Saturday, May 4, 2024

ಕಾಡಿನಲ್ಲೊಬ್ಬ ಮೇಟಿ!!!

 ಕಾಡಿನಲ್ಲೊಬ್ಬ ಮೇಟಿ!!!                                      

                                                               ಲೇಖಕರು : ಕೃಷ್ಣ ಚೈತನ್ಯ , 

ವನ್ಯಜೀವಿತಜ್ಞರು     

  ʼಜೈ ಜವಾನ್‌, ಜೈ ಕಿಸಾನ್‌ʼ ಎನ್ನುವುದು ನಮ್ಮ ದೇಶದ ಸರಳ, ಪ್ರಾಮಾಣಿಕ ಮತ್ತು ಸಜ್ಜನ ಮಾಜಿ ಪ್ರದಾನಿ ದಿವಂಗತ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ದ್ಯೇಯ ವಾಕ್ಯ. ದೇಶವನ್ನು ಕಾಯುವ ಸೈನಿಕರನ್ನು ಮತ್ತು ಜನತೆಗೆ ಆಹಾರ ಪದಾರ್ಥಗಳನ್ನು ಬೆಳೆದು ನೀಡುತ್ತಿರುವ ರೈತರನ್ನು ಯಾವಾಗಲು ನೆನೆಯಬೇಕು ಎಂದು ಅವರಿಗೆ ಗೌರವ ನೀಡಿದ ಪರಿ ಅದು. ರೈತರು ಆಹಾರ ಬೆಳೆಯದಿದ್ದರೆ ನಮಗೆಲ್ಲ ಸಾವೇ ಗತಿ. 

ಹಾಗೆಯೇ  ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎಂದು ಸರ್ವಜ್ಞ ಹೇಳಿದ್ದು ಎಷ್ಟೊಂದು ಅರ್ಥ ಪೂರ್ಣ!!!  ಕಾಡಿನಲ್ಲಿ ಮಣ್ಣನ್ನು ಉತ್ತು ಸಮಸ್ತ ಪ್ರಾಣಿಗಳಿಗೆ ಪರೋಕ್ಷವಾಗಿ ಆಹಾರ ಒದಗಿಸುತ್ತಿರುವ ಮೇಟಿಯೊಬ್ಬ ಇದ್ದಾರೆಂದರೆ ಅಚ್ಚರಿಯಾಗದೇ? ಅವರ್ಯಾರು? ಅವರ ಪಾರಿಸಾರಿಕ ಕಾರ್ಯದ ಮಹತ್ವವವೇನು? ಎನ್ನುವುದನ್ನು ನೋಡೋಣ ಬನ್ನಿ.

  ವಿಷ್ಣುವಿನ ಅವತಾರಗಳಲ್ಲಿ ʼವರಾಹʼ ಅವತಾರವು ಒಂದು ಎಂದು ನಾವೆಲ್ಲರೂ ಕಥೆ ಓದಿದ್ದೇವೆ. ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ಗುನುಗದವರಿದ್ದಾರೆ? ವರಾಹ ಎಂದರೆ ಇಂದಿನ ಮಕ್ಕಳಿಗೆ ಗೊತ್ತಿರುವುದಿಲ್ಲ ಎಂದುಕೊಂಡಿದ್ದೇನೆ. ಹಂದಿ ಎನ್ನುವುದು ಅದರ ಅರ್ಥ. ಕಾಡಿನಲ್ಲಿ ಇರುವ ಕಾಡುಹಂದಿಗಳನ್ನು ಕಾಡಿನ ಬೇಸಾಯಗಾರ ಎನ್ನುತ್ತೇವೆ. ಕಾಡಿನಲ್ಲಿ ಇರುವ ಅನೇಕ ಪ್ರಾಣಿಗಳಲ್ಲಿ ಸಸ್ಯಹಾರಿಗಳು ಬಹಳ ಸಂಖ್ಯೆಯಲ್ಲಿರುತ್ತವೆ. ಜಿಂಕೆ, ಕಡವೆ, ಕಾಡುಕುರಿ, ಆನೆ, ಕಾಟಿ, ಮೌಸ್‌ ಡೀರ್‌, ಲಂಗೂರ್‌(ಮುಸುವ), ಕೆಂದಳಿಲು ಪ್ರಮುಖವಾದವು. ಕಾಡುಹಂದಿ ಮಿಶ್ರಹಾರಿ ಪ್ರಾಣಿ. ಇದರ ಆಹಾರ ಹುಲ್ಲು, ಗೆಡ್ಡೆ, ಗೆಣಸು ಮತ್ತು ಸತ್ತ ಪ್ರಾಣಿಗಳ ಮಾಂಸ.

