Thursday, April 4, 2024

LIQUID 3 ಎಂಬ ಪವರ್‌ ಹೌಸ್‌ !!!!

 LIQUID 3 ಎಂಬ ಪವರ್‌ ಹೌಸ್‌ !!!! 

                         ಲೇ : ರಾಮಚಂದ್ರ ಭಟ್‌ ಬಿ.ಜಿ. 

ಸರ್‌, ಇದು ದ್ರವ ರೂಪೀ ವೃಕ್ಷ ಭವಿಷ್ಯದ ಪವರ್‌ ಹೌಸ್‌ !!!

ಇತ್ತೀಚೆಗೆ ನಾನು ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ತೀರ್ಪುಗಾರನಾಗಿ ಭೇಟಿ ನೀಡಿದ್ದೆ. ಅಲ್ಲಿ ವಿದ್ಯಾರ್ಥಿನಿಯೊಬ್ಬಳು ಈ ರೀತಿ ಹೇಳಿದಾಗ ಒಂದು ಕ್ಷಣ ಅವಾಕ್ಕಾದೆ !!! ಇದೇನು ರೀಲ್‌ ಬಿಡ್ತಾ ಇದ್ದಾಳಾ? ಅಥವಾ ನಮ್ಮನ್ನು ಯಾಮಾರಿಸುತ್ತಾ ಇದ್ದಾಳೇನು? ಎಂದು ಯೋಚಿಸುವಂತಾಯಿತು. ನೀವೂ ಆ ರೀತಿ ಯೋಚಿಸದಿರಿ. ನಮ್ಮ ಬದುಕನ್ನು ಪ್ರಭಾವಿಸಬಲ್ಲ ೨೦೨೧ರ ಅದ್ಭುತ ಆವಿಷ್ಕಾರದ ಕುರಿತ ಮಾದರಿಯೊಂದನ್ನು ತಂಡವೊಂದು ಪ್ರದರ್ಶಿಸಿತ್ತು. ಬಯೋ ರಿಯಾಕ್ಟರ್‌ -ಲಿಕ್ವಿಡ್‌ ಟ್ರೀ ಎಂಬ ಪರಿಕಲ್ಪನೆಯೊಂದು ನನ್ನ ಗಮನ ಸೆಳೆಯಿತು. ದ್ರವ ರೂಪದ ವೃಕ್ಷಸಸ್ಯ !! ಇದು ಸಾಧ್ಯವೇ? ಇದು ಭವಿಷ್ಯದ ಶಕ್ತಿಯ ಮುಗ್ಗಟ್ಟನ್ನು ಎದುರಿಸಲು ಸೂಕ್ತ ಉಪಾಯ ಎಂದು ಅನಿಸಿತು. ಈ ಕುರಿತು ಒಂದಷ್ಟು ಮಾಹಿತಿ ಸಂಗ್ರಹಿಸಲಾರಂಭಿಸಿದೆ .

