Thursday, April 4, 2024

C ಎಂಬ ಸಿಹಿ ನೀಡಿದ ಡೇನಿಸ್‌ ರಿಚ್ಚಿ

 C  ಎಂಬ ಸಿಹಿ ನೀಡಿದ ಡೇನಿಸ್‌ ರಿಚ್ಚಿ -

ಲೇಖಕರು: ಸುರೇಶ ಸಂಕೃತಿ

       “ ಸಸಿ ನೆಟ್ಟವರು ಯಾರೋ ಪುಣ್ಯಾತ್ಮರು, ಅದು ಬೆಳದು ನಿಂತು ಫಲ ನೀಡುವಾಗ ಅದರ ಫಲಾನುಭವಿಗಳು ಮತ್ಯಾರೋ” ಅನ್ನುವ  ಒಂದು  ಮಾತು ಇದೆ.  ಈ ಮಾತು ಡೇನಿಸ್‌ ರಿಚ್ಚಿ ಮಹಾಶಯನ ಕಥೆಗೆ ಚೆನ್ನಾಗಿಯೇ ಅನ್ವಯವಾಗುತ್ತದೆ.  

ಡೇನಿಸ್‌ ಮ್ಯಾಕ್ ಅಲ್ಸ್ಟೇರ್‌ ರಿಚ್ಚಿ ಜನಿಸಿದ್ದು‌ ನ್ಯೂಯಾರ್ಕ್‌ ಬಳಿಯ ಬ್ರಾಂಕ್ಸವಿಲ್ಲೆಯಲ್ಲಿ  1941ರ ಸೆಪ್ಟೆಂಬರ್ 9ರಂದು. ತಂದೆ ಅಲ್ಸ್ಟೇರ್‌ ಇ  ರಿಚ್ಚಿಯವರು ಬೆಲ್‌ ಲ್ಯಾಬಿನಲ್ಲಿ ಪ್ರತಿಷ್ಠಿತ ವಿಜ್ಞಾನಿಯಾಗಿದ್ದವರು.  ಸ್ವಿಚ್ಚಿಂಗ್‌ ಸರ್ಕ್ಯೂಟುಗಳ ಅಧ್ಯಾಯನಶೀಲರಿಗೆ ಬೈಬಲ್‌ ಎಂದೇ ಪರಿಗಣಿಸಲಾದ The Design of Switching Circuits ಎಂಬ ಗ್ರಂಥದ ಬರಹಗಾರರಲ್ಲಿ ಒಬ್ಬರಾಗಿದ್ದರು. 

 ಡೇನಿಸ್‌ ರಿಚ್ಚಿಯವರು ಹಾರ್ವರ್ಡ್‌ ವಿಶ್ವವಿದ್ಯಾಲಯದಿಂದ 1963ರಲ್ಲಿ ಭೌತಶಾಸ್ತ್ರದಲ್ಲಿ ಪದವಿಯನ್ನು ಪೂರೈಸಿದರು. ನಂತರ ಅನ್ವಯಿಕ ಗಣಿತದಲ್ಲಿ ಡಾಕ್ಟರೇಟಗೆ ಸಂಶೋಧನೆ ಮಾಡುತ್ತಲೇ ತಮ್ಮ ತಂದೆಯವರು ಕೆಲಸ ಮಾಡುತ್ತಿದ್ದ ಬೆಲ್‌ ಲ್ಯಾಬ್ ನ ಕಂಪ್ಯೂಟಿಂಗ್ ಸೈನ್ಸ್‌ ರೀಸರ್ಚ್‌ ಇನ್ಸಟ್ಯೂಟ್‌  ಸೇರಿದರು.  ಮುಂದಿನ ದಿನಗಳಲ್ಲಿ ಬೆಲ್‌ ಲ್ಯಾಬ್‌, ಜಿಇ, ಎಮ್‌ಐಟಿ ಸಹಯೋಗದಲ್ಲಿ ಮಲ್ಟೆಕ್ಸ್‌ ಆಪರೇಟಿಂಗ್‌ ಸಿಸ್ಟಂನ ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮಲ್ಟೆಕ್ಸ್‌ ಗೆ ಕೆಲಸ ನಿರ್ವಹಿಸುತ್ತಿರುವಾಗ ರಿಚ್ಚಿಯವರಿಗೆ ಕೆನೆತ್‌ ಥಾಂಸನ್‌ ರವರ ಪರಿಚಯವಾಯಿತು. ಮಲ್ಟೆಕ್ಸ್‌ಗೆ ಬೇಕಾಗಿದ್ದ ಬಿಸಿಪಿಎಲ್‌ ಎನ್ನುವ ಪ್ರೊಗ್ರಾಮಿಂಗ್‌ ಲಾಂಗ್ವೇಜ್‌ ಅಭಿವೃದ್ಧಿಯಲ್ಲಿ . ಕೆನತ್‌ ಥಾಂಸನ್‌ ತೊಡಗಿದ್ದರು. ಮುಂದೆ ಅದನ್ನು  ಸುಧಾರಣೆಗೊಳಿಸಿ ಬಿ ಲಾಂಗ್ವೇಜ್‌ ಎಂದು ಅವರು 1969ರಲ್ಲಿ ಪ್ರಸ್ತುತಪಡಿಸಿದರು.

