Tuesday, June 4, 2024

ಒರಂಗುಟಾನ್‌ ಎಂಬ ಗುರುವೂ ವಿಜ್ಞಾನಿಗಳೆಂಬ ಶಿಷ್ಯಂದಿರೂ!!!

ಒರಂಗುಟಾನ್‌ ಎಂಬ ಗುರುವೂ ವಿಜ್ಞಾನಿಗಳೆಂಬ ಶಿಷ್ಯಂದಿರೂ!!!

ಲೇ : ರಾಮಚಂದ್ರ ಭಟ್‌ ಬಿ.ಜಿ.

    
        ಅದು ಶಿವಮೊಗ್ಗದಲ್ಲಿ ಬಿ.ಎಡ್‌ ಓದುತ್ತಿದ್ದ ಕಾಲ. ತರಗತಿಯಲ್ಲಿ ನಮ್ಮ AGG ಸರ್‌ ಕಲಿಕಾ ಸಿದ್ಧಾಂತಗಳ ಬಗ್ಗೆ ಹೇಳುತ್ತಾ ಒಳನೋಟ ಕಲಿಕೆಯ ಬಗ್ಗೆ ಹೇಳುತ್ತಿದ್ದರು. ಗೆಸ್ಟಾಲ್ಟ್‌ ಸೈಕಾಲಜಿಸ್ಟ್‌ ಆಗಿದ್ದ ಕೋಹ್ಲರನ ಪ್ರಯೋಗದಲ್ಲಿ ಕೋಣೆಯೊಂದರಲ್ಲಿ ಕೂಡಿ ಹಾಕಲ್ಪಟ್ಟ ಚಿಂಪಾಂಜಿ ಸುಲ್ತಾನ್‌ ಸೀಲಿಂಗ್‌ಗೆ ತೂಗು ಹಾಕಿದ ಬಾಳೆ ಹಣ್ಣನ್ನು ಪಡೆಯಲು ಮಾಡಿದ ಹಲವು ಪ್ರಯತ್ನಗಳು ಹೇಗೆ ಒಳನೋಟ ಕಲಿಕೆಗೆ ಕಾರಣವಾಗುತ್ತವೆ ಎನ್ನುವುದನ್ನು ಹೇಳುತ್ತಿದ್ದರು. ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಕೋಹ್ಲರ್‌ ಮಾಡಿದ ಪ್ರಯೋಗಗಳು ಕಲಿಕಾ ಸಿದ್ಧಾಂತಗಳ ರೂಪಿಸುವಿಕೆಯಲ್ಲಿ ಅದ್ಭುತ ಪ್ರಯತ್ನವೇ ಸರಿ. ಇದೆಲ್ಲವೂ ನಿಮಗೆ ತಿಳಿಯದ ವಿಷಯವೇನಲ್ಲ. ಇದ್ದಕ್ಕಿದ್ದ ಹಾಗೆ ಈ ಪ್ರಸಂಗ ನೆನಪಾಗಲು ಕಾರಣ- ಇತ್ತೀಚೆಗೆ ಸುದ್ದಿವಾಹಿನಿಯಲ್ಲಿ ಬಿತ್ತರಗೊಂಡ ವಿಷಯ!!!. ಇದು ಮತ್ತೆ ಮತ್ತೆ ನನ್ನನ್ನು ಆ ದಿನಗಳತ್ತ ಕರೆದೊಯ್ದಿತ್ತು. ಪ್ರಾಣಿಗಳ ಕಲಿಕೆಯ ವೇಗ ಮತ್ತು ಕಲಿಕಾವಿಧಾನಗಳು ನಮ್ಮ ಮಕ್ಕಳ ಕಲಿಕೆಯ ಗ್ರಹಣ ಸಾಮರ್ಥ್ಯ ಹೇಗೆ ವೃದ್ಧಿಯಾಗುತ್ತದೆ ಎನ್ನಲು ಸಾಕಷ್ಟು ಒಳನೋಟಗಳನ್ನು ಒದಗಿಸುತ್ತದೆ.
 