ಸರ್ಬಿಯಾವು 2020 ರಲ್ಲಿ ವಿಶ್ವದ 28 ನೇ ಮಾಲಿನ್ಯಕಾರಕ ಗಾಳಿಯನ್ನು ಹೊಂದಿರುವ ದೇಶವಾಗಿತ್ತು.  ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಗಾಳಿ ಗುಣಮಟ್ಟದ ಮಾರ್ಗಸೂಚಿ ಮೌಲ್ಯಕ್ಕಿಂತ 4.9 ಪಟ್ಟು ಹೆಚ್ಚು ಮಲಿನತೆಯನ್ನು ಅಲ್ಲಿನ ಗಾಳಿ ಹೊಂದಿತ್ತು ಸರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ ವಿಶ್ವದ ಅತಿ ಮಾಲಿನ್ಯಕಾರಿ ನಗರಗಳಲ್ಲಿ ಒಂದು ಎಂಬ ಕುಪ್ರಸಿದ್ಧಿಗೆ ಪಾತ್ರವಾಗಿತ್ತು. ಇಂತಹ ಹಣೆಪಟ್ಟಿ ಕಳಚುವುದು ಹೇಗೆ ಎಂಬುದೇ ಅಲ್ಲಿನ ಆಡಳಿತಗಾರರಿಗಿದ್ದ ದೊಡ್ಡ ತಲೆನೋವಾಗಿತ್ತು..  2019 ರಲ್ಲಿ, ಜಾಗತಿಕ ಆರೋಗ್ಯ ಮತ್ತು ಮಾಲಿನ್ಯ ಕ್ಕಾಗಿ ಹುಟ್ಟು ಹಾಕಲಾದ ಸಂಘಟನೆ (Global Alliance for Health and Pollution) ಸಂಸ್ಥೆಯು ಮಾಲಿನ್ಯ ಮತ್ತು ಆರೋಗ್ಯ ಸೂಚಕಗಳ ವಿಶ್ವ, ಪ್ರಾದೇಶಿಕ ಮತ್ತು ದೇಶಗಳ ವರದಿಯ ವಿಶ್ಲೇಷಣೆಯನ್ನು ಪ್ರಕಟಿಸಿತು. ಈ ವರದಿಯಲ್ಲಿ, ಸರ್ಬಿಯಾ ಯುರೋಪ್‌ನಲ್ಲಿ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹೆಚ್ಚು ಸಾವುಗಳನ್ನು ಹೊಂದಿರುವ ನಂಬರ್‌ 1 ದೇಶವಾಗಿತ್ತು. ಪ್ರತಿ 100,000 ಜನರಿಗೆ 175 ಸಾವುಗಳು ಸಂಭವಿಸುತ್ತಿದ್ದವು.  ಒಟ್ಟಾರೆಯಾಗಿ, ಸರ್ಬಿಯಾವು ಗಂಭೀರವಾದ ಗಾಳಿ ಮಾಲಿನ್ಯದ ಸಮಸ್ಯೆಯನ್ನು ಹೊಂದಿತ್ತು.

