Tuesday, June 4, 2024

ಡಯಾಟಮ್ ಗಳು ಮರೆಯದ ವಿಜ್ಞಾನಿ ಹೆಚ್.ಪಿ. ಗಾಂಧಿ

 ಡಯಾಟಮ್ ಗಳು ಮರೆಯದ ವಿಜ್ಞಾನಿ ಹೆಚ್.ಪಿ. ಗಾಂಧಿ

ಡಾ.ಟಿ.ಎ.ಬಾಲಕೃಷ್ಣ ಅಡಿಗ  

ವಿಜ್ಞಾನ ಸಂವಹನಕಾರರು



  ಒಂದು ಸಣ್ಣ ಕೊಳದಿಂದ ಪ್ರಾರಂಭಿಸಿ ಸಾಗರಗಳವರೆಗೆ ಹಮ್ಮಿಕೊಂಡಿರುವ ಜಲಪರಿಸರ ವ್ಯವಸ್ಥೆಗಳಲ್ಲಿ ನೀರಿನ ಮೇಲ್ಭಾಗದಲ್ಲಿ ತೇಲಾಡುತ್ತಿರುವ ಸೂಕ್ಷ್ಮಜೀವಿಗಳಾದ ಪ್ಲವಕಗಳ (planktons) ಬಗ್ಗೆ ನೀವು ಕೇಳಿದ್ದೀರಿ. ಇವುಗಳಲ್ಲಿ ಸಸ್ಯಪ್ಲವಕಗಳು (phytoplanktons) ಹಾಗೂ ಪ್ರಾಣಿಪ್ಲವಕಗಳು (zooplanktons)ಎಂಬ ಎರಡು ಗುಂಪುಗಳಿವೆ. ಸಸ್ಯಪ್ಲವಕಗಳು ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯ ಮೂಲಕ ಸ್ವಯಂ ಆಹಾರ ತಯಾರಿಸಿಕೊಳ್ಳುತ್ತವೆ. ಈ ಪ್ರಕ್ರಿಯೆಯ ಭಾಗವಾಗಿ ವಾತಾವರಣಕ್ಕೆ ಆಕ್ಸಿಜನ್ ಬಿಡುಗಡೆ ಮಾಡುತ್ತವೆ. ಈ ಗುಂಪಿನ ಪ್ರಮುಖ ಉದಾಹರಣೆಗಳೆಂದರೆ,ಏಕಕೋಶ ಜೀವಿಗಳಾದ ಡಯಾಟಮ್ ಗಳು(diatoms). ಪ್ರಮುಖವಾಗಿ ತ್ರಿಜ್ಯಸಮ್ಮಿತಿ(radialsymmetry) ಹಾಗೂ ದ್ವಿಪಾರ್ಶ್ವಸಮ್ಮಿತಿ(bilateral symmetry)ಯನ್ನು ಹೊಂದಿರುವ ಎರಡು ಬಗೆಯ ಡಯಾಟಮ್ ಗಳನ್ನು ಗುರುತಿಸಬಹುದು.


ಚಿತ್ರ 1.ಡಯಾಟಮ್ ನ ಕೆಲವು ವಿಧಗಳು

ತಮ್ಮ ಜೀವಕೋಶವನ್ನಾವರಿಸಿರುವ ಸಿಲಿಕಾಯುಕ್ತ ಕವಚದ ಬಣ್ಣ, ಆಕಾರ ಹಾಗೂ ವಿನ್ಯಾಸಗಳಿಂದಾಗಿ ನೀರಿನ ಮೆಲ್ಭಾಗದಲ್ಲಿ ಹೊಳೆಯುತ್ತಿರುವಂತೆ ಕಾಣುವ ಡಯಾಟಮ್ ಗಳನ್ನು ಈ ಕಾರಣಕ್ಕಾಗಿ "ಸಸ್ಯಲೋಕದ ಆಭರಣಗಳು" ಎಂದು ಪರಿಗಣಿಸಲಾಗುತ್ತದೆ.  

