Monday, March 4, 2024

ಭಾರತೀಯ ವಿಜ್ಞಾನ ರಂಗದ ದೇದೀಪ್ಯಮಾನ ಬೆಳಕು !!

 ಭಾರತೀಯ ವಿಜ್ಞಾನ ರಂಗದ ದೇದೀಪ್ಯಮಾನ ಬೆಳಕು !! 

                         

ಲೇ: ರಾಮಚಂದ್ರ ಭಟ್‌ ಬಿ.ಜಿ.   

ಅದು  ಬಿರು ಬೇಸಗೆಯ ಸಂಜೆಗೆತ್ತಲು. ಆಗ ತಾನೆ ಕಬ್ಬನ್ ಪಾರ್ಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಬಂದು ನಿಂತಿತ್ತು. ನಿರ್ಮಾನುಷ ರಸ್ತೆಯಲ್ಲಿನ ಬೀದಿ ದೀಪಗಳಿಗೆ ಸಾವಿರಾರು  ಕೀಟಗಳು ಮುತ್ತಿ ರೆಕ್ಕೆ ಕಳೆದುಕೊಂಡು ರಸ್ತೆಗೆ ಬೀಳುತ್ತಿದ್ದವು. ಆ ದಾರಿಯಲ್ಲಿ IISc ಪ್ರೊಫೆಸರ್ ರವರ ಕಾರು ಕಬ್ಬನ್ ಪಾರ್ಕಿನ ಮೂಲಕ ಬರುತ್ತಿದೆ. ದೂರದಿಂದ ನೋಡಿದರೆ, ಬೀದಿದೀಪದ ಕೆಳಗೆ  ವ್ಯಕ್ತಿಯೊಬ್ಬ ರಸ್ತೆಯಲ್ಲಿ ಕುಕ್ಕರಗಾಲಿನಲ್ಲಿ  ಕುಳಿತಂತೆ  ಕಾಣಿಸುತ್ತಿದೆ!  ಅಲ್ಲೊಂದು ಕಾರು ನಿಂತಿದೆ. ಓಹ್ ಆ ಕಾರಿನ ವ್ಯಕ್ತಿಯೇ ಇರಬೇಕು. ರಸ್ತೆಯಲ್ಲಿ ಏನನ್ನೋ ಆಯ್ದುಕೊಳ್ಳುತ್ತಿದ್ದಾರೆ. ಕಾರಿನಿಂದ ಇಳಿದ  ಪ್ರೊಫೆಸರ್ ಅವರಿಗೆ ಆ ವ್ಯಕ್ತಿಯ ಗುರುತು ಸಿಕ್ಕಿತು. ತಮ್ಮ ಗುರುಗಳೇ!!! ಈ ನಿರ್ಮಾನುಷ  ರಸ್ತೆಯಲ್ಲಿ ಅದೇನು ಮಾಡುತ್ತಿದ್ದಾರೆ?

 ಸರ್!  ನಾನೇನಾದ್ರೂ ಸಹಾಯ ಮಾಡಲೇ? ಎನ್ನುತ್ತಾ ಆ ವ್ಯಕ್ತಿಯ ಬಳಿಗೆ ಸಾರಿದರೆ, ಆ ವ್ಯಕ್ತಿ ಈ ಕಡೆಯಿಂದ ಬರಬೇಡ ದೂರ ಹೋಗು. ಎನ್ನುತ್ತಾ  ತಮ್ಮ ಕರ ವಸ್ತ್ರವನ್ನು ಬಿಡಿಸಿ ಅದರಲ್ಲಿ ಅತ್ಯಂತ ಜಾಗ್ರತೆಯಿಂದ  ತಾವು ಆಯ್ದುಕೊಳ್ಳುತ್ತಿದ್ದ ಕೀಟಗಳ ರೆಕ್ಕೆಗಳನ್ನು ಇಡಲಾರಂಭಿಸಿದರು. ಪ್ರೊಫೆಸರ್ ರವರಿಗೆ ಆಶ್ಚರ್ಯ  “ಸರ್ ಇವನ್ನೇಕೆ ಆಯ್ದುಕೊಳ್ಳುತ್ತಿದ್ದೀರಿ?” ಎಂದು ಕೇಳಿದಾಗ “ ಪ್ರಶ್ನೆ ಕೇಳಬೇಡ ನೀನೂ ಒಂದಷ್ಟನ್ನು ಆಯ್ದು ಕೊಡು” ಎಂದರು. ಪ್ರೊಫೆಸರರು ಈಗ ಫಜೀತಿಗೆ ಒಳಗಾದರು. ವಿಧಿ ಇಲ್ಲದೆ ಈಗ ಶಿಷ್ಯನೂ ಅವರೊಂದಿಗೆ ಕೀಟಗಳ ರೆಕ್ಕೆಗಳನ್ನು ಸಂಗ್ರಹಿಸಲಾರಂಬಿಸಿದರು. ಸಾಕಷ್ಟು ರೆಕ್ಕೆಗಳ ಸಂಗ್ರಹವಾದ ನಂತರ “ಸರಿ ನೀನಿನ್ನು  ಹೊರಡು” ಎಂದು ಗುರುಗಳು ಹೇಳಿದರು. ಕುತೂಹಲ ತಾಳಲಾರದೆ ಮತ್ತೊಮ್ಮೆ ಗುರುಗಳನ್ನು ಪ್ರಶ್ನಿಸಿದರು. “ ಸರ್ ನೀವು ಇವುಗಳನ್ನು ಮಕ್ಕಳಂತೆ ಏಕೆ ಆಯ್ದುಕೊಳ್ಳುತ್ತಿದ್ದೀರಿ ?”