  ಗಂಡು ಮತ್ತು ಹೆಣ್ಣುಗಳ ಮಿಲನದ ನಂತರ ಸುಮಾರು ನೂರ ಹದಿನೈದರಿಂದ ನೂರ ಇಪ್ಪತ್ತು ದಿನಗಳ ಗರ್ಭಾವಸ್ಥೆ ಪೂರೈಸಿ ಹೆಣ್ಣು, ಮರಿಗಳಿಗೆ ಜನ್ಮ ನೀಡುತ್ತದೆ. ಹುಟ್ಟಿದಾಗ ಮರಿಗಳು ವಿಭಿನ್ನವಾದ ಬಣ್ಣ ಮತ್ತು ಮೈಲಕ್ಷಣಗಳನ್ನು ಹೊಂದಿರುತ್ತವೆ. ಅಂದರೆ ಮೈಬಣ್ಣ ತೆಳು ಕಂದು ಬಣ್ಣ ಮತ್ತು ಮೈ ಮೇಲೆ ತೆಳು ಹಳದಿ ಬಣ್ಣದ ಹಲವು ಅಡ್ಡವಾಗಿರುವ ಗೆರೆಗಳನ್ನು ಹೊಂದಿರುತ್ತವೆ. ಬೆಳೆಯುತ್ತಿದ್ದಂತೆ ಮರಿಗಳ ಮೈಮೇಲಿದ್ದ ಆ ಪಟ್ಟೆಗಳು ಕಣ್ಮರೆಯಾಗುವುರ ಜೊತೆಗೆ ತೆಳು ಕಂದು ಬಣ್ಣವು ಕಡುಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ತಲೆಯ ಮೇಲಿನಿಂದ ಬೆನ್ನಿನವರೆಗೂ ರೋಮಗಳು ದಟ್ಟವಾಗಿದ್ದು, ಇತರ ರೋಮಗಳಿಗಿಂತ ತುಸು ಎತ್ತರವಾಗಿ ಮತ್ತು ನೇರವಾಗಿ ನಿಂತಂತೆ ಇರುತ್ತವೆ. ಗಂಡು ಹಂದಿಗೆ ಎರಡು ಕೋರೆಹಲ್ಲುಗಳು ಬೆಳೆಯುವುದನ್ನು ಕಾಣಬಹುದು. ಹಾಗಾಗಿ ಇದಕ್ಕೆ ವೈಲ್ಡ್‌ ಬೋರ್‌ ಎಂಬ ಆಂಗ್ಲ ಹೆಸರು ಇದೆ. ಇವು ಅರಣ್ಯದ ಜೀವನದಲ್ಲಿ ಕನಿಷ್ಟ ಹದಿನಾಲ್ಕು ವರ್ಷಗಳವರೆಗೆ ಗರಿಷ್ಟ ಇಪ್ಪತ್ತು ವರ್ಷ ಬದುಕಬಲ್ಲವು. ಇದರ ಜೀವಿತಾವಧಿ ಮಾಂಸಹಾರಿ ಪ್ರಾಣಿಗಳ ಮೇಲೆ ಅವಲಂಬಿತವಾಗಿರುವುದು ದುರ್ದೈವ.