ಒಂದು ಅಂದಾಜಿನ ಪ್ರಕಾರ, ವಾತಾವರಣಕ್ಕೆ ಬಿಡುಗಡೆಯಾಗುವ ಆಕ್ಸಿಜನ್ ನ ಒಟ್ಟು ಪ್ರಮಾಣದ ಶೇ 75ರಷ್ಟನ್ನು ಈ ಡಯಾಟಮ್ ಗಳು ಉತ್ಪಾದಿಸುತ್ತವೆ. ಆಂದರೆ, ಕಳೆದ 15 ನಿಮಿಷಗಳಲ್ಲಿ ನೀವು ದೇಹದ ಒಳಗಡೆ ಎಳೆದುಕೊಂಡ ನಾಲ್ಕು ಉಸಿರಿನಲ್ಲಿ, ಒಂದು ಉಸಿರಿನಲ್ಲಿರುವಷ್ಟು ಆಕ್ಸಿಜನ್ ಡಯಾಟಮ್ ಗಳಿಂದ ಬಂದಿರುತ್ತದೆ ! ಅಲ್ಲಿಗೆ, ಇವು ಎಷ್ಟು ಉಪಯುಕ್ತ ಜೀವಿಗಳು ಎಂಬುದು ನಿಮಗೆ ಮನದಟ್ಟಾಗಿರಬೇಕು

ಡಯಾಟಮ್ ಗಳ ಸುಮಾರು 20 ಲಕ್ಷ  ಪ್ರಬೇಧಗಳು ಜಗತ್ತಿನಾದ್ಯಂತ ಹಂಚಿಹೋಗಿರಬಹುದೆಂಬ ಒಂದು ಅಂದಾಜು ಇದೆಯಾದರೂ, ಕೇವಲ 30,000 ಪ್ರಬೇಧಗಳನ್ನು ಮಾತ್ರ ಅಧಿಕೃತವಾಗಿ ಗುರುತಿಸಲು ಇದುವರೆಗೆ ವಿಜ್ಞಾನಿಗಳಿಗೆ ಸಾಧ್ಯವಾಗಿದೆ.

ನಮ್ಮ ದೇಶದಲ್ಲಿ ಡಯಾಟಮ್ ನ ಬಗೆಗಳು ಹಾಗೂ ಅವುಗಳ ಹಂಚಿಕೆಯ ವಿಸ್ತಾರದ ಬಗ್ಗೆ ಅತಿ ದೀರ್ಘ ಕಾಲ ಸಂಶೋಧನೆ ನಡೆಸಿದ ಅಪ್ಪಟ ಭಾರತೀಯ ವಿಜ್ಞಾನಿಯೊಬ್ಬರನ್ನು ನಾವು ಸಂಪೂರ್ಣವಾಗಿ ಮರೆತುಬಿಟ್ಟಿರುವುದು ಭಾರತೀಯ ವಿಜ್ಞಾನ ಕ್ಷೇತ್ರದಲ್ಲಿನ ಒಂದು ದುರಂತ.

ಪ್ರೊ.ಹೇಮೇಂದ್ರಕುಮಾರ್ ಪೃಥ್ವಿರಾಜ್ ಗಾಂಧಿ (ಹೆಚ್.ಪಿ.ಗಾಂಧಿ) 46ವರ್ಷಗಳಷ್ಟು ದೀರ್ಘಕಾಲ ದೇಶದಾದ್ಯಂತ ಸಂಚರಿಸಿ, ವಿವಿದ ಪ್ರದೇಶಗಳಲ್ಲಿ ಡಯಾಟಮ್ ಪ್ರಬೇಧಗಳನ್ನು ಸಂಗ್ರಹಿಸಿ ಅವುಗಳ ಬಗ್ಗೆ ನಿರಂತರ ಸಂಶೋಧನೆ ನಡೆಸಿದ ಮಹಾ ವಿಜ್ಞಾನಿ.