ಯಾವುದಾರೂ ಒಂದು  ಪ್ರೋಗ್ರಾಮಿಂಗ್‌ ಲಾಂಗ್ವೇಜಿನಲ್ಲಿ ನಾವು ಬರೆದ ಕೋಡನ್ನು ಮೊದಲಿಗೆ ಅಸೆಂಬ್ಲಿ ಲಾಂಗ್ವೇಜಿಗೆ ನಂತರ ಕಂಪ್ಯೂಟರ್‌ ಹಾರ್ಡವೇರಿಗೆ ಅರ್ಥವಾಗುವ ಮೆಷಿನ್‌ ಲಾಂಗ್ವೇಜಿಗೆ ಬದಲಾಯಿಸಿಕೊಡಬೇಕಾಗುತ್ತದೆ, ತದನಂತರ ಅದನ್ನು ಕಂಪ್ಯೂಟರ್‌ನ ಸಿಪಿಯು ವಿಶ್ಲೇ಼ಷಣೆ/ ಸಂಶ್ಲೇಷಣೆ  ಮಾಡಿ ಮೆಷಿನ್‌ ಲಾಂಗ್ವೇಜಿನಲ್ಲಿ ವಾಪಸ್ಸು ನೀಡುತ್ತದೆ. ಅದಾದ ಮೇಲೆ ಈ ಫಲಿತಾಂಶವನ್ನು ಮೆಷಿನ್‌ ಲಾಂಗ್ವೇಜಿನಿಂದ ಅಸೆಂಬ್ಲಿ ಲಾಗ್ವೇಜಿಗೆ ತಂದು ನಂತರ ಮಾನವ ಗ್ರಹಿಕೆಯ ರೂಪಕ್ಕೆ ಬದಲಾಯಿಸಬೇಕಾಗುತ್ತದೆ. ಎಕ್ಸಿಕ್ಯೂಷನ್‌ ಎನ್ನುವ ಈ ಚಟುವಟಿಕೆಯನ್ನು ನಡೆಸುವ ಸಾಫ್ಟ್‌ ವೇರನ್ನು ಕಂಪೈಲರ್‌ ಎಂದು ಕರೆಯುತ್ತಾರೆ. ಹೀಗೆ ಕಂಪೈಲರುಗಳು ಕಂಪ್ಯೂಟರ್‌ ಭಾಷೆಯೆ ಅನುವಾದಕಗಳಾಗಿ, ದುಭಾಷಿಗಳಾಗಿ ವರ್ತಿಸುತ್ತವೆ.. ಮಲ್ಟೆಕ್ಸ್ ಓಎಸ್‌ ಗೆ ಅಗತ್ಯವಾದ  ಇಂತಹ ಕಂಪೈಲರನ್ನು ಈ ರಿಚ್ಚಿ ಥಾಂಸನ್ ಜೋಡಿ ಮೊದಲಿಗೆ ಅಭಿವೃದ್ಧಿಪಡಿಸಿತು.

