Monday, March 4, 2024

ಪರಮಾಣು ರಚನಾ ಸಿದ್ಧಾಂತದ ಪಿತಾಮಹ – ನಿಕೊಲಸ್‌ ಬೇಕರ್‌ !!!!


ಪರಮಾಣು ರಚನಾ ಸಿದ್ಧಾಂತದ ಪಿತಾಮಹನಿಕೊಲಸ್‌ ಬೇಕರ್‌  !!!!


                           ಲೇ : ರಾಮಚಂದ್ರ ಭಟ್‌ ಬಿ.ಜಿ                                                                             


                                         ಭಾಗ -೨ 

ಹಿಂದಿನ ಸಂಚಿಕೆಯಲ್ಲಿ ಅಕ್ವ ರಿಜಿಯ ಅನೇಕ ಮಹಾನ್‌ ವಿಜ್ಞಾನಿಗಳ ತಲೆ ಕಾಯ್ದ ರೋಚಕ ಘಟನೆಯನ್ನೂ ನೀಲ್ಸ್‌ ಬೋರರ ಆರಂಭಿಕ ದಿನಗಳ ಕಥೆಯನ್ನು ಓದಿದಿರಿ. ಈ ಸಂಚಿಕೆಯಲ್ಲಿ ಬೋರರ ಸ್ಫೂರ್ತಿಯುತ ಬದುಕಿನ ಸಾಧನೆಯನ್ನು ತಿಳಿಯುವಿರಿ.

 ಅದು 1911 ಡಿಸೆಂಬರ್ 6ರ ಒಂದು ಸುಂದರ ಸಂಜೆ!!! ಹಲವಾರು ವಿಜ್ಞಾನಿಗಳು, ವಿದ್ಯಾರ್ಥಿಗಳು ಸಂತೋಷ ಕೂಟವೊಂದರಲ್ಲಿ ಸೇರಿದ್ದರು. ಹಾಡು ನೃತ್ಯಗಳಿಂದ ಸಮಾರಂಭ ಕಳೆಟ್ಟಿತ್ತು. ವಿಜ್ಞಾನಕ್ಕೆ ಸಂಬಂಧಪಟ್ಟಂತಹ ಹಲವು ಹಾಡುಗಳನ್ನು ಹೇಳುತ್ತಾ ಭೌತಶಾಸ್ತ್ರದ ಕುರಿತಾದ ಹಾಸ್ಯ ಚಟಾಕಿ ಹಾರಿಸುತ್ತಾ, ವಿದ್ಯಾರ್ಥಿಗಳು ಮೋಜು ಮಸ್ತಿ ಮಾಡುತ್ತಿದ್ದರು!!! ಊಟದೊಂದಿಗೆ ಪ್ಲಮ್ ಪುಡ್ಡಿಂಗ್ ವ್ಯವಸ್ಥೆ ಮಾಡಲಾಗಿತ್ತು!! ಜೆ.ಜೆ.ಯವರ ಪ್ಲಮ್ ಪುಡ್ಡಿಂಗ್ ಪರಮಾಣು ಮಾದರಿಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು!!” ಇದೇ ಹಾಸ್ಯ ಚಟಾಕಿಗೆ ಕಾರಣವಾಗಿತ್ತು. ಈ ವಿಜ್ಞಾನಿಗಳೂ ಅದೆಷ್ಟು ತರ್ಲೆ ಇರಬೇಕು? ಜೆ.ಜೆ.ಯ ಪ್ರಿಯಶಿಷ್ಯ ರುದರ್ಫೋರ್ಡರೂ ಕೂಡ ಆ ಪಾರ್ಟಿಯಲ್ಲಿದ್ದರು. ಸುಮಾರು 9 ತಿಂಗಳ ಹಿಂದೆಯಷ್ಟೇ ರುದರ್ಫೋರ್ಡ್ ತಮ್ಮ ಪರಮಾಣು ಮಾದರಿಯನ್ನು ಪ್ರಸ್ತಾಪಿಸಿದ್ದರು. ಇದು ಯಾವುದೇ ಆಹಾರ ವಸ್ತುವಿಗೆ ಸಂಬಂಧಪಡದ ಮಾದರಿಯಾಗಿತ್ತು!! ಇದು ಪ್ರೊಫೆಸರ್ ಜೆಜೆಯವರ ಮಾದರಿಗಿಂತ ಉತ್ತಮ ಮಾದರಿ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಅಷ್ಟೊತ್ತಿಗಾಗಲೇ 40ರ ಹರೆಯದ ರುದರ್ ಫೋರ್ಡ್ ಆಲ್ಫಾ, ಬೀಟಾ ವಿಕಿರಣಗಳನ್ನು ಸಂಶೋಧಿಸಿದ್ದರು. ವಿಕಿರಣಪಟು ಧಾತುಗಳ ಅರ್ಧಾಯುಷ್ಯದ ಬಗ್ಗೆಯೂ ಸಂಶೋಧನೆ ನಡೆಸಿದ್ದರು. ವಿಕಿರಣ ಪಟುತ್ವದಿಂದ ದ್ರವ್ಯಾಂತರಣವಾಗುತ್ತದೆ ಪರಮಾಣುವಿನ ಪ್ರೋಟಾನ್‌ಗಳ ಅಥವಾ ಪರಮಾಣು ಸಂಖ್ಯೆಯನ್ನು ಬದಲಾಯಿಸಬಹುದೆಂದೂ ಕಂಡುಕೊಂಡಿದ್ದರು. ಅದಕ್ಕಾಗಿ ನೋಬೆಲ್ ಪ್ರಶಸ್ತಿಯನ್ನು ಕೂಡ ಬಾಚಿಕೊಂಡಿದ್ದರು. ಅದೇ ರೀತಿ ಲೋಹಗಳಿಗೆ ಆಲ್ಫಾ ಕಣಗಳಿಂದ ತಾಡಿಸಿದಾಗ ಅವು ಹಿಂಪುಟಿದು ಬರುತ್ತವೆ ಎನ್ನುವುದನ್ನು ತಿಳಿದುಕೊಂಡಿದ್ದರು. ಈ ಆಲ್ಫಾ ಕಣಗಳಿಂದ ಪರಮಾಣುವನ್ನು ತಾಡಿಸಿದಾಗ ಉಂಟಾದ ಫಲಿತಾಂಶವೇ ಪರಮಾಣುವಿನ ನ್ಯೂಕ್ಲಿಯಸ್‌ನ ಸಂಶೋಧನೆಗೆ ಕಾರಣವಾಯಿತು. 1911 ರ ಮಾರ್ಚ್ 7ರಂದು ತನ್ನ ಸಂಶೋಧನಾ ಲೇಖನದಲ್ಲಿ ಪರಮಾಣುವಿನ ನ್ಯೂಕ್ಲಿಯಸ್ ಧನ ವಿದ್ಯುತ್ ಆವೇಶವನ್ನು ಹೊಂದಿದೆ ಎನ್ನುವುದನ್ನು ಪ್ರಕಟಿಸಿದರು.