ಚಿತ್ರ 2. ಹೆಚ್.ಪಿ.ಗಾಂಧಿ 

ನಿವೃತ್ತಿಯ ನಂತರವೂ ಅವರಲ್ಲಿನ ವಿಜ್ಞಾನಿ ವಿಶ್ರಾಂತಿ ಪಡೆದಿರಲಿಲ್ಲ. ವಿಶೇಷವೆಂದರೆ, 46 ವರ್ಷಗಳ   ಅವಧಿಯಲ್ಲಿ ಗಾಂಧಿ ಅವರು ಡಯಾಟಮ್ ಗಳ 300ಕ್ಕೂ ಹೆಚ್ಚು ಹೊಸ ಪ್ರಬೇಧಗಳನ್ನು ಗುರುತಿಸಿ ಹೆಸರಿಸಿದ್ದಾರೆ !  ಇಂಥ ಒಂದು ದಾಖಲೆಯನ್ನು ಮೀರಿಸಲು ಈ ಸಂಶೋಧನಾ ಕ್ಷೇತ್ರದಲ್ಲಿ ಯಾರಿಗೂ ಸಾಧ್ಯವಾಗಿಲ್ಲ. 

ಸಸ್ಯವಿಜ್ಞಾನಿ ಹೆಚ್.ಪಿ. ಗಾಂಧಿ ಜನಿಸಿದ್ದು 1920ರ ಆಗಸ್ಟ್ 20ರಂದು,ರಾಜಾಸ್ಥಾನದ ಪ್ರತಾಪ್ ಗರ್ ನಲ್ಲಿ. ಅಲ್ಲಿಯೇ ತಮ್ಮ ಪ್ರೌಢಶಿಕ್ಷಣ ಮುಗಿಸಿ, ಆಗ್ರಾದಲ್ಲಿ ಇಂಟರ್ಮೀಡಿಯಟ್ ಶಿಕ್ಷಣ ಪೂರೈಸಿದರು. ಮುಂದೆ, ಆಗಿನ ಬಾಂಬೆಯಲ್ಲಿದ್ದ ವಿಲ್ಸನ್ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದರು. 1944ರಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿ, ಶೈವಲಗಳ ಮೇಲೆ ತಮ್ಮ ಸಂಶೋಧನೆಯನ್ನು ಪ್ರಾರಂಭಿಸಿದರು. 1960ರ ವೇಳೆಗೆ ಶೈವಲಗಳಲ್ಲಿ 40 ಹೊಸ ಜಾತಿಗಳನ್ನು,10 ಹೊಸ ಪ್ರಬೇಧಗಳನ್ನು ಹಾಗೂ 21 ಹೊಸ ತಳಿಗಳನ್ನು ಅವರು ಗುರುತಿಸಿ ದಾಖಲಿಸಿದ್ದರು ! ಈ ವೇಳೆಗಾಗಲೇ ಗಾಂಧಿ ಅವರಿಗೆ ಡಯಾಟಮ್ ಗಳ ಬಗ್ಗೆ ಒಲವು ಬೆಳೆದಿತ್ತು. ಡಯಾಟಮ್ ಗಳ ರೂಪ, ರಚನಾ ವಿನ್ಯಾಸ ಹಾಗೂ ವಿಪುಲತೆ ಅವರನ್ನು ಈ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವಂತೆ ಪ್ರೇರೇಪಿಸಿದ್ದುವು. ಡಯಾಟಮ್ ಗಳ ಬಗೆಗಿನ ಸಂಶೋಧನೆಗೆ ಗಾಂಧಿ ಅವರಿಗಿದ್ದ ಆಸಕ್ತಿಯನ್ನು ಸಹೋದ್ಯೋಗಿಗಳು ಮೆಚ್ಚಿ, ಬೆನ್ನು ತಟ್ಟುವ ಬದಲು ಆಡಿಕೊಡದ್ದೇ ಹೆಚ್ಚು. ಕೆಲವರಂತೂ, ಇವರನ್ನು ('ಆ ನೂರಿಪ್ಪತ್ತರವನು') ಎಂದೇ ಕರೆಯುತ್ತಿದ್ದರಂತೆ. ಆಗ ಗಾಂಧಿ ಅವರಿಗೆ ತಿಂಗಳಿಗೆ ನೂರಿಪ್ಪತ್ತು ರುಪಾಯಿ ಸಂಬಳ ಬರುತ್ತಿತ್ತಂತೆ !

