹಾಗಾಗಿ ಕರುಳಿನ ಸ್ವಚ್ಛತೆಗೆ ಅದರ ಆರೋಗ್ಯಕ್ಕೂ ನಾವೇ ಸಹಾಯಕರು. ಎಲ್ಲರಿಗೂ ನಾವು ಬೇಕು.

ಸಾಮೆ: ನಮ್ಮಲ್ಲಿ ಸಾಕಷ್ಟು ಕೊಬ್ಬಿನಂಶವೂ ಇದೆ(4ಗ್ರಾಂ), ಪ್ರೊಟೀನ್(1ಗ್ರಾಂ ಪ್ರತಿ 100ಗ್ರಾಂಗೆ) ಖನಿಜಾಂಶಗಳು ಅಧಿಕ

ನವಣೆ: ಪೊಟ್ಯಾಷಿಯಂ, ಕ್ಯಾಲ್ಷಿಯಂ, ಐರನ್‌, ಜಿಂಕ್‌, ಮೆಗ್ನೀಷಿಯಂ ಮುಂತಾದ ಖನಿಜಾಂಶಗಳು ಅಗತ್ಯಕ್ಕಿಂತ ಹೆಚ್ಚೇ ಇದೆ.

ಹಾರಕ: ಶಕ್ತಿಯನ್ನು ಒದಗಿಸುವುದರಲ್ಲೂ ನಾವು ಹಿಂದೆ ಬಿದ್ದಿಲ್ಲ. ನಿಮಗಿಂತ 3 ಪಟ್ಟು ಅಧಿಕ ಶಕ್ತಿ ಒದಗಿಸುತ್ತೇವೆ.

ಸಾಮೆ: ಒಟ್ಟಾರೆ ಜೀರ್ಣಕ್ರಿಯೆಗೆ, ಕರುಳಿನಲ್ಲಿ ಆಹಾರ ಆರೋಗ್ಯಕರವಾಗಿ ಚಲಿಸುವಲ್ಲಿ. ತೂಕ ನಿಯಂತ್ರಣದಲ್ಲಿ, ಮಧುಮೇಹ ನಿಯಂತ್ರಣದಲ್ಲಿ ನಾವು ಭಾರಿ ಪ್ರಯೋಜನಕ್ಕೆ ಬರತೀವಿ.

ಅಕ್ಕಿ: ಎಷ್ಟೇ ಆದರೂ ನೀವು “ಬಡವರ ಆಹಾರ” ಎಂದು ಉಪೇಕ್ಷೆಗೆ ಒಳಗಾದವರೇ. ಹಹಹ್ಹಹಾ.

ಹಾರಕ: ಈಗ ಹಾಗೇನಿಲ್ಲ. ಸುಂದರವಾಗಿ ಆರೋಗ್ಯಪೂರ್ಣವಾಗಿ ಇರಬೇಕೆನ್ನುವ ಎಲ್ಲರಿಗೂ ನಾವು ಆಪ್ತರು,

ಗೋಧಿ: ಆಗಲಿ ನಮ್ಮ ನಮ್ಮಲ್ಲಿ ವಾದ-ವಿವಾದ ಜಗಳ ಬೇಡ. ನಮ್ಮ ಗುಣ-ಅವಗುಣಗಳನ್ನು ನಮಗಿಂತ ಚನ್ನಾಗಿ ಬಲ್ಲವರು ಆಹಾರ ತಜ್ಞರು (ಡಯಟೀಷಿಯನ್ ಗಳು) ಬನ್ನಿ ಅವರ ಬಳಿಗೆ ಹೋಗಿ ನಮ್ಮ ಮೌಲ್ಯ ನಿರ್ಣಯ ಮಾಡಿಕೊಳ್ಳೋಣ.

 

                                        ದೃಶ್ಯ 05

ಬರದಲ್ಲೂ ಬೆಳೆಯುವೆವು, ಬರಡಲ್ಲೂ ಮೊಳೆಯುವೆವು.

ಪರಿಸರಕೆ ಪೂರಕರು, ಆರೋಗ್ಯದ ರಕ್ಷಕರು.