    ಪ್ರಕೃತಿ ಅಜೇಯ, ಅಭೇಧ್ಯ, ಅನೂಹ್ಯ, ಅಚ್ಚರಿ, ನಿಗೂಢತೆಗಳ ರಮ್ಯ ತಾಣ. ಮನುಷ್ಯ ಅದೆಷ್ಟು ಸಾಧನೆ ಮಾಡಿದರೂ ಇನ್ನೂ ಪ್ರಕೃತಿಯಿಂದ ಕಲಿಯಬೇಕಾದ್ದು ಸಾಕಷ್ಟಿದೆ. ಭೇಧಿಸಲಾಗದ ಅದೆಷ್ಟೋ ಸತ್ಯಗಳನ್ನು ತನ್ನೊಡಲೊಳಗೆ ಗುಪ್ತವಾಗಿ ಇಟ್ಟುಕೊಂಡಿದೆ. ಇವುಗಳ ಬೆಂಬತ್ತುವ ಮನುಷ್ಯನಿಗೆ ಹೆಜ್ಜೆ ಹೆಜ್ಜೆಗೂ ಅಚ್ಚರಿ!!!  ಪೃಥೆ ತನ್ನ ಅಕ್ಷಯ ತೂಣೀರದಿಂದ ಹೊಸ ಹೊಸ ಬಾಣಗಳನ್ನು ಪ್ರಯೋಗ ಮಾಡುತ್ತ, ಪದೇ ಪದೇ ನಿಗೂಢತೆಯ ಅನಾವರಣ ಮಾಡುತ್ತಲೇ ಇದ್ದಾಳೆ. ಆಸೀಮ ಸಾಹಸಿ ಮನುಷ್ಯನೂ ಇವೆಲ್ಲವನ್ನೂ ಮುಕ್ತವಾಗಿ ಸ್ವೀಕರಿಸಿ ತನ್ನ ಜ್ಞಾನಭಂಡಾರವನ್ನು ಶ್ರೀಮಂತಗೊಳಿಸುತ್ತಿದ್ದಾನೆ. ವಿಕಾಸದ ಹಾದಿಯಲ್ಲಿ ಅದೃಷ್ಟವಶಾತ್‌ ದೊರೆತ ಅನುಕೂಲತೆಗಳನ್ನು ಬಳಸಿ ಏಕಮೇವಾದ್ವಿತೀಯನಾಗಿ ಮೆರೆಯುತ್ತಿದ್ದಾನೆ. ಆಫ್ರಿಕಾದಲ್ಲಿ ವಿಕಾಸಗೊಂಡ ಹೋಮೋ ಸೇಪಿಯನ್ಸ್‌ ಅಲ್ಲಿಂದ ತನ್ನ ಜ್ಞಾತಿಗಳೊಂದಿಗೆ ಹೊರಟು ಎಲ್ಲ ಖಂಡಗಳನ್ನೂ ತಲುಪಿ ತನ್ನ ಆಳ್ವಿಕೆಯನ್ನು ಮುಂದುವರೆಸಿದ್ದಾನೆ. ಇತರ ಪ್ರಾಣಿಗಳಂತೆ ಪೊಟರೆಗಳಲ್ಲಿ ವಾಸಿಸುತ್ತಿದ್ದ ಆದಿಮಾನವ ಇಂದು ತನ್ನ ಬೌದ್ಧಿಕ ಶಕ್ತಿಯಿಂದ ತಿಂಗಳನ ಮೇಲೂ ಕಾಲಿಟ್ಟಿದ್ದಾನೆ.
    ಅದು ೨೦೨೨ರ ಜೂನ್‌ ತಿಂಗಳು. ಇಂಡೋನೇಷ್ಯಾದ ಗುನಂಗ್, ನ್ಯಾಷನಲ್‌ನ ಸುವಾಕ್ ಬಾಲಿಂಬಿಂಗ್ ಪ್ರದೇಶ ಲ್ಲಿ ಪ್ರಾಣಿಗಳ ವರ್ತನೆಯ ಬಗ್ಗೆ ಸಂಶೋಧನೆ ಮಾಡ ಹೊರಟ ವಿಜ್ಞಾನಿಗಳ ಕಣ್ಣಿಗೆ ಅಂದು ಪ್ರಕೃತಿ ಅಚ್ಚರಿಯೊಂದನ್ನು ತೋರಿತು. ಧೇನಿಸುತ್ತಾ , ಅಧ್ಯಯನ ಮಾಡುತ್ತಾ ಸಾಗಿದ ಆ ವಿಜ್ಞಾನಿಗಳಿಗೆ ಗಂಡು ಒರಾಂಗುಟಾನ್ ಒಂದು ಕಣ್ಣಿಗೆ ಬಿತ್ತು. ಇದನ್ನು ಮೊದಲು ಕಂಡದ್ದು ಅದರ ಕಿಶೋರಾವಸ್ಥೆಯಲ್ಲಿದ್ದಾಗ!! ಅದಕ್ಕೆ ರಾಕಸ್‌ ಎಂದು ನಾಮರಣ ಮಾಡಲಾಗಿತ್ತು. ಈಗ ಅದು ಯೌವ್ವನಕ್ಕೆ ಕಾಲಿಟ್ಟಿತ್ತು. ಕುದಿ ರಕ್ತ ಕೇಳಬೇಕೇ? ಹೆಂಡ ಕುಡಿದ ಕೋತಿಯಂತಾಡುವ ವಯಸ್ಸು. ಬಹುಶಃ ಯಾರೊಂದಿಗೆ ಹೊಡೆದಾಟಕ್ಕೆ ಇಳಿದಿತ್ತೋ ಏನೋ? ಒಟ್ಟಿನಲ್ಲಿ ಸಂಶೋಧಕರ ಕಣ್ಣಿಗೆ ಬಿದ್ದ ರಾಕಸ್‌ ಒರಂಗುಟಾನ್‌ನ ಕಣ್ಣಿನ ಬಳಿ ಗಾಯದಿಂದ ಆಳ ಕುಳಿಯಾಗಿತ್ತು. ಇದರ ವರ್ತನೆಯನ್ನು ಅರಿಯಲು ಅದರ ಹಿಂದೆ ಬಿತ್ತು ಸಂಶೋಧನಾ ತಂಡ.  ಅದರ ಮೇಲೆ ಕಣ್ಣಿಟ್ಟವರಿಗೆ ಕುತೂಹಲಕಾರಿ ಕೃತ್ಯವೊಂದು ಗೋಚರಿಸಿತು. ಸೂಕ್ಷ್ಮವಾಗಿ ಗಮನಿಸಿದ ವಿಜ್ಞಾನಿಗಳ ಕಣ್ಣಿಗೆ  ರಾಕಸ್‌ ತಜ್ಞ ವೈದ್ಯನಂತೆ ತನ್ನ ಮುಖದ ಮೇಲಿನ ಗಾಯಕ್ಕೆ ಔಷಧೀಯ ಸಸ್ಯದಿಂದ ತಯಾರಿಸಿದ ಲೇಪವೊಂದರ ಪಟ್ಟಿ ಕಟ್ಟಿ ಚಿಕಿತ್ಸೆ ಮಾಡುವುದು ಗಮನಕ್ಕೆ ಬಂತು!!! ತಜ್ಞ ವೈದ್ಯನಂತೆ ಚಿಕಿತ್ಸೆ ಮಾಡಿಕೊಂಡ ರಾಕಸ್‌ ಈಗ ವಿಜ್ಞಾನಿಗಳ ಪಾಲಿಗೆ ಗುರುವಾಯಿತು.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ವಿಜ್ಞಾನಿಗಳು ರಾಕಸ್‌ನ ಹಿಂದೆ ಬಿದ್ದರು. ಗುರು ವಿದ್ಯೆಯ ಪ್ರಾತ್ಯಕ್ಷಿಕೆ ತೋರುವ ತನಕ ಬಿಡೆನು ನಿನ್ನ ಪಾದ ಗುರುವೇ..“ ಎನ್ನುವಂತೆ ವಿನೀತ ಶಿಷ್ಯರಂತೆ ತಾಳ್ಮೆಯಿಂದ ಕಾದರು.  ಅದು ಜೂನ್ 25 . ಬೆಳಗ್ಗಿನ 11 ಗಂಟೆ, ಈ ರಾಕಿಂಗ್‌ ಸ್ಟಾರ್‌ ರಾಕಸ್ ಎಂಬ ಗಂಡು ಸುಮಾತ್ರಾನ್ ಒರಾಂಗುಟಾನ್ (Pongo abelii ) ತನ್ನ ಮುಖದ ಗಾಯಕ್ಕೆ Fibraurea tinctoria ಎಂಬ ವೈಜ್ಞಾನಿಕ ಹೆಸರುಳ್ಳ, ಸ್ಥಳೀಯ ಭಾಷೆಯಲ್ಲಿ ಅಕರ್ ಕುನಿಂಗ್ ಎಂದು ಕರೆಯಲಾಗುವ ಅಡರು ಬಳ್ಳಿಯ ಎಲೆಗಳನ್ನು ಅಗಿದು ಅದರ ರಸವನ್ನು ಪದೇ ಪದೇ ಹಚ್ಚುವ ಮೂಲಕ ಚಿಕಿತ್ಸೆ ನೀಡಿ ತನ್ನ ಚಿಕಿತ್ಸಾ ವಿಧಾನದ ಪ್ರಾತ್ಯಕ್ಷಿಕೆಯನ್ನು ನೀಡಿತು.