ಗಾಂಧಿ ಅವರ ವೃತ್ತಿ ಜೀವನದ ಇನ್ನೊಂದು ದುರಂತವೆಂದರೆ, ಅವರ ಸಂಶೋಧನಾ ಮಾರ್ಗದರ್ಶಕರ ಹಾಗೂ ಸಹೋದ್ಯೋಗಿಗಳ ಜೊತೆಗೆ ಉಂಟಾಗುತ್ತಿದ್ದ ಮನಸ್ತಾಪಗಳು. ಇದರ ಪರಿಣಾಮವಾಗಿ, ಅವರು ಆಗಾಗ್ಗೆ ವರ್ಗಾವಣೆಯ ಶಾಪಕ್ಕೆ ಗುರಿಯಾಗುತ್ತಿದ್ದರು. ಇದರಿಂದ ಗಾಂಧಿ ಧೃತಿಗೆಡಲಿಲ್ಲ. ವರ್ಗಾವಣೆಗಳನ್ನೇ ಹೊಸ ಅವಕಾಶಗಳನ್ನಾಗಿ ಬಳಸಿಕೊಂಡು, ಅಲ್ಲಿನ ತಮ್ಮ ವಿದ್ಯಾರ್ಥಿಗಳ ಜೊತೆಗೆ ಕ್ಷೇತ್ರ ಭೇಟಿಗೆ(field visit) ಹೋಗಿ ಡಯಾಟಮ್ ನ ಮಾದರಿಗಳನ್ನು ಸಂಗ್ರಹಿಸಿ ಸಂಶೋಧನೆಗೆ ಬಳಸಿಕೊಳ್ಳುತ್ತಿದ್ದ ಛಲ ಅವರದಾಗಿತ್ತು.

ಯಾವುದೇ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಧನಸಹಾಯ ಪಡೆಯದೆ ತಮ್ಮ ಸಂಶೋಧನೆಯನ್ನು ಮುಂದುವರೆಸಿದ ಹೆಗ್ಗಳಿಕೆ ಗಾಂಧಿ ಅವರದ್ದು. ಹಣದ ಕೊರತೆ ಉಂಟಾದಾಗ ಸ್ಥಳೀಯ ಹಣ್ಣಿನ ಮಾರುಕಟ್ಟೆಯಿಂದ ಖಾಲಿ ಮರದ ಪೆಟ್ಟಿಗೆಗಳನ್ನು ತಂದು ಅದರಿಂದ ಸಣ್ಣ ಪೆಟ್ಟಿಗೆಗಳನ್ನು ತಾವೇ ತಯಾರಿಸಿಕೊಂಡು ಅವುಗಳಲ್ಲಿತಾವು ತಯಾರಿಸಿಟ್ಟಿದ್ದ ಸಂಶೋಧನಾ ಸ್ಲೈಡ್ ಗಳನ್ನು (slides) ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಒಂದು ಬದಿ ಖಾಲಿ ಇದ್ದ ಹಾಳೆಗಳನ್ನು ಕೊಂಡುಕೊಂಡು ಅದರಲ್ಲಿ ತಮ್ಮ ಸಂಶೋಧನೆಗೆ ಸಂಬಂಧಿಸಿದ ಚಿತ್ರಗಳನ್ನು ಹಾಗೂ ವಿವರಗಳನ್ನು  ಬರೆದಿಡುತ್ತಿದ್ದರು. 