 ಆಗ ಆ ಗುರುಗಳು ನೀಡಿದ ಉತ್ತರವನ್ನು ಗಮನಿಸಿ. ಅದು ನಮ್ಮೆಲ್ಲರಿಗೂ ಮಾರ್ಗದರ್ಶಿ ಸೂಚನೆಗಳೇ ! ನಾವೆಲ್ಲರೂ  ನಮ್ಮ ವೃತ್ತಿ ಜೀವನದಲ್ಲಿ ಅನುಷ್ಠಾನಗೊಳಿಸಲೇಬೇಕಾದಂತದ್ದೇ ಆಗಿದೆ.

 “ನಿಂಗೊತ್ತಾ? ನಾಳೆ ನಾನು ಕಾರ್ಪೊರೇಷನ್ ಬಾಯ್ಸ್ ಶಾಲೆಯ ವಿದ್ಯಾರ್ಥಿಗಳಿಗೆ ಬೆಳಕಿನ ಗುಣಗಳ ಬಗ್ಗೆ ಒಂದು ಉಪನ್ಯಾಸ ನೀಡಬೇಕಿದೆ. ಆ ಶಾಲೆಯಲ್ಲಿ ವ್ಯತೀಕರಣಕ್ಕೆ ಸಂಬಂಧಪಟ್ಟಂತಹ (diffraction grating)  ಉಪಕರಣಗಳಿರಬೇಕಲ್ಲ? ವಿಜ್ಞಾನ ಬೋಧನೆ  ಬರಿಯ ಉಪನ್ಯಾಸವಾಗಬಾರದು ಅದು ಅನುಭವಾತ್ಮಕ ಕಲಿಕೆ ಆಗಬೇಕು! ಇದೇ ನನ್ನ ತಲೆಯನ್ನು ಕೊರೆಯುತ್ತಾ ಇತ್ತು. ಈ ಕೀಟಗಳು ರೆಕ್ಕೆ ಕಳ್ಕೊಂಡು ಬೀಳ್ತಾಯಿರೋದನ್ನ ನೋಡಿದ್ನಲ್ಲ ಅವುಗಳನ್ನೇ ನಾಳೆಗೆ ಬೋಧನಾ ಉಪಕರಣವಾಗಿಸಬಹುದು ಎಂಬ ಐಡಿಯಾ ನೀಡಿತು. ನಾಳೆ ಇದೆಲ್ಲವನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ನೀಡಿ  ಬೆಳಕಿನ ಗುಣಗಳ ಪ್ರಾತ್ಯಕ್ಷಿಕೆಯನ್ನು ನೀಡುತ್ತೇನೆ ” ಎಂದು ಸಂತಸದಿಂದ ಹೇಳಿದರು. ಸರ್ಕಾರಿ ಶಾಲೆಯ ಎಳೆಯ ವಿದ್ಯಾರ್ಥಿಗಳಿಗೆ ಒಂದು ತರಗತಿ ನೀಡಲು ಅಷ್ಟೊಂದು ತಲೆಕೆಡಿಸಿಕೊಂಡು ಪೂರ್ವ ಸಿದ್ಧತೆ ಮಾಡಿಕೊಂಡ ಆ ವ್ಯಕ್ತಿ ಯಾರೆಂದು ಯೋಚನೆ ಮಾಡ್ತಾ ಇದ್ದೀರಾ? ಅವರೇ ನಮ್ಮ ದೇಶದ ಹೆಮ್ಮೆಯ ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಸರ್ ಸಿ.ವಿ ರಾಮನ್!!!


