Tuesday, June 4, 2024

ಅಲ್ಗೋಲ್:ಅತಿಲೋಕ ಸುಂದರಿಯೋ? ಮತಿಗೇಡಿ ರಕ್ಕಸಿಯೋ?

 

ಅಲ್ಗೋಲ್:ಅತಿಲೋಕ ಸುಂದರಿಯೋ? ಮತಿಗೇಡಿ ರಕ್ಕಸಿಯೋ?

ಲೇಖಕರು: ಸುರೇಶ ಸಂಕೃತಿ,

ನಿವೃತ್ತ ಮಖ್ಯ ಶಿಕ್ಷಕರು.

 

 ಅಲ್ಗೋಲ್‌! ಹೌದು   ಭಯಾನಕವಾದ ಈ ಹೆಸರಿನ ಮೂಲ ಅರೇಬಿಯಾ. ಅರೇಬಿಕ್‌ ಭಾಷೆಯಲ್ಲಿ ರಾಸ್‌- ಅಲ್-ಘೋಲ್ ಎಂದರೆ  ಪಿಶಾಚಿಯ ತಲೆ ಎಂದು ಅರ್ಥಇದು ಒಂದು ನಕ್ಷತ್ರ ಹೆಸರು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು  ರಾತ್ರಿಯಾಕಾಶಾದಲ್ಲಿ  ಪೆರ್ಸುಯಸ್‌ ನಕ್ಷತ್ರ ಪುಂಜದಲ್ಲಿ ಕಂಡು ಬರುವ ಒಂದು ಚಂಚಲ ತಾರೆಯ ಹೆಸರು ಅಲ್ಗೋಲ್‌! ಚಂಚಲ ತಾರೆಯೆಂದರೆ ಕಾಲ ಕಳೆಯುತ್ತಿದ್ದಂತೆ ತನ್ನ ಕಾಂತಿಯನ್ನು ಬದಲಾಯಿಸುವ ನಕ್ಷತ್ರ. ಗ್ರೀಕ್‌ ಪುರಾಣದಲ್ಲಿ ಮೆದೂಸ ಎಂಬ   ರಕ್ಕಸಿಯ ಕಥೆಯೊಂದು ಬರುತ್ತದೆ. ಇದೊಂದು  ದುರಂತಮಯ ಅಂತ್ಯವನ್ನು ಕಂಡ ಮುಗ್ದ ‌  ಅತಿಲೋಕ ಸುಂದರಿಯ  ವಿಷಾದನೀಯ   ಕಥೆ. ರಕ್ಕಸಿ ಮೆದೂಸಳ ತಲೆಯನ್ನೇ ಅಲ್ಗೋಲ್‌ ಎಂದು ಜನ ಗುರ್ತಿಸುತ್ತಾ ಬಂದಿದ್ದಾರೆ. 3200 ವರ್ಷಗಳ ಹಿಂದೆಯೆ ಈಜಿಪ್ಟಿನ ಪಂಚಾಂಗದಲ್ಲಿಯೂ  ಈ ನಕ್ಷತ್ರದ  ಪ್ರಸ್ತಾಪವನ್ನು ಮಾಡಲಾಗಿದೆಚೀನಿಯರು ಅಲ್ಗೋಲನ್ನು ಹೆಣಗಳ ರಾಶಿ ಎಂದು  ಕರೆದರು. ಭಾರತೀಯರು ಸೈಂದವನೆಂದರು.  ಹೀಗೆ ಬೇರೆ ಬೇರೆ ಸಂಸ್ಕೃತಿಗಳಲ್ಲಿ  ಅಲ್ಗೋಲಿಗೆ ಅಪಖ್ಯಾತಿಯ ಹೆಸರುಗಳನ್ನೇ ನೀಡಿದ್ದಾರೆತಲೆಯಲ್ಲಿ ಕೂದಲಿನ ಬದಲಾಗಿ ವಿಷಪೂರಿತ ಸರ್ಪಗಳೇ ತುಂಬಿರುವ ಮೆದೂಸಳನ್ನು ಹತ್ಯೆಗೈದ ಪೆರ್ಸುಯಸನನ್ನು ಧೀರ ವೀರ ಶೂರನೆಂದು ಗ್ರೀಕ್‌ ಪುರಾಣದಲ್ಲಿ ಬಣ್ಣಿಸಲಾಗತ್ತದೆ. ಖಗೋಳ ವೀಕ್ಷಕರು ಬಲು ಹಿಂದಯೇ ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಲಿ ಪೆರ್ಸುಯಸ್‌ ತಾನು ಕಡಿದ ಮೆದೂಸಳ ಶಿರವನ್ನು ಹಿಡಿದು ನಿಂತಿರುವ   ಚಿತ್ರವನ್ನು ಇಡೀ ಈ ನಕ್ಷತ್ರ ಪುಂಜವನ್ನು ಗುರ್ತಿಸಲು ಕಲ್ಪಿಸಿಕೊಂಡಿದ್ದಾರೆ .

     ಪೆರ್ಸುಯಸ್‌ ನಕ್ಷತ್ರ ಪುಂಜ ಉತ್ತರ ಧ್ರುವಕ್ಕೆ ಸಮೀಪದಲ್ಲಿರುವುದರಿಂದ ವರ್ಷವಿಡಿ ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರ ಪುಂಜಗಳಲ್ಲಿ ಒಂದು. ಜುಲೈ ಎರಡನೇ ವಾರದಿಂದ ಆಗಸ್ಟ್‌ ಮಧ್ಯದವರೆಗೆ ಈ ನಕ್ಷತ್ರ ಪುಂಜದಲ್ಲಿ ಕಂಡು ಬರುವ ಉಲ್ಕಾವರ್ಷ ತುಂಬಾ ಪ್ರಸಿದ್ಧ. 1992ರಲ್ಲಿ ಸೂರ್ಯನನ್ನು ಅತಿ ಸಮೀಪದಿಂದ ಸುತ್ತಿ ಹಾಕಿಕೊಂಡು ಬಾಹ್ಯಾಕಾಶಕ್ಕೆ ಹಿಂತಿರುಗಿದ ಸ್ವಫ್ಟ್ ಟಟಲ್‌ ಎನ್ನುವ ಧೂಮಕೇತು ತನ್ನ ದಾರಿಯುದ್ದಕ್ಕೂ ಬಿಟ್ಟು ಹೋಗಿರುವ ಅವಶೇ಼ಷಗಳು ಅಂತರಿಕ್ಷದಲ್ಲಿ ಉಳಿದಿವೆ. ಇವು ಭೂಮಿಯು ಸೂರ್ಯನನ್ನು ಸುತ್ತವ ಪಥದಲ್ಲಿಯೂ ಹರಡಿಕೊಂಡಿವೆಭೂಮಿಯು ಸೂರ್ಯನನ್ನು ಸುತ್ತುತ್ತಾ ಈ ಅವಶೇಷಗಳಿರುವ ಪ್ರದೇಶದ ಮೂಲಕ ಹಾದು ಹೋಗುವಾಗ ಅವು ಭೂಮಿಯ ಗುರುತ್ವಾರ್ಷಣೆಗೆ ಒಳಗಾಗಿ ಭೂ ವಾಯುಮಂಡಲವನ್ನು ಪ್ರವೇಶಿಸಿ ನೆಲದಿಂದ ಬಹು ಎತ್ತರದಲ್ಲಿಯೇ ಉರಿದು ಬೂದಿಯಾಗುತ್ತವೆಈ ವಿದ್ಯಮಾನವು ಭೂಮಿಯಲ್ಲಿರುವ ನಮಗೆ ರಾತ್ರಿಯಾಕಾಶದಲ್ಲಿ ಆಗುವ ಉಲ್ಕಾವರ್ಷದಂತೆ ಕಾಣುತ್ತದೆಮತ್ತು ಈ ಉಲ್ಕಾವರ್ಷದ ಕೇಂದ್ರವು ಪೆರ್ಸುಯಸ್‌ ನಕ್ಷತ್ರ ಪುಂಜದಲ್ಲಿರುವಂತೆ ನಮಗೆ ತೋರುವುದರಿಂದ ಇದನ್ನು ಪೆರ್ಸುಯಸ್‌ ಉಲ್ಕಾಪಾತವೆಂದು ಕರೆಯಲಾಗಿದೆ. ಈ ವಿಶೇ಼ಷತೆಯೊಂದಿಗೆ ಪೆರ್ಸುಯಸ್ಸಿನ ಮುಖ್ಯ ಆಕರ್ಷಣೆ ಎಂದರೆ ಮೇಲೆ ತಿಳಿಸಿದ ಅಲ್ಕೋಲ್‌ ಎಂಬ ಚಂಚಲತಾರೆ

      ಚಂಚಲ ತಾರೆಯೆಂದರೆ ಕಾಲ ಕಳೆಯುತ್ತಿದ್ದಂತೆ ತನ್ನ ಕಾಂತಿಯನ್ನು ಬದಲಾಯಿಸುವ ನಕ್ಷತ್ರ. ತಾರೆಯೊಂದರ ಆಂತರ್ಯದಲ್ಲಿ ನಡೆಯುವ ನ್ಯೂಕ್ಲಿಯಾರ್ ಕ್ರಿಯೆಯಿಂದ ಉಂಟಾಗುವ ಅಪಾರ ಪ್ರಮಾಣದ ಉಷ್ಣ ಶಕ್ತಿ ನಕ್ಷತ್ರವನ್ನು ಹಿಗ್ಗಿಸುವ ಪ್ರಯತ್ನದಲ್ಲಿ ಸತತ ನಿರತವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಅದೇ ನಕ್ಷತ್ರದ ರಾಶಿಯ ಕಾರಣದಿಂದ ಏರ್ಪಡುವ ಗುರುತ್ವದ ಬಲ ನಕ್ಷತ್ರವು ತನ್ನ ಒಳಕ್ಕೆ ತಾನೇ ಕುಸಿಯುವಂತೆ ಮಾಡುತ್ತಿರುತ್ತದೆ.ಇದೊಂದು ರೀತಿಯ ಹಗ್ಗ ಜಗ್ಗಾಟ ಇದ್ದಂತೆ. ಉಷ್ಣ ಶಕ್ತಿಯ ಮೇಲ್ಗೈಯಾದರೆ ನಕ್ಷತ್ರ ಸಹಜವಾಗಿ ಗಾತ್ರದಲ್ಲಿ ಹಿಗ್ಗುತ್ತದೆ. ಗುರುತ್ವ ಬಲದ ಮೇಲ್ಗೈಯಾದರೆ ನಕ್ಷತ್ರ ಗಾತ್ರದಲ್ಲಿ ಕುಗ್ಗುತ್ತದೆ. ನಕ್ಷತ್ರದಲ್ಲಿ ಹೀಗೆ ಹಿಗ್ಗುವ ಮತ್ತು ಕುಗ್ಗುವ ಕ್ರಿಯೆಗಳು ನಿರಂತರವಾಗಿ ಒಂದು ಆವರ್ತದಂತೆ ಆಗುತ್ತಿದ್ದರೆ ನಕ್ಷತ್ರದ ಕಾಂತಿಯಲ್ಲಿ ಬದಲಾವಣೆಯೂ ನಿರ್ದಿಷ್ಟ ಆವರ್ತದಲ್ಲಿರುತ್ತದೆ ಮತ್ತು ಅದು ಮಿಡಿಯುವ ಚಂಚಲತಾರೆ ಎನಿಸುತ್ತದೆನಕ್ಷತ್ರದಲ್ಲಿ ಉಷ್ಣ ಶಕ್ತಿಯದೇ ಮೇಲ್ಗೈಯಾಗುತ್ತಾ ಹೋದರೆ ಮುಂದೊಂದು ದಿನ ಅದು ಸ್ಫೋಟಿಸಿ ಅದರ ಕಾಂತಿಯಲ್ಲಿ ಬದಲಾವಣೆ ಆಗಬಹುದು. ಇಂತಹವನ್ನು ಆಂತರಿಕ ಕಾರಣದಿಂದ ಉಂಟಾಗುವ ಚಂಚಲ ತಾರೆಗಳೆನ್ನುವರು.ಒಂದು ನಕ್ಷತ್ರದ ಹೊರಗಿರುವ ಒಂದು ಅಥವಾ ಹೆಚ್ಚು ನಕ್ಷತ್ರ ಅಥವಾ  ಇತರೆ ಕಾಯಗಳು ಆ ನಕ್ಷತ್ರ ಮತ್ತು ನಮ್ಮ ನೋಟದ ನಡುವೆ ಅಡ್ಡ ಬಂದು ಗ್ರಹಣವಾಗುವುದರಿಂದ ಅದರ  ಕಾಂತಿಯಲ್ಲಿ ಬದಲಾವಣೆಯಾದಂತೆ ನಮಗೆ ಅದು ತೋರಬಹುದು. ಇದು ಎರಡನೆಯ ಬಗೆಯದು, ಇದನ್ನು ಗ್ರಹಣ  ಚಂಚಲತಾರೆ ಎನ್ನುತ್ತಾರೆ.ನಕ್ಷತ್ರ ಜೀವನದ ಒಂದು ಹಂತದಲ್ಲಿ ನಕ್ಷತ್ರದ ಒಂದು ಭಾಗ ಮಾತ್ರ ಹೊಳೆಯುತ್ತಿರುತ್ತದೆ. ಉಳಿದ ಭಾಗ ಯಾವುದೇ ವಿಕಿರಣವನ್ನು ಹೊರಸೂಸದೇ ಇರಬಹುದು. ಅಂತಹ ನಕ್ಷತ್ರ ತನ್ನ ಸುತ್ತಲೇ ತಾನು ಬುಗುರಿಯಂತೆ ಗಿರಕಿ ಹೊಡೆಯುತ್ತಿದ್ದರೆ ಹೊಳೆಯುತ್ತಿರುವ ಭಾಗ ನಮ್ಮ ಕಡೆಗಿದ್ದಾಗ ನಕ್ಷತ್ರ ಗೋಚರಿಸುತ್ತದೆ. ಉಳಿದ ಸಮಯದಲ್ಲಿ ಗೋಚರಿಸುವುದಿಲ್ಲ ಅಥವಾ ಮಬ್ಬಾಗಿ ಇರಬಹುದು. ಹೀಗಾಗಿ ಅದು ಮಿಡಿಯುತ್ತಿರುವಂತೆ ತೋರುತ್ತದೆ. ಇಂತಹವನ್ನೂ ಸಹ ಚಂಚಲತಾರೆಗಳೆಂದು ಪರಿಗಣಿಸಲಾಗುತ್ತದೆ.

ಪೆರ್ಸುಯಸ್‌  ನಕ್ಷತ್ರ ಪುಂಜದಲ್ಲಿ ಗೋಚರ ಪ್ರಕಾಶದಲ್ಲಿ ಮೊದಲ ಸ್ಥಾನ  ಮಿರ್ಫಕ್ ಅಥವಾ ಆಲ್ಫಾ ಪರ್ಸಿ ನಕ್ಷತ್ರಕ್ಕೆ. ಇದರ ಕಾಂತಿಮಾನ 1.8 ಗಾತ್ರದಲ್ಲಿ ಸೂರ್ಯನ 7.2 ರಷ್ಟಿದೆಇದು ಸೂರ್ಯನಿಗಿಂತ ರಾಶಿಯಲ್ಲಿ 8.5 ಪಟ್ಟು ಮತ್ತು ಪ್ರಕಾಶಮಾನದಲ್ಲಿ 5000 ಪಟ್ಟು ಹೆಚ್ಚು ಇದ್ದು, ನಮ್ಮಿಂದ  510‌ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆನಿರ್ಭರ ಆಕಾಶದಲ್ಲಿ ದೂರದರ್ಶಕದ ಮೂಲಕ ನೋಡಿದಾಗ ಇದನ್ನು ಸುತ್ತುವರೆದಂತೆ ಒಂದು ತೆರೆದ ಗೋಳಗುಚ್ಛವು ಗೋಚರಿಸುತ್ತದೆ. ಇದರ ನಂತರ ಗೋಚರ ಪ್ರಕಾಶದಲ್ಲಿ ಎರಡನೆಯ ಸ್ಥಾನ ಅಲ್ಗೋಲ್‌ ಅಥವಾ  ಬೀಟಾ ಪರ್ಸಿಗೆಇದು ಗ್ರಹಣ ಚಂಚತಾರೆ ಮತ್ತು ನವ್ಯವಲ್ಲದ ಚಂಚಲತಾರೆಗೆ ಒಂದು ಉತ್ತಮ ಉದಾಹರಣೆ.   ಅಲ್ಗೋಲ್‌ ನಮ್ಮಿಂದ 92.95 ಜ್ಯೋತಿ ವರ್ಷಗಳಷ್ಟು ದೂರದಲ್ಲಿದೆ ಇದೊಂದು ಯುಗ್ಮ ತಾರಾ ಜೋಡಿ ಎಂದು, ಮುಖ್ಯ ನಕ್ಷತ್ರ ಮುಂದೆ ಮತ್ತೊಂದು ಕಪ್ಪು ಕಾಯವು ನಿಯಮಿತವಾಗಿ ಹಾದು ಹೋಗುವುದು ಅಲ್ಗೋಲಿನ ಚಂಚಲತೆಗೆ ಕಾರಣ ಎಂದು ಬ್ರಿಟನ್ನಿನ ಜಾನ್‌ ಗುಡ್ರಿಕ್‌ ಅಲ್ಕೋಲಿನ ವ್ಯವಸ್ಥೆಯನ್ನು 1783 ರಲ್ಲಿ ವಿವರಿಸಲು ಪ್ರಯತ್ನಿಸಿದನುವಾಸ್ತವದಲ್ಲಿ ಅಲ್ಗೋಲ್ ಒಂದು ತ್ರಿವಳಿ ನಕ್ಷತ್ರ ವ್ಯವಸ್ಥೆಯಾಗಿದ್ದು, A(ಅಥವಾβ Per Aa1 ), B(ಅಥವಾβ Per Aa2)  ಮತ್ತು c(ಅಥವಾβ Per Ab ) ಮೂರು ನಕ್ಷತ್ರಗಳಿದ್ದುಹೋಲಿಕೆಯಲ್ಲಿ ಹೆಚ್ಚು ಪ್ರಕಾಶಮಾನವಾದ A ಮತ್ತು ಮಬ್ಬಾಗಿ ಕಾಣುವ B ಪರಸ್ಪರ ಗುರುತ್ವದಿಂದ ಬಂಧಿಸಲ್ಪಟ್ಟಿವೆ. ಇಬ್ಬರು  ಮಕ್ಕಳು ತಮ್ಮ ಎರಡೆರೆಡು ಕೈ ಗಳನ್ನು ಪರಸ್ಪರ ಹಿಡಿದು ಅಪ್ಪಾಲೆ ತಿಪ್ಪಾಲೆ ಆಡುವಂತೆ ಪರಸ್ಪರ ಗುರುತ್ವ ಬಲದಿಂದ ಬಂದಿಸಲ್ಪಟ್ಟು ಒಂದನ್ನು ಮತ್ತೊಂದು ಗಿರಿಕಿ ಹೊಡೆಯುತ್ತಿವೆ. C ಇವುಗಳಿಂದ ಸಾಕಷ್ಟು ದೂರದಲ್ಲಿ ಈ ಎರಡೂ ಗಿರಕಿ ಜೋಡಿಯನ್ನು ಪರಿಭ್ರಮಿಸುತ್ತಿದೆ.

 https://www.youtube.com/watch?v=zoekfYomfjI  

ಅಲ್ಗೋಲಿನ ಪ್ರಕಾಶದಲ್ಲಿ ಆಗುವ ಬದಲಾಣೆಯನ್ನು ತೋರಿಸುವ ಅನಿಮೇ಼ಷನಿಗೆ ಮೇಲಿನ ಲಿಂಕನ್ನು ಬಳಸಿ.

      ಸೈದ್ಧಾಂತಿಕವಾಗಿ ಒಟ್ಟಿಗೆ ಜನಿಸಿದ ನಕ್ಷತ್ರಗಳ ಜೋಡಿಯಲ್ಲಿ ಹೆಚ್ಚು ರಾಶಿಯಿರುವ ನಕ್ಷತ್ರ ಕಡಿಮೆ ರಾಶಿಯಿರುವ ನಕ್ಷತ್ರಕ್ಕಿಂತ ವಿಕಾಸದಲ್ಲಿ ಮುಂದಿರಬೇಕು. ಇಲ್ಲಿ ವಿಚಿತ್ರವೆಂದರೆ ಅತಿ ಹೆಚ್ಚು ರಾಶಿ ಹೊಂದಿರುವ‌ A ಹೊಳೆಯುತ್ತಿರುವ ಯುವ ನಕ್ಷತ್ರವಾಗಿದ್ದರೆ ಕಡಿಮೆ ರಾಶಿಯಿರುವ B  ಈಗಾಗಲೆ ಮುದಿ ಅವಸ್ಥೆಯನ್ನು ತಲುಪಿದ ಗಿಂತ ವಿಕಾಸದಲ್ಲಿ ಮುಂದುವರೆದ ನಕ್ಷತ್ರವಾಗಿದೆ. ನಕ್ಷತ್ರ ವಿಕಸನ ಸಿದ್ಧಾಂತದ ಪ್ರಕಾರ ಇದೊಂದು ವಿರೋಧಾಭಾಸವಾಗಿದೆಇದನ್ನು ಅಲ್ಕೋಲ್‌ ವಿರೋಧಾಭಾಸ ಎಂತಲೇ ಖಗೋಳಶಾಸ್ತ್ರಜ್ಞರು ಹೇಳುತ್ತಾರೆ. ಅಲ್ಗೋಲಿನ ದೀರ್ಘಾಧಿಯ ಇತಿಹಾಸದಲ್ಲಿ ಒಂದು ನಕ್ಷತ್ರದಿಂದ ಮತ್ತೊಂದಕ್ಕೆ  ರಾಶಿಯ ಸಾಮೂಹಿಕ ವರ್ಗಾವಣೆಯ ಕುರುಹು ಕಂಡುಬರುತ್ತದೆ.ಮೊದಲು ಪ್ರಸ್ತುತದ ಕಡಿಮೆ ರಾಶಿಯ ಬೃಹತ್ ದ್ವಿತೀಯಕ ನಕ್ಷತ್ರ ಮೂಲತಃ ವ್ಯವಸ್ಥೆಯಲ್ಲಿ ಹೆಚ್ಚು ರಾಶಿಯ ಬೃಹತ್‌ ನಕ್ಷತ್ರವಾಗಿದ್ದಿತು. ಇದು ವಿಕಸನಗೊಂಡು ದೈತ್ಯ ನಕ್ಷತ್ರವಾದಂತೆ ತನ್ನ ಗಮನಾರ್ಹ ಪ್ರಮಾಣದ ರಾಶಿಯನ್ನು ಅಂತರಿಕ್ಷಕ್ಕೆ ಸಿಡಿಸಿತು. ಹೀಗೆ ಸಿಡಿದ ರಾಶಿಯನ್ನು ಸಮೀಪದಲ್ಲಿಯೇ ಇದ್ದ A ನಕ್ಷತ್ರವು ತನ್ನೆಡೆಗೆ ಸೆಳೆದುಕೊಂಡು ಹೆಚ್ಚು ರಾಶಿಯ ಬೃಹತ್‌ ನಕ್ಷತ್ರವಾಗಿ ಬೆಳೆಯಿತು. ಹೆಚ್ಚು ರಾಶಿಯನ್ನು ಹೀರಿದ A ನಕ್ಷತ್ರವು ಗುರುತ್ವ ಬಲವನ್ನು ಹೆಚ್ಚಿಸಿಕೊಳ್ಳುತ್ತಾ ತನ್ನ ತಾಪವನ್ನೂ ಹೆಚ್ಚಿಸಿಕೊಂಡು Bಗಿಂತ ಹೆಚ್ಚು ಹೊಳಪನ್ನು ಪಡೆಯಿತು. ರಾಶಿಯಲ್ಲಿನಈ ಸಾಮೂಹಿಕ ವರ್ಗಾವಣೆಯು ಕಕ್ಷೀಯ ಚಲನೆಯ ಮೇಲೆ ಪರಿಣಾಮ ಬೀರುತ್ತಾ ಮತ್ತು ದೀರ್ಘಾವಧಿಯಲ್ಲಿ ಗ್ರಹಣದ ಸಮಯ ಮತ್ತು ಆಳದಲ್ಲಿನ ವ್ಯತ್ಯಾಸಗಳಿಗೆ ಕಾರಣವಾಗಿರಬಹುದು.ಇದರ ನಿಯಮಿತ ಮಬ್ಬಾಗಿಸುವಿಕೆ ಮತ್ತು ಹೊಳಪಿನ ಚಕ್ರಗಳು ಸಹಸ್ರಾರು ವರ್ಷಗಳಿಂದ ಮಾನವ ಕಲ್ಪನೆಯನ್ನು ಆಕರ್ಷಿಸಿವೆ, ಕೆಲವು ಇತರ ಆಕಾಶ ವಸ್ತುಗಳು ಸಾಧ್ಯವಾಗುವ ರೀತಿಯಲ್ಲಿ ಪುರಾಣ ಮತ್ತು ವಿಜ್ಞಾನವನ್ನು ಮಿಶ್ರಣ ಮಾಡುತ್ತವೆ. ಅಲ್ಗೋಲA ಮತ್ತು B ಪರಸ್ಪರ ಪರಿಭ್ರಮಿಸುತ್ತಿರುವ ಸಮತಲವು ಭೂಮಿಯ ಮೇಲಿರುವ ನಮ್ಮ ನೋಟದ ನೇರದಲ್ಲಿರುವುದರಿಂದ ಪ್ರಕಾಶಮಾನವಾದ Aಮುಂದೆ ಮಬ್ಬಾದ B ಬಂದಾಗ ಗ್ರಹಣವಾಗಿA ಪ್ರಕಾಶ ನಮಗೆ ಕಡಿಮೆಯಾದಂತೆ ತೋರುತ್ತದೆಇಡೀ ಈ ನಕ್ಷತ್ರ ವ್ಯವಸ್ಥೆಯ ಗೋಚರ ಪ್ರಕಾಶ ಕುಂದಿದಂತೆ ಕಾಣುತ್ತದೆಹಾಗೆಯೆ Bಯ ಮುಂದೆ A ಬಂದಾಗ B ಯ ಪ್ರಕಾಶ ಮರೆಯಾಗುತ್ತದೆ. ಆಗಲೂ ವ್ಯವಸ್ಥೆಯ ಪ್ರಕಾಶ ತುಸು ಕುಗ್ಗುತ್ತದೆ. ನಮ್ಮ ನೋಟಕ್ಕೆ A ಮತ್ತು B ಗಳು ಅಕ್ಕ ಪಕ್ಕದಲ್ಲಿರುವ ಎರಡು ಸಂದರ್ಭಗಳಲ್ಲಿ ಗರಿಷ್ಟ ಪ್ರಕಾಶ ನಮಗೆ ತಲುಪುತ್ತದೆಹೀಗೆ ಗಡಿಯಾರದಂತೆಯೆ  ಪ್ರತಿ ಎರಡು ದಿನ ಇಪ್ಪತ್ತು ಗಂಟೆ ನಲ್ವತ್ತೊಂಬತ್ತು ನಿಮಿಷಗಳಿಗೊಮ್ಮೆ ಅಲ್ಗೋಲಿನ ಪ್ರಕಾಶ ನಿರಂತರ ಬದಲಾಗುತ್ತಲೇ ಇರತ್ತದೆಅಗಾಧವಾಗಿ ಬೆಳೆದಿರುವ ವಿಜ್ಞಾನ ತಂತ್ರಜ್ಞಾನಗಳ ಬಳಕೆಯಿಂದ ನಡೆಸಿರುವ ಸಂಶೋಧನೆಗಳಿಂದ ಅಲ್ಗೋಲ್‌ ನತದೃಷ್ಟದ ಸಂಕೇತವಲ್ಲ  ಇದೊಂದು ಅತಿ ಸುಂದರವಾದ ವೈಜ್ಞಾನಿಕ ವಿದ್ಯಮಾನವಾಗಿದೆ ಎಂಬುದು ಸಾಭೀತಾಗಿದೆ.ವೀಕ್ಷಣೆಗೆ ಪರಿಸ್ಥಿತಿಗಳು ಚೆನ್ನಾಗಿದ್ದಾಗ ರಾತ್ರಿ ಆಕಾಶದಲ್ಲಿ ಅಲ್ಗೋಲ್‌ ನಕ್ಷತ್ರವನ್ನು ನೀವು ಸಹ ವೀಕ್ಷಣೆಯನ್ನು ಮಾಡಿ ಆನಂದಿಸಬಹುದಾಗಿದೆ.

ಹಾಗೆಯೆ ಅಲ್ಗೋಲ್‌ ನಕ್ಷತ್ರಕ್ಕೆ  ಅಪಖ್ಯಾತಿಗೆ ಕಾರಣಳಾದ ಮೆದೂಸಳ ಕಥೆ ಹೇಳಿ ಈ ಲೇಖನಕ್ಕೆ ವಿರಾಮ ಹೇಳುತ್ತೇನೆ. ವಾಸ್ತವದಲ್ಲಿ ಮೆದೂಸ ಅತ್ಯಂತ ಸುಂದರಿ ಅಷ್ಟೇ ಅಲ್ಲ ಅತಿ ಅಮಾಯಕ ಹೆಣ್ಣು. ಈಕೆಯ ಕಥೆ ನಮ್ಮ ರಾಮಾಯಣದ ಅಹಲ್ಯೆಯ ಕಥೆಯನ್ನು ನೆನಪಿಸುತ್ತದೆ. ಅಹಲ್ಯೆಗೆ ರಾಮನ ಪಾದಸ್ಪರ್ಶದಿಂದ ಶಾಪ ವಿಮುಕ್ತಿ ಮತ್ತು  ಮುಕ್ತಿ ಎರಡೂ ದೊರೆಯುತ್ತದೆ. ಮೆದೂಸಳಿಗೆ ಅಂತಹ ಭಾಗ್ಯವಿಲ್ಲ. ಗ್ರೀಕ್‌ ಪುರಾಣದಲ್ಲಿ  ಮೆದೂಸ, ಸ್ತೆನೋ ಮತ್ತು  ಯುರಯಾಲ ಈ ಮೂವರು ಗಾರ್ಗಾನ ಸೋದರಿಯರು. ಮೆದೂಸಳ ಹೊರತು ಉಳಿದಿಬ್ಬರು ಸೋದರಿಯರು ಅಮರತ್ವದ ವರ ಪಡೆದಿರುತ್ತಾರೆಮುಗ್ದೆ, ಮೆದೂಸಳ ಸ್ನಿಗ್ದ ಸೌಂದರ್ಯಕ್ಕೆ ದೇವಾನು ದೇವತೆಗಳೇ ಮರುಳಾಗಿರುತ್ತಾರೆ. ಗ್ರೀಕ್‌ ದೇವತೆಗಳಲ್ಲಿಯೇ ಶ್ರೇಷ್ಠಳಾದ ಅಥೆನಾಳಿಗೂ  ಕೂಡ ತನ್ನ ಅರಮನೆಯ ಸೇವೆಯಲ್ಲಿರುವ ಮೆದೂಸಳ ಸೌಂದರ್ಯವನ್ನು ಕುರಿತು ಅಸೂಯೆ ಇರುತ್ತದೆ. ಹೀಗಿರಲು ಅಥೆನಾಳ ಚಿಕ್ಕಪ್ಪ ಪೊಸೈಡನ್  ಮತ್ತು ಮೆದೂಸ ಪರಸ್ಪರ ಪ್ರೀತಿಸುತ್ತಾರೆ. ಇದರಿಂದ ಕೋಪಗೊಂಡ ಅಥೆನಾ ಮೆದೂಸಳಿಗೆ "ನಿನ್ನ ಸುಂದರ ಕೇಶ ರಾಶಿಯ ಪ್ರತಿಯೊಂದು ಕೂದಲೂ ವಿಷ ಸರ್ಪವಾಗಲಿ, ನೀನು ಯಾರನ್ನು ಕಂಡರೂ ಅಥವಾ ನಿನ್ನನ್ನು ಯಾರು ನೇರವಾಗಿ ನೋಡಿದರೂ ಅವರು ಶಿಲೆಯಾಗಲಿ" ಎಂದು ಶಾಪ ನೀಡುತ್ತಾಳೆ. ಕೂಡಲೆ ತಲೆ ತುಂಬ ವಿಷ ಸರ್ಪಗಳು ತುಂಬಿರುವ  ಅತ್ಯಂತ ಕ್ರೂರ ರಾಕ್ಷಸಿಯ ರೂಪ ಮೆದೂಸ ತಾಳುತ್ತಾಳೆ.‌ ಹೀಗೆ ಶಾಪಗ್ರಸ್ತ ಮೆದೂಸ ತನ್ನಿಂದ ಬೇರೆ ಯಾರಿಗೂ ತೊಂದರೆಯಾಗಬಾರದೆಂದು ಮೆಡಟೆರೇನಿಯನ್ ಸಮುದ್ರದಲ್ಲಿನ ಸರ್ಪಡೆನ್ ಎಂಬ ಒಂದು ನಿರ್ಜನ ದ್ವೀಪದ ಗುಹೆಯೊಂದರಲ್ಲಿ  ತನ್ನ ಇಬ್ಬರು ಸಹೋದರಿಯರ ಜೊತೆ ಹೋಗಿ ನೆಲೆಸುತ್ತಾಳೆ. ರಾಮೇಶ್ವರಕ್ಕೆ ಹೋದ್ರೂ ಶನೀಶ್ವರ ಬಿಡಲಿಲ್ಲ ಅನ್ನೊ ಗಾದೆಯಂತೆ ದೂರದಲ್ಲಿ ಬಂದು ನೆಲೆಸಿದರೂ ಮೆದೂಸಳ ಕಷ್ಟಗಳು ಕೊನೆಗಾಣಲಿಲ್ಲ. ಇತ್ತ ತನ್ನ ವಿವಾಹಕ್ಕೆ ಮಗ್ಗುಲ ಮುಳ್ಳಾಗಿದ್ದ ಪೆರ್ಸುಯಸನನ್ನು ಮುಗಿಸಲು ಸೆರಿಫೋಸಿನ ದೊರೆ ಪಾಲಿಡೆಕ್ಟಸ್‌ ಒಂದು ತಂತ್ರವನ್ನು ಹೊಸೆಯುತ್ತಾನೆ. ಪಾಲಿಡೆಕ್ಟಸನು ತನಗೆ ಉಡುಗೊರೆಯಾಗಿ ಮೆದೂಸಳ ತಲೆಯನ್ನು ಕತ್ತರಿಸಿ ಉಡುಗೊರೆಯಾಗಿ ತರುವಂತೆ  ಪೆರ್ಸುಯಸನಿಗೆ  ಆಜ್ಞಾಪಿಸುತ್ತಾನೆ. ಮೆದೂಸಳ ದೃಷ್ಟಿಗೆ ಬಿದ್ದು ಪೆರ್ಸುಯಸ್ಸನು ಶಿಲೆಯಾಗಿ ಹೋಗಲಿ ಎಂದು ಅವನ ದುರುದ್ದೇಶವಾಗಿರುತ್ತದೆ. ಅದರೆ ಪೆರ್ಸುಯಸ್ಸನಿಗೆ ಅಥೆನಾಳಿಂದ ಹಾಗೆ ಇತರೆ ದೇವತೆಗಳಿಂದ ಕನ್ನಡಿಯಂತಿದ್ದ  ಹಿತ್ತಾಳೆಯ ಗುರಾಣಿ,ಒಳ್ಳೆಯ ಕತ್ತಿಹಾರಲು ರಕ್ಕೆಗಳಿರುವ ಪಾದರಕ್ಷೆ, ಧರಿಸಿದರೆ ಯಾರಿಗೂ ಕಾಣದಂತೆ ಮಾಡುವ ಮಾಯಾ ಟೋಪಿ  ದೊರೆಯುತ್ತವೆ. ಇವೆಲ್ಲವನ್ನೂ ಪಡೆದ, ಧಾರಣೆ ಮಾಡಿದ ಪರ್ಸುಯಸ್‌ನಿದ್ರಿಸುತ್ತಿರುವ ತುಂಬು ಗರ್ಭಿಣಿ ಮೆದೂಸಳ ಪ್ರತಿಬಿಂಬವನ್ನು ಕನ್ನಡಿಯಂತಿದ್ದ ತನ್ನ ಗುರಾಣಿಯಲ್ಲಿ ನೋಡುತ್ತಾ ಅವಳ ಕುತ್ತಿಗೆಯನ್ನು ಕತ್ತರಿಸಿಬಿಡುತ್ತಾನೆ. ಹಾಗೆ ತಂದ ಅವಳ ಶಿರವನ್ನು ತನಗೆ ಶತೃಗಳೆನಿಸಿದವರನ್ನು ಸಂಹರಿಸಲು ಬಳಸುತ್ತಾನೆ. ಕೊನೆಗೆ ಮೆದೂಸಳ ಶಿರ ಅಥೆನಾಳ ಅರಮನೆಯಲ್ಲಿ ಪೆಟ್ಟಿಗೆ ಸೇರಿಬಿಡುತ್ತದೆ. ಕ್ರೂರ ವ್ಯವಸ್ಥೆಗೆ ಬಲಿಯಾಗಿ ಹೋದ ಅಮಾಯಕಳಾದ ಮೆದೂಸಳ ಶಿರವನ್ನು ದುಷ್ಟರ ಕಣ್ಣು ಬೀಳದಿರಲೆಂದು ದೃಷ್ಟಿ ಬೊಂಬೆಯಂತೆ ಬಳಸುವ ಪದ್ಧತಿ ಕೆಲವು ಪಾಶ್ಚಿಮಾತ್ಯ ಸಂಸ್ಕೃತಿಗಳಲ್ಲಿ  ಇದೆಯೆಂಬ ಅಂಶ ಸ್ವಲ್ಪವಾದರೂ ಸಮಾಧಾನ ತರವಂತದ್ದು.

No comments:

Post a Comment