 ಹಲವು ಬಗೆಯ ಪ್ರಯೋಗಗಳು ನಡೆಯುತ್ತಲೇ ಇದ್ದವು.  ಆದರೂ ನಿರೀಕ್ಷಿತ ಫಲ ಸಿಗುತ್ತಿಲ್ಲ.  ಆಗ ಅಲ್ಲಿನ ಜೀವವಿಜ್ಞಾನಿಯಾದ ಡಾ. ಇವಾನ್ ಸ್ಪಾಸೊಜೆವಿಕ್  ಮೊದಲ ಯಶಸ್ಸನ್ನು ಕಂಡರು. ಅವರು ವಿನ್ಯಾಸ ಮಾಡಿದ LIQUID 3  ಎಂಬ ಸಂಶೋಧನೆಗೆ - ಅದರ ಸೃಜನಾತ್ಮಕ, ಪ್ರಾಯೋಗಿಕ ಮತ್ತು ನವೀನ ವಿನ್ಯಾಸದ ಕಾರಣದಿಂದಾಗಿ, UNDP, ಪರಿಸರ ಸಂರಕ್ಷಣೆ ಸಚಿವಾಲಯ ಮತ್ತು ಜಾಗತಿಕ ಪ್ರಾಯೋಜಕತ್ವದಿಂದ ರಚಿಸಲಾದ ಕ್ಲೈಮೇಟ್ ಸ್ಮಾರ್ಟ್ ಅರ್ಬನ್ ಡೆವಲಪ್‌ಮೆಂಟ್ ಯೋಜನೆಯಿಂದ 11 ಅತ್ಯುತ್ತಮ ನವೀನ ಮತ್ತು ಹವಾಮಾನ-ಸ್ಮಾರ್ಟ್ ಪರಿಹಾರಗಳಲ್ಲಿ ಒಂದೆಂಬ ಮನ್ನಣೆ ದೊರೆಯಿತು. ಇದೇನು ಹೊಸ ಆವಿಷ್ಕಾರವಲ್ಲ. ಇದರ ವಿವಿಧ ರೂಪಗಳು ಆಗಲೇ ಬಳಕೆಯಲ್ಲಿದ್ದವು. ಆದರೆ ಈ ಬಗೆಯ ದೃಷ್ಟಿಕೋನ ಇರಲಿಲ್ಲವಷ್ಟೇ . ಅದಕ್ಕೇ ಅಲ್ಲವೇ ಹೇಳೋದು “ Necessity is the mother of invention” ಎಂದು . ಪ್ಲೇಟೋ ತನ್ನ “ರಿಪಬ್ಲಿಕ್‌” ಕೃತಿಯಲ್ಲಿ  "our need will be the real creator" ಎಂದು ಹೇಳಿದ್ದಾನೆ. ಸಮಸ್ಯೆ ಸುಳಿದಾಗ ಜ್ಞಾನೋದಯವಾಗಲೇಬೇಕಲ್ಲ ! ಇಂತಹ ವಿಷಮ ಸ್ಥಿತಿ ಬಂದೊದಗಿದಾಗ ಸಮರೋಪಾದಿಯಲ್ಲಿ ಸಂಶೋಧನೆಗಳು ನಡೆಯಲಾರಂಭಿಸಿದವು. ಕಲುಷಿತ ವಾಯುವನ್ನು ಶುದ್ಧೀಕರಿಸುವ ಸಸ್ಯಗಳು ಎಲ್ಲೆಡೆ ಇದ್ದರೆ ಎಷ್ಟು ಚೆನ್ನ?" ಆಗ ಹೊಳೆದದ್ದೇ ಸಿಹಿನೀರಿನ ಕಕೋಶೀಯ ಸೂಕ್ಷ್ಮಶೈವಲಗಳು. ಇವು ಸೆರ್ಬಿಯಾದ ಕೊಳಗಳು ಮತ್ತು ಜಲಾಶಯಗಳಲ್ಲಿ ಯಥೇಚ್ಛವಾಗಿ  ಬೆಳೆಯುತ್ತಿದ್ದವು. ಪರಿಸರದ ವಿವಿಧ ತಾಪಮಾನಗಳಿಗೂ ಹೊಂದಾಣಿಕೆ ಮಾಡಿಕೊಂಡಿದ್ದವು. ಜೊತೆಗೆ ಟ್ಯಾಪ್ ನೀರಿನಲ್ಲಿಯೂ ಎಗ್ಗಿಲ್ಲದೇ ಬೆಳೆದು ಡಾರ್ವಿನ್ನನ survival of fittest  ತತ್ವಕ್ಕೆ ಬದ್ಧವಾಗಿದ್ದದ್ದನ್ನು ಸಾರಿ ಹೇಳುತ್ತಿದ್ದವು. ಇವುಗಳಿಗೆ ಯಾವುದೇ ವಿಶೇಷ ನಿರ್ವಹಣೆ ಅಗತ್ಯವಿರಲಿಲ್ಲ - ಶೈವಲಗಳನ್ನು ಅತ್ಯುತ್ತಮ ಗೊಬ್ಬರವಾಗಿ ಬಳಸಬಹುದು, ಒಂದೂವರೆ ತಿಂಗಳಿಗೊಮ್ಮೆ ನೀರು ಬದಲಾವಣೆ ಮಾಡಿದರೆ ಸಾಕಿತ್ತು.  ವಿಫುಲವಾಗಿ ಬೆಳೆಯುತ್ತಿರುವ ಸೂಕ್ಷ್ಮ ಶೈವಲಗಳನ್ನು ಬಳಸಿ ಪ್ರಸ್ತುತ ಬೃಹದಾಕಾರವಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆಯು ರೂಪಿತವಾಯಿತು. ಸೆರ್ಬಿಯಾದಲ್ಲಿ ಮೈಕ್ರೋಅಲ್ಗೆಗಳ ಬಳಕೆಯನ್ನು ನಪ್ರಿಯಗೊಳಿಸುವ ಮತ್ತು ವಿಸ್ತರಿಸುವ ಗುರಿಯನ್ನು ಹೊಂದಿತ್ತು. ಅವುಗಳನ್ನು ತ್ಯಾಜ್ಯನೀರಿನ ಸಂಸ್ಕರಣೆಯಲ್ಲಿ, ಹೊಲಗಳಲ್ಲಿ ಮಿಶ್ರಗೊಬ್ಬರವಾಗಿ, ಜೀವರಾಶಿ ಮತ್ತು ಜೈವಿಕ ಇಂಧನಗಳ ಉತ್ಪಾದನೆಗೆ ಮತ್ತು ಕಾರ್ಖಾನೆಗಳಿಂದ ಹೊರಬರುವ ನಿಷ್ಕಾಸ ಅನಿಲಗಳಿಂದ ಉಂಟಾಗುವ ಗಾಳಿಯ ಮಾಲಿನ್ಯವನ್ನು ತೊಡೆಯಲೂ ಬಳಸಬಹುದು. ಹಾಗಾಗಿ ಇವುಗಳನ್ನು ದ್ಯುತಿ ಜೈವಿಕ ಸ್ಥಾವರ ಅಥವಾ ಫೋಟೋ ಬಯೋ ರಿಯಾಕ್ಟರ್‌ ಎನ್ನಬಹುದು. ಇದೊಂದು ಅಕ್ವೇರಿಯಂನಂತಹ ವ್ಯವಸ್ಥೆ .