ಇಂತಹ ವಿಶ್ವ ಕಂಡ ಖ್ಯಾತ ಭೌತವಿಜ್ಞಾನಿ ಸರ್ ಸಿ ವಿ ರಾಮನ್ ರವರು ತಮ್ಮ ರಾಮನ್‌ ಪರಿಣಾಮ ಎಂಬ ಅದ್ಭುತ ಸಂಶೋಧನೆಯನ್ನು ಜಗಜ್ಜಾಹೀರು ಮಾಡಿದ ದಿನವೇ 1928 ರ ಫೆಬ್ರವರಿ 28. ಹೀಗಾಗಿ ಅದರ ಸ್ಮರಣಾರ್ಥವಾಗಿ ಪ್ರತಿ ವರ್ಷ ಈ ದಿನದಂದು ಭಾರತ ದೇಶದಾದ್ಯಂತ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ಮಹತ್ತರ ಸಂಶೋಧನೆಗೆ 1930 ಡಿಸೆಂಬರ್ 10 ರಂದು ಪ್ರತಿಷ್ಠಿತ ನೊಬೆಲ್ ಪಾರಿತೋಷಕವನ್ನೂ ಪಡೆದರು. ಇದು ಭವ್ಯ ಭಾರತದ ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡುವುದರೊಂದಿಗೆ ವಿಶ್ವದಾದ್ಯಂತ ಹಲವು ಸಂಶೋಧನೆಗಳಿಗೆ ರಹದಾರಿಯಾಯಿತು.  

 ಪ್ರತಿನಿತ್ಯದ ಜೀವನದಲ್ಲಿ ವಿಜ್ಞಾನವು ಹೇಗೆ ಬೆರೆತು ಹೋಗಿದೆ ಎಂಬುದರ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವುದು ಹಾಗೂ ಅದರ ಮಹತ್ವದ ಬಗೆಗೆ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಪ್ರಮುಖ ಉದ್ದೇಶ. ಈ ವಿಶೇಷ ದಿನದಂದು ವಿಜ್ಞಾನ ಸ್ಪರ್ಧೆಗಳು ,, ವಿಜ್ಞಾನ ಉಪನ್ಯಾಸಗಳು ಹಾಗೂ ಅನೇಕ ವೈಜ್ಞಾನಿಕ ಚಟುವಟಿಕೆಗಳನ್ನು ಪ್ರತಿ ವರ್ಷವೂ ಒಂದು ನಿರ್ದಿಷ್ಟ ವಿಷಯದೊಂದಿಗೆ ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿ ರಾಷ್ಟ್ರೀಯ ವಿಜ್ಞಾನ ದಿನ-2024 ರ ಘೋಷವಾಕ್ಯ "ವಿಕಸಿತ ಭಾರತಕ್ಕಾಗಿ ದೇಶೀಯ ತಂತ್ರಜ್ಞಾನಗಳು". ಮೂಲವಿಜ್ಞಾನದ ಸಂಶೋಧನೆಗಳ ಸಹಕಾರದೊಂದಿಗೆ ಸ್ಥಳೀಯ ತಂತ್ರಜ್ಞಾನಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಿ, ದೇಶದ ಅಭಿವೃದ್ಧಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು, ಸಮರ್ಥನೀಯ ಭವಿಷ್ಯವನ್ನು ರೂಪಿಸುವುದು ಈ ನಿರ್ದಿಷ್ಟ ವಿಷಯದ ಗುರಿಯಾಗಿದೆ. ಇದು ಪ್ರಧಾನಿಯವರ ಮೇಕ್‌ ಇನ್‌ ಇಂಡಿಯಾ, ಸ್ಕಿಲ್‌ ಇಂಡಿಯಾಗಳ ವಿಸ್ತರಿತ ರೂಪವೇ ಆಗಿದೆ. ಸರಳವಾಗಿ ಹೇಳುವುದಾದರೆ, ಪಾರದರ್ಶಕ ಮಾಧ್ಯಮದ ಮೂಲಕ ಏಕವರ್ಣೀಯ ಬೆಳಕು ಹಾದುಹೋಗುವಾಗ, ಮಾಧ್ಯಮದ ಅಣುಗಳೊಂದಿಗೆ ವರ್ತಿಸಿ ಭಿನ್ನ ಆವೃತ್ತಿಯ ಕಿರಣಗಳಾಗಿ ಚದುರುತ್ತವೆ. ಇದೇ ರಾಮನ್ ಪರಿಣಾಮ. ಇದಕ್ಕೆ ವರು ವ್ಯಯಿಸಿದ ವೆಚ್ಚ 500 ರೂಗಳಿಗೂ ಕಡಿಮೆಯಾದರೂ ಅದರ ಅನ್ವಯದ ಮೌಲ್ಯ ಕೋಟಿಗೂ ಹೆಚ್ಚು!!!

 1888 ನವೆಂಬರ್ 7 ರಂದು ತಿರುಚನಪಳ್ಳಿಯಲ್ಲಿ ಚಂದ್ರಶೇಖರ್ ಅಯ್ಯರ್ ಮತ್ತು ಶ್ರೀಮತಿ ಪಾರ್ವತಿ ಅಮ್ಮಾಳ್ ದಂಪತಿಯ ಎರಡನೇ ಮಗುವಾಗಿ ಸಿ.ವಿ ರಾಮನ್ ಜನಿಸಿದರು. ಕುಶಾಗ್ರಮತಿ ರಾಮನ್ ರವರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಎರಡು ವರ್ಷಗಳ ಕಾಲೇಜಿನ ವ್ಯಾಸಂಗವನ್ನು ಪೂರ್ಣಗೊಳಿಸಿ, ಕೇವಲ 14ನೇ ವಯಸ್ಸಿಗೇ ಪದವಿ ವಿದ್ಯಾಭ್ಯಾಸಕ್ಕೆ ಕಾಲಿಟ್ಟರು. ತಮ್ಮ ಕಾಲೇಜಿನ ವಿದ್ಯಾಭ್ಯಾಸವನ್ನು ವಿದ್ಯಾರ್ಥಿವೇತನದೊಂದಿಗೆ ಅಷ್ಟೇ ಅಲ್ಲದೆ ಚಿನ್ನದ ಪದಕದೊಂದಿಗೆ ಪೂರ್ಣಗೊಳಿಸಿದ ಅಸಾಮಾನ್ಯ ಪ್ರತಿಭಾವಂತರಿವರು. ಬಹುಶಃ ನೋಬೆಲ್‌ ಚಿನ್ನದ ಪದಕಕ್ಕೆ ತಯಾರಿ ಇಲ್ಲಿಂದಲೇ ಆರಂಭವಾಗಿರಬೇಕು.

ಅದಿನ್ನೂ ಹುಡುಗಾಟದ ೧೯ರ ಹರೆಯ. ಓರಗೆಯ ಹುಡುಗರು ಕಾಲೇಜು ಹೋಗುವ ವಯಸ್ಸು!! 1907ರಲ್ಲಿ ಭಾರತೀಯ ಫೈನಾನ್ಸಿಯಲ್ ಸರ್ವಿಸ್ ಪರೀಕ್ಷೆಯಲ್ಲಿ ಮೊದಲಿಗರಾಗಿ ಸಾರ್ವಜನಿಕ ಹಣಕಾಸು ಅಧಿಕಾರಿಯಾಗಿ ಸರ್ಕಾರಿ ಸೇವೆಗೆ ಸೇರಿ ದುಡಿಯಲಾರಂಭಿಸಿದರು. ಇದೇ ವರ್ಷದಂದು ಮದರಾಸಿನಲ್ಲಿ ಲೋಕ ಸುಂದರಿಯವರೊಡನೆ ಮದುವೆಯಾಯಿತು. ಇದೇ ವರ್ಷದ ಕೊನೆಯಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಜನರಲ್ ಹುದ್ದೆಗೆ ಹಣಕಾಸು ವಿಭಾಗದಲ್ಲಿ ಕಲ್ಕತ್ತಾ ಗೆ ವರ್ಗಾವಣೆಯಾಗಿದ್ದು ಅವರ ಬದುಕಿಗೆ ತಿರುವು ನೀಡಿದ ಘಟನೆ . ಕೈತುಂಬ ಹಣ ಸಂಪಾದನೆ ಇದ್ದರೂ ತುಡಿತ ವಿಜ್ಞಾನದೆಡೆಗಿತ್ತು!!.  ಕಲ್ಕತ್ತಾದ ಪ್ರಸಿದ್ಧ ವೈದ್ಯ ಮಹೇಂದ್ರ ಲಾಲ್ ಸರ್ಕಾರ್ 1876 ರಲ್ಲಿ "ದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಶನ್ ಆಫ್ ಸೈನ್ಸ್" ಎಂಬ ಗಿನ ಕಾಲಕ್ಕೇ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯವೊಂದನ್ನು ಒಳಗೊಂಡ ಸಂಸ್ಥೆಯನ್ನು ಹುಟ್ಟು ಹಾಕಿ ಭಾರತ ದೇಶದಲ್ಲಿ ವಿಜ್ಞಾನ ಸಂಶೋಧನೆಗಳಿಗೆ ಹೊಸ ದಿಕ್ಕನ್ನು ತೋರಿದರು. ಇದೇ ರಾಮನ್‌ರವರ ಬದುಕಿಗೆ ಆಶಾಕಿರಣವಾಯಿತು.  ರಾಮನ್‌ರವರು ಸಂಸ್ಥೆಯ ಯಜಮಾನರನ್ನು ಭೇಟಿ ಮಾಡಿ ತಮ್ಮ ಬಿಡುವಿನ ಸಮಯದಲ್ಲಿ ಸಂಶೋಧನೆಯನ್ನು ನಡೆಸಲು ಅನುಮತಿ ಪಡೆದುಕೊಂಡರು.