  

 ಕಂಪ್ಯೂಟರ್‌ ಪ್ರೋಗ್ರಾಮ್‌ ಕೋಡ್‌ ಬರೆಯಲು ಬಳಸುವ ಮಾಹಿತಿ ರೂಪವನ್ನು ಡೇಟಾ ಟೈಪ್‌ ಎಂದು ಕರೆಯಲಾಗುತ್ತದೆ. ಅಕ್ಷರಗಳನ್ನು cha̧r  ಸಂಖ್ಯೆಗಳನ್ನು iņt  ಅಕ್ಷರಗಳನ್ನು ಸಂಖ್ಯೆಗಳೊಂದಿಗೆ  ಹೊಸೆದ ದಾರರೂಪವನ್ನು striņg,  ದಶಮಾಂಶವನ್ನು floa̧t. ನಿಜ/ಸುಳ್ಳು, ಸರಿ/ತಪ್ಪು Boolean  ಎಂದು ಕೋಡಿನಲ್ಲಿ ಸೂಚಿಸಲಾಗುತ್ತದೆ. ಇವೇ ಮುಂತಾದ ಡೇಟಾ ಟೈಪುಗಳ ಕೊಡುಗೆ ನೀಡಿದ್ದು ಮತ್ತು ಕಂಪ್ಯೂಟರಿನ ಭಾಷೆಯ ಅನೇಕ ವ್ಯಾಕರಣ ಸಿದ್ಧಾಂತಗಳನ್ನು ರೂಪಿಸಿದ್ದು  ರಿಚ್ಚಿ ಮತ್ತು ಥಾಂಸನ್ ಜೋಡಿಯೇ. 