ಆಸ್ಪತ್ರೆಗಳಿಂದ ಖಾಲಿ ವಯಲ್ ಗಳನ್ನು(vials) ಕೇಳಿ ಪಡೆದು ಅದರಲ್ಲಿ ತಾವು ಸಂಗ್ರಹಿಸಿದ ಡಯಾಟಮ್ ಮಾದರಿಗಳನ್ನು ಇಟ್ಟುಕೊಳ್ಳುತ್ತಿದ್ದರು. ಯಾವುದಕ್ಕೂ ಯಾರನ್ನೂ ದೂರದೆ ತಮ್ಮ ಸಂಶೋಧನೆಯನ್ನು ತಾಳ್ಮೆಯಿಂದ, ತಾದಾತ್ಮತೆಯಿಂದ ಮುಂದುವರೆಸಿದ ವಿಶಿಷ್ಠ ವ್ಯಕ್ತಿತ್ವ ಅವರದ್ದು.

ಇವೆಲ್ಲ ಇತಿಮಿತಿಗಳ ನಡುವೆಯೂ ತಮ್ಮ ಸಂಶೋಧನೆಗೆ ಇಲೆಕ್ಟ್ರಾನ್ ಮೈಕ್ರೋಸ್ಕೋಪ್ ಬಳಸಿದ ಭಾರತೀಯ ವಿಜ್ಞಾನಿಗಳಲ್ಲಿ ಗಾಂಧಿ ಮೊದಲಿಗರು. ಹೊಸ ಪ್ರಬೇಧಗಳ ಪತ್ತೆಯ ಜೊತೆಗೆ, ಡಯಾಟಮ್ ಗಳ ವರ್ಗೀಕರಣ, ಪರಿಸರದ ಹೊಂದಾಣಿಕೆ, ಭೌಗೋಳಿಕ ಹಂಚಿಕೆ ಮುಂತಾದ ಹಲವು ಅಂಶಗಳ ಜೊತೆಗೆ, ಶಿಲಾಪದರಗಳಲ್ಲಿನ ಪಳೆಯುಳಿಕೆ ಡಯಾಟಮ್ ಗಳ ಬಗ್ಗೆ ಗಾಂಧಿ ಅವರು ಸಂಶೋಧನೆ ನಡೆಸಿದ್ದಾರೆ. ಡಯಾಟಮ್ ಗಳಿಗೆ ಸಂಬಂಧಿಸಿದಂತೆ ಸುಮಾರು 35 ಸಂಶೋಧನಾ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆ. ಅವರ ಸಂಶೋಧನೆಯ ಪ್ರಮುಖ ಅಂಶಗಳನ್ನು ಹಲವು ದೇಶಗಳ ಖ್ಯಾತನಾಮ ವಿಜ್ಞಾನಿಗಳು ತಮ್ಮ ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ. ಖ್ಯಾತಿವೆತ್ತ ಡಯಾಟಮ್ ವಿಜ್ಞಾನಿಗಳಾದ ಹಸ್ಟೆಡ್ಟ್(Hustedt),  ಚೊಲೊನೋಕಿ (Cholonoki), ಜಾನ್ ಲಂಡ್(John Lund), ರುಥ್ ಪ್ಯಾಟ್ರಿಕ್(Ruth Patrick), ಮುಂತಾದವರು ಗಾಂಧಿ ಅವರೊಂದಿಗೆ ವಿಷಯ ವಿನಿಮಯಕ್ಕಾಗಿ ಪತ್ರಮುಖೇನ ನಿರಂತರ ಸಂಪರ್ಕದಲ್ಲಿದ್ದರು.

ಪುಣೆಯ ಅಗರ್ಕರ್ ಸಂಶೋಧನಾ ಸಂಸ್ಥೆಯಲ್ಲಿ ಡಯಾಟಮ್ ಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಕಾರ್ತಿಕ್ ಬಾಲಸುಬ್ರಮಣ್ಯಮ್ ಎಂಬ ವಿಜ್ಞಾನಿ ಗಾಂಧಿ ಅವರ ಸಂಶೋಧನೆಗಳಿಂದ ಪ್ರಭಾವಿತರಾಗಿ ಅವರನ್ನು 2006ರಲ್ಲಿ ಗುಜರಾತ್ ನ ಜುನಾಗಡ್ ನಲ್ಲಿರುವ ಅವರ ಮನೆಗೆ ಭೇಟಿ ನೀಡುತ್ತಾರೆ. ಮನೆಯಲ್ಲಿ ಹಾಸಿಗೆ ಹಿಡಿದಿದ್ದ ಗಾಂಧಿ ಅವರು ಮೊದಲಿಗೆ ಯಾವುದೇ ಮಾಹಿತಿಯನ್ನು ಕಾರ್ತಿಕ್ ಅವರೊಂದಿಗೆ ಹಂಚಿಕೊಳ್ಳಲು ನಿರಾಕರಿಸುತ್ತಾರೆ. ಕಾರ್ತಿಕ್ ತಮ್ಮ ಲ್ಯಾಪ್ ಟಾಪ್ ತೆಗೆದು ವಿವರಿಸಲು ಹೊರಟಾಗ, ಅದರಲ್ಲಿ ಸ್ಕ್ರೀನ್ ಸೇವರ್ ಆಗಿ ಅವರು ಬಳಸಿದ್ದ ವಿವಿಧ ಡಯಾಟಮ್ ಗಳ ವರ್ಣಚಿತ್ರಗಳನ್ನು ಗಮನಿಸಿದ ಗಾಂಧಿ ಅವರು ಅವುಗಳನ್ನು ಒಂದೊಂದಾಗಿ ಹೆಸರಿಸುತ್ತಾ ಹೋಗುತ್ತಾರೆ !. ಆನಂತರವೇ, ಗಾಂಧಿ ಅವರು ತಮ್ಮ ಸಂಶೋಧನೆಯ ಕಥೆ ಹಾಗೂ ವ್ಯಥೆಯನ್ನು ಕಾರ್ತಿಕ್ ಅವರ ಮುಂದೆ ಬಿಚ್ಚಿಡುತ್ತಾರೆ. ಅಷ್ಟೇ ಅಲ್ಲ, ತಾವು ಸಂಗ್ರಹಿಸಿ ಮನೆಯಲ್ಲಿಟ್ಟುಕೊಂಡಿದ್ದ ಡಯಾಟಮ್ ಮಾದರಿಗಳನ್ನು ಹಾಗು ತಯಾರಿಸಿದ್ದ ಸ್ಲೈಡ್ ಗಳನ್ನು ಕಾರ್ತಿಕ್ ಅವರಿಗೆ ಹಸ್ತಾಂತರಿಸುತ್ತಾರೆ. ತಮ್ಮ ಸಂಶೋಧನೆಗೆ ಅವುಗಳನ್ನು ಅಕರವಾಗಿ ಬಳಸಿಕೊಂಡ ಕಾರ್ತಿಕ್ ಅವರು ಆನಂತರ ಆ ಎಲ್ಲ ಅಮೂಲ್ಯ ಸಂಗ್ರಹಗಳನ್ನು ಭಾರತೀಯ ವಿಜ್ಞಾನ ಸಂಸ್ಥೆ(I.I.Sc.)ಯ ಸೆಂಟರ್ ಫಾರ್ ಇಕಲಾಜಿಕಲ್ ಸ್ಟಡೀಸ್ ಗೆ ನೀಡುತ್ತಾರೆ. ಇಡೀ ದಕ್ಷಿಣ ಏಶಿಯಾದಲ್ಲೇ ಡಯಾಟಮ್ ಸಂಶೋಧನೆಗೆ ಸಂಬಂಧಿಸಿದ ಏಕೈಕ ರೆಫೆರೆನ್ಸ್ ಆಕರವಾಗಿ ಅವೀಗ ಇಲ್ಲಿ ಸುರಕ್ಷಿತವಾಗಿವೆ. ಕಾರ್ತಿಕ್ ಅವರು ಶ್ರಮ ವಹಿಸಿ ಗಾಂಧಿ ಅವರನ್ನು ಪತ್ತೆ ಮಾಡಿ ವಿವರಗಳನ್ನು ಸಂಗ್ರಹಿಸದೇ ಹೋಗಿದ್ದಲ್ಲಿ, ಗಾಂಧಿ ಅವರ ಸಂಶೋಧನೆಯ ಪ್ರಾಮುಖ್ಯತೆ ವಿಜ್ಞಾನ ಪ್ರಪಂಚಕ್ಕೆ ದೂರವೇ ಉಳಿದಿರುತ್ತಿತ್ತು. 