ಇಲ್ಲಿಂದ ಎರಡು ದೋಣಿಯ ಪಯಣ ಆರಂಭವಾಯಿತು. ರಾಮನ್ ರವರ ಪತ್ನಿ ಲೋಕಸುಂದರಿಯವರ ಪಾತ್ರ ಮಹತ್ತರವಾದದ್ದು. ಗಂಡನ ಯಶಸ್ಸಿನ ಸಿಂಹ ಪಾಲು ಅವರಿಗೇ ಸಲ್ಲಬೇಕಾದ್ದು ಬೆಳಗ್ಗೆ 5:30ಕ್ಕೆ ಸಂಶೋಧನಾ ಕಾರ್ಯಕ್ಕೆ ಹೊರಟು 9:೩೦ ಸುಮಾರಿಗೆ ಮನೆಗೆ ಬಂದು ಸ್ನಾನಾದಿಗಳನ್ನು ಪೂರೈಸಿ ಕಚೇರಿಗೆ ತೆರಳುತ್ತಿದ್ದರು. ಕಚೇರಿಯ ಕಾರ್ಯದ ನಂತರ ಮತ್ತೆ ಸಂಶೋಧನಾ ವೃತ ಮುಗಿಸಿ ಮನೆ ತಲುಪಿದಾಗ ರಾತ್ರಿ ಹತ್ತೋ ಹನ್ನೆರಡೋ ಗಂಟೆಯಾದರೆ ಕೆಲವೊಮ್ಮೆ ಸಂಶೋಧನಾಲಯವೇ ಮನೆಯಾಗಿರುತ್ತಿತ್ತು!!! ಇಂತಹ ಒಳಗೆ ಮನೆಗೆ ಬರುತ್ತಿದ್ದರು. ಇನ್ನು ರಜಾ ದಿನಗಳಲ್ಲಂತೂ ಸಂಶೋಧನೆಯೇ ಸರ್ವಸ್ವ ಎಂಬಂತಾಗುತ್ತಿತ್ತು . ಇಂತಹ ಸಂದರ್ಭಗಳಲ್ಲಿ ಲೋಕಸುಂದರಿಯವರೇ ಮನೆಯ ಸಂಪೂರ್ಣ ಜವಾಬ್ದಾರಿ ವಹಿಸಿ ಪತಿಯ ಸಂಶೋಧನಾ ಯಾತ್ರೆ ಯಾತನೆಯಿಲ್ಲದಂತೆ ಮುನ್ನಡೆಯಲು ಕಾರಣಕರ್ತರಾಗಿದ್ದರು.

