Thursday, April 4, 2024

"ಆರೋಗ್ಯವಾಗಿದ್ರೆ ಬಡವನೂ ಶ್ರೀಮಂತ"

 "ಆರೋಗ್ಯವಾಗಿದ್ರೆ ಬಡವನೂ ಶ್ರೀಮಂತ"

ಎಪ್ರಿಲ್‌  07-ವಿಶ್ವ ಆರೋಗ್ಯ ದಿನದ ನಿಮಿತ್ತ ವಿಶೇಷ ಲೇಖನ.

✍️ಲೇಖನ:- ಬಸವರಾಜ ಎಮ್ ಯರಗುಪ್ಪಿ

ಬಿ ಆರ್ ಪಿ ಶಿರಹಟ್ಟಿ. 

ಸಾ.ಪೊ ರಾಮಗೇರಿ,ತಾಲ್ಲೂಕು ಲಕ್ಷ್ಮೇಶ್ವರ ಜಿಲ್ಲಾ ಗದಗ. 

ಮಿಂಚಂಚೆ- basu.ygp@gmail.com


"ಮನುಷ್ಯನಿಗೆ ಆರೋಗ್ಯವೇ ಶ್ರೇಷ್ಠ ಉಡುಗೊರೆ; ಸಂತೃಪ್ತಿಯೇ ಶ್ರೇಷ್ಠ ಸಂಪತ್ತು; ವಿಶ್ವಾಸಾರ್ಹತೆಯೇ ಶ್ರೇಷ್ಠ ಸಂಬಂಧ" ಎಂದು - ಗೌತಮ ಬುದ್ಧ ಹೇಳಿರುವ ನುಡಿಯ ಉಲ್ಲೇಖ  ಪ್ರಸ್ತುತ ದಿನಗಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಇಂದಿಗೂ ಈ ಮಾತು ಅನ್ವಯಿಸುತ್ತದೆ. ಅದೆ ರೀತಿಯಾಗಿ ‘ಆರೋಗ್ಯ ನಿಜವಾದ ಸಂಪತ್ತೇ ಹೊರತು, ಚಿನ್ನ, ಬೆಳ್ಳಿಯ ತುಂಡುಗಳಲ್ಲ’ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಹೇಳಿದ್ದರು. ಕೋವಿಡ್-19 ಸಾಂಕ್ರಾಮಿಕ ಆರಂಭದ ಬಳಿಕ ಈ ಮಾತಿಗೆ ಹೆಚ್ಚಿನ ಮಹತ್ವ ದೊರೆತಿದೆಯೇನೋ ಎಂದು ಅನಿಸುವುದು ಸುಳ್ಳಲ್ಲ.ಮಾನವನಿಗೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ದೈಹಿಕ, ಮಾನಸಿಕ ಅಥವಾ ಸಾಮಾಜಿಕ ಸವಾಲುಗಳನ್ನು ಎದುರಿಸುವಾಗ ಸ್ವಯಂ ನಿರ್ವಹಿಸುವ ಸಾಮರ್ಥ್ಯದ ಜೊತೆಗೆ ಜೀವನಶೈಲಿಯು ತುಂಬಾ ಮುಖ್ಯ. 

ಉತ್ತಮ ಆರೋಗ್ಯವು ನಾವು ಖರೀದಿಸಬಹುದಾದ ವಸ್ತುವಲ್ಲ. ಆದಾಗ್ಯೂ,ಇದು ಅತ್ಯಂತ ಮೌಲ್ಯಯುತವಾದ ಉಳಿತಾಯ ಖಾತೆಯಾಗಿರುತ್ತದೆ. ಆದರೆ ಪ್ರಪಂಚದ ಎಲ್ಲಾ ಹಣವು ನಿಮಗೆ ಉತ್ತಮ ಆರೋಗ್ಯವನ್ನು ಮರಳಿ ಖರೀದಿಸಲು ಸಾಧ್ಯವಿಲ್ಲ.ಆದ್ದರಿಂದ ಪ್ರತಿವರ್ಷ ಏಪ್ರಿಲ್ 07 ರಂದು ವಿಶ್ವ ಆರೋಗ್ಯ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಜಗತ್ತಿನಾದ್ಯಂತ ಇತರ ಆರೋಗ್ಯ ಸಂಬಂಧಿತ ಸಂಸ್ಥೆಗಳು ಆಚರಿಸುತ್ತವೆ.ಪ್ರಪಂಚದಾದ್ಯಂತದ ಬಡತನದಿಂದ ಬಳಲುತ್ತಿರುವ ಪ್ರದೇಶಗಳ ಜನರಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಆರೋಗ್ಯ ದಿನಾಚರಣೆಯ ಹಿಂದಿನ ಪ್ರಮುಖ ಉದ್ದೇಶದ ಜೊತೆಗೆ ಗುರಿಯೂ ಆಗಿದೆ.