 ಅದೇ ಸಂದರ್ಭದಲ್ಲಿ ಹಂಟರೊ ನಾಗವೋಕ Hantaro Nagaoka (1865-1950)  ಎಂಬ ಜಪಾನಿನ ವಿಜ್ಞಾನಿ ಪರಮಾಣು ಕೇಂದ್ರದಲ್ಲಿ ಧನ ವಿದ್ಯುತ್ ಆವೇಶವನ್ನು ಹೊಂದಿದ್ದು ಸುತ್ತಲೂ  ರಚನೆ ಶನಿಯ ಉಂಗುರಗಳಂತಹ ರಚನೆಯನ್ನು ಹೋಲುತ್ತದೆ ಎಂಬ ತರ್ಕವನ್ನು ಮುಂದಿಟ್ಟಿದ್ದರು. ರುದರ್ ಫೋರ್ಡರು ಎಲೆಕ್ಟ್ರಾನ್‌ಗಳ ಬಗ್ಗೆ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ!!!  ಹಗುರವಾಗಿರುವ ಎಲೆಕ್ಟ್ರಾನ್‌ಗಳು ಧನ ನ್ಯೂಕ್ಲಿಯಸ್‌ನ ಸುತ್ತ ಗ್ರಹಗಳಂತೆ ಸುತ್ತುತ್ತಿದ್ದರೂ ಅದು ಈ ಎಲೆಕ್ಟ್ರಾನ್‌ಗಳನ್ನು ಏಕೆ ಸೆಳೆದುಕೊಳ್ಳುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ನ್ಯೂಕ್ಲಿಯಸ್‌ನ ಸುತ್ತಲೂ ವೇಗವಾಗಿ ಸುತ್ತುವ ಎಲೆಕ್ಟ್ರಾನ್‌ಗಳು ತಮ್ಮ ಶಕ್ತಿಯನ್ನು ಕಳೆದುಕೊಂಡು ನ್ಯೂಕ್ಲಿಯಸ್‌ಗೆ ಅಪ್ಪಳಿಸಿ ನಾಶವಾಗಬೇಕಾಗಿತ್ತು. ಹಾಗಾಗಿದ್ದರೆ, ಪರಮಾಣುವಿನ ಅಸ್ತಿತ್ವವೇನು? ನಮ್ಮ ಅಸ್ತಿತ್ವವೂ ಇರುತ್ತಿರಲಿಲ್ಲ. ಆದರೆ ಪರಮಾಣು ಸ್ಥಿರವಾಗಿದೆ ಎನ್ನುವುದು ಸರ್ವವೇದ್ಯ. ಹೀಗಾಗಿ, ರುದರ್‌ಫೋರ್ಡರ ಈ ಪರಮಾಣು ರಚನೆ ಅಷ್ಟಾಗಿ ಯಾವ ವಿಜ್ಞಾನಿಯ ಗಮನವನ್ನೂ ಸೆಳೆಯಲಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಆದರೆ ಈ ರಚನೆಯ ಬಗ್ಗೆ ಮೊದ-ಮೊದಲು ತಲೆಕೆಡಿಸಿಕೊಳ್ಳ ದಿದ್ದರೂ ನಿಧಾನಕ್ಕೆ ಒಬ್ಬ ವಿಜ್ಞಾನಿಯ ತಲೆಕೆಡಿಸಿತ್ತು ಆ ವಿಜ್ಞಾನಿ ಇನ್ಯಾರು ಅಲ್ಲ ನೀಲ್ಸ್ ಬೋರ್!!!

