Thursday, July 4, 2024

ಸಾಟಿಯೇ ಇಲ್ಲದ ಅಸಾಮಾನ್ಯ ಸಂಶೋಧಕ ಟೆಸ್ಲಾ

ಸಾಟಿಯೇ ಇಲ್ಲದ ಅಸಾಮಾನ್ಯ ಸಂಶೋಧಕ ಟೆಸ್ಲಾ 

  ಲೇಖನ : ರಾಮಚಂದ್ರ ಭಟ್‌ ಬಿ.ಜಿ 

    ಆತ ಭೌತಶಾಸ್ತ್ರದ ವಿದ್ಯಾರ್ಥಿ. ಭೂಮಿಯ ಚಲನೆಯ ಬಗ್ಗೆ ಹೇಳುತ್ತಿದ್ದರೆ ಅತನ ಮಸ್ತಿಷ್ಕದಲ್ಲಿ ನಡೆಯುತ್ತಿದ್ದದ್ದೇ ಬೇರೆ!!! ಭೂಮಿಯು ಸಮಭಾಜಕದಲ್ಲಿ ಗಂಟೆಗೆ 1,000 ಮೈಲುಗಳಷ್ಟು (ಗಂಟೆಗೆ 1,600 ಕಿಲೋಮೀಟರ್) ವೇಗದಲ್ಲಿ ತನ್ನ ಅಕ್ಷದ ಮೇಲೆ ಸುತ್ತುತ್ತಿದೆ. ಭೂಮಿಯ ಈ ತಿರುಗುವಿಕೆಯನ್ನೇ ಬಳಸಿ ಇಡೀ ಭೂಮಿಯನ್ನೇ ಡೈನಮೋವನ್ನಾಗಿ ಬಳಸಿ ವಿದ್ಯುತ್ ಉತ್ಪಾದಿಸಬಹುದೇ? ಅಬ್ಬಾ !!! ಎಂತಹ ಆಲೋಚನೆ !!!   ಇಂತಹ ಆಲೋಚನೆ ಜನಸಾಮಾನ್ಯರಿಗೆ ಅಸಾಧ್ಯ !!! 

ಇಂತಹ ಅಲೋಚನೆಗಳ ಹಿಂದಿನ ಅಸಾಮಾನ್ಯ ವ್ಯಕ್ತಿಯೇ ಆತ!!   

ಟೆಸ್ಲಾ !! 

ನಿಕೋಲಾ ಟೆಸ್ಲಾ !!!

   ವಿದ್ಯುತ್‌ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾದ ಚಿರಸ್ಥಾಯಿ ಹೆಸರೇ ನಿಕೊಲಾ ಟೆಸ್ಲಾ. ಅತ್ಯದ್ಭುತ ಎನಿಸುವ ಬುದ್ಧಿಲಬ್ದ (IQ) 160 - 300 ಇತ್ತೆನ್ನಲಾದ ಮಹಾ ಬುದ್ಧಿವಂತನೀತ !!!! ತನ್ನ ಕಾಲದ ಜನರಿಗಿಂತ ಅದೆಷ್ಟೋ ದಶಕಗಳಷ್ಟು ಮುಂದಿದ್ದ‌ ಮಹಾ ಪ್ರತಿಭಾಶಾಲಿ. ಟೆಸ್ಲಾನನ್ನು ಬಹಳಷ್ಟು ಜನ ಮರೆತಿರಬಹುದು. ಈ ಹೆಸರು ಕೇಳುತ್ತಿದ್ದಂತೆ ನಿಮ್ಮ ಕಣ್ಣೆದುರು ವಿಶ್ವದ ಅತಿ ಸಿರಿವಂತ ಇಲಾನ್‌ ಮಸ್ಕ್‌ ಕಾಣಿಸಿಕೊಳ್ಳಬಹುದು. "ನಿಕೋಲಸ್ ಟೆಸ್ಲಾ"  ಈ ಸಂಸ್ಥೆಯ ಸ್ಥಾಪಕನೋ ಸಂಬಂಧಿಯೋ ಎಂದೆನಿಸದಿರದು. ಆದರೆ ಈ ಮಹಾನ್‌ ವಿಜ್ಞಾನಿಯ ಗೌರವಾರ್ಥವಾಗಿಯೇ ಟೆಸ್ಲಾ ಮೋಟರ್ಸ್‌ ಸಂಸ್ಥೆ ಆರಂಭಗೊಂಡಿತು ಎನ್ನುವುದು ಐತಿಹಾಸಿಕ ಸತ್ಯ. ಇಂತಹ ಮಹಾನ್‌ ವಿಜ್ಞಾನಿ ಹುಟ್ಟಿದ್ದು ಜುಲೈ ತಿಂಗಳಲ್ಲಿ ಅಂದರೆ, ೧೦ ಜುಲೈ ೧೮೫೬ ರಲ್ಲಿ ಕ್ರೋವೇಷ್ಯಾ   ಪ್ರಾಂತ್ಯದ ಗಾಸ್ಪಿಕ್‌‌ ಪಟ್ಟಣದ ಸಮೀಪವಿರುವ ಹಳ್ಳಿ ಸ್ಮಿಲ್ಜನ್‌ ನಲ್ಲಿ .  

