Saturday, May 4, 2024

ಎಲ್ ನಿನೋ ಮತ್ತು ಲಾ ನಿನಾ ವಿದ್ಯಮಾನ

 ಎಲ್ ನಿನೋ ಮತ್ತು ಲಾ ನಿನಾ  ವಿದ್ಯಮಾನ 

ಲೇಖಕರು : ಬಿ ಎನ್ ರೂಪ,   ಸಹ  ಶಿಕ್ಷಕರು,

                                                   ಕೆಪಿಎಸ್ ಜೀವನ್ ಭೀಮ ನಗರ ,

                                                   ಬೆಂಗಳೂರು ದಕ್ಷಿಣ ವಲಯ -4.    


ಓಹೋ ಏನು ಬಿರು ಬಿಸಿಲು ?

 ಎಂಥಾ   ಸೆಕೆ ಬಿಸಿಲಿನ ಬರ ಸಿಡಿಲು,

  ಬಿಸಿಲಿನ ಶಾಖ ತಡೆಯಲು ಅಸಾಧ್ಯ,

 ಸೂರ್ಯನ ಕೋಪವೇ ಇದು.

 

ಹವಾಮಾನದ ವೈಪರಿತ್ಯವೇ ?

 ಪ್ರಕೃತಿ ಮಾತೆಯ ಕೋಪವೇ ?

ಬಿಸಿಲಿನ  ಝಳ ಅಸಾಧ್ಯ,

ಸೂರ್ಯನ ಕೋಪವೇ ಇದು.

 

ಶಾಖ ಬಿಸಿಲಿನ ಝಳದಿಂದ ಜನ ಜೀವನ ತತ್ತರ,

 ಹಸಿರು ಸಸ್ಯ, ಪ್ರಾಣಿ, ಪಕ್ಷಿ ಸಂಕುಲ ಮಾನವನಾದಿಗು ನೀರಿಗೂ ತತ್ವಾರ ,

ಬಿರುಬಿಸಿಲಿನ  ಝಳ ಅಸಾಧ್ಯ,

ಸೂರ್ಯನ ಕೋಪವೇ ಇದು.

ಈ ಪೀಠಿಕೆಯಿಂದ ಒಂದು ಅಂಶ ನಿಖರವಾಗಿ  ತಿಳಿದುಬರುವುದೇನೆಂದರೆ ಪರಿಸರದ ವೈಪರಿತ್ಯಗಳನ್ನು ನಾವು ತಡೆಯಲು ಅಸಾಧ್ಯ. ಮಾನವನ ಜನಾಂಗವು ತಂತ್ರಜ್ಞಾನ ,ವೈಜ್ಞಾನಿಕ ಕ್ಷೇತ್ರ, ವಿದ್ಯುನ್ಮಾನ, ಕೃತಕ ಬುದ್ಧಿಮತ್ತೆ , ಇತ್ಯಾದಿ ಕ್ಷೇತ್ರಗಳಲ್ಲಿ ಎಷ್ಟೇ  ಪ್ರಗತಿ ಸಾಧಿಸಿದರು  ಪ್ರಕೃತಿ ಮಾತೆ ಮುಂದೆ ನಾವು ಅಸಹಾಯಕರು .

 ಎಲ್ ನಿನೋ  ಮತ್ತು ಲಾ ನಿನಾ ಎಂಬ  ವಿದ್ಯಮಾನಗಳ ಬಗ್ಗೆ  ಈಗ ಚರ್ಚಿಸಲಿದ್ದೇವೆ. ಏನಿದು ಇದು ಹೆಸರುಗಳ ಅಥವಾ ದೇಶ ರಾಷ್ಟ್ರಗಳ ಹೆಸರೇ ಎಂಬ ಸಂಶಯ ಬರುವುದು ಸಹಜ. ಆದರೆ ಇವು ವಾತಾವರಣದ ವೈಪರಿತ್ಯದ ವಿದ್ಯಮಾನಗಳಾಗಿವೆ. ಹವಾಮಾನ  ವೈಫರಿತ್ಯದ ವಿದ್ಯಮಾನಗಳ ದ್ಯೋತಕವಾಗಿದೆ  ಈ ಪದಪುಂಜಗಳು. 

ಎಲ್ ನಿನೋ ಎಂದರೆ ಸ್ಪ್ಯಾನಿಷ್ ಭಾಷೆಯಲ್ಲಿ ಪುಟ್ಟ ಹುಡುಗ ಎಂದರ್ಥ. ದಕ್ಷಿಣ ಅಮೇರಿಕನ್ ಮೀನುಗಾರರು 1600 ರ ದಶಕದಲ್ಲಿ  ಶಾಂತ ಮಹಾಸಾಗರದಲ್ಲಿ ಅಸಾಮಾನ್ಯವಾಗಿ ಬೆಚ್ಚಗಿನ ನೀರಿನ ಅವಧಿಗಳನ್ನು ಗಮನಿಸಿದರು. ಅವರು ಬಳಸಿದ ಪೂರ್ಣ ಹೆಸರು ಎಲ್ ನಿನೊ ಡಿ ನಾವಿಡಾಡ್ . ಎಲ್ ನಿನೊ ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಉತ್ತುಂಗಕ್ಕೇರುತ್ತದೆ.

ಎಲ್ ನಿನೋ ಎಂಬುದು ಹವಾಮಾನ ವಿದ್ಯಮಾನವಾಗಿದ್ದು, ಮಧ್ಯ ಮತ್ತು ಪೂರ್ವ  ಶಾಂತ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ತಾಪಮಾನದ ಉಷ್ಣತೆಯಿಂದ ಉಂಟಾಗಿದೆ. ಇದು ಭಾರತ ಸೇರಿದಂತೆ ಜಾಗತಿಕ  ಹವಾಮಾನ ಬದಲಾವಣೆಗಳ ಮೇಲೆ ಗಮನಾರ್ಹ ಪರಿಣಾಮವನ್ನು ಹೊಂದಿದೆ.  ಎಲ್ ನಿನೊ ಉಪಸ್ಥಿತಿಯು ಈಗ ನಿರ್ದಿಷ್ಟವಾಗಿ, ನಿಖರವಾಗಿ ನಡೆಯುತ್ತಿರುವ ಬದಲಾವಣೆಗಳಿಗೆ  ಅಡ್ಡಿಪಡಿಸಬಹುದು. ಇದು ಅಸಾಮಾನ್ಯ ಹವಾಮಾನ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ.

ಭಾರತದಲ್ಲಿ ಎಲ್  ನಿನೋದಿಂದಾಗಿ ಅತ್ಯಲ್ಪ ಪ್ರಮಾಣದ ಮಳೆ,  ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆ ಉಂಟಾಗುವುದರೊಂದಿಗೆ ಮುಂಗಾರಿನಲ್ಲಿ ಹಿನ್ನಡೆ ಉಂಟಾಗುವುದು. ಸಾಗರದ ತಾಪಮಾನದ ಏರಿಕೆಯಿಂದ  ವಾತಾವರಣದಲ್ಲಿ ಗಾಳಿಯ ಚಲನೆಗೆ  ಅಡ್ಡಿ ಉಂಟು ಮಾಡುತ್ತದೆ. ಈ ವೈಪರೀತ್ಯ ಹಾಗೂ ಬದಲಾವಣೆಯಿಂದಾಗಿ  ಭಾರತದ ಮುಂಗಾರು ಬಹಳ ದುರ್ಬಲ ಗೊಳ್ಳಬಹುದು. ಇದರಿಂದಾಗಿ ಆರ್ದ್ರತೆಯ ಪ್ರಮಾಣ ಕಡಿಮೆಯಾಗಿ ಅತ್ಯಲ್ಪ, ಮಳೆಯಾಗುವುದರಿಂದ ನೀರಿನ ಕೊರತೆ ಉಂಟಾಗುವ ಸಾಧ್ಯತೆಗಳಿವೆ.

ಎಲ್ ನಿನೋಇಂದಾಗಿ ತಾಪಮಾನದ ವೈಪರಿತ್ಯ,ಬಿಸಿ ಗಾಳಿ ,ಬರಗಾಲ, ನೀರಿನ ಕೊರತೆ ಉಂಟಾಗಿರುವುದನ್ನು ನಾವು ನೋಡುತ್ತಿದ್ದೇವೆ. ನಗರ ಅಭಿವೃದ್ಧಿ ಇತರ ದೈನಂದಿನ ಚಟುವಟಿಕೆಗಳಿಗೆ, ಕೆಲವೆಡೆ ಶುದ್ಧ ಕುಡಿಯುವ ನೀರಿನ ಕೊರತೆ, ಮಳೆಯ ಕೊರತೆ, ಅತ್ಯಧಿಕ ತಾಪಮಾನ ಏರಿಕೆಯಿಂದ ತಾಪಮಾನದಲ್ಲಿ ಬದಲಾವಣೆಗಳು, ಈ ಬದಲಾವಣೆಯಿಂದಾಗಿ ಮಾರಕ ರೋಗಗಳು ಹರಡುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ.

ಲಾ ನೀನಾ ಎಲ್  ನಿನೋದ ವಿರುದ್ಧ ಹವಾಮಾನದ ವೈಪರಿತ್ಯ ವಿದ್ಯಮಾನವಾಗಿದೆ.  ಎಲ್  ನಿನೋದ ವಿರುದ್ಧ ಪರಿಣಾಮವನ್ನು ಇದು ಒಳಗೊಂಡಿದೆ .ಮಳೆಗಾಲದಲ್ಲಿ ವಿಪರೀತ ಮಳೆ ಹೆಚ್ಚಿನ ಆರ್ದ್ರತೆ, ತೇವಾಂಶ ಹಾಗೂ ಬರಗಾಲವನ್ನು ಇದು ಕಡಿಮೆ ಮಾಡುತ್ತದೆ. ಇದರಿಂದಾಗಿ ಹೆಚ್ಚು ತಂಪಾದ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಇದು ಕೃಷಿ ಚಟುವಟಿಕೆ, ನೀರಿನ ಸಂಪನ್ಮೂಲ, ನಗರ ಬೆಳವಣಿಗೆ ಹಾಗೂ ಅಭಿವೃದ್ಧಿ, ಕಟ್ಟಡಗಳ ನಿರ್ಮಾಣ ಜನಸಾಮಾನ್ಯರ ಆರೋಗ್ಯದ ಮೇಲೆ  ವ್ಯತಿರಿಕ್ತ ಪರಿಣಾಮ ಉಂಟುಮಾಡುವುದಿಲ್ಲ. ಹೆಚ್ಚಿನ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ಬೆಂಬಲ ಕೊಡುತ್ತದೆ.

ಅಮೃತವು ಹೆಚ್ಚಾದರೆ ವಿಷವಾಗುತ್ತದೆ ಎಂಬ ನಾಣ್ಣುಡಿಯಂತೆ ಹೆಚ್ಚಿನ ಮಳೆಯೂ ಸಹ ಸಾಕಷ್ಟು ತೊಂದರೆಯನ್ನು ಉಂಟುಮಾಡುತ್ತದೆ. ಇತ್ತೀಚೆಗೆ ಗಲ್ಫ್‌ ದೇಶವೊಂದರಲ್ಲಿ ಸುರಿದ ವಿಪರೀತ ಮಳೆಯ ಹಾವಳಿಯನ್ನು ಸ್ಮರಿಸಿಕೊಳ್ಳಬಹುದು.  ಇದು ಜನ ಜೀವನವನ್ನು ಅಸ್ತವ್ಯಸ್ತ  ಮಾಡುವುದರೊಂದಿಗೆ ಕೃಷಿ ಚಟುವಟಿಕೆಗೂ ತೊಂದರೆಯನ್ನುಂಟು ಮಾಡುತ್ತದೆ.

ಭಾರೀ ಮಳೆಯು ಪ್ರವಾಹ ,ಭೂಕುಸಿತಗಳಿಗೆ ಕಾರಣವಾಗುತ್ತದೆ, ವಿಶೇಷವಾಗಿ ಅಸಮರ್ಪಕ ಒಳಚರಂಡಿ ವ್ಯವಸ್ಥೆಯನ್ನು ಹೊಂದಿರುವ ನಗರ ಪ್ರದೇಶಗಳಲ್ಲಿ ಇದು ಕಂಡು ಬರುತ್ತದೆ. ಇದು ಕೃಷಿ  ಭೂಮಿಯಲ್ಲಿ ನೀರು ನಿಲ್ಲಲು ಕಾರಣವಾಗುತ್ತದೆ ಮತ್ತು ನಷ್ಟಕ್ಕೆ ಕಾರಣವಾಗುತ್ತದೆ  ತದನಂತರ ದಿನಸಿ, ಹಣ್ಣು ಹಾಗೂ ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ.

ಲಾ ನಿನಾ ಒಂದು ಹವಾಮಾನ ವಿದ್ಯಮಾನವಾಗಿದ್ದು, ಮಧ್ಯ ಮತ್ತು ಪೂರ್ವ ಶಾಂತ ಮಹಾಸಾಗರದಲ್ಲಿ  ಸರಾಸರಿ ಸಮುದ್ರದ ಮೇಲ್ಮೈ ತಾಪಮಾನಕ್ಕಿಂತ ತಂಪಾಗಿರುತ್ತದೆ.

ಈ ಎರಡೂ ಬಗೆಯ ಹವಾಮಾನದ ವೈಪರೀತ್ಯಗಳು ಸಾಕಷ್ಟು ತೊಂದರೆಗಳಿಗೆ ಕಾರಣವಾಗಿದ್ದರೂ ನಿಸರ್ಗವು ಇವೆರಡರ ನಡುವೆ ತರುವ ಹೊಂದಾಣಿಕೆಯಿಂದ ಅತಿವೃಷ್ಟಿ ಹಾಗು ಅನಾವೃಷ್ಟಿಯ ನಡುವೆ ಸಮತೋಲನವನ್ನು ಉಂಟು ಮಾಡಿದೆ.

 

 

                                                                                                                           

 

 

 

 

                           

 

No comments:

Post a Comment