ಇವರ ಆಸಕ್ತಿ ಗಮನಿಸಿದ ಕಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಸರ್ ಆಶುತೋಷ ಮುಖರ್ಜಿ ರವರು ಭೌತವಿಜ್ಞಾನ ವಿಭಾಗದಲ್ಲಿ ತಾರಾಕಾನಾಥ ಪಾಲಿತ್ ಪ್ರೊಫೆಸರ್ ಹುದ್ದೆಗೆ ಆಹ್ವಾನ ನೀಡಿದರು. ಆದರೆ ನಿಮ್ಮ ಈ ಹುದ್ದೆಗೆ ದೊರೆಯುವ ಸಂಬಳ ನಿಮ್ಮ ಈಗಿನ ಸಂಬಳಕ್ಕಿಂತಲೂ ಕಾಲುಭಾಗಕ್ಕಿಂತ ಕಡಿಮೆ. ನಿಮಗೆ ಇಚ್ಛೆ ಇದ್ದಲ್ಲಿ ಸೇರಬಹುದೆಂದು ಹೇಳಿದಾಗ ಸಂಶೋಧನೆಯ ವಿಫುಲ ಅವಕಾಶವನ್ನು ಮನಗಂಡ ರಾಮನ್‌ ಅದಕ್ಕೊಪ್ಪಿ 1917ರಲ್ಲಿ ಪಾಲಿತ್ ಪ್ರೊಫೆಸರ್ ಆಗಿ ಕಲ್ಕತ್ತಾ ವಿಶ್ವವಿದ್ಯಾಲಯವನ್ನು ಸೇರಿದರು. ಇದು ಭಾರತ ದೇಶದ ವಿಜ್ಞಾನ ಕ್ಷೇತ್ರದ ಹಣೆಬರಹ ಬದಲಿಸಿದ ತೀರ್ಮಾನವಾಗಿತ್ತು. 

ರಾಮನ್ ರವರು ತಮ್ಮ ಮೊದಲ ವಿದೇಶ ಪ್ರಯಾಣವನ್ನು 1921 ರಲ್ಲಿ ಆಕ್ಸ್ಫರ್ಡ್ ನಲ್ಲಿ ನಡೆದ ಕಾಂಗ್ರೆಸ್ ಆಫ್ ಯುನಿವರ್ಸಿಟಿ ಆಫ್ ಬ್ರಿಟಿಷ್ ಎಂಪೈರ್ ಗೆ ಕಲ್ಕತ್ತಾ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಪಾಲ್ಗೊಂಡು ಬೆಳಕು ಮತ್ತು ಧ್ವನಿವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧವನ್ನು  ಯಶಸ್ವಿಯಾಗಿ ಮಂಡಿಸಿದರು. ಮೆಡಿಟರೇನಿಯನ್ ಸಮುದ್ರದ ಮಾರ್ಗವಾಗಿ ಹಡಗಿನಲ್ಲಿ ಹಿಂದಿರುಗುವಾಗ ಅವರನ್ನು ಸಮುದ್ರದ ನೀರು ಏಕೆ ನೀಲಿಯಾಗಿ ಕಾಣುತ್ತದೆ ? ಎಂಬ ಪ್ರಶ್ನೆಯೊಂದು ಕಾಡಿತು. ಈ ವಿದ್ಯಮಾನವನ್ನು ಖ್ಯಾತ ಭೌತ ವಿಜ್ಞಾನಿ ರ್ಯಾಲೆಯರು ಆಕಾಶದ ಬಣ್ಣದ ಪ್ರತಿಫಲನದಿಂದಾಗಿ ಸಮುದ್ರ ನೀಲಿ ಬಣ್ಣವಾಗಿ ಕಾಣುತ್ತದೆ ಎಂದುವಿವರಿಸಿದ್ದರು. ಆದರೆ ರಾಮನ್ರವರಿಗೆ ಇದು ಅಷ್ಟು ತೃಪ್ತಿ ತರಲಿಲ್ಲ. ಅವರು ನಿಕೋಲ್ ಪಟ್ಟಕ ಬಳಸಿ  ಪ್ರಯೋಗವನ್ನು ಕೈಗೊಂಡು ಸೂರ್ಯನ ಬೆಳಕು ನೀರಿನಲ್ಲಿ ಚದುರಿ, ಸಮುದ್ರದ ನೀರು ನೀಲಿ ಬಣ್ಣಕ್ಕೆ ಕಾಣುತ್ತದೆ ಎಂದು ಕಂಡುಹಿಡಿದರು. ಇದು ಅವರ ಮುಂದಿನ ಪ್ರಯೋಗಗಳಿಗೆ ಕಾರಣವಾಯಿತು.  1921 ರಲ್ಲಿ "ನೀರಿನ ಅಣುಗಳಲ್ಲಿ ಬೆಳಕಿನ ಚದುರುವಿಕೆ ಮತ್ತು ಸಮುದ್ರದ ಬಣ್ಣ" ಎಂಬ ಸಂಶೋಧನಾ ಲೇಖನವನ್ನು ಪ್ರಕಟಿಸಿದರು. 1924 ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿ, ಫೆಲೋ ಆಗಿ ಆಯ್ಕೆ ಮಾಡಿ ರಾಮನ್ ರವರನ್ನು ಗೌರವಿಸಿತು. ರಾಮನ್ ಪರಿಣಾಮದ ಸಂಶೋಧನಾ ಪ್ರಬಂಧವು 1928 ರಲ್ಲಿ ಪ್ರತಿಷ್ಠಿತ ನೇಚರ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಇದರ ಫಲವಾಗಿ 1930 ಡಿಸೆಂಬರ್ 10ರಂದು ಸರ್ ವೆಂಕಟರಾಮನ್‌ರವರಿಗೆ ರಾಮನ್ ಪರಿಣಾಮದ ಆವಿಷ್ಕಾರಕ್ಕಾಗಿ ನೊಬೆಲ್ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು. 