(ಡಯಟಿಷಿಯನ್‌ ಬಳಿಗೆ ಎಲ್ಲರೂ ಬರುವರು. ಡಯಟೀಷಿಯನ್‌ ಕುಳಿತಿರುತ್ತಾರೆ. ಆಹಾರ ಧಾನ್ಯಗಳು ಅವರ ಎಡ ಬಲಗಳಲ್ಲಿ ಎರಡು ಗುಂಪುಗಳಲ್ಲಿ ನಿಂತು ತೀರ್ಮಾನ ಕೇಳುತ್ತವೆ)

ಅಕ್ಕಿ: ಮಾನ್ಯ ಆಹಾರ ತಜ್ಞರೇ ಅಕ್ಕಿ ಗೋಧಿಗಳಾದ ನಾವು ಸಕಲರೂ ಬಳಸುವ ಆಹಾರ ಧಾನ್ಯಗಳು ನಾವೇ ಮೇಲೆಂದು ನಮ್ಮ ವಿಶ್ವಾಸ,

ಗೋಧಿ: ನಿಮ್ಮ ತೀರ್ಮಾನ ಕೇಳಲು ಬಂದಿದ್ದೇವೆ. ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ ನಮ್ಮ ಜಗಳ ಬಗೆಹರಿಸಿ.

ರಾಗಿ: ಇಲ್ಲ, ತಮಗೆ ತಿಳಿದಂತೆ ನಮ್ಮ ಮೌಲ್ಯ ಈಗ ಎಲ್ಲರಿಗೂ ತಿಳಿದಿದೆ.

ಸಜ್ಜೆ: ನಮಗೆ ಸಿರಿಧಾನ್ಯವೆಂಬ ಗೌರವ ದಕ್ಕಿದೆ.

ನವಣೆ: ಸರ್ಕಾರ ನಮ್ಮ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಂಡಿದೆ, ನಾವು ಕೀಳಾಗಿದ್ದಿದ್ದರೆ, ಹೀಗೆಲ್ಲಾ ಮಾಡುತ್ತಿದ್ದರೆ. ನೀವು ಸರಿಯಾದ ನಿರ್ಣಯಕೊಡಿ. ದಯವಿಟ್ಟು.

ಆಹಾರತಜ್ಞೆ: ನಿಮ್ಮೆಲ್ಲರ ಮಾತುಗಳೂ ನಿಜ. ಪ್ರಧಾನಮಂತ್ರಿಯವರೇ ತಮ್ಮ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳನ್ನು ಹೊಗಳಿದ್ದಾರೆ. ರೈತರು ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚು ಬೆಳೆಯಬೇಕೆಂದು ಪ್ರೋತ್ಸಾಹಿಸಿದ್ದಾರೆ. ಅದಕ್ಕಾಗಿ ಪ್ರಚಾರ ನೀಡಲು ಈ ಬಾರಿಯ ಜಿ20 ಶೃಂಗಸಭೆಯ ವಿದೇಶೀ ಗಣ್ಯರಿಗೆ ಸಿರಿಧಾನ್ಯಗಳಿಂದ ಮಾಡಿದ ಖಾದ್ಯಗಳನ್ನು ಉಣಬಡಿಸಿದ್ದೇವೆ. Millet: Super food ಎಂದೇ ಪ್ರಸಿದ್ಧವಾಗಿದೆ. ಸಿರಿಧಾನ್ಯಗಳಿಂದ ವಿವಿಧ ಖಾದ್ಯಗಳನ್ನೂ ಮಾಡಬಹುದು. ಬಿಸ್ಕತ್‌, ಕೇಕ್‌, ಡೋಕ್ಲಾ, ಉಪಮಾ, ಇತ್ಯಾದಿ(ತಿಂಡಿ ಪೊಟ್ಟಣ ಪ್ರದರ್ಶಿಸುವುದು) ಹಾಗೆ ಅಕ್ಕಿ, ಗೋಧಿಗಳಿಗೂ ಅದರದೇ ಸ್ಥಾನವಿದೆ. ಸಿರಿಧಾನ್ಯಗಳು ಉತ್ತಮವೇ ಆದರೂ ಕೇವಲ ಅವುಗಳನ್ನೇ ಸೇವಿಸಲು ಆಗುವುದಿಲ್ಲ, ಕೆಲವೊಂದು ಸಮಸ್ಯೆಗಳಿವೆ.

ಸಿರಿಧಾನ್ಯಗಳು: ಏನು? ನಮ್ಮಲ್ಲಿ ಸಮಸ್ಯೆಯೇ? ಏನದು?

ಅಕ್ಕಿ ಗೋಧಿ: ಹ್ಞಾಂ. ಕೇಳಿ, ಕೇಳಿ.

ಆಹಾರತಜ್ಞೆ: ಸಿರಿಧಾನ್ಯಗಳಲ್ಲಿ ಥೈರಾಯ್ಡ್‌ ಗ್ರಂಥಿಯ ಕೆಲಸದಲ್ಲಿ ತಡೆಯುಂಟುಮಾಡುವ ರಾಸಾಯನಿಕಗಳಿರುತ್ತವೆ. ಅಂತಹವರಿಗೆ ಇವು ಸೂಕ್ತವಲ್ಲ.

ಹಾರಕ: ವಾರಕ್ಕೆ ಮೂರು ಬಾರಿ ಬಳಸಿದರೆ ತೊಂದರೆ ಇಲ್ಲ ತಾನೆ.

ಆಹಾರ ತಜ್ಞೆ: ಹೌದು. ಸರಿ. ನಾರು ಪದಾರ್ಥ ಹೆಚ್ಚು ಇರುವುದರಿಂದ ಜೀರ್ಣವಾಗುವುದು ನಿಧಾನವಾಗುವುದರಿಂದ 

ಅಕ್ಕಿ ಗೋಧಿ: ಕರುಳಿನ ಸಮಸ್ಯೆ ಇರುವವರೂ ಇವನ್ನು ಹೆಚ್ಚಾಗಿ ತಿನ್ನಬಾರದು. ಅಲ್ಲವೆ?

ಆಹಾರ ತಜ್ಞೆ: ಹೌದು,ಸಿರಿಧಾನ್ಯಗಳಲ್ಲಿ ಅಮೈನೋ ಆಮ್ಲಗಳು ಅಧಿಕವಾಗಿರುತ್ತವೆ. ಹೆಚ್ಚಿನ ಅಮೈನೋ ಆಮ್ಲಗಳು ನಮ್ಮ ದೇಹಕ್ಕೆ  ಒಳ್ಳೆಯದಲ್ಲ. ಅಧಿಕವಾದರೆ ಅಮೃತವೂ ವಿಷವಾಗುತ್ತದೆ ಅನ್ನೋ ಮಾತೇ ಇದೆಯಲ್ಲಾ.   

        “ಅಧಿಕಂ ಸರ್ವತ್ರ ವರ್ಜಯೇತ್”‌ ಯಾವುದನ್ನೂ ಅತೀ ಮಾಡದೆ ಮಿತವಾಗಿ ಅಕ್ಕಿ,ಗೋಧಿ, ಸಿರಿಧಾನ್ಯ ಎಲ್ಲವನ್ನು  ಸೇವಿಸಿ. ಸುಖವಾಗಿ ಆರೋಗ್ಯವಾಗಿರಿ ಎಲ್ಲರೂ. ಎಲ್ಲಿ ಕೈ ಕೈ ಹಿಡಿದು ಹಾಡಿ, ನಾವೆಲ್ಲಾ ಮಿತ್ರರೆಂದು.

(ವೃತ್ತಾಕಾರದಲ್ಲಿ ಸುತ್ತುತ್ತಾ ಹಾಡು) ನಾವು ಬೆಳೆಗಳು ನಾವು ಗೆಳೆಯರು, ಮೇಲು ಕೀಳು ಏನಿಲ್ಲ.

             ಎಲ್ಲ ಸೇರಿ ಒಳಿತು ಮಾಡುವ ಅಹಂಕಾರವು ಬೇಕಿಲ್ಲ.

                                        **************

                                  

 

 

ದೃಶ್ಯ-6

(Millet Man of India ಡಾ|| ಖಾದರ್‌ ವಲಿ ಅವರೊಂದಿಗೆ ದೂರದರ್ಶನದಲ್ಲಿ ಸಂದರ್ಶನ. ಅಜ್ಜಿಮನೆ.)

ಅಜ್ಜಿ: ನೋಡಿದೆಯಾ ಮುರುಗೇಶ, ಅಕ್ಕಿ ಗೋಧಿ ಮತ್ತು ಸಿರಿಧಾನ್ಯಗಳ ನಡುವಿನ ವಾದ-ವಿವಾದ. ಹಾಗೇ ಆಹಾರತಜ್ಞರ ತೀರ್ಮಾನಾನೂ ಕೇಳಿದೆಯಲ್ಲಾ?