  ಕರ್ನಾಟಕದ ಕಾಡುಗಳಲ್ಲಿ ಇರುವ ಇವುಗಳಿಗೆ ಬಹುಶಃ ಪೂರ್ಣವಾದ ಆಯಸ್ಸು ಸಿಕ್ಕಿಲ್ಲವೇನೊ. ಏಕೆಂದರೆ ಆಫ್ರಿಕಾದ ಕಾಡುಗಳಲ್ಲಿ ಕಾಣಸಿಗುವ ಕೋರೆ ಬೆಳದಿರುವ ಗಂಡು ಇಲ್ಲಿ ಕಾಣಸಿಕ್ಕಿಲ್ಲ. ಕಾರಣ ಇಲ್ಲಿರುವ ಅರಣ್ಯಗಳ ರಾಜ ಹುಲಿರಾಯ! ಹುಲಿಗಳ ಇಷ್ಟವಾದ ಆಹಾರಗಳಲ್ಲಿ ಇದೂ ಒಂದು. ಬೆಳೆದ ಕಾಡುಹಂದಿ ಸುಮಾರು ೨೫ ರಿಂದ ೩೦ ಕೆಜಿ, ಕಾಲಿನಲ್ಲಿ ಸೀಳುಪಾದವಿದ್ದು ರಕ್ಷಾಕವಚವಾಗಿ ಗೆರಸಲುಗಳಿವೆ. ಮುಖದ ದುಂಡು ಬಲಿಷ್ಟವಾಗಿದ್ದು ತೇವಬರಿತ ಭೂಮಿಯನ್ನು ಮೀಟಿ ಸೀಳಬಲ್ಲದು. ಈ ರೀತಿ ಸೀಳುವುದರಿಂದ ಇರುವ ಅನುಕೂಲ ಮಾತ್ರ ಅನನ್ಯ. ಸಸ್ಯಹಾರಿಗಳು ಮತ್ತು ಪಕ್ಷಿಗಳು ಹಣ್ಣುಗಳನ್ನು ಸೇವಿಸಿ ಹೊರಹಾಕುವ ಮಲವಿಸರ್ಜನೆಯಲ್ಲಿರುವ ಬೀಜಗಳನ್ನು ಮಣ್ಣಿನ ಒಳಕ್ಕೆ ಸೇರಿಸಿ ಮಣ್ಣನ್ನು ಮುಚ್ಚುವುದು. ಅವು ಮುಂದಿನ ಮಳೆಗಾಲಕ್ಕೆ ಮೊಳೆತು ಸಸಿಯಾಗಲು ನೆರವಾಗುವುದು. ಇದು ಸಾಮಾನ್ಯ ಕೆಲಸವೇನು ಅಲ್ಲ. ಕಾಡು ದಟ್ಟವಾಗಿ ಬೆಳೆದು ನೀಡುವ ಉಪಯೋಗಗಳು ಒಂದಾ ಎರಡಾ? ಹಲವಾರು. ಈ ರೀತಿ ತನಗರಿವಿಲ್ಲದೇ ತನ್ನ ಆಹಾರದ ಹುಡುಕಾಟದಲ್ಲಿ ಭೂಮಿಯನ್ನು ಉಳುಮೆ ಮಾಡುವ ಈ ಪ್ರಾಣಿ ದಟ್ಟವಾದ ಕಾಡು ಬೆಳೆಯಲು ನೆರವಾಗುತ್ತಿರುವುದು ಮಾತ್ರ ಊಹೆಗೆ ನಿಲುಕುವಂತದ್ದಲ್ಲ.

  ಯಾರಾದರು ಸ್ವಲ್ಪ ಹೆಚ್ಚಾಗಿ ಊಟ ಮಾಡಿದರೆ ಏನೊ? ಒಳ್ಳೆ ಹಂದಿ ತಿಂದಂಗೆ ತಿಂತಿಯಲ್ಲ? ಎಂದು ಮೂದಲಿಸುವುದು ಉಂಟು. ಆದರೆ ಕಾಡಿನಲ್ಲಿ ಹೆಚ್ಚಾಗಿ ಆಹಾರ ಎಲ್ಲಿ ಸಿಗಬೇಕು ಹೇಳಿ. ಬೇಸಿಗೆಯಲ್ಲಂತು ಮರಗಳು ಉದುರಿಸುವ ಹಣ್ಣು ಹಂಪಲು, ಕೆರೆ ಅಥವಾ ಹೊಳೆ ಬದಿಯ ಹಸಿ ಹುಲ್ಲಿನ ಬೇರುಗಳೆ ಗತಿ. ಮಣ್ಣನ್ನು ಉಳುಮೆ ಮಾಡಿ ಗೆಡ್ಡೆ-ಗೆಣಸುಗಳನ್ನು ಹುಡುಕಿ ತಿನ್ನುತ್ತದೆ. ಈ ರೀತಿ ಆಹಾರ ಹುಡುಕುವುರಲ್ಲಿ ಮತ್ತೊಂದು ಪ್ರಯೋಜನವೂ ಇದೆ. ಕಾಡಿನಲ್ಲಿರುವ ಹಂದಿಗಳೆಲ್ಲಾ ಅಲ್ಲಲ್ಲಿ ಮಾಡುವ ನೂರಾರು ಗುಂಡಿಗಳು. ಕೆಲಸಗಾರರು ಬೇಕಿಲ್ಲ! ಕೂಲಿ ಹಣ ಬೇಕಿಲ್ಲ! ಹಾರೆ-ಗುದ್ದಲಿಗಳೂ ಬೇಕಿಲ್ಲ! ನಿಂತು ಮಾಡಿಸಲು ಮೇಸ್ತ್ರಿಯೂ ಬೇಕಾಗಿಲ್ಲ. ಅಂತು ವರ್ಷಕ್ಕೆ ಲೆಕ್ಕವಿಲ್ಲದಷ್ಟು ಇಂಗು ಗುಂಡಿಗಳು ಸಿದ್ಧ!

  ಇವುಗಳಿಂದ ಮತ್ತೊಂದು ಮಹದುಪಕಾರವಿದೆ. ಏಪ್ರಿಲ್-‌ ಮೇ ತಿಂಗಳಿಂದ ಬೀಳುವ ಪೂರ್ವ ಮುಂಗಾರು ಮತ್ತು ಮುಂಗಾರಿನಲ್ಲಿ ಬೀಳುವ ಮಳೆ ನೀರನ್ನು ಮನುಷ್ಯ(ಮಾನವ ಅಂತ ಕರೆಯುವುದಿಲ್ಲ) ನಿಗೆ ಸರಬರಾಜು ಮಾಡುತ್ತರುವುದು. ಇಂಗು ಗುಂಡಿಗಳಿಂದ ವರ್ಷಪೂರ್ತಿ ಬೀಳುವ ಮಳೆ ನೀರು  ನಿಧಾನವಾಗಿ ಭೂಮಿಯಲ್ಲಿ ಬಸಿಯುತ್ತಾ ಹೋಗುತ್ತದೆ. ಇದರಿಂದ ಪಾತಾಳದಲ್ಲಿರುವ ಅಂತರ್ಜಲದ ಮಟ್ಟ ನಿಧಾನವಾಗಿ ಮೇಲೇರುತ್ತಾ ಬರುತ್ತದೆ. ಅಂದರೆ ಮಳೆ ನೀರಿನ ಸಂರಕ್ಷಣೆ. ಒಂದೊಂದು ಗುಂಡಿಗಳಲ್ಲೂ ವರ್ಷ ಪೂರ್ತಿ ನಿಲ್ಲುವ ಅದೆಷ್ಟೋ ಗ್ಯಾಲನ್‌ ಮಳೆನೀರು ಭೂಮಿಯಲ್ಲಿ ಇಂಗುವುದರಿಂದ ವರ್ಷಪೂರ್ತಿ ನದಿಗಳಲ್ಲಿ ನೀರು ಸದಾ ಹರಿಯುತ್ತಿರುತ್ತದೆ. ಈ ನೀರೆ ಅಲ್ಲವೆ ನಮಗೆ ಜೀವಾಧಾರ. ಕಾಡು ಹಿಡಿದಿಡುವ ನೀರು ನಿದಾನವಾಗಿ ಜಲದ ರೂಪದಲ್ಲಿ ತೊರೆ ಮತ್ತು ನದಿಗಳಿಗೆ ಬಿಡುಗಡಯಾಗಿ ಜಲಾಶಯ, ಆಮೂಲಕ ಕೆರೆಗಳಿಗೆ ಬಂದು ಸೇರುವುದು. ಹರಿಯುವ ನೀರಿನ ಹಿಂದಿನ ಸತ್ಯ ಈಗ ತಿಳಿದಿರಬಹುದು. ಸಂಬಳ ಅಥವಾ ಕೂಲಿ ತೆಗೆದುಕೊಂಡರೂ ದುಡುಯದ ಮನುಷ್ಯನೆಲ್ಲಿ? ಏನೂ ಪಡೆಯದೆ ನೀರಿನ ಸಂರಕ್ಷಣೆ ಮಾಡುತ್ತಿರುವ ಕಾಡಿನ ಹಂದಿಗಳು ಮನುಷ್ಯನಿಗೆ ಯಾವಾಗಲೂ ಮೇಲ್ಪಂಕ್ತಿಯಾಗಿರಲಿ ಎಂಬುವುದೇ ಈ ಲೇಖನದ ಆಶಯ.

1 comment: