Saturday, May 4, 2024

ನೀಲಕಂಠನ ನಡಿಗೆ ನಮ್ಮ ಮನೆಯ ಕಡೆಗೆ.


 

    ನೀಲಕಂಠನ ನಡಿಗೆ ನಮ್ಮ ಮನೆಯ ಕಡೆಗೆ

ಲೇಖಕರು: ಸುರೇಶ ಸಂಕೃತಿ.

ಕರ್ನಾಟಕದ ರಾಜ್ಯಪಕ್ಷಿಯಾದ ನೀಲಕಂಠ ಪಕ್ಷಿಯನ್ನು ಇಂಗ್ಲಿಷಿನಲ್ಲಿ ಇಂಡಿಯನ್‌ ರೋಲರ್‌, ಬ್ಲೂ ಜಾಯ್‌ ಎಂದು ಕರೆಯುತ್ತಾರೆಇದರ ವೈಜ್ಞಾನಿಕ ಹೆಸರು Coracias benghalensis. ಮುಖ ಮತ್ತು ಕಂಠ ಕಂದು ಬಣ್ಣವಾದರೂ ಇದನ್ನು ನೀಲಕಂಠನೆಂದು ಕರೆಯುತ್ತಾರೆ! 


ಎದೆಯಿಂದ ಹೊಟ್ಟೆಯವರೆಗೂ ಹಾಗೂ ಬೆನ್ನಿನ ಭಾಗ ಕಂದು ಬಣ್ಣ
. ರೆಕ್ಕೆಗಳು ಕಡು ನೀಲಿ ಮತ್ತು ತಿಳಿ ನೀಲಿಯ ಸಂಯೋಜಿತ ಆಕರ್ಷಕ ವಿನ್ಯಾಸ ಹೊಂದಿವೆ. ಹಾರುತ್ತಾ ಹಾರುತ್ತಾ ಗಾಳಿಯಲ್ಲಿ ಲಾಗ ಹಾಕುವಸರ್ರನೆ ಕೆಳಗಿಳಿಯುವ ಗುಣಗಳಿಂದಲೆ ಇಂಗ್ಲಿಷಿನಲ್ಲಿ ಅದನ್ನು ರೋಲರು ಎಂದು ಕರೆಯುವುದು

ಎಂಟರಿಂದ ಹತ್ತು ಇಂಚು ಉದ್ದವಿರುವ ಇದು ಹೊಸಬರಿಗೆ ಮೀಂಚುಳ್ಳಿ(ಕಿಂಗ್‌ ಫಿಶರ್)‌ ಅನ್ನಿಸಬಹುದು. ಆದರೆ ಮಿಂಚುಳ್ಳಿಗೆ ಉದ್ದವಾದ ನೀಳ ಕೊಕ್ಕಿದೆ. ಇದಕ್ಕೆ ಮೊಂಡಾದ ಚೂಪಾದ ಕೊಕ್ಕಿದ್ದು ಮೇಲಿನ ಕೊಕ್ಕಿನ ತುದಿ  ಕೆಳಕ್ಕೆ ಬಾಗಿದ ಸೂಜಿಯಂತೆ ಕಾಣುತ್ತದೆಕಾಗೆಯಂತೆಯೇ ಹಾರುವ ಇದರ ಕೂಗು ಕೆಲವು ಸಲ ಚ್ಯಾವ್‌ ಎಂತಲೂ, ಮತ್ತೆ ಕೆಲವು ಸಲ ಕ್ಯಾವ್‌ ಎಂದು ಕೇಳಿಸುತ್ತದೆಆಕರ್ಷಕವಾದ ಈ ನೀಲಕಂಠ ಪಕ್ಷಿಯ ಬಗ್ಗೆ ಬೇಕಾದಷ್ಟು ವರದಿಗಳು ಪತ್ರಿಕೆಗಳಲ್ಲಿ ನಾವು ಓದುತ್ತಲೇ ಇರುತ್ತೇವೆ. ನಾನು ಕೂಡ ಈ ಹಿಂದೆ ವೈಜ್ಞಾನಿಕ ಪತ್ರಿಕೆಯೊಂದಕ್ಕೆ ನೀಲಕಂಠನ ಬಗ್ಗೆ ಬರೆದಿದ್ದು ಉಂಟು.  

ನಾನು ಬರೆದ ಲೇಖನ ಪ್ರಕಟವಾಯಿತಾದರೂ ನಾನೇ ಸೆರೆ ಹಿಡಿದ ಚಿತ್ರಗಳು ಅದರಲ್ಲಿ ಪ್ರಕಟವಾಗಿರಲಿಲ್ಲವಾದ್ದರಿಂದ ನನಗದು ಸಮಾಧಾನ ನೀಡಿರಲಿಲ್ಲ. ನೀಲಕಂಠ ಪಕ್ಷಿಯ ಒಳ್ಳೆಯ ಚಿತ್ರವನ್ನು ಸೆರೆಹಿಡಿಯಬೇಕೆಂಬ ಒಂದೇ ಕಾರಣಕ್ಕೆ ಹೊಲ ಗದ್ದೆ ತೋಟಗಳಲ್ಲಿ ನಾನು ಬಹಳ ಅಲೆದಿದ್ದೆ. ನನ್ನಲ್ಲಿರುವ ಸೀಮಿತ ಛಾಯಗ್ರಹಣ ಪರಿಕರಗಳ ಕಾರಣದಿಂದ ಪಕ್ಷಿಗಳ ಛಾಯಗ್ರಹಣದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದೆ

ಇತ್ತೀಚೆಗೆ ನಮ್ಮ ಮನೆಯ ಹಿಂದೆಯೆ ಒಣಗಿ ಬೋಳಾಗಿರುವ ಒಂದು ತೆಂಗಿನ ಮರದ ತುದಿಯಲ್ಲಿ ಒಂದು ನೀಲಕಂಠ ಪಕ್ಷಿಗಳ ಜೋಡಿಯ ಚಟುವಟಿಕೆಯನ್ನು ಗಮನಿಸಿದೆ. ಇದರ ಒಂದು ಒಳ್ಳೆಯ ಚಿತ್ರಕ್ಕಾಗಿ  ಎಲ್ಲೆಲ್ಲೋ ಅಲೆದು ಏನೇನೋ ಸರ್ಕಸ್‌ ಮಾಡಿದ್ದ ನನಗೆ  ಇಂದು ಬೆಳಗೆದ್ದು ನೋಡಿದರೆ ಮನೆಯ ಮುಂದೆಯೆ ಇರುವ ವಿದ್ಯುತ್‌ ಕಂಬದ ಮೇಲೆ ಕುಳಿತ ನೀಲಕಂಠನ ದರ್ಶನವಾಗಿ ಖುಷಿ ಎನಿಸಿತು. ಅಂಗೈಯಲ್ಲೇ ಬೆಣ್ಣೆ ಇಟ್ಕೊಂಡು ಊರೆಲ್ಲ ಅಲೆಯೋದೇಕೆ? ದಂತೆ  ನಮ್ಮ ಮನೆಯ ಕಾಂಪೌಂಡಿನ ಒಳಗಿರುವ ಮಾವಿನ ಮರಕ್ಕೆ, ಕರಿಬೇವಿನ ಮರಕ್ಕೆ, ಮುಂದಿರುವ ಅಂಟುವಾಳದ ಮರಕ್ಕೆ  ಕಾಗೆ ಗುಬ್ಬಚ್ಚಿ ಬಿಟ್ಟು ವಿವಿಧ ಬಗೆಯ ಪಕ್ಷಿಗಳು ದಿನ ನಿತ್ಯ ಭೇಟಿ ಕೊಡುತ್ತಿರುತ್ತವೆ.  ಬೆಳವ, ಮುನಿಯ, ಕಾಜಾಣ, ಕೋಗಿಲೆ, ವಿವಿಧ ಬಗೆಯ ಸನ್‌ ಬರ್ಡುಗಳು, ಓರಿಯಂಟಲ್ ಬೀ ಈಟರ್‌,‌ ಬುಲ್ ಬುಲ್ಗಳು, ರಾಟವಾಳ, ಪಾರಿವಾಳ ಮುಂತಾದವು.    ತನ್ನ ಗೂಡು ಕಟ್ಟಲೆಂದು ಸನ್‌ ಬರ್ಡ್‌  ರೆಕ್ಕೆ ಬಡಿದು ಹಾರುತ್ತಿದ್ದರೂ ಹೆಲಿಕ್ಯಾಪ್ಟರಿನಂತೆ  ಗಾಳಿಯಲ್ಲಿ ನಿಂತಲ್ಲೆ ನಿಂತು ನಮ್ಮ ಮನೆಯ ಪೋರ್ಟಿಕೋದ ಸೀಲಿಂಗಿಗೆ ಕಟ್ಟಿದ ಜೇಡರ ಬಲೆಯನ್ನು   ಸಂಗ್ರಹಿಸುವ ದೃಶ್ಯ ನೋಡಲು ಬಲು ಆಕರ್ಷಕ.