ಮುರುಗೇಶ: ನೋಡಿದೆ ಅಜ್ಜಿ, ಎಷ್ಟೊಂದು ವಿಷಯ ಗೊತ್ತಾಯ್ತು, ಸಿರಿಧಾನ್ಯಗಳ ಬಗ್ಗೆ ತಿಳಿಯಿತು.

ಅಜ್ಜಿ: ಏನು ತಿಂದ್ರೆ ಒಳ್ಳೇದು ಆರೋಗ್ಯಕ್ಕೆ ಅಂತ ಕೇಳಿದ್ಯಲ್ಲಾ? ಸಿರಿಧಾನ್ಯಗಳನ್ನು ಕ್ರಮಬದ್ಧವಾಗಿ ತಿಂದರೆ ಆಯ್ತು. ಅಷ್ಟೇ.

ಅಮ್ಮ: ಹೌದು ಅತ್ತೆ. ಸಿರಿಧಾನ್ಯಗಳಿಂದ ಅಡುಗೆ ಮಾಡಿ ಕೊಡ್ತೀನಿ ಮುರುಗೇಶನಿಗೆ. ಅವನ ಆರೋಗ್ಯ ಸುಧಾರಿಸುತ್ತೆ.

ಅಜ್ಜಿ: ಸರಿ ಕಣಮ್ಮ. ಹಾಗೆ ಮಾಡು.. ನಾವು ಚಿಕ್ಕೋರಿದ್ದಾಗ ಭಯಂಕರ ಬರಗಾಲ ಬಂದಿತ್ತು. ಆಗ ಬಡವ, ಶ್ರೀಮಂತ ಎನ್ನದೆ  

     ಎಲ್ಲರ ಜೀವ ಉಳಿಸಿದ್ದು ಈ ಧಾನ್ಯಗಳೇ. ಅವು ಸಿರಿಧಾನ್ಯಗಳೇ ಸರಿ.

ಅಮ್ಮ: ಅತ್ತೆ. ಶುಕ್ರವಾರ 12ಗಂಟೆಗೆ ಸಿರಿಧಾನ್ಯಗಳ ಬಗ್ಗೆನೇ ಯಾರೋ ಮಾತಾಡ್ತರಂತೆ ಟಿವಿ ಲಿ . ಹಾಗಂತ ಒಂದು ವಾರದಿಂದ ತೋರಿಸ್ತಾನೆ ಇದ್ದಾರೆ.

ಅಜ್ಜಿ: ಇವತ್ತು ಶುಕ್ರವಾರ ತಾನೆ. ಟೈಮ್‌ ಎಷ್ಟಾಯ್ತು ನೋಡು ಮತ್ತೆ.

ಮುರುಗೇಶ: 11.50 ಅಜ್ಜಿ. ಟಿ.ವಿ. ಹಾಕಲಾ ಹಾಗಾದರೆ?

ಅಮ್ಮ: ಹಾಕು. ಹಾಗೆ ಪಕ್ಕದ ಮನೆ ಪದ್ದಮ್ಮನ್ನೂ ಕರಿ. ನೋಡಬೇಕು ಅಂತಿದ್ಲು.

ಪದ್ದಮ್ಮ: ಇಗೋ ನೆನೆದವರ ಮನದಲ್ಲಿ ಅಂತ ನಾನೇ ಬಂದೆ.

ಅಜ್ಜಿ: ಅಮ್ಮ: ಬಾ. ಬಾ. ಕೂತ್ಕೋ, ಟಿ.ವಿ. ನೋಡೋಣ.

(ಮುರುಗೇಶ ಟಿ.ವಿ. ಹಾಕುವನು) 

ಟಿ.ವಿ.ಯಲ್ಲಿ ಸಂದರ್ಶನ.

ಸಂದರ್ಶಕಿ: ವೀಕ್ಷಕರೆ, ನಮಸ್ಕಾರ, “ಸಿರಿಧಾನ್ಯ-ಅದ್ಭುತ ಆಹಾರ” ಕಾರ್ಯಕ್ರಮಕ್ಕೆ ಸ್ವಾಗತ.