 1911ರ ಆ ಪಾರ್ಟಿಯಲ್ಲಿ ನೀಲ್ಸ್ ಬೋರ್ರವರ ಬದುಕಿಗೆ ತಿರುವು ನೀಡಬಲ್ಲ ತೀರ್ಮಾನವೊಂದನ್ನು ತೆಗೆದುಕೊಳ್ಳಲು ಪ್ರೇರಣೆ ನೀಡಿತು. ನಾನು ನನ್ನ ಗುಣಕ್ಕೆ ಹೊಂದಾಣಿಕೆಯಾಗದ ವ್ಯಕ್ತಿಯೊಂದಿಗೆ ಕೆಲಸ ಮಾಡಲು ಹವಣಿಸುತ್ತಿದ್ದೇನೆ ಎಂದು ಬೋರ್‌ಗೆ ಖಾತ್ರಿಯಾಯಿತು.!!! ನೀಲ್ಸ್ ಬೋರ್‌ರವರು ಜೆ.ಜೆ.ಥಾಮ್ಸನ್‌ರವರನ್ನು ಭೇಟಿಮಾಡಿ ತಾನು ಮ್ಯಾಂಚೆಸ್ಟರ್‌ನಲ್ಲಿ ರುದರ್ಫೋರ್ಡರೊಂದಿಗೆ ವಿಕಿರಣ ಪಟುತ್ವದ ಬಗ್ಗೆ ಸಂಶೋಧನೆ ಮಾಡಲು ಅನುಮತಿ ನೀಡುವಂತೆ ಕೋರಿದರು. ಜೆ.ಜೆ. ಥಾಮ್ಸನ್‌ರವರು ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರು. 1912ರ ಮಾರ್ಚ್ ತಿಂಗಳಿನಲ್ಲಿ ನೀಲ್ಸ್ ಬೋರ್ ಮ್ಯಾಂಚೆಸ್ಟರ್‌ಗೆ ಪಯಣಿಸಿದರು. ಇದು ಅವರ ಬದುಕಿನ ಯಶಸ್ವಿ ಪಯಣದ ಆರಂಭವಾಗಿತ್ತು.

ತಮ್ಮ ಸಹೋದರನಿಗೆ ಬರೆದ ಪತ್ರದಲ್ಲಿ ತಾನು ಮ್ಯಾಂಚೆಸ್ಟರ್‌ನಲ್ಲಿ ಅತ್ಯುತ್ತಮ ಸಂಶೋಧಕ ಸ್ಫೂರ್ತಿದಾಯಕ, ಕ್ರಿಯಾಶೀಲ ಮಹಾನ್ ವ್ಯಕ್ತಿಯೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು. ಕೆಲವು ವಾರಗಳ ಅಧ್ಯಯನದ ನಂತರ ಪ್ರಾಯೋಗಿಕ ಸಂಶೋಧನೆ ತನಗೆ ಹೊಂದುವ ಕ್ಷೇತ್ರವಲ್ಲ ಎನ್ನುವುದನ್ನು ಅರಿತುಕೊಂಡರು. ತಾವು ಸೈದ್ಧಾಂತಿಕ ಅಧ್ಯಯನಕ್ಕೆ ಹೆಚ್ಚು ಒತ್ತು ಕೊಡುವುದಾಗಿ ರುದರ್ಫೋರ್ಡರಿಗೆ ತಿಳಿಸಿದರು. ಮೊದಲಿನಿಂದಲೂ ರುದರ್ಫೋರ್ಡರಿಗೆ ಪ್ರಾಯೋಗಿಕ ಸಂಶೋಧನೆಯನ್ನು ಒಲ್ಲದ ಸೈದ್ಧಾಂತಿಕ ಸಂಶೋಧನೆಯ ವಿಜ್ಞಾನಿಗಳ ಬಗ್ಗೆ ಅಷ್ಟಾಗಿ ಉತ್ತಮ ಅಭಿಪ್ರಾಯವಿರಲಿಲ್ಲ. ಆದರೆ ನೀಲ್ಸ್ ಬೋರರಿಗೆ ಈ ಅಭಿಪ್ರಾಯದಿಂದ ಪೂರ್ಣವಿನಾಯಿತಿ ನೀಡಿದ್ದರು!!! ಅದಕ್ಕೆ ಮತ್ತೊಂದು ಕಾರಣವೂ ಇತ್ತು. ಅದು ನೀಲ್ಸ್ ಬೋರ್ ಉತ್ತಮ ಫುಟ್ಬಾಲ್ ಆಟಗಾರನಾಗಿದ್ದುದು.

ಬೋರ್ ಕ್ವಾಂಟಮ್ ಮೆಕ್ಯಾನಿಕ್ಸ್ ತತ್ವಗಳನ್ನು ಬಳಸಿ ರುದರ್‌ಫೋರ್ಡರ ಪರಮಾಣು ಮಾದರಿಯನ್ನು ಸುಧಾರಿಸಿದರು.

i) ಹೈಡ್ರೋಜನ್ ಪರಮಾಣುವಿನಲ್ಲಿರುವ ಇಲೆಕ್ಟ್ರಾನ್ ನ್ಯೂಕ್ಲಿಯಸ್‌ನ ಸುತ್ತ ನಿರ್ದಿಷ್ಟ ತ್ರಿಜ್ಯ ಮತ್ತು ಶಕ್ತಿಯ ವೃತ್ತಾಕಾರದ ಪಥದಲ್ಲಿ ಚಲಿಸಬಹುದು. ಈ ಪಥವನ್ನು ಕಕ್ಷೆಗಳು, ಸ್ಥಾಯಿಸ್ಥಿತಿಗಳು ಅಥವಾ ಪರಿಮಿತಿಯ ಚೈತನ್ಯ ಮಟ್ಟಗಳೆಂದು ಕರೆಯಲಾಗುತ್ತದೆ. ಈ ಕಕ್ಷೆಗಳನ್ನು ನ್ಯೂಕ್ಲಿಯಸ್ ಕೇಂದ್ರಿಕೃತವಾಗಿ ಜೋಡಿಸಲಾಗಿದೆ.

ii) ಕಕ್ಷೆಯಲ್ಲಿರುವ ಇಲೆಕ್ಟ್ರಾನ್‌ನ ಶಕ್ತಿಯು ಕಾಲದೊಡನೆ ಬದಲಾವಣೆ ಹೊಂದುವುದಿಲ್ಲ. ಆದಾಗ್ಯೂ ಇಲೆಕ್ಟ್ರಾನ್ ಅಗತ್ಯವಿರುವ ಶಕ್ತಿಯನ್ನು ಹೀರಿಕೊಂಡು ಕಡಿಮೆ ಚೈತನ್ಯ ಮಟ್ಟದಿಂದ ಅಧಿಕ ಚೈತನ್ಯ ಮಟ್ಟಕ್ಕೆ ಚಲಿಸುತ್ತವೆ ಅಥವಾ ಇಲೆಕ್ಟ್ರಾನ್ ಅಧಿಕ ಚೈತನ್ಯ ಮಟ್ಟದಿಂದ ಕಡಿಮೆ ಚೈತನ್ಯ ಮಟ್ಟಕ್ಕೆ ಚಲಿಸಿದಾಗ ಶಕ್ತಿಯು ಹೊರಹೊಮ್ಮುತ್ತದೆ. ಈ ಶಕ್ತಿಯ ಬದಲಾವಣೆ ಅವಿಚ್ಛಿನ್ನವಾಗಿ ನಡೆಯುವುದಿಲ್ಲ.

ಇಲೆಕ್ಟ್ರಾನ್‌ಗಳಿಗೆ ಸ್ಥಾಯಿ ಚೈತನ್ಯ ಮಟ್ಟವು n = 1,2,3.......... ಬೆಲೆಗಳನ್ನು ಹೊಂದಿದ್ದು, ಈ ಪೂರ್ಣಾಂಕಗಳನ್ನು ಪ್ರಧಾನ ಕ್ವಾಂಟಮ್ ಸಂಖ್ಯೆ ಎನ್ನುತ್ತಾರೆ.

b) ಸ್ಥಾಯಿ ಚೈತನ್ಯ ಮಟ್ಟದ ತ್ರಿಜ್ಯಗಳನ್ನು ಈ ಕೆಳಕಂಡತೆ ಸೂಚಿಸುವರು.

ಅಂದರೆ ao = 52.9 pm. ಮೊದಲ ಸ್ಥಾಯಿ ಚೈತನ್ಯ ಮಟ್ಟದ ತ್ರಿಜ್ಯವು 52.9pm ಆಗಿದ್ದು, ಇದನ್ನು ಬ್ಹೋರ್‌ನ ತ್ರಿಜ್ಯ (Bohr radius) ಎನ್ನುವರು. ಸಾಮಾನ್ಯವಾಗಿ ಹೈಡ್ರೋಜನ್ ಪರಮಾಣುವಿನ ಇಲೆಕ್ಟಾçನು ಇದೇ ಕಕ್ಷೆ (ಅಂದರೆ n =1) ಯಲ್ಲಿ ಇರುತ್ತದೆ. n ಬೆಲೆ ಹೆಚ್ಚಾದಂತೆ r ಸಹ ಹೆಚ್ಚಾಗುತ್ತದೆ. ಅಂದರೆ ಇಲೆಕ್ಟ್ರಾನ್‌ಗಳು ನ್ಯೂಕ್ಲಿಯಸ್‌ನಿಂದ ದೂರ ಇರುತ್ತವೆ.

c) ಇಲೆಕ್ಟ್ರಾನ್‌ಗಳಿಗೆ ಸಂಬಧಿಸಿದತೆ ಬಹಳ ಮುಖ್ಯವಾದ ಗುಣ ಲಕ್ಷಣವೆಂದರೆ, ಅವುಗಳ ಸ್ಥಾಯಿ ಚೈತನ್ಯ ಮಟ್ಟದ ಶಕ್ತಿ. ಇದನ್ನು ಈ ಕೆಳಗಿನ ಸೂತ್ರದಲ್ಲಿ ನೀಡಿದೆ.