ಮೊದಲಿಗೆ ರಾಕಸ್ ಫೈಬ್ರೂರಿಯಾ ಟಿಂಕ್ಟೋರಿಯಾದ ಎಲೆಗಳನ್ನು ಜಗಿಯಲಾರಂಭಿಸಿತು. ಸುಮಾರು ಕಾಲು ಗಂಟೆ ಜಗಿದ ನಂತರ, ಬಾಯಿಯಿಂದ ಸಸ್ಯದ ರಸವನ್ನು ತನ್ನ ಮುಖದ ಗಾಯದ ಮೇಲೆ ನೇರವಾಗಿ ಹಚ್ಚಿತು. ಈ ಪ್ರಕ್ರಿಯೆ ಏಳು ನಿಮಿಷಗಳ ಕಾಲ ಪುನರಾವರ್ತನೆಯಾಯಿತು.  ಈ ಗಾಯಕ್ಕೆ ನೊಣಗಳು ಮುತ್ತಿಕೊಳ್ಳುತ್ತಿದ್ದಂತೆ  ರಾಕುಸ್ ಸಂಪೂರ್ಣ ಗಾಯವನ್ನು ಎಲೆಗಳ ಲೇಪನವನ್ನು ಹೊದಿಸಿ ಕೆಂಪು ಮಾಂಸ ಹೊರಕಾಣದಂತೆ ಪಟ್ಟಿ ಕಟ್ಟಿ ವ್ರಣವನ್ನು ಮುಚ್ಚಿತು. ಸಂಶೋಧಕರ ತಂಡ ರಾಕಸ್‌ನ ಹಿಂದೆ ಬಿದ್ದು ತನ್ನ ಪತ್ತೆದಾರಿಕೆಯನ್ನು ಮುಂದುವರೆಸಿತು.  ಗಾಯವು ಸೋಂಕಿಗೆ ಒಳಗಾಗುವ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ ಮತ್ತು ಜೂನ್ 30 ರ ಹೊತ್ತಿಗೆ ಮುಖದ ಗಾಯವು ಬಹುತೇಕ ವಾಸಿಯಾಗಿತ್ತು. ಜುಲೈ 19, 2022 ರ ಹೊತ್ತಿಗೆ, ಈ ಗಾಯವು ಸಂಪೂರ್ಣವಾಗಿ ವಾಸಿಯಾಗಿ ಮಸುಕಾದ ಗಾಯದ ಕಲೆ ಮಾತ್ರ ಉಳಿದಿತ್ತು!!! ಈ ಘಟನೆಯ ಸಂಶೋಧನಾ ವರದಿ ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ಪ್ರಕಟವಾಯಿತು.

ಇತರ ಪ್ರೈಮೇಟ್ ಪ್ರಭೇದಗಳು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ಅಗಿಯಲು ಅಥವಾ ಗಾಯದ ಮೇಲೆ ಉಜ್ಜಲು ತಿಳಿದಿದ್ದರೂ, ರಾಕಸ್‌ನಂತೆ ಗಾಯಗಳಿಗೆ ಮುಲಾಮು ಹಚ್ಚಿ ಚಿಕಿತ್ಸೆ ನೀಡುವುದು ವಿಜ್ಞಾನಿಗಳ ಗಮನಕ್ಕೆ ಬಂದಿಲ್ಲ. ಈ ಜ್ಞಾನ ಅದಕ್ಕೆ ನೀಡಿದವರಾದರೂ ಯಾರು? ಅವೇನು ನಮ್ಮಂತೆ ಸಂಶೋಧನೆ ನಡೆಸುತ್ತವೆಯೇ? ಆಲೋಚಿಸಬೇಕಾದ ವಿಚಾರವೇ ಸರಿ.

ಫೈಬ್ರೌರಿಯಾ ಟಿಂಕ್ಟೋರಿಯಾ ಚೀನಾ, ಇಂಡೋನೇಷಿಯಾ, ಮಲೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂ ಮತ್ತು ಆಗ್ನೇಯ ಏಷ್ಯಾದ ಇತರ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿದೆ. ಇದು  ನೋವು ನಿವಾರಕ, ಜ್ವರಹರ, ವಿಷಹರ ವಾಗಿದ್ದು ಮೂತ್ರಕ್ಕೆ ಸಂಬಂಧಿತ ಕಾಯಿಲೆಗಳು , ಭೇದಿ, ಮಧುಮೇಹ ಮತ್ತು ಮಲೇರಿಯಾದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ. ಇದರ ಎಲೆಗಳು, ಕಾಂಡಗಳು, ಬೇರುಗಳು ಮತ್ತು ತೊಗಟೆ ಸೇರಿದಂತೆ ಸಸ್ಯ ಎಲ್ಲಾ ಭಾಗಗಳನ್ನು ಔಷಧಿಯಾಗಿ ಬಳಸಲಾಗುತ್ತದೆ.

ಗಾಯಕ್ಕೆ ಹೇಗೆ ಚಿಕಿತ್ಸೆ ನೀಡಬೇಕೆಂದು ರಾಕಸ್ ಹೇಗೆ ಕಲಿತಿತು ಎಂಬ ಪ್ರಶ್ನೆಗೆ, ಸಂಶೋಧಕರು  ಇದೊಂದು "ಆಕಸ್ಮಿಕ ವೈಯಕ್ತಿಕ ನಾವೀನ್ಯತೆ" ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒರಾಂಗುಟಾನ್ ಸಸ್ಯವನ್ನು ತಿನ್ನುವಾಗ ಆಕಸ್ಮಿಕವಾಗಿ ತನ್ನ ಗಾಯವನ್ನು ಸ್ಪರ್ಶಿಸಿರಬಹುದು ಮತ್ತು ಅದರ ನೋವು ನಿವಾರಕ ಪರಿಣಾಮಗಳಿಂದ ತಕ್ಷಣ ನೋವಿನಿಂದ ಉಪಶಮನ ದೊರೆತಿರಬಹುದು. ಈ ಕಲಿಕೆ ಹೊಸ ಸಂದರ್ಭದಲ್ಲಿ ಪುನರಾವರ್ತಿಸಿರಬಹುದು  ಎಂದು ಅವರು ವಿವರಿಸಿದರು.

ರಾಸಾಯನಿಕ ಪರೀಕ್ಷೆಗಳು ಈ ಸಸ್ಯದಲ್ಲಿ ಫ್ಯುರಾನೊಡೈಟರ್ಪೆನಾಯ್ಡ್ಸ್ ಎಂಬ ರಾಸಾಯನಿಕಗಳು ಇವೆ ಎಂದು ತಿಳಿಸಿವೆ.  ಇದು ಒಂದು ಅಥವಾ ಹೆಚ್ಚಿನ ಫ್ಯೂರನ್ ಉಂಗುರಾಕಾರದ ಅಣುಗಳಿಂದ  (ನಾಲ್ಕು ಇಂಗಾಲದ ಪರಮಾಣುಗಳು ಮತ್ತು ಒಂದು ಆಮ್ಲಜನಕದೊಂದಿಗೆ) ಸಂಯೋಜಿಸಲ್ಪಟ್ಟ ಸುಗಂಧಭರಿತ ಸಂಯುಕ್ತ.  ಇದು ಬ್ಯಾಕ್ಟೀರಿಯಾಹರ, ಉರಿ ನಿವಾರಕ , ಶಿಲೀಂಧ್ರನಾಶಕ, ಪ್ರತಿಉತ್ಕರ್ಷ ಮತ್ತು ಆಂಟಿಕಾರ್ಸಿನೋಜೆನಿಕ್ ಗುಣಗಳನ್ನು ಹೊಂದಿದೆ. ಫೈಬ್ರೌರಿಯಾ ಟಿಂಕ್ಟೋರಿಯಾವು ಪ್ರೊಟೊಬರ್ಬೆರಿನ್ ಆಲ್ಕಲಾಯ್ಡ್‌ಗಳು ಯಥೇಚ್ಛವಾಗಿದ್ದು, ಇದು ಉರಿಯೂತ ಮತ್ತು ನೋವು ನಿವಾರಕವಾಗಿದೆ. ತಲೆಸುತ್ತು, ಮತಿಭ್ರಾಂತಿ ನಿವಾರಕ, ನಾರ್ಕೋಟಿಕ್, ಸಂಧು ನೋವು ನಿವಾರಕ, ಅಲ್ಸರ್‌ ನಿವಾರಕ, ಪ್ರತಿಜೀವಕತೆ, ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಗುಣಗಳೂ ಸೇರಿದಂತೆ ಅನೇಕ ಬಗೆಯ ಅನ್ವಯಗಳನ್ನು ಹೊಂದಿದೆ ಎಂದು ಪತ್ತೆಯಾಗಿದೆ.

ಹೀಗೆ ತನ್ನ ಹಿಂದೆ ಬಿದ್ದ ಸಂಶೋಧಕ ಶಿಷ್ಯಂದಿರಿಗೆ ಗುರುವಾಗಿ ತನ್ನ ವೈದ್ಯಕೀಯ ಜ್ಞಾನವನ್ನು ಹಂಚಿದ  ಒರಂಗುಟಾನ್‌ ರಾಕಸ್‌ನನ್ನು ರಾಕಿಂಗ್‌ ಸ್ಟಾರ್‌ ಎನ್ನದೇ ವಿಧಿ ಇಲ್ಲ.‌ 

ವಿಶ್ವ ಪರಿಸರ ದಿನಾಚರಣೆಯ ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳಿಗೆ ಈ ರಾಕಸ್ ನ ರೋಚಕ ಸುದ್ದಿ ರೋಮಾಂಚನ ಉಂಟು ಮಾಡೀತು.

ಹೆಚ್ಚಿನ ವಿವರಗಳಿಗಾಗಿ

 : https://www.nature.com/articles/s41598-024-58988-7#Fig1


 

 

 

1 comment:

  1. ಸೂಪರ್‌ ಸರ್.‌ ರೋಚಕವಾಗಿದೆ.

    ReplyDelete