ಜೆಸಿಬಿಯೊಂದು ದಡಬಡಾಯಿಸ್ತಾ ಪಕ್ಕದ ಸೈಟಿನ ಸ್ವಚ್ಚತಾ ಕಾರ್ಯದಲ್ಲಿ ತೊಡಗಿತ್ತು.  ಹಾಗೆಯೆ ನಾನು ಮರೆಯಲ್ಲಿ ನಿಂತು ಗಮನಿಸತ್ತಿದ್ದಂತೆ  ಜೆಸಿಬಿ ನೆಲ ಕೆರೆದಾಗ ಹೊರಬರುವ ಹುಳಹುಪ್ಪಟೆಗಳನ್ನು ಒಂದಲ್ಲ  ಎರಡು ನೀಲಕಂಠ ಪಕ್ಷಿಗಳು  ಹೆಕ್ಕಿ  ಆ ಒಣ ತೆಂಗಿನ ಮರದ ತುದಿಯ  ಗೂಡಿಗೆ ಸಾಗಿಸುವ ಕಾರ್ಯದಲ್ಲಿ ತೊಡಗಿದ್ದವುಆ ಸೈಟಿನ ಪಕ್ಕದಲ್ಲಿ ನೆಟ್ಟಿದ್ದ ಒಂದು ಒಣ ಮರದ ಕಂಬದ ತುದಿಯನ್ನು ಅವುಗಳು ಲ್ಯಾಂಡಿಂಗ್‌ ಪ್ಯಾಡ್‌ ಮಾಡಿಕೊಂಡಿದ್ದವು

  ಈ ಮರದ ಕಂಬ ನಮ್ಮ ಅಡುಗೆ ಮನೆಯ ಕಿಟಕಿಯಿಂದ ಕೇವಲ ನಲವತ್ತು ಅಡಿಯ ದೂರದಲ್ಲಿದ್ದು ತೀರ ಹತ್ತಿರದಿಂದ ನೀಲಕಂಠ ಪಕ್ಷಿಯ ಚಿತ್ರಗಳನ್ನು ತೆಗೆಯಲು ನಾನು ಅಡುಗೆ ಮನೆಯ  ಪ್ಲಾಟ್ಪಾರಂನ್ನು ಆಶ್ರಯಿಸಬೇಕಾಯಿತು. ಜೂಮ್‌ ಲೆಂಸ್‌ ಅಳವಡಿಸಿದ ಮತ್ತು ಕ್ಲಿಕ್‌ ಮಾಡಲು ರಿಮೋಟ್‌ ಜೋಡಿಸಿದ ಕ್ಯಾಮರಾವನ್ನು ಸೈಲೆಂಟ್‌ ಮೋಡಿಗೆ ಹಾಕಿ ಆ ಒಣ ಮರದ ತುದಿಗೆ ಕಿಟಕಿಯ ಮೂಲಕ ಫೋಕಸ್‌ ಮಾಡಿದೆ. ಫೋಕಸ್‌ ಲಾಕ್‌ ತಂತ್ರ ಯೋಜಿಸಿ, ಪ್ರಿಫೋಕಸ್‌ ವಿಧಾನದಿಂದ ಶೂಟಿಂಗ್‌ ಮಾಡಲು ನಿರ್ಧರಿಸಿ , RAW ಫೈಲ್‌ನಲ್ಲಿ ಚಿತ್ರಳನ್ನು ತೆಗೆಯಲು ಪ್ರಾರಂಭಿಸಿದೆ  