         ಇಂದು ನಮ್ಮೊಂದಿಗೆ, ಕಾಡುಕೃಷಿ ಪ್ರವರ್ತಕರಾದ, ಮಿಲೆಟ್‌ ಮ್ಯಾನ್‌ ಆಫ್‌ ಇಂಡಿಯಾ ಎಂದೇ ಪ್ರಸಿದ್ಧರಾದ, 25 ಕ್ಕೂ ಹೆಚ್ಚಿಗೆ ವರ್ಷಗಳಿಂದ ಸಿರಿಧಾನ್ಯಗಳ ಬಗ್ಗೆ ಆಂದೋಲನವನ್ನೇ ಮಾಡುತ್ತಿರುವ. ದೇಶ ಸೇವೆಗಾಗಿ ಅಮೆರಿಕಾದ ಉದ್ಯೋಗ ಬಿಟ್ಟು ನಮ್ಮ ದೇಶಕ್ಕೇ ಮರಳಿ ಬಂದು ಸರ್ವೇ ಜನಾಃ ಸುಖಿನೋ ಭವಂತು ಎಂದು ಆರೋಗ್ಯಕರ ಸಮಾಜಕ್ಕಾಗಿ ದುಡಿಯುತ್ತಿರುವ. ತಮ್ಮ ಈ ಎಲ್ಲಾ ಕಾರಣಗಳಿಗಾಗಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ|| ಖಾದರ್‌ ವಲಿ ಯವರು ಇದ್ದಾರೆ. ಎಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರೀತಿಯಿಂದ ಸ್ವಾಗತಿಸೋಣ.

        “ ನಮಸ್ತೆ ಸರ್‌, ಕಾರ್ಯಕ್ರಮಕ್ಕೆ ಸ್ವಾಗತ.

                                                              ಡಾ|| ಖಾದರ್‌ ವಲಿ: ತುಂಬಾ ಸಂತೋಷ, ನಮಸ್ತೆ.

ಸಂದರ್ಶಕಿ: ಸರ್‌, ಇತ್ತೀಚೆಗೆ ಜನ, ಸಿರಿಧಾನ್ಯಗಳ ಕಡೆ ಮುಖ ಮಾಡ್ತಿದ್ದಾರೆ, ಆದರೂ ಅವರಿಗೆ ತುಂಬಾ ಅನುಮಾನಗಳಿವೆ.

          ಹಾಗಾಗಿ, ಈ ಸಿರಿಧಾನ್ಯಗಳೆಂದರೆ ಯಾವುವು. ದಯವಿಟ್ಟು ತಿಳಿಸಿ ಕೊಡಿ ಸರ್.‌

ಡಾ|| ಖಾದರ್‌ ವಲಿ: ಒಳ್ಳೆ ಪ್ರಶ್ನೆ ಕೇಳಿದ್ದೀಯಮ್ಮ. ಜನ ಸಾಮಾನ್ಯವಾಗಿ ಅಕ್ಕಿ ಗೋಧಿ, ಜೋಳ ಬಿಟ್ಟು ಮಿಕ್ಕ ಎಲ್ಲ ಮಿಲೆಟ್ ಗಳನ್ನು ಸಿರಿಧಾನ್ಯಗಳು ಅಂದು ಬಿಡುತ್ತಾರೆ. ಆದರೆ ಮುಖ್ಯವಾಗಿ 5 ಮಿಲೆಟ್ ಗಳು ಮಾತ್ರ ಸಿರಿಧಾನ್ಯಗಳು ಇವು ಹುಲ್ಲಿನ ಜಾತಿಗೆ ಸೇರಿದ ಸಸ್ಯಗಳು ಅವು 1. ಹಾರಕ 2.ಸಾಮೆ 3. ಕೊರಲೆ 4. ಊದಲು ಮತ್ತು 5. ನವಣೆ. ಇವುಗಳನ್ನು ಪಂಚರತ್ನಗಳು ಅಂತೀನಿ ನಾನು. Infact ಸಿರಿಧಾನ್ಯಗಳು ಅಂತ ಹೆಸರಿಟ್ಟವನೂ ನಾನೇ.

ಸಂದರ್ಶಕಿ: ಓ! ಹೌದಾ? ತುಂಬಾ ಸಂತೋಷ ಸರ್.‌ ಇವುಗಳನ್ನು ಯಾರು? ಯಾವಾಗ? ಎಷ್ಟು ಸೇವಿಸಬೇಕು ತಿಳಿಸಿ ಸರ್.‌

ಡಾ|| ಖಾದರ್‌ ವಲಿ: ಇವುಗಳನ್ನು ಯಾರು ಬೇಕಾದರೂ ಅಂದರೆ ಮಕ್ಕಳು, ವಯಸ್ಕರು, ಹೆಂಗಸರು, ಮುದುಕರು ಯಾರುಬೇಕಾದರೂ ತಿನ್ನಬಹುದು. ಯಾವ ಕಾಲದಲ್ಲಿ ಬೇಕಾದರೂ ಅಂದರೆ, ಚಳಿಗಾಲ, ಮಳೆಗಾಲ,ಬೇಸಿಗೆ ಕಾಲ ಹೀಗೆ ಯಾವ ಕಾಲದಲ್ಲಿ ಬೇಕಾದರೂ ತಿನ್ನಬಹುದು. ಆದರೆ ಒಂದೇ ಧಾನ್ಯವನ್ನು ಸತತವಾಗಿ ತಿನ್ನಬಾರದು ಅಷ್ಟೇ.

ಸಂದರ್ಶಕಿ: ಹಾಗಾದರೆ ಎರಡುದಿನ ಹಾರಕ, ಎರಡುದಿನ ಸಾಮೆ, ಮತ್ತೆ ಎರಡು ದಿನ ಊದಲು, ಆಮೇಲೆ ಒಂದು ದಿನ ನವಣೆ ಈ ರೀತಿ ಆವರ್ತನೆ ಮಾಡಿಕೊಂಡು ತಿನ್ನಬೇಕು ಅಂತೀರ ಸರ್.‌

ಡಾ|| ಹೌದು, ಸರಿಯಾಗಿ ಹೇಳಿದೆಯಮ್ಮ.

ಸಂದರ್ಶಕಿ: ಸರ್‌, ಇತ್ತೀಚೆಗೆ ಒಂದು ವರದಿ ನೋಡಿದೆ. ಹಾರಕ ತಿಂದು ಆರೋಗ್ಯ ಕೆಟ್ಟಿತು ಅಂತ. ಮತ್ತೆ ಥೈರಾಯ್ಡ್‌ ಗ್ರಂಥಿ ಸಮಸ್ಯೆ ಇರೋರು ಇದನ್ನು ತಿನ್ನಬಾರದು, ಕರಳು ಸಮಸ್ಯೆ ಇರೋರಿಗೆ ಇದು ಒಳ್ಳೆದಲ್ಲಾ. ಇವು ಉಷ್ಣ, ದೇಹದ ನೀರನ್ನೆಲ್ಲಾ ಹೀರುತ್ತವೆ ಅಂತೆಲ್ಲಾ ಅನುಮಾನ ಗೊಂದಲಗಳಿವೆ. ಮಿಲೆಟ್‌  ಮ್ಯಾನ್‌ ಆಫ್‌ ಇಂಡಿಯಾ ಆದ ನೀವೆ ಇವಕ್ಕೆಲ್ಲಾ ಸರಿಯಾದ ಉತ್ತರ ಕೊಟ್ಟು ಜನರ ಗೊಂದಲ ಪರಿಹಾರ ಮಾಡಬೇಕು ಸರ್.‌

ಡಾ|| ಹಾಗೆ ಆಗಲಮ್ಮ. ಸಿರಿಧಾನ್ಯಗಳನ್ನು ಸೇವಿಸುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದು ಸಾಧ್ಯವೇ ಇಲ್ಲ. ನಿಜ ಹೇಳಬೇಕೆಂದರೆ ಇವುಗಳ ನಿಯಮಿತ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತೆ. ಹಾರಕ-ರಕ್ತದ ಉತ್ಪತ್ತಿ ಮತ್ತ್ ಶುದ್ಧತೆಯನ್ನು ಹೆಚ್ಚಿಸುತ್ತೆ. ಸಾಮೆ- ಜನನಾಂಗಗಳ ಆರೋಗ್ಯಕ್ಕೆ ಸಹಕಾರಿ, ಕೊರಲೆ- ಪಚನಾಂಗ infact  ಇಡೀ ಅಗಾಂಗಗಳನ್ನು ಆರೋಗ್ಯವಾಗಿ ಇಡುತ್ತೆ. ನವಣೆ ನರನಾಡಿಗಳನ್ನು ಚುರುಕುಗೊಳಿಸುತ್ತೆ. ಆದರೆ ಅವುಗಳನ್ನು ಸರಿಯಾದ ಚೀಲಗಳಲ್ಲಿ, ಫಂಗಸ್‌ ಬೆಳೆಯದಂತೆ ಸಂಗ್ರಹಿಸಿಟ್ಟು ಬಳಸಬೇಕು. ಇಲ್ಲದಿದ್ದರೆ ಯಾವುದೇ ಧಾನ್ಯವೂ ಸಮಸ್ಯೆ ಕೊಡುತ್ತೆ.

ಸಂದರ್ಶಕಿ: ಹಾಗಾದರೆ ಇವನ್ನಲ್ಲಾ ಒಟ್ಟಿಗೆ ಸೇರಿಸಿ Multi millet food ಅಂತ ಬಳಸಿದರೆ ತುಂಬಾ ಒಳ್ಳೆಯದಲ್ವಾ?

ಡಾ|| ಇಲ್ಲ. ಇಲ್ಲ. ಇದು ತಪ್ಪು. ಪ್ರತಿಯೊಂದು ಸಿರಿಧಾನ್ಯದಲ್ಲೂ ಅದರದೇ ಆದ ವಿಶೇಷ ಔಷಧೀಯ ಗುಣಗಳಿರುತ್ತವೆ. ಮಿಕ್ಸ್‌ ಮಾಡಿ ಸೇವಿಸಿದಾಗ ಔಷಧೀಯ ಅಂಶ ಸರಿಯಾದ ಪ್ರಮಾಣದಲ್ಲಿ ದೊರಕುವುದಿಲ್ಲ. ( Multi millet food ಪ್ರಯೋಜನವಿಲ್ಲ) ಸಿರಿಧಾನ್ಯಗಳು ನಮ್ಮ ಪರಂಪರಾಗತ ದೇಸೀ ಧಾನ್ಯಗಳು. ಅವುಗಳನ್ನು ಪಥ್ಯ ರೂಪದಲ್ಲಿ ಸೇವಿಸಿ. ಬೊಜ್ಜು, ಹೃದಯಸಮಸ್ಯೆ, ಸಕ್ಕರೆ ಕಾಯಿಲೆ, ಇವನ್ನೆಲ್ಲಾ ಗುಣಪಡಿಸಬಹುದು. ರಕ್ತದ ಕ್ಯಾನ್ಸರ್‌ ಇದ್ದವರಿಗೂ ಇವನ್ನು ನೀಡಿ ಅವರ ಆರೋಗ್ಯ ಸುಧಾರಿಸಿದ್ದೇವೆ. ಸಿರಿಧಾನ್ಯಗಳಿಗೆ ರೋಗಬಾಧೆ ಇಲ್ಲ ಹಾಗಾಗಿ ಇವನ್ನು ಕೀಟನಾಶಕ ಬಳಸದೇ ಬೆಳೆಯಬಹುದು.

ಸಂದರ್ಶಕಿ: ನಿಮ್ಮ ಮಾತಲ್ಲೇ ಹೇಳೋದಾದರೆ “ ಸರಿಯಾದ ಆಹಾರ ಸೇವಿಸಿದರೆ  ಔಷಧಿ ಬೇಕಿಲ್ಲ. ಆಹಾರವೇ ಸರಿಯಿಲ್ಲದಿದ್ದರೆ, ಔಷಧಿ ಕೆಲಸವನ್ನೇ ಮಾಡೋದಿಲ್ಲ” ಅಲ್ವೇ ಸರ್.‌

ಡಾ|| ಹೌದಮ್ಮ. ಸಿರಿಧಾನ್ಯಗಳೇ ಭವಿಷ್ಯದ ಆಹಾರ . ಸಿರಿಧಾನ್ಯಗಳನ್ನು ಬಳಸಿ ಆರೋಗ್ಯವಾಗಿರಿ. ಇದೇ ನನ್ನ ಸಂದೇಶ

ಸಂದರ್ಶಕಿ: ಧನ್ಯವಾದಗಳು ಸರ್.‌

( ಎಲ್ಲರೂ ಒಟ್ಟಿಗೆ: ಸಿರಿಧಾನ್ಯಗಳಿಗೆ ಜೈ, Millet Super food, ಅನ್ನಂ ಬ್ರಹ್ಮೇತಿವ್ಯಜಾನಾತ್‌, ಅನ್ನಂ ನ ನಿಂದ್ಯಾತ್‌ ತದ್ವ್ರತಂ, ಅನ್ನಂ ಬಹುಕುರ್ವೀತ ತದ್ವ್ರತಂ. ಓಂ ಶಾಂತಿಃ ಶಾಂತಿಃ ಶಾಂತಿಃ|| ) 


No comments:

Post a Comment