ನಿಕೋಲಾ ಟೆಸ್ಲಾ'ರು ಹುಟ್ಟಿದ ಮನೆ ಮತ್ತು ಕ್ರೊಯೇಷಿಯಾದಲ್ಲಿನ ಸ್ಮಿಲ್ಜನ್‌ ಹಳ್ಳಿಯಲ್ಲಿರುವ ಪ್ರತಿಮೆ

ಕಾರ್ಲೋವಾಕ್‌‌ನಲ್ಲಿರುವ ಹೈಯರ್‌ ರಿಯಲ್‌ ಜಿಮ್ನಾಸಿಯಮ್‌ನಲ್ಲಿ ಟೆಸ್ಲಾರವರು ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಮೂರು ವರ್ಷಗಳ ಅವಧಿಯಲ್ಲಿ ನಾಲ್ಕು-ವರ್ಷಗಳ ಓದನ್ನು ಅವರು ಪೂರೈಸಿದರು. ನಂತರ ಗ್ರಾಜ್‌ನಲ್ಲಿನ‌ ಆಸ್ಟ್ರಿಯನ್‌ ಪಾಲಿಟೆಕ್ನಿಕ್‌ನಲ್ಲಿ (೧೮೭೫)   ಟೆಸ್ಲಾರವರು ವಿದ್ಯುತ್‌‌‌‌ ಶಿಲ್ಪಶಾಸ್ತ್ರದಲ್ಲಿ ಅಧ್ಯಯನವನ್ನು ಪೂರೈಸಿದರು. ಅಲ್ಲಿ ಓದುತ್ತಿರುವಾಗ ಪರ್ಯಾಯ ವಿದ್ಯುತ್ಪ್ರವಾಹದ ಬಳಕೆಗಳ ಕುರಿತ ಅಧ್ಯಯನವನ್ನು ನಡೆಸಿದರು.ಈತನ ಜೀವನವೆಲ್ಲವೂ ಅತ್ಯಂತ ಕಡು ಕಷ್ಟದಲ್ಲಿಯೇ ಕಳೆಯಿತು. ಹೀಗಾಗಿ ಆತ ಖಿನ್ನತೆಯಲ್ಲಿಯೇ ಬೆಳೆದ ಕಾರಣದಿಂದ ಬಹಳ ಮೌನಿಯಾಗಿಯೇ ಇದ್ದ ಆದರೆ ಮಹಾನ್ ವಿಜ್ಞಾನಿ. ಪ್ರತಿಯೊಂದನ್ನೂ ಮನದಲ್ಲಿಯೇ ಯೋಚಿಸುತ್ತಲೇ ಜೀವನ ಕಳೆಯುತ್ತಿದ್ದನೇ ಹೊರತು ಯಾವೊಂದನ್ನೂ ಕೂಡ ದಾಖಲೆ ಮಾಡುತ್ತಲೇ ಇರಲಿಲ್ಲ ! ಈತನ ಕುಶಾಗ್ರಮತಿತ್ವ, ಅಪೂರ್ವವಾದ, ಫೋಟೋಗ್ರಫಿಕ್‌ ಮೆಮೊರಿ ಎಂದೇ ಕರೆಯಲಾಗುವ ಸ್ಮರಣಶಕ್ತಿ ಅದ್ಭುತ. ಈತನ ಆಲೋಚನೆಗಳು ಜನಸಾಮಾನ್ಯರಿಗೆ ನಿಲುಕದಷ್ಟು ಅಚ್ಚರಿಯ ಮತ್ತು ನಿಗೂಢತೆಯಳ್ಳವಾಗಿದ್ದವು. ಬಾಲ್ಯದಿಂದಲೇ ಸಂಶೋಧನೆ ಆತನಿಗೆ ಗೀಳಾಗಿತ್ತು. 