       ಮಾರ್ಚಿಯಿಂದ ಜೂನ್‌ ವರೆಗೆ ನೀಲಕಂಠಗಳ ಸಂತಾನೋತ್ಪತ್ತಿಯ ಕಾಲಗಂಡು ಪಕ್ಷಿ ತನ್ನ ವಿಶಿಷ್ಟವಾದ ಗಾಳಿಯಲ್ಲಿ ನೆಗೆಯುವ, ಲಾಗ ಹಾಕುವ, ಸರ್ರನೆ ಮೇಲಿಂದ ಜಾರಿದಂತೆ ಹಾರುವ ಮುಂತಾದ ಏರೋಬಿಕ್ಸಗಳನ್ನು ತೋರಿಸುವ ಮೂಲಕ ಹೆಣ್ಣು ಪಕ್ಷಿಯನ್ನು ಆಕರ್ಷಿಸಿತ್ತದೆ. ಒಮ್ಮೆ ಜೋಡಿಯಾದ ಹಕ್ಕಿಗಳು ಜೀವಜೋಡಿಯಾಗಿ ಬಾಳುತ್ತವೆ. ಇವು ಒಣಮರದ ಕೊಳೆತು ಮೆದುವಾದ ಭಾಗವನ್ನು ಕೊರೆದು ಗೂಡನ್ನಾಗಿಸಕೊಳ್ಳುತ್ತವೆಈ ಗೂಡಿನಲ್ಲಿ ಹೆಣ್ಣು ಮೂರರಿಂದ ಐದರವರೆಗೆ ಮೊಟ್ಟಗಳನ್ನು ಇಡುತ್ತದೆ. ಸುಮಾರು ಎರಡುವಾರಗಳಲ್ಲಿ ಮೊಟ್ಟೆಯೊಡದು ಹೊರ ಬರುವ ಮರಿಗಳನ್ನು ಗಂಡು ಹೆಣ್ಣು ಎರಡೂ ಗುಟುಕು ನೀಡಿ ಸಲಹುತ್ತವೆ. ಒಂದು ತಿಂಗಳ ಅವಧಿಯಲ್ಲಿ ಮರಿಗಳು ಬೆಳೆದು ಗೂಡಿನಿಂದ ಹೊರಸಾಗುತ್ತವೆ. ನೀಲಕಂಠ ಪಕ್ಷಿಯ ಜೀವಿತಾವಧಿ  ಹದಿನೇಳು ವರ್ಷಗಳೆಂದು ಅಂದಾಜು ಮಾಡಲಾಗಿದೆ.   

ನೀಲಕಂಠಗಳು ಸಾಮಾನ್ಯವಾಗಿ ಕೀಟಭಕ್ಷಕಗಳಾಗಿದ್ದು ರೈತನ ಮಿತ್ರನೆಂದೆ ಕರೆಯಲಾಗುತ್ತದೆ. ಉಳುಮೆ ಮಾಡುವಾಗ ನೇಗಿಲು ಅಥವಾ ಟ್ರಾಕ್ಟರನ್ನು ಹಿಂಬಾಲಿಸಿ ಉತ್ತ ನೆಲದಿಂದ ಮೇಲೆ ಬರುವು ಕೀಟಗಳನ್ನು ಭಕ್ಷಿಸುವುದರಿಂದ ಕೀಟ ನಿಯಂತ್ರಗಳಾಗಿಯೂ ಇವು ಸಹಕರಿಸುತ್ತವೆಜೇಡ, ಮಿಡಿತೆ,ಕಪ್ಪೆ, ಓತಿಕ್ಯಾತ,ಸಣ್ಣಹಾವು, ಹಾವುರಾಣಿ, ಏಡಿ, ಚೇಳು ಈ ಎಲ್ಲವನ್ನು ಹಿಡಿದು ಭಕ್ಷಿಸುತ್ತವೆ.

      ನೀಲಕಂಠ ಪಕ್ಷಿಯನ್ನು ಅದರ ಹೆಸರಿನ ಕಾರಣದಿಂದ ಶಿವನ ರೂಪವೆಂದು ಕೆಲವರು ಭಾವಿಸಿದರೆ ವಿಷ್ಣುರೂಪವೆಂದು ಮತ್ತೆ ಕೆಲವರು ಭಾವಿಸುತ್ತಾರೆ.   ರಾಮನು ಲಂಕೆಗೆ ದಂಡೆತ್ತಿ ಹೋಗುವ ಮುನ್ನ ನೀಲಕಂಠನ ದರ್ಶನವಾಯಿತಂತೆ. ಪಾಂಡವರು ತಮ್ಮ ಅಜ್ಞಾತವಾಸವನ್ನು ಮುಗಿಸಿ ಶಮಿ ವೃಕ್ಷದಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಗಳನ್ನು ತೆಗೆದುಕೊಂಡು ಹಸ್ತಿನಾವತಿಯ ಕಡೆಗೆ ಹೊರಟಾಗ ಹಿಮಾಲಯದ ಕಡೆಗೆ ಹಾರತ್ತಾ  ಹೊರಟ ನೀಲಕಂಠ ಪಕ್ಷಿಯ ದರ್ಶನವಾಗಿ ಶುಭ ಸೂಚನೆ ನೀಡಿತಂತೆ. ಇಂದೂ ಸಹ ನೀಲಕಂಠನ ದರ್ಶನ ಶುಭಸೂಚಕೆವೆಂದು ಜನರು ನಂಬುತ್ತಾರೆದಸೆರೆಯ ಸಮಯದಲ್ಲಿ ನೀಲಕಂಠನನ್ನು ದರ್ಶನ ಮಾಡುವುದು ಪುಣ್ಯಪ್ರದವೆಂಬ ನಂಬಿಕೆ ಆಂಧ್ರದಲ್ಲಿದೆ. ಇದನ್ನು ಬಂಡವಾಳ ಮಾಡಿಕೊಂಡವರು ನೀಲಕಂಠ ಪಕ್ಷಿಯನ್ನು ಹಿಡಿದು ಪಂಜರದಲ್ಲಿರಿಸಿ ಜನರಿಂದ ಹಣ ಪಡೆದು  ತೋರಿಸಿ ದುಡ್ಡುಮಾಡುವ ದಂಧೆಗೆ ಇಳಿದ್ದಿದ್ದರುಇದು ಯಾವ ಮಟ್ಟಕ್ಕೆ ಹೋಯಿತೆಂದರೆ ಈ ಪಕ್ಷಿಯ ಅಸ್ತಿತ್ವಕ್ಕೆ ಹೊಡೆತ ಬೀಳಲು ಶುರುವಾಯಿತು.   ತೆಲುಗಿನಲ್ಲಿ  ಪಾಲ ಪಿಟ್ಟ( ಹಾಲು ಹಕ್ಕಿ) ಎಂದು ಕರೆಯುವ ಇದರ ರೆಕ್ಕೆಗಳನ್ನು ಮೇವಿನೊಂದಿಗೆ ಹಸುಗಳಿಗೆ ಉಣಿಸಿದರೆ ಹಾಲಿನ ಉತ್ಪಾದನೆ ಹೆಚ್ಚುತ್ತದೆ ಎಂಬ ಮೂಡನಂಬಿಕೆಯು ಸಹ ಆಂಧ್ರದಲ್ಲಿ ಇದ್ದಿತು. ಬ್ರಿಟಿಷರ ಈಸ್ಟ್‌ ಇಂಡಿಯ ಕಂಪನಿಯ ಆಡಳಿತದ ಕಾಲದಲ್ಲಿ ಇದರ ಆಕರ್ಷಕ ರೆಕ್ಕೆಗಳನ್ನು ಬ್ರಿಟನ್ನಿಗೆ ಸಾಗಿಸಿ ಮಾರುವ ದಂದೆಯೂ ಸಹ ಈ ಪಕ್ಷಿಯನ್ನು ಅಳಿವಿನ ಅಂಚಿಗೆ ತಂದು ನಿಲ್ಲಿಸಿದ್ದಿತು. ಇಂದು ನೀಲಕಂಠ ಪಕ್ಷಿ ಕಾನೂನಿನ ಅಡಿಯಲ್ಲಿ ಸಂರಕ್ಷಿತ ಪಕ್ಷಿ. ಜೀವಂತ ಅಥವಾ ಮೃತ ಪಕ್ಷಿಯನ್ನಾಗಲಿ ಅದರ ರೆಕ್ಕೆಪುಕ್ಕಗಳನ್ನಾಗಲಿ ಇರಿಸಿಕೊಳ್ಳುವುದು ಶಿಕ್ಷಾರ್ಹ ಅಪರಾದ. ಹೀಗಾಗಿ ನೀಲಕಂಠಗಳ ಸಂಖ್ಯೆ ಈಗ ಸುಸ್ಥಿರವಾಗಿದೆಯಾದ್ದರಿಂದ ಅಳಿವಿನ ಅಂಚಿಗೆ ತಳ್ಳಲ್ಪಟ್ಟಿರುವ ಜೀವಿಗಳನ್ನು ನಮೂದಿಸುವ The IUCN Red List ನಿಂದ ಹೊರಗೆ ಉಳಿದ ಜೀವಿಯಾಗಿದೆ ಎಂಬುದು ಸಂತಸದಾಯಕ ವಿಚಾರವಾಗಿದೆ.



 

 

 

 

1 comment:

  1. Meaningful nice article about strange bird sir. You are also Arnithologist. Thank you very much sir

    ReplyDelete