ಆರು ನೂರು ಲೀಟರ್ ನೀರಿನ ಅಕ್ವೇರಿಯಂನಲ್ಲಿ ಬೆಳೆಸಲಾಗುವ ಸೂಕ್ಷ್ಮಶೈವಲಗಳು ಪಾರಿಸಾರಿಕವಾಗಿ ಎರಡು 10 ವರ್ಷ ವಯಸ್ಸಿನ ಮರಗಳು ಅಥವಾ 200 ಚದರ ಮೀಟರ್ ಹುಲ್ಲುಹಾಸು ಉಂಟು ಮಾಡಬಲ್ಲ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಬೃಹತ್ ವೃಕ್ಷಗಳು  ಮತ್ತು ಹುಲ್ಲು ಎರಡೂ ದ್ಯುತಿಸಂಶ್ಲೇಷಣೆಯನ್ನು ನಡೆಸಿ ಕಾರ್ಬನ್‌ ಡೈಆಕ್ಸೈಡ್ ಅನ್ನು ಹೀರುತ್ತವೆ. ಆದಾಗ್ಯೂ, ಮೈಕ್ರೋಅಲ್ಗೆಗಳ ಹಿರಿಮೆ ಎಂದರೆ, ಅವು ಮರಗಳಿಗಿಂತ 10 ರಿಂದ 50 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿವೆ ಎನ್ನುವುದು!!!.  LIQUID 3 ರ ಹಿಂದಿನ ಉದ್ದೇಶ ಅರಣ್ಯಗಳನ್ನು ಅಥವಾ ಮರಗಳನ್ನು ನೆಡುವ ಯೋಜನೆಗಳನ್ನು ಬದಲಿಸುವುದಲ್ಲ, ಆದರೆ ಮರಗಳನ್ನು ನೆಡಲು ಸ್ಥಳಾವಕಾಶವಿಲ್ಲದ ನಗರಗಳ ಪಾರಿಸಾರಿಕ ವ್ಯವಸ್ಥೆಯನ್ನು ಸುಧಾರಿಸುವುದು.  ಬೆಲ್‌ಗ್ರೇಡ್‌ನಂತಹ ತೀವ್ರವಾದ ಮಾಲಿನ್ಯದ ಪರಿಸ್ಥಿತಿಗಳಲ್ಲಿ, ಅನೇಕ ಮರಗಳು ಬದುಕಲು ಸಾಧ್ಯವಿಲ್ಲ!!! ಈ ಮರಗಳೇ ಬದುಕಲೂ ಸಾಧ್ಯವಿಲ್ಲದಂತಹ ಪರಿಸರ ವ್ಯವಸ್ಥೆಯನ್ನು ನಾವು ಸೃಷ್ಟಿಸಿದ್ದೇವೆ ಎಂದರೆ ಮನುಷ್ಯನ ವಿನಾಶಕಾರಿ ಶಕ್ತಿ ಎಷ್ಟಿರಬಹುದು!!! ಆದರೆ ಈ ಸೂಕ್ಷ್ಮ ಶೈವಲಗಳು ಹೆಚ್ಚಿನ ಮಟ್ಟದ ಮಾಲಿನ್ಯವಿದ್ದರೂ ಬದುಕಲು ಯಾವುದೇ ಸಮಸ್ಯೆಯನ್ನು ಹೊಂದಿಲ್ಲ ಎನ್ನುವುದೇ ಸಮಾಧಾನಕರ ಚೇತೋಹಾರಿ ಸಂಗತಿ .

ಲಿಕ್ವಿಡ್ 3 ಅನ್ನು ಬೆಲ್‌ಗ್ರೇಡ್‌ನ ಮೇಕೆಡೊನ್ಸ್ಕಾ ಸ್ಟ್ರೀಟ್‌ನಲ್ಲಿರುವ ಸ್ಟಾರಿ ಗ್ರಾಡ್ ಪುರಸಭೆಯ ಮುಂಭಾಗದಲ್ಲಿ ಇರಿಸಲಾಗಿದೆ, ಇದು ಸದಾ ಗಿಜಿಗುಟ್ಟುವ ನಗರ ಪ್ರದೇಶವಾಗಿದ್ದು, ಅಲ್ಲಿ CO2 ಹೊರಸೂಸುವಿಕೆ ಸಾಂದ್ರತೆಗಳು ಹೆಚ್ಚು. ಇಲ್ಲಿ ಈ LIQUID3 ಯೋಜನೆಯನ್ನು ಬಹುಕ್ರಿಯಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ.  ಇದು ಮೊಬೈಲ್ ಫೋನ್‌ಗಳಿಗೆ ಚಾರ್ಜರ್‌ಗಳನ್ನು ಹೊಂದಿದೆ, ಜೊತೆಗೆ ಸೌರ ಫಲಕವನ್ನು ಹೊಂದಿದೆ, ರಾತ್ರಿಯಲ್ಲೂ ಕಾರ್ಯನಿರ್ವಹಿಸುಂತೆ ಮಾಡಲು ಬೆಳಕಿನ ವ್ಯವಸ್ಥೆಯನ್ನು ಹೊಂದಿದೆ.

ಸೂಕ್ಷ್ಮ ಶೈವಲಗಳ ವಿಶೇಷತೆಯೇನು?

ಇವು ಆಕ್ಸಿಜನ್‌ ಕಾರ್ಖಾನೆಗಳು: ಇವು ದ್ಯುತಿಸಂಶ್ಲೇಷಣೆ (Photosynthesis) ಪ್ರಕ್ರಿಯೆಯನ್ನು ನಡೆಸುತ್ತವೆ. ಆದರೆ ಮರಗಳಿಗಿಂತ ಭಿನ್ನವಾಗಿ, ಸೂಕ್ಷ್ಮ ಶೈವಲಗಳು ಜಾಗದ ಅಗತ್ಯವಿಲ್ಲದೆ ವೇಗವಾಗಿ ಬೆಳೆಯಬಲ್ಲವು ಮತ್ತು ವಾತಾವರಣದಿಂದ ಕಾರ್ಬನ್‌ ಡೈ ಆಕ್ಸೈಡ್‌ ಹೀರಿ ನಮಗೆ ಉಸಿರಾಡಲು ಆಕ್ಸಿಜನ್‌ ಒದಗಿಸುತ್ತವೆ . ಈ ಮೂಲಕ ಗಾಳಿಯನ್ನು ಸ್ವಚ್ಛಗೊಳಿಸುವಲ್ಲಿ ಪರಿಣಾಮಕಾರಿಯಾಗಿವೆ.

  • ಪೋಷಕಾಂಶಗಳ ಕಣಜ : ಸೂಕ್ಷ್ಮ ಶೈವಲಗಳು ಪ್ರೋಟೀನ್‌ಗಳು, ವಿಟಮಿನ್‌ಗಳು ಮತ್ತು ಕೊಬ್ಬಿನಾಮ್ಲಗಳಂತಹ ಅನೇಕ ಪೌಷ್ಟಿಕ ಸೂಕ್ಷ್ಮ ಪೋಷಕಾಂಶಗಳ ಉತ್ತಮ ಕರಗಳಾಗಿವೆ.
  • ಜೈವಿಕ ಇಂಧನದ ಭವಿಷ್ಯ : ಸೂಕ್ಷ್ಮ ಶೈವಲಗಳುಗಳನ್ನು ಜೈವಿಕ ಇಂಧನವನ್ನಾಗಿ ಪರಿವರ್ತಿಸಬಹುದು, ಇದು ಪರಿಸರ ಸ್ನೇಹಿ ಇಂಧನ ಮೂಲವಾಗಿವೆ.
  • ತಾಪ ನಿಯಂತ್ರಕ : ಸೂಕ್ಷ್ಮ ಶೈವಲಗಳು ವಾತಾವರಣದಿಂದ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತವೆ, ಇದರಿಂದ ಹಸಿರುಮನೆ ಪರಿಣಾಮವನ್ನು ನಿಯಂತ್ರಿಸುತ್ತವೆ.

ಇಷ್ಟೇ ಅಲ್ಲದೆ ಸೂಕ್ಷ್ಮ ಶೈವಲಗಳ ಅನ್ವಯಗಳು ಅಪಾರ 

  • ಆಹಾರ ಮತ್ತು ಪಾನೀಯ ಉದ್ಯಮಗಳಲ್ಲಿ : ಸ್ಪೈರುಲಿನಗಳಂತಹ ಸೂಕ್ಷ್ಮ ಶೈವಲಗಳು ಪ್ರೋಟೀನ್‌, ಖನಿಜಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇವನ್ನು ಆರೋಗ್ಯಕರ ಪಾನೀಯಗಳಲ್ಲಿ ಬಳಸಲಾಗುತ್ತದೆ.
  • ಮೀನು ಸಾಕಣೆ : ಮೀನುಗಳಿಗೆ ಆಹಾರವಾಗಿ ಸೂಕ್ಷ್ಮ ಶೈವಲಗಳನ್ನು ಬಳಸಲಾಗುತ್ತದೆ.
  • ಕಾಸ್ಮೆಟಿಕ್ ಉದ್ಯಮ : ಚರ್ಮದ ಆರೈಕೆ ಉತ್ಪನ್ನಗಳಲ್ಲಿ ಸೂಕ್ಷ್ಮ ಶೈವಲಗಳುಗಳನ್ನು ಬಳಸಲಾಗುತ್ತದೆ.
    ಸೂಕ್ಷ್ಮ ಶೈವಲಗಳು ತಂತ್ರಜ್ಞಾನದ ಉಗಮ :

ಸೂಕ್ಷ್ಮ ಶೈವಲಗಳ ಬಳಕೆ ಶತಮಾನಗಳಿಂದಲೂ ತಿಳಿದಿದೆ. 17 ನೇ ಶತಮಾನದಲ್ಲಿ ಲೀವನ್‌ ಹುಕ್‌ (Anton van Leeuwenhoek ) ಅವರು ಸೂಕ್ಷ್ಮದರ್ಶಕವನ್ನು ಕಂಡುಹಿಡಿದ ನಂತರ ಅವುಗಳನ್ನು ವಿವರವಾಗಿ ಅಧ್ಯಯನಕ್ಕೆ ವೇದಿಕೆಯೊಂದು ಸೃಷ್ಟಿಯಾಯಿತು. 20 ನೇ ಶತಮಾನದಲ್ಲಿ, ವಿಜ್ಞಾನಿಗಳು ಸೂಕ್ಷ್ಮ ಶೈವಲಗಳು ಆಹಾರ ಮತ್ತು ಇಂಧನಕ್ಕೆ ಒಂದು ಉತ್ತಮ ಮೂಲವಾಗಬಹುದು ಎಂದು ಕಂಡುಹಿಡಿದರು.