ಇಲೆಕ್ಟ್ರಾನ್‌ ನ್ಯೂಕ್ಲಿಯಸ್‌ನ ಪ್ರಭಾವದಿಂದ ಮುಕ್ತವಾದಾಗ, ಅದರ ಶಕ್ತಿಯನ್ನು ಸೊನ್ನೆ ಎಂದು ತೆಗೆದುಕೊಳ್ಳಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಇಲೆಕ್ಟ್ರಾನ್‌  ಪ್ರಧಾನ ಕ್ವಾಂಟಮ್ ಸಂಖ್ಯೆ n = ಆಗಿರುವ ಸ್ಥಾಯೀ ಚೈತನ್ಯ ಮಟ್ಟದಲ್ಲಿರುತ್ತದೆ. ಇದನ್ನು ಅಯಾನೀಕರಣಗೊಂಡ ಹೈಡ್ರೋಜನ್ ಪರಮಾಣು ಎನ್ನುವರು. ನ್ಯೂಕ್ಲಿಯಸ್ ಇಲೆಕ್ಟ್ರಾನನ್ನು ಆಕರ್ಷಿಸಿದಾಗ. ಅದು ಶಕ್ತಿಯನ್ನು ಬಿಡುಗಡೆಗೊಳಿಸಿ n ಕಕ್ಷೆಯಲ್ಲಿ ಸ್ಥಿರಗೊಳ್ಳುತ್ತದೆ. ಹೈಡ್ರೋಜನ್ ಪರಮಾಣುವಿನ ರೇಖಾ ರೋಹಿತವನ್ನು ಬ್ಹೋರ್‌ನ ಮಾದರಿಯನ್ನು ಬಳಸಿಕೊಂಡು ಪರಿಮಾಣಾತ್ಮಕವಾಗಿ ವಿವರಿಸಬಹುದು.

1912ರ ಆಗಸ್ಟ್ ತಿಂಗಳಲ್ಲಿ ಬೋರ್‌ ತನ್ನ ದೀರ್ಘ ಕಾಲದ ಮನದನ್ನೆ ಮಾರ್ಗರೆಥೆ ನೋಲ್ಯಾಂಡ್‌ರೊಂದಿಗೆ  ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರದ್ದು ಅನುರೂಪ ದಾಂಪತ್ಯ. ಆಕೆ ಆತನ ಭವಿಷ್ಯವನ್ನೇ ರೂಪಿಸಿದ ಮಾಹಾನ್‌ ತ್ಯಾಗಮಯಿ. ನೀಲ್ಸ್ ಬೋರ್ರವರು ತಮ್ಮ ಎಲ್ಲ ಸಂಶೋಧನಾ ಪ್ರಬಂಧಗಳನ್ನು ಪತ್ನಿಗೆ ಉಕ್ತಲೇಖನ ನೀಡಿ ಬರೆಸುತ್ತಿದ್ದರು. ಪತ್ನಿ ಅವುಗಳನ್ನು ಎಡಿಟ್ ಮಾಡಿ ಅಗತ್ಯ ತಿದ್ದುಪಡಿಯೊಂದಿಗೆ ಅಂತಿಮ ರೂಪಕ್ಕೆ ತರುತ್ತಿದ್ದರು!! ಪತ್ನಿಯ ಒಪ್ಪಿಗೆ ಇಲ್ಲದೆ ಯಾವ ಸಂಶೋಧನಾ ಲೇಖನವೂ ಪ್ರಕಟವಾಗುತ್ತಿರಲಿಲ್ಲ!! ನೀಲ್ಸ್ ಬೋರ್ ರವರ ಯಶಸ್ಸಿನ ಹಿಂದೆ ಅವರ ಪತ್ನಿಯ ಪಾತ್ರ ಹಿರಿದಾದದ್ದು ಎನ್ನುವುದಕ್ಕೆ ಇನ್ಯಾವ ಸಾಕ್ಷಿಯೂ ಬೇಕಿಲ್ಲ. ಈ ದಂಪತಿಗಳಿಗೆ ಐದು ಗಂಡು ಮಕ್ಕಳಿದ್ದರು.

ರುದರ್ಫೋರ್ಡರು, ಮದುವೆಯ ನಂತರ ನೀಲ್ಸ್ ಬೋರ್ ಅವರಿಗೆ ಪತ್ರ ಬರೆದು ನಿನ್ನಿಂದ ಯಾವುದೇ ಉಪಯುಕ್ತ ಸಂಶೋಧನೆ ನಡೆಯುತ್ತಿಲ್ಲ ಎಂದು ತಗಾದೆ ತೆಗೆದು ಎಚ್ಚರಿಸಿದರು. ಫೆಬ್ರವರಿ 1913ರಲ್ಲಿ ಬೋರ್ ರವರು ತಮ್ಮ ಸಂಶೋಧನೆಯ ಕೆಲವು ಅಂಶಗಳನ್ನು ಸಹೋದ್ಯೋಗಿಗಳೊಂದಿಗೆ ಚರ್ಚಿಸುತ್ತಿದ್ದರು. ಆಗ ಅವರ ಸಹೋದ್ಯೋಗಿಗಳು ಹೈಡ್ರೋಜನ್ ರೋಹಿತದ ರೇಖೆಗಳು ಹೇಗೆ ಉಂಟಾಗುತ್ತವೆ? ಹೇಗೆ ಕಾರ್ಯನಿರ್ವಹಿಸುತ್ತವೆ? ಎಂದು ಪ್ರಶ್ನಿಸಿದರು. ಈ ಪ್ರಶ್ನೆಯು ಮರೆತಿದ್ದ ಒಂದು ವಿಷಯವನ್ನು ಅವರಿಗೆ ನೆನಪಿಸಿತು. 1885 ರಲ್ಲಿ 60 ವರ್ಷದ ಶಾಲಾ ಶಿಕ್ಷಕರಾದ ಜಾನ್ ಬಾಮರ್ ಕಂಡುಹಿಡಿದ ರೋಹಿತಗಳಿಗೆ ಸಂಬಂಧಪಟ್ಟ ಒಂದು ಸೂತ್ರವನ್ನು ನೆನಪಿಸಿತು. ಆ ಸೂತ್ರವನ್ನು ಅನ್ವಯಿಸಿ ಈ ಪ್ರಶ್ನೆಗೆ ಉತ್ತರಿಸಬಹುದೆನ್ನುವುದನ್ನು ಬೋರ್ ರವರಿಗೆ ಈ ಮೊದಲು ಹೊಳೆದಿರಲಿಲ್ಲ. ಬಾಮರ್ ರವರ ಆ ಸೂತ್ರ ಬೋರರಿಗೆ ಎಲ್ಲವನ್ನು ಸುಸ್ಪಷ್ಟಪಡಿಸಿತು. ಅದೊಂದು ಅದ್ಭುತ ಸಂಶೋಧನೆಯಾಯಿತು. ಒಂದು ತಿಂಗಳ ಒಳಗೆ ಪತಿ-ಪತ್ನಿಯರು ಸೇರಿ ಸರ್ವಕಾಲಿಕ ಎನ್ನಬಹುದಾದ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಅದೇ ಹೈಡ್ರೋಜನ್ ನಂತಹ ಒಂದು ಎಲೆಕ್ಟ್ರಾನ್ ಇರುವ ಧಾತುಗಳ ಪರಮಾಣು ಮಾದರಿ. ಅದು ಬೋರ್ ಮಾದರಿ ಎಂದೇ ಹೆಸರಾಗಿದೆ.