#ಪ್ರಥಮ ವಿಶ್ವ ಆರೋಗ್ಯ ದಿನ:

1950ರ ಏಪ್ರಿಲ್ 7 ರಂದು ಪ್ರಥಮ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಅಂದಿನಿಂದ ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷವೂ ಒಂದು ವಿಷಯದ ಮೇಲ್ಪಂಕ್ತಿಯನ್ನು ಆರಿಸಿ ಆ ವಿಷಯದ ಕುರಿತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶ್ವದೆಲ್ಲೆಡೆ ಅನುಷ್ಠಾನಗೊಳಿಸಲು ವಿವಿಧ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದೆ.  


ಆರೋಗ್ಯ ಎಂದರೆ ನಮ್ಮ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕವಾಗಿ ಮಾನಸಿಕ ಸಮತೋಲನ ಹೊಂದಿರುವುದೇ ಆಗಿದೆ. ಸಂಪೂರ್ಣ ಯೋಗಕ್ಷೇಮದತ್ತ ಜನರ ಗಮನವನ್ನು ಸೆಳೆಯಲು, ವಿಶ್ವ ಆರೋಗ್ಯ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. 


#ಯಾತಕ್ಕಾಗಿ ಈ ಆಚರಣೆ...? 

ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿ, ಕಾಪಾಡಬೇಕಾದ ನೈರ್ಮಲ್ಯ, ಸ್ವಚ್ಛತಾ ಅಭ್ಯಾಸಗಳು, ನೀರಿನ ದುಂದುವೆಚ್ಚ, ಪರಿಸರದ ಸ್ವಚ್ಛತೆ, ಮೊದಲಾದ ವಿಷಯಗಳ ಬಗ್ಗೆ ಕಾಳಜಿವಹಿಸುವ ಮಾಹಿತಿಯನ್ನು ನೀಡುತ್ತಾರೆ. ಇದರಿಂದ ಸಮಾಜದ ಆರೋಗ್ಯ ಉತ್ತಮಗೊಳ್ಳುತ್ತದೆ. ಆರೋಗ್ಯಕರ ಸಮಾಜ, ದೇಶದ ಶಕ್ತಿಯಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. 


#ಆರೋಗ್ಯವೇ ಭಾಗ್ಯ:

ಈ ನುಡಿಯನ್ನು ನಾವು ಆಗಾಗ್ಗೆ ಕೇಳುತ್ತಾ ಇರುತ್ತೇವೆ. ಇದು ಆರೋಗ್ಯದ ಮಹತ್ವ ಬಗ್ಗೆ ಮಾಹಿತಿ ನೀಡುವ ಸಾರ್ವತ್ರಿಕವಾದ ಮಾತಾಗಿದೆ. ಈ ಹಿಂದೆ ವಿಶ್ವ ಸಂಸ್ಥೆ ಆರೋಗ್ಯ ಎಂದರೆ “ರೋಗವಿಲ್ಲದಿರುವುದೇ ಆರೋಗ್ಯ” ಎಂಬ ವ್ಯಾಖ್ಯಾನ ನೀಡಿತ್ತು. ಆದರೆ ಈಗ ಬದಲಾದ ಪರಿಸ್ಥಿತಿ ಮತ್ತು ಕಾಲಘಟ್ಟದಲ್ಲಿ ಈ ವ್ಯಾಖ್ಯಾನ ತನ್ನ ಅರ್ಥವನ್ನು ಕಳೆದುಕೊಂಡಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಈಗ ದುರ್ಬಿನು ಹಾಕಿ ಹುಡುಕಿದರೂ ನಮಗೆ ಆರೋಗ್ಯವಂತ ವ್ಯಕ್ತಿ ಸಿಗುವುದು ಕಷ್ಟ. ಒಂದು ವೇಳೆ ಆತ ಅಥವಾ ಆಕೆ ದೈಹಿಕವಾಗಿ ಆರೋಗ್ಯವಂತನಾಗಿದ್ದರೂ ಮಾನಸಿಕವಾಗಿ ಬಹಳಷ್ಟು ಒತ್ತಡ ಅಥವಾ ಆತಂಕದಿಂದ ಇರುತ್ತಾನೆ. ಈ ನಿಟ್ಟಿನಲ್ಲಿ ನಾವು ಒಬ್ಬ ವ್ಯಕ್ತಿ ಪರಿಪೂರ್ಣ ಆರೋಗ್ಯವಂತ ಎಂದು ಪ್ರಾಮಾಣೀಕರಿಸಬೇಕಾದರೆ ಆತ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಆರೋಗ್ಯವಂತನಾಗಿರಲೇ ಬೇಕು.


#2024 ರ ವಿಶ್ವ ಆರೋಗ್ಯ ದಿನಾಚರಣೆ ಥೀಮ್:

ವಿಶ್ವ ಆರೋಗ್ಯ ದಿನವನ್ನು ಆಚರಿಸಲು ನಿರ್ದಿಷ್ಟ ಥೀಮ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ನಿರ್ಧರಿಸುತ್ತದೆ. ಹಾಗಾಗಿ 2024ನೇ ಇಸ್ವಿಯ ಥೀಮ್ - "ನನ್ನ ಆರೋಗ್ಯ, ನನ್ನ ಹಕ್ಕು"(My health, my right) ಅಂದರೆ ಆರೋಗ್ಯವೂ ಮಾನವನ ಹಕ್ಕಾಗಿದೆ.ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳು ಮತ್ತು ಶಿಕ್ಷಣಕ್ಕೆ ಪ್ರವೇಶವನ್ನು ಹೊಂದಿರಬೇಕು ಎಂಬ ಅಂಶವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ಈ ವರ್ಷದ ಥೀಮ್ ಒತ್ತಿ ಹೇಳಿದೆ.

#ಆರೋಗ್ಯದ ರಕ್ಷಣೆಗಿರುವ ಕ್ರಮಗಳು:

“ಬೇಗ ಮಲಗಿ ಬೇಗ ಏಳು” ಎಂಬ ಹಿರಿಯರ ಮಾತನ್ನು ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಸಿಕೊಂಡು ಈ ಕೆಳಗಿನ ರಕ್ಷಣಾ ಕ್ರಮಗಳನ್ನು ಅನುಸರಿಸಬೇಕು. 

1)ಧೂಮಪಾನ ಮಧ್ಯಪಾನದಿಂದ ದೂರವಿಡಿ.

2)ಒತ್ತಡದ ಜೀವನ ಶೈಲಿಗೆ ತಿಲಾಂಜಲಿ ನೀಡಿ. 

3)ಆದಷ್ಟು ಹಸಿ ತರಕಾರಿ, ಹಸಿರು ಸೊಪ್ಪು, ಕಾಳು ಬೇಳೆ ಇರುವ ಆಹಾರ ಸೇವಿಸಿರಿ.

4)ಸ್ವಯಂ ಔಷಧಿಗಾರಿಕೆ ಮಾಡುವುದೇ ಬೇಡ. 

5)ದೈನಂದಿನ ಜೀವನದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಬಿರುಸು ನಡಿಗೆ, ವ್ಯಾಯಾಮ, ಸ್ವಿಮ್ಮಿಂಗ್, ಸೈಕ್ಲಿಂಗ್, ಮುಂತಾದವುಗಳನ್ನು ಅಳವಡಿಸಿಕೊಳ್ಳಿ. 