ಟೆಸ್ಲಾ ಆವಿಷ್ಕಾರಗಳು ಮತ್ತು ಸಂಶೋಧನೆಗಳು ಅಂತಿಂಥ ಸಂಶೋಧನೆಗಳಲ್ಲ . ಇವು ಜಗತ್ತಿನ ಕೈಗಾರಿಕಾ ಪುರೋಭಿವೃದ್ಧಿಗೆ ಹೊಸ ಆಯಾಮ ನೀಡಿದವು. 

ಎ.ಸಿ ವಿದ್ಯುತ್ ವ್ಯವಸ್ಥೆ : ಟೆಸ್ಲಾ ತನ್ನ ಪ್ರಮುಖ ಆವಿಷ್ಕಾರಗಳಲ್ಲಿ ಒಂದು ಏಸಿ (ಎಲ್ಟರ್ನೇಟಿಂಗ್ ಕರಂಟ್) ಎಂಬ ಪರ್ಯಾಯ ವಿದ್ಯುತ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಈ ವ್ಯವಸ್ಥೆಯು ದೂರವಿದ್ಯುತ್ ಪ್ರಸರಣದ ಸಮಸ್ಯೆಗಳನ್ನು ಪರಿಹರಿಸಿತು ಮತ್ತು ನಾವು ಇಂದು ಬಳಸುವ ವಿದ್ಯುತ್ ಪ್ರಸರಣ ವ್ಯವಸ್ಥೆಯ ಅಡಿಪಾಯವಾಯಿತು.  

ಟೆಸ್ಲಾ ಕಾಯಿಲ್ : ಇದು ಇಂದಿಗೂ ಅಚ್ಚರಿಯ ಸಂಶೋಧನೆಯೇ !!! ಹೈ-ವೋಲ್ಟೇಜ್, ಕಡಿಮೆ-ಪ್ರಸ್ತುತ, ಉನ್ನತ ಆವೃತ್ತಿಯ ಪರ್ಯಾಯ ವಿದ್ಯುತ್ ವ್ಯವಸ್ಥೆಯಾಗಿ, ದೂರಸಂಚಾರ ಮತ್ತು ವಿದ್ಯುತ್ ಪ್ರಸರಣದ ಪ್ರಮುಖ ಸಾಧನವಾಗಿದೆ. 

 ರೇಡಿಯೋ ಸಂಶೋಧನೆಗಳು : ಟೆಸ್ಲಾ, ರೇಡಿಯೋ ತಂತ್ರಜ್ಞಾನದಲ್ಲಿ ತನ್ನ ಮಹತ್ವದ ಸಂಶೋಧನೆಗಳನ್ನು ನಡೆಸಿದರು. ಆಧುನಿಕ ರೇಡಿಯೋ ಪ್ರಸರಣದಲ್ಲಿ ಅವರು ಮಾಡಿದ ಸಂಶೋಧನೆಗಳ ಮಹತ್ವವನ್ನು ನಾವು ಇನ್ನೂ ನೋಡುವಂತಿದೆ. ಆದರೆ ರೇಡಿಯೋ ಸಂಶೋಧನೆಗಳಲ್ಲಿ ಮಾರ್ಕೋನಿಯ ಕೈ ಮೇಲಾಯಿತು. ಮಾರ್ಕೋನಿಯೂ ಇವರ ಪ್ರತಿಸ್ಪರ್ಧಿಯಾದ. 

 ನಿಯಾನ್ ಲೈಟ್ ಮತ್ತು ಫ್ಲೂರಸೆಂಟ್ ಲೈಟ್: ಟೆಸ್ಲಾ ಬೆಳಕಿನ ಉತ್ಸರ್ಜನಾ ತಂತ್ರಜ್ಞಾನದಲ್ಲಿಯೂ ತನ್ನ ಆವಿಷ್ಕಾರಗಳನ್ನು ಮಾಡಿ, ನ್ಯೂಯಾರ್ಕ್ ನಗರದಲ್ಲಿ ತನ್ನ ಆವಿಷ್ಕಾರಗಳನ್ನು ಪ್ರದರ್ಶಿಸಿದರು.

1881ರಲ್ಲಿ ಈತ ಯುರೋಪಿನಲ್ಲಿದ್ದಾಗ ಮ್ಯಾಗ್ನಟ್ ಬಳಸದೆಯೇ ಶಬ್ದರಹಿತವಾಗಿ ತಿರುಗುವ 'ಇಂಡಕ್ಷನ್ ಮೋಟರ್' ತಂತ್ರಜ್ಞಾನದ ಅನ್ವೇಷಣೆ ಮಾಡಿದರು. ಆದರೆ ಈತನ ಅನ್ವೇಷಣೆಗೆ ಯುರೋಪಿನಲ್ಲಿ ಹೆಚ್ಚು ಬೆಲೆಕೊಡುವವರು ಸಿಗದ ಕಾರಣದಿಂದ ಅಮೇರಿಕಕ್ಕೆ ಹೊರಟರು. ಅಲ್ಲಿ "ಥಾಮಸ್ ಅಲ್ವಾ ಎಡಿಸನ್" ಬಳಿ ಕೆಲಸಕ್ಕೆ ಸೇರಿಕೊಂಡಾಗ ಎಡಿಸನ್ 'ಡಿ.ಸಿ ಮೋಟರ್ ಅನ್ವೇಷಣೆಯಲ್ಲಿ ನಿರತನಾಗಿರುತ್ತಾರೆ.  ನಿಕೋಲಸ್ ಟೆಸ್ಲಾ 'ನೀವೀಗ ಬಳಸುತ್ತಿರುವ ವಸ್ತುಗಳಿಗಿಂತಲೂ ಕಡಿಮೆ ವಸ್ತುಗಳನ್ನು ಬಳಸಿಯೇ ಈ ಅನ್ವೇಷಣೆ ಮಾಡಬಹುದು " ಎನ್ನುತ್ತಾರೆ. ಈತನ ಪರ್ಯಾಯ ಎಸಿ ವಿದ್ಯುತ್‌ ಬಗ್ಗೆ ಆತನಿಗೆ ಅಷ್ಟೇನೂ ಒಲವಿರಲಿಲ್ಲ. ಆರಂಭದ ದಿನಗಳಲ್ಲಿ  ಟೆಸ್ಲಾ ಮತ್ತು ಎಡಿಸನ್ ಲ್ಯಾಬೊರೇಟರಿಯಲ್ಲಿ ಕೆಲಸ ಮಾಡಿದರು. ಆದರೆ ಅವರ ದೃಷ್ಠಿಕೋನಗಳಲ್ಲಿನ ವೈರುಧ್ಯದಿಂದ ಎಡಿಸನ್‌ರ ಸಹವಾಸವನ್ನು ತೊರೆದರು. ಇದು ಇವರಿಬ್ಬರ ನಡುವೆ ಸಾಕಷ್ಟು ಶೀತಲ ಸಮರಕ್ಕೆ ಕಾರಣವಾಯಿತು. 

ಟೆಸ್ಲಾ ಎಲೆಕ್ಟ್ರಿಕ್‌ ಲೈಟ್‌ & ಮ್ಯಾನುಫ್ಯಾಕ್ಚರಿಂಗ್‌ ಎಂಬ ಹೆಸರಿನ ತಮ್ಮದೇ ಸ್ವಂತ ಕಂಪೆನಿಯನ್ನು ಟೆಸ್ಲಾರು ೧೮೮೬ರಲ್ಲಿ ಸ್ಥಾಪಿಸಿದ್ದರು. ಪರ್ಯಾಯ ವಿದ್ಯುತ್ಪ್ರವಾಹ ಮೋಟಾರ್‌ ನಿರ್ಮಾಣದ ಬಗೆಗಿನ ಟೆಸ್ಲಾರ ಯೋಜನೆಗಳ ವಿರುದ್ಧ ಅಪಸ್ವರವೆತ್ತಿದ ಆರಂಭಿಕ ಹಣಕಾಸಿನ ಹೂಡಿಕೆದಾರರು ಅಂತಿಮವಾಗಿ ಅವರನ್ನು ಕಂಪೆನಿಯ ಜವಾಬ್ದಾರಿಗಳಿಂದ ಬಿಡುಗಡೆ ಮಾಡಿದರು. ತಮ್ಮ ಜೀವನ ನಡೆಸಲು ಹಾಗೂ ಮುಂದಿನ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ಟೆಸ್ಲಾರು ೧೮೮೬ರಿಂದ ೧೮೮೭ರವರೆಗೆ ನ್ಯೂಯಾರ್ಕ್‌‌ನಲ್ಲಿ ಮತ್ತೆ ಕಾರ್ಮಿಕರಾಗಿ ದುಡಿಯಲು ತೊಡಗಿದರು. ಜೀವನದುದ್ದಕ್ಕೂ ಟೆಸ್ಲಾ ಇಂತಹ ಅನೇಕ ಸಂಕಷ್ಟಗಳೊಂದಿಗೆ ಹೆಣಗಬೇಕಾಯಿತು.  ಅವರಮಿತಿ ಮೀರಿದ  ಬೌದ್ಧಿಕತೆಯೇ ಅವರಿಗೆ ಕೆಲವೊಮ್ಮೆ ಶತ್ರುವಾಗಿತ್ತು !!! ಅನೇಕರಿಗೆ ಅದು ವಿಕ್ಷಿಪ್ತ ಗುಣ ಎಂದೆನಿಸುತ್ತಿತ್ತು . ಹುಚ್ಚು ವಿಜ್ಞಾನಿ‌ ಎಂದೂ ಕೆರೆಸಿಕೊಳ್ಳ ಬೇಕಾಯಿತು. 

 ಟೆಸ್ಲಾರವರು ಕ್ಷ ಕಿರಣದ ಮೇಲೆ ಅನೇಕ  ಸಂಶೋಧನೆಗಳನ್ನು ಮುಂದುವರೆಸಿದರು. ರಾಂಟ್‌‌ಜೆನ್‌‌' ಆವಿಷ್ಕಾರಕ್ಕೆ ಮುಂಚೆಯೇ ಅನೇಕ ಪ್ರಯೋಗಗಳನ್ನು ಮಾಡಿದ್ದರೂ ತನ್ನ ಶೋಧನೆಗಳ ಕುರಿತು ವ್ಯಾಪಕ ಪ್ರಚಾರವನ್ನು ಕೈಗೊಂಡಿರಲಿಲ್ಲ.  ಗಾಳಿಯ ದ್ರವೀಕರಣಕ್ಕೆ ಸಂಬಂಧಿಸಿದಂತೆ ಅವರ ಸಂಶೋಧನೆಗಳ ಜೊತೆಗೆ ಟೆಸ್ಲಾ ವಿದ್ಯುಜ್ಜನಕವನ್ನು ಕೂಡಾ ಟೆಸ್ಲಾರು ೧೮೯೫ರಲ್ಲಿ ಅಭಿವೃದ್ಧಿಪಡಿಸಿದರು.  ಅವರ ಸಂಶೋಧನೆಗಳಲ್ಲಿ ಬಹುತೇಕವು ಮಾರ್ಚ್‌ ೧೮೯೫ರಲ್ಲಿ ನಡೆದ  ಅವೆನ್ಯೂ ರಸ್ತೆಯ ಪ್ರಯೋಗಾಲಯದ ಅಗ್ನಿ ಆಕಸ್ಮಿಕದಲ್ಲಿ ಸುಟ್ಟುಹೋಗಿದ್ದವು. ಇದರಿಂದ ಜಗತ್ತಿಗಾದ ನಷ್ಟ ಊಹಿಸಲೂ ಅಗದ್ದು . ಜೀವಮಾನದ ಸಾಧನೆ , ಸರ್ವಸ್ವವೂ ನಾಶವಾದಾಗ ಈ ವಿಜ್ಞಾನಿ ಮತ್ತೆ ಎದ್ದು ನಿಂತ ಪರಿ ಬೆರಗುಗೊಳಿಸುವಂತದ್ದು.  

 Nikola Tesla demonstrating wireless transmission of power and high frequency energy at Columbia College, New York, in 1891. 

 ವಿಶ್ವಕ್ಕೆ ಉಚಿತ ವಿದ್ಯುತ್ ನೀಡಬೇಕು ಎನ್ನುವುದು ಟೆಸ್ಲಾ ಕನಸು. ಈ ಕನಸು ನನಸಾಗಿಸಲು ಅವರು ವಾರ್ಡನ್‌ಕ್ಲಿಫ್ ಟವರ್ ಯೋಜನೆಯನ್ನು ರೂಪಿಸಿದ್ದರು. ಈ ಯೋಜನೆ ಯಶಸ್ವಿಯಾಗಿದ್ದರೆ ಅಂದೇ ಉಚಿತ ಬೆಳಕಿನ ಭಾಗ್ಯ ಆರಂಭಗೊಳ್ಳುತ್ತಿತ್ತು. ವಿಶ್ವದ ಯಾವುದೇ ಮನೆಗೂ ಉಚಿತವಾಗಿ ವಿದ್ಯುತ್ ನೀಡಲು ಸಾಧ್ಯವಾಗುತ್ತಿತ್ತು.  ಮಾರ್ಗನ್ ಎಂಬುವವರ ಸಹಾಯದೊಂದಿಗೆ ಲಂಗ್ ಎಂಬ ಹೆಸರಿನ  ದ್ವೀಪದಲ್ಲಿ 200 ಅಡಿ ಎತ್ತರದ ಟವರ್ ಒಂದನ್ನು ನಿರ್ಮಿಸಲಾಗುತ್ತದೆ. ಈ ಟವರಿನ ಮೂಲಕ ನಿಸ್ತಂತು ವಿದ್ಯುತ್ ಸರಬರಾಜು ಮಾಡಬಹುದಾಗಿತ್ತು. ಆದರೆ ಟವರಿನ ಕೆಲಸವು ಪ್ರಗತಿಯಲ್ಲಿ ಇದ್ದಾಗಲೇ ಮೊದಲ ವಿಶ್ವ ಸಮರದ ಸುರಕ್ಷತೆ ಎಂಬ  ಕಾರಣ ಕೊಟ್ಟು ಆ ಟವರನ್ನು ಕೆಡವಿ ಅಸಾಮಾನ್ಯ ಸಂಶೋಧನೆಯನ್ನು ನಾಶಮಾಡಲಾಗುತ್ತದೆ ! ಇದು ಯಾರ ಹುನ್ನಾರವೋ ತಿಳಿಯದು.  
ವೈಜ್ಞಾನಿಕ ಮನೋವೃತ್ತಿಯ ಟೆಸ್ಲಾ ತನ್ನ ಆವಿಷ್ಕಾರಗಳಲ್ಲಿ ಹಗಲು-ರಾತ್ರಿಯೆನ್ನದೆ ಪರಿಶ್ರಮಿಸುತ್ತಿದ್ದು, ವೈಜ್ಞಾನಿಕ ಮನೋವೃತ್ತಿಯು ಯಾವಾಗಲೂ ಮುಂದುವರಿಯಬೇಕು ಎಂದು ನಂಬಿದ್ದರು. ದಿನಕ್ಕೆ ಕೇವಲ ಎರಡು- ಮೂರು ತಾಸುಗಳ ನಿದ್ದೆಯಷ್ಟೇ ದೇಹಕ್ಕೆ ವಿಶ್ರಾಂತಿ. 

 ನ್ಯೂಯಾರ್ಕ್‌‌ ಮಹಾನಗರದ ನ್ಯೂಯಾರ್ಕರ್‌‌ ಹೋಟೆಲ್‌ನಲ್ಲಿ ನಿಕೋಲಾ ಟೆಸ್ಲಾರ ಗೌರವಾರ್ಥವಾಗಿಟ್ಟಿರುವ ಫಲಕ.
ನಿಕೊಲಾ ಟೆಸ್ಲಾ, ಜನವರಿ 7, 1943 ರಂದು ನ್ಯೂಯಾರ್ಕ್ ನಗರದ ಹೋಟೆಲ್ ರೂಮಿನಲ್ಲಿ ನಿಧನರಾದರು. ತಮ್ಮ ಆವಿಷ್ಕಾರಗಳಿಗೆ ಸೂಕ್ತ ಮಾನ್ಯತೆ ದೊರೆಯದಿದ್ದರೂ, ಅವರು ವಿಜ್ಞಾನ ಲೋಕದಲ್ಲಿ ಸ್ಮರಣೀಯ ವ್ಯಕ್ತಿಯಾಗಿದ್ದಾರೆ. ಅವರ ಕೊನೆಯ ದಿನಗಳಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸಿದರೂ, ತಮ್ಮ ಆವಿಷ್ಕಾರಗಳ ಕುರಿತು ಅವರು ಯಾವಾಗಲೂ ಆಸಕ್ತರಾಗಿದ್ದರು. ತಮ್ಮ ಸಾವಿರಾರು ಸಂಶೋಧನೆಗಳಿಗೆ ಮುನ್ನೂರರಷ್ಟು ಪೇಟೆಂಟ್‌ಗಳನ್ನು ಪಡೆದ ಟೆಸ್ಲಾರ ಹೋರಾಟದ ಬದುಕು ನಮಗೆ ದಾರಿದೀಪವಾಗಬಲ್ಲುದು.  

 ಟೆಸ್ಲಾದ ಪರಂಪರೆಯ ಮುಂದುವರಿಕೆಯಾಗಿ , ಟೆಸ್ಲಾ ಸ್ಮಾರಕ ಮ್ಯೂಸಿಯಂಗಳನ್ನು ಸ್ಥಾಪಿಸಲಾಗಿದೆ . ಅವರ ಆವಿಷ್ಕಾರಗಳು ಮತ್ತು ಸಂಶೋಧನೆಗಳ ಪ್ರತಿಪಾದನೆಗೆ ಈ ಮ್ಯೂಸಿಯಂಗಳು ಸಹಕಾರಿಯಾಗಿವೆ. ನಿಕೊಲಾ ಟೆಸ್ಲಾ, ತಮ್ಮ ಆವಿಷ್ಕಾರಗಳು ಮತ್ತು ಸಂಶೋಧನೆಗಳಿಂದ ಜಗತ್ತಿಗೆ ಅಪಾರ ಕೊಡುಗೆ ನೀಡಿದ ಮಹಾನ್ ವಿಜ್ಞಾನಿ. ಅವರ ತತ್ವಗಳು ಮತ್ತು ದಾರಿಗಳು, ಇಂದು ಹೊಸ ಆವಿಷ್ಕಾರಗಳಿಗಾಗಿ ದಾರಿ ಮುಕ್ತ ಮಾಡುತ್ತಿವೆ. ಅವರು, ವಿಜ್ಞಾನ ಮತ್ತು ತಂತ್ರಜ್ಞಾನದ ಲೋಕದಲ್ಲಿ ಸದಾ ಸ್ಮರಣೀಯ ವ್ಯಕ್ತಿಯಾಗಿದ್ದಾರೆ.

No comments:

Post a Comment