ತಮ್ಮಅಪೂರ್ವ ಸಂಶೋಧನೆಗೆ ಯಾವುದೇ ಮನ್ನಣೆ, ಪುರಸ್ಕಾರಕ್ಕೆ ಪಾತ್ರರಾಗದ ಹೆಚ್.ಪಿ.ಗಾಂಧಿ ಅವರು 2008ರ ಜೂನ್ 5ರಂದು ಜುನಾಗಡ್ ನಲ್ಲಿ ನಿಧನರಾದರು. ಅವರ ನಿಧನದ ನಂತರವೇ  ಅವರ ಸಂಶೋಧನೆಗೆ ಸಂಬಂಧಿಸಿದ ವಿವರಗಳು ವಿಜ್ಞಾನ ಲೋಕಕ್ಕೆ ತಿಳಿದುಬಂದದ್ದು. ಅವರ ನಿಧನಾ ನಂತರವೇ ಅವರನ್ನು " ಭಾರತದ ಸಿಹಿನೀರಿನ ಡಯಾಟಮ್ ಗಳ ಪಿತಾಮಹ " ಎಂದು ವಿಜ್ಞಾನ ಲೋಕ ಗುರುತಿಸಲು ಪ್ರಾರಂಭಿಸಿದ್ದು ಒಂದು ವಿಪರ್ಯಾಸ ! ಇತ್ತೀಚೆಗೆ,  ಕೆಲವು ತಿಂಗಳ ಹಿಂದೆ ಗುರುತಿಸಲಾದ ಡಯಾಟಮ್ ನ ಹೊಸ ಪ್ರಬೇಧ ಒಂದಕ್ಕೆ 'ಗಾಂಧಿಯಾ ' ಎಂಬ ಹೆಸರನ್ನು ನೀಡಿ ಗೌರವಿಸಲಾಗಿದೆ.

ಗಾಂಧಿ ಅವರ ಸಮಕಾಲೀನ ಸಹೋದ್ಯೋಗಿಗಳು ಹಾಗು ವಿಜ್ಞಾನ ಲೋಕ ಅವರನ್ನು ಮರೆತಿರಬಹುದು. ಆದರೆ ಅವರನ್ನು ಡಯಾಟಮ್ ಗಳು ಮರೆಯಲು ಸಾಧ್ಯವೇ ?


3 comments:

  1. ಎಲೆ ಮರೆ ಕಾಯಿಗಳ, ಮಿನುಗುವ ನಕ್ಷತ್ರ ಗಳ ಪರಿಚಯ ಮನ ಮುಟ್ಟುವ ಹಾಗಿದೆ....

    ReplyDelete
  2. ನಿಮ್ಮ ಕಾಳಜಿಯುಕ್ತ ಬರಹಕ್ಕೆ ಧನ್ಯವಾದಗಳು ಸರ್.‌ ಒಂದು ಮಾಹಿತಿ ಬಗ್ಗೆ ಸ್ಪಷ್ಟನೆ ಬೇಡುವೆ. ಡಯಾಟಮ್ ಗಳು ಒದಗಿಸುವ ಆಕ್ಸಿಜನ್‌ ಪ್ರಮಾಣ ಎಷ್ಟು? ಲೇಖನದಲ್ಲಿ 75 ಇದೆ. ನಂತರ ವಿವರಣೆಯಲ್ಲಿ 4 ಉಸುರಿನಲ್ಲಿ ಒಂದು ಉಸಿರು ಡಯಾಟಂಗಳದ್ದು ಎಂದಿದೆ. ಹಾಗಾದರೆ 25 % ಸರಿಯೆ? ದಯವಿಟ್ಟು ತಿಳಿಸಿ.

    ReplyDelete