ಮುಂದೆ ಡೇನಿಸ್‌ ರಿಚ್ಚಿ ಮತ್ತು ಕೆನತ್‌ ಥಾಂಸನ್ ಜೋಡಿಯು ಆರಂಭದಲ್ಲಿ ಬಿ ಲಾಂಗ್ವೇಜನ್ನು ಬಳಸಿಕೊಂಡು ಮೂಲ ಯುನಿಕ್ಸ್‌ ಆಪರೇಟಿಂಗ್‌ ಸಿಸ್ಟಂವನ್ನು ಅಭಿವೃದ್ಧಿ ಪಡಿಸುವುದರೊಂದಿಗೆ  ಕಂಪ್ಯೂಟರ್‌ ಜಗತ್ತಿಗೆ ಅಮೂಲ್ಯ ಕೊಡುಗೆಯನ್ನು ನೀಡಿತು.  ಬಹಳ ಮಹತ್ತರ ವಿಚಾರವೆಂದರೆ ಬಿ ಲಾಂಗ್ವೇಜನ್ನು ಆಧರಿಸಿ ಮುಂದೆ ರಿಚ್ಚಿ ಅಭಿವೃದ್ಧಿ ಪಡಿಸಿದ  ಹೊಸ ಭಾಷೆಗೆ ಸಿ ಎಂದು ನಾಮಕರಣ ಮಾಡಿ 1972 ಪ್ರಸ್ತುತಪಡಿಸಲಾಯಿತು.  ಇದರೊಂದಿಗೆ  ಕಂಪ್ಯೂಟರ್‌ ಜಗತ್ತಿನ ಒಂದು ಕ್ರಾಂತಿಕಾರಕ ಬೆಳವಣಿಗೆಯೇ ಆಯಿತು.  ಏಕೆಂದರೆ ಇಂದು ವ್ಯಾಪಕವಾಗಿ ಬಳಕೆಯಲ್ಲಿರುವ C+̧̧+ Ç#̤ Cocoa java̤ java scripţ  Python ̧  Peŗļ ̧   PHP ಮುಂತಾದವುಗಳಿಗೆ ಆಧಾರ C ನೇ ಆಗಿದೆ.  ಯಾವುದೇ ಕಂಪ್ಯೂಟರಿಗೆ ಹೊಂದಿಕೆಯಾಗುವ (Portability)  C ನ ವಿಶೇಷ ಗುಣ ಇಂದು ಜಗತಿನಾದ್ಯಂತ ಕಂಪ್ಯೂಟರುಗಳು C ಯನ್ನು ಬಳಸುವಂತಾಗಿದೆ. ಯಾವುದೇ ಕಂಪ್ಯೂಟರ್‌ ಲಾಂಗ್ವೇಜ್‌ ಕಲಿಯಬೇಕಾದವರಿಗೆ C ಪ್ರಾಥಮಿಕವಾದ ಬಾಲಬೋಧೆ ಆಗಿದೆಯೆಂದರೆ ತಪ್ಪಲ್ಲ. ನಮಗೆ ಇಂತಹ ʼಸಿಹಿʼ ನೀಡಿ, ಇಂದಿನ ಕಂಪ್ಯೂಟರ್‌ ಸಾಫ್ಟ್‌ ವೇರ್‌ ಅಭಿವೃದ್ಧಿಗೆ ಅಗತ್ಯವಾದ  ತಳಪಾಯವನ್ನು ಇರಿಸಿದವರು ಡೇನಿಸ್‌ ರಿಚ್ಚಿ. ಇವೆಲ್ಲಕ್ಕಿಂತ ಹೆಚ್ಚಿನದೆಂದರೆ ಡೇನಿಸ್‌ ರಿಚ್ಚಿ C ಯನ್ನು ಓಪನ್‌ ಸೋರ್ಸಿನಿಲ್ಲಿರಿಸಿದ್ದು. ಅಂದರೆ  ಬಡವ ಬಲ್ಲಿದರೆನ್ನದೆ ಜಗತ್ತಿನ  ಯಾವುದೇ ಮೂಲೆಯ ವ್ಯಕ್ತಿ ರೂಪಾಯಿ ಖರ್ಚಿಲ್ಲದೆ ಕೋಡನ್ನು ಬರೆಯಬಹುದು, ತಿದ್ದಬಹುದು, ಉಚಿತವಾಗಿ ಸಾಫ್ಟವೇರ್‌ ಬಳಸಬಹುದು,  ಎಂಬ ಕಲ್ಪನೆಗೆ ನಾಂದಿ ಹಾಡಿದ್ದು ಒಂದು ಪುರಷಾರ್ಥವೆಂದರೆ ತಪ್ಪಲ್ಲ. ರಿಚ್ಚಿಯಂತಹವರ ಕೊಡುಗೆಗಳನ್ನು ಜಾಣತನದಿಂದ ವ್ಯವಾಹಾರಿಕವಾಗಿ  ಬಳಸಿಕೊಂಡು ಬಿಲಿಯನೇರುಗಳಾದ  ಬಿಲ್‌ ಗೇಟ್ಸ್‌ ಮತ್ತು ಸ್ಟೀವ್‌ ಜಾಬ್ಸ್‌ ಗೆ ಹೋಲಿಸಿದರೆ  ಜನಮಾನಸದಲ್ಲಿ ರಿಚ್ಚಿ ಇಲ್ಲಿ ವಿಭಿನ್ನವಾಗಿ  ಎತ್ತರದಲ್ಲಿ ನಿಲ್ಲುತ್ತಾರೆ. ರಿಚ್ಚಿಯವರ  ಸಂಶೋಧನೆಯ ಉದ್ಧೇಶ ರಿಚ್‌ ಅಂಡ್‌ ಫೇಮಾಗುವುದಲ್ಲ.  ಬದಲಾಗಿ ಅದೊಂದು ಕುತೋಹಲ ತಣಿಸುವ ಜ್ಞಾನಾರ್ಜನೆಯ ತಪಸ್ಸು, ಜನಸೇವೆ.  ವರ್ಡ್‌ ಪ್ರೊಸಸರನ್ನು ಅಭಿವೃದ್ಧಿ ಪಡಿಸಲೆಂದು ರಿಚ್ಚಿ ಮತ್ತು ಥಾಂಸನ್ನ ಜೋಡಿಯು ತಮಗೆ  ನೀಡಿದ್ದ ಸಂಪನ್ಮೂಲಗಳನ್ನು ಬಳಸಿಕೊಂಡು ಯಾವುದೇ ಖರ್ಚಿಲ್ಲದೇ ಉಪ ಉತ್ಪನ್ನವೆನ್ನುವ ಹಾಗೆ ಅಭಿವೃದ್ಧಿ ಪಡಿಸಲಾದ ಯುನಿಕ್ಸ್ ಮತ್ತು ಸಿ ‌ ಇಲ್ಲದೆಯೆ ಇಂದಿನ  ಕಂಪ್ಯೂಟರ್‌ ಜಗತ್ತನ್ನು ಕಲ್ಪಿಸಿಕೊಳ್ಳುವುದೆ ಕಷ್ಟವೆನ್ನಬಹುದು.

#include <stdio.h>

                     int main()

           {   

    int number1, number2, sum;   

       printf("Enter two integers: ");

              scanf("%d %d", &number1, &number2);

                 // calculate the sum

                 sum = number1 + number2;        

    printf("%d + %d = %d", number1, number2, sum);

    return 0;

           }

ಎರಡು ಅಂಕೆಗಳ ಮೊತ್ತ ಕಂಡು ಹಿಡಿಯುವ ಒಂದು ಸರಳ ಕೋಡ್‌, ಸಿ ಲಾಂಗ್ವೇಜಿನಲ್ಲಿ.

      ಬಿ ಲಾಂಗ್ವೇಜಿನಲ್ಲಿದ್ದ ಯುನಿಕ್ಸ್‌ ಓಎಸನ್ನು ಮುಂದೆ ರಿಚ್ಚಿಯು ಸಂಪೂರ್ಣವಾಗಿ  ಸಿ ಲಾಂಗ್ವೇಜಿನಲ್ಲಿ ಬರೆದು ಮೇಲ್ದರ್ಜೆಗೇರಸಿ ಓಪನ್‌ ಸೋರ್ಸಿನಲ್ಲಿರಿಸಿ.ಬಿಡುಗಡೆಗೊಳಿಸಿದರು. ಇಂದು ಯುನಿಕ್ಸನ ಕೆರ್ನಲನ್ನು  ಆಧಾರವಾಗಿ ಹೊಂದಿರುವ ಅದರ ವಿಭಿನ್ನ ಅವತಾರಗಳು ಜಗತ್ತಿನಾಂದ್ಯಂತ ಜನಪ್ರಿಯ ಆಪರೇಟಿಂಗ್‌ ಸಿಂಸ್ಟಂ ಆಗಿವೆ. ಲಿನಿಕ್ಸ್‌, ಫೆದೋರ, ರೆಡ್‌ ಹ್ಯಾಟ್‌, ಉಬುಂಟು ಮತ್ತು ಅದರ ಅವತರಣಿಕೆಗಳು ಮುಂತಾದವು. ಇವೆಲ್ಲವೂ ಉಚಿತ ಆಪರೇಟಿಂಗ್‌ ಸಿಸ್ಟಂಗಳೆನ್ನುವುದನ್ನು ನಾವು ಗಮನಿಸಬೇಕು. ಯುನಿಕ್ಸ್‌ ಅದರ ಅನೇಕ ಅವತಾರಗಳು ಇಂದು ಜಗತ್ತಿನಾಂದ್ಯಂತ ಅನೇಕ ಲ್ಯಾಪ್ ಟಾಪುಗಳು,ಡೆಸ್ಕ್‌ ಟಾಪುಗಳು, ಸರ್ವರುಗಳು, ಮುಂತಾದವುಗಳಲ್ಲಿ ಬಳಕೆಯಲ್ಲಿವೆ. ಯುನಿಕ್ಸಿನ ಕೆರ್ನಲ್ ಎಷ್ಟು ಗಟ್ಟಿ ಮತ್ತು ಸುರಕ್ಷಿತವೆಂದರೆ ಯುನಿಕ್ಸಿನ ಯಂತ್ರಗಳ ಮೇಲೆ ಸೈಬರ್‌ ದಾಳಿ ನಡೆಸುವುದು ಸುಲಭಸಾಧ್ಯವಲ್ಲ.

        ಡೇನಿಸ್‌ ರಿಚ್ಚಿಯವರನ್ನು 1983ರಲ್ಲಿ ಬೆಲ್‌ ಲ್ಯಾಬಿನ ಫೆಲೋ ಎಂದು ನಾಮಕರಣಮಾಡಿ ಗೌರಿವಿಸಲಾಯಿತು. ಅದೇ ವರ್ಷ ಸಿ ಲಾಂಗ್ವೇಜ್‌ ಮತ್ತು ಯುನಿಕ್ಸಿನ ಪ್ರಸ್ತುತಿಗಾಗಿ ರಿಚ್ಚಿ ಮತ್ತು ಥಾಂಸನ್‌ ಜೋಡಿಯನ್ನು ಪ್ರತಿಷ್ಟಿತ ಟ್ಯೂರಿಂಗ್‌ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 1988 ರಲ್ಲಿ ಅಮೇರಿಕಾದ ನ್ಯಾಷನಲ್ ಅಕಾಡೆಮಿ ಆಫ್‌ ಟೆಕ್ನಾಲಜಿಗೆ ಡೇನಿಸ್‌ ರಿಚ್ಚಿ ಸದಸ್ಯರಾಗಿ ಆಯ್ಕೆ ಆದರು. 1999ರಲ್ಲಿ ಅಂದಿನ ಅಮೆರಿಕಾದ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ರವರು  ರಿಚ್ಚಿ ಮತ್ತು ಥಾಂಸನ್‌ ಜೋಡಿಯನ್ನು ಪ್ರತಿಷ್ಟಿತ  ಅಮೆರಿಕಾದ ರಾಷ್ಟ್ರೀಯ ತಾಂತ್ರಿಕ ಪ್ರಶಸ್ತಿ ನೀಡಿ ಗೌರವಿಸಿದರು. ಅವರು ತೀರಿಹೋಗು ಕೆಲವೇ ತಿಂಗಳುಗಳಿಗೆ ಮೊದಲು 2011ರ ಮೇ 19ರಂದು ಜಪಾನ್‌ ಸರ್ಕಾರ ರಾಷ್ಟ್ರೀಯ ಮೆಡಲ್‌ ನೀಡಿ ಅವರನ್ನು ಗೌರಿವಿಸಿತ್ತು.  ತಾಂತ್ರಿಕ ಜಗತ್ತನಲ್ಲಿ ಇಷ್ಟೆಲ್ಲ ಸಾಧಿಸಿದರು ವೈಯಕ್ತಿಕ ಜೀವನದಲ್ಲಿ ಒಂಟಿಯಾಗಿದ್ದ ರಿಚ್ಚಿಯವರು 2011ರ ಅಕ್ಟೋಬರ್‌ 12 ರಂದು ಒಂಟಿಯಾಗಿಯೇ  ಇಹಲೋಕವನ್ನು ತ್ಯಜಿಸಿದರು.  ವಿಶ್ವವಿದ್ಯಾಲಕ್ಕೆ ಸಲ್ಲಿಸಲು ಮರೆತರೋ ಏನೋ, ತಾವು ಪಿಎಚ್ಡಿಗಾಗಿ ಬರೆದಿದ್ದ ಥೀಸಿಸನ್ನು ಸಹ  ಸಲ್ಲಿಸಿರಲಿಲ್ಲ. ಅವರ ಮರಣಾನಂತರ ಸಾರ್ವಜನಿಕರ ಒತ್ತಾಯದ ಮೇರೆಗೆ ಅವರ ಸಹೋದರ ಸಹೋದರಿಯರು ಬಹಳ ಶ್ರಮವಹಿಸಿ ಅವರು ಬರೆದಿಟ್ಟಿದ್ದ ಥೀಸಿಸನ್ನು ಪತ್ತೆ ಮಾಡಿ ವಿಶ್ವವಿದ್ಯಾಲಯಕ್ಕೆ ಸಲ್ಲಸಿದರು!

  

No comments:

Post a Comment