 ಬೋರ್‌ನ ಮಾದರಿಯ ಪ್ರಕಾರ, ಹೈಡ್ರೋಜನ್ ಪರಮಾಣುವಿನಲ್ಲಿರುವ ಇಲೆಕ್ಟ್ರಾನ್ ನ್ಯೂಕ್ಲಿಯಸ್‌ನ ಸುತ್ತಲೂ ಇರುವ ನಿರ್ದಿಷ್ಟ ತ್ರಿಜ್ಯ ಮತ್ತು ಶಕ್ತಿಯನ್ನು ಹೊಂದಿರುವ ವೃತ್ತಾಕಾರದ ಚೈತನ್ಯಮಟ್ಟಗಳಲ್ಲಿ ಚಲಿಸುತ್ತವೆ. ಈ ಕಕ್ಷೆಯಲ್ಲಿರುವ ಇಲೆಕ್ಟ್ರಾನ್‌ನ ಶಕ್ತಿಯು ಕಾಲದೊಡನೆ ಬದಲಾವಣೆ ಹೊಂದುವುದಿಲ್ಲ. ಆದರೆ, ಇಲೆಕ್ಟ್ರಾನ್ ಶಕ್ತಿಯನ್ನು ಹೀರಿಕೊಂಡು ಅಧಿಕ ಚೈತನ್ಯ ಮಟ್ಟಕ್ಕೆ ಏರುತ್ತದೆ. ಅದು ಅಧಿಕ ಚೈತನ್ಯ ಮಟ್ಟದಿಂದ ಕಡಿಮೆ ಚೈತನ್ಯ ಮಟ್ಟಕ್ಕೆ ಬಂದಾಗ ಶಕ್ತಿಯನ್ನು ಹೊರ ಹಾಕುತ್ತದೆ. 

ಅವರು ಈ ಸಂಶೋಧನೆಯಿಂದ ಪಿಕರಿಂಗ್ ಸಿರೀಸ್ ಕಂಡು ಹಿಡಿದು ಕೆಲವು ನಕ್ಷತ್ರಗಳ ಬೆಳಕಿನ ರೋಹಿತದ ವಿಶಿಷ್ಟ ರೇಖೆಗಳ ರಹಸ್ಯವನ್ನು ಕಂಡು ಹಿಡಿದರು.

 ಬೋರ್ ರವರು ತಮ್ಮ ಸಂಶೋಧನೆಯ ವಿವರಗಳನ್ನು  ರುದರ್ ಫೋರ್ಡ್ ರವರೊಂದಿಗೆ ಹಂಚಿಕೊಂಡರು. ನಂತರ ಅವರು ಅರ್ನೆಸ್ಟ್ ರುದರ್‌ಪೋರ್ಡ್ವರೊಂದಿಗೆ ಮ್ಯಾಂಚೆಸ್ಟರ್ನಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದರು. ಅವರು ತಮ್ಮ ಜೀವನದುದ್ದಕ್ಕೂ ಉತ್ತಮ ಸ್ನೇಹಿತರಾಗಿದ್ದರು. ಬೋರ್ ತಮ್ಮ ಮಗನಿಗೆ ತನ್ನ ಆತ್ಮೀಯ ಸ್ನೇಹಿತನೂ, ಗುರುವೂ ಆದ ರುದರ್‌ಫೋರ್ಡ್‌ಅವರ ಹೆಸರನ್ನೇ ಇಟ್ಟರು.

 ಬೋರ್ ತನ್ನ ವರಮಾಣು ಮಾದರಿಯನ್ನು ವಿವರಿಸಲು ಪ್ಲಾಂಕ್‌ರ ಕ್ವಾಂಟಮ್ ಸಿದ್ಧಾಂತವನ್ನು ಬಳಸಿ, ಪರಮಾಣು ರೋಹಿತ ಮತ್ತು ಪರಮಾಣುವಿನ ಸ್ಥಿರತೆಯನ್ನು ವಿವರಿಸಿದರು. ಸಾಮಾನ್ಯವಾಗಿ, ಎಲೆಕ್ಟ್ರಾನ್‌ಗಳು ಪರಮಾಣುವಿನಲ್ಲಿ ತಮ್ಮದೇ ಆದ ನಿಯೋಜಿತ ಕಕ್ಷೆಗಳಲ್ಲಿ ಸುತ್ತುತ್ತವೆ. ಶಕ್ತಿಯನ್ನು ಹೀರಿದ, ಎಲೆಕ್ಟ್ರಾನ್‌ಗಳು ಉನ್ನತ ಚೈತನ್ಯ ಮಟ್ಟಕ್ಕೆ ಜಿಗಿಯುತ್ತವೆ. ಸ್ವಲ್ಪ ಸಮಯದ ನಂತರ ಅದು ಶಕ್ತಿಯನ್ನು ಬೆಳಕಿನ ರೂಪದಲ್ಲಿ ಹೊರ ಹಾಕುತ್ತಾ ತನ್ನ ಮೂಲ ಸ್ಥಾನಕ್ಕೆ ಮರಳುತ್ತವೆ. ಬೋರ್ ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ವಿಕಿರಣದ ತರಂಗಾಂತರವನ್ನು ಲೆಕ್ಕಾಚಾರ ಮಾಡುವ ಮೂಲಕ ವಸ್ತುವಿನ ಪರಮಾಣು ರಚನೆಯನ್ನು ನಿರ್ಧರಿಸಿದರು.

ಬೋರ್ ಅವರ ಕೆಲಸವು ಪರಮಾಣು ಭೌತಶಾಸ್ತ್ರದಲ್ಲಿ ಪ್ರಮುಖ ಪ್ರಗತಿಯನ್ನು ಒದಗಿಸಿತು. ಇದು ವಿಜ್ಞಾನದಲ್ಲಿ ಹೊಸ ಯುಗವನ್ನು ಪ್ರಾರಂಭಿಸಿತು. ಬೋರ್ ತಮ್ಮ ಈ  ಅದ್ಭುತ ಸಂಶೋಧನೆಗಾಗಿ 1922 ರಲ್ಲಿ ತಮ್ಮ 37ನೇ ವಯಸ್ಸಿನಲ್ಲಿ, ಭೌತಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಅವರು ಈ ಗೌರವವನ್ನು ಪಡೆದ ಅತ್ಯಂತ ಕಿರಿಯ ಭೌತಶಾಸ್ತ್ರಜ್ಞರಾಗಿದ್ದರು.  

ಒಂದೆಡೆ ಸಂಶೋಧನೆಗಳು ಮುಂದುವರೆಯುತ್ತಿದ್ದರೆ, ಇನ್ನೊಂದೆಡೆ ನಾಜಿಗಳು ಬೆನ್ನ ಹಿಂದೆ ಬಿದ್ದಿದ್ದರು. ಏಪ್ರಿಲ್ 1940 ರಲ್ಲಿ, ಜರ್ಮನಿಯು ಡೆನ್ಮಾರ್ಕ್ ಮೇಲೆ ದಾಳಿ ಮಾಡಿ ವಶವಡಿಸಿಕೊಂಡಿತು. ರಾಜನನ್ನು ಸೆರೆಮನೆಯಲ್ಲಿಟ್ಟಿತು. ನಾಜಿಗಳು ಡೆನ್ಮಾರ್ಕ್‌ನಲ್ಲಿ ವಾಸಿಸುತ್ತಿದ್ದ 6000 ಯಹೂದಿಗಳನ್ನು ಕೊಲ್ಲಲು ಯೋಜಿಸಿದ್ದರು. ಅದರೆ ಅವರಲ್ಲಿ ಸುಮಾರು 5000 ಜನ ಯಹೂದಿಗಳು ಸುರಕ್ಷಿತವಾಗಿ ಸ್ವೀಡನ್‌ಗೆ ಪ್ರಯಾಣ ಬೆಳೆಸಿದರು. ಅವರಲ್ಲಿ ನೀಲ್ಸ್‌ ಬೋರ್‌ರವರ ಕುಟುಂಬವೂ ಸೇರಿತ್ತು. ಹೀಗಾಗಿ ಜರ್ಮನರ ಬರ್ಮನ್ ಸಂಚು ವಿಫಲವಾಯಿತು. ನಾಜಿಗಳು ಬೋರ್ ಅವರ ನಿವಾಸದ ಮೇಲೆ ದಾಳಿ ಮಾಡಿದರು, ಆದರೆ ಅದೃಷ್ಟವಶಾತ್, ಅವರಿಗೆ ನೊಬೆಲ್ ಪ್ರಶಸ್ತಿಯಾಗಿ ನೀಡಲಾದ ಚಿನ್ನದ ಪದಕದ ನಾಜಿಗಳs ಕೈ ಸೇರಲಿಲ್ಲ. ನಂತರ, ಬೋರ್ ಅಮೆರಿಕಕ್ಕೆ ಹೋಗಿ ಅಲ್ಲಿ ಪರಮಾಣುಶಕ್ತಿಯ ಬಗ್ಗೆ ಸಂಶೋಧನೆ ಮುಂದುವರೆಸಿದರು. ಲಾಸ್ ಅಲ್ಮೋಸ್‌ನಲ್ಲಿ ಸಂಶೋಧನಾ ಭೌತಶಾಸ್ತ್ರಜ್ಞರಾಗಿ ಕೆಲಸ ಮಾಡಿದರು. ೧೯೪೩-೪೫ ರವರಗೆ ಅಮೇರಿಕದ ಅತ್ಯಂತ ರಹಸ್ಯ ಯೋಜನೆಯಾದ ಮ್ಯಾನ್‌ಹಟನ್‌ ಯೋಜನೆಯಲ್ಲಿ ಪಾಲ್ಗೊಂಡರು. ಅವರು ವಿಜ್ಞಾನಿಗಳಾದ ಅಲ್ಬರ್ಟ್ ಐನ್‌ಸ್ಟೈನ್ ಮತ್ತು ಎನ್ರಿಕೊ ಫರ್ಮಿ ಅವರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಿದರು. ಫರ್ಮಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಈ ವಿಷಯದ ಬಗ್ಗೆ ಕೆಲಸ ಮಾಡುತ್ತಿದ್ದರು. ಪರಮಾಣು ಶಕ್ತಿ ಜಗತ್ತಿನ ಭವಿಷ್ಯಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಅರಿಯಲು ಈ ಪ್ರಖ್ಯಾತ ವಿಜ್ಞಾನಿಗಳಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಎರಡನೆಯ ಮಹಾಯುದ್ಧವನ್ನು ಕೊನೆಗೊಳಿಸಲು ಅಮೇರಿಕಾ ಪರಮಾಣು ಬಾಂಬುಗಳನ್ನು ಜಪಾನಿನ ಎರಡು ನಗರಗಳಾದ ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಬೀಳಿಸಿತು. ಜಪಾನ್ ಮೇಲೆ ಅಮೆರಿಕ ನಡೆಸಿದ ಬಾಂಬ್‌ ದಾಳಿಯಿಂದ ಬೋರ್ ತೀವ್ರವಾಗಿ ದುಃಖಿತರಾಗಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಪರಮಾಣು ಸ್ಫೋಟವನ್ನು ನಿಷೇಧಿಸಬೇಕೆಂದು ಅವರು ಪ್ರತಿಪಾದಿಸಿದರು.


ವಿಶ್ವಶಾಂತಿಗಾಗಿ ಅವರ ಪ್ರಯತ್ನ ನಿರಂತರವಾಗಿತ್ತು. 1945 ರಾಯಲ್ ಡ್ಯಾನಿಶ್ ಅಕಾಡೆಮಿ ಆಫ್ ಸೈನ್ಸಸ್‌ನ ಅಧ್ಯಕ್ಷರಾದರು. ಬೋರ್ 1955 ರಲ್ಲಿ ಜಿನೀವಾದಲ್ಲಿ ನಡೆದ ಶಾಂತಿ ಸಮ್ಮೇಳನದಲ್ಲಿ ಡೆನ್ಮಾರ್ಕ್‌ನ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಭಾಗವಹಿಸಿದರು. ವಿಜ್ಞಾನ ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯ ಪ್ರಶಸ್ತಿಗಳು ಮತ್ತು ಪದಕಗಳನ್ನು ಪಡೆದರು. 1947 ಫ್ರೆಡೆರಿಕ್ IX ರಿಂದ ಆರ್ಡರ್ ಆಫ್ ದಿ ಎಲಿಫೆಂಟ್ ಪ್ರಶಸ್ತಿಯನ್ನು ನೀಡಲಾಯಿತು. ಅಕ್ಟೋಬರ್ 1957 ರಲ್ಲಿ, ಬೋರ್ರವರಿಗೆ  ಫೋರ್ಡ್‌ ಶಾಂತಿ ಪ್ರಶಸ್ತಿ ನೀಡಲಾಯಿತು.  ಅವರ ಇತರ ಸಂಶೋಧನೆಗಳಲ್ಲಿ, ಪರಮಾಣು ಗುಣಲಕ್ಷಣಗಳನ್ನು ಮತ್ತು ಪೂರಕತೆಯ ತತ್ವವನ್ನು ವಿವರಿಸಲು ಲಿಕ್ವಿಡ್ ಡ್ರಾಪ್ ಮಾದರಿಯ ಮೇಲಿನ ಅವರ ಕೆಲಸವು ಆಧುನಿಕ ಭೌತಶಾಸ್ತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ವಿಶ್ವಶಾಂತಿಯ ಪ್ರತಿಪಾದಕರಾಗಿದ್ದ ಬೋರ್ 1962 ನವೆಂಬರ್ 18 ರಂದು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಿಧನರಾದರು. ಇದರೊಂದಿಗೆ ಪರಮಾಣುವಿನ ರಚನೆಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದ ಮಹಾನ್‌ ಚೇತನವೊಂದು ಅಸ್ತಂಗತವಾಯಿತು. ಆದರೆ ಅದರ ಜ್ಞಾನಗಂಗೆಯ ಹರಿವು ನಮ್ಮೆಲ್ಲರೆಡೆಗೆ ಅವಿಚ್ಛಿನ್ನವಾಗಿ ಹರಿಯುತ್ತಲೇ ಇದೆ.
https://upload.wikimedia.org/wikipedia/commons/f/fd/Niels_Bohr_with_C._V._Raman.jpg



 

No comments:

Post a Comment