6)ಅತಿಯಾದ ಮೊಬೈಲ್, ಕಂಪ್ಯೂಟರ್ ಬಳಕೆಯನ್ನು ನಿಯಂತ್ರಿಸಿ. ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ಹೊಸ ಉಪಕರಣ ಬರುವುದು ಸಹಜ. ಆದರೆ ದೈನಂದಿನ ಜೀವನದ ಅತಿ ಅನಿವಾರ್ಯದಲ್ಲಿ ಮಾತ್ರ ಬಳಸಿ. 

ಒಟ್ಟಾರೆಯಾಗಿ  ಸಮುದಾಯ ಆರೋಗ್ಯವಾಗಿಲ್ಲದಾಗ ಸುಂದರ ಸದೃಢ ಸಮಾಜದ ನಿರ್ಮಾಣ ಖಂಡಿತಾ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ತಮ್ಮ ಹೊಣೆಗಾರಿಕೆ ಅರಿತು ನಿಭಾಯಿಸಿದಲ್ಲಿ ಮಾತ್ರ “ಎಲ್ಲೆಲ್ಲಿಯೂ ಎಲ್ಲರಿಗೂ ಆರೋಗ್ಯ” ಎಂಬ ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ದಿನದ ಆಚರಣೆಯ ಧ್ಯೇಯ ವಾಕ್ಯಕ್ಕೆ ನ್ಯಾಯ ಒದಗಿದಂತಾಗುತ್ತದೆ. ಇಲ್ಲವಾದಲ್ಲಿ ಎಲ್ಲರಿಗೂ ಆರೋಗ್ಯ ಎನ್ನುವುದು ಮರೀಚಿಕೆಯಾಗುವ ಎಲ್ಲ ಸಾಧ್ಯತೆಗಳು ಇವೆ. ಹೀಗಾಗಿ ಮನುಷ್ಯ ಉತ್ತಮ ರೀತಿಯಲ್ಲಿ ಬಾಳ್ವೆ ನಡೆಸಲು ಆರೋಗ್ಯ ಅತ್ಯಗತ್ಯ. ಅದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ಒಳಗೊಂಡಿರುತ್ತದೆ.  ಆರೋಗ್ಯದ ನಿಜವಾದ ಅರ್ಥ, ಕಾಳಜಿ ಹಾಗೂ ಸಮುದಾಯದ ಆರೋಗ್ಯ ಕಾಪಾಡಲು ವ್ಯಕ್ತಿ ಮಾಡಬೇಕಾದ ಕರ್ತವ್ಯದ ಬಗ್ಗೆ ಅರಿವು ಮೂಡಿದಾಗ ಮಾತ್ರ ಈ ದಿನಾಚರಣೆ ಸಾರ್ಥಕವಾಗಲು ಸಾಧ್ಯ. "ಅಂತಸ್ತು ಒಬ್ಬರ ಸಾಮಾಜಿಕ ಸ್ಥಾನಮಾನ ಹೇಳುತ್ತೆ, ಆದ್ರೆ ಆರೋಗ್ಯ ಅದನ್ನೆಲ್ಲಾ ಮೀರಿದ್ದಾಗಿದೆ".ಹಾಗಾಗಿ ಆರೋಗ್ಯವಾಗಿದ್ರೆ ಬಡವನೂ ಸಿರಿವಂತನಾಗಬಹುದು. ಸರಿ ತಾನೆ..?

#ಕೊನೆಯ ಮಾತು:

"ಶಿಕ್ಷಣದ ಹೊರತಾಗಿ ಉತ್ತಮ ಆರೋಗ್ಯ ಬೇಕು.ಅದಕ್ಕಾಗಿ ಕ್ರೀಡೆಗಳನ್ನು ಆಡಬೇಕು" ಎಂದು ಕಪಿಲ್ ದೇವ್ ಅವರ ಅಭಿಪ್ರಾಯವಾಗಿದೆ.  



No comments:

Post a Comment