ಸೂಕ್ಷ್ಮ ಶೈವಲಗಳು ತಂತ್ರಜ್ಞಾನದ ಉಗಮದಲ್ಲಿ ಕೆಲವು ಪ್ರಮುಖ ಹಂತಗಳು:

  • 1940 ರ ದಶಕ : ವಿಜ್ಞಾನಿಗಳು ಕ್ಲೋರೆಲ್ಲ - Chlorella ಸೂಕ್ಷ್ಮ ಶೈವಲಗಳನ್ನು ಬೆಳೆಸಲು ಪ್ರಾರಂಭಿಸಿದರು.
  • 1950 ರ ದಶಕ : Spirulina ಸೂಕ್ಷ್ಮ ಶೈವಲಗಳನ್ನು ಆಹಾರ ಪೂರಕವಾಗಿ ಬಳಸಲು ಪ್ರಾರಂಭಿಸಲಾಯಿತು.
  • 1970 ರ ದಶಕ : ಸೂಕ್ಷ್ಮ ಶೈವಲಗಳಿಂದ ಜೈವಿಕ ಇಂಧನವನ್ನು ಉತ್ಪಾದಿಸುವ ಸಂಶೋಧನೆ ಪ್ರಾರಂಭವಾಯಿತು.
  • 1980 ರ ದಶಕ : ಸೂಕ್ಷ್ಮ ಶೈವಲಗಳನ್ನು ಕಾರ್ಬನ್ ಡೈಆಕ್ಸೈಡ್ ಪ್ರಮಾಣವನ್ನು ತಗ್ಗಿಸಲು ಬಳಸಬಹುದು ಎಂದು ಕಂಡುಹಿಡಿಯಲಾಯಿತು.
  • 1990 ರ ದಶಕ : ಸೂಕ್ಷ್ಮ ಶೈವಲಗಳನ್ನು ಬೆಳೆಸಲು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಯಿತು.
  • 2000 ರ ದಶಕ : ಸೂಕ್ಷ್ಮ ಶೈವಲಗಳ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಲು ಪ್ರಾರಂಭವಾಯಿತು.
  • 2010 ರ ದಶಕ : ಸೂಕ್ಷ್ಮ ಶೈವಲಗಳ ತಂತ್ರಜ್ಞಾನವು ವಾಣಿಜ್ಯೀಕರಣಗೊಳ್ಳಲು ಪ್ರಾರಂಭವಾಯಿತು.

ಇಂದು, ಸೂಕ್ಷ್ಮ ಶೈವಲಗಳನ್ನು ಬಳಸುವ ತಂತ್ರಜ್ಞಾನವು ತ್ವರಿತವಾಗಿ ಬೆಳೆಯುತ್ತಿದೆ. ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಸೂಕ್ಷ್ಮ ಶೈವಲಗಳನ್ನು ಬೆಳೆಸಲು ಮತ್ತು ಅವುಗಳಿಂದ ಉತ್ಪನ್ನಗಳನ್ನು ಉತ್ಪಾದಿಸಲು ಹೊಸ ಮತ್ತು ಹೆಚ್ಚು ಪರಿಣಾಮಕಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಹಾಗಾಗಿ ತಂತ್ರಜ್ಞಾನ ಮತ್ತು ಪಾರಿಸಾರಿಕ ಅಂಶಗಳ ಸಮನ್ವಯವುಳ್ಳ ಇವು ಭವಿಷ್ಯದ ಪವರ್‌ ಹೌಸ್‌ ಎಂಬ ಅಭಿಧಾನಕ್ಕೆ ಪಾತ್ರವಾಗಿರುವುದರಲ್ಲಿ ಯಾವುದೇ ಹೆಚ್ಚುಗಾರಿಕೆ ಇಲ್ಲ.

6 comments: