Tuesday, June 4, 2024

ಕಾಯಿ ಸುರಿಸಿದ ‘ಕಪೋಕ’

 ಕಾಯಿ ಸುರಿಸಿದ ‘ಕಪೋಕ

ಲೇಖಕರು : ರಮೇಶ, ವಿ,ಬಳ್ಳಾ      

 ಅಧ್ಯಾಪಕರು

 ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು 

 (ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ 

 ಮೊ: 9739022186

    

    ನಾನು ಕಾರು ಡ್ರೈವಿಂಗ್‌  ಕಲಿಯಲು ನಿರ್ಜನವಾದ ನವನಗರದ ಹೊಸ ಲೇಔಟ್‌ನ ರಸ್ತೆಗೆ ಇಳಿದೆ. ಅಲ್ಲಿ ಟ್ರಾಫಿಕ್ ಇರುವುದಿಲ್ಲ ಆರಾಮವಾಗಿ ವಾಹನ ಓಡಿಸಬಹುದು ಹಾಗೂ ಕಲಿಯಲು ಸೂಕ್ತವೆಂದು ಗೆಳೆಯರೊಂದಿಗೆ ಹೋದೆವು. ಆದರೆ ಅಲ್ಲಿ ನಮ್ಮನ್ನು ಆಕರ್ಷಿಸಿದ್ದು ಮಾತ್ರ ನಾವು ಅಲ್ಲಿವರೆಗೂ ನೋಡಿರದ ವಿಚಿತ್ರ, ವಿಶಿಷ್ಟ ಮರಗಳು. ರಸ್ತೆಯ ಎರಡೂ ಬದಿಯಲ್ಲಿ ನೆಟ್ಟ ಆ ಮಧ್ಯಮ ಎತ್ತರದ ಗಿಡದಿಂದ ತುಂಬಾ ಉದ್ದನೆಯ ಹಸಿರು ಕಾಯಿಗಳು ಸುರಿದಿದ್ದವು. ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ ಆ ಕಾಯಿಗಳು ಆ ಮರದ ಆಕರ್ಷಣೆಯಾಗಿದ್ದವು. ಗೆಳೆಯ ಕೇಳಿಯೇಬಿಟ್ಟ ‘ಸರ್! ಇವು ಯಾವ ಮರದ ಕಾಯಿಗಳು’ ? ನೋಡೋಣ ಬನ್ನಿ ಅಂತಾ ಕೆಳಗಿಳಿದು ಮರ, ಎಲೆ, ಕಾಯಿ ಎಲ್ಲವನ್ನೂ ಸೂಕ್ಷ್ಮವಾಗಿ ವೀಕ್ಷಿಸಿದೆವು. ನಮಗೆ ಆ ಮರದ ಬಗೆಗಿನ ಕುತೂಹಲ ತಡೆಯಲಾಗಲಿಲ್ಲ. ಮಾಹಿತಿಗಾಗಿ ಅಂತರಜಾಲವನ್ನೆಲ್ಲಾ ಜಾಲಾಡಿದೆ. ಆಗ ಗೊತ್ತಾಯಿತು ಅದರ ವೃತ್ತಾಂತ. ಅದೇ ಕಪೋಕ ಮರ!!!.

ಸಾಮಾನ್ಯವಾಗಿ ಕಪೋಕ ಎಂದೇ ಗುರುತಿಸಲ್ಪಡುವ ಈ ಮರ ಇಂದು ಉದ್ಯಾನ, ದೇವಸ್ಥಾನ, ಸಾರ್ವಜನಿಕ ಸ್ಥಳಗಳನ್ನು ಆವರಿಸಿದೆ. ಸಿಲ್ಕ್ ಕಾಟನ್, ಜಾವಾ ಕಾಟನ್, ಜಾವಾ ಕಪೋಕ, ಸಮೌಮಾ ಎಂತೆಲ್ಲಾ ಕರೆಯಲ್ಪಡುವ ಈ ಮರದ ವೈಜ್ಞಾನಿಕ ಹೆಸರು ಸೀಬಾ ಪೆಂಟೆಂಡ್ರಾ. ಮಾಲ್ವೇಸಿ ಕುಟುಂಬದ ಈ ಮರದ ಹೆಚ್ಚಿನ ವ್ಯಾಪಕತೆ ಮೆಕ್ಸಿಕೋ, ಮಧ್ಯ ಅಮೇರಿಕಾ, ಕೆರೇಬಿಯನ್, ಪಶ್ಚಿಮ ಆಫ್ರಿಕಾ ಆದರೂ ಅದರ ಇತರ ಕೆಲ ಪ್ರಭೇದಗಳೊಂದಿಗೆ ಏಷ್ಯಾದ ದಕ್ಷಿಣ ಹಾಗೂ ಆಗ್ನೇಯ ಭಾಗಗಳಲ್ಲಿ ಸ್ವಲ್ಪ ಮಟ್ಟಿಗೆ ಕಂಡುಬರುತ್ತದೆ. ಇದು ಅತೀ ಶೀಘ್ರವಾಗಿ ಬೆಳೆಯುವ ಮರವಾಗಿದ್ದು, ಯಾವುದೇ ರೀತಿಯ ಮಣ್ಣಿನ ಮಡಿವಂತಿಕೆ ಇಲ್ಲದೇ ಎಲ್ಲೆಂದರಲ್ಲಿ ಸುಮಾರು ನೂರು ಅಡಿ ಎತ್ತರಕ್ಕೆ ಬೆಳೆಯಬಲ್ಲುದು. ಆರ್ದ್ರತೆ, ಉಷ್ಣ ಪ್ರದೇಶ, ಅತೀ ಆದ್ರತೆ ಎಲ್ಲವೂ ಇದಕ್ಕೆ ಒಗ್ಗುತ್ತದೆ.

ಕಾಯಿಗಳೇ ಈ ಮರದ ವಿಶೇಷ ಆಕರ್ಷಣೆ. ಹತ್ತಿಯಂತಹ ಗುಂಜು(Fluff) ತುಂಬಿದ ಉದ್ದವಾದ ಕಾಯಿ(seed pod)ಗಳು ಮರದ ತುಂಬ ನೇತಾಡುತ್ತಿದ್ದರೆ ನೋಡುಗರು ಆಶ್ಚರ್ಯಗೊಳ್ಳುತ್ತಾರೆ. ಈ ನಾರು ಕಾಯಿಗಳೇ ಕಪೋಕ ಎಂದು ಆಂಗ್ಲಭಾಷೆಯಲ್ಲಿ ಕರೆಯಲ್ಪಡುತ್ತವೆ. ಈ ಕಪೋಕದ ಹೂಗಳು ಐದು ದಳಗಳನ್ನು ಹೊಂದಿದ್ದು, ಮಧ್ಯದಲ್ಲಿ ಕಿತ್ತಳೆ ಬಿಳಿ ವರ್ಣದ ಪರಾಗಕೋಶಗಳಿಂದ ಆಕರ್ಷಕವಾಗಿವೆ. ಅದರೊಂದಿಗೆ ಗಮನಿಸಬಹುದಾದ ವಾಸನೆ ಹಾಗೂ ಪರಾಗಸ್ಪರ್ಶದ ವಾಹಕಗಳಾದ ಬಾವಲಿಗಳು, ಹಕ್ಕಿಗಳು ಮತ್ತು ದುಂಬಿಗಳನ್ನು ಆಕರ್ಷಿಸುವಷ್ಟು ಮೋಹಕತೆಯನ್ನು ಹೊಂದಿದ ಹೂಗಳು ಉಭಯಲಿಂಗಿ (Bisexual)ಗಳಾಗಿವೆ. ಇನ್ನು ಹಸ್ತಾಕಾರದ(Flamate) 5 ರಿಂದ 9 ಎಲೆಪತ್ರ(leaflet)ಗಳನ್ನು ಹೊಂದಿದ ಎಲೆಗಳು ಬೀಸಣಿಕೆಯಂತೆ ತೋರಿದರೂ ಮರವೇ ಕಾಯಿಗಳಾದಂತೆ ಆಕರ್ಷಿಸುವ ಹಸಿ ಹಸಿಯಾದ ಹಸಿರು ನಾರು ಕಾಯಿಗಳು ಮರದ ಆಕರ್ಷಣೆಯಾಗಿವೆ. ಈ ಕಾಯಿಗಳು ಮುಂದೆ ಒಣಗಿ ಕಂದು ಬಣ್ಣಕ್ಕೆ ತಿರುಗಿದಾಗ ಬಿರಿಯುತ್ತವೆ. ಆಗಲೇ ನೋಡಿ ಚಮತ್ಕಾರ ! 

ಆ ಕಾಯಿಗಳೊಳಗಿನ ಬಿಳಿ ಹತ್ತಿಯಂತಹ ನಾರು ಪದಾರ್ಥ ಬಲು ಉಪಯುಕ್ತ ವಸ್ತುವಾಗಿ ಬಳಕೆಯಾಗುತ್ತದೆ. ವಾಣೀಜ್ಯಿಕ ಮಹತ್ವದ ಈ ಭಾಗ ಮೆತ್ತನೆ ಗಾದಿ, ದಿಂಬು, ಕುಷನ್‌ಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಮರದ ಕಾಂಡಭಾಗ ಅಥವಾ ಕಟ್ಟಿಗೆ ಮೃದುವಾಗಿದ್ದು ಹಗುರವಾಗಿದೆ. ಇದನ್ನು ತೇಲುಕಗಳಾಗಿ ಹಾಗೂ ಪ್ಲಾವುಡ್, ಪೆಟ್ಟಿಗೆ, ಬೋರ್ಡ, ಸಂಗೀತವಾದ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇನ್ನು ಕಾಯಿ ಒಳಗಿನ ಗುಂಜು ಮದ್ಯದಲ್ಲಿರುವ ಚಿಕ್ಕ ಚಿಕ್ಕ ಬೀಜಗಳು ಎಣ್ಣೆ ಉತಾದನೆಗೆ ನೆರವಾಗುತ್ತವೆ. ಆ ಎಣ್ಣೆ ಉಪಯುಕ್ತ ಜೈವಿಕ ಇಂಧನವಾಗಿಯೂ ಬಳಕೆಯಾಗುತ್ತದೆ. ಅಷ್ಟೇ ಅಲ್ಲದೇ ಔಷಧಿಯಾಗಿ ಮೂತ್ರವರ್ಧನೆ, ಕಾಮೋತ್ತೇಜಕ, ತಲೆನೋವು, ಕೆಲ ವಿಧದ ಡಯಾಬಿಟಿಕ್ ಚಿಕಿತ್ಸೆಯಲ್ಲಿ ಬಳಕೆಯಾಗುತ್ತದೆ.

ಇದೇ ಪ್ರಭೇದದಂತೆ ತೋರುವ ಆದರೆ ಭಿನ್ನವಾದ ಬಾಂಬಕ್ಷೇಸಿಯಾ ಕುಟುಂಬದ ಪ್ರಭೇದಗಳು ಕೆಲ ಗೊಂದಲಗಳನ್ನುಂಟು ಮಾಡುತ್ತವೆ. ಹಾಗಾಗಿ ಸೀಬಾ ಪೆಂಟೆಂಡ್ರಾ ಮರದ ದಿಮ್ಮೆಯ ಸಾಂದ್ರತೆ ಹಾಗೂ ಅಂಗರಚನಾಶಾಸ್ತ್ರದ ಅಧ್ಯಯನದ ಆಧಾರದ ಮೇಲೆ ಆ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು.

ಎಲ್ಲೆಂದರಲ್ಲಿ ಬೆಳೆಯಬಹುದಾದ ಕಪೋಕ ಮರ ಒಂದು ಕಾಲದ ಪವಿತ್ರ ವೃಕ್ಷವಾಗಿ ಮಯಾ ಪುರಾಣಕತೆಯಲ್ಲಿ ಗುರುತಿಸಲ್ಪಟ್ಟು ಪಾಲೊ, ಅರಾರ ಮತ್ತು ಸೆಂಟೇರಿಯಾಗಳಲ್ಲಿ ಪವಿತ್ರ ಸ್ಥಾನ ಪಡೆದಿದೆ. ಅಲ್ಲದೇ ಈ ಮರ ರಾಷ್ಟ್ರೀಯ ಲಾಂಛನವಾಗಿ ಗುಟೆಮಲಾ, ಪ್ಯುರೆಟೊರಿಕೊ ಮತ್ತು ಮಧ್ಯ ಜಿನಿಯಾಗಳಲ್ಲಿ ಕಂಗೊಳಿಸಿದೆ.






 

No comments:

Post a Comment