Raman at the 1930 Nobel Prize Award Ceremony with other winners, from left C. V. Raman (physics), Hans Fischer (chemistry), Karl Landsteiner (medicine) and Sinclair Lewis (literature)

ಇದು ಭಾರತದಲ್ಲಿ ಸಂಶೋಧನಾ ಪರಂರೆಯನ್ನೇ ಸೃಜಿಸಿತು. ಭಾರತೀಯರೂ ಸಾಧಿಸಬಲ್ಲರು ಎಂಬ ಸಂದೇಶವನ್ನು ವಿಶ್ವಕ್ಕೇ ರವಾನಿಸಿತು. ರಾಮನ್‌ ರಿಂದಾಗಿ ಅನೇಕ ವಿಜ್ಞಾನಿಗಳು ತಾಯ್ನಾಡಿಗೆ ಬಂದು ದೇಶದ ವಿಜ್ಞಾನ ಕ್ಷೇತ್ರಕ್ಕೆ ಅಚ್ಚಳಿಯದ ಕೊಡುಗೆ ನೀಡುವಂತಾಯಿತು. ಇಂತಹ ಶ್ರೇಷ್ಠ ದಾರ್ಶನಿಕ, ಮಹಾನ್‌ ದೇಶಭಕ್ತ, ಮಾನವತಾವಾದಿಯ ಬದುಕು ಮುಂದಿನ ಪೀಳಿಗೆಗೆ ದಾರಿ ದೀಪ. ಅವರ ನಡೆನುಡಿಗಳನ್ನು ಅನುಸರಿಸುವುದು ನಾವು ಅವರಿಗೆ ಕೊಡುವ ಅತ್ಯುಚ್ಛ ಗೌರವವೇ ಸರಿ.

ಭವ್ಯಭಾರತದ ಭವಿಷ್ಯಕ್ಕೆ ಹೊಸ ದಿಕ್ಕನ್ನು ನೀಡಿದ ಈ ದಿನದ ಮಹತ್ವವನ್ನು ಸಾರಲು, ವಿದ್ಯಾರ್ಥಿಗಳಿಗೆ ವಿಜ್ಞಾನದ ಆಸಕ್ತಿಯನ್ನು ಉದ್ದೀಪಿಸಲು ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದೊಂದಿಗೆ ೨ ದಿನಗಳ ವಿಜ್ಞಾನೋತ್ಸವವನ್ನು ಹಮ್ಮಿಕೊಂಡೆವು. 

ಶಾಲೆಯ ತುಂಬಾ ಸಂಭ್ರಮವೋ ಸಂಭ್ರಮ. ೨ ದಿನಗಳ ಬೃಹತ್‌ ವಿಜ್ಞಾನಮೇಳ ವಿದ್ಯಾರ್ಥಿಗಳಿಗೆ ಹಲವು ಬಗೆಯ ಪ್ರಾಯೋಗಿಕ ಅನುಭವವನ್ನು ಒದಗಿಸಿತು. ಅವರ ಆತ್ಮವಿಶ್ವಾಸ ನೂರ್ಮಡಿಯಾಯಿತು. ಅಕ್ಕಪಕ್ಕದ ಶಾಲೆಗಳಿಂದ ಸುಮಾರು ೨೦೦೦ ವಿದ್ಯಾರ್ಥಿಗಳು ಶಿಕ್ಷಕರು ಭೇಟಿನೀಡಿದರು. ನಮ್ಮ ವಿದ್ಯಾರ್ಥಿಗಳು ಪ್ರಯೋಗ ಪ್ರಾತ್ಯಕ್ಷಿಕೆ, ಮಾದರಿಗಳ ವಿವರಣೆ , ದೈನಂದಿನ ಬದುಕಿನಲ್ಲಿ ವಿಜ್ಞಾನ, ಪವಾಡ ಬಯಲು, ವಿಜ್ಞಾನ ರಸಪ್ರಶ್ನೆ, ಕಸದಿಂದ ರಸ, ಔಷಧೀಯ ಸಸ್ಯಗಳು, ಒರಿಗಾಮಿ, ಕಿರಿಗಾಮಿ ಚಟುವಟಿಕೆಗಳು, ಟ್ರಾಫಿಕ್‌ ನಿಯಮಗಳು, ಮೊದಲಾದ ಅನೇಕ ವಿಷಯಗಳನ್ನು ಆಧರಿಸಿದ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡರು. ನಾನು ನಮ್ಮ ಶಿಕ್ಷಕರಂತೆಯೇ ಬೇರೆ ಶಾಲೆಯ ಮಕ್ಕಳಿಗೆ ವಿವರಣೆ ನೀಡುತ್ತಿದ್ದೇನೆ ಎಂಬ ಹೆಮ್ಮೆ ಅಲ್ಲಿ ಕಾಣುತ್ತಿತ್ತು.   ಎಷ್ಟೋ ಮಕ್ಕಳಿಗೆ ಇತರರಿಗೆ ವಿವರಣೆ ನೀಡಲು ಹೋದಾಗ ಅನೇಕ ಅನುಮಾನಗಳು ತಪ್ಪು ಹೇಳಿದೆನೇನೋ ಎಂಬ ಭಾವ ! ಆಗ ಶಿಕ್ಷಕರೊಂದಿಗೆ ಮತ್ತೆ ಚರ್ಚೆ. ಅನುಭವಜನ್ಯ ಜ್ಞಾನ ಹರಳುಗಟ್ಟಿ ವಿಜ್ಞಾನದೆಡೆಗೆ ಒಲವು ಮೂಡುತ್ತಿತ್ತು.  ಇಂತಹ ಶೈಕ್ಷಣಿಕ ಚಟುವಟಿಕೆಗಳು ಭವಿಷ್ಯದಲ್ಲಿ ವಿಜ್ಞಾನಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇತ್ತೀಚಿಗೆ ತಾನೇ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ತೀರ್ಪುಗಾರನಾಗಿ ಪಾಲ್ಗೊಂಡಿದ್ದೆ. ಸ್ನೇಹಿತರಾದ ಜೀವಶಾಸ್ತ್ರ ಉಪನ್ಯಾಸಕರಾದ ಪ್ರಕಾಶ್ ಸರ್ ಕೂಡ ಪಾಲ್ಗೊಂಡಿದ್ದರು. ಪ್ರಕಾಶ್ರವರು, ಪ್ರತಿಷ್ಠಿತ ಸಂಸ್ಥೆಯೊಂದರ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇನ್ನೊಬ್ಬ ತೀರ್ಪುಗಾರರನ್ನು ಪರಿಚಯಿಸಿದರು. ಅವರು ಮಾತನಾಡುತ್ತಾ, “ಪ್ರಕಾಶ್ ಸರ್ ನನ್ನ ಗುರುಗಳು, 9ನೇ ತರಗತಿಯಲ್ಲಿದ್ದಾಗ ಅವರು ನನ್ನನ್ನು ಇದೇ ರೀತಿಯ ವಿಜ್ಞಾನ ವಸ್ತು ಪ್ರದರ್ಶನವೊಂದಕ್ಕೆ ಕರೆದುಕೊಂಡು ಹೋಗಿದ್ದರು. ಅದು ನನ್ನಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ಇಲ್ಲಿವರೆಗೂ ಕರೆತಂದಿದೆ ಎಂದು ಆ ದಿನಗಳನ್ನು ನೆನೆದರು. ಇಂತಹ ಘಟನೆಗಳೆಷ್ಟೋ? ಇವೇ ಅಲ್ಲವೇ ರಾಮನ್ನರ ಸಾಧನೆಯ ಸ್ವಾಂಗೀಕರಣ?  ಪುಟಾಣಿ ವಿಜ್ಞಾನಿಗಳು ಉದಿಸುವಂತಹ ಸನ್ನಿವೇಶಗಳನ್ನು ಸೃಜಿಸುತ್ತಾ ಕಲಿಕೆಯ ಸುಗಮಕಾರರಾಗೋಣ.






















